ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬೆಂಗಳೂರಿಗೆ ಕನಕಪುರ ಸೇರಿಸುವ ಮುನ್ನ

ರಾಮನಗರ, ಕನಕಪುರವು ನಮ್ಮ ರಾಜಕಾರಣಿಗಳ ವೈಯಕ್ತಿಕ ಆಸ್ತಿಯಲ್ಲ
Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
ಅಕ್ಷರ ಗಾತ್ರ

ರಾಮನಗರ ಜಿಲ್ಲೆಯ ಭಾಗವಾಗಿರುವ ಕನಕಪುರವು ಶೀಘ್ರದಲ್ಲಿಯೇ ಬೆಂಗಳೂರಿನ ವ್ಯಾಪ್ತಿಗೆ ಒಳಪಡಲಿದೆ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಚೆಗೆ ನೀಡಿರುವ ಹೇಳಿಕೆಯು ಹಲವರ ಹುಬ್ಬು ಮೇಲೇರಲು ಕಾರಣವಾಯಿತು. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಮನಗರ ಜಿಲ್ಲೆಯನ್ನು ಸೃಷ್ಟಿಸಲಾಗಿತ್ತು. ರಾಮನಗರ ಜಿಲ್ಲೆಯ ಸ್ಥಾನವನ್ನು ಇಲ್ಲವಾಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಒಕ್ಕಲಿಗ ಸಮುದಾಯದ ಇಬ್ಬರು ನಾಯಕರ ನಡುವಿನ ಮಾತಿನ ಸಮರವು ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನಷ್ಟೇ ಮಾಡಿದೆ.

ರಾಜ್ಯದ ರಾಜಧಾನಿಯ ಅನಿರ್ಬಂಧಿತ ಹಾಗೂ ಯೋಜನಾರಹಿತ ಬೆಳವಣಿಗೆಯು ನಗರ ಹಾಗೂ ಇಲ್ಲಿನ ನಿವಾಸಿಗಳ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಉಂಟುಮಾಡಿದೆ. ಸಂಚಾರ ದಟ್ಟಣೆ, ಮಾಲಿನ್ಯ, ತ್ಯಾಜ್ಯ ನಿರ್ವಹಣೆ, ಮೂಲಸೌಕರ್ಯದ ಸಮಸ್ಯೆ ಇವೆಲ್ಲ ಗೊತ್ತಿರುವಂಥವು. ಆದರೆ, ಯೋಜನೆಯ ಚೌಕಟ್ಟು ಮತ್ತು ಪ್ರಕ್ರಿಯೆ ಬಗ್ಗೆ, ನಗರದ ವ್ಯವಸ್ಥಿತ ಬೆಳವಣಿಗೆಯಲ್ಲಿ ಅವುಗಳ ಮಹತ್ವದ ಬಗ್ಗೆ ಅರಿವು ಹೆಚ್ಚಿಲ್ಲ.

ಪ್ರತಿ ರಾಜ್ಯವೂ ನಗರ ಯೋಜನಾ ಕಾಯ್ದೆಯನ್ನು ಹೊಂದಿದೆ. ಕರ್ನಾಟಕದಲ್ಲಿ ಈ ಕಾಯ್ದೆಯು 1961ರಲ್ಲಿ ಜಾರಿಗೆ ಬಂತು. ಈ ಕಾಯ್ದೆಯು ನಗರದ ವಿಸ್ತಾರವಾದ ಪ್ರದೇಶದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ‘ಮಾಸ್ಟರ್‌ ಪ್ಲ್ಯಾನ್‌’ ರೂಪಿಸುವುದನ್ನು ಕಡ್ಡಾಯ ಗೊಳಿಸಿದೆ. ಲಭ್ಯವಿರುವ ಜಮೀನನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಇದು ಹೇಳುತ್ತದೆ. ವಸತಿಗೆ, ವಾಣಿಜ್ಯ ಉದ್ದೇಶಕ್ಕೆ, ಕೈಗಾರಿಕೆಗಳಿಗೆ ಹಾಗೂ ಒಂದಿಷ್ಟು ಜಾಗವನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿ ಇರಿಸುವುದಕ್ಕೆ ಜಮೀನನ್ನು ಹೇಗೆ ಉಪಯೋಗಿಸಿ
ಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ವಲಯ ಸಂಬಂಧಿ ನಿಯಮಗಳನ್ನು ಇದು ಹೊಂದಿದೆ, ಇದರ ಆಧಾರದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಯಂತ್ರಿಸ ಲಾಗುತ್ತದೆ. ಬೆಂಗಳೂರಿಗೆ ಮೊದಲ ಮಾಸ್ಟರ್‌ ಪ್ಲ್ಯಾನ್‌ ಸಿದ್ಧವಾಗಿದ್ದು 1984ರಲ್ಲಿ. ಇದನ್ನು 1995ರಲ್ಲಿ ಪರಿಷ್ಕರಿಸಲಾಯಿತು. ನಂತರದಲ್ಲಿ, ಮಾಸ್ಟರ್‌ ಪ್ಲ್ಯಾನ್‌ (2015), 2007ರಿಂದ ಜಾರಿಗೆ ಬಂತು. ಇದು ಈಗಲೂ ಜಾರಿಯಲ್ಲಿದೆ. ಹೊಸ ಮಾಸ್ಟರ್‌ ಪ್ಲ್ಯಾನ್‌ (2031) ಸರ್ಕಾರಕ್ಕೆ ಸಲ್ಲಿಕೆಯಾಗಿ ನಾಲ್ಕು ವರ್ಷಗಳು ಕಳೆದಿವೆ. ಆದರೆ ಅನುಮೋದನೆ ಸಿಕ್ಕಿಲ್ಲ.

ಬೆಂಗಳೂರಿನ ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪ ಡಿಸಿದ್ದು ಬಿಡಿಎ. ಈ ಯೋಜನೆಯು ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶಕ್ಕೆ ಅನ್ವಯವಾಗುತ್ತದೆ. ಈ ಪ್ರದೇಶದ ವ್ಯಾಪ್ತಿ 1,200 ಚದರ ಕಿ.ಮೀ.ಗಿಂತ ಹೆಚ್ಚು. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಎಂಬ ಪ್ರತ್ಯೇಕ ಪ್ರಾಧಿಕಾರವೊಂದು ಇದೆ. ಈ ಪ್ರಾಧಿಕಾರದ ಕಾರ್ಯವ್ಯಾಪ್ತಿ 8,500 ಚದರ ಕಿ.ಮೀ. ಇದರ ಅಡಿಯಲ್ಲಿ ಕನಕಪುರ, ರಾಮನಗರ, ಚನ್ನಪಟ್ಟಣ, ಹೊಸಕೋಟೆ ಮತ್ತು ಈ ಪ್ರದೇಶದ ಇತರ ಪಟ್ಟಣಗಳು ಬರುತ್ತವೆ. ಮೆಟ್ರೊಪಾಲಿಟನ್ ಪ್ರದೇಶದಲ್ಲಿ ಅಭಿವೃದ್ಧಿಗೆ, ಹಸಿರು ವಲಯಕ್ಕೆ, ಅರಣ್ಯಕ್ಕೆ ಜಾಗಗಳನ್ನು ಗುರುತಿಸಿರುವ ಕರಡು ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಆದರೆ ಇದು ಸಂಬಂಧಪಟ್ಟ ಅಧಿಕಾರಿಗಳ ಗಮನವನ್ನು ಅಗತ್ಯ ಪ್ರಮಾಣದಲ್ಲಿ ಸೆಳೆದಿಲ್ಲ. ಇದು ಅನುಮೋದನೆ ಇಲ್ಲದೆ ಬಿದ್ದಿದೆ.

ಸ್ತುತ್ಯರ್ಹ ಉದ್ದೇಶದೊಂದಿಗೆ 1985ರಲ್ಲಿ ಬಿಎಂಆರ್‌ಡಿಎ ರಚಿಸಲಾಯಿತಾದರೂ, ಅದಕ್ಕೆ ತನ್ನ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಆಗಿಲ್ಲ. ಈ ಪ್ರಾಧಿಕಾರದ ನಿರ್ದೇಶಕರ ಮಂಡಳಿಗೆ ಮುಖ್ಯಮಂತ್ರಿಯೇ ಅಧ್ಯಕ್ಷ, ನಗರಾಭಿವೃದ್ಧಿ ಸಚಿವರೇ ಇದಕ್ಕೆ ಉಪಾಧ್ಯಕ್ಷರಾಗಿರುತ್ತಾರಾದರೂ, ಪರಿಸ್ಥಿತಿ ಹೀಗಿದೆ. ಆದರೆ ಬಿಡಿಎ ಕೆಲಸಗಳು ಈ ಪ್ರಾಧಿಕಾರವನ್ನು ಮರೆಮಾಚಿಸುವಂತೆ ಇವೆ. ನಿವೇಶನ ಇಲ್ಲದವರಿಗಾಗಿ ಬಿಡಿಎ ಕೆಲಸ ಮಾಡಬೇಕು. ಆದರೆ ಅದು ಒಂದು ಬಗೆಯಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇಲ್ಲಿ ಸರ್ಕಾರದ ಒಳಗೆ ಹಾಗೂ ಹೊರಗೆ ಇರುವವರ ಒಂದಿಷ್ಟು ಹಿತಾಸಕ್ತಿಗಳು ಇವೆ. ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುವುದಾದರೆ, ಯಾವ ಮುಖ್ಯಮಂತ್ರಿಯೂ ಬಿಎಂಆರ್‌ಡಿಎ ಬಗ್ಗೆ ಆಸಕ್ತಿ ತೋರಿಸುವುದಿಲ್ಲ. ಅದರ ನಿರ್ದೇಶಕರ ಮಂಡಳಿ ಸಭೆಗಳು ನಡೆಯುವುದು ಕಡಿಮೆ. ನಗರ ಪ್ರದೇಶದ ಜಮೀನಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಬಹಳ ಆಸಕ್ತಿ ತೋರಿಸುವ ರಾಜಕೀಯ ನಾಯಕರು ನಗರ ಯೋಜನೆಯನ್ನು ಅಲಕ್ಷಿಸುವುದು ಸಮಸ್ಯೆಯ ಮೂಲ.

ಇದಕ್ಕೆ ಪರಿಹಾರ ಇರುವುದು ನಗರ ಸುಧಾರಣೆಗಳಲ್ಲಿ. ಬೆಂಗಳೂರು ಮೆಟ್ರೊಪಾಲಿಟನ್ ಪ್ರದೇಶದ ಸಮಸ್ಯೆಗಳನ್ನು ಪರಿಶೀಲಿಸಲು ರಚಿಸಲಾದ ಕಸ್ತೂರಿರಂಗನ್ ಸಮಿತಿಯು ಬಿಡಿಎ ಬಳಿ ಇರುವ ಯೋಜನಾ ಕೆಲಸಗಳನ್ನು ಹಿಂಪಡೆಯಬೇಕು ಎಂದು ಶಿಫಾರಸು ಮಾಡಿತ್ತು. ಈ ಕೆಲಸಗಳನ್ನು ಮೆಟ್ರೊಪಾಲಿಟನ್ ಯೋಜನಾ ಸಮಿತಿಗೆ (ಎಂಪಿಸಿ) ವಹಿಸಬೇಕು, ಬಿಎಂಆರ್‌ಡಿಎ ಅನ್ನು ತಾಂತ್ರಿಕ ಯೋಜನಾ ವಿಭಾಗವನ್ನಾಗಿಸಿ ಅದು ಎಂಪಿಸಿಗೆ ನೆರವಾಗುವಂತೆ ಮಾಡಬೇಕು ಎಂದು ಹೇಳಿತ್ತು. ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಶಿವಕುಮಾರ್ ಅವರು ಮಾಡಬೇಕಾದ ಕೆಲಸವೆಂದರೆ, ಮೆಟ್ರೊ‍ಪಾಲಿಟನ್ ಪ್ರದೇಶದಲ್ಲಿ ಆಗಬೇಕಿರುವ ಸುಧಾರಣೆಗಳಿಗೆ ಸಂಬಂಧಿಸಿದ ವಿಷಯವನ್ನು ಎಂಪಿಸಿಯಲ್ಲಿ ಪ್ರಸ್ತಾಪಿಸುವುದು. ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿರುವ ಕನಕಪುರವನ್ನು ಬೆಂಗಳೂರಿನ ಭಾಗವನ್ನಾಗಿಸುವಂತಹ ಪ್ರಮುಖ ತೀರ್ಮಾನವನ್ನು ವ್ಯಕ್ತಿಯೊಬ್ಬರ ಇಚ್ಛೆಗೆ ಅನುಗುಣವಾಗಿ ಕೈಗೊಳ್ಳಲು ಆಗುವುದಿಲ್ಲ. ಎಚ್‌.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರು ರಾಮನಗರ ಮತ್ತು ಕನಕಪುರ
ವನ್ನು ವೈಯಕ್ತಿಕ ಆಸ್ತಿಯಂತೆ ಕಾಣಲು ಬರುವುದಿಲ್ಲ.

ಬೇರೆಡೆಗಿನ ಅನುಭವಗಳನ್ನು ಒಮ್ಮೆ ಗಮನಿಸೋಣ. ಬೇರೆ ಬೇರೆ ದೇಶಗಳಲ್ಲಿ ಪ್ರದೇಶ ಯೋಜನೆ ರೂಪಿಸುವಿಕೆಯು ನಗರಗಳ ಆಡಳಿತದಲ್ಲಿ ಬಹಳ ಮಹತ್ವ ಪಡೆಯುತ್ತಿದೆ. ಜಗತ್ತಿನ ಅತಿದೊಡ್ಡ ಮೆಟ್ರೊಪಾಲಿಟನ್ ಪ್ರದೇಶ ಹಾಗೂ 3.7 ಕೋಟಿ ಜನಸಂಖ್ಯೆ ಹೊಂದಿರುವ ಟೋಕಿಯೊ, ಮೂರು ಹಂತಗಳ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಲಂಡನ್‌ನಲ್ಲಿ ಮೇಯರ್ ಹುದ್ದೆಯಲ್ಲಿರುವವರು ನಗರದ ಯೋಜನೆ ಮತ್ತು ಸಾರಿಗೆಯನ್ನು ನೋಡಿಕೊಳ್ಳುತ್ತಾರೆ. ಮುನಿಸಿಪಲ್ ಕೆಲಸಗಳನ್ನು 32 ಬರೋಗಳು ನೋಡಿಕೊಳ್ಳುತ್ತವೆ. 2.3 ಕೋಟಿ ಜನಸಂಖ್ಯೆ ಹೊಂದಿರುವ ನ್ಯೂಯಾರ್ಕ್‌ ಪ್ರದೇಶದಲ್ಲಿ ಮೂರು ರಾಜ್ಯಗಳಿವೆ. ಇದು 13,999 ಚದರ ಮೈಲಿ ವಿಸ್ತಾರ ಹೊಂದಿದೆ, 31 ಕೌಂಟಿಗಳು ಮತ್ತು 782 ಸ್ಥಳೀಯ ಸಂಸ್ಥೆಗಳನ್ನು (ಮುನಿಸಿಪಾಲಿಟಿ) ಹೊಂದಿದೆ.

ಭಾರತದ ರಾಷ್ಟ್ರ ರಾಜಧಾನಿ ಪ್ರದೇಶವು ದೆಹಲಿ ಕೇಂದ್ರಾಡಳಿತ ಪ್ರದೇಶ ಮತ್ತು ನೆರೆಯ ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶ ರಾಜ್ಯಗಳ ಕೆಲವು ಭಾಗಗಳನ್ನು ಒಳಗೊಂಡಿದೆ. ಇದರ ವ್ಯಾಪ್ತಿ 55,083 ಚದರ ಕಿ.ಮೀ. ಜನಸಂಖ್ಯೆ 7 ಕೋಟಿಗೂ ಹೆಚ್ಚು. ಈ ಎಲ್ಲ ಮೆಟ್ರೊಪಾಲಿಟನ್ ಪ್ರದೇಶಗಳ ನಡುವೆ ಇರುವ ಸಮಾನ ಅಂಶವೆಂದರೆ, ಅತ್ಯುನ್ನತ ಹಂತದ ಆಡಳಿತ ವ್ಯವಸ್ಥೆಯು ಯೋಜನೆ ರೂಪಿಸುವ ಹೊಣೆಯನ್ನು ಮಾತ್ರ ಹೊಂದಿದೆ. ಸ್ಥಳೀಯ ಮಟ್ಟದ ಕೆಲಸಗಳನ್ನು ಮುನಿಸಿಪಾಲಿಟಿಗಳು ನಿರ್ವಹಿಸುತ್ತವೆ. ಸಂವಿಧಾನದಲ್ಲಿ ಹೇಳಿರುವಂತೆ ಎಂಪಿಸಿ, ಕರಡು ಅಭಿವೃದ್ಧಿ ಯೋಜನೆಯನ್ನು ರೂಪಿಸಬೇಕು. ಮುನಿಸಿಪಾಲಿಟಿಗಳು ಸ್ಥಳೀಯ ಕೆಲಸಗಳನ್ನು ನಿರ್ವಹಿಸಬೇಕು. ಬೆಂಗಳೂರಿನ ಮಟ್ಟಿಗೆ ಎಂಪಿಸಿಯನ್ನು ಸಕ್ರಿಯಗೊಳಿಸಿ ಬಲಪಡಿಸಬೇಕು. ಸೂಕ್ತ ಅಭಿವೃದ್ಧಿ ಯೋಜನೆ ರೂಪಿಸಬೇಕು. ಮೆಟ್ರೊಪಾಲಿಟನ್ ಪ್ರದೇಶದಲ್ಲಿ ಸಣ್ಣ ನಗರಗಳು ಅಥವಾ ಪಟ್ಟಣಗಳು– ಕನಕಪುರ, ರಾಮನಗರ ಅಥವಾ ಹೊಸಕೋಟೆ– ಸ್ಥಳೀಯ ಮುನಿಸಿಪಲ್ ಕಾರ್ಯಗಳನ್ನು ನಡೆಸುವುದು ಮುಂದುವರಿಯಬೇಕು. ಬೇರೆ ಬೇರೆ ಪ್ರದೇಶಗಳಿಗೆ ವ್ಯಾಪಿಸಿಕೊಂಡಿರುವ ಬೃಹತ್ ಪ್ರಮಾಣದ ಮೂಲಸೌಕರ್ಯ ಯೋಜನೆಗಳನ್ನು ಎಂಪಿಸಿಯು ರೂಪಿಸಿ, ಮೇಲ್ವಿಚಾರಣೆ ನಡೆಸಬಹುದು.

ಶಿವಕುಮಾರ್ ಅವರೇ, ಮೊದಲು ನೀವು ಬೆಂಗಳೂರು ನಗರಕ್ಕೆ ಸಂಬಂಧಿಸಿದ ಯೋಜನೆ, ನೀತಿನಿರೂಪಣೆಯ ಹೊಣೆ ವಹಿಸಿಕೊಳ್ಳಿ. ನಂತರ ಕನಕಪುರವನ್ನು ಬೆಂಗಳೂರು ದಕ್ಷಿಣದ ಭಾಗವನ್ನಾಗಿಸುವ ಆಲೋಚನೆ ಮಾಡಿ. ಆಗ ಬಹುಶಃ ನಿಮಗೆ ಮತ್ತೊಂದು ಆಲೋಚನೆ ಮೂಡಬಹುದು, ನಗರಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ, ಅದನ್ನು ಜೀವಿಸಲು ಯೋಗ್ಯವನ್ನಾಗಿಸುವ ಕೆಲಸವನ್ನು ಶುರುಮಾಡಬಹುದು.

ಲೇಖಕ: ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ

r
r

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT