ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಂ..ಬೂಂ..ಬೂಮ್ರಾ ಎಂಬ ಛಲದಂಕಮಲ್ಲ

Published 10 ಜೂನ್ 2024, 23:52 IST
Last Updated 10 ಜೂನ್ 2024, 23:52 IST
ಅಕ್ಷರ ಗಾತ್ರ

ಕೆಲವು ತಿಂಗಳುಗಳ ಹಿಂದಿನ ಮಾತು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನೆಟ್ಸ್‌ನಲ್ಲಿ ವೇಗದ ಬೌಲರ್ ಒಬ್ಬರು ಅಭ್ಯಾಸ ಮಾಡುತ್ತಿದ್ದರು.

ಅವರನ್ನು ದೂರದಿಂದ ನೋಡುತ್ತಿದ್ದವರೆಲ್ಲರೂ ‘ಸಂಪೂರ್ಣ ಫಿಟ್ ಆಗಲು ಇನ್ನೂ ಕೆಲವು ತಿಂಗಳುಗಳಾದರೂ ಬೇಕು. ದೇಹತೂಕವೂ ಹೆಚ್ಚಾದಂತೆ ಕಾಣುತ್ತಿದೆ. ವೇಗದ ಬೌಲರ್ ಒಮ್ಮೆ ಗಾಯಗೊಂಡರೆ ಮುಗೀತು. ಮೊದಲಿನಂತೆ ಆಡಲು ಸಾಧ್ಯವಾಗಲ್ಲ. ಅದೂ ಬೆನ್ನು ಭುಜದ ಗಾಯದಿಂದ ಬಳಲಿ ಕ್ರಿಕೆಟ್‌ ಬಿಟ್ಟ ಬೌಲರ್‌ಗಳ ದೊಡ್ಡ ಪಟ್ಟಿಯೇ ಇದೆ’ ಎಂಬ ಚರ್ಚೆ ನಡೆಸಿದ್ದರು.

ಅವತ್ತು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದವರು ಬೇರಾರೂ ಅಲ್ಲ. ಭಾರತ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ. ಭಾನುವಾರ ನ್ಯೂಯಾರ್ಕ್ ಅಂಗಳದಲ್ಲಿ ನಡೆದ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಮಿಂಚಿದ ಛಲದಂಕಮಲ್ಲ.

2022ರ ಟಿ20 ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನವೇ ಬೆನ್ನುಹುರಿ ಗಾಯದಿಂದ ಬಳಲಿ ಸ್ವದೇಶಕ್ಕೆ ಮರಳಿದ್ದರು. ಸರಿಸುಮಾರು ಒಂದು ವರ್ಷ ಕ್ರಿಕೆಟ್‌ನಿಂದ ದೂರವುಳಿದು ಶಸ್ತ್ರಚಿಕಿತ್ಸೆ, ಎನ್‌ಸಿಎನಲ್ಲಿ ಪುನಶ್ಚೇತನ, ಆರೈಕೆ ಹಾಗೂ ಫಿಟ್‌ನೆಸ್‌ ಮರಳಿ ಸಾಧಿಸುವ ಕಠಿಣ ಪರೀಕ್ಷೆಗಳನ್ನು ಯಶಸ್ವಿಯಾಗಿ ದಾಟಿದ್ದರು. ಇದೆಲ್ಲದರ ಜೊತೆಗೆ ಹಲವಾರು ದೇಶಿ, ಅಂತರರಾಷ್ಟ್ರೀಯ ಪಂದ್ಯಗಳಿಂದ ದೂರವುಳಿಯುವ ಮಾನಸಿಕ ಒತ್ತಡವನ್ನೂ ನಿಭಾಯಿಸಿದ್ದರು.

ಅವರ ತಾಳ್ಮೆ, ಛಲ ಮತ್ತು ಮನೋದಾರ್ಢ್ಯಕ್ಕೆ ತಕ್ಕ ಫಲ ಈಗ ಸಿಗುತ್ತಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಹೊತ್ತಿಗೆ ಫಿಟ್ ಆಗಿ ಮರಳಿದ್ದರು. ತಮ್ಮ ವಿಶಿಷ್ಟ ಶೈಲಿಯ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಯಾರ್ಕರ್‌ಗಳ ಬಿಸಿ ಮುಟ್ಟಿಸಿದ್ದರು. ಆ ಟೂರ್ನಿಯಲ್ಲಿ 20 ವಿಕೆಟ್ ಕಬಳಿಸಿದ್ದರು. ಇತ್ತೀಚೆಗೆ ಐಪಿಎಲ್‌ನಲ್ಲಿಯೂ ಆಡಿದ್ದರು. ಅವರು ಮತ್ತೆ ಗಾಯಗೊಂಡರೆ ಎಂಬ ಆತಂಕ ಕಾಡಿದ್ದು ಸುಳ್ಳಲ್ಲ. ಆದರೆ ತಮ್ಮ ಫಿಟ್‌ನೆಸ್ ಹಾಗೂ ಕೌಶಲವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡು ಪಾಕಿಸ್ತಾನ ತಂಡದ ಎದುರಿನ ಗೆಲುವಿನ ರೂವಾರಿಯಾದರು.

ಅಮೆರಿಕ, ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪಂದ್ಯಗಳು ನಡೆಯುವ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಮಿಂಚುತ್ತಾರೆಂಬ ನಿರೀಕ್ಷೆ ಆರಂಭದಲ್ಲಿತ್ತು. ಅದಕ್ಕಾಗಿಯೇ ಭಾರತವೂ ನಾಲ್ವರು ಸ್ಪಿನ್ನರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡಿದೆ.

ಆದರೆ, ಬೂಮ್ರಾ ತಾವು ಬರೀ ವೇಗದ ಬೌಲರ್ ಮಾತ್ರ, ಚಾಣಾಕ್ಷ ಆಟಗಾರ ಎಂಬುದನ್ನು ಸಾಬೀತು ಮಾಡಿದರು. 119 ರನ್‌ಗಳ ಸಣ್ಣ ಮೊತ್ತವನ್ನು ಪಾಕಿಸ್ತಾನದ ಬ್ಯಾಟರ್‌ಗಳಿಂದ ರಕ್ಷಿಸಿದ್ದು ಸಣ್ಣ ಸಾಧನೆಯೇನಲ್ಲ. ಏಕೆಂದರೆ ಇಂದಿನ ಟಿ20 ಪಂದ್ಯಗಳಲ್ಲಿ ಈ ಮೊತ್ತ ದೊಡ್ಡದಲ್ಲವೇ ಅಲ್ಲ. ಆದರೆ, ಚೆಂಡು ಹೆಚ್ಚು ಎತ್ತರಕ್ಕೆ ಪುಟಿಯದ ಪಿಚ್‌ಗಳಲ್ಲಿ ತಮ್ಮ ಎಸೆತಗಳ ವೇಗವನ್ನು ನಿರ್ವಹಿಸುತ್ತಿರುವ ರೀತಿ ಅಸಾಧಾರಣ. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಮೊಹಮ್ಮದ್ ರಿಜ್ವಾನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ್ದ ಎಸೆತವು ಅವರ ಈ ಚಾಣಾಕ್ಷತೆಗೆ ಉದಾಹರಣೆ. ಕೆಳಮಟ್ಟದಲ್ಲಿ ಪುಟಿದೆದ್ದ ಚೆಂಡು ನಿಧಾನವಾಗಿ ನುಗ್ಗಿಬರುವ ನಿರೀಕ್ಷೆಯಲ್ಲಿ ರಿಜ್ವಾನ್ ಸ್ವೀಪ್ ಮಾಡಲು ಮಂಡಿಯೂರಿದ್ದರು. ಆದರೆ ಅವರು ಕಣ್ಣೆವೆಯಿಕ್ಕುವುದರೊಳಗೆ ಚೆಂಡು ಸ್ಟಂಪ್ ಎಗರಿಸಿತ್ತು.

ಬಾಬರ್ ಆಜಂ ಮತ್ತು ಇಫ್ತಿಕಾರ್ ಅಹಮದ್ ಅವರನ್ನು ದೊಡ್ಡ ಹೊಡೆತಕ್ಕೆ ಪ್ರಚೋದಿಸಿದ್ದು ಕೂಡ ಇಂತಹದೇ ಎಸೆತಗಳು. ಬೂಮ್ರಾ ಬೌಲಿಂಗ್ ಕೌಶಲ ಪಂದ್ಯದಿಂದ ಪಂದ್ಯಕ್ಕೆ ಮಾಗುತ್ತಿದೆ. ಗಾಯದ ಸಮಸ್ಯೆಗಳಿಂದ ಹೊರಬಂದ ಮೇಲೆ ಈ ರೀತಿಯ ಸಾಮರ್ಥ್ಯ ತೋರುತ್ತಿರುವ ಅಪರೂಪದ ವೇಗಿ ಅವರು. ಕೇವಲ ವಿಕೆಟ್‌ ಗಳಿಸುವುದಷ್ಟೇ ಅಲ್ಲ. ಚುಟುಕು ಮಾದರಿಯಲ್ಲಿ ಡಾಟ್‌ಬಾಲ್ ಪ್ರಯೋಗದಲ್ಲಿಯೂ ಅವರು ಮುಂದಿದ್ದಾರೆ. ಪಾಕ್ ಎದುರಿನ ಪಂದ್ಯದಲ್ಲಿ ಅವರು ಹಾಕಿದ ನಾಲ್ಕು ಓವರ್‌ಗಳಲ್ಲಿ 15 ಡಾಟ್‌ಬಾಲ್‌ಗಳಿದ್ದವು.

ಇದೇ ಟೂರ್ನಿಯ ಮೊದಲ ಪಂದ್ಯದಲ್ಲಿಯೂ ಐರ್ಲೆಂಡ್ ತಂಡವು ಅಲ್ಪಮೊತ್ತ ಗಳಿಸಲೂ ಬೂಮ್ರಾ ಬೌಲಿಂಗ್ ಕಾರಣವಾಗಿತ್ತು. ಅದರಲ್ಲಿಯೂ ಎರಡು ವಿಕೆಟ್ ಗಳಿಸಿದ್ದರು. ಈ ಪಂದ್ಯದಲ್ಲಿ 3 ಓವರ್‌ ಬೌಲಿಂಗ್ ಮಾಡಿದ್ದ ಅವರು 13 ಡಾಟ್‌ಬಾಲ್ ಹಾಕಿದ್ದರು. ಐಪಿಎಲ್‌ನಲ್ಲಿಯೂ ಅವರು 149 ಡಾಟ್‌ಬಾಲ್ ಹಾಕಿದ್ದರು.

ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡೂ ಪಂದ್ಯಗಳಲ್ಲಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿದ್ದಾರೆ. ಐಸಿಸಿ ಟಿವಿ ಪ್ರೆಸೆಂಟರ್‌ ಆಗಿರುವ ತಮ್ಮ ಪತ್ನಿ ಸಂಜನಾ ಗಣೇಶನ್ ಅವರಿಗೆ ಸಂದರ್ಶನವನ್ನೂ ನೀಡಿದ್ದಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT