ದೇಶದ ಫುಟ್ಬಾಲ್ ಅಂಗಳ ಗೊಂದಲದ ಗೂಡಾಗಿದೆ. ಮೂಲ ಸೌಕರ್ಯದ ಕೊರತೆ ಹಾಗೂ ನಿರುತ್ಸಾಹದ ಪರಿಸರದಲ್ಲಿ ಆಟಗಾರರ ಪ್ರತಿಭಾ ಪ್ರದರ್ಶನದ ಸಾಧ್ಯತೆಗಳು ಕಡಿಮೆಯಾಗಿವೆ. ಕಾರ್ಮೋಡಗಳ ನಡುವಿನ ಬೆಳ್ಳಿಗೆರೆಯಂತೆ, 2026ರ ಏಷ್ಯನ್ ಕಪ್ ಟೂರ್ನಿಗೆ ಭಾರತದ ಮಹಿಳಾ ತಂಡ ಅವಕಾಶ ಪಡೆದಿದೆ.

ಭಾರತದ ಮಹಿಳೆಯರ ಫುಟ್ಬಾಲ್ ತಂಡ 23 ವರ್ಷಗಳ ನಂತರ ‘ಎಎಫ್ಸಿ ಏಷ್ಯನ್ ಕಪ್ ಟೂರ್ನಿ’ಗೆ ಅರ್ಹತೆ ಗಳಿಸಿದೆ. 2026ರ ಏಷ್ಯನ್ ಕಪ್ ಟೂರ್ನಿಯಲ್ಲಿ ಭಾರತದ ವನಿತೆಯರು ತಮ್ಮ ಕಾಲ್ಚಳಕ ತೋರಿಸಲಿದ್ದಾರೆ.

ಮಣಿಪುರದ ಸ್ವೀಟಿ ದೇವಿ ಎನ್ಗಾಂಗ್ಬಮ್ ಅವರ ನಾಯಕತ್ವದ ತಂಡವು ‘ಎಎಫ್ಸಿ’ ಅರ್ಹತಾ ಫೈನಲ್ನಲ್ಲಿ ಥಾಯ್ಲೆಂಡ್ ತಂಡವನ್ನು ಅದರ ತವರಿನಲ್ಲಿಯೇ ಸೋಲಿಸಿತು. ಥಾಯ್ಲೆಂಡ್ ಎದುರು ಸಂಗೀತಾ ಬಸ್ಫೋರ್ ಅವರು ಹೊಡೆದ ಎರಡು ಗೋಲುಗಳು ಜಯಕ್ಕೆ ಕಾರಣವಾದವು. ಆಸ್ಟ್ರೇಲಿಯಾ ದಲ್ಲಿ (ಏಷ್ಯಾ– ಒಷಾನಿಯಾ ಸಹಭಾಗಿತ್ವ) ಮುಂದಿನ ವರ್ಷ ನಡೆಯಲಿರುವ ‘ಎಎಫ್ಸಿ’ ಟೂರ್ನಿಯಲ್ಲಿ ಭಾರತವು ಅಗ್ರ 8 ತಂಡಗಳಲ್ಲಿ ಸ್ಥಾನ ಪಡೆದರೆ, 2027ರ ಮಹಿಳಾ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸುವ ಸಾಧ್ಯತೆ ಇದೆ. ಸದ್ಯ, ವನಿತೆಯರ ತಂಡವು ವಿಶ್ವ ರ್ಯಾಂಕಿಂಗ್ನಲ್ಲಿ 55ನೇ ಸ್ಥಾನಕ್ಕೇರಿರುವುದು ಆಶಾದಾಯಕ ಬೆಳವಣಿಗೆ.

1975ರಿಂದ 1991ರವರೆಗಿನ ಅವಧಿಯು ಭಾರತದ ಮಹಿಳಾ ಫುಟ್ಬಾಲ್ ಕ್ಷೇತ್ರದ ಸುವರ್ಣ ಯುಗವೆಂದೇ ಹೇಳಲಾಗುತ್ತದೆ. ಎಎಫ್ಸಿ ಏಷ್ಯನ್ ಕಪ್ ಟೂರ್ನಿಯಲ್ಲಿ 1980 ಮತ್ತು 1983ರಲ್ಲಿ ರನ್ನರ್ಸ್ ಅಪ್ ಆಗಿದ್ದ ತಂಡವು, 1981ರಲ್ಲಿ ಕಂಚಿನ ಪದಕ ಜಯಿಸಿತ್ತು. ಅದರ ನಂತರ ಭಾರತ ತಂಡದ ಸಾಧನೆ ಇಳಿಮುಖವಾಗಿತ್ತು. ಒಲಿಂಪಿಕ್ಸ್ ಅಥವಾ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಹಂತದಲ್ಲಿ ಸೆಣಸುವ ಮಟ್ಟಕ್ಕೆ ಆಟಗಾರ್ತಿಯರಿಗೆ ತರಬೇತಿ, ಸೌಲಭ್ಯಗಳು ಮತ್ತು ವಿದೇಶ ಪ್ರವಾಸಗಳನ್ನು ಒದಗಿಸುವಲ್ಲಿ ‘ಅಖಿಲ ಭಾರತ ಫುಟ್ಬಾಲ್ ಫೆಡರೇಷನ್’ (ಎಐಎಫ್ಎಫ್) ವಿಫಲವಾಯಿತು. ಹೆಚ್ಚು ಟೂರ್ನಿಗಳಲ್ಲಿ ಸಕ್ರಿಯವಾಗಿರದ ಕಾರಣಕ್ಕೆ 2009ರಲ್ಲಿ ಫಿಫಾ ತನ್ನ ಪಟ್ಟಿಯಿಂದಲೇ ಭಾರತ ತಂಡದ ಹೆಸರನ್ನು ಕೈಬಿಟ್ಟಿತ್ತು. ಈ ಚಾಟಿಯೇಟಿನಿಂದ ಎಚ್ಚೆತ್ತ ‘ಎಐಎಫ್ಎಫ್’ 2010ರಲ್ಲಿ ತಂಡವನ್ನು ಮರಳಿ ಕಟ್ಟಿತು. ಅಲ್ಲಿಂದ ಐದು ಬಾರಿ ದಕ್ಷಿಣ ಏಷ್ಯಾ ಫುಟ್ಬಾಲ್ (ಸ್ಯಾಫ್) ಚಾಂಪಿಯನ್ ಆಗಿ ಹೊರಹೊಮ್ಮಿದರೂ, ಎಎಫ್ಸಿ ಅರ್ಹತೆ ಪಡೆಯಲು ವಿಫಲವಾಗುತ್ತಿತ್ತು. ಈ ಬಾರಿ ಎಡವಲಿಲ್ಲ. ಬೇರೆ ಬೇರೆ ಕ್ಲಬ್ಗಳಲ್ಲಿ ಆಡಿ ಬಂದಿದ್ದ ಅನುಭವಿ ಆಟಗಾರ್ತಿಯರು ಕ್ರಿಸ್ಪಿನ್ ಚೆಟ್ರಿ ಅವರ ಮಾರ್ಗದರ್ಶನದಲ್ಲಿ ಸದ್ಯ ಈ ಮಟ್ಟಕ್ಕೆ ಬಂದು ನಿಂತಿದ್ದಾರೆ.

‘ನಾನು ಸೋಲುಗಳಿಗಾಗಲೀ ಅಥವಾ ನೌಕರಿ ಕಳೆದುಕೊಳ್ಳುವುದಕ್ಕಾಗಲೀ ಭಯಪಡುವುದಿಲ್ಲ. ನನ್ನ ಎಲ್ಲ ಅನುಭವವನ್ನೂ ಧಾರೆ ಎರೆದಿರುವೆ. ಈ ಹುಡುಗಿಯರಲ್ಲಿ ಅಗಾಧ ಪ್ರತಿಭೆ ಇದೆ. ಆದರೆ, ಅವರ ಮನಸ್ಸಿನಲ್ಲಿ ಸೋಲುವ ಭಯ ಇತ್ತು. ಎಎಫ್ಸಿ ಅರ್ಹತಾ ಟೂರ್ನಿಗೆ ಹೋಗುವ ಮುನ್ನ ಹೆಚ್ಚು ಪಂದ್ಯಗಳನ್ನು ಆಡಿಸುವ ಮೂಲಕ ಅದನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದು ಉಪಯುಕ್ತ ವಾಯಿತು’ ಎಂದು ಮ್ಯಾನೇಜರ್ ಕ್ರಿಸ್ಪಿನ್ ಚೆಟ್ರಿ ಹೇಳುತ್ತಾರೆ.

ಡಾರ್ಜಿಲಿಂಗ್ ಮೂಲದ ಚೆಟ್ರಿ ಅವರು ಮಹಿಳಾ ಫುಟ್ಬಾಲ್ ಬೆಳವಣಿಗೆಗೆ ದೀರ್ಘ ಕಾಲದ ಯೋಜನೆ ರೂಪಿಸಿದ್ದಾರೆ. 2047ರ ಫಿಫಾ ಮಹಿಳಾ ವಿಶ್ವಕಪ್ನಲ್ಲಿ ತಂಡ ಆಡುವಂತಾಗಬೇಕು. ವಿಶ್ವದ ಬಲಿಷ್ಠ ರಾಷ್ಟ್ರಗಳನ್ನು ಎದುರಿಸಿ ನಿಲ್ಲಲು ಭಾರತದ ವ್ಯವಸ್ಥೆ ಯಲ್ಲಿ ಅಷ್ಟು ಸಮಯ ಬೇಕು ಎಂಬುದು ಅವರ ಅಭಿಪ್ರಾಯ.

ಭಾರತದಲ್ಲಿ ಫುಟ್ಬಾಲ್ ಕ್ರೀಡೆಯು ಇನ್ನೇನು ಉತ್ತುಂಗಕ್ಕೇರುತ್ತದೆ ಎಂಬ ಭರವಸೆ ಮೂಡಿದಾಗಲೇ ಪಾತಾಳಕ್ಕಿಳಿದ ಉದಾಹರಣೆಗಳು ಸಾಕಷ್ಟಿವೆ. ಅದಕ್ಕೆ ಕಾರಣ, ‘ಎಐಎಫ್ಎಫ್’ನಲ್ಲಿ ರಾಜಕೀಯ ಹಸ್ತಕ್ಷೇಪ, ಪದಾಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಭ್ರಷ್ಟಾಚಾರಗಳು ಎಂಬುದು ಗುಟ್ಟಾಗಿ ಉಳಿದಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ, ಪ್ರತಿಭಾವಂತ ಆಟಗಾರರು ಮತ್ತು ಆಟಗಾರ್ತಿಯರನ್ನು ತಾರೆಗಳನ್ನಾಗಿ ಬೆಳೆಸಿ ಯುವ ಸಮುದಾಯವನ್ನು ಆಕರ್ಷಿಸುವಲ್ಲಿ ‘ಎಐಎಫ್ಎಫ್’ ಸಂಪೂರ್ಣ ವಿಫಲವಾಗಿದೆ. ಪ್ರಸ್ತುತ ಮಹಿಳಾ ತಂಡವು ಚಾರಿತ್ರಿಕ ಸಾಧನೆ ಮಾಡಿ ಬಂದರೂ, ಅದನ್ನು ದೊಡ್ಡಮಟ್ಟದಲ್ಲಿ ಸಂಭ್ರಮಿಸುವ ಅಥವಾ ಪ್ರಚಾರಗೊಳಿಸುವ ಯಾವುದೇ ಕ್ರಮವನ್ನೂ ಶ್ರಮವನ್ನೂ ಫೆಡರೇಷನ್ ತೆಗೆದುಕೊಂಡಿಲ್ಲ.

ಒಡಿಶಾ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ವಿಭಿನ್ನ ಸಾಮಾಜಿಕ, ಆರ್ಥಿಕ ಹಿನ್ನೆಲೆಗಳಿಂದ ಬಂದಿರುವ ಹುಡುಗಿಯರು ತಂಡದಲ್ಲಿದ್ದಾರೆ. ಅವರ ಉನ್ನತ ಸಾಧನೆಯ ಕನಸುಗಳಿಗೆ ರೆಕ್ಕೆ ಹಚ್ಚಿರುವ ಈ ವಿಜಯವು ಯಶೋಗಾಥೆಯಾಗಿ ಮೆರೆಯಬೇಕಿತ್ತು. ಆದರೆ, ಈ ನಿಟ್ಟಿನಲ್ಲಿ ಫೆಡರೇಷನ್ ಎಡವಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ನಿರ್ಲಕ್ಷ್ಯದ ಧೋರಣೆಯಿಂದಾಗಿಯೇ ಈಗ ದೇಶದ ಪುರುಷರ ಫುಟ್ಬಾಲ್ ತಂಡವೂ ನಲುಗುತ್ತಿದೆ. ತಂಡವು ಫಿಫಾ ರ್ಯಾಂಕಿಂಗ್ನಲ್ಲಿ 133ಕ್ಕೆ ಕುಸಿದ ಸುದ್ದಿ ಈಚೆಗಷ್ಟೇ ಹೊರಬಿದ್ದಿದೆ. ಮೂರು ವರ್ಷಗಳ ಹಿಂದಷ್ಟೇ 99ನೇ ಸ್ಥಾನಕ್ಕೇರಿದ್ದ ತಂಡವು, ಈಗ ಮತ್ತೆ ತಳಕಚ್ಚಿರುವುದು ದುರದೃಷ್ಟಕರ.

ಚುನಿ ಗೋಸ್ವಾಮಿ, ಪಿ.ಕೆ. ಬ್ಯಾನರ್ಜಿ, ಎಂ. ವಿಜಯನ್, ಬೈಚುಂಗ್ ಭುಟಿಯಾ ಮತ್ತು ಸುನಿಲ್ ಚೆಟ್ರಿ ಅವರಂತಹ ಬೆರಳೆಣಿಕೆಯಷ್ಟು ತಾರೆಗಳನ್ನು ಭಾರತದಲ್ಲಿ ನೋಡಬಹುದು. ಖಾಸಗಿ ಕ್ಲಬ್ಗಳು ಬಹಳಷ್ಟಿದ್ದರೂ ಸ್ಟಾರ್ ಆಟಗಾರರನ್ನು ಸಿದ್ಧಪಡಿಸುವಲ್ಲಿ ಹಿನ್ನಡೆ ಆಗುತ್ತಿದೆ. ಅದಕ್ಕಾಗಿಯೇ ಸುನಿಲ್ ಚೆಟ್ರಿ ಅವರು ತಾವು ನಿವೃತ್ತಿ ಪಡೆದ ಒಂದು ವರ್ಷದ ನಂತರ ಮತ್ತೆ ತಂಡಕ್ಕೆ ಮರಳಿದ್ದಾರೆ. 40 ವರ್ಷದ ಚೆಟ್ರಿ ಭಾರತ ತಂಡಕ್ಕೆ ಆಡುತ್ತಿದ್ದಾರೆ. ತಮ್ಮ ನೆಚ್ಚಿನ ಆಟಗಾರ ಮರಳಿ ಬಂದರು ಎಂಬ ಸಂತೋಷವು ಅವರ ಅಭಿಮಾನಿಗಳಲ್ಲಿ ಮೂಡಿದ್ದು ಸಹಜ. ಆದರೆ, ಚೆಟ್ರಿ ಜಾಗವನ್ನು ತುಂಬಬಲ್ಲ ಯುವ ಆಟಗಾರರ ಕೊರತೆಯನ್ನೂ ಈ ಬೆಳವಣಿಗೆ ಎತ್ತಿ ತೋರಿಸಿತ್ತಲ್ಲವೇ?

ಇಷ್ಟೆಲ್ಲ ಸಾಲದೆಂಬಂತೆ, ಈಗ ‘ಇಂಡಿಯನ್ ಸೂಪರ್ ಲೀಗ್’ (ಐಎಸ್ಎಲ್) ಟೂರ್ನಿಗೂ ಗ್ರಹಣ ಹಿಡಿಯುವ ಆತಂಕ ಮೂಡಿದೆ. ‘ಐಎಸ್ಎಲ್’ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಐಎಸ್ಎಲ್ ಆಯೋಜಕರಾದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ (ಎಫ್ಎಸ್ಡಿಎಲ್) ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನಡುವಣ ಮೂಲ ಹಕ್ಕುಗಳ ಒಪ್ಪಂದ (ಎಂಆರ್ಎ) ನವೀಕರಣಕ್ಕೆ ಸಂಬಂಧಿಸಿದಂತೆ ಅನಿಶ್ಚಿತತೆ ಮನೆ ಮಾಡಿದ್ದು, ಟೂರ್ನಿಯನ್ನು ಮುಂದಕ್ಕೆ ಹಾಕಲಾಗಿದೆ. ಈಗಿನ ಒಪ್ಪಂದ ಇದೇ ಡಿಸೆಂಬರ್ 8ಕ್ಕೆ ಕೊನೆಗೊಳ್ಳಲಿದೆ. ಟೂರ್ನಿಯ ಮೊದಲ ಹಂತ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಆರಂಭವಾಗಬೇಕಿತ್ತು.

2013ರಲ್ಲಿ ಆರಂಭವಾದ ‘ಐಎಸ್ಎಲ್’ ನಿಂದಾಗಿ ದೇಶದ ಹಲವು ಯುವ ಆಟಗಾರರಿಗೆ ತಮ್ಮ ಪ್ರತಿಭೆ ತೋರಲು ವೇದಿಕೆಯೊಂದು ಲಭಿಸಿತ್ತು. ವಿದೇಶಿ ಆಟಗಾರರೂ ಇದರಲ್ಲಿ ಆಡುತ್ತಿದ್ದಾರೆ. ಸುನಿಲ್ ಚೆಟ್ರಿ, ಸಂದೇಶ್ ಜಿಂಗಾನ್, ರಾಹುಲ್ ಭೆಕೆ, ಗುರುಪ್ರೀತ್ ಸಿಂಗ್ ಸಂಧು ಸೇರಿದಂತೆ ಹಲವು ಖ್ಯಾತನಾಮರು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದರಿಂದಾಗಿ, ಭಾರತದ ಯುವ ಪ್ರತಿಭಾವಂತ ಆಟಗಾರರಿಗೆ ಉತ್ತಮ ಅನುಭವ ಲಭಿಸುತ್ತಿತ್ತು. ಬೆಂಗಳೂರು, ಕೋಲ್ಕತ್ತ, ಕೊಚ್ಚಿ, ಚೆನ್ನೈ, ಗುವಾಹಟಿ, ಮಡಗಾಂವ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಈ ಪಂದ್ಯಾವಳಿ ಜನರನ್ನು ಮೈದಾನದತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಿದೆ. ಮಾಧ್ಯಮಗಳ ಮೂಲಕ ಪ್ರಚಾರವೂ ಲಭಿಸುತ್ತಿದೆ. ಇದೆಲ್ಲದರಿಂದಾಗಿ ಆಟಗಾರರು ಮತ್ತು ಆಡಳಿತಗಳಿಗೆ ಹಣ ಹರಿದುಬರುತ್ತಿದೆ.

ದೇಶದ ಎಲ್ಲ ರಾಜ್ಯಗಳಿಗೂ ಸ್ಪರ್ಧಿಸುವ ವೇದಿಕೆಯಾಗಿದ್ದ ‘ಸಂತೋಷ್ ಟ್ರೋಫಿ’ ಟೂರ್ನಿ ಇತ್ತೀಚಿನ ವರ್ಷಗಳಲ್ಲಿ ಮಂಕಾಗಿದೆ ಎಂಬುದನ್ನು ಫೆಡರೇಷನ್ನಲ್ಲಿರುವ ಕೆಲವು ಪದಾಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ‘ಐಎಸ್ಎಲ್’ ಕೂಡ ನಿಂತು ಹೋದರೆ ದೇಶದ ಫುಟ್ಬಾಲ್ ಕ್ರೀಡೆಯು ಮತ್ತಷ್ಟು ಕುಸಿಯುವುದರಲ್ಲಿ ಸಂಶಯವೇ ಇಲ್ಲ. ಇವತ್ತಿನ ಕಾಲಘಟ್ಟದಲ್ಲಿ ಫ್ರಾಂಚೈಸಿ ಲೀಗ್ಗಳು ಯಾವುದೇ ಕ್ರೀಡೆಯ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆಯನ್ನು ನಿರ್ಲಕ್ಷಿಸುವಂತೆಯೇ ಇಲ್ಲ.

ಗೊಂದಲದ ವಾತಾವರಣದಲ್ಲಿಯೂ ಮಹಿಳಾ ತಂಡವು ಮಹತ್ವದ ಸಾಧನೆ ಮಾಡಿರುವುದರ ಹಿಂದೆ ‘ಇಂಡಿಯನ್ ವಿಮೆನ್ಸ್ ಲೀಗ್’ (ಐಡಬ್ಲ್ಯುಎಲ್) ಎಂಬ ಫ್ರಾಂಚೈಸಿ ಲೀಗ್ ಕೂಡ ಇದೆ. ಕಳೆದ ಎಂಟು ವರ್ಷಗಳಿಂದ ಈ ಟೂರ್ನಿ ನಡೆಯುತ್ತಿದೆ. ಇದರಲ್ಲಿ ಈಸ್ಟ್ ಬೆಂಗಾಲ್, ಗೋಕುಲಂ ಕೇರಳ, ಹಾಪ್ಸ್, ಕಿಕ್ಸ್ಟಾರ್ಟ್, ನೀತಾ, ಒಡಿಶಾ, ಸೇತು ಮತ್ತು ಶ್ರೀಭೂಮಿ ತಂಡಗಳು ಆಡುತ್ತವೆ. ಈ ಕ್ಲಬ್ಗಳಲ್ಲಿ ಆಡಿದ ಅನುಭವಿ ಆಟಗಾರ್ತಿಯರೇ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರೇ ಇವತ್ತು ತಂಡವನ್ನು ಎಎಫ್ಸಿ ಹಂತಕ್ಕೆ ತಲುಪಿಸಿದ್ದಾರೆ.

‘ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯೇ ಇಲ್ಲ. ಪ್ರತಿ ಹಳ್ಳಿಯಲ್ಲಿಯೂ ಫುಟ್ಬಾಲ್ ಆಡುವವರು ಸಿಗುತ್ತಾರೆ. ಅವರ ಆಸಕ್ತಿಗೆ ತಕ್ಕಂತೆ ಮೂಲ ಸೌಲಭ್ಯ ಗಳನ್ನು ಒದಗಿಸಬೇಕು. ಆಧುನಿಕ ತಂತ್ರಜ್ಞಾನ ಆಧಾರಿತ ತರಬೇತಿ ಸೌಲಭ್ಯ ಇರಬೇಕು. ಮುಖ್ಯವಾಗಿ ಪರಿಣತ ಕೋಚ್ಗಳು ಮತ್ತು ನೆರವು ಸಿಬ್ಬಂದಿಯನ್ನು ಸಿದ್ಧಗೊಳಿಸುವುದು ಮುಖ್ಯ. ಕೋಚ್ಗಳ ತರಬೇತಿಗಾಗಿಯೇ ವಿಶೇಷ ಕಾರ್ಯಕ್ರಮಗಳು ಬೇಕು. ತಾಂತ್ರಿಕ ಕೌಶಲಗಳನ್ನು ಕಲಿಸುವವರೇ ಇಲ್ಲದಿದ್ದರೆ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ವಿನಿಯೋಗಿಸುವ ದಾರಿ ತಿಳಿಯುವುದು ಕಷ್ಟ’ ಎಂದು ಕ್ರಿಸ್ಪಿನ್ ಚೆಟ್ರಿ ಪ್ರತಿಪಾದಿಸುತ್ತಾರೆ.

ಭಾರತದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಅಪಾರವಾಗಿ ಪ್ರೀತಿಸುವ ಊರುಗಳಲ್ಲಿ ಬೆಂಗಳೂರು ಕೂಡ ಒಂದು. ಅಂತರರಾಷ್ಟ್ರೀಯ ಆಟಗಾರರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಬೆಂಗಳೂರಿಗಿದೆ. ಸುನಿಲ್ ಚೆಟ್ರಿ ಅವರಂತಹ ತಾರೆಯೂ ಇಲ್ಲಿಯೇ ನೆಲೆಸಿ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಇವತ್ತಿಗೂ ಇಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣದ ಬೇಡಿಕೆ ಈಡೇರಿಲ್ಲ. 2017–18ರ ಸಂದರ್ಭದಲ್ಲಿ 17 ವರ್ಷದೊಳಗಿನವರ ಫಿಫಾ ಪುರುಷರ ವಿಶ್ವಕಪ್ ಪಂದ್ಯಗಳ ಆಯೋಜನೆಯ ಅವಕಾಶ ಬೆಂಗಳೂರಿಗೆ ಸಿಕ್ಕಿತ್ತು. ಕ್ರೀಡಾಂಗಣ ಸಜ್ಜಾಗಿರದ ಕಾರಣಕ್ಕೆ ಪಂದ್ಯಗಳನ್ನು ಸ್ಥಳಾಂತರಿಸಲಾಗಿತ್ತು. ಆ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಸಂಜೀವ್ ಸ್ಟಾಲಿನ್ ಮತ್ತು ಹೆನ್ರಿ ಅಂಥೋನಿ ಅವರ ಆಟವನ್ನು ಕಣ್ತುಂಬಿಕೊಳ್ಳುವ ಅವಕಾಶವೂ ಸ್ಥಳೀಯ ಅಭಿಮಾನಿಗಳಿಗೆ ಇಲ್ಲವಾಗಿತ್ತು. ಈಗಲೂ ‘ಐಎಸ್ಎಲ್’ ಪಂದ್ಯಗಳನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ಮೂಲಸೌಲಭ್ಯ, ಪ್ರತಿಭಾ ಶೋಧ ಮತ್ತು ಸ್ಥಳೀಯ ಆಟಗಾರರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ಮೇಲುಗೈ ಸಾಧಿಸದಿದ್ದರೆ ಆಟ ಬೆಳೆಯುವುದು ಹೇಗೆ?

ಅಂದಹಾಗೆ, ಬೆಂಗಳೂರಿನ ಪ್ರಕಾಶ್ ಪಡುಕೋಣೆ– ರಾಹುಲ್ ದ್ರಾವಿಡ್ ಅಕಾಡೆಮಿಯಲ್ಲಿ ನಡೆದಿದ್ದ ಶಿಬಿರದಲ್ಲಿ ತರಬೇತಿ ಪಡೆದ ಮಹಿಳೆಯರು ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಅವರು ಮೂಡಿಸಿರುವ ಆಶಾಕಿರಣವು ಭಾರತದ ಫುಟ್ಬಾಲ್ ಕ್ಷೇತ್ರವನ್ನು ಬೆಳಗುವುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.