ನಮ್ಮ ಆಯುಷ್ಯದ ಒಂದು ವರ್ಷ ಮುಗಿದು ಮತ್ತೊಂದು ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಈ ಒಂದು ವರ್ಷದ ಅವಧಿಯಲ್ಲಿ ಎಷ್ಟೊಂದು ಸಂಬಂಧಗಳಲ್ಲಿ ಬಿರುಕುಗಳು ಮೂಡಿವೆ ಮತ್ತು ಎಷ್ಟೊಂದು ಹೊಸ ಸಂಬಂಧಗಳು ಬೆಸೆದುಕೊಂಡಿವೆ! ಈ ಹೊಸ ಬೆಸುಗೆಗಳಲ್ಲಿ ಎಷ್ಟು ಸಂಬಂಧಗಳು ಕೊನೆತನಕ ಉಳಿಯುತ್ತವೋ ಮತ್ತು ಎಷ್ಟು ಸಂಬಂಧಗಳಲ್ಲಿ ಹೊಸ ಬಿರುಕುಗಳು ಮೂಡುತ್ತವೋ ತಿಳಿಯದು.

ಪ್ರತಿ ಸಂಬಂಧವನ್ನೂ ಜತನದಿಂದ ಕಾಪಾಡಿಕೊಳ್ಳಬೇಕೆಂಬ ನಮ್ಮ ಕಾಳಜಿಯ ಹೊರತಾಗಿಯೂ ಸಂಬಂಧಗಳು ಅದೇಕೆ ಹಳಸುತ್ತವೆ? ಅದಕ್ಕೆ ಕಾರಣವಿಲ್ಲದಿಲ್ಲ. ನಮ್ಮ ಬಹುತೇಕ ಸಂಬಂಧಗಳು ಪೈಪೋಟಿಯ ಜಗತ್ತಿನ ಪ್ರಭಾವದಡಿಯಲ್ಲಿ ಸಿಲುಕಿವೆ. ಇಂತಹ ಸಂಬಂಧಗಳು ಪ್ರಾರಂಭದಿಂದಲೇ ಒಂದು ಅಗೋಚರ ಬಿರುಕನ್ನು ಅಂತರ್ಗತ ಆಗಿಸಿಕೊಂಡಿರುತ್ತವೆ. ವಿಚಿತ್ರವೆಂದರೆ, ನಮ್ಮ ಪ್ರೀತಿಪಾತ್ರರಿಗೆ ನೀಡಬೇಕೆಂಬ ಔದಾರ್ಯದೊಳಗೂ ಆತ್ಮಸುಖಾಪೇಕ್ಷೆಯೇ ಮಡುಗಟ್ಟಿರುತ್ತದೆ.

ಷಣ್ಮುಖನು ವಿಶ್ವ ಪರ್ಯಟನೆಗೆ ಹೊರಟಾಗ ಗಣೇಶ ತಾಯ್ತಂದೆಗೇ ಪ್ರದಕ್ಷಿಣೆ ಹಾಕಿದ ಪ್ರಸಿದ್ಧ ಪೌರಾಣಿಕ ಕಥೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ. ಪ್ರಾರಂಭದಿಂದಲೇ ಮೊಬೈಲ್ ಫೋನ್ ಬಳಕೆಯ ಕೌಶಲವನ್ನು ಆರ್ಜಿಸಿಕೊಳ್ಳುವ ಇಂದಿನ ಮಕ್ಕಳಿಗೆ ಮನೆಯಾಗಲಿ, ತಾಯ್ತಂದೆಯಾಗಲಿ ಮೊದಲ ಪಾಠಶಾಲೆಯಾಗಿ ಮತ್ತು ಮೊದಲ ಗುರುಗಳಾಗಿ ಕಾಣಿಸುವುದಿಲ್ಲ. ಸಹಜವಾಗಿಯೇ ಇಂದಿನ ಪೀಳಿಗೆಗೆ ತಾಯ್ತಂದೆಯೊಂದಿಗೆ ಭಾವನಾತ್ಮಕ ಸಂಬಂಧ, ಅವಲಂಬನೆ ಏರ್ಪಡುವುದಿಲ್ಲ. ಈ ಪೈಪೋಟಿಯ ಜಗತ್ತಿನಲ್ಲಿ ತಮ್ಮ ಮಕ್ಕಳು ಮುಂಚೂಣಿಯಲ್ಲಿದ್ದರೆ ಸಾಕೆಂದು ಹಪಹಪಿಸುವ ತಾಯ್ತಂದೆಗೂ ಇವೆಲ್ಲ ಬೇಕಿಲ್ಲ.

ಹಿಂದೆಲ್ಲ ಮನೆಗೆ ಯಾರಾದರೂ ನೆಂಟರು ಬಂದಾಗ ಮಕ್ಕಳು ಸಂಕೋಚದಿಂದ ಮೂಲೆ ಸೇರುತ್ತಿದ್ದರು. ಆಗ ಮನೆಯ ಹಿರಿಯರು ‘ಮುಖೇಡಿತನ ತೋರಿಸಬಾರದು’ ಎಂದು ಗದರಿಸಿ, ಅತಿಥಿಗಳೊಂದಿಗೆ ಹೇಗೆ ವರ್ತಿಸಬೇಕೆಂಬ ಪಾಠ ಕಲಿಸುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಮುಖೇಡಿತನವೇ ಒಂದು ಮೌಲ್ಯವಾಗಿಬಿಟ್ಟಿದೆ. ಎಕ್ಸ್, ಫೇಸ್ಬುಕ್ನಂತಹ ಮುಖಹೀನ ಸಾಮಾಜಿಕ ಪ್ಲ್ಯಾಟ್ಫಾರಂಗಳಿಂದ ಸ್ನೇಹದ ವ್ಯಾಪ್ತಿ ವಿಸ್ತರಿಸಿದೆಯಾದರೂ ಸ್ನೇಹದ ಗಹನತೆ ಮತ್ತು ಮಾನವೀಯ ಸ್ಪಂದನಗಳು ಕ್ಷೀಣಿಸಿವೆ. ಪರದೆಯ ಮೇಲೆ ಸಂವಹಿಸುವಾಗ ವ್ಯಕ್ತವಾಗುವ ಉತ್ಸಾಹವು ಪರದೆ ಸರಿದು, ಮುಖ ಕೊಟ್ಟು ಮಾತನಾಡುವಾಗ ಕಾಣಿಸದಾಗಿದೆ. ಫೇಸ್ಬುಕ್ ಸ್ನೇಹಿತರು ಎದುರಿಗೆ ಸಿಕ್ಕಾಗ ಪರಿಚಯವೇ ಇಲ್ಲದಂತೆ ವರ್ತಿಸುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ. ಇಂತಹ ಭಾವಶೂನ್ಯ ಸ್ನೇಹ ಸಂಬಂಧ ಮನುಷ್ಯರ ನಡುವಿನ ಬಾಂಧವ್ಯವನ್ನು ದುರ್ಬಲಗೊಳಿಸುತ್ತದೆ. ಮನುಷ್ಯರನ್ನು ಕ್ರಮೇಣ ಏಕಾಕಿಗಳನ್ನಾಗಿಸುತ್ತದೆ.

ಇವೆಲ್ಲದರ ಪರಿಣಾಮವಾಗಿ, ಇಂದು ನಗರಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಬಹುತೇಕ ಹಳ್ಳಿಗಳು ಬರೀ ವೃದ್ಧರು ವಾಸಿಸುವ ವಸತಿ ಪ್ರದೇಶಗಳಾಗಿ ಮಾರ್ಪಟ್ಟಿವೆ. ಇಂದು ಕೌಟುಂಬಿಕ ನ್ಯಾಯಾಲಯಗಳ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವೊಂದರಲ್ಲೇ ಮೂರೂವರೆ ಲಕ್ಷಕ್ಕೂ ಅಧಿಕ ವಿಚ್ಛೇದನ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ ಮೂವತ್ತಕ್ಕೂ ಅಧಿಕ ಸಂಖ್ಯೆಯ ಕೌಟುಂಬಿಕ ನ್ಯಾಯಾಲಯಗಳು ಸ್ಥಾಪನೆಯಾಗಿದ್ದು, ಅಲ್ಲಿ ಪ್ರತಿನಿತ್ಯ 60ರಿಂದ 70 ಪ್ರಕರಣಗಳನ್ನು ನಿರ್ವಹಿಸಲಾಗುತ್ತಿದೆ ಎಂದು ವರದಿಗಳು ಹೇಳುತ್ತವೆ.

ಆಧುನಿಕ ಸೌಲಭ್ಯಗಳು ಎಲ್ಲವೂ ನಮ್ಮ ಕೈಗೆಟಕುವಂತೆ ಮಾಡಿವೆ ನಿಜ; ಆದರೆ, ಮತ್ತೊಂದೆಡೆ ಎಲ್ಲವೂ ನಮ್ಮ ಸೇವೆಗೆ ನಿಲ್ಲಲಿ ಎಂಬ ರಾಕ್ಷಸ ಪ್ರಲೋಭನೆಯನ್ನು ಉದ್ದೀಪಿಸಿವೆ. ಪ್ರಲೋಭನೆಗಳು ನಮ್ಮ ಸುಖಾಕಾಂಕ್ಷೆಯನ್ನು ಹೆಚ್ಚಿಸುತ್ತವೆಯೇ ವಿನಾ ಸುಖ ಸಂವೇದನೆಯನ್ನಲ್ಲ.

‘ಸ್ವಲ್ಪ ವರ್ಷ ಕಾದಿದ್ದರೆ ಇನ್ನೂ ಉತ್ಕೃಷ್ಟ ಮೊಬೈಲನ್ನು, ಕಾರನ್ನು ಮತ್ತು ಹೆಂಡತಿಯನ್ನು ಸಂಪಾದಿಸಬಹುದಿತ್ತು’ ಎಂಬ ಅರ್ಥದ ಹಾಸ್ಯಚಟಾಕಿಗಳು ದೈನಂದಿನ ವಾಟ್ಸ್ಆ್ಯಪ್ನಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಹೀನ ಅಭಿರುಚಿಯನ್ನು ಬೆಳೆಸಿಕೊಂಡವರಿಗೆ ಮಾತ್ರ, ಅಂದರೆ ಪ್ರತಿಯೊಂದನ್ನೂ ಉಪಭೋಗದ ವಸ್ತುವನ್ನಾಗಿ ಕಾಣುವ ಒಂದು ಮನಃಸ್ಥಿತಿಗಷ್ಟೇ ಇಂತಹ ಚಟಾಕಿಗಳಲ್ಲಿ ಹಾಸ್ಯರಸವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಸುಖಸಂಪತ್ತು ಹೆಚ್ಚಾದಾಗ ವ್ಯಕ್ತಿಗೆ ಸಲ್ಲಬೇಕಾದ ಮೌಲ್ಯ ವಸ್ತುವಿಗೂ ವಸ್ತುವಿಗೆ ಸಲ್ಲಬೇಕಾದ ಮೌಲ್ಯ ವ್ಯಕ್ತಿಗೂ ಸಲ್ಲುತ್ತದೆ.

ನಮ್ಮ ಯುವಕರು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಇನ್ಫೊಸಿಸ್ ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ನೀಡಿದ್ದ ಸಲಹೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಇಂತಹ ಆಲೋಚನೆ ಬರೀ ಅವರಲ್ಲಷ್ಟೇ ಮೂಡಿಲ್ಲ. ಇನ್ನೂ ಕೆಲವು ಉದ್ಯಮಿಗಳು ಈ ದಿಸೆಯಲ್ಲಿ ಆಲೋಚಿಸಿದ್ದಾರೆ ಮತ್ತು ನಾರಾಯಣಮೂರ್ತಿ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಇವರು ಪ್ರಧಾನಿ ನರೇಂದ್ರ ಮೋದಿ ಅಂತಹವರನ್ನು ಉದಾಹರಿಸಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ. ಇಂಥವರ ವಾದದಲ್ಲಿ, ದೇಶದ ಉತ್ಪಾದಕತೆ ಹೆಚ್ಚಬೇಕು, ಹೊಸ ಅವಕಾಶಗಳು ಸೃಷ್ಟಿಯಾಗಬೇಕು, ವಿಶ್ವಸಮುದಾಯದ ಎದುರು ನಾವು ಹೆಮ್ಮೆಯಿಂದ ತಲೆ ಎತ್ತಬೇಕು ಎಂಬಂತಹ ಸದಾಶಯ ಇರಬಹುದು. ಆದರೆ ಸದಾಶಯ ಸತ್ಪರಿಣಾಮವಾಗಿಯೇ ಫಲಿಸುತ್ತದೆ ಎಂದೇನೂ ಖಾತರಿ ಇಲ್ಲ. ಹಾಗೆ ಎಪ್ಪತ್ತು ಗಂಟೆ ಕೆಲಸ ಮಾಡುವವರು ಆರೋಗ್ಯವನ್ನು ಹದಗೆಡಿಸಿಕೊಳ್ಳುವುದರ ಜೊತೆಗೆ, ಮೇಲೆ ಉಲ್ಲೇಖಿಸಿದಂತೆ ಕೌಟುಂಬಿಕ ಸಂಬಂಧಗಳಿಂದ ವಂಚಿತರಾಗುತ್ತಿದ್ದಾರೆ. ಒಂದು ‘ಆದರ್ಶ’ವನ್ನು ಒಂದು ಇಡೀ ತಲೆಮಾರಿನ ಮೇಲೆ ಹೇರಲು ಹೊರಟಾಗ ಅದರಿಂದ ಹಾನಿಯೂ ಆಗುವುದಿದೆ. ಇಂತಹ ಆಲೋಚನೆಗಳ ಬಗ್ಗೆ ಮರುಮಾತನಾಡದೆ ಮೂಕ ಎತ್ತುಗಳಂತೆ ದುಡಿಯುತ್ತಿರುವ ದೊಡ್ಡ ವರ್ಗವೂ ಇದೆ.

ನಾವಿಂದು ಯಾವ ಪ್ರಲೋಭನಾಜನ್ಯ ಜೀವನ ಕ್ರಮವನ್ನು, ಅದರ ಪರಿಣಾಮವಾಗಿ ಕೌಟುಂಬಿಕ ವಿಘಟನೆಯನ್ನು ಅನುಭವಿಸುತ್ತಿರುವೆವೋ ಅದನ್ನು ಟಾಲ್ಸ್ಟಾಯ್ ಇನ್ನೂರು ವರ್ಷಗಳಷ್ಟು ಹಿಂದೆಯೇ ಕಂಡರಿತಿದ್ದರು. ಸಾವಿರಾರು ಎಕರೆ ಭೂಮಾಲೀಕತ್ವ ಹೊಂದಿದ್ದ ಅವರು, ಸಂಬಂಧ ನಾಶಕ್ಕೆ ಸಂಪತ್ತೇ ಕಾರಣವೆಂದು ಮನಗಂಡು, ಭೂಮಿಯನ್ನು ಉಳುವವರಿಗೇ ಕೊಟ್ಟು ತಾವೂ ಉಳುವವರೊಂದಿಗೆ ದುಡಿಮೆ ಮಾಡಲು ಸಂಕಲ್ಪಿಸಿದ್ದರು.

‘ಕಾರ್ಪೊರೇಟ್ ಆಧ್ಯಾತ್ಮಿಕತೆ’ಯ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವಿಂದು ರೈತರ ಭೂಮಿಯನ್ನು ಕಬಳಿಸಿ ಐಷಾರಾಮಿ ಆಶ್ರಮಗಳನ್ನು ಕಟ್ಟುವುದು ಧಾರ್ಮಿಕತೆಯೋ ಅಥವಾ ಭೂಮಿಯನ್ನು ಉಳುವವರಿಗೇ ಬಿಟ್ಟುಕೊಟ್ಟು ಅವರೊಂದಿಗೆ ಸಹಬಾಳ್ವೆ ಮಾಡುವುದು ಧಾರ್ಮಿಕತೆಯೋ ಎಂದು ವಿವೇಚಿಸಿಕೊಳ್ಳಬೇಕಾಗಿದೆ. ಮದುವೆ, ಗೃಹಪ್ರವೇಶಗಳಲ್ಲಿ ಮಾಡಬೇಕಾದ ಅತಿಥಿ ಸತ್ಕಾರ, ಅಂತರಂಗಕ್ಕೆ ಸಾಂತ್ವನ ನೀಡಬೇಕಾದ ಅಧ್ಯಾತ್ಮ, ರಿಯಾಲಿಟಿ ಷೋ ಹೆಸರಿನಲ್ಲಿ ಪ್ರದರ್ಶಿಸಲಾಗುವ ಕಲೆ, ಸಂಗೀತ, ಭಾವುಕತೆ, ಖಾಸಗಿ ಬದುಕು ಎಲ್ಲವೂ ಇಂದು ಲಾಭಕರ ವ್ಯಾಪಾರೋದ್ಯಮವಾಗಿ ಪರಿಣಮಿಸಿವೆ, ಕೌಟುಂಬಿಕ ಮೌಲ್ಯಗಳು ಅಂಚಿಗೆ ಸರಿದಿವೆ.

ಗಂಡಾಗಲಿ, ಹೆಣ್ಣಾಗಲಿ ಸುಖ ಸಂಪತ್ತು, ಲಾಭ ಗಳಿಕೆಯ ಸೆಳೆತಕ್ಕೆ ಒಳಗಾಗುವುದು ಪ್ರಕೃತಿ ಸ್ವಭಾವ. ಆದರೆ ಬೇಂದ್ರೆ ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು’ ಎಂದು ಹಾಡಿದಾಗ ಅದು ಈ ಸ್ವಾಭಾವಿಕ ಸೆಳೆತಕ್ಕೆ, ಈ ಲಾಭಕೋರತನದ ಬದುಕಿಗೆ ವ್ಯತಿರಿಕ್ತವಾದ ದಿಕ್ಕಿನಲ್ಲಿ ಹೊರಟಂತೆ, ದಾಂಪತ್ಯದ ತಪಸ್ಸಾಧನೆಯಂತೆ ಧ್ವನಿಸುತ್ತದೆ. ಈ ಆಧುನಿಕತೆಯು ಹಣ, ಅಧಿಕಾರಕ್ಕಿಂತ ಒಲವು ಮುಖ್ಯವೆಂಬ ಸರಳವಾದ ಸಂಗತಿಯನ್ನೇ ನಮ್ಮಿಂದ ಮರೆಮಾಚಿರುವುದು ದುರದೃಷ್ಟಕರ.

ಬರ್ಟ್ರಂಡ್ ರಸೆಲ್ ತಮ್ಮ ಒಂದು ಕೃತಿಯಲ್ಲಿ ‘ಬದುಕಿನ ಶಾಶ್ವತತೆಯ ಧ್ಯಾನವನ್ನು ಕಾಪಾಡಿಕೊಳ್ಳದ ಮನುಷ್ಯನ ಬದುಕು, ತಿಂದು ಕೊಬ್ಬಿದ ಹಂದಿಯ ಬದುಕಿಗಿಂತ ಹೆಚ್ಚಿನದ್ದಲ್ಲ’ ಎಂಬ ಸಾಲುಗಳನ್ನು ಬರೆದಿದ್ದಾರೆ. ಆಧುನಿಕ ಐಷಾರಾಮದಿಂದ ಸೃಷ್ಟಿಯಾಗಿರುವ ಕೊಬ್ಬನ್ನು ಕರಗಿಸಿಕೊಂಡು ಹಗುರವಾಗದ ವಿನಾ ಸಂಬಂಧಗಳ ಬೆಲೆಯನ್ನು ತಿಳಿಯಲಾಗದು. ಆ ಹಗುರತನವನ್ನೇ ಬೇಂದ್ರೆ ‘ಬಡತನ’ ಎಂದು ಕರೆದಿರುವುದು. ಆಲ್ಫ್ರೆಡ್ ಷೂಮಾಕರ್ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಎಂದು ಉದ್ಗರಿಸಿದ್ದು. ಮತ್ತೇನನ್ನೂ ಸಂಪಾದಿಸದೇ ಇರುವುದನ್ನು ಕರಗಿಸಿಕೊಂಡು ಹಗುರವಾಗಬೇಕೆಂಬ, ಅರ್ಥಪೂರ್ಣ ಸಂಬಂಧಗಳ ಬೆಸುಗೆಯಿಂದ ಬದುಕನ್ನು ಕೃತಾರ್ಥವಾಗಿಸಿಕೊಂಡರೆ ಸಾಕೆಂಬ ಹಂಬಲವೇ ಆಧುನಿಕ ಸೌಲಭ್ಯಗಳ ಪರಾಕಾಷ್ಠೆಯಲ್ಲಿ ನಿಂತಿರುವ ನಮ್ಮ ಹೊಸ ವರ್ಷದ ಸಂಕಲ್ಪವಾಗಬೇಕಿದೆ.

ಲೇಖಕ: ಸಹ ಪ್ರಾಧ್ಯಾಪಕ, ಆದಿಚುಂಚನಗಿರಿ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.