ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ತನಿಖಾ ಸಂಸ್ಥೆ: ಆಳುವವರ ಅಸ್ತ್ರವೇ?

ಸರ್ವಾಧಿಕಾರ ತನ್ನ ಮರಿಗಳನ್ನು ಒಂದೊಂದಾಗಿ ಹೊರಬಿಡುತ್ತಿರುವ ಸಂದರ್ಭವಿದು!
Last Updated 17 ಫೆಬ್ರುವರಿ 2023, 19:15 IST
ಅಕ್ಷರ ಗಾತ್ರ

ಆದಾಯ ತೆರಿಗೆ ಇಲಾಖೆಯು ಬಿಬಿಸಿ- ಇಂಡಿಯಾ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಸಂಸ್ಥೆಯ ದೆಹಲಿ ಮತ್ತು ಮುಂಬೈ ಕಚೇರಿಗಳನ್ನು ಪರಿಶೀಲನೆಗೆ ಒಳ ಪಡಿಸಿದ್ದು ಸಾಮಾನ್ಯ ಸಂದರ್ಭದಲ್ಲಾದರೆ ಇಷ್ಟೊಂದು ಕಾವು ಪಡೆಯುವ ಅಗತ್ಯವಿರಲಿಲ್ಲ. ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳಿಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ದೂರು, ಅನುಮಾನ ಬಂದರೆ ಸೂಕ್ತ ತನಿಖೆ ನಡೆಸುವ ಕಾನೂನಾತ್ಮಕ ಅಧಿಕಾರವಿದ್ದೇ ಇರುತ್ತದೆ. ಆದಾಯ ತೆರಿಗೆ ಕಾಯ್ದೆಯ ನಿಯಮಗಳ ಅಡಿ ದಾಳಿ, ಪರಿಶೀಲನೆ, ಶೋಧನೆಗಳಿಂದ ಮಾಧ್ಯಮ ಸಂಸ್ಥೆಗಳೂ ಹೊರತಾಗಬೇಕಿಲ್ಲ. ಇಂತಹ ಕ್ರಮವನ್ನು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಸಾರಾಸಗಟಾಗಿ ಖಂಡಿಸುವ ಅಗತ್ಯವೂ ಇರಲಿಲ್ಲ. ಅದು ಒಂದು ಸಾಮಾನ್ಯ ಸುದ್ದಿಯಾಗಿ ಪ್ರಸಾರವಾಗಬಹುದಾದ ಸಹಜ ಪ್ರಕ್ರಿಯೆ.

ಆದರೆ ಆದಾಯ ತೆರಿಗೆ ಇಲಾಖೆಯ ಇಂತಹ ಸಾಮಾನ್ಯ ‘ಪರಿಶೀಲನೆ’ ಅಂತರರಾಷ್ಟ್ರೀಯ ಮಹತ್ವ ಪಡೆಯುವಂತಾಗಲು, ಹಲವು ಪ್ರಶ್ನೆಗಳ ಹುಟ್ಟಿಗೆ, ಆರೋಪಗಳ ಪಟ್ಟಿಗೆ, ಸಮರ್ಥನೆಯ ನೇಯ್ಗೆಗೆ ಕಾರಣವಾಗಲು ಬಲವಾದ ಹಿನ್ನೆಲೆ ಇದೆ. ಒಕ್ಕೂಟ ಸರ್ಕಾರಕ್ಕೆ ಬಹಳಷ್ಟು ಮುಜುಗರ ತರಿಸಿದ ‘ಇಂಡಿಯಾ: ದ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರ ನಿರ್ಮಿಸಿದ್ದು ಇದೇ ಬಿಬಿಸಿ. 2002ರಲ್ಲಿ ಗುಜರಾತಿನಲ್ಲಿ ಸಾವಿರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಕೋಮುಗಲಭೆ ಹಾಗೂ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರು ಅದನ್ನು ನಿಭಾಯಿಸಿದ ಬಗೆಯನ್ನು ಎರಡು ಭಾಗಗಳಲ್ಲಿ ನಿರೂಪಿಸುವ ಈ ಚಿತ್ರ ಸಹಜವಾಗಿಯೇ ಅಧಿಕಾರಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು.

ಇಂಗ್ಲೆಂಡಿನಲ್ಲಿ ಬಿಡುಗಡೆಯಾಗಿದ್ದ ಸಾಕ್ಷ್ಯಚಿತ್ರದ ಮೊದಲ ಭಾಗ ಭಾರತದಲ್ಲಿ ಅನಧಿಕೃತವಾಗಿ ಹರಿದಾಡಿ ಪರ– ವಿರೋಧದ ಸಂಘರ್ಷ ನಡೆಯುತ್ತಿರುವಾಗಲೇ ಒಕ್ಕೂಟ ಸರ್ಕಾರವು ಅದನ್ನು ‘ದುರುದ್ದೇಶದ ವಸಾಹತುಶಾಹಿ ಮನಃಸ್ಥಿತಿ’ ಎಂದು ಜರಿದು ನಿರ್ಬಂಧ ವಿಧಿಸಿತು.

ಈ ಬೆಳವಣಿಗೆಗಳು ಜನರ ಮನದೊಳಗೆ ಪೂರ್ತಿಯಾಗಿ ಇಳಿಯುವ ಮೊದಲೇ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಪರಿಶೀಲನೆಯ ಕ್ರಮ ಜರುಗಿಸಲಾಗಿದೆ. ಹಾಗಾಗಿ ಇಲ್ಲಿ ಕಾನೂನು ಕ್ರಮಕ್ಕಿಂತ ಅದನ್ನು ಜಾರಿಗೊಳಿಸಿದ ಸಂದರ್ಭ ಹೆಚ್ಚಿನ ಮಹತ್ವ ಪಡೆಯುತ್ತದೆ.

ವಾಸ್ತವದಲ್ಲಿ ಒಕ್ಕೂಟ ಸರ್ಕಾರದ ಮರ್ಜಿಯಲ್ಲೇ ಕಾರ್ಯನಿರ್ವಹಿಸುವ ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ), ರಾಷ್ಟ್ರೀಯ ತನಿಖಾ ದಳದಂತಹ (ಎನ್ಐಎ) ‘ಸ್ವತಂತ್ರ’ ತನಿಖಾ ಸಂಸ್ಥೆಗಳು ರಾಜಕೀಯ ಹಿತಾಸಕ್ತಿಯ ಅಸ್ತ್ರಗಳಾಗಿ ಬಳಕೆಯಾಗುವುದರಲ್ಲಿ ಯಾವುದೇ ಮುಚ್ಚುಮರೆ ಉಳಿದಿಲ್ಲ. ಇದು, ಅಧಿಕಾರ ದುರ್ಬಳಕೆಯೇ ಸಹಜ ನಡೆ ಎಂಬಷ್ಟು ರಾಜಾರೋಷವಾಗಿ ನಡೆಯುತ್ತಿದೆ. ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ಎರಡು ಬಗೆಗಳಲ್ಲಿ ಗುರುತಿಸಬಹುದು. ಮೊದಲನೆಯದು ಅಸ್ತ್ರ. ಅಧಿಕಾರಸ್ಥರಿಗೆ ಆಗದವರ ವಿರುದ್ಧ ವ್ಯವಸ್ಥಿತವಾಗಿ ಬಳಸಲಾಗುತ್ತದೆ. ಎರಡನೆಯದು ಗುರಾಣಿ. ತಮಗೆ ಬೇಕಾದವರನ್ನು ರಕ್ಷಿಸಲು ಬಳಕೆಯಾಗುವಂತಹದು. ಸ್ವಪಕ್ಷೀಯರನ್ನು ಹದ್ದುಬಸ್ತಿನಲ್ಲಿ ಇಡಲು ಕೂಡ ತನಿಖಾಸ್ತ್ರ ಬಳಕೆಯಾಗುವುದುಂಟು.

ನೆಲದ ಕಾನೂನಿಗೆ ಯಾರೂ ಅತೀತರಾಗಬೇಕಿಲ್ಲ. ಹಾಗೆಯೇ ಯಾವುದೇ ತನಿಖೆ ನ್ಯಾಯೋಚಿತ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಆಗಿರಬೇಕು ಎಂಬುದೂ ಪ್ರಾಥಮಿಕ ನಿರೀಕ್ಷೆ. ತನಿಖಾ ಏಜೆನ್ಸಿಗಳನ್ನು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡರೆ ಅಥವಾ ಸಂಬಂಧವಿಲ್ಲದ ಕಾರಣಗಳಿಗಾಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಗುರಿಯಾಗಿಸಿದರೆ ಅದು ಕಾನೂನಿನ ಆಶಯವನ್ನು ದುರ್ಬಲಗೊಳಿಸುತ್ತದೆ ಮತ್ತು ಸರ್ಕಾರದ ಮೇಲಿನ ಸಾರ್ವಜನಿಕ ನಂಬಿಕೆಯನ್ನೂ ಕುಗ್ಗಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ತನಿಖಾಸ್ತ್ರವನ್ನು ವಿರೋಧಿ ರಾಜಕಾರಣಿಗಳು, ಮಾನವಹಕ್ಕುಗಳ ಹೋರಾಟಗಾರರು ಮತ್ತು ಪತ್ರಕರ್ತರ ಮೇಲೆ ಪ್ರಯೋಗಿಸಿ ಕಿರುಕುಳ ನೀಡಲಾಗುತ್ತಿದೆ. ಭಿನ್ನಾಭಿಪ್ರಾಯ ಮತ್ತು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಇಂತಹ ಕ್ರಮಗಳ ಗುರಿ.

ಇದಕ್ಕೆ ಬಹಳಷ್ಟು ಉದಾಹರಣೆಗಳು ಕಣ್ಣೆದುರಿಗಿವೆ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧದ ಮೊಕದ್ದಮೆ, ಭ್ರಷ್ಟಾಚಾರ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಬಂಧನ,
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಪ್ರಕರಣಗಳು, ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದ ಸತ್ಯೇಂದರ್ ಜೈನ್ ಬಂಧನ, ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರ ಮನೆಯ ಮೇಲಿನ ಸಿಬಿಐ ದಾಳಿ, ಮಾಧ್ಯಮ ಸಂಸ್ಥೆಗಳಾದ ನ್ಯೂಸ್ ಕ್ಲಿಕ್, ನ್ಯೂಸ್ ಲಾಂಡ್ರಿ, ದೈನಿಕ್ ಭಾಸ್ಕರ್, ಭಾರತ್ ಸಮಾಚಾರ್ ಮೇಲಿನ ಶೋಧನಾ ಕಾರ್ಯ, ಕಬೀರ್ ಕಲಾಮಂಚ್ ಕಾರ್ಯಕರ್ತರ ಬಂಧನ, ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಪ್ರಕರಣ...

ಈ ವಿಷಯದಲ್ಲಿ ರಾಜ್ಯ ಸರ್ಕಾರವೇನೂ ಹಿಂದೆ ಉಳಿದಿಲ್ಲ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಮಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಅಪ್ರಸ್ತುತಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹೆಸರಿನ ಕೈಗೊಂಬೆ ತನಿಖಾ ಸಂಸ್ಥೆ ಸ್ಥಾಪಿಸಿದ್ದನ್ನು, ಅದನ್ನು ಇತ್ತೀಚೆಗೆ ಹೈಕೋರ್ಟ್‌ ರದ್ದುಗೊಳಿಸಿದ್ದನ್ನು ನಾಡು ನೋಡಿದೆ. ಇದೀಗ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್‌ ಆರೋಪ ಬಲಗೊಂಡಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದಿನ ಸರ್ಕಾರದ 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವಹಿಸಲು ಮುಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ನೇತೃತ್ವದ ಸರ್ಕಾರ ಬಂದಮೇಲೆ ಈಗಿನ ಸರ್ಕಾರದ ಎಲ್ಲಾ ಅಕ್ರಮಗಳನ್ನು ತನಿಖೆಗೆ ಒಳಪಡಿಸುವುದಾಗಿ ಗುಡುಗಿದ್ದಾರೆ. ಕೆ.ಎಸ್.ಈಶ್ವರಪ್ಪ ಸಾಚಾಚೀಟಿ ಪಡೆದಿದ್ದಾರೆ. ಡಿಕೆಶಿ ವಿರುದ್ಧ ಸಿಬಿಐ ತನಿಖೆ ಆಗಲಿ ಎಂದು ರಮೇಶ್ ಜಾರಕಿಹೊಳಿ ಬಯಸುತ್ತಿದ್ದಾರೆ ಮತ್ತು ಅದಕ್ಕಾಗಿ ದೆಹಲಿಗೆ ಎಡತಾಕುತ್ತಿದ್ದಾರೆ. ಹೀಗೆ ಎಲ್ಲರ ಬತ್ತಳಿಕೆಯಲ್ಲಿಯೂ ತನಿಖಾಸ್ತ್ರಗಳೇ!

ಒಟ್ಟಾರೆಯಾಗಿ, ಈ ನಿದರ್ಶನಗಳು ಬೇಡದವರಿಗೆ ಕಿರುಕುಳ, ಬೇಕಾದವರಿಗೆ ರಕ್ಷಣೆ ನೀಡಲು ತನಿಖಾ ಸಂಸ್ಥೆ
ಗಳನ್ನು ಬಳಸಿಕೊಳ್ಳುವ ನಮೂನೆಗಳನ್ನು ಸೂಚಿಸುತ್ತವೆ. ಹಾಗೆಂದು ತನಿಖಾ ಸಂಸ್ಥೆಗಳ ಕ್ರಮಕ್ಕೆ ಗುರಿಯಾದ ಎಲ್ಲ ಆರೋಪಿಗಳು, ಮಾಧ್ಯಮ ಸಂಸ್ಥೆಗಳು ಸಾಚಾ ಎಂಬ ನಿರ್ಣಯಕ್ಕೆ ಬರಬೇಕಿಲ್ಲ. ಅವರಲ್ಲಿ ಅನೇಕರು ಶಿಕ್ಷಾರ್ಹ ಅಪರಾಧಿಗಳೇ ಆಗಿರಬಹುದು. ಆದರೆ ಮೇಲ್ನೋಟಕ್ಕೆ ಕಾಣುವಂತೆ ತನಿಖಾ ಸಂಸ್ಥೆಗಳ ಕ್ರಮ ದುರುದ್ದೇಶದಿಂದ ಕೂಡಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವ, ವಿಶ್ವಾಸ ಮೂಡಿಸುವ ಹೊಣೆ ಮತ್ತು ವರ್ತನೆಯನ್ನು ಅಧಿಕಾರಸ್ಥರೇ ಪ್ರಕಟಿಸಬೇಕಾಗುತ್ತದೆ.

‘ಬಿಬಿಸಿ ‘ಪ್ರಶ್ನೆ’ಯನ್ನು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ‘ದಾಳಿ’ ಎಂದು ಸಮೀಕರಿಸುವುದು ಸರಿಯಲ್ಲ’ ಎಂಬ ಮೇಲ್ಪದರದ ವಾದ ಮಂಡಿಸುವ ‘ದೀಡ್’ ಪಂಡಿತರಿಗೇನೂ ಕೊರತೆ ಇಲ್ಲ. ಅಂತಹವರು ವ್ಯವಸ್ಥೆಯ ಸಮರ್ಥನೆಯ ಭರದಲ್ಲಿ ತೀರಾ ಹತ್ತಿರ ಸುಳಿಯುತ್ತಿರುವ ಅಪಾಯವನ್ನು ಮರೆಯುತ್ತಾರೆ.

ತನಿಖಾ ಸಂಸ್ಥೆಗಳ ದುರುಪಯೋಗಕ್ಕೆ ಸುದೀರ್ಘ ಇತಿಹಾಸವೇ ಇದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಹುಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಕಾಲಕಾಲಕ್ಕೆ ಸರ್ವಾಧಿಕಾರದ ಎಲ್ಲ ಬಗೆಯ ಸೌಮ್ಯ ಮುಖಗಳನ್ನೂ ದಾಖಲಿಸಿದೆ. ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಎಂದು ಕರೆಯುವಷ್ಟರ ಮಟ್ಟಿಗೆ ಅದು ಆ ದಿನಗಳಲ್ಲಿ ಅಗ್ಗಳಿಕೆಗೆ ಪಾತ್ರವಾಗಿತ್ತು! ಅಪರೂಪದ ಸಂದರ್ಭದಲ್ಲಿ ಚುನಾಯಿತ ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಅಧಿಕಾರ ನೀಡುವ ಸಂವಿಧಾನದ 356ನೇ ವಿಧಿಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರವು ಶಕ್ತ್ಯಾನುಸಾರ ಶೋಷಿಸಿದೆ. ಆದರೆ ಭ್ರಷ್ಟಾಚಾರ, ರಾಜಕೀಯ ಅನೈತಿಕತೆ, ಕೋಮುವಾದ, ಅಧಿಕಾರ ದಾಹ, ಚುನಾವಣಾ ಅಕ್ರಮಗಳಂತೆ ಅಧಿಕಾರಸ್ಥರ ಸರ್ವಾಧಿಕಾರಿ ವರ್ತನೆಯ ಗ್ರಾಫ್ ಕೂಡ ಕಾಲಾನುಕ್ರಮೇಣ ಊರ್ಧ್ವಮುಖಿಯಾಗಿ ಸಾಗಿರುವುದನ್ನು ಕಾಣಬಹುದು. ಅದೇನಿದ್ದರೂ ಐತಿಹಾಸಿಕ ಪ್ರಮಾದಗಳು ವರ್ತಮಾನದ ದುಷ್ಟತನದ ಸಮರ್ಥನೆಗೆ, ಸಬೂಬಿಗೆ ಸಾಮಗ್ರಿಯಾಗಬೇಕಿಲ್ಲ.

ಅಧಿಕಾರದ ಕೋಣೆಯಲ್ಲಿ ಕತ್ತಲು ಹೊತ್ತಿಸಿದ ಸರ್ವಾಧಿಕಾರ ತನ್ನ ಮರಿಗಳನ್ನು ಒಂದೊಂದಾಗಿ ಹೊರಬಿಡುತ್ತಿರುವ ಸಂದರ್ಭಕ್ಕೆ ನಾಡು ಸಾಕ್ಷಿಯಾಗಿದೆ. ಪ್ರಜಾಸತ್ತೆಯ ಬೆಳಕಿಗಾಗಿ ಸಕಲ ದಿಕ್ಕುಗಳನ್ನು ದಿಟ್ಟಿಸಬೇಕಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT