ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪಿಚ್ ಗುಣಮಟ್ಟ ಮತ್ತು ಕ್ರಿಕೆಟ್ ಫಲಿತಾಂಶ..

‘ಅತಿ ಸಣ್ಣ ಅವಧಿ’ಯ ಟೆಸ್ಟ್ ಪಂದ್ಯ ಹುಟ್ಟುಹಾಕಿದ ಚರ್ಚೆಯ ಸುತ್ತ...
Published 7 ಜನವರಿ 2024, 20:35 IST
Last Updated 7 ಜನವರಿ 2024, 20:35 IST
ಅಕ್ಷರ ಗಾತ್ರ

ನೂರಿಪ್ಪತ್ತರಿಂದ ನೂರೈವತ್ತು ಕಿಲೊಮೀಟರ್ ವೇಗದಲ್ಲಿ ನುಗ್ಗಿ ಬರುವ ಚೆಂಡಿಗೆ ಆಟಗಾರನೊಬ್ಬ ದೇಹವನ್ನೊಡ್ಡಿ ನಿಲ್ಲುವ ಏಕೈಕ ಕ್ರೀಡೆಯೆಂದರೆ ಬಹುಶಃ ಕ್ರಿಕೆಟ್ ಒಂದೇ.

ದಶಕಗಳ ಹಿಂದೆ ವೆಸ್ಟ್ ಇಂಡೀಸ್‌ ದೈತ್ಯ ವೇಗಿಗಳ ಎದುರು ಅದೆಷ್ಟೋ ಬ್ಯಾಟರ್‌ಗಳು ಗಂಭೀರವಾಗಿ ಗಾಯಗೊಂಡಿದ್ದ ಹಲವು ಉದಾಹರಣೆಗಳಿವೆ. ದಿನಗಳೆದಂತೆ ಬ್ಯಾಟರ್‌ಗಳ ರಕ್ಷಣೆಗೆ ಹತ್ತಾರು ಸಲಕರಣೆಗಳು ಬಂದವು. ಅವುಗಳನ್ನು ಧರಿಸಿ ಆಡುವುದು ಕಡ್ಡಾಯವೂ ಆಯಿತು. ಆದರೆ ಪಂದ್ಯಕ್ಕಾಗಿ ಸಿದ್ಧಗೊಳ್ಳುವ ಅಂಗಣದ (ಪಿಚ್) ಗುಣಮಟ್ಟ ಮಾತ್ರ ಇಂದಿಗೂ ಏಕರೂಪವಾಗಿಲ್ಲ. ಅದಕ್ಕೆ ಭೌಗೋಳಿಕ ಕಾರಣಗಳೂ ಇವೆ. ಆದ್ದರಿಂದ ಜಗತ್ತಿನ ಯಾವುದೇ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಾಗಲೂ ಪಿಚ್‌ ಕುರಿತ ಪರ, ವಿರೋಧ ಚರ್ಚೆಗಳು ನಡೆಯುವುದು ಸಾಮಾನ್ಯವಾಗಿದೆ. 

ಇದೀಗ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿರುವ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದ ಪಿಚ್‌, ಸುದ್ದಿಯ ಕೇಂದ್ರಬಿಂದುವಾಗಿದೆ. ಅದಕ್ಕೆ ಕಾರಣ, ಈಚೆಗೆ ಇಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಪಂದ್ಯವು ಅತ್ಯಂತ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಂಡಿದ್ದು. ಎರಡನೇ ದಿನವೇ ಮುಗಿದ ಈ ಪಂದ್ಯದಲ್ಲಿ ಆಟ ನಡೆದಿದ್ದು ಒಂಬತ್ತೂವರೆ ತಾಸುಗಳು ಮಾತ್ರ. ಈ ಅವಧಿಯಲ್ಲಿ 33 ವಿಕೆಟ್‌ಗಳು ಪತನವಾದರೆ ಪ್ರಯೋಗವಾದ ಎಸೆತಗಳು ಒಟ್ಟು 642 ಮಾತ್ರ. ಅದರಿಂದಾಗಿಯೇ ಇದು ಟೆಸ್ಟ್ ಇತಿಹಾಸದಲ್ಲಿಯೇ ಅತ್ಯಂತ ಸಣ್ಣ ಅವಧಿಯ ಪಂದ್ಯವೆಂದು ದಾಖಲಾಯಿತು. ಎಲ್ಲ ವಿಕೆಟ್‌ಗಳೂ ವೇಗದ ಬೌಲರ್‌ಗಳ ಬುಟ್ಟಿ ಸೇರಿದ್ದು ಇನ್ನೊಂದು ವಿಶೇಷ. ಸ್ಪಿನ್ನರ್‌ಗಳ ಆಟವೇ ಇಲ್ಲಿ ಗೌಣ.

ಕ್ರಿಕೆಟ್ ಎಂದರೆ ಬ್ಯಾಟರ್‌ಗಳ ವಿಜೃಂಭಣೆಯೇ ಪ್ರಧಾನವಾದದ್ದು ಎಂಬ ಭಾವನೆ ಮೊದಲಿನಿಂದಲೂ ಇದೆ. ಅದರಲ್ಲೂ ಇಂದಿನ ಟಿ20 ಯುಗದಲ್ಲಿ ಸಿಕ್ಸರ್‌, ಬೌಂಡರಿಗಳು ಯಥೇಚ್ಛವಾಗಿ ಸಿಡಿಯದ ಪಂದ್ಯವು ಸಪ್ಪೆ ಎನಿಸುತ್ತದೆ. ಟೆಸ್ಟ್ ಪಂದ್ಯದಲ್ಲಿಯೂ ಬ್ಯಾಟರ್‌ಗಳು ಅಬ್ಬರಿಸಬೇಕು ಎಂದು ಬಯಸುವವರಿಗೇನೂ ಕಮ್ಮಿಯಿಲ್ಲ. ಆದ್ದರಿಂದಲೇ ಈಗ ಎಲ್ಲರ ಕೆಂಗಣ್ಣು ಪಿಚ್‌ ಮೇಲೆ ಬಿದ್ದಿದೆ.

ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್‌ ಶುಕ್ರಿ ಕಾನ್ರಾಡ್ ಅವರೇ ಪಿಚ್‌ ಬಗ್ಗೆ ಕಿಡಿಕಾರಿದ್ದಾರೆ. ‘ಇದೊಂದು ಅಗತ್ಯಕ್ಕಿಂತ ಅತಿಯಾಗಿ ಸಿದ್ಧಪಡಿಸಿದ ಪಿಚ್. ಹೀಗಾದರೆ ಟೆಸ್ಟ್ ಪಂದ್ಯದ ಗತಿ ಏನು’ ಎಂದಿದ್ದಾರೆ. ಇನ್ನೊಂದೆಡೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಐಸಿಸಿ ರೆಫರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಭಾರತದ ಪಿಚ್‌ಗಳಲ್ಲಿ ಮೊದಲ ದಿನದಿಂದ ಚೆಂಡು ತಿರುವು (ಸ್ಪಿನ್) ಪಡೆಯತೊಡಗಿದರೆ ಕಳಪೆ ಎಂಬ ರೇಟಿಂಗ್ ನೀಡುತ್ತಾರೆ. ಇಲ್ಲಿಯದು ಅತ್ಯಂತ ಅಪಾಯಕಾರಿ ಪಿಚ್ ಅಲ್ಲವೇ? ನಾವು ಇಂತಹ ಪಿಚ್‌ನಲ್ಲಿ ಆಡಲು ಸದಾ ಸಿದ್ಧ. ಆದರೆ ಭಾರತದ  ಪಿಚ್‌ಗಳನ್ನು ಟೀಕಿಸುವವರು ಬಾಯಿ ಮುಚ್ಚಿಕೊಂಡಿರಬೇಕಷ್ಟೇ. ಪಂದ್ಯ ರೆಫರಿಗಳು ನ್ಯೂಲ್ಯಾಂಡ್ಸ್‌ ಪಿಚ್‌ ಬಗ್ಗೆ ಯಾವ ರೀತಿಯ ರೇಟಿಂಗ್ ನೀಡುತ್ತಾರೆಂದು ಎದುರು ನೋಡುತ್ತಿದ್ದೇನೆ’ ಎಂದು ರೋಹಿತ್ ಸವಾಲು ಹಾಕಿದ್ದಾರೆ.

ಅವರ ಮಾತುಗಳು ಅಕ್ಷರಶಃ ಸತ್ಯ. ಎಂಟು ವರ್ಷಗಳ ಹಿಂದೆ ಇದೇ ದಕ್ಷಿಣ ಆಫ್ರಿಕಾ ಎದುರು ನಾಗಪುರದಲ್ಲಿ ನಡೆದ ಪಂದ್ಯ ಎರಡೂವರೆ ದಿನಗಳಲ್ಲಿ ಮುಗಿದಿತ್ತು. ಆ ಪಿಚ್‌ ಅನ್ನು ಕಳಪೆ ಎಂದು ಐಸಿಸಿ ಹೇಳಿತ್ತು. ಕಾನ್ಪುರ, ಪುಣೆ, ದೆಹಲಿಯ ಪಿಚ್ ಸೇರಿದಂತೆ ಭಾರತದ ಕೆಲವು ಪಿಚ್‌ಗಳಿಗೂ ಇಂತಹ ರೇಟಿಂಗ್ ಲಭಿಸಿದೆ. ಅಷ್ಟೇ ಏಕೆ, ಹೋದ ವರ್ಷ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆದ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದ ಅಂಗಣಕ್ಕೆ ‘ಸಾಧಾರಣ’ ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ವಿಜೃಂಭಿಸಿದ್ದರು. ಅದೇ ತಂಡದ ಟ್ರಾವಿಸ್ ಹೆಡ್ ಅಮೋಘ ಶತಕ ಹೊಡೆದು ಗೆಲುವಿನ ರೂವಾರಿಯಾಗಿದ್ದರು. ಪಿಚ್ ಸಾಧಾರಣವಾಗಿದ್ದರೆ ಎರಡು ತಂಡಗಳಿಗೂ ಪರಿಣಾಮ ಬೀರಬೇಕಿತ್ತಲ್ಲವೇ?

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್‌ ಹಾಗೂ ವೆಸ್ಟ್ ಇಂಡೀಸ್‌ ಪಿಚ್‌ಗಳಲ್ಲಿ ಚೆಂಡುಗಳು ಬೌನ್ಸ್‌ ಆಗುವ ರೀತಿ ಅಪಾಯಕಾರಿ. ಅನಿರೀಕ್ಷಿತ ಬೌನ್ಸ್‌ಗಳು, ಬೌಲರ್‌ಗಳೇ ಅಚ್ಚರಿಪಡುವಂತಹ ಸ್ವಿಂಗ್‌ಗಳನ್ನು ಉತ್ಪಾದಿಸುವ ಪಿಚ್‌ಗಳಲ್ಲಿ ಆಡುವುದು ಭಾರತ ಉಪಖಂಡದಿಂದ ಹೋದ ಆಟಗಾರರಿಗೆ ಕಠಿಣ ಸವಾಲು. ಆದರೆ ದಶಕಗಳ ಹಿಂದಿನಿಂದಲೂ ಅಲ್ಲಿಯ ಪಿಚ್‌ ಗಳಲ್ಲಿಯೂ ಪಂದ್ಯ ಗೆದ್ದು ಬಂದ ಇತಿಹಾಸ ಭಾರತೀಯರಿಗೆ ಇದೆ. ಇತ್ತೀಚೆಗಂತೂ ಭಾರತದಲ್ಲಿಯೂ ವೇಗದ ಬೌಲರ್‌ಗಳಿಗೆ ನೆರವಾಗುವಂತಹ ಪಿಚ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಟೆಸ್ಟ್ ಪಂದ್ಯದ ಎರಡನೇ ದಿನ ಅಥವಾ ಮೂರನೇ ದಿನದಿಂದ ಚೆಂಡು ಸ್ಪಿನ್ ಆಗಲು ಶುರುವಾಗುವ ಪಿಚ್‌ಗಳು ಇವು. 

ಆದರೆ ಇನ್ನು ಕೆಲವು ಕಡೆ ಪಂದ್ಯದ ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್‌ಗಳೂ ಇವೆ. ಭಾರತ ತಂಡದ ಮುಖ್ಯ ಸಾಮರ್ಥ್ಯವೇ ಸ್ಪಿನ್ ಆಗಿರುವುದರಿಂದ ತವರಿನ ಲಾಭ ಪಡೆಯುವುದರಲ್ಲಿ ತಪ್ಪೇನೂ ಇಲ್ಲವಲ್ಲ ಎಂಬ ವಾದವೂ ಇದೆ.  ಅಷ್ಟಕ್ಕೂ ಸ್ಪಿನ್ ಎಸೆತಗಳನ್ನು ಹಾಕುವುದು ಮತ್ತು ಎದುರಿಸಿ ಆಡುವುದು ಒಂದು ಕಲೆ. ಅದು ಭಾರತದ ಆಟಗಾರರ ಸಹಜ ಸಾಮರ್ಥ್ಯವೂ ಹೌದು. ಸ್ಪಿನ್ ಎಸೆತಗಳಿಂದ ಬ್ಯಾಟರ್‌ಗಳು ಗಾಯಗೊಂಡ ಉದಾಹರಣೆಗಳು ತೀರಾ ವಿರಳ. ಆದರೆ, ವಿಕೆಟ್‌ಕೀಪರ್‌ಗಳು ನೋವುಂಡ ನಿದರ್ಶನಗಳು ಇವೆ. ಆದರೂ ಈ ವಾದವನ್ನು ಬೇರೆ ದೇಶಗಳ ಕ್ರಿಕೆಟ್‌ ಪಂಡಿತರು ಒಪ್ಪುವುದಿಲ್ಲ.

ಭಾರತ ಮತ್ತು ವಿದೇಶಿ ಪಿಚ್‌ಗಳಿಗೆ ಸಂಬಂಧಿಸಿದ ವಾದ, ವಿವಾದ ಹೊಸದೇನಲ್ಲ. ಆದರೆ, ಈಗ ತಂತ್ರಜ್ಞಾನ, ಆರ್ಥಿಕತೆ ಮತ್ತು ಆಟದ ವೇಗ ಬದಲಾದಂತೆ ಚರ್ಚೆಗಳು ಬೇರೆ ಆಯಾಮಗಳಲ್ಲಿಯೂ ನಡೆಯುತ್ತಿವೆ. ಸದ್ಯ ಟಿ20 ಕ್ರಿಕೆಟ್ ಭರಾಟೆಯಲ್ಲಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳು ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸಪಡಬೇಕಾದ ಪರಿಸ್ಥಿತಿ ಇದೆ. ವಿಶ್ಟ ಟೆಸ್ಟ್ ಚಾಂಪಿಯನ್‌ಷಿಪ್‌ ಆರಂಭಿಸುವ ಮೂಲಕ ದೀರ್ಘ ಅವಧಿಯ ಕ್ರಿಕೆಟ್ ಮಾದರಿ ಉಳಿಸಿಕೊಳ್ಳುವತ್ತ ಐಸಿಸಿ ಮಹತ್ವದ ಹೆಜ್ಜೆ ಇಟ್ಟಿತ್ತು. ಅದರ ಫಲ ಈಗ ಸಿಗುತ್ತಿದೆ. ಆದರೆ ಟೆಸ್ಟ್ ಪಂದ್ಯವು ಕನಿಷ್ಠ ನಾಲ್ಕು ದಿನಗಳಾದರೂ ನಡೆಯದೇ ಹೋದರೆ, ಆಯೋಜಕ ಸಂಸ್ಥೆ, ಅಧಿಕೃತ ಪ್ರಸಾರಕರಿಗೆ ಆರ್ಥಿಕ ನಷ್ಟ ಖಚಿತ ಎಂಬ ಮಾತುಗಳೂ ಕೇಳಿಬರುತ್ತಿವೆ.

ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಟೆಸ್ಟ್ ಪಂದ್ಯಗಳು ಮೂರು ದಿನಗಳಲ್ಲಿ ಮುಕ್ತಾಯವಾಗಿವೆ. ಚುಟುಕು ಕ್ರಿಕೆಟ್ ಪ್ರಭಾವದಿಂದ ಟೆಸ್ಟ್ ಆಟಗಾರರ ಶೈಲಿ ಮತ್ತು ವೇಗ ಬದಲಾಗಿದೆ ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್‌ ಹೇಳುತ್ತಾರೆ. ಅದು ಬಹುಮಟ್ಟಿಗೆ ನಿಜವೂ ಹೌದು. ಒಂದು ಟೆಸ್ಟ್ ಪಂದ್ಯವೆಂದರೆ ಕ್ರಿಕೆಟ್‌ ಆಟದ ಎಲ್ಲ ಕೌಶಲಗಳು ಮತ್ತು ಸೊಬಗು ಅನಾವರಣ ಗೊಳ್ಳಬೇಕು ಎಂಬ ಆಶಯ ನೈಜ ಕ್ರಿಕೆಟ್‌ಪ್ರೇಮಿಗಳದ್ದು. ಆದರೆ ಹಿಂದೆಂದಿಗಿಂತಲೂ ಇಂದಿನ ಟೆಸ್ಟ್‌ಗಳಲ್ಲಿ ನೀರಸ ಡ್ರಾಗಿಂತ ಸ್ಪಷ್ಟ ಫಲಿತಾಂಶಗಳು ಹೊರಹೊಮ್ಮುತ್ತಿರುವುದು ಕೂಡ ಉತ್ತಮ ಬೆಳವಣಿಗೆ.

ಆದ್ದರಿಂದ ಸಾಧ್ಯವಾದಷ್ಟೂ ಸ್ಪರ್ಧಾತ್ಮಕ ಪಿಚ್‌ಗಳನ್ನು ನೀಡಿ ಉಭಯ ತಂಡಗಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವತ್ತ ದೃಷ್ಟಿ ಹರಿಸಬೇಕು. ಇದನ್ನು ಆತಿಥ್ಯ ವಹಿಸುವ ಎಲ್ಲ ದೇಶಗಳೂ ಮನಗಾಣುವುದು ಇಂದಿನ ಅಗತ್ಯ. ‘ತವರಿನ ಲಾಭ’ ಪಡೆಯುವುದು ತಪ್ಪಲ್ಲ. ಆದರೆ ದುರ್ಲಾಭ ಪಡೆಯಲು ಹೋದರೆ ನ್ಯೂಲ್ಯಾಂಡ್ಸ್‌ನಲ್ಲಿ ಆತಿಥೇಯರಿಗೆ ತಿರುಗುಬಾಣವಾದ ರೀತಿಯ ಫಲಿತಾಂಶಗಳು ಹೊರಹೊಮ್ಮುತ್ತಲೇ ಇರುತ್ತವೆ. ಇದೆಲ್ಲದರ ನಡುವೆ ದಕ್ಷಿಣ ಆಫ್ರಿಕಾದ ಏಡನ್ ಮರ್ಕರಂ ಹೊಡೆದ ಶತಕ ಮಾತ್ರ ಎಲ್ಲರ ಗಮನ ಸೆಳೆಯಿತು. ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಬೌಲಿಂಗ್‌ನಷ್ಟೇ ಮರ್ಕರಂ ಆಟವೂ ಈ ಪಂದ್ಯದ ಜೀವಾಳವಾಗಿತ್ತು. ಇಂತಹವರ ಆಟದಿಂದಲೇ ಕ್ರಿಕೆಟ್ ಸೊಬಗು ಹೆಚ್ಚುತ್ತದೆ. ತಂಡಗಳು ಗೆಲ್ಲಬಹುದು ಅಥವಾ ಸೋಲಬಹುದು; ಆದರೆ ಕ್ರಿಕೆಟ್‌ ಮಾತ್ರ ಯಾವಾಗಲೂ ಜಯಿಸಬೇಕು.

ಗಿರೀಶ ದೊಡ್ಡಮನಿ
ಗಿರೀಶ ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT