ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅಭಿವೃದ್ಧಿ– ಪರಿಸರಕ್ಕೆ ಸಮನ್ವಯ ಸೂತ್ರ

‘ಶೂನ್ಯ ಕಾರ್ಬನ್’ ಉತ್ಸರ್ಜನೆಯ ಆಶ್ವಾಸನೆಯು ಎರ್ಲಡ್ಡುಗಳಿಗೆ ತೊಡಕಾಗದಂತೆ ಎಚ್ಚರ ವಹಿಸಬೇಕಿದೆ
Published 14 ಏಪ್ರಿಲ್ 2024, 19:15 IST
Last Updated 14 ಏಪ್ರಿಲ್ 2024, 19:15 IST
ಅಕ್ಷರ ಗಾತ್ರ

ಸಮಬಲದ ಇಬ್ಬರು ಸ್ಪರ್ಧಿಗಳ ನಡುವಿನ ಸೆಣಸಾಟ ಕುತೂಹಲಕಾರಿಯಷ್ಟೇ ಅಲ್ಲ ಆಕರ್ಷಣೀಯವೂ ಹೌದು. ಆದರೆ ಒಂದೆಡೆ ಪ್ರಬಲ, ಪ್ರತಿಷ್ಠಿತ, ಶ್ರೀಮಂತ ಔದ್ಯಮಿಕ ಸಂಸ್ಥೆಗಳು, ಇನ್ನೊಂದೆಡೆಯಲ್ಲಿ, ಅಳಿವಿನ ಅಂಚಿನ, ವಿಷಮ ಪರಿಸ್ಥಿತಿಯಲ್ಲಿರುವ ಎರ್ಲಡ್ಡು ಹಕ್ಕಿ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಎದುರಾದಾಗ, ಈ ಎರಡರ ನಡುವೆ ನಡೆಯುವ ಸೆಣಸಾಟ ಕಳವಳಕಾರಿ ಆಗುತ್ತದೆ. ಇಂಥದೊಂದು ಹೋರಾಟವು 2019ರಿಂದ ನಡೆಯುತ್ತಿದ್ದು, ಈ ಹಕ್ಕಿಯ ಹಿಂದೆ ಭದ್ರವಾಗಿ ನಿಂತಿರುವ ಸುಪ್ರೀಂ ಕೋರ್ಟ್‌, 2021ರ ಏಪ್ರಿಲ್‌ನಲ್ಲಿ ಹೊರಡಿಸಿದ್ದ ತನ್ನ ಆಜ್ಞೆಯನ್ನು ಪರಿಷ್ಕರಿಸಿ ಇತ್ತೀಚೆಗೆ ಹೊಸ ನಿರ್ದೇಶನಗಳನ್ನು ನೀಡಿದೆ.

ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯ ಉತ್ಪಾದನೆಗೆ ನಮ್ಮ ದೇಶದಲ್ಲಿ ಇಂದು ಅತಿ ಹೆಚ್ಚಿನ ಆದ್ಯತೆಯಿದೆ. ಸದ್ಯ ದೇಶದ ಒಟ್ಟು ವಿದ್ಯುತ್ ಬೇಡಿಕೆಯ ಶೇಕಡ 38ರಷ್ಟು ನವೀಕರಿಸಬಹುದಾದ ಮೂಲಗಳಿಂದ ಬರುತ್ತಿದ್ದು, 2030ರ ವೇಳೆಗೆ ಇದನ್ನು ಶೇ 50ಕ್ಕೆ ಏರಿಸುವ ಗುರಿಯಿದೆ. ಹೀಗಾಗಿ, ಸೌರ ಮತ್ತು ವಾಯು ವಿದ್ಯುತ್ ಸ್ಥಾವರಗಳ ಸ್ಥಾಪನೆಯ ಕೆಲಸ ದೇಶದ ವಿವಿಧ ಭಾಗಗಳಲ್ಲಿ ಭರದಿಂದ ಸಾಗಿದೆ.

ಅಡೆತಡೆಗಳಿಲ್ಲದ ವಿಶಾಲ ಬಯಲು ಭೂಮಿ, ಪ್ರಖರ ಬಿಸಿಲು, ತೀವ್ರ ಗಾಳಿಯಂತಹವು ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳನ್ನು ಸೌರ ಮತ್ತು ವಾಯುವಿದ್ಯುತ್ ಉತ್ಪಾದನೆಗೆ ಮಾದರಿ ರಾಜ್ಯಗಳನ್ನಾಗಿ ಮಾಡಿವೆ. ನಮ್ಮ ದೇಶದಲ್ಲಿ ಸೌರ ಮತ್ತು ವಾಯುವಿದ್ಯುತ್ ಸ್ಥಾವರಗಳ ಉತ್ಪಾದನಾ ಸಾಮರ್ಥ್ಯದ ಶೇ 24ರಷ್ಟು ಈ ರಾಜ್ಯಗಳಿಂದ ಬರುತ್ತದೆ. ಸೌರವಿದ್ಯುತ್ ಪಾರ್ಕ್‌ಗಳು ಮತ್ತು ವಾಯುವಿದ್ಯುತ್ ಫಾರಂಗಳಲ್ಲಿ ಉತ್ಪಾದನೆ ಆಗುವ ವಿದ್ಯುತ್ತನ್ನು ಸಾಗಿಸಲು ಅಧಿಕ ವೋಲ್ಟೇಜ್ ಪ್ರಸರಣ ತಂತಿಗಳು, ಬೃಹದಾಕಾರದ ಸ್ತಂಭಗಳು, ಗೋಪುರಗಳನ್ನು ವ್ಯಾಪಕವಾಗಿ ಸ್ಥಾಪಿಸಲಾಗುತ್ತಿದೆ. ರಾಜಸ್ಥಾನದ ಜೈಸಲ್ಮೇರ್ ಮತ್ತು ಬಾರ್ಮೇಡ್ ಜಿಲ್ಲೆಗಳಲ್ಲಿ ಸಮರೋಪಾದಿಯಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳೇ ಅಳಿವಿನ ಅಂಚಿನಲ್ಲಿರುವ ಎರ್ಲಡ್ಡು ಹಕ್ಕಿಗಳಿಗೆ ಮಾರಕವಾಗುತ್ತಿವೆ.

ಒಂದು ಕಾಲದಲ್ಲಿ ಕರ್ನಾಟಕದ ಕೊಪ್ಪಳ, ರಾಯಚೂರು, ರಾಣೆಬೆನ್ನೂರಿನಲ್ಲಿ ಕಂಡುಬರುತ್ತಿದ್ದ ಈ ಹಕ್ಕಿ ಈಗ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಿಗೆ ಮಾತ್ರ ಸೀಮಿತಗೊಂಡಿದೆ. ಕರ್ನಾಟಕದಲ್ಲಿ ಬಹಳ ಅಪರೂಪ. 2018ರಲ್ಲಿ ಈ ಹಕ್ಕಿಗಳ ಆವಾಸ ಪ್ರದೇಶದಲ್ಲಿ ನಡೆದ ಗಣತಿಯಂತೆ, ನಮ್ಮ ದೇಶದಲ್ಲಿದ್ದ ಎರ್ಲಡ್ಡುಗಳ ಸಂಖ್ಯೆ ಸುಮಾರು 150. ಇದರಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ 122 ಹಕ್ಕಿಗಳನ್ನು ದಾಖಲಿ ಸಲಾಗಿದ್ದು, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ದಲ್ಲಿ ತಲಾ 10 ಹಕ್ಕಿಗಳಿರಬಹುದೆಂಬ ಅಂದಾಜಿತ್ತು. 2022ರ ಅಂತ್ಯದಲ್ಲಿ ಈ ಹಕ್ಕಿಗಳ ಸಂಖ್ಯೆ 100ಕ್ಕಿಂತ ಹೆಚ್ಚು ಇರಲಾರದೆಂಬುದು ವನ್ಯಜೀವಿ ತಜ್ಞರ ಊಹೆಯಾಗಿತ್ತು.

ಎರ್ಲಡ್ಡು, ಕಿರಿದಾದ ಮುನ್ನೋಟ (ಫ್ರಾಂಟಲ್ ವಿಷನ್) ಮತ್ತು ಅಗಲವಾದ ಪಾರ್ಶ್ವನೋಟ (ಸೈಡ್‍ವೇಸ್ ವಿಷನ್) ಇರುವ ಹಕ್ಕಿ. ಅಂದರೆ, ಎರಡೂ ಪಕ್ಕಗಳಿಗೆ ಹೋಲಿಸಿದರೆ ಮುಂಭಾಗದ ದೃಷ್ಟಿ ಸ್ವಲ್ಪ ದುರ್ಬಲ. ಹೀಗಾಗಿ, ಈ ಹಕ್ಕಿಗಳು ಹಾರಾಡುವಾಗ ಬಹಳಷ್ಟು ಸಮೀಪ ಬರುವವರೆಗೂ ವಿದ್ಯುತ್ ತಂತಿಗಳು ಕಾಣಿಸುವುದಿಲ್ಲ. ಎರ್ಲಡ್ಡು 15ರಿಂದ 18 ಕಿಲೊಗಳಷ್ಟು ಭಾರವಾಗಿರುವುದರಿಂದ, ಅನಿರೀಕ್ಷಿತವಾಗಿ ತಂತಿಗಳು ಎದುರಾದಾಗ ಬಾಗಿ, ಬಳುಕಿ ತಂತಿಯನ್ನು ತಪ್ಪಿಸಿ ಹಾರುವುದು ಸಾಧ್ಯವಿಲ್ಲ. ಆದ್ದರಿಂದ ತಂತಿಗಳಿಗೆ ಡಿಕ್ಕಿ ಹೊಡೆದು, ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ, ಗಾಯಗೊಂಡು ಸಾಯುವ ಪ್ರಕರಣಗಳು ಹೆಚ್ಚುತ್ತಾ ಬಂದವು.

ಈ ಹಕ್ಕಿಗಳು ಸಂಪೂರ್ಣವಾಗಿ ಅಳಿದೇಹೋಗುವ ಸಾಧ್ಯತೆ ಸ್ಪಷ್ಟವಾಗಿ ಕಂಡುಬಂದಿದ್ದರಿಂದ ಸ್ಥಳೀಯ ಬೈಷ್ಣೋಯಿ ಸಮುದಾಯ, ವನ್ಯಜೀವಿ ಸಂಘಟನೆಗಳು ಈ ಅಪರೂಪದ ಹಕ್ಕಿಯನ್ನು ಉಳಿಸುವ ಪ್ರಯತ್ನವಾಗಿ ಸುಪ್ರೀಂ ಕೋರ್ಟ್‌ಗೆ 2019ರಲ್ಲಿ ಅರ್ಜಿ ಸಲ್ಲಿಸಿದವು. ನ್ಯಾಯಾಲಯವು 2021ರ ಏಪ್ರಿಲ್‍ನಲ್ಲಿ ತೀರ್ಪನ್ನು ನೀಡಿ, ರಾಜಸ್ಥಾನ ಮತ್ತು ಗುಜರಾತ್‍ನ ಒಟ್ಟು 99,000 ಚದರ ಕಿ.ಮೀ. ಪ್ರದೇಶದಲ್ಲಿ ನೆಲದ ಮೇಲಿನ ತಂತಿಗಳ ಮೂಲಕ ವಿದ್ಯುತ್ ಸಾಗಣೆಯನ್ನು ಸಂರ್ಪೂಣವಾಗಿ ನಿರ್ಬಂಧಿಸಿತು. ‘ತಾಂತ್ರಿಕವಾಗಿ ಸಾಧ್ಯವಾಗುವ ಎಲ್ಲ ಜಾಗಗಳಲ್ಲಿ ಹೈ ಟೆನ್ಶನ್ ವಿದ್ಯುತ್ ಕೇಬಲ್‍ಗಳನ್ನು ನೆಲದಡಿಯಲ್ಲಿ ಹಾಕಬೇಕು. ಎಲ್ಲ ವಿದ್ಯುತ್ ಕಂಪನಿಗಳೂ ಹಕ್ಕಿಗಳ ಆವಾಸದಲ್ಲಿ ಹಾದುಹೋಗುವ ಹೈಟೆನ್ಶನ್ ತಂತಿಗಳಲ್ಲಿ ಹಕ್ಕಿಗಳನ್ನು ನಿರ್ದಿಷ್ಟ ಅಂತರಗಳಲ್ಲಿ ಮುಂಚಿತವಾಗಿಯೇ ಎಚ್ಚರಿಸಿ, ಹಾರಾಟದ ಮಾರ್ಗ ಬದಲಿಸುವಂತೆ ಮಾಡುವ ‘ಬರ್ಡ್ ಡೈವರ್ಟರ್ಸ್’ ಅನ್ನು ಕಡ್ಡಾಯವಾಗಿ ಅಳವಡಿಸಬೇಕು’ ಎಂಬ ನಿರ್ದೇಶನ ನೀಡಿತು.

ಈ ತೀರ್ಪು ಸೌರ ಮತ್ತು ವಾಯು ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಯಿತು. 2021ರಿಂದ ಈಚೆಗೆ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವ ಪ್ರಯತ್ನಗಳು ನಡೆದರೂ ಅವು ಯಶಸ್ವಿಯಾಗಲಿಲ್ಲ. ಹೀಗಾಗಿ, ಈ ವರ್ಷದ ಜನವರಿಯಲ್ಲಿ ಈ ಕಂಪನಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿ, 2021ರ ತೀರ್ಪು ಥಾರ್ ಮತ್ತು ಕಚ್ ಪ್ರದೇಶಗಳಲ್ಲಿ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಪ್ರಕ್ರಿಯೆಗೆ ತೀವ್ರ ಹಿನ್ನಡೆ ಉಂಟುಮಾಡಿರುವುದರಿಂದ, ತೀರ್ಪನ್ನು ಮರುಪರಿಶೀಲಿ ಸುವಂತೆ ಕೋರಿದವು. 99,000 ಚದರ ಕಿ.ಮೀ. ಪ್ರದೇಶದಲ್ಲಿ ನೆಲದಡಿಯಲ್ಲಿ ಕೇಬಲ್‍ಗಳನ್ನು ಹಾಕುವುದ ರಲ್ಲಿರುವ ಆರ್ಥಿಕ ಹಾಗೂ ತಾಂತ್ರಿಕ ತೊಂದರೆಗಳನ್ನು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ವಿವರಿಸಿತು.

‘ಎರ್ಲಡ್ಡುಗಳ ಸಂರಕ್ಷಣೆಯ ದೃಷ್ಟಿಯಿಂದ ಸುಮಾರು 99,000 ಚದರ ಕಿ.ಮೀ. ಪ್ರದೇಶವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಈ ಪೈಕಿ ಸುಮಾರು 13,000 ಚದರ ಕಿ.ಮೀ. ಆದ್ಯತೆಯ ಪ್ರದೇಶ, ಸುಮಾರು 80,000 ಚದರ ಕಿ.ಮೀ. ಪ್ರದೇಶವನ್ನು ಪ್ರಬಲ ಸಂರಕ್ಷಣಾ ಸಾಧ್ಯತೆಯ ಪ್ರದೇಶ ಮತ್ತು ಸುಮಾರು 6,000 ಚದರ ಕಿ.ಮೀ. ಪ್ರದೇಶವನ್ನು ಸಂರಕ್ಷಣೆಯ ವಿಶೇಷ ಉದ್ದೇಶಗಳಿಗೆ ಮೀಸಲಿಡಬೇಕೆಂದು ಡೆಹ್ರಾಡೂನ್‍ನ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಶಿಫಾರಸು ಮಾಡಿತ್ತು. ಇದರಲ್ಲಿ 80,688 ಚದರ ಕಿ.ಮೀ. ಪ್ರದೇಶವು ಸೌರ ಮತ್ತು ವಾಯು ವಿದ್ಯುತ್ ಉತ್ಪಾದನೆಯ ದೃಷ್ಟಿಯಿಂದ ಅತ್ಯಂತ ಸೂಕ್ತ ಪ್ರದೇಶ. ಇದರ ಶೇ 3ರಷ್ಟು ಪ್ರದೇಶವನ್ನು ಮಾತ್ರ ವಿದ್ಯುತ್ ಉತ್ಪಾದನೆಗೆ ಬಳಸಿ
ಕೊಳ್ಳಲಾಗಿದೆ. ಉಳಿದ ಪ್ರದೇಶವನ್ನು ನಾವು ಬಳಸಿಕೊಳ್ಳದಿದ್ದರೆ 93,000 ಮೆಗಾವಾಟ್ ವಿದ್ಯುತ್ತನ್ನು ಕಲ್ಲಿದ್ದಲು ಬಳಸಿ ಉತ್ಪಾದಿಸಬೇಕಾಗುತ್ತದೆ. ಇದರಿಂದ 623 ಶತಕೋಟಿ ಟನ್‍ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ವಾಯುಮಂಡಲಕ್ಕೆ ಸೇರುತ್ತದೆ. ಈ ಕಾರಣದಿಂದ ನೆಲದ ಮೇಲಿನ ವಿದ್ಯುತ್ ಪ್ರಸರಣ ತಂತಿಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆಗೆಯಬೇಕು’ ಎಂದು ಕೇಂದ್ರ ಸರ್ಕಾರ ಮನವಿ ಸಲ್ಲಿಸಿತ್ತು.

‘ಅಳಿವಿನ ಅಂಚಿನಲ್ಲಿರುವ ಎರ್ಲಡ್ಡುಗಳನ್ನು ಸಂರಕ್ಷಿಸಬೇಕು ಎನ್ನುವುದರಲ್ಲಿ ಎರಡನೆಯ ಮಾತಿಲ್ಲ. ಅದೇ ಸಂದರ್ಭದಲ್ಲಿ, 2070ರ ಸುಮಾರಿಗೆ ‘ಶೂನ್ಯ ಕಾರ್ಬನ್ ಉತ್ಸರ್ಜನೆ’ಯ ದೇಶವಾಗಲಿರುವುದಾಗಿ ಭಾರತವು ಅಂತರರಾಷ್ಟ್ರೀಯ ಸಮುದಾಯಕ್ಕೆ ನೀಡಿರುವ ಆಶ್ವಾಸನೆಯೂ ಅಷ್ಟೇ ಮುಖ್ಯ. ಅದು ಕಾರ್ಯಗತವಾಗಬೇಕಾದರೆ ಸೌರ ಮತ್ತು ವಾಯುವಿದ್ಯುತ್ ಉತ್ಪಾದನೆಗೆ ಅತಿಹೆಚ್ಚಿನ ಪ್ರಾಶಸ್ತ್ಯ ಅಗತ್ಯ. ಈ ಎರಡೂ ಗುರಿಗಳನ್ನು, ಒಂದಕ್ಕಾಗಿ ಇನ್ನೊಂದನ್ನು ಬಲಿಗೊಡದೇ ಸಾಧಿಸಬೇಕು’ ಎಂಬ ನಿಲುವನ್ನು ತಳೆದ ಸುಪ್ರೀಂ ಕೋರ್ಟ್‌, 2021ರ ಏಪ್ರಿಲ್ ಆಜ್ಞೆಯನ್ನು ಮಾರ್ಪಡಿಸಿ ಹಲವಾರು ನಿರ್ದೇಶನಗಳನ್ನು ನೀಡಿದೆ.

ಮೊದಲನೆಯದಾಗಿ, 99,000 ಚದರ ಕಿ.ಮೀ. ಪ್ರದೇಶದಲ್ಲಿ ನೆಲದ ಮೇಲಿನ ವಿದ್ಯುತ್ ಪ್ರಸರಣ ತಂತಿಗಳ ಮೇಲಿದ್ದ ಸಂಪೂರ್ಣ ನಿಷೇಧವನ್ನು ರದ್ದುಗೊಳಿಸಿದೆ. ಎರಡನೆಯದಾಗಿ, ಏಳು ಮಂದಿ ಪರಿಣತರು ಮತ್ತು ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ, ಯಾವ ಪ್ರದೇಶಗಳಲ್ಲಿ ಕೇಬಲ್‍ಗಳು ನೆಲದಡಿ ಯಲ್ಲಿಯೇ ಇರಬೇಕು, ಎಲ್ಲಿ ಮೇಲಿರಬಹುದು, ಎರ್ಲಡ್ಡುಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಎರಡೂ ಗುರಿಗಳನ್ನು ಸಾಧಿಸುವ ಮಾರ್ಗಗಳ ಮೇಲೆ ಬೆಳಕು ಚೆಲ್ಲಲಿದೆ.

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಳೆರಡನ್ನೂ ಏಕಕಾಲದಲ್ಲಿ ಸಾಧಿಸುವ ಜಾಣ್ಮೆ, ಉಪಾಯಗಳನ್ನು ಸೂಚಿಸುವ ಹೊಣೆ ಹೊತ್ತಿರುವ ಈ ಪರಿಣತರ ಸಮಿತಿ ಈ ವರ್ಷದ ಜುಲೈ 31ರ ಒಳಗೆ ತನ್ನ ವರದಿಯನ್ನು ಸಲ್ಲಿಸಬೇಕಿದೆ. ಈ ಸಮಿತಿಯ ವರದಿ, ಬದಲಾಗುತ್ತಿರುವ ವಾಯುಗುಣದ ಸಂದರ್ಭದಲ್ಲಿ, ಅಭಿವೃದ್ಧಿ-
ಪರಿಸರ ಸಂರಕ್ಷಣೆಯ ಸಂಘರ್ಷಗಳ ಎಲ್ಲ ಪ್ರಕರಣಗಳಿಗೂ ಅನ್ವಯವಾಗುವಂತಹ ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಬಹುದೆಂಬ ನಿರೀಕ್ಷೆಯಿದೆ.‌

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT