ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಬಾಲಕಿಯರ ಶಿಕ್ಷಣ: ಸಾಧನೆ, ಸವಾಲು

ಗುಣಮಟ್ಟದ ಶಿಕ್ಷಣ ಒದಗಿಸುವುದು ಸಮಾನ ಅವಕಾಶದ ಗುರಿ ಸಾಧನೆಯಲ್ಲಿ ನಿರ್ಣಾಯಕ
Published : 25 ಆಗಸ್ಟ್ 2024, 22:30 IST
Last Updated : 25 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments

ಸ್ವಾತಂತ್ರ್ಯಾನಂತರ ಶಿಕ್ಷಣದ ಸಾರ್ವತ್ರೀಕರಣದಲ್ಲಿ ಭಾರತ ಗಮನಾರ್ಹ ಸಾಧನೆಯನ್ನು ತೋರಿದೆ. ಇದೇ ವೇಳೆ, ಬಾಲಕಿಯರ ಶಿಕ್ಷಣ ಅದರಲ್ಲೂ ವಿಶೇಷವಾಗಿ ಅವಕಾಶವಂಚಿತ ಸಮುದಾಯಗಳ ಮಕ್ಕಳನ್ನು ಮುಖ್ಯವಾಹಿನಿಯಲ್ಲಿ ಉಳಿಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಹಲವು ಸವಾಲುಗಳು ನಮಗೆ ಎದುರಾಗಿವೆ. ಸಂವಿಧಾನದ ಆಶಯದಂತೆ, ಧರ್ಮ, ಜನಾಂಗ, ಜಾತಿ, ಲಿಂಗದಂತಹವನ್ನು ಲೆಕ್ಕಿಸದೆ, ಪ್ರತಿ ಮಗುವೂ ಗುಣಮಟ್ಟದ ಶಿಕ್ಷಣ ಪಡೆಯುವುದನ್ನು ಖಾತರಿಪಡಿಸುವುದು ಈ ಹೊತ್ತಿನ ನಮ್ಮ ಆದ್ಯತೆಯಾಗಿದೆ.

ಹಲವು ಸಂಶೋಧನೆಗಳು ಹೇಳುವಂತೆ, ಶಿಕ್ಷಣವು ಹೆಣ್ಣುಮಕ್ಕಳನ್ನು ಹೆಚ್ಚು ಸಬಲೀಕರಿಸುವುದಲ್ಲದೆ ಲಿಂಗಸಮಾನತೆ ಮತ್ತು ಸಾಮಾಜಿಕ- ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯುನೆಸ್ಕೊ ಅಧ್ಯಯನದ ಪ್ರಕಾರ, ಪ್ರತಿ ಬಾಲಕಿ ಒಂದೊಂದು ವರ್ಷವೂ ಪಡೆಯುವ ಶಾಲಾ ಶಿಕ್ಷಣವು ಯೌವನದಲ್ಲಿ ಅವಳ ಆದಾಯವನ್ನು ಶೇಕಡ 10ರಿಂದ 20ರಷ್ಟು ಹೆಚ್ಚಿಸುತ್ತದೆ.

ಯುಡೈಸ್‌ (U-DISE) ದತ್ತಾಂಶದ ಪ್ರಕಾರ, ದೇಶದಲ್ಲಿ ಒಂದು ದಶಕದ ಅವಧಿಯ (2012- 22) ಬಾಲಕಿಯರ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದರೆ, ಶಾಲಾ ಶಿಕ್ಷಣದ ವಿವಿಧ ಹಂತಗಳಾದ ಪ್ರಾಥಮಿಕ, ಮಾಧ್ಯಮಿಕ ಮತ್ತು 11- 12ನೇ ತರಗತಿ ಒಳಗೊಂಡಂತೆ ಪ್ರೌಢ ಶಿಕ್ಷಣದ ಹಂತಗಳಲ್ಲಿ ಹಲವಾರು ಗಮನಾರ್ಹ ಸಾಧನೆಗಳ ಜೊತೆಗೆ ಕಾಳಜಿ ವಹಿಸಬೇಕಾದ ಸಂಗತಿಗಳೂ ನಮಗೆ ಮನವರಿಕೆಯಾಗುತ್ತವೆ.

ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಬಾಲಕಿಯರ ದಾಖಲಾತಿಯು ವಾರ್ಷಿಕವಾಗಿ ಸರಾಸರಿ ಶೇ 1.14ರಷ್ಟು ಹೆಚ್ಚಳದೊಂದಿಗೆ ಗಣನೀಯ ಪ್ರಮಾಣದ ಬೆಳವಣಿಗೆಯನ್ನು ಕಂಡಿದೆ. ಮಾಧ್ಯಮಿಕ ಹಂತದಲ್ಲಿ ದಾಖಲಾತಿ ತುಲನಾತ್ಮಕವಾಗಿ ಸ್ಥಿರವಾಗಿದ್ದು, ವಾರ್ಷಿಕ ಬೆಳವಣಿಗೆ ದರ ಸರಾಸರಿ ಶೇ 0.03ರಷ್ಟು ಇದೆ. ಪ್ರೌಢ ಶಿಕ್ಷಣದ ಹಂತದಲ್ಲಿ ದಾಖಲಾತಿಯು ಕುಸಿದಿದ್ದು, ವಾರ್ಷಿಕವಾಗಿ ಶೇ 0.56ರಷ್ಟು ಇಳಿಕೆಯಾಗಿದೆ. ಈ ಬೆಳವಣಿಗೆಯು ಪ್ರೌಢ ಶಿಕ್ಷಣದ ಹಂತದಲ್ಲಿ ಬಾಲಕಿಯರನ್ನು ಶಾಲೆಗೆ ಕರೆತರುವಲ್ಲಿ ಇರುವ ಸವಾಲುಗಳನ್ನು ಸೂಚಿಸುತ್ತದೆ.

ಇನ್ನು 11 ಮತ್ತು 12ನೇ ತರಗತಿಯ ಹಂತದ ಬೆಳವಣಿಗೆ ಅತ್ಯಂತ ಕಳವಳಕಾರಿಯಾಗಿದೆ. ಇಲ್ಲಿ ವಾರ್ಷಿಕವಾಗಿ ದಾಖಲಾತಿಯಲ್ಲಿ ಸರಾಸರಿ ಶೇ 3.4ರಷ್ಟು ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದೆ. ಇದು, ಈ ಹಂತದಲ್ಲಿ ಬಾಲಕಿಯರ ದಾಖಲಾತಿಯಲ್ಲಿ ಕಂಡುಬರುವ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಒಟ್ಟಾರೆಯಾಗಿ, 1ರಿಂದ 12ನೇ ತರಗತಿಯವರೆಗಿನ ಎಲ್ಲಾ ಹಂತಗಳಲ್ಲಿ ಬಾಲಕಿಯರ ಒಟ್ಟು ದಾಖಲಾತಿಯಲ್ಲಿ, ಹಿಂದಿನ ಒಂದು ದಶಕದಲ್ಲಿ ವಾರ್ಷಿಕವಾಗಿ ಶೇ 0.14ರಷ್ಟು ಸರಾಸರಿ ಹೆಚ್ಚಳ ಕಂಡುಬಂದಿದ್ದರೂ ವಿವಿಧ ಹಂತಗಳ ಪ್ರಗತಿಯಲ್ಲಿ ಬಹಳಷ್ಟು ಸಮಸ್ಯೆಗಳಿರುವುದನ್ನು ಅಂಕಿಅಂಶಗಳು ನಿಖರವಾಗಿ ಸೂಚಿಸುತ್ತವೆ.

ಇಂತಹ ಅಂಕಿಅಂಶಗಳ ಆಧಾರದಲ್ಲಿ ಬಾಲಕಿಯರ ಶಿಕ್ಷಣದ ಗತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ದಾಖಲಾತಿಯು ಪ್ರೋತ್ಸಾಹದಾಯಕವಾಗಿದೆ. ಆದರೆ, ಮಾಧ್ಯಮಿಕ ಹಂತದಲ್ಲಿ ನಾವು ಅತ್ಯಲ್ಪ ಬೆಳವಣಿಗೆಯನ್ನು ಮಾತ್ರ ಕಂಡಿದ್ದೇವೆ. ಪ್ರಾಥಮಿಕ ಹಂತದಿಂದ ಮಾಧ್ಯಮಿಕ ಹಂತಕ್ಕೆ ಬಾಲಕಿಯರು ಸುಗಮವಾಗಿ ದಾಟುವುದನ್ನು ಖಚಿತಪಡಿಸಿಕೊಂಡು, ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಲು ಅಡ್ಡಿಯಾಗುವಂತಹ ಎಲ್ಲಾ ಅಡೆತಡೆಗಳನ್ನು ಗುರುತಿಸಿ, ಪರಿಹರಿಸುವತ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಇದು ತುರ್ತಾಗಿ ಆಗಬೇಕಾಗಿರುವ ಕೆಲಸವೂ ಹೌದು.

11 ಮತ್ತು 12ನೇ ತರಗತಿ ಒಳಗೊಂಡಂತೆ ಪ್ರೌಢ ಶಿಕ್ಷಣದ ಹಂತದಲ್ಲಿ ದಾಖಲಾತಿಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಚಿಂತೆಗೆ ಈಡುಮಾಡುವಂತಹ ಸಂಗತಿ. ಬಾಲಕಿಯರು ಉನ್ನತ ಪ್ರಾಥಮಿಕ ಶಿಕ್ಷಣದ ನಂತರ ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣವನ್ನು ಮುಂದುವರಿಸದಿದ್ದರೆ, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಹಂತದಲ್ಲಿ ನಾವು ಸಾಧಿಸಿದ ಪ್ರಗತಿ ಕೆಲವೇ ಸಮಯದಲ್ಲಿ ಶೂನ್ಯವಾಗುತ್ತದೆ. ಕಾರಣ, ಮಕ್ಕಳು ಪ್ರಾಥಮಿಕ ಹಂತದಲ್ಲಿ ಕಲಿತದ್ದನ್ನು ಕ್ರಮೇಣ ಮರೆಯುವ ಸಾಧ್ಯತೆ ಇರುತ್ತದೆ. ಜೊತೆಗೆ, ಹೆಣ್ಣುಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸದಿದ್ದರೆ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಸಣ್ಣ ವಯಸ್ಸಿನಲ್ಲಿ ಮನೆಕೆಲಸ ಮತ್ತು ಮಕ್ಕಳ ಸಾಗಣೆಯಂಥ ಸಾಮಾಜಿಕ ಅನಿಷ್ಟಗಳಿಗೆ ತುತ್ತಾಗುವ ಸಾಧ್ಯತೆಗಳು ದಟ್ಟವಾಗಿರುತ್ತವೆ.

ಸಾಧಿಸಿರುವ ಪ್ರಗತಿಯ ಹೊರತಾಗಿಯೂ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಲಿಂಗ ಅಸಮಾನತೆ ಮುಂದುವರಿದಿದೆ. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯ ಪ್ರಕಾರ, ದೇಶದಲ್ಲಿ ಏಳು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹೆಣ್ಣುಮಕ್ಕಳ ಸಾಕ್ಷರತೆಯ ಪ್ರಮಾಣ ಶೇ 65.46ರಷ್ಟಿದ್ದರೆ, ಗಂಡುಮಕ್ಕಳಲ್ಲಿ ಈ ಪ್ರಮಾಣ ಶೇ 80.88ರಷ್ಟಿದೆ. ಈ ಅಂತರವನ್ನು ಸರಿಪಡಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಎಲ್ಲರಿಗೂ ಕನಿಷ್ಠ ಶಾಲಾ ಶಿಕ್ಷಣವನ್ನು ಖಾತರಿಪಡಿಸುವಲ್ಲಿ ಬಾಲಕಿಯರ ಶಿಕ್ಷಣವನ್ನು ಉತ್ತೇಜಿಸುವುದು ನಿರ್ಣಾಯಕವಾಗುತ್ತದೆ.

ಬಾಲಕಿಯರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇರುವ ಸವಾಲು ಮತ್ತು ತೀವ್ರತೆಯನ್ನು ಅರ್ಥಮಾಡಿಕೊಳ್ಳಲು, ಹೆಣ್ಣುಮಕ್ಕಳ ಜನಸಂಖ್ಯೆಯನ್ನು ಮುನ್ನೋಟದ ಮೂಲಕ ಅಂದಾಜಿಸುವುದು ಮತ್ತು ವಿಶ್ಲೇಷಿಸುವುದು ಅಗತ್ಯ. ಕೇಂದ್ರ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 2021ರಿಂದ 2036ರವರೆಗಿನ ಹೆಣ್ಣುಮಕ್ಕಳ ಜನಸಂಖ್ಯೆಯನ್ನು ಇತ್ತೀಚೆಗೆ ಅಂದಾಜಿಸಿದೆ. ಅದರ ಪ್ರಕಾರ, ದೇಶದಲ್ಲಿ 6-11, 11-14, 6-14, 15-16 ಮತ್ತು 17-18ರ ವಯೋಮಾನದ ಹೆಣ್ಣುಮಕ್ಕಳ ಜನಸಂಖ್ಯೆಯು 2121ಕ್ಕೆ ಹೋಲಿಸಿದರೆ 2036ರ ಹೊತ್ತಿಗೆ ಗಣನೀಯವಾಗಿ ಕಡಿಮೆಯಾಗಲಿದೆ. 

ಬದಲಾಗುತ್ತಿರುವ ಇಂತಹ ಸನ್ನಿವೇಶದಲ್ಲಿ ಸೂಕ್ತ ಶೈಕ್ಷಣಿಕ ಬೆಂಬಲ ವ್ಯವಸ್ಥೆಯನ್ನು ಒದಗಿಸಲು ಹಾಗೂ ವಿವಿಧ ವಯೋಮಾನದ ಬಾಲಕಿಯರ ಅಗತ್ಯಗಳನ್ನು ಪೂರೈಸಲು ಬೇಕಾದ ಉಪಕ್ರಮಗಳ ಬಗ್ಗೆ ನೀತಿ ನಿರೂಪಕರು ಗಂಭೀರವಾಗಿ ಯೋಚಿಸಬೇಕಿದೆ.  ಲಿಂಗಾನುಪಾತದಲ್ಲಿ ಆಗುತ್ತಿರುವ ಕುಸಿತವನ್ನು ತಡೆಯಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಜರೂರನ್ನೂ ಸಹ ಇದು ಸೂಚಿಸುತ್ತದೆ.

ಪ್ರಾಥಮಿಕ ಹಂತದಲ್ಲಿ ದಾಖಲಾದ ಮಕ್ಕಳನ್ನು ಉಳಿಸಿಕೊಂಡು, ಮುಂದಿನ ಹಂತಗಳಾದ ಹಿರಿಯ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಪ್ರೌಢ ಹಂತಕ್ಕೆ ಅವರು ಕಡ್ಡಾಯವಾಗಿ ದಾಖಲಾಗುವುದನ್ನು ಖಾತರಿಪಡಿಸಬೇಕಿದೆ. ಬಾಲಕಿಯರು ತಮ್ಮ ಶಿಕ್ಷಣವನ್ನು ಮುಂದುವರಿಸಲು ಅನುವಾಗುವಂತೆ ಆರ್ಥಿಕ ಪ್ರೋತ್ಸಾಹ ಮತ್ತು ಉತ್ತೇಜಕಗಳನ್ನು ಸಕಾಲದಲ್ಲಿ ಒದಗಿಸುವುದು ಈ ಉದ್ದೇಶ ಸಾಧನೆಗೆ ಬಹಳ ಮುಖ್ಯವಾದುದು. ಎಲ್ಲಾ ಶಾಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸುವುದು ನಿರ್ಣಾಯಕವಾಗುತ್ತದೆ. ಇದನ್ನು ಸಾಕಾರಗೊಳಿಸಲು ಶಿಕ್ಷಣಕ್ಕೆ ಅನುದಾನ ಹಂಚಿಕೆಯನ್ನು ಹೆಚ್ಚಿಸಬೇಕಿದೆ.

ಒಟ್ಟಾರೆ, ಹಿಂದಿನ ಒಂದು ದಶಕದ ಬೆಳವಣಿಗೆಗಳು ಬಾಲಕಿಯರ ಶಿಕ್ಷಣದಲ್ಲಿ ನಾವು ಸಾಧಿಸಿದ ಪ್ರಗತಿ ಮತ್ತು ಅಷ್ಟೇ ಪ್ರಮಾಣದ ಸವಾಲುಗಳನ್ನು ಎತ್ತಿ ತೋರಿಸುತ್ತವೆ. ಸಾಮಾಜಿಕ- ಆರ್ಥಿಕ ಅಸಮಾನತೆಗಳನ್ನು ನಿಭಾಯಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕಿರುವ ಅಡೆತಡೆಗಳನ್ನು ನಿವಾರಿಸುವಾಗ, ಮುಖ್ಯವಾಹಿನಿಯ ಹೊರಗೆ ಉಳಿದ ಮಕ್ಕಳನ್ನು ವ್ಯವಸ್ಥೆಯ ಒಳಗೆ ತರುವುದರ ಜೊತೆಗೆ ವ್ಯವಸ್ಥೆಯ ಒಳಗಿರುವ ಮಕ್ಕಳನ್ನು ಶಾಲೆಗಳಲ್ಲೇ ಉಳಿಸಿಕೊಳ್ಳುವುದು ಮತ್ತು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸರಾಗವಾಗಿ ಮುಂದಡಿ ಇಡಲು ಅಗತ್ಯವಾದ ಉಪಕ್ರಮಗಳನ್ನು ಕೈಗೊಳ್ಳುವುದು ಇಂದಿನ ತುರ್ತು ಅಗತ್ಯವಾ‌ಗಿದೆ. ಜೊತೆಗೆ, ಎಲ್ಲಾ ಬಾಲಕಿಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದು ಸಮಾನ ಅವಕಾಶದ ಗುರಿಯನ್ನು ಸಾಧಿಸುವ ದಿಸೆಯಲ್ಲಿ ನಿರ್ಣಾಯಕವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT