ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ‘ನೀಟ್’ ಎಂಬ ಕನಸಿನ ಹಿಂದೆ...

ಸಮಾಜ ಆಯ್ದುಕೊಳ್ಳುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಬರೀ ‘ಬೌದ್ಧಿಕ ವೈದ್ಯ’ರಾದರೆ ಸಾಕೆ?
Published 7 ಜೂನ್ 2024, 23:42 IST
Last Updated 7 ಜೂನ್ 2024, 23:42 IST
ಅಕ್ಷರ ಗಾತ್ರ

‘ನೀಟ್’ ಫಲಿತಾಂಶ ಹೊರಬಿದ್ದಿದೆ. 17– 18ರ ಹರೆಯದ ವಿದ್ಯಾರ್ಥಿಗಳ ಕನಸುಗಳು ವಿವಿಧ ರೂಪ ತಾಳಿವೆ. ಚಿತ್ತಚಂಚಲಕ್ಕೆ ಕಾರಣವಾಗಬಹುದಾದ ಅನ್ಯ ವಿಷಯಗಳತ್ತ ಹೆಚ್ಚು ಗಮನಹರಿಸದೆ, ವರ್ಷಗಟ್ಟಲೆ ಬರೀ ಪುಸ್ತಕದ ಸಾಂಗತ್ಯದಲ್ಲೇ ಕಳೆದವರು ಈ ಮಕ್ಕಳು!

ಅಪ್ಪ– ಅಮ್ಮಂದಿರಿಗೆ ಅವರವರ ಮಕ್ಕಳ ಚಿಂತೆಯಾದರೆ, ಮನೋವೈದ್ಯೆಯಾದ ನನಗೆ, ಈ ಸಮಯದಲ್ಲಿ ‘ನೀಟ್’ ಸೃಷ್ಟಿಸುವ ಅತಿಯಾದ ಒತ್ತಡದ ಕಾರಣದಿಂದಲೇ ನನ್ನ ಬಳಿ ಚಿಕಿತ್ಸೆಗಾಗಿ ಬರುತ್ತಿರುವ ಯುವಕ- ಯುವತಿಯರೆಲ್ಲರ ಬಗ್ಗೆ ಚಿಂತೆ. ಅವರ ಫಲಿತಾಂಶ ಏನಾಗಿರಬಹುದು, ನೀಟ್ ಬಗ್ಗೆ ಅಪಾರವಾದ ನಿರೀಕ್ಷೆ ಹೊಂದಿದ್ದ ಅವರಿಗೆ ಅಕಸ್ಮಾತ್‌ ಕಡಿಮೆ ರ್‍ಯಾಂಕ್ ಬಂದುಬಿಟ್ಟಿದ್ದರೆ ಅದನ್ನು ಅವರು ಹೇಗೆ ಸ್ವೀಕರಿಸಬಹುದು, ವೈದ್ಯಕೀಯ ಸೀಟು ಸಿಗದೇಹೋದರೆ ಅವರ ಮನಃಸ್ಥಿತಿ ಹೇಗಿರಬಹುದು, ಅವರು ಮತ್ತು ಅವರ ಪೋಷಕರು ಆ ಹತಾಶೆಯನ್ನು ಎದುರಿಸಲಾರದೆ, ಕ್ಷಣಿಕ ಆವೇಶಕ್ಕೆ ಒಳಗಾಗಿ ಏನಾದರೂ ಮಾಡಿಕೊಂಡುಬಿಟ್ಟರೆ ಎಂಬೆಲ್ಲ ಚಿಂತೆ.

ಮನೋವೈದ್ಯರ ಈ ಚಿಂತೆ ಸಾಧುವಾದದ್ದೇ ಎಂಬುದನ್ನು ಯುವಕ–ಯುವತಿಯರ ಹೇಳಿಕೆಗಳು, ಅವರ ಕುರಿತು ಇತ್ತೀಚೆಗೆ ಬರುತ್ತಿರುವ ವರದಿಗಳು ಸ್ಪಷ್ಟಪಡಿಸುತ್ತವೆ. ನೀಟ್ ಫಲಿತಾಂಶದ ನಂತರ ಮಕ್ಕಳು ಇನ್‌ಸ್ಟಾಗ್ರಾಂ, ಎಕ್ಸ್‌ ವೇದಿಕೆಯ ಮೂಲಕ ಹೇಳಿಕೊಳ್ಳುವ ‘ಐ ಫೀಲ್‌ ಲೈಕ್‌ ಟೇಕಿಂಗ್‌ ಎ ‘ಡ್ರಾಪ್‌’; ಫ್ರಂ ದಿ ಟೆರೇಸ್‌’... ಎಂಬ ವಾಕ್ಯ ನೆನಪಾಗುತ್ತದೆ. ಇಲ್ಲಿ ‘ಡ್ರಾಪ್‌’ ಎಂಬ ಪದಕ್ಕೆ ಎರಡು ಅರ್ಥಗಳು! ಸಾಮಾನ್ಯವಾಗಿ ‘ನೀಟ್’ನಲ್ಲಿ ಚೆನ್ನಾಗಿ ಮಾಡದಿದ್ದವರು ಮತ್ತೊಂದು ವರ್ಷ ಕುಳಿತು ಓದುವುದನ್ನು ‘ಯುವ ಭಾಷೆ’ಯಲ್ಲಿ ‘ಡ್ರಾಪ್’ ಎನ್ನಲಾಗುತ್ತದೆ. ಆದರೆ ಯುವಕನೊಬ್ಬ ‘ಡ್ರಾಪ್’ ಎಂದು ಹೇಳಿದ್ದರ ಅರ್ಥ ಬೇರೆಯದೇ ಇತ್ತು. ಅಂದರೆ ತಾನು ‘ಡ್ರಾಪ್‌’ ಆಗಲು ಹೊರಟಿರುವುದು ಮೇಲ್ಮಹಡಿಯಿಂದ ಅರ್ಥಾತ್ ಪ್ರಾಣ ಕಳೆದುಕೊಳ್ಳಲು ಎಂಬರ್ಥದಲ್ಲಿ!

ನೀಟ್ ಫಲಿತಾಂಶದ ರ್‍ಯಾಂಕ್‌ ಪಟ್ಟಿ ಹೊರಬಿದ್ದ ನಂತರ, ರಾಜಸ್ಥಾನದ ಕೋಟಾದಲ್ಲಿನ ಯುವತಿಯೊಬ್ಬಳು ಆ ಕುರಿತ ತನ್ನ ಅಸಮಾಧಾನ, ಅನಿಸಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುವ ಗೋಜಿಗೇ ಹೋಗಲಿಲ್ಲ. ಬದಲಾಗಿ, ಸದ್ದಿಲ್ಲದೇ ಬಹುಮಹಡಿ ಕಟ್ಟಡವೊಂದರಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು. ಒಂದು ವರ್ಷದಿಂದ ಈಚೆಗೆ ನೀಟ್‌ಗೆ ಸಂಬಂಧಿಸಿದಂತೆ ಇದು ಹತ್ತನೇ ಆತ್ಮಹತ್ಯೆ ಎನ್ನುವುದು ಉಲ್ಲೇಖಾರ್ಹ.

ಈ ಬಾರಿ ನೀಟ್ ಪರೀಕ್ಷೆಯನ್ನು ಸುಮಾರು 24 ಲಕ್ಷ ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು ಎನ್ನುವುದೇ ಒಂದು ವಿಸ್ಮಯಕಾರಿ ಸಂಗತಿ. ಅವರಲ್ಲಿ ಬಹುಶಃ ಹೆಚ್ಚಿನವರು ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸುವ ಹಂಬಲದಿಂದಲೇ ಪರೀಕ್ಷೆ ಬರೆದವರು. ಯಾವುದೇ ಪರೀಕ್ಷೆಯ ಫಲಿತಾಂಶ ಹೊರಬಿದ್ದಾಗ ನಡೆಯುವ ದೋಷಾರೋಪ, ಹಲವು ರೀತಿಯ ಗೊಂದಲಗಳು ಈ ಬಾರಿಯೂ ಸಹಜವಾಗಿ ನಡೆದಿವೆ. ಪ್ರಶ್ನೆಪತ್ರಿಕೆ ಬಯಲಾಗಿರಬಹುದು ಎಂಬ ಎಂದಿನ ಅನುಮಾನ, ಹಲವು ಬಾರಿ ಪ್ರಯತ್ನಿಸಿದವರಿಗೆ ಉತ್ತಮವಾದ ರ್‍ಯಾಂಕ್‌ ಬರುವುದು, ನೀಟ್ ನಡೆಸುವ ಎನ್‌ಟಿಎ ಹೆಸರನ್ನು ‘ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ’ ಎಂಬುದಕ್ಕೆ ಬದಲಾಗಿ ‘ನ್ಯಾಷನಲ್‌ ಟ್ರೌಮಾ ಏಜೆನ್ಸಿ’ ಎಂದು ವಿದ್ಯಾರ್ಥಿಗಳು ಅಣಕವಾಡುವುದು, ಮತ್ತೊಂದು ವರ್ಷ ಬರೆದೇಬಿಡೋಣ ಎಂದು ಹಲವರು ಮತ್ತೆ ಓದಲು ಆರಂಭಿಸುವಂತಹ ವಿದ್ಯಮಾನಗಳೆಲ್ಲವೂ ಹಿಂದಿನ ವರ್ಷಗಳಂತೆಯೇ ಈಗಲೂ ಕಂಡುಬಂದಿವೆ.

ಇವುಗಳೊಂದಿಗೆ ‘ನೀಟ್ ಒತ್ತಡ’ ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ನೀಟ್ ಬರೆಯುವ ಸಲುವಾಗಿ ಸುಮಾರು ಎರಡು ವರ್ಷಗಳ ಕಾಲ ಅವಿರತವಾಗಿ ಶ್ರಮಿಸುವ ಹದಿಹರೆಯದ ಮಕ್ಕಳಲ್ಲಿ ಒತ್ತಡ ಎಂದು ಹೊರನೋಟಕ್ಕೆ ಗೊತ್ತಾಗದ, ಆದರೆ ಒತ್ತಡವೇ ಮೂಲವಾದ ಹಲವು ಕಾಯಿಲೆಗಳು ಕಂಡುಬರುತ್ತಿವೆ. ದೈಹಿಕ ವ್ಯಾಯಾಮವಿರದೆ ಬೊಜ್ಜು, ದೇಹಕ್ಕೆ ಸೂರ್ಯನ ಬೆಳಕು ಬೀಳದೆ ವಿಟಮಿನ್ ‘ಡಿ’ ಕೊರತೆ, ನಿದ್ರಾಹೀನತೆಯಿಂದ ತಲೆನೋವು, ಆತಂಕ, ಅಪೌಷ್ಟಿಕತೆ, ಚರ್ಮದ ತೊಂದರೆಯಂತಹ ಸಮಸ್ಯೆಗಳು ಅವರನ್ನು ಕಾಡುತ್ತವೆ. ಇವೆಲ್ಲದರ ಮೂಲವೇ ಒತ್ತಡ ಎಂಬುದನ್ನು ಸ್ವತಃ ವಿದ್ಯಾರ್ಥಿಗಳಾಗಲಿ,
ಅವರ ತಂದೆ-ತಾಯಿಯಾಗಲಿ ಅರ್ಥ ಮಾಡಿಕೊಳ್ಳದೆ, ಜೀವನಶೈಲಿಯ ಬಗೆಗೆ ತಲೆಕೆಡಿಸಿಕೊಳ್ಳದೆ, ವಿವಿಧ ಆಸ್ಪತ್ರೆಗಳಿಗೆ ಸುತ್ತಾಡಿ ಈ ಸಮಸ್ಯೆಗಳಿಗೆ ಆ ಕ್ಷಣದ ಚಿಕಿತ್ಸೆ ಪಡೆದು, ಓದುವ ಸಲುವಾಗಿ ಮತ್ತೆ ಓಡಲು ಮುಂದಾಗುತ್ತಾರೆ.

ನೀಟ್‌ಗಾಗಿ ನಡೆಸುವ ಸಿದ್ಧತೆಯು ತಂದೊಡ್ಡುವ ಒತ್ತಡವನ್ನು ಹೊರಹಾಕಲಾಗದ, ನೀಟ್‌ನಲ್ಲಿ ರ್‍ಯಾಂಕ್ ಗಳಿಕೆಗೆ ಸಂಬಂಧಿಸಿದಂತೆ ತಮಗಾಗುವ ನಿರಾಶೆ, ಓದಲಾಗದ ತಮ್ಮ ಅಸಾಮರ್ಥ್ಯವನ್ನು ಒಪ್ಪಿಕೊಳ್ಳಲಾಗದ ಕೆಲವು ವಿದ್ಯಾರ್ಥಿಗಳು ಮೈ ಮೇಲೆ ದೇವರು, ದೆವ್ವ, ಆತ್ಮಗಳನ್ನು ಆವಾಹಿಸಿ
ಕೊಳ್ಳುವುದೂ ಉಂಟು! ‘ದೇವರು, ದೆವ್ವ, ಆತ್ಮಗಳೆಲ್ಲವೂ ನಮ್ಮ ಮೆದುಳು–ಮನಸ್ಸುಗಳ ಒಳಗಿವೆ. ದೇವರಿಗೆ ಕೈಮುಗಿದರೆ ಸಾಕು. ನಿಮಗೆ ಆದಷ್ಟು ಓದಿ. ಇತರ ವೃತ್ತಿಗಳು ಬೇಕಾದಷ್ಟಿವೆ. ಅವುಗಳಲ್ಲಿ ಒಂದನ್ನು ನೀವು ಆಯ್ದುಕೊಳ್ಳಬಹುದು’ ಎಂಬ ಸಲಹೆಯನ್ನು ವಿದ್ಯಾರ್ಥಿಗಳಷ್ಟೇ ಅಲ್ಲ, ಅವರ ಪೋಷಕರೂ ಬಡಪೆಟ್ಟಿಗೆ ಒಪ್ಪಲಾರರು!

ವೈದ್ಯಕೀಯ ವೃತ್ತಿ ಇಂದು ‘ಸುಲಭ’ ಎನ್ನುವಂತೇನೂ ಉಳಿದಿಲ್ಲ. ವೈದ್ಯ ವೃತ್ತಿಯ ಬಗ್ಗೆ ಸಮಾಜದಲ್ಲಿ ನಕಾರಾತ್ಮಕ ಧೋರಣೆ ಧಾರಾಳವಾಗಿದೆ. ಹಾಗೆಯೇ ವೈದ್ಯ ವೃತ್ತಿಯಲ್ಲಿ ಹೆಚ್ಚಿನ ಗಳಿಕೆಯೂ ಇಂದು ಸುಲಭಸಾಧ್ಯ ಎನ್ನುವಂತಿಲ್ಲ. ಇತರ ವೃತ್ತಿಗಳಿಗೆ ಹೋಲಿಸಿದರೆ ಈ ವೃತ್ತಿಯಲ್ಲಿ ‘ಪರಿಶ್ರಮ ಹೆಚ್ಚು, ಪರಿಶ್ರಮಕ್ಕೆ ತಕ್ಕಂತೆ ಬರುವ ಆದಾಯ ಕಡಿಮೆ’ ಎನ್ನುವುದನ್ನು ಹೆಚ್ಚಿನ ವೈದ್ಯರು ಒಪ್ಪುತ್ತಾರೆ. ಸೇವಾ ಮನೋಭಾವವಂತೂ ಇಡೀ ಸಮಾಜದಲ್ಲಿಯೇ ವಿರಳವಾಗಿ ನೋಡುವಂಥ ಮೌಲ್ಯವಾಗುತ್ತಿದೆ. ಹೀಗಿರುವಾಗ, ವೈದ್ಯ ವೃತ್ತಿಯ ಬಗೆಗಿನ ‘ಹಂಬಲ’, ‘ಆಕರ್ಷಣೆ’ ಎಂಬುದು ಯಾವ ಅಂಶಗಳನ್ನು ಈ ಯುವಜನರಿಗೆ ಸೂಚಿಸುತ್ತಿರಬಹುದು?!

ನೀಟ್ ಮೂಲಕ ವೈದ್ಯಕೀಯ ವೃತ್ತಿಗಾಗಿ ಸಮಾಜ ಆಯ್ದುಕೊಳ್ಳುತ್ತಿರುವ ವಿದ್ಯಾರ್ಥಿಗಳು ನಾಳೆ ಬರೀ ‘ಬೌದ್ಧಿಕ ವೈದ್ಯ’ರಾದರೆ? ಹತಾಶೆ, ನಿರಾಸೆಯನ್ನು ಎದುರಿಸುವ ಜೀವನಕೌಶಲವನ್ನೇ ಕಲಿಯದ ಮಕ್ಕಳು ಯಾವುದೇ ವೃತ್ತಿಯನ್ನು ಹೊಕ್ಕರೂ ಅವರ ಭವಿಷ್ಯದ ಮತ್ತು ಆ ವೃತ್ತಿಯ ಗತಿ ಏನು? ಕೋಚಿಂಗ್ ಕೇಂದ್ರಗಳ ಮೂಲಕ ನಾವು ಹೀಗೆ ಸಿದ್ಧಪಡಿಸುತ್ತಿರುವ ಯುವ ಪ್ರಜೆಗಳು, ದೇಶ ಒತ್ತಟ್ಟಿಗಿರಲಿ, ತಮ್ಮ ದೇಹ, ಮನಸ್ಸನ್ನಾದರೂ ಹೇಗೆ ಕಾಯ್ದುಕೊಂಡಾರು? ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದಂತಹ ಅಂಶಗಳು ಇವು.

ಶಿಕ್ಷಣ ಕ್ಷೇತ್ರವು ‘ನೀಟ್’ ಪರೀಕ್ಷೆಯನ್ನೇ ವಾಣಿಜ್ಯೋದ್ಯಮವಾಗಿ ಮಾಡಿಕೊಂಡ ಬಗೆಯೂ ಬೆರಗು ಮೂಡಿಸುವಂಥದ್ದೇ. ವಿಜ್ಞಾನದ ಕಲಿಕೆಗೆಂದು ಕಾಲೇಜು ಮೆಟ್ಟಿಲು ಹತ್ತಿದ ಮಕ್ಕಳಿದ್ದರೆ ಪ್ರತಿದಿನವೂ ‘ನಿಮ್ಮ ಮಗ ಅಥವಾ ಮಗಳು ಇಂತಹ ಕ್ಲಾಸಿನಲ್ಲಿದ್ದಾರೆ ತಾನೆ, ಅವರನ್ನು ಕೋಚಿಂಗ್‍ಗೆ ಸೇರಿಸಿ, ಮೆಡಿಕಲ್ ಸೀಟು ಗ್ಯಾರಂಟಿ’ ಎಂಬಂಥ ಕನಿಷ್ಠ 10 ಕರೆಗಳಾದರೂ ಪೋಷಕರಿಗೆ ಬರುತ್ತವೆ! ಆದರೆ ಒಂದು ಉದ್ಯಮ ಬೃಹದಾಕಾರವಾಗಿ ಬೆಳೆಯಲು ಗ್ರಾಹಕರಿಂದ ಬೇಡಿಕೆ ಇರಬೇಕಷ್ಟೆ!

ಇದಕ್ಕೆಲ್ಲ ಪರಿಹಾರ? ಮತ್ತೆ ಅದೇ ಮೂಲಭೂತ ತತ್ವಗಳೇ. ಮಕ್ಕಳ ಬಗೆಗಿನ ಆಸೆ, ನಿರೀಕ್ಷೆಗಳಿಗೆ ಮಿತಿ ಹಾಕಿಕೊಳ್ಳುವುದು, ವೈದ್ಯವೃತ್ತಿಯ ವಾಸ್ತವ ಸ್ಥಿತಿಯ ಬಗೆಗೆ ಅರಿವು ಹೊಂದುವುದು, ಉತ್ಪ್ರೇಕ್ಷೆಯನ್ನು ದೂರವಿಡುವುದು, ಮಕ್ಕಳ ಓದುವಿಕೆಯ ಸಾಮರ್ಥ್ಯದ ಸರಿಯಾದ ಅಂದಾಜು, ಮಕ್ಕಳಲ್ಲಿ ತಮ್ಮ ಸಾಮರ್ಥ್ಯ, ಅವಕಾಶಗಳಿಗೆ ಅನುಗುಣವಾಗಿ ವೃತ್ತಿಯನ್ನು ಆಯ್ದುಕೊಳ್ಳುವ ಧೈರ್ಯ, ಯಾವುದೇ ವೃತ್ತಿಯನ್ನು ಪ್ರೀತಿಸುವ, ಅದರಲ್ಲಿ ಸಾಧಿಸುವ ಮನಸ್ಸು, ಜೀವನದಲ್ಲಿ ಸಂತೋಷವಾಗಿರುವ ಗುರಿ, ‘ಸಂತೋಷ’ ಎಂದರೆ ಏನು ಎಂಬುದರ ಸರಿಯಾದ ಪರಿಕಲ್ಪನೆ ಇರಬೇಕಾದುದು ಬಹಳ ಮುಖ್ಯ.

ಸಾಮಾನ್ಯವಾಗಿ ನಾವು ಅಂದುಕೊಳ್ಳುವಂತೆ, ನೀಟ್ ಸುತ್ತಲಿನ ಸುಖಾಂತ- ದುಃಖಾಂತವು ಜೀವನದ ಸುಖ- ದುಃಖದ ಅಂತ್ಯವೇನಲ್ಲ! ಈ ಅರಿವು ಮೊದಲು ಅಪ್ಪ-ಅಮ್ಮನಲ್ಲಿ, ಆ ಮೂಲಕ ಅವರ ಮಕ್ಕಳಲ್ಲಿ ಮೂಡಬೇಕಾದ ಹೊತ್ತು ಇದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT