ಚುನಾವಣಾ ಆಯೋಗದ ಕಾರ್ಯವಿಧಾನವು ಹಲವು ದಶಕಗಳಿಂದ ಚರ್ಚೆಯ ಕೇಂದ್ರದಲ್ಲಿದೆ ಮತ್ತು ಅದನ್ನು ನಿಜವಾಗಿಯೂ ಒಂದು ಸ್ವತಂತ್ರ ಸಂಸ್ಥೆಯನ್ನಾಗಿಸಲು ಅದರ ಕಾರ್ಯನಿರ್ವಹಣೆಯನ್ನು ಮರುರೂಪಿಸಬೇಕು ಎಂಬ ಆಗ್ರಹವಿತ್ತು. ಆಯೋಗವು ಈಚೆಗೆ ತೆಗೆದುಕೊಂಡ ಕೆಲವು ನಿರ್ಧಾರಗಳು, ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣಾ ದಿನಾಂಕಗಳನ್ನು ನಿಗದಿ ಮಾಡುತ್ತಿದೆ ಎಂಬ ಆರೋಪಗಳು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬಣವೇ ನಿಜವಾದ ಶಿವಸೇನಾ ಎಂದು ನೀಡಿದ ತೀರ್ಪು ಟೀಕೆಗೆ ಗುರಿಯಾಗಿದ್ದವು.
ಸುಪ್ರೀಂ ಕೋರ್ಟ್ ಈಗ ನೀಡಿರುವ ಮಹತ್ವದ ತೀರ್ಪು ದೂರಗಾಮಿ ಪರಿಣಾಮಗಳಿಗೆ ಕಾರಣವಾಗಲಿದೆ. ಯಾವುದೇ ಭಯ ಅಥವಾ ಪಕ್ಷಪಾತ ಇಲ್ಲದೆ ನಿರ್ಧಾರ ತೆಗೆದುಕೊಳ್ಳುವ ಒಂದು ಸ್ವತಂತ್ರ ಸಂಸ್ಥೆಯಾಗಿ ಚುನಾವಣಾ ಆಯೋಗವನ್ನು ರೂಪಿಸುವ ಒಂದು ಮಾರ್ಗವನ್ನು ಈ ತೀರ್ಪು ತೆರೆದಿದೆ.
ಮೊದಲನೆಯದಾಗಿ, ಆಯೋಗದ ಸದಸ್ಯರು ಯಾರಾಗಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಕೇಂದ್ರ ಸಚಿವ ಸಂಪುಟದ ಅಧಿಕಾರವನ್ನು ಈ ತೀರ್ಪು ತೆಗೆದುಹಾಕಿದೆ ಮತ್ತು ಅದು ಸರಿಯಾಗಿದೆ. ಆ ಅಧಿಕಾರವು ಪ್ರಧಾನಿ, ವಿರೋಧ ಪಕ್ಷದ ನಾಯಕ (ಅಥವಾ ದೊಡ್ಡ ವಿರೋಧ ಪಕ್ಷ) ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇರುವ ಸಮಿತಿಗೆ ದೊರೆಯಲಿದೆ.
ಎರಡನೆಯದಾಗಿ, ಚುನಾವಣಾ ಆಯೋಗದ ಮುಖ್ಯ ಆಯುಕ್ತರ ಅಧಿಕಾರದ ಅವಧಿಗೆ ಅನ್ವಯವಾಗುತ್ತಿದ್ದ ರಕ್ಷಣೆಯನ್ನು, ಆಯೋಗದ ಇತರ ಆಯುಕ್ತರಿಗೂ ಈ ತೀರ್ಪು ನೀಡಿದೆ. ಸಂಸತ್ತಿನಲ್ಲಿ ಮಹಾಭಿಯೋಗ ಪ್ರಕ್ರಿಯೆಯ ಮೂಲಕ ಮಾತ್ರ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸಲು ಸಾಧ್ಯ. ಈ ತೀರ್ಪಿನ ಪ್ರಕಾರ, ಈಗ ಚುನಾವಣಾ ಆಯುಕ್ತರನ್ನೂ ಇದೇ ಪ್ರಕ್ರಿಯೆಯ ಮೂಲಕ ಮಾತ್ರ ಪದಚ್ಯುತಗೊಳಿಸಬಹುದು. ಯಾವುದೇ ರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿಕೊಡದೆಯೇ ಕಾರ್ಯನಿರ್ವಹಿಸುವ ಬಲವನ್ನು ಈ ತೀರ್ಪು ಆಯೋಗಕ್ಕೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಚುನಾವಣಾ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಅವರ ವಿವಾದಾತ್ಮಕ ನೇಮಕಾತಿಗೆ ಸಂಬಂಧಿಸಿದಂತೆ ನೀಡಿದ ತೀರ್ಪು, ಮುಖ್ಯ ತೀರ್ಪಿನ ಬಹುಮುಖ್ಯವಾದ ಭಾಗವಾಗಿದೆ. ಸ್ವಯಂನಿವೃತ್ತಿಗೆ ಗೋಯಲ್ ಅವರಿಂದ ಅರ್ಜಿ ಸಲ್ಲಿಕೆ, ಕಾನೂನು ಸಚಿವಾಲಯದ ಅನುಮೋದನೆ, ಪ್ರಧಾನಿ ಅಂಕಿತ ಮತ್ತು ರಾಷ್ಟ್ರಪತಿಯಿಂದ ಅವರ ನೇಮಕ– ಈ ಎಲ್ಲಾ ಪ್ರಕ್ರಿಯೆಗಳು ಒಂದೇ ದಿನದಲ್ಲಿ ನಡೆದಿದ್ದವು. ‘ದಿ ಅಪಾಯಿಂಟ್‌ಮೆಂಟ್ ಆಫ್ ಶ್ರೀ ಅರುಣ್ ಗೋಯಲ್: ಎ ಟ್ರಿಗರ್ ಆರ್ ಎ ಮಿಯರ್ ಅಸೈಡ್?’ ಎಂಬ ಪ್ರತ್ಯೇಕ ಭಾಗದಲ್ಲಿ, ‘ಇಲ್ಲಿ ರೂಢಿ ಮತ್ತು ಕಾನೂನು ಇಲ್ಲದಿರುವುದನ್ನು ಗಮನಿಸಿದ್ದೇವೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ನೇಮಕಾತಿ ಯಾವ ರೀತಿ ನಡೆದಿದೆ ಎಂಬುದನ್ನು ಈ ಮಾತು ಸೂಚಿಸುತ್ತದೆ.
ಚುನಾವಣಾ ಆಯೋಗದ ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ ಕಾನೂನುಗಳಿಗೆ ಸಂಸತ್ತು ಅಗತ್ಯ ತಿದ್ದುಪಡಿ ತರುವವರೆಗೂ ಮಾತ್ರ, ಸಮಿತಿ ಮೂಲಕ ನೇಮಕಾತಿ ನಡೆಸುವ ವ್ಯವಸ್ಥೆ ಜಾರಿಯಲ್ಲಿ ಇರಲಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಸಮಿತಿಯು ನಡೆಸುವ ನೇಮಕಾತಿಯು ಬಹುಮತದ ಆಧಾರದ್ದೋ ಅಥವಾ ಅವಿರೋಧವಾಗಿರಬೇಕೋ ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸುವುದಿಲ್ಲ.
ಈಗ ಚುನಾವಣಾ ಆಯೋಗದಲ್ಲಿ ಆಯುಕ್ತರಾಗಿ ಇರುವವರು ಈ ತೀರ್ಪಿನ ಬಳಿಕವೂ ಮುಂದುವರಿಯುವುದು ಸಮರ್ಥನೀಯ ಅಲ್ಲ. ಸಮಿತಿ ವ್ಯವಸ್ಥೆಯ ಮೂಲಕ ನೇಮಕವಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳುತ್ತಿರುವ ಕಾರಣ ಅವರೆಲ್ಲಾ ರಾಜೀನಾಮೆ ನೀಡಬೇಕೆ? ಇದಕ್ಕಾಗಿ ಇನ್ನೂ ಕೆಲವು ದಿನ ಕಾಯಬೇಕಾಗಿದೆ.
ಚುನಾವಣಾ ಆಯೋಗದ ಈಗಿನ ಸದಸ್ಯರು ರಾಜೀನಾಮೆ ನೀಡದೇ ಇದ್ದರೆ, ಈ ಸಮಿತಿ ವ್ಯವಸ್ಥೆಯ ಮೂಲಕ ನೇಮಕಾತಿ ಸದ್ಯಕ್ಕೆ ನಡೆಯುವುದಿಲ್ಲ. ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಅವರಿಗೆ 2024ರ ಫೆಬ್ರುವರಿ 14ರಂದು 65 ವರ್ಷ ತುಂಬಲಿದೆ. ಆಗ ಅವರು ನಿವೃತ್ತರಾಗಲಿದ್ದಾರೆ. ಆನಂತರವೇ ಈ ಸಮಿತಿ ವ್ಯವಸ್ಥೆಯ ಮೂಲಕ ಮೊದಲ ನೇಮಕಾತಿ ನಡೆಸಲು ಸಾಧ್ಯ, ಅದೂ ಒಂದು ವರ್ಷದ ನಂತರ.
ಕಾನೂನು ಕೊಡಮಾಡಿರುವ ಅಧಿಕಾರವನ್ನು ಮೀರಿ ನ್ಯಾಯಾಂಗವು, ಶಾಸಕಾಂಗ ಮತ್ತು ಕಾರ್ಯಾಂಗದ ವ್ಯಾಪ್ತಿಯನ್ನು ಪ್ರವೇಶಿಸಿದೆ ಎಂಬ ಟೀಕೆಗೆ ಈ ತೀರ್ಪು ಗುರಿಯಾಗಬಹುದು. ನ್ಯಾಯಾಂಗದ ಕ್ರಿಯಾಶೀಲತೆ ಬಗ್ಗೆ ಪ್ರಶ್ನೆಯೂ ಹುಟ್ಟಬಹುದು. ಇದು, ಇನ್ನೂ ಕೆಲವು ದಿನ ಈ ಬಗ್ಗೆ ಚರ್ಚೆಗೆ ಆಸ್ಪದ ಮಾಡಿಕೊಡಲಿದೆ.
ಲೇಖಕ: ಹಿರಿಯ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.