ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟೂ ಕಾಲದ ಸಂಕಟಗಳು!

ಕಚೇರಿ ಕೆಲಸದ ಒಡನಾಟಕ್ಕೆ ಹಿಂದೇಟು, ಮಾರ್ಗದರ್ಶನಕ್ಕೂ ಹಿಂಜರಿಕೆ
Last Updated 1 ಫೆಬ್ರುವರಿ 2019, 19:04 IST
ಅಕ್ಷರ ಗಾತ್ರ

ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಈ ಬಾರಿಯ ವಾರ್ಷಿಕ ಸಭೆಯಲ್ಲಿ ಸೇರಿದ್ದ ಪುರುಷರು ಹಲವು ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡಿದ್ದರು- ಜಾಗತಿಕ ಆರ್ಥಿಕ ಹಿಂಜರಿತ, ಸೈಬರ್ ಭದ್ರತೆಗೆ ಎದುರಾಗಿರುವ ಬೆದರಿಕೆಗಳು, ಯುದ್ಧ ಇತ್ಯಾದಿ.

#ಮೀಟೂ ಕಾಲಘಟ್ಟದಲ್ಲಿ ಮಹಿಳೆಯರಿಗೆ ತರಬೇತಿ ನೀಡುವುದು ಕೂಡ ಒಂದು ಸಮಸ್ಯೆ ಎಂಬುದನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಹಲವರು ಒಪ್ಪಿಕೊಂಡರು. ‘ಈ ಸಂದರ್ಭದಲ್ಲಿ ನಾನು ಚಿಕ್ಕ ವಯಸ್ಸಿನ ಮಹಿಳಾ ಸಹೋದ್ಯೋಗಿಯ ಜೊತೆ ಮಾತುಕತೆ ನಡೆಸುವ ಮುನ್ನ ಎರಡು ಬಾರಿ ಯೋಚನೆ ಮಾಡುತ್ತೇನೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಮೆರಿಕದ ಪ್ರತಿನಿಧಿಯೊಬ್ಬರು ಹೇಳಿದರು. ಈ ಮಾತುಕತೆ ವೇಳೆ ಹಾಜರಿದ್ದ ಇನ್ನೊಬ್ಬ ಪ್ರತಿನಿಧಿ, ‘ನಾನೂ ಎರಡು ಬಾರಿ ಆಲೋಚಿಸುವೆ’ ಎಂದು ಹೇಳಿದರು.

2017ರ ಕೊನೆಯಲ್ಲಿ ಮುನ್ನೆಲೆಗೆ ಬಂದ #ಮೀಟೂ ಚಳವಳಿ ಹಾಲಿವುಡ್‌, ಮಾಧ್ಯಮ, ರಾಜಕೀಯ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳ ದಿಗ್ಗಜರ ಬಣ್ಣ ಬಯಲು ಮಾಡಿತು. ಇಂತಹ #ಮೀಟೂ ಅಭಿಯಾನ 15 ತಿಂಗಳುಗಳ ನಂತರವೂ ಮಾರ್ದನಿಸುತ್ತಲೇ ಇದೆ. ಕೆಲಸದ ಸ್ಥಳಗಳಲ್ಲಿ ನಡೆಯುವ ಕಿರುಕುಳದ ವಿರುದ್ಧ ಮಹಿಳೆಯರು ದನಿ ಎತ್ತುವಂತೆ ಮಾಡಿದೆ.ಇದರ ಪರಿಣಾಮವಾಗಿ ಹಲವು ಪ್ರಭಾವಿ ವ್ಯಕ್ತಿಗಳು ಕೆಲಸ ಕಳೆದುಕೊಂಡಿದ್ದಾರೆ.

ಆದರೆ, ಈ ಅಭಿಯಾನವು ಒಂದು ಅನಪೇಕ್ಷಿತ ಪರಿಣಾಮ ಉಂಟುಮಾಡಿದೆ ಎಂಬುದನ್ನು ವಿಶ್ಲೇಷಕರು ಕಂಡುಕೊಂಡಿದ್ದಾರೆ. ಲೈಂಗಿಕ ಕಿರುಕುಳವು ಕೆಲಸದ ಸ್ಥಳಗಳಲ್ಲಿ ನಡೆಯುವುದನ್ನು ತಡೆಯುವ ಉದ್ದೇಶ ಹೊಂದಿರುವ ಕಂಪನಿಗಳು, ಹಿರಿಯ ಪುರುಷ ಅಧಿಕಾರಿಗಳು ಹಾಗೂ ಮಹಿಳಾ ಸಹೋದ್ಯೋಗಿಗಳ ನಡುವಣ ಸಂಪರ್ಕದ ಸಾಧ್ಯತೆಯನ್ನೇ ಕಡಿಮೆ ಮಾಡುತ್ತಿವೆ. ಇದರ ಪರಿಣಾಮವಾಗಿ ಮಹಿಳಾ ಉದ್ಯೋಗಿಗಳಿಗೆ ಉತ್ತಮ ಮಾರ್ಗದರ್ಶನ ಲಭ್ಯವಾಗದ ಸ್ಥಿತಿಯೂ ಉಂಟಾಗಿದೆ.
ಕೆಲಸದ ಸ್ಥಳಗಳಲ್ಲಿ #ಮೀಟೂ ಅಭಿಯಾನದಿಂದ ಆದ ಪರಿಣಾಮದ ಬಗ್ಗೆ ಎರಡು ಸಮೀಕ್ಷೆಗಳು ಕೆಲವಷ್ಟು ವಿಚಾರಗಳನ್ನು ಕಂಡುಕೊಂಡವು.

ಪುರುಷ ಅಧಿಕಾರಿಗಳಲ್ಲಿ ಅರ್ಧದಷ್ಟು ಜನ, ಮಹಿಳೆಯರ ಜೊತೆ ಕೆಲಸಕ್ಕೆ ಸಂಬಂಧಿಸಿದ ಒಡನಾಟ ಬೆಳೆಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ಆರು ಮಂದಿ ಪುರುಷ ಅಧಿಕಾರಿಗಳ ಪೈಕಿ ಒಬ್ಬ ಅಧಿಕಾರಿಗೆ, ಮಹಿಳಾ ಸಹೋದ್ಯೋಗಿಗೆ ಮಾರ್ಗದರ್ಶನ ನೀಡಲು ಮನಸ್ಸಿಲ್ಲ ಎಂಬುದನ್ನೂ ಅಮೆರಿಕದಲ್ಲಿ ನಡೆದ ಈ ಸಮೀಕ್ಷೆಗಳು ಕಂಡುಕೊಂಡಿವೆ.

‘ತರಬೇತಿ ಅಥವಾ ಮಾರ್ಗದರ್ಶನ ಪಡೆಯಲು ಬಂದಿರುವ ಮಹಿಳಾ ಸಹೋದ್ಯೋಗಿ ಜೊತೆ ಊಟಕ್ಕೆ ಹೋಗುವುದನ್ನು ತಾವು ಸಾಧ್ಯವಾದಷ್ಟರಮಟ್ಟಿಗೆ ತಪ್ಪಿಸಿಕೊಳ್ಳುವುದಾಗಿ ಬಹಳಷ್ಟು ಪುರುಷರು ನನ್ನ ಬಳಿ ಹೇಳಿದ್ದಾರೆ. ಹಾಗೆಯೇ, ಮಹಿಳೆಯೊಬ್ಬಳನ್ನು ಪುರುಷನೊಬ್ಬನ ಜೊತೆ ಕೆಲಸಕ್ಕೆ ತೊಡಗಿಸುವ ವಿಚಾರ ಕೂಡ ಅವರ ತಲೆತಿನ್ನುತ್ತಿದೆ’ ಎಂದು ಹೇಳುತ್ತಾರೆ ಪ್ಯಾಟ್ ಮಿಲಿಗನ್. ಇವರು ಮಹಿಳಾ ನಾಯಕತ್ವದ ವಿಚಾರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ‘ಹೀಗೇ ಮುಂದುವರಿಯಲು ಅವಕಾಶ ಮಾಡಿಕೊಟ್ಟರೆ ನಾವು ದಶಕಗಳಷ್ಟು ಹಿಂದಕ್ಕೆ ಹೋಗಿ ನಿಲ್ಲುತ್ತೇವೆ. ನಾಯಕತ್ವದ ಸ್ಥಾನಗಳಲ್ಲಿ ಇರುವವರು ಮಹಿಳೆಯರಿಗೆ ಉತ್ತೇಜನ ನೀಡಬೇಕು. ಹಾಗೆ ನಾಯಕತ್ವದ ಸ್ಥಾನಗಳಲ್ಲಿ ಇರುವ ಬಹುತೇಕರು ಪುರುಷರು’ ಎಂದು ಅವರು ಹೇಳಿದರು.

ಮಹಿಳೆಯರ ಜೊತೆ ಕೆಲಸ ತಪ್ಪಿಸಿಕೊಳ್ಳಲು ನೋಡುತ್ತಿರುವುದಾಗಿ ಪುರುಷರು ಹೇಳಿದರೆ, ‘ಹಾಗೆ ಮಾಡುವುದು ಕಾನೂನು ವಿರೋಧಿ’ ಎಂದು ಪ್ಯಾಟ್ ಕಟುವಾಗಿ ಉತ್ತರ ನೀಡುತ್ತಾರೆ. ‘ಸರಿಯಾದ ವರ್ತನೆಯ ಬಗ್ಗೆ ಮಾತನಾಡಬೇಕೇ ವಿನಾ, ಮಹಿಳೆಯರನ್ನು ದೂರ ಇಡುವ ಮಾತುಗಳನ್ನು ಆಡಬಾರದು’ ಎಂಬುದು ಅವರ ನಿಲುವು.

ಪುರುಷ ಉದ್ಯೋಗಿಗಳಲ್ಲಿ ಈ ರೀತಿ ಹೆದರಿಕೆ ಇರುವುದು ಹೊಸದೇನೂ ಅಲ್ಲ. ಮೂರನೆಯ ಎರಡರಷ್ಟು ಪುರುಷ ಅಧಿಕಾರಿಗಳು ತಮಗಿಂತ ತೀರಾ ಚಿಕ್ಕ ವಯಸ್ಸಿನ ಮಹಿಳಾ ಸಹೋದ್ಯೋಗಿಗಳ ಜೊತೆ ಒಬ್ಬರೇ ಮಾತುಕತೆ ನಡೆಸಲು, ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ ಎಂಬುದು ಆರ್ಥಿಕ ತಜ್ಞೆ ಸಿಲ್ವಿಯಾ ಆನ್‌ ಹ್ಯೂಲೆಟ್‌ ನಡೆಸಿದ ಸಂಶೋಧನೆಯಲ್ಲಿ ಗೊತ್ತಾಗಿತ್ತು. ಮಹಿಳಾ ಸಹೋದ್ಯೋಗಿಗಳು ತಮ್ಮ ಮಾತುಗಳನ್ನು ತಪ್ಪಾಗಿ ಭಾವಿಸಬಹುದು ಎಂಬುದು ಪುರುಷ ಅಧಿಕಾರಿಗಳಲ್ಲಿ ಇದ್ದ ಭಯ.

ತನ್ನ ಪತ್ನಿಯ ಹೊರತಾಗಿ ಬೇರೆ ಯಾವ ಮಹಿಳೆಯ ಜೊತೆಗೂ ಒಬ್ಬನೇ ಊಟಕ್ಕೆ ಹೋಗುವುದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದರು. ಇದು ‘ಪೆನ್ಸ್ ಸೂತ್ರ’ ಎಂದೇ ಜನಪ್ರಿಯವಾಗಿದೆ!

ಮಹಿಳಾ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ಮಾಡಲು ಪುರುಷ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಮಾತ್ರವಲ್ಲದೆ, ಲಿಂಗ ಸಮಾನತೆ ಕಡಿಮೆ ಆಗುತ್ತಿರುವ ಕೆಲವು ಸೂಚನೆಗಳು ಇವೆ. ಆದರೆ ಈ ಸೂಚನೆಗಳಿಗೂ #ಮೀಟೂ ಅಭಿಯಾನಕ್ಕೂ ಸಂಬಂಧ ಕಲ್ಪಿಸುವುದು ಕಷ್ಟದ ಕೆಲಸ. ಶೈಕ್ಷಣಿಕ ಅವಕಾಶಗಳು, ಜೀವಿತಾವಧಿ, ವೇತನದಲ್ಲಿ ಸಮಾನತೆ ಹಾಗೂ ಇತರ ಕೆಲವು ಅಂಶಗಳನ್ನು ಆಧರಿಸಿ ಡಿಸೆಂಬರ್‌ನಲ್ಲಿ ಸಿದ್ಧಪಡಿಸಿದ ವರದಿಯಲ್ಲಿ ವಿಶ್ವ ಆರ್ಥಿಕ ವೇದಿಕೆಯು ‘ಕೆಲಸದ ಸ್ಥಳಗಳಲ್ಲಿ ಲಿಂಗ ಸಮಾನತೆ ಸಾಕಾರಗೊಳ್ಳಲು ಇನ್ನೂ 202 ವರ್ಷ ಬೇಕು’ ಎಂದು ಅಂದಾಜಿಸಿದೆ. ಲಿಂಗ ಸಮಾನತೆ ಬರಲು 170 ವರ್ಷಗಳು ಬೇಕಾಗಬಹುದು ಎಂದು 2016ರಲ್ಲಿ ಅಂದಾಜು ಮಾಡಲಾಗಿತ್ತು.

ಫಾರ್ಚ್ಯೂನ್ 500 ಪಟ್ಟಿಯಲ್ಲಿ ಇರುವ ಕಂಪನಿಗಳ ಪೈಕಿ 2018ರಲ್ಲಿ 24 ಕಂಪನಿಗಳಲ್ಲಿ ಮಾತ್ರ ಮಹಿಳಾ ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು. ಅದಕ್ಕೂ ಹಿಂದಿನ ವರ್ಷದಲ್ಲಿ 32 ಕಂಪನಿಗಳಲ್ಲಿ ಮಹಿಳಾ ಕಾರ್ಯನಿರ್ವಾಹಕ ಅಧಿಕಾರಿಗಳಿದ್ದರು.

ಕಂಪನಿಗಳಲ್ಲಿ ಲೈಂಗಿಕ ಕಿರುಕುಳದ ಅಪಾಯವನ್ನು ಅಂದಾಜಿಸುವುದು ಮತ್ತು ಮಹಿಳೆಯರಿಗೆ ಕಿರುಕುಳ ನೀಡುವ ಪುರುಷರನ್ನು ಗುರುತಿಸುವುದು ಒಂದು ಸವಾಲು. ಸಿಬ್ಬಂದಿಯ ಸಮೀಕ್ಷೆ ಮಾಡುವಂತಹ ಸಾಂಪ್ರದಾಯಿಕ ವಿಧಾನಗಳು ಪರಿಣಾಮಕಾರಿ ಅಲ್ಲ,ಈ ಕೆಲಸಕ್ಕೆ ತಂತ್ರಜ್ಞಾನದ ನೆರವು ಪಡೆಯಬೇಕು ಎಂದು ಪ್ಯಾಟ್ ಹೇಳುತ್ತಾರೆ. ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುವ ಪುರುಷರನ್ನು ಗುರುತಿಸಿದ ನಂತರ ಕಂಪನಿಗಳು, ಆ ಪುರುಷರು ತಮಗೆ ಅರಿವಿಲ್ಲದೆಯೇ ಆ ರೀತಿ ಮಾಡುತ್ತಿದ್ದಾರೆಯೇ ಅಥವಾ ಅವರು ನಿಜಕ್ಕೂ ಕ್ರಿಮಿನಲ್‌ಗಳೇ ಎಂಬುದನ್ನು ಗುರುತಿಸಬೇಕು.

‘ತಮಗೆ ಅರಿವಿಲ್ಲದೆಯೇ ಇಂತಹ ಕೆಲಸ ಮಾಡುವವರಿಗೆ ಮಾರ್ಗದರ್ಶನ ನೀಡಿ, ಹಾಗೆ ಮಾಡದಂತೆ ಹೇಳಬಹುದು. ಆದರೆ, ಮಾರ್ಗದರ್ಶನ ನೀಡದೇ ಇದ್ದರೆ ಅಂತಹ ವ್ಯಕ್ತಿ ಮಹಿಳೆಯರಲ್ಲಿ ಭೀತಿ ಮೂಡಿಸುವವ ಆಗಬಲ್ಲ’ ಎಂದು ಪ್ಯಾಟ್ ಹೇಳುತ್ತಾರೆ. ದುರ್ವರ್ತನೆಯನ್ನು ಸ್ವಲ್ಪವೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ ನೀಡುವುದು ಬಹುಮುಖ್ಯವಾದುದು ಎನ್ನುತ್ತಾರೆ ಪ್ರಾಕ್ಟರ್ ಅಂಡ್ ಗ್ಯಾಂಬಲ್ ಕಂಪನಿಯ ಅಧಿಕಾರಿ ಮಾರ್ಕ್‌ ಪ್ರಿಚರ್ಡ್.

ಯಾವ ರೀತಿಯ ವರ್ತನೆ ಕೆಟ್ಟದ್ದು ಎಂದು ಪರಿಗಣಿತವಾಗಬಹುದು ಎಂಬ ವಿಚಾರದಲ್ಲಿ ತಮ್ಮಲ್ಲಿರುವ ಗೊಂದಲ ಹೇಳಿಕೊಳ್ಳಲು ಪುರುಷರಿಗೆ ಕೂಡ ಒಂದು ಅವಕಾಶ ಬೇಕು ಎಂದು ಅವರು ಅಭಿಪ್ರಾಯಪಡುತ್ತಾರೆ.ಕೆಲಸದ ಸ್ಥಳಗಳಲ್ಲಿ ಸಮಾನತೆ ಸಾಧಿಸುವ ಉದ್ದೇಶದ ಫೀಮೇಲ್ ಕೋಷೆಂಟ್ ಕಂಪನಿಯ ಶೆಲ್ಲಿ ಅವರು ಒಂದು ಕಿವಿಮಾತು ಹೇಳುತ್ತಾರೆ. ‘ಪುರುಷನೊಬ್ಬ ಹೇಳಿದ್ದು ಅಪರಾಧ ಎನ್ನುವ ಮೊದಲು, ಆತನ ಮಾತುಗಳು ನಿಮಗೆ ಸರಿಕಾಣುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿ. ಏಕೆಂದರೆ, ಆ ಪುರುಷ ಹಾಗೆ ಮಾತನಾಡಿದ್ದು ಉದ್ದೇಶಪೂರ್ವಕ ಅಲ್ಲದಿರಬಹುದು’ ಎಂಬುದು ಅವರ ಮಾತು.

–ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT