ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕಣ್ಮರೆಯಾಯಿತೇ ಗೋ ಏರ್?

Published 11 ಮೇ 2023, 19:31 IST
Last Updated 11 ಮೇ 2023, 19:31 IST
ಅಕ್ಷರ ಗಾತ್ರ

ಈಚೆಗಷ್ಟೇ ‘ಗೋ ಫಸ್ಟ್’ ಎಂಬ ಹೊಸ ಹೆಸರು ಪಡೆದ ‘ಗೋ ಏರ್’ ವಿಮಾನಯಾನ ಕಂಪನಿಯನ್ನು ಆರಂಭಿಸಿದ್ದು ಉದ್ಯಮಿ ನುಸ್ಲಿ ವಾಡಿಯಾ. ಶ್ರೀಮಂತ, ಪಾರ್ಸಿ ಸಮುದಾಯದ ವಾಡಿಯಾ ಕುಟುಂಬದ ಈ ಕಂಪನಿಯು ಈಗ ದಿವಾಳಿ ಸಂಹಿತೆಯ ಅಡಿಯಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಅರ್ಜಿ ಸಲ್ಲಿಸಿದೆ.

ಕಂಪನಿಯು ವಿವಿಧ ಹಣಕಾಸು ಸಂಸ್ಥೆಗಳು, ವರ್ತಕರು, ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು, ಲೀಸ್ ಆಧಾರದಲ್ಲಿ ವಿಮಾನ ಕೊಟ್ಟವರಿಗೆ ಪಾವತಿಸಬೇಕಿರುವ ಮೊತ್ತ ₹ 11,500 ಕೋಟಿಯಷ್ಟಿದೆ. ರಿಚರ್ಡ್ ಬ್ರಾನ್ಸನ್ ಆಡಿದ ವ್ಯಂಗ್ಯೋಕ್ತಿ ‘ನೀವು ಲಕ್ಷಾಧೀಶರಾಗಬೇಕು ಎಂದಾದರೆ ವಿಮಾನಯಾನ ಉದ್ದಿಮೆಯಲ್ಲಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಬೇಕು’ ಎಂಬುದಕ್ಕೆ ಸರಿಹೊಂದುವ ಸ್ಥಿತಿಯಲ್ಲಿ ಗೋ ಫಸ್ಟ್ ಇದೆ.

ಹಿಂದೆ ಕಿಂಗ್‌ಫಿಷರ್ ಏರ್‌ಲೈನ್ಸ್, ನಂತರ ಜೆಟ್ ಏರ್‌ವೇಸ್. ಈಗ ಗೋ ಫಸ್ಟ್‌. ಈ ಕಂಪನಿಗಳು ಮುಳುಗುವುದನ್ನು ತಡೆಯುವುದು ಸಾಧ್ಯವೇ ಇಲ್ಲ ಎಂದು ಒಂದು ಹಂತದಲ್ಲಿ ಅನ್ನಿಸಿಬಿಟ್ಟಿತ್ತು. ಈ ಕಂಪನಿಗಳ ವಿಚಾರದಲ್ಲಿ ಸಮಾನ ಅಂಶವೊಂದು ಇದೆಯೇ?

ಜೆಆರ್‌ಡಿ ಟಾಟಾ ಅವರು ಹಿಂದೆ ಏರ್ ಇಂಡಿಯಾ ಕಂಪನಿಯನ್ನು ಮುನ್ನಡೆಸುತ್ತಿದ್ದರು. ಆ ಹೊತ್ತಿನಲ್ಲಿ ಲೈಸೆನ್ಸ್ ರಾಜ್ ವ್ಯವಸ್ಥೆ ಇತ್ತು. ವಿಮಾನಯಾನ ಕ್ಷೇತ್ರದಲ್ಲಿ ಏಕಸ್ವಾಮ್ಯ ಇತ್ತು. ಆಗ ಈ ಉದ್ಯಮದ ಹೆಸರು ಕೇಳಿದಾಗಲೆಲ್ಲ ವರ್ಣರಂಜಿತವಾದ ದೂರದ ನಗರಗಳು ಕಣ್ಣ ಮುಂದೆ ಬರುತ್ತಿದ್ದವು. ಈ ಉದ್ಯಮದಲ್ಲಿ ರೋಮಾಂಚನವಿತ್ತು. ಕೆಲಸದ ಉದ್ದೇಶದಿಂದ ಅಥವಾ ರಜೆ ಕಳೆಯಲು ಏರ್ ಇಂಡಿಯಾ ವಿಮಾನಗಳಲ್ಲಿ ಮತ್ತೆ ಮತ್ತೆ ‍ಪ್ರಯಾಣಿಸುವವರನ್ನು, ‘ಯಶಸ್ವಿ ವ್ಯಕ್ತಿ’ ಎಂದು ಕಾಣಲಾಗುತ್ತಿತ್ತು. ಗ್ಲಾಮರ್, ಶ್ರೀಮಂತಿಕೆ, ಅವ್ಯಕ್ತವಾದ ತಾಕತ್ತನ್ನು ಹೊಂದಿದ್ದ ವಿಶಿಷ್ಟ ಲೋಕವಾಗಿತ್ತು ಈ ಉದ್ಯಮ. ಇವೆಲ್ಲ ಇದ್ದದ್ದು ಜೆಆರ್‌ಡಿ ಟಾಟಾ ಅವರು ಏರ್ ಇಂಡಿಯಾ ಕಂಪನಿಯನ್ನು ಮುನ್ನಡೆಸುತ್ತಿದ್ದ ಹೊತ್ತಿನಲ್ಲಿ. ಟಾಟಾ ಅವರು ಅಲ್ಲಿನ ಹುದ್ದೆ ತೊರೆದ ನಂತರ, ಸರ್ಕಾರವು ಏರ್ ಇಂಡಿಯಾ ಕಂಪನಿಯನ್ನು ತನ್ನದಾಗಿಸಿಕೊಂಡ ನಂತರ ಪರಿಸ್ಥಿತಿ ಅಸ್ಥಿರವಾಯಿತು, ಕಂಪನಿಗೆ ವೃದ್ಧಾಪ್ಯ ಬಂದಂತಾಯಿತು. ಕಂಪನಿಯಲ್ಲಿ ಸಿಬ್ಬಂದಿ ಸಂಖ್ಯೆ ಅತಿಯಾಯಿತು, ಅತೃಪ್ತಿ ಹೆಚ್ಚಾಯಿತು. ಕಂಪನಿಯ ಸಾಲದ ಪ್ರಮಾಣವು ಗಗನಕ್ಕೆ ಏರಿತು.

1990ರ ದಶಕದ ಆರಂಭದಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಜಾರಿಗೆ ತಂದ ಆರ್ಥಿಕ ಸುಧಾರಣೆಗಳ ನಂತರದಲ್ಲಿ ಹೊಸ ವಿಮಾನಯಾನ ಕಂಪನಿಗಳು ಗಗನಕ್ಕೆ ಜಿಗಿದವು. ಆದರೆ ಉಳಿದುಕೊಂಡಿದ್ದು ಜೆಟ್ ಏರ್‌ವೇಸ್ ಮತ್ತು ಸಹಾರಾ ಮಾತ್ರ. ಅದುವರೆಗೆ ಹೆಚ್ಚಿನವರಿಗೆ ಪರಿಚಯ ಇಲ್ಲದಿದ್ದ ಟ್ರಾವೆಲ್ ಏಜೆಂಟ್ ನರೇಶ್ ಗೋಯಲ್ ಅವರು ಜೆಟ್ ಏರ್‌ವೇಸ್‌ ಆರಂಭಿಸಿದರು. ಅವರಲ್ಲಿ ಅಪಾರ ಬುದ್ಧಿವಂತಿಕೆ ಇತ್ತು. ಅವರು ವಿಶ್ವದರ್ಜೆಯ ವಿಮಾನಯಾನ ಕಂಪನಿಯನ್ನು ಕಟ್ಟಿದರು. ಸಮಯಕ್ಕೆ ಸರಿಯಾಗಿ ಸೇವೆ ಒದಗಿಸುವುದು, ವಿಮಾನದ ಒಳಾಂಗಣವನ್ನು ಚೆನ್ನಾಗಿ ಇರಿಸಿಕೊಳ್ಳುವುದು, ಸಿಬ್ಬಂದಿಯಲ್ಲಿ ಇದ್ದ ವೃತ್ತಿಪರ ಧೋರಣೆಗಳ ವಿಚಾರದಲ್ಲಿ ಗೋಯಲ್ ಅವರ ಕಂಪನಿಯು ವಿಶ್ವದರ್ಜೆಯದ್ದಾಗಿತ್ತು. ಸಹಾರಾ ವಿಮಾನಯಾನ ಕಂಪನಿಯ ಸ್ಪಂದನಶೀಲತೆ ಇಲ್ಲದ ಧೋರಣೆ, ಏರ್ ಇಂಡಿಯಾ ಕಂಪನಿಯು ಪ್ರಯಾಣಿಕರ ನಂಬಿಕೆಯನ್ನು ಕಳೆದುಕೊಂಡಿದ್ದುದು ಹಾಗೂ ಗೋಯಲ್ ಅವರು ರಾಜಕಾರಣಿಗಳ ಜೊತೆ ಹೊಂದಿದ್ದ ಬಾಂಧವ್ಯದ ಕಾರಣದಿಂದಾಗಿ, ವಿಮಾನಯಾನ ಉದ್ಯಮದಲ್ಲಿ ಜೆಟ್ ಏರ್‌ವೇಸ್ ತನ್ನ ಸ್ಥಾನ ಗಟ್ಟಿ ಮಾಡಿಕೊಂಡಿತು. ಗೋಯಲ್ ಅವರು ಏಕಸ್ವಾಮ್ಯ ಸಾಧಿಸಿದ್ದರು. ಆದರೆ, ಸರ್ಕಾರಿ ಸ್ವಾಮ್ಯದ ವಿಮಾನ ನಿಲ್ದಾಣಗಳ ದುಃಸ್ಥಿತಿ ಹಾಗೂ ದುಬಾರಿ ಟಿಕೆಟ್ ದರಗಳ ಪರಿಣಾಮವಾಗಿ ವಿಮಾನಯಾನ ಉದ್ಯಮವು ಬೆಳೆಯಲಿಲ್ಲ. 2002ರ ಸುಮಾರಿಗೆ ದೇಶದ ಜನಸಂಖ್ಯೆಯಲ್ಲಿ ಶೇಕಡ 1ಕ್ಕಿಂತ ಕಡಿಮೆ ಜನ ಮಾತ್ರ ವಿಮಾನಯಾನದ ಖರ್ಚು ಭರಿಸುವ ಶಕ್ತಿ ಹೊಂದಿದ್ದರು.

2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಹೊಸ ಸುಧಾರಣಾ ಕ್ರಮಗಳು ಜಾರಿಗೆ ಬಂದ ನಂತರದಲ್ಲಿ ಇನ್ನಷ್ಟು ಹೊಸ ವಿಮಾನಯಾನ ಕಂಪನಿಗಳು ಆಕಾಶಕ್ಕೆ ಜಿಗಿದವು. ಏರ್ ಡೆಕ್ಕನ್ ಕಂಪನಿಯು ಸಾಕಾರಗೊಳಿಸಿದ ಕಡಿಮೆ ವೆಚ್ಚದ ವಿಮಾನ ಸೇವೆ, ಪ್ರಾದೇಶಿಕ ಪಟ್ಟಣಗಳಿಗೆ ವಿಮಾನ ಸಂಪರ್ಕದ ಕಾರಣದಿಂದಾಗಿ ಇನ್ನೊಂದಿಷ್ಟು ಕಂಪನಿಗಳು ಆರಂಭವಾದವು. ಸ್ಪೈಸ್ ಜೆಟ್, ಪ್ರೈಮ್ ಏರ್, ಗೋ ಏರ್, ಕಿಂಗ್‌ಫಿಷರ್, ಇಂಡಿಗೊ 2005–2006ರಲ್ಲಿ ಸೇವೆ ಆರಂಭಿಸಿದವು. ವಿಮಾನಯಾನ ಉದ್ಯಮದಲ್ಲಿ ವ್ಯಾಪಕ ಬದಲಾವಣೆಗಳನ್ನು ತಂದವು.

ವಿಜಯ್ ಮಲ್ಯ ಅವರ ಉದ್ಯಮವನ್ನು ಪರಿಶೀಲಿಸೋಣ. ಅವರು ವಿಮಾನಯಾನ ಉದ್ಯಮಕ್ಕೆ ಆಕರ್ಷಣೆ ತಂದುಕೊಟ್ಟರು. ಅವರು ತಮ್ಮ ಕಂಪನಿಯ ಗಗನಸಖಿಯರನ್ನು ತಾವೇ ಆಯ್ಕೆ ಮಾಡಿದರು. ಅವರ ಉಡುಪಿನ ವಿನ್ಯಾಸವನ್ನು ತಾವೇ ತೀರ್ಮಾನಿಸಿದರು. ಗಗನಸಖಿಯರ ಕೇಶವಿನ್ಯಾಸದಲ್ಲಿ ಆಸಕ್ತಿ ತೋರಿಸಿದರು. ಕಿಂಗ್‌ಫಿಷರ್‌ ವಿಮಾನಯಾನ ಕಂಪನಿಯ ಬ್ರ್ಯಾಂಡಿಂಗ್‌ ಕೆಲಸದಲ್ಲಿ ತಾವೇ ಮುಂದಾಗಿ ನಿಂತಿದ್ದರು. ಆ ಕಂಪನಿಯ ಬ್ರ್ಯಾಂಡ್ ರಾಯಭಾರಿ ತಾವೇ ಆಗಿದ್ದರು. ಮದ್ಯದ ಮಾರುಕಟ್ಟೆಯಲ್ಲಿ ತಮಗೆ ಶೇಕಡ 55ರಷ್ಟು ಪಾಲು ಇದೆ, ತಮ್ಮ ಮದ್ಯದ ಒರತೆ ಯಾವತ್ತಿಗೂ ಬತ್ತುವುದಿಲ್ಲವಾದ ಕಾರಣ, ವಿಮಾನಯಾನ ಕಂಪನಿಯ ವೆಚ್ಚ ತಮಗೆ ಸಣ್ಣದು ಎಂದು ಮಲ್ಯ ಹೇಳಿಕೊಂಡಿದ್ದರು. ಏರ್ ಡೆಕ್ಕನ್ ಕಂಪನಿಯಲ್ಲಿ ಅವರು ಹೂಡಿಕೆ ಮಾಡಿದ್ದರು. ಕಂಪನಿಯ ವಹಿವಾಟಿನ ಮಾದರಿಯನ್ನು ಅವರು ಬದಲಾಯಿಸಲು ಮುಂದಾದಾಗ ನಾನು ಅದನ್ನು ವಿರೋಧಿಸಿದೆ. ‘ಏರ್ ಡೆಕ್ಕನ್ ಕಂಪನಿ ಸೆಕ್ಸಿ ಆಗಿರಬೇಕು’ ಎಂದು ನನಗೆ ಉತ್ತರಿಸಿದರು. ‘ನಾವು ಜಾದೂಗಾರರಿದ್ದಂತೆ. ₹ 500 ಖರ್ಚು ಮಾಡಿ, ಅದಕ್ಕೆ ₹ 5,000 ಶುಲ್ಕ ಪಡೆಯುತ್ತೇವೆ’ ಎಂದಿದ್ದರು.

ಆದರೆ ಪ್ರಯಾಣಿಕರು ಮಲ್ಯ ಅವರ ಕಂಪನಿಯ ಸೇವೆಗಳನ್ನು ಬಹಳ ಮೆಚ್ಚಿದರೂ ಹೆಚ್ಚು ಶುಲ್ಕ ನೀಡಲು ತಯಾರಿರಲಿಲ್ಲ. ಅವರು ಬೇರೆ ಕಂಪನಿಗಳ ಕಡೆ ನಡೆದರು. ಕಿಂಗ್‌ಫಿಷರ್ ಕಂಪನಿಯು ಭಾರಿ ಪ್ರಮಾಣದಲ್ಲಿ ಹಣ ಕಳೆದುಕೊಳ್ಳಲು ಆರಂಭಿಸಿತು. ಕಂಪನಿಯ ಪರಿಸ್ಥಿತಿ ಕೈಮೀರಿತು. ಮಲ್ಯ ಅವರು ಕಂಪನಿಯ ಸಿಇಒ ಆಗಿದ್ದರು. ಆದರೆ ಬೇರೆ ಬೇರೆ– ಮದ್ಯ, ಐಪಿಎಲ್, ಫಾರ್ಮುಲಾ ಒನ್, ರಾಜಕಾರಣ, ಅದ್ಧೂರಿ ಜೀವನಶೈಲಿ– ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ವಿಮಾನಯಾನ ಕಂಪನಿಯು ದಿವಾಳಿಯಾಯಿತು.

ಇತ್ತ ಜೆಟ್ ಏರ್‌ವೇಸ್‌ ಕೂಡ ಸಮಸ್ಯೆಯ ಸುಳಿಗೆ ಸಿಲುಕಿತು. ಕಂಪನಿಯನ್ನು ಗೋಯಲ್ ಅವರ ಕುಟುಂಬ ಹೆಚ್ಚಾಗಿ ನಿಯಂತ್ರಿಸುತ್ತಿತ್ತು. ಆಡಳಿತದಲ್ಲಿ ಪದೇ ಪದೇ ಬದಲಾವಣೆ, ಹಳೆಯ ಪದ್ಧತಿಗೇ ಅಂಟಿಕೊಂಡಿದ್ದರ ಪರಿಣಾಮವಾಗಿ ಕಂಪನಿಯು ಬಹಳ ವೇಗವಾಗಿ ಹಣ ಕಳೆದುಕೊಂಡಿತು. ಕೊನೆಯಲ್ಲಿ ಕಂಪನಿಯು ಕಾರ್ಯಾಚರಣೆ ನಿಲ್ಲಿಸಿತು. ಗೋ ಏರ್ ಕಂಪನಿಯು ವಾಡಿಯಾ ಕುಟುಂಬಕ್ಕೆ ಹೊರೆ ಆಗಿರಲಿಲ್ಲ. ಮಗ ಜೆ ವಾಡಿಯಾ ವಿಮಾನಯಾನ ಕಂಪನಿ ಆರಂಭಿಸುವುದಾಗಿ ಹೇಳಿದಾಗ, ನುಸ್ಲಿ ವಾಡಿಯಾ ಒಪ್ಪಿದ್ದರು. ಕಾಲಾನಂತರದಲ್ಲಿ, ಕುಟುಂಬದಲ್ಲಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಜೆ ಅವರು ವಿಮಾನಯಾನ ಕಂಪನಿಯ ಆಡಳಿತದಿಂದ ಹೊರನಡೆದರು. ವೃತ್ತಿಪರ ಹಾಗೂ ಸ್ವಾಯತ್ತೆ ಇರುವ ಸಿಇಒ ಇಲ್ಲದ ಕಾರಣ, ಕಂಪನಿಯ ಸಮಸ್ಯೆಗಳು ಹೆಚ್ಚಿದವು. ಈಗ ಈ ಕಂಪನಿಯು ಈ ಸ್ಥಿತಿಗೆ ಬಂದಿದೆ. ಈ ಕಂಪನಿಯಲ್ಲಿ ಎರಡು ವರ್ಷಗಳಿಂದಲೂ ಕೆಟ್ಟ ಸೂಚನೆಗಳು ಇದ್ದವು. ಆದರೆ, ಯಶಸ್ಸು ಮತ್ತು ಅಹಂಕಾರ ಒಟ್ಟಾದಾಗ, ಸ್ಪಷ್ಟವಾಗಿರುವ ವಿಚಾರಗಳೂ ಕಾಣದಂತೆ ಆಗುತ್ತವೆ.

ವಿಮಾನಯಾನ ಉದ್ದಿಮೆಯಲ್ಲಿ ಪರಿಸ್ಥಿತಿಯು ಬಹಳ ವೇಗವಾಗಿ ಬದಲಾಗಬಹುದು. ಏರ್ ಡೆಕ್ಕನ್ ಕಂಪನಿ ಹಣ ಕಳೆದುಕೊಳ್ಳುತ್ತಿದ್ದಾಗ ನಾನು, ‘ವಿಮಾನಕ್ಕಿಂತಲೂ ಚೆಕ್‌ಗಳು ಬಹಳ ವೇಗವಾಗಿ ಹಾರುತ್ತಿವೆ’ ಎಂದು ಹೇಳಿದ್ದೆ. ತಮ್ಮ ಉದ್ದಿಮೆಯಲ್ಲಿ ಹೆಚ್ಚಿನ ಷೇರುಪಾಲು ಹೊಂದಿರುವ ಉದ್ಯಮಿಗಳು, ಕಂಪನಿಗೆ ಹೊರಗಿನಿಂದ ಹೆಚ್ಚಿನ ಷೇರು ಬಂಡವಾಳ ತರಲು ಹಿಂದೇಟು ಹಾಕುತ್ತಾರೆ. ನಿಯಂತ್ರಣ ಕಳೆದುಕೊಳ್ಳುವ ಭೀತಿಯು ಅವರಿಗೆ ಅಡ್ಡಿಯಾಗುತ್ತದೆ. ಆದರೆ ಇದು ಕಂಪನಿಯ ದೃಷ್ಟಿಯಿಂದ ಮಾರಣಾಂತಿಕ ತಪ್ಪು.

ವಿಮಾನಯಾನ ಕಂಪನಿಯನ್ನು ಮುನ್ನಡೆಸುವುದು ಬಹಳ ರೋಮಾಂಚಕ. ಅಧಿಕಾರದಲ್ಲಿ ಇರುವ ವ್ಯಕ್ತಿಗಳು ಉದ್ಯಮಿಗಳನ್ನು ಎಡತಾಕುತ್ತಾರೆ. ಯಾವ ಶ್ರೀಮಂತ ಈ ಆಕರ್ಷಣೆಗೆ ಈಡಾಗದೇ ಇರುತ್ತಾನೆ? ಆಕರ್ಷಣೆಯ ಕಾರಣದಿಂದಾಗಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಅದನ್ನು ಲಕ್ಷಗಳ ಮಟ್ಟಕ್ಕೆ ತಂದುಕೊಳ್ಳುತ್ತಾನೆ. ಗೋ ಫಸ್ಟ್ ಕಂಪನಿ ಹಣ ಕಳೆದುಕೊಂಡಿದೆ. ಈಗ ಎನ್‌ಸಿಎಲ್‌ಟಿ, ಈ ಕಂಪನಿಯನ್ನು ಉಳಿಸಲು ಮಿಂಚಿನ ವೇಗದಲ್ಲಿ ಕ್ರಮ ಕೈಗೊಳ್ಳಬೇಕಿದೆ.

ಲೇಖಕ: ಏರ್ ಡೆಕ್ಕನ್ ಕಂಪನಿಯ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT