ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ರಕ್ತಹೀನತೆ ಮತ್ತು ಲಿಂಗತಾರತಮ್ಯ

ರಕ್ತಹೀನತೆ ನಿವಾರಣಾ ಅಭಿಯಾನವು ಸಾಮಾಜಿಕ ಸಮಸ್ಯೆಯತ್ತಲೂ ಲಕ್ಷ್ಯ ಹರಿಸುವುದೇ?
Published 30 ನವೆಂಬರ್ 2023, 20:30 IST
Last Updated 30 ನವೆಂಬರ್ 2023, 20:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಪೌಷ್ಟಿಕಾಂಶದ ಕೊರತೆಯ ಕಾರಣದಿಂದ ಉಂಟಾದ ರಕ್ತಹೀನತೆಯನ್ನು ನಿವಾರಣೆ ಮಾಡಲು ಸರ್ಕಾರ ಆರಂಭಿಸಿರುವ ಅಭಿಯಾನ ಬಹಳಷ್ಟು ಪ್ರಚಾರವನ್ನು ಪಡೆದುಕೊಂಡಿದೆ. ಈ ಅಭಿಯಾನದಲ್ಲಿ ಎಲ್ಲವೂ ಸರಿ ಇವೆಯೇ ಅಥವಾ ಏನಾದರೂ ಕೊರತೆ ಇದೆಯೇ? ಕೊರತೆಯಿದ್ದರೆ ಸರಿಪಡಿಸಬಹುದೇ?

ನಮ್ಮ ಶೇಕಡ 45ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಇದೆ ಎಂದು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತವೆ ಎಂದಾದರೆ, ಈ ನ್ಯೂನತೆ ಅದೆಷ್ಟು ವ್ಯಾಪಕವಾಗಿದೆ ಎಂದು ತಿಳಿದುಕೊಳ್ಳಬಹುದು. ಇದು ಒಂದೆಡೆ ಕಾಳಜಿ ವಹಿಸಬೇಕಾದ ವಿಷಯವೂ ಹೌದು, ಇನ್ನೊಂದೆಡೆ ನಾಚಿಕೆಯ ವಿಚಾರವೂ ಹೌದು. ಪೌಷ್ಟಿಕಾಂಶದ ಕೊರತೆ ತಂದೊಡ್ಡುವ ರಕ್ತಹೀನತೆಯಲ್ಲದೆ ಇನ್ನೆರಡು ಬಗೆಯ ಸಾಮಾನ್ಯ ರಕ್ತಹೀನತೆಯನ್ನು ನಾವು ನೋಡುತ್ತೇವೆ. ಒಂದು, ಸಿಕ್ಕಲ್ ಸೆಲ್ ಅನೀಮಿಯ ಮತ್ತು ಇನ್ನೊಂದು, ಥಲಸ್ಸೆಮಿಯ. ಇವೆರಡಕ್ಕೂ ವಿಭಿನ್ನ ರೀತಿಯ ಚಿಕಿತ್ಸೆಯ ಅಗತ್ಯವಿದೆ.

ರಕ್ತಹೀನತೆ ಇದ್ದರೆ ದಣಿವು, ಉಸಿರಾಟದ ತೊಂದರೆ, ಕೈ, ಪಾದಗಳು ತಣ್ಣಗಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಶೈಶವಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ರಕ್ತಹೀನತೆಯ ಪರಿಣಾಮಗಳು ಬಾಲ್ಯದ ದಿನಗಳಲ್ಲಿ ಹೆಚ್ಚು ತೀವ್ರವಾಗಿರುತ್ತವೆ.

ತಾಯಿ ಗರ್ಭಿಣಿಯಾಗಿರುವಾಗ ರಕ್ತಹೀನತೆ ಉಂಟಾದರೆ ಭ್ರೂಣ ಅಥವಾ ನಂತರ ನವಜಾತ ಶಿಶುವಿನ ಸಾವು ಸಂಭವಿಸಬಹುದು, ಕಡಿಮೆ ತೂಕದ ಮಗು ಅವಧಿಪೂರ್ವವೇ ಜನಿಸಬಹುದು, ಅತೀವ ರಕ್ತಸ್ರಾವದಿಂದ ತಾಯಿಯ ಸಾವು ಕೂಡಾ ಸಂಭವಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಕ್ತಹೀನತೆಯಿಂದಾಗಿ ತಾಯಂದಿರ ಮರಣದ ಸಂಖ್ಯೆ ವಾರ್ಷಿಕ ಜಾಗತಿಕವಾಗಿ 11.50 ಲಕ್ಷ ಇದೆ. ನೀತಿ ಆಯೋಗ ಹೇಳುವಂತೆ, ‘ಕಬ್ಬಿಣಾಂಶದ ಕೊರತೆಯ ಕಾರಣದಿಂದ ಉಂಟಾಗುವ ರಕ್ತಹೀನತೆಯಿಂದ ದೈಹಿಕ ಆರೋಗ್ಯದ ಮೇಲೆ ಆಗುವ ನಷ್ಟದಷ್ಟೇ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಮೇಲೆ ಕೂಡ ವಿನಾಶಕಾರಿ ಪರಿಣಾಮ ಆಗುತ್ತಿದೆ. ಅಭಿವೃದ್ಧಿಶೀಲ ದೇಶಗಳಿಗೆ ವಾರ್ಷಿಕ ಜಿಡಿಪಿಯಲ್ಲಿ ಶೇ 4.5ರಷ್ಟು ನಷ್ಟವನ್ನು ಅದು ಉಂಟುಮಾಡುತ್ತಿದೆ’.

ಈ ಕಾರಣಕ್ಕೆ, ಪೌಷ್ಟಿಕಾಂಶದ ಕೊರತೆಯಿಂದ ಬರುವ ರಕ್ತಹೀನತೆಯನ್ನು ನಿರ್ಮೂಲ ಮಾಡುವ ಪಣ ತೊಟ್ಟಿದೆ ಸರ್ಕಾರ. ಆದರೆ ಸರ್ಕಾರದ ಈ ಅಭಿಯಾನವು ರಕ್ತಹೀನತೆಯನ್ನು ಕಡಿಮೆ ಮಾಡಬಹುದೇ? ನೋಡಿ:

ಮೊದಲನೆಯದಾಗಿ, ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಗೆ ಮೂರು ತಿಂಗಳವರೆಗೆ ಪ್ರತಿದಿನ ತೆಗೆದುಕೊಳ್ಳಬೇಕಾದ ಕಬ್ಬಿಣಾಂಶ+ ಫೋಲಿಕ್ ಆ್ಯಸಿಡ್ ಮಾತ್ರೆಗಳ ಸರಳ ಚಿಕಿತ್ಸೆಯ ಅಗತ್ಯವಿದೆ. ಈ ಔಷಧಿಯನ್ನು ಎಲ್ಲಿ ಪಡೆಯಬಹುದು? ನಮ್ಮ ದೇಶದಲ್ಲಿ ಶೇ 80ರಷ್ಟು ಜನರು ಖಾಸಗಿ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ದುರದೃಷ್ಟವಶಾತ್, ಈ ಸರಳ ಔಷಧಿಯು ಖಾಸಗಿ ಆರೋಗ್ಯ ವ್ಯವಸ್ಥೆಯಲ್ಲಿ ಲಭ್ಯವಿಲ್ಲ. ಇದು ಒಪ್ಪಿಕೊಳ್ಳಲು ಕಷ್ಟವಾಗುವ ಆಘಾತಕಾರಿ ವಾಸ್ತವ.

ಸರಳ ಔಷಧದಲ್ಲಿ ಹೆಚ್ಚು ಲಾಭ ಇಲ್ಲವಾದ್ದರಿಂದ ಬಹುತೇಕ ಔಷಧಿ ತಯಾರಕರಿಗೆ ಅದನ್ನು ತಯಾರಿಸಲು ಆಸಕ್ತಿ ಇಲ್ಲ. ಆದರೆ ಕಂಪನಿಗಳು ಈ ಐರನ್ + ಫೋಲಿಕ್ ಆ್ಯಸಿಡ್ ಮಾತ್ರೆಯನ್ನು ವಿಟಮಿನ್ ಸಿ ಅಥವಾ ವಿಟಮಿನ್ ಬಿ-12ನೊಂದಿಗಿನ ಸಂಯೋಜನೆಯಲ್ಲಿ ತಯಾರಿಸುತ್ತವೆ. ಆಲ್ಕೊಹಾಲನ್ನು ಸೇರಿಸಿ ಟಾನಿಕ್ ಆಗಿಯೂ ಕೊಡುತ್ತವೆ! ಅಥವಾ ಐರನ್ + ಫೋಲಿಕ್ ಆ್ಯಸಿಡ್ ಕ್ಯಾಪ್ಸೂಲ್ ರೂಪದಲ್ಲಿ ಲಭ್ಯವಾಗುವಂತೆ ಮಾಡುತ್ತವೆ.

ಯಾವುದೇ ವೈದ್ಯಕೀಯ ಪುಸ್ತಕದಲ್ಲಿ ಬರೆದಿರದ ವಿಷಯಗಳಿವು. ಆದರೆ ಔಷಧ ಕಂಪನಿಗಳು ಇಂತಹ ಅಸಂಬದ್ಧ ಸಂಯುಕ್ತಗಳನ್ನು ತಯಾರಿಸುವುದಲ್ಲದೆ, ವಿಪರೀತ ಜಾಹೀರಾತುಗಳೊಂದಿಗೆ, ಆ ಔಷಧ ಮಾರಾಟವಾಗಲು ಒತ್ತಡ ಹಾಕುತ್ತವೆ. ಅನವಶ್ಯಕ ವಸ್ತುಗಳ ಅಸಂಬದ್ಧ ಜೋಡಣೆಯು ರಕ್ತಹೀನತೆಯ ಚಿಕಿತ್ಸೆಯನ್ನೇ ದುರ್ಬಲಗೊಳಿಸಬಹುದು. ಉದಾಹರಣೆಗೆ, ವಿಟಮಿನ್ ಸಿ ಸೇರಿಸುವುದರಿಂದ ಅದು ಹೆಚ್ಚು ಹೀರಿಕೊಳ್ಳುವಿಕೆಗೆ ಕಾರಣವಾಗಬಹುದು. ಇದರಿಂದ ಅಡ್ಡಪರಿಣಾಮಗಳು ಹೆಚ್ಚಾಗುತ್ತವೆ. ಕ್ಯಾಪ್ಸೂಲ್ ರೂಪವು ಹೀರಲ್ಪಡುವುದಿಲ್ಲ. ಔಷಧ ಉದ್ಯಮದ ದುಷ್ಕೃತ್ಯಗಳ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ರಕ್ತಹೀನತೆಗೆ ಸಂಬಂಧಿಸಿದ ಔಷಧಗಳ ಅಭ್ಯಾಸವೊಂದೇ ಸಾಕು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

ಅದೃಷ್ಟವಶಾತ್, ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ರಕ್ತಹೀನತೆಗೆ ಸರಿಯಾದ ಚಿಕಿತ್ಸೆ ಲಭ್ಯವಿದೆ. ಆದರೆ ಇಲ್ಲಿಯೂ ಒಂದು ಅಡಚಣೆಯಿದೆ. ಅದೆಂದರೆ, ಹೆಚ್ಚಿನ ಗರ್ಭಿಣಿಯರು ಜೀವ ಉಳಿಸುವ ಈ ಔಷಧಗಳನ್ನು ತೆಗೆದುಕೊಳ್ಳುವುದಿಲ್ಲ! ನೆರೆಹೊರೆಯವರೋ ಮನೆಯ ಹಿರಿಯರೋ ‘ಬುದ್ಧಿ ಹೇಳಿ’, ಮಗುವಿನ ತೂಕ ಹೆಚ್ಚಾಗುವುದೆಂದು, ಹೆರಿಗೆಯ ಸಮಯದಲ್ಲಿ ತೊಂದರೆ ಆಗುವುದೆಂದು ಹೆದರಿಸಿ ಆಕೆ ಈ ಔಷಧ ತೆಗೆದುಕೊಳ್ಳದಂತೆ ಮಾಡುತ್ತಾರೆ. ಹೀಗಾಗಿ, ತಾಯಂದಿರಿಗಷ್ಟೇ ಅಲ್ಲ, ಎಲ್ಲ ಹಿರಿಯರಿಗೂ ಈ ಔಷಧದ ಬಗ್ಗೆ ಸರಿಯಾದ ಮಾಹಿತಿ, ಆರೋಗ್ಯ ಶಿಕ್ಷಣದ ಅಗತ್ಯವಿದೆ.

ಈ ಔಷಧಿಯನ್ನು ಸೇವಿಸುವಾಗ ಮಹಿಳೆಯರು ಮಲಬದ್ಧತೆ, ಅತಿಸಾರ ಅಥವಾ ಉರಿಯೂತಕ್ಕೆ ಗುರಿಯಾಗಬಹುದು. ಹೀಗಾಗಿ, ಊಟದ ನಂತರವೇ ಮಾತ್ರೆ ಸೇವಿಸಬೇಕು. ದಿನ ಬಿಟ್ಟು ದಿನ ಮಾತ್ರೆಗಳನ್ನು ತೆಗೆದುಕೊಳ್ಳುವ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು, ಹಸಿರೆಲೆಯ ತರಕಾರಿಗಳನ್ನು ಸೇವಿಸುವ ಮೂಲಕ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನು ಆ ಶಿಕ್ಷಣವು ಒಳಗೊಂಡಿರಬೇಕು.

ತಾವು ಸೇವಿಸುವ ಔಷಧಗಳ ಬಗ್ಗೆ ಗ್ರಾಹಕರಿಗೆ ಸರಿಯಾದ ವೈಜ್ಞಾನಿಕ ಮಾಹಿತಿ ಇರಬೇಕು. ದಾರಿ ತಪ್ಪಿಸುವ ಮಾಹಿತಿಯು ವಿನಾಶಕಾರಿಯೂ ಆಗಬಹುದು.

ಕಬ್ಬಿಣ + ಫೋಲಿಕ್ ಆ್ಯಸಿಡ್ ಮಾತ್ರೆಗಳನ್ನು ಸೇವಿಸಿದ ಮೂರು ತಿಂಗಳ ನಂತರವೂ ಹಸಿರೆಲೆಯ ತರಕಾರಿಗಳನ್ನು ಸೇವಿಸುವಂತಹ ಸೂಕ್ತ ಕ್ರಮ ಅನುಸರಿಸದಿದ್ದರೆ ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಮತ್ತೆ ಕಾಣಿಸಿಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಸೊಪ್ಪು, ಹಸಿರು ತರಕಾರಿಗಳು ಅಥವಾ ಮೀನು, ಯಕೃತ್ತಿನಂತಹ ನಮ್ಮ ಆಹಾರ ಪದಾರ್ಥಗಳಲ್ಲಿ ಕಬ್ಬಿಣಾಂಶ ಲಭ್ಯವಿದೆ.

ಇವು ಕೆಲವು ವೈದ್ಯಕೀಯ ಸಮಸ್ಯೆಗಳಾದರೆ, ದೊಡ್ಡ ಸಾಮಾಜಿಕ ಸಮಸ್ಯೆಗಳು ಚಾಪೆ ಅಥವಾ ರಂಗೋಲಿ ಕೆಳಗೆ ಹೋಗಿವೆ. ಮೂಲಭೂತ ಪ್ರಶ್ನೆಯೆಂದರೆ, ರಕ್ತಹೀನತೆಯು ಮಹಿಳೆಯರ ಮೇಲೇ ಏಕೆ ಹೆಚ್ಚು ಪರಿಣಾಮ ಬೀರುತ್ತದೆ? ತಿಂಗಳ ರಕ್ತಸ್ರಾವದ ಕಾರಣವನ್ನು ಸಾಮಾನ್ಯವಾಗಿ ಕೊಡಲಾಗುತ್ತದೆ. ಆದರೆ ಕೆಲವು ಕುಟುಂಬಗಳಲ್ಲಿ ಪುರುಷ ಸದಸ್ಯರು ಊಟ ಮಾಡಿದ ನಂತರವೇ ಮಹಿಳೆಯರು ಊಟ ಮಾಡಬೇಕು. ಇದೊಂದು ಸಾಮಾಜಿಕ ನಿಯಮವಾಗಿದೆ. ಗಂಡ ಉಂಡ ನಂತರ ಉಳಿದದ್ದು, ತಂಗಳು ತಿಂದೇಳುವ ಅಥವಾ ಖಾಲಿ ಹೊಟ್ಟೆಯಲ್ಲಿ ಮಲಗುವ ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ. ಮಹಿಳೆಯರು ಸಾಮಾಜಿಕವಾಗಿ ವಂಚನೆಗೆ ಒಳಗಾದ ಅನೇಕ ವಿಚಾರಗಳಲ್ಲಿ ಇದೂ ಒಂದು. ಲಿಂಗ ಸಮಾನತೆಯೆಡೆ ಕಿಂಚಿತ್ತೂ ಗೌರವವಿಲ್ಲದ ಪುರುಷಾಭಿಮಾನದ ಸಮಾಜ ನಮ್ಮದು. ಪೌಷ್ಟಿಕಾಂಶದ ಕೊರತೆಯ ರಕ್ತಹೀನತೆ ಇದರ ಒಂದು ಅಭಿವ್ಯಕ್ತಿ ಮಾತ್ರ.

ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಒಂದು ಅಧ್ಯಯನದ ಪ್ರಕಾರ, ‘ಭಾರತದಲ್ಲಿ ಕೌಟುಂಬಿಕ ದೈಹಿಕ ಹಿಂಸೆ ಮತ್ತು ರಕ್ತಹೀನತೆಗೆ ಕಾರಣವಾಗುವ ಪೋಷಕಾಂಶಗಳ ಕೊರತೆಯ ನಡುವೆ ನೇರ ಸಂಬಂಧವಿದೆ. ಕೌಟುಂಬಿಕ ಹಿಂಸಾಚಾರವು ಮಹಿಳೆಗೆ ತಾನು ಸಿದ್ಧಪಡಿಸುವ ಆಹಾರದ ವಿಧ ಮತ್ತು ಪ್ರಮಾಣದ ಆಯ್ಕೆ ಸೇರಿದಂತೆ ತನ್ನ ಕುಟುಂಬಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥಳನ್ನಾಗಿಸುತ್ತದೆ’.

ಹೀಗಿರುವಾಗ, ಪೌಷ್ಟಿಕಾಂಶ ಕೊರತೆಯ ಕಾರಣದಿಂದ ಬರುವ ರಕ್ತಹೀನತೆಯು ಬರೀ ವೈದ್ಯಕೀಯ ಸಮಸ್ಯೆಯಲ್ಲ, ಅದೊಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರದ ಈ ಅಭಿಯಾನವು ನಮ್ಮ ಈ ಸಾಮಾಜಿಕ ಸಮಸ್ಯೆಯತ್ತಲೂ ಲಕ್ಷ್ಯಹರಿಸಬಲ್ಲದೇ?

ಯಾವುದೇ ಸರ್ಕಾರದ ಸುತ್ತೋಲೆಯು ಲಿಂಗ ತಾರತಮ್ಯವನ್ನು ಕೊನೆಗೊಳಿಸಲಾರದು. ಬದಲಿಗೆ, ಅದು ಲಿಂಗಸೂಕ್ಷ್ಮವಾಗಿದ್ದರೆ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಮೂಲಕ ಅಭಿಯಾನವನ್ನು ಆರಂಭಿಸಬಹುದು. ರಕ್ತಹೀನತೆ ಎಂಬುದು ಒಂದು ರೋಗಲಕ್ಷಣ. ಸಾಮಾಜಿಕ ರೋಗದ ದೈಹಿಕ ಲಕ್ಷಣವದು. ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರು ಕೆಲವು ಮಾತ್ರೆಗಳನ್ನು ಕೊಡುವಂತೆ ಕೇಳುತ್ತಿಲ್ಲ. ಬದಲಿಗೆ, ಲಿಂಗತಾರತಮ್ಯವಿಲ್ಲದ ಸಮಾಜಕ್ಕಾಗಿ ಒತ್ತಡ ಹೇರುತ್ತಿದ್ದಾರೆ.

ಲೇಖಕ: ಅಧ್ಯಕ್ಷ, ಡ್ರಗ್ ಆ್ಯಕ್ಷನ್ ಫೋರಂ- ಕರ್ನಾಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT