ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಮಾರುಕಟ್ಟೆ ಕೃಷಿ ಸಂಕಟಕ್ಕೆ ಕೊಡದು ಮುಕ್ತಿ

Last Updated 12 ಸೆಪ್ಟೆಂಬರ್ 2021, 19:41 IST
ಅಕ್ಷರ ಗಾತ್ರ

ಭಾರತವು ಆರ್ಥಿಕ ಸುಧಾರಣೆಗಳ 30ನೇ ವರ್ಷವನ್ನು ಸಂಭ್ರಮಿಸುವ ಈ ಹೊತ್ತಿನಲ್ಲಿಯೂ ಕೃಷಿ ವಲಯದ ಕಡೆಗಣನೆ ಮುಂದುವರಿದಿದೆ. ಗಮನ ಹರಿಸಿ ಎಂದು ಈ ವಲಯವು ಬೇಡುತ್ತಲೇ ಇದೆ. ಎದೆತಟ್ಟಿ ಹೆಮ್ಮೆ ಪಡುವ ಆರ್ಥಿಕ ಸುಧಾರಣೆಗಳ ಮೂಲ ಪ್ರತಿಪಾದಕರುಈ ವಿಚಾರವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರು. ಪ್ರಗತಿಯ ಎರಡನೇ ಎಂಜಿನ್‌ ಆಗಿ ಕೃಷಿಯನ್ನು ಪರಿವರ್ತಿಸಿಕೊಳ್ಳುವ ಅವಕಾಶವನ್ನು ಈ ಪ್ರಕ್ರಿಯೆಯಲ್ಲಿ ದೇಶವು ಕಳೆದುಕೊಂಡಿತು.

2016ರ ಆರ್ಥಿಕ ಸಮೀಕ್ಷೆಯು ಕಟು ವಾಸ್ತವ ಏನು ಎಂಬುದನ್ನು ಬಿಚ್ಚಿಟ್ಟಿದೆ. ಭಾರತದ 17 ರಾಜ್ಯಗಳ ರೈತರ ಸರಾಸರಿ ಆದಾಯವು ವರ್ಷಕ್ಕೆ ಕೇವಲ ₹20 ಸಾವಿರ. ಅಂದರೆ ದೇಶದ ಅರ್ಧ ಭಾಗದಷ್ಟು ಪ್ರದೇಶಗಳ ರೈತರು ತಿಂಗಳಿಗೆ ಬರೇ 1,700 ರೂಪಾಯಿಯಲ್ಲಿ ಜೀವನ ಸಾಗಿಸಬೇಕಿದೆ. 2011–12 ಮತ್ತು 2015–16ರ ಅವಧಿಯಲ್ಲಿ ಕೃಷಿ ಆದಾಯ ಏರಿಕೆಯು ಅರ್ಧ ಶೇಕಡಕ್ಕಿಂತಲೂ ಕಡಿಮೆ ಎಂದು ನೀತಿ ಆಯೋಗವೇ ಒಪ್ಪಿಕೊಂಡಿದೆ. ನಿಖರವಾಗಿ ಹೇಳುವುದಾದರೆ, ಬೆಳವಣಿಗೆಯ ದರವು ಶೇ 0.44ರಷ್ಟು. ಮುಂದಿನ ಎರಡು ವರ್ಷಗಳಲ್ಲಿ ದಾಖಲಾದ ಕೃಷಿ ಆದಾಯದ ಏರಿಕೆಯು ಸೊನ್ನೆಯ ಹತ್ತಿರವೇ ಇತ್ತು.

ಬೇಸಾಯ ವಲಯದ ಆದಾಯದ ದರವು ಮೂರು ದಶಕಗಳಲ್ಲಿ ಇಳಿಕೆಯಾಗಿದೆ ಅಥವಾ ಸ್ಥಗಿತವಾಗಿಯೇ ಉಳಿದಿದೆ. ಹೊಲದಿಂದ ಬರುವ ಆದಾಯವು ಕಡಿಮೆಯಾಗಲು ಕಾರಣ ಕೃಷಿಯು ಅನುತ್ಪಾದಕವಾಗಿದ್ದು ಅಥವಾ ಅದಕ್ಷವಾಗಿದ್ದು ಅಲ್ಲ. ಆರ್ಥಿಕ ಸುಧಾರಣೆಗಳನ್ನು ಕಾರ್ಯಸಾಧು ಎಂಬ ಸ್ಥಿತಿಯಲ್ಲಿ ಉಳಿಸುವುದಕ್ಕಾಗಿ ನಗರದೆಡೆಗಿನ ಭಾರಿ ವಲಸೆಯನ್ನು ಅವಲಂಬಿಸಿದ ಆರ್ಥಿಕ ಸುಧಾರಣೆ ವಿನ್ಯಾಸವು ಕೃಷಿಯ ಹಿನ್ನಡೆಗೆ ಒಂದು ಕಾರಣ. ಹಲವು ಬಾರಿ ನಾನು ಹೇಳಿರುವಂತೆ, ರೈತರು ಕೃಷಿಯನ್ನು ತೊರೆದು ನಗರಗಳತ್ತ ಹೋಗುವಂತೆ ಮಾಡುವುದಕ್ಕಾಗಿಯೇ ಬೇಸಾಯವನ್ನು ಬಡಕಲು ಕ್ಷೇತ್ರವಾಗಿ ಉದ್ದೇಶಪೂರ್ವಕಾಗಿಯೇ ಉಳಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೂಲಿಯ ಮೊತ್ತವನ್ನು ಕಡಿಮೆಯಾಗಿಯೇ ಇರಿಸುವ ಮೂಲಕ ನಗರಗಳತ್ತ ವಲಸೆಯನ್ನು ಹೆಚ್ಚಿಸಬೇಕಿದೆ ಎಂದು ಹಿರಿಯ ಆರ್ಥಿಕ ಸಲಹೆಗಾರರೊಬ್ಬರು ಇತ್ತೀಚೆಗೆ ಹೇಳಿದ್ದರು.

ಕೃಷಿ ಕ್ಷೇತ್ರದ ಸಂಕಷ್ಟವು ಕಳೆದ ಹಲವು ವರ್ಷಗಳಿಂದ ಹೆಚ್ಚುತ್ತಲೇ ಹೋಗಿದೆ. ಎಂದೂ ನಿಲ್ಲದ ರೈತರ ಆತ್ಮಹತ್ಯೆ ಪ್ರಕರಣಗಳು ಬೇಸಾಯ ವಲಯದ ಬಿಕ್ಕಟ್ಟು ಎಷ್ಟು ತೀವ್ರವಾಗಿದೆ ಎಂಬುದರ ಪ್ರತಿಫಲನವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿಯ ಪ್ರಕಾರ, ಕಳೆದ 25 ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು ಮತ್ತು ಕೃಷಿ ಕಾರ್ಮಿಕರ ಸಂಖ್ಯೆಯು 3.5 ಲಕ್ಷಕ್ಕೂ ಹೆಚ್ಚು. ದೇಶದ ಆಹಾರ ಕಣಜ ಎಂದೇ ಹೇಳಲಾಗುವ ಪಂಜಾಬ್‌ನಲ್ಲಿ ಕೂಡ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇಲ್ಲ. 2000ದಿಂದ 2015ರೊಳಗಿನ 15 ವರ್ಷಗಳಲ್ಲಿ 16,600 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪಂಜಾಬ್‌ನಲ್ಲಿ ನಡೆದ ಮನೆ ಮನೆ ಸಮೀಕ್ಷೆಯಿಂದ ತಿಳಿದು ಬಂದಿದೆ. ಪಂಜಾಬ್‌ ಕೃಷಿ ವಿಶ್ವವಿದ್ಯಾಲಯ, ಲುಧಿಯಾನ, ಪಂಜಾಬ್‌ ವಿಶ್ವವಿದ್ಯಾಲಯ, ಪಟಿಯಾಲ ಮತ್ತು ಗುರುನಾನಕ್‌ ದೇವ್‌ ವಿಶ್ವವಿದ್ಯಾಲಯ, ಅಮೃತಸರ ಜಂಟಿಯಾಗಿ ಈ ಸಮೀಕ್ಷೆಯನ್ನು ನಡೆಸಿದ್ದವು.

ಇಷ್ಟೆಲ್ಲ ಆರ್ಥಿಕ ಸಂಕಷ್ಟಗಳ ನಡುವೆಯೂ ಭಾರತದ ರೈತರು ಭಾರಿ ಫಸಲು ತೆಗೆಯುವುದಕ್ಕಾಗಿ ಪ್ರತಿ ವರ್ಷವೂ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ದೇಶದ ಆಹಾರ ದಾಸ್ತಾನು ತುಂಬಿ ತುಳುಕುತ್ತಿದೆ. ಈಗ, 10 ಕೋಟಿ ಟನ್‌ ಆಹಾರ ಧಾನ್ಯಗಳ ಹೆಚ್ಚುವರಿ ದಾಸ್ತಾನು ಇದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ 80 ಕೋಟಿ ಜನರಿಗೆ ಮಿತದರದಲ್ಲಿ ಪಡಿತರ ಒದಗಿಸಲು ಇದರಿಂದ ಸಾಧ್ಯವಾಗಿದೆ. ಇದಲ್ಲದೆ, ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ಇದ್ದವರಿಗೆ ಉಚಿತ ಪಡಿತರವನ್ನೂ ವಿತರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಕೋವಿಡ್‌ ಸಾಂಕ್ರಾಮಿಕದಿಂದಾಗಿ ಅರ್ಥ ವ್ಯವಸ್ಥೆ ಕುಗ್ಗಿದೆ. ಆದರೆ, ಆರೋಗ್ಯಕರ ಮತ್ತು ದೊಡ್ಡ ಪ್ರಮಾಣದ ಪ್ರಗತಿಯನ್ನು ಕೃಷಿ ಕ್ಷೇತ್ರವು ದಾಖಲಿಸಿದೆ. ದೇಶಕ್ಕೆ ಬೇಕಿರುವುದು ಈ ರೀತಿಯ ಕೃಷಿ ಕ್ಷೇತ್ರ ಎಂಬುದನ್ನು ಇದು ತೋರಿಸಿಕೊಟ್ಟಿದೆ.

ಸುಧಾರಣೆ ಎಂದರೆ ಖಾಸಗೀಕರಣ ಎಂಬ ಮೇಲ್ಪದರದ ಗ್ರಹಿಕೆಯನ್ನಷ್ಟೇ ಸರ್ಕಾರವು ಇರಿಸಿಕೊಂಡಿದೆ. ಕೃಷಿಗೆ ಸಂಬಂಧಿಸಿ ಮೂರು ಕಾಯ್ದೆಗಳನ್ನು ತಂದಿರುವ ಕೇಂದ್ರ ಸರ್ಕಾರವು, ಈ ಕಾಯ್ದೆಗಳಿಂದಾಗಿ ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಹೆಚ್ಚಲಿದೆ, ಮುಕ್ತ ಮಾರುಕಟ್ಟೆ ಸಾಧ್ಯವಾಗಲಿದೆ ಮತ್ತು ಆ ಮೂಲಕ ರೈತರ ಆದಾಯ ಹೆಚ್ಚಲಿದೆ ಎಂದು ಹೇಳುತ್ತಿದೆ. ಈ ಕಾಯ್ದೆಗಳ ವಿರುದ್ಧ ರೈತರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಒಂಬತ್ತು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಯ್ದೆಗಳಿಂದಾಗಿ ತಾವೆಲ್ಲರೂ ಉದ್ಯಮ ಕ್ಷೇತ್ರದ ನಿಯಂತ್ರಣಕ್ಕೆ ಒಳಪಡಲಿದ್ದೇವೆ, ತಮ್ಮನ್ನು ಕೃಷಿ ಕ್ಷೇತ್ರದಿಂದ ಹೊರದಬ್ಬಲಾಗುವುದು ಹಾಗೂ ತಮ್ಮ ಆದಾಯವು ಇನ್ನಷ್ಟು ತಳಕ್ಕೆ ಕುಸಿಯಲಿದೆ ಎಂಬ ಭೀತಿಯು ಈ ರೈತರಲ್ಲಿ ಇದೆ. ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂಬುದರ ಜತೆಗೆ, ಪ್ರತಿ ವರ್ಷ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಲಾಗುವ ಎಲ್ಲ 23 ಬೆಳೆಗಳ ಎಂಎಸ್‌ಪಿಯನ್ನು ಕಾನೂನುಬದ್ಧ ಹಕ್ಕಾಗಿಸಬೇಕು ಎಂಬ ಬೇಡಿಕೆಯನ್ನೂ ರೈತರು ಮುಂದಿಟ್ಟಿದ್ದಾರೆ.

ಕೃಷಿ ಕಾಯ್ದೆಗಳನ್ನು ಕುರಿತ ಬಿಕ್ಕಟ್ಟು ಮುಂದುವರಿದಿದೆ. ಜಗತ್ತಿನ ಎಲ್ಲಿಯೂ ಮುಕ್ತ ಮಾರುಕಟ್ಟೆಯು ರೈತರ ಆದಾಯವನ್ನು ಹೆಚ್ಚಿಸಿಲ್ಲ ಎಂಬ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಒಟ್ಟು ಜನಸಂಖ್ಯೆಯ ಶೇ 2ಕ್ಕಿಂತ ಕಡಿಮೆ ಜನರು ಮಾತ್ರ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅಮೆರಿಕದಲ್ಲಿ ಕೂಡ ಕಳೆದ 10 ವರ್ಷಗಳಿಂದ ರೈತರ ಸರಾಸರಿ ಆದಾಯವು ಕುಸಿಯುತ್ತಿದೆ. ಸರ್ಕಾರವು ಭಾರಿ ಸಹಾಯಧನ ನೀಡುತ್ತಿದ್ದರೂ 2020ರ ಜುಲೈನಲ್ಲಿ ಅಮೆರಿಕದ ರೈತರ ಒಟ್ಟು ಸಾಲವು ₹30 ಲಕ್ಷ ಕೋಟಿಗೂ ಹೆಚ್ಚು. ಅಮೆರಿಕದ ಕೃಷಿ ಕ್ಷೇತ್ರ ಕೂಡ ತೀವ್ರವಾದ ಬಿಕ್ಕಟ್ಟು ಎದುರಿಸುತ್ತಿದೆ. ಅಲ್ಲಿ, ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಮಾಣವು ಶೇ 45ರಷ್ಟು ಹೆಚ್ಚು. ಐರೋಪ್ಯ ಒಕ್ಕೂಟದ ದೇಶಗಳಲ್ಲಿಯೂ ಕೃಷಿ ಬಿಕ್ಕಟ್ಟು ಇದೆ. ಆಕ್ರೋಶಗೊಂಡಿರುವ ರೈತರು ಹಲವು ನಗರಗಳಲ್ಲಿ ಟ್ರ್ಯಾಕ್ಟರ್‌ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಹೆಚ್ಚು ದರ ದೊರೆಯಬೇಕು ಮತ್ತು ದರದ ಖಾತರಿ ಇರಬೇಕು ಎಂಬುದು ಅವರ ಬೇಡಿಕೆಗಳಾಗಿವೆ. ಕೃಷಿ ಕ್ಷೇತ್ರಕ್ಕೆ ಪ್ರತಿ ವರ್ಷ ನೀಡುವ ಸಹಾಯಧನದ ಮೊತ್ತವು ಸುಮಾರು ₹7.4 ಲಕ್ಷ ಕೋಟಿ. ಅದರಲ್ಲಿ ಶೇ 50ರಷ್ಟು ನೇರ ನಗದು ಬೆಂಬಲವಾಗಿಯೇ ಬಳಕೆ ಆಗುತ್ತಿದೆ.

ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೂಡ ಮುಕ್ತ ಮಾರುಕಟ್ಟೆ ವ್ಯವಸ್ಥೆಯು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ವಿಫಲವಾಗಿದೆ ಎಂಬುದು ನಮ್ಮ ಆರ್ಥಿಕ ಚಿಂತನೆ ಹಾಗೂ ಧೋರಣೆಯಲ್ಲಿಯೇ ಮೂಲಭೂತ ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತದೆ. ವಿದೇಶದಿಂದ ಎರವಲು ಪಡೆಯುವ ಬದಲು ನಮ್ಮದೇ ಮಾದರಿಗಳನ್ನು ರೂಪಿಸಿಕೊಳ್ಳುವುದು, ನಮ್ಮ ಶಕ್ತಿ ಏನು ಎಂಬುದನ್ನು ಅರ್ಥ ಮಾಡಿಕೊಂಡು ಅದರ ಮೇಲೆ ಅವಲಂಬಿತವಾಗುವುದು, ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಇರುವುದು ಮುಖ್ಯ.

ಅಂದರೆ, ಭಾರತದ ನೀತಿ ನಿರೂಪಕರು, ದೇಶದ ಆರ್ಥಿಕ ಪ್ರಗತಿಯಲ್ಲಿ ಕೃಷಿಯನ್ನು ಎರಡನೇ ಎಂಜಿನ್‌ ಆಗಿಸಿದ ದೇಶೀ ಆರ್ಥಿಕ ಸುಧಾರಣೆಯ ಮಾದರಿಯೊಂದನ್ನು ರೂ‍ಪಿಸಬೇಕು.

ಜನರನ್ನು ಕೃಷಿಯಿಂದ ಹೊರಗೆ ದಬ್ಬುವ ಬದಲು, ಸಣ್ಣ ರೈತರ ಕೈಗೆ ಹೆಚ್ಚು ಆದಾಯ ದೊರಕುವಂತೆ ಮಾಡಲು ಒತ್ತು ಕೊಡಬೇಕು. ಪ್ರಧಾನಿಯವರ ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌ ಎಂಬ ಧ್ಯೇಯವನ್ನು ಸಾಧಿಸುವುದಕ್ಕಾಗಿ ಕೃಷಿಯನ್ನು ಸುಸ್ಥಿರವೂ ಆರ್ಥಿಕವಾಗಿ ಕಾರ್ಯಸಾಧುವೂ ಮಾಡಬೇಕಿದೆ. ಕೃಷಿ ಆರ್ಥಿಕತೆಗೆ ಹೊಸತಾಗಿ ಮೂರು ಸ್ತಂಭಗಳನ್ನು ಕಟ್ಟುವ ಮೂಲಕ ಇದು ಸಾಧ್ಯವಿದೆ:

1→ಎಂಎಸ್‌ಪಿಯನ್ನು ರೈತರ ಕಾನೂನುಬದ್ಧ ಹಕ್ಕಾಗಿಸಿ; ಈ ದರಕ್ಕಿಂತ ಕಡಿಮೆಗೆ ಯಾವುದೇ ವಹಿವಾಟು ನಡೆಯದಂತೆ ನೋಡಿಕೊಳ್ಳಿ. ಇದುವೇ ರೈತರ ನಿಜವಾದ ಸ್ವಾತಂತ್ರ್ಯ.

2→ಎಪಿಎಂಸಿ ನಿಯಂತ್ರಿತ ಮಂಡಿಗಳ ಜಾಲವನ್ನು ಇನ್ನಷ್ಟು ವಿಸ್ತರಿಸಿ. ದೇಶದಲ್ಲಿ ಈಗ ಸುಮಾರು ಏಳು ಸಾವಿರ ಎಪಿಎಂಸಿ ಮಂಡಿಗಳಿವೆ. ಪ್ರತಿ 5 ಕಿ.ಮೀ. ಸುತ್ತಳೆಯ ಪ್ರದೇಶಕ್ಕೆ ಒಂದು ಮಂಡಿ ಬೇಕು ಅಂದರೂ ದೇಶದಲ್ಲಿ ಒಟ್ಟು 42 ಸಾವಿರ ಮಂಡಿಗಳು ಇರಬೇಕಾಗುತ್ತದೆ.

3→ಅಮುಲ್‌ ಡೈರಿ ಸಹಕಾರ ಸಂಘದ ಯಶಸ್ವಿ ಮಾದರಿಯನ್ನು ತರಕಾರಿ, ಹಣ್ಣು, ಧಾನ್ಯ ಮತ್ತು ಎಣ್ಣೆ ಕಾಳುಗಳಿಗೂ ವಿಸ್ತರಿಸಲು ಅಗತ್ಯವಾದ ಹೂಡಿಕೆ ಮತ್ತು ಅವಕಾಶಗಳನ್ನು ಒದಗಿಸಿ.

ಲೇಖಕ: ಬರಹಗಾರ ಮತ್ತು ಕೃಷಿ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT