ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಮತದಾರರ ಋಣದ ಪರೀಕ್ಷೆಯೇ?

Published 11 ಜೂನ್ 2024, 0:14 IST
Last Updated 11 ಜೂನ್ 2024, 0:14 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ಸುಮಾರು 52 ಸಾವಿರ ಕೋಟಿ ರೂಪಾಯಿ ವಾರ್ಷಿಕ ಅಂದಾಜು ವೆಚ್ಚದ ಪಂಚ ಗ್ಯಾರಂಟಿ ಯೋಜನೆಗಳು ಅವುಗಳ ನಿಜಸ್ವರೂಪದಲ್ಲಿ ಜನಕಲ್ಯಾಣದ ಆದರ್ಶ ಹೊತ್ತ ಅನುಕರಣೀಯ ಮಾದರಿಗಳಾಗಿ, ಮಾರ್ಗವಾಗಿ ದೇಶದ ಇತರ ರಾಜ್ಯಗಳಿಗೆ ಮತ್ತು ಒಕ್ಕೂಟ ಸರ್ಕಾರಕ್ಕೆ ಒದಗಬೇಕಾಗಿತ್ತು. ಆದರೆ ಸಾಮಾಜಿಕ ಕಾಳಜಿಯ ಈ ಯೋಜನೆಗಳು ಹಾಗಾಗುವ ಬದಲು ‘ಚುನಾವಣೆ ಗೆಲ್ಲಿಸುವ ಮಾದರಿಗಳು’ ಎಂಬಂತೆ ಬಿಂಬಿತವಾಗಿರುವುದು ವಿಪರ್ಯಾಸ ಮಾತ್ರವಲ್ಲ ಸಮಕಾಲೀನ ರಾಜಕಾರಣದ ದುರಂತ ಕೂಡ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಭಾವ ಬೀರಿವೆ ಎಂದು ಭಾವಿಸಲಾಗುವ ಗ್ಯಾರಂಟಿ ಯೋಜನೆಗಳು ಈಗಿನ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಮತ್ತೆ ಚರ್ಚಾವೇದಿಕೆ ಏರಿವೆ. ರಾಜ್ಯ ಸರ್ಕಾರ ಕೊಡಮಾಡಿದ ಐದೂ ಜನಪ್ರಿಯ ಯೊಜನೆಗಳ ಫಲಾನುಭವಿಗಳು ಈ ಬಾರಿಯ ಚುನಾವಣೆಯಲ್ಲಿ ‘ಕೈ’ ಹಿಡಿಯುವ ಬದಲು ‘ಕೈ’ಯಲ್ಲಿ ಸೋಲನ್ನು ಇಟ್ಟರು ಎಂಬುದು ಮತದಾರರ ಮೇಲೆ ಹೊರಿಸಲಾಗುತ್ತಿರುವ ಗಂಭೀರ ಆರೋಪ. ಪ್ರತಿಫಲಾಕಾಂಕ್ಷೆಯಿಂದ ಒಡ್ಡುವ ಆಮಿಷಗಳಿಗೂ ಜನಕಲ್ಯಾಣ ಕಾರ್ಯಕ್ರಮಗಳಿಗೂ ಇರುವ ವ್ಯತ್ಯಾಸವೇ ಮಸುಕಾದಂತಾಗಿದೆ.

‘ಬಿಟ್ಟಿ ಭಾಗ್ಯವಂತರು’ ಎಂದು ಕರೆಯುವ ಮೂಲಕ ವಿರೋಧ ಪಕ್ಷಗಳು ಮತ್ತು ಸಮಾಜದ ಒಂದು ವರ್ಗವು ಯೋಜನೆಯ ಫಲಾನುಭವಿಗಳನ್ನು ಹೀಯಾಳಿಸಿದ್ದನ್ನು ಒಂದು ವರ್ಷದಿಂದ ನೋಡಿದ್ದಾಯಿತು. ಈಗ ಫಲಾನುಭವಿಗಳನ್ನು ‘ಕೃತಘ್ನ ಪ್ರಜೆಗಳು’ ಎಂದು ಹೆಸರಿಸುವ ಮುಖೇನ ಆಡಳಿತ ಪಕ್ಷ ಹಾಗೂ ಅವರ ಬೆಂಬಲಿಗ ಗುಂಪುಗಳು ಮತದಾರರನ್ನು ನಿಂದನೆಗೆ ಈಡುಮಾಡುವ ಕಾಲ ಬಂದಿದೆ. ಎರಡೂ ರಾಜಕೀಯ ಸಂದರ್ಭಗಳ ಗುರಿ ಜನಸಾಮಾನ್ಯರೇ ಆಗಿರುವುದು ವಿಶೇಷ.

ಮತದಾರರು ಕ್ಷೇತ್ರದ ಅಭಿವೃದ್ಧಿಯನ್ನು ಮಾನದಂಡವಾಗಿ ಪರಿಗಣಿಸಿ ಮತ ಚಲಾಯಿಸುವುದಿಲ್ಲ ಎಂಬ ರಾಜಕಾರಣಿಗಳ ತಕರಾರು ಬಹಳ ಹಿಂದಿನದು. ಆದರೆ ಜನಪ್ರಿಯ ಯೋಜನೆಗಳೂ ಮತಗಳಾಗಿ, ಗೆಲುವಾಗಿ ಪರಿವರ್ತನೆಯಾಗುತ್ತಿಲ್ಲ ಎಂಬ ಅಳಲು ಕೇಳಿಬರುತ್ತಿರುವುದು ಹೊಸ ಬೆಳವಣಿಗೆ.

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪರಾಜಿತರಾದ ಕಾಂಗ್ರೆಸ್ ಪಕ್ಷದ ವಕ್ತಾರ ಎಂ.ಲಕ್ಷ್ಮಣ ಅವರು, ‘ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ಇಷ್ಟ ಆಗಿಲ್ಲ. ಹೀಗಾಗಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು’ ಎಂದು ಬಹಳಷ್ಟು ಗಟ್ಟಿಯಾಗಿಯೇ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ಸೋಲಿನ ಹತಾಶ ಮನೋಭಾವ ಎಂದು ಕಡೆಗಣಿಸುವಂತಿಲ್ಲ. ಏಕೆಂದರೆ ಮಾಗಡಿ ಶಾಸಕ

ಎಚ್.ಸಿ.ಬಾಲಕೃಷ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಅನೇಕರು ಮತದಾರರ ವರ್ತನೆಯನ್ನು ತಮ್ಮದೇ ಆದ ನಿರೀಕ್ಷೆಯಲ್ಲಿ ವಿಮರ್ಶಿಸಿದ್ದಾರೆ.‌

ಈ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ ಸಚಿವ ಸತೀಶ್ ಜಾರಕಿಹೊಳಿ, ‘ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿವೆ. ಆದ್ದರಿಂದ ಮುಂದುವರಿಸುವುದು ಸೂಕ್ತ’ ಎಂದಿದ್ದಾರೆ. ‘ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಲಾಭಕ್ಕಾಗಿ ಜಾರಿ ಮಾಡಿಲ್ಲ. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಎದುರಾದ ಬೆಲೆ ಹೆಚ್ಚಳದಿಂದ ತತ್ತರಿಸಿಹೋಗಿದ್ದ ಬಡವರಿಗೆ ನೆರವು ನೀಡಲು ಯೋಜನೆ ತಂದಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲೋದಿಲ್ಲ’ ಎಂಬ ಭರವಸೆ ನೀಡಿದ್ದಾರೆ ಗೃಹ ಸಚಿವ ಪರಮೇಶ್ವರ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಕಡೆಯಿಂದ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂಬ ಭರವಸೆ ನಿರಂತರವಾಗಿ ಕೇಳಿಬರುತ್ತಿರುವುದು ಫಲಾನುಭವಿಗಳಲ್ಲಿ ಆಶಾಭಾವನೆಗೆ ಕಾರಣವಾಗಿದೆ.

ಮತದಾರರ ಮೇಲೆ ಋಣಭಾರ ಹೊರಿಸುವ ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆಗಳು ಸೋಲಿನ ಸಂದರ್ಭದ ಭಾವಾವೇಶದ ಮಾತುಗಳು ಎಂಬುದು ಒಂದು ಹಂತದವರೆಗೆ ನಿಜ. ಆದರೆ ಬಹುತೇಕ ಶಾಸಕರ ಅಸಮಾಧಾನದ ಹಿಂದೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅವರಲ್ಲಿ ಅಂತರ್ಗತವಾಗಿರುವ ಅಸಹನೆಯ ವರಸೆಯನ್ನೂ ಗಮನಿಸಬೇಕಾಗುತ್ತದೆ. ಮಾತು ಉಳಿಸಿಕೊಳ್ಳುವ ಭರದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಒದಗಿಸುವುದು ಸರ್ಕಾರಕ್ಕೆ ಸವಾಲಾಗಿರುವುದರಿಂದ ತಮ್ಮ ಕ್ಷೇತ್ರಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲ ಎಂಬ ಕೊರಗು ಶಾಸಕರಿಗಿದೆ.

ಲೋಕಸಭಾ ಚುನಾವಣೆಯಲ್ಲಿ ಶಾಸಕರಿಂದ ಅಪೇಕ್ಷಿತ ಮಟ್ಟದ ಸಹಕಾರ, ತೊಡಗುವಿಕೆ ದೊರೆಯದಿರುವುದಕ್ಕೆ ಹಾಗೂ ಪಕ್ಷದ ಹಿನ್ನಡೆಗೆ ಇದೂ ಒಂದು ಕಾರಣವಾಗಿರಬಹುದೇ ಎಂಬ ಅಂಶವು ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ವಿಶ್ಲೇಷಣೆಗೆ ಎಡೆಮಾಡಿದೆ. ಪಂಚ ಗ್ಯಾರಂಟಿಗಳ ವೆಚ್ಚವನ್ನು ತಗ್ಗಿಸಬೇಕು ಎಂಬ ಚಿಂತನೆ ಶಾಸಕರದು.

ಕಾಂಗ್ರೆಸ್ ಪಕ್ಷದ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಕುರಿತಂತೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಕುರಿತು ಅಧ್ಯಯನ ನಡೆಸಲು ಒಂದು ಸಮಿತಿ ರಚಿಸುವ ಬಗ್ಗೆ ಚರ್ಚೆ ನಡೆದಿದೆ. ಒಟ್ಟಾರೆ ಸಂವಾದ ಮತ್ತು ಅನುಭವದ ಫಲಶ್ರುತಿಯಾಗಿ ಯೋಜನೆಗಳನ್ನು ನಿಜಕ್ಕೂ ‘ಅರ್ಹರಿಗೆ’ ಮಾತ್ರ ತಲುಪಿಸಬೇಕು ಎಂಬ ವಿಷಯದಲ್ಲಿ ಭಿನ್ನಮತ ಇರಲಾರದು. ಚುನಾವಣಾ ಸಂದರ್ಭದಲ್ಲಿ ಒಂದು ರಾಜಕೀಯ ಪಕ್ಷವಾಗಿ ಆಡುವ ಮಾತು ಮತ್ತು ಒಂದು ಸರ್ಕಾರವಾಗಿ ತೆಗೆದುಕೊಳ್ಳಬೇಕಾದ ತೀರ್ಮಾನದಲ್ಲಿ ತಕ್ಕಮಟ್ಟಿನ ಅಂತರ ಇರುವುದು ಸಹಜ. ಹಾಗಾಗಿ ‘ನನಗೂ ಫ್ರೀ, ನಿನಗೂ ಫ್ರೀ, ಎಲ್ಲರಿಗೂ ಫ್ರೀ…’ ಎಂಬ ಚುನಾವಣಾ ಘೋಷಣೆಯಿಂದ ಹೊರಬಂದು ‘ಅರ್ಹರಿಗೆ ಮಾತ್ರ ಫ್ರೀ’ ಧೋರಣೆ ಅಳವಡಿಸಿಕೊಂಡರೆ ಪ್ರಜೆಗಳು, ಶಾಸಕರು ಮತ್ತು ಸರ್ಕಾರದ ಹಿತಾಸಕ್ತಿಯನ್ನು ಒಟ್ಟಿಗೇ ಕಾಪಾಡಿದಂತೆ ಆಗಬಹುದು.

ಇವೆಲ್ಲಾ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳಾದರೆ, ಈ ವಿಷಯದಲ್ಲಿನ ಬಿಜೆಪಿಯ ನಿಲುವು ಮತ್ತೊಂದು ಬಗೆಯ ಗೊಂದಲ ಸೃಷ್ಟಿಸಿದೆ. ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಆರ್ಥಿಕವಾಗಿ ಕಾರ್ಯಸಾಧುವಲ್ಲದ ಸುಳ್ಳು ‘ಗ್ಯಾರಂಟಿ’ ನೀಡುತ್ತಿದೆಯೆಂದು ಬಿಜೆಪಿ ನಾಯಕರು ಹಾರಾಡಿದರು. ಕಾಂಗ್ರೆಸ್, ಸರ್ಕಾರ ರಚಿಸಿದ ನಂತರ ಯೋಜನೆಗಳನ್ನು ಕೂಡಲೇ ಜಾರಿ ಮಾಡಲು ಆಗ್ರಹಿಸಿದರು. ಸರ್ಕಾರ ಮಾತಿನಂತೆ ನಡೆದಾಗ ರಾಜ್ಯದ ಬೊಕ್ಕಸ ಖಾಲಿಯಾಗಿ ಅಭಿವೃದ್ಧಿ ನಿಲುಗಡೆ ಆಯಿತೆಂದು ಕ್ಯಾತೆ ತೆಗೆದರು. ಕೊನೆಗೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ಲೋಕಸಭಾ ಚುನಾವಣೆಯ ಸಮಯದಲ್ಲಿ ‘ಮೋದಿ ಗ್ಯಾರಂಟಿ’ ಘೋಷಣೆ ಮಾಡಿದ ಬಿಜೆಪಿಯ ದ್ವಂದ್ವ ನಿಲುವು ದಾಖಲೆ ಸೇರಿದೆ.

ಇನ್ನು, ಮತದಾರರಿಂದ ಋಣಭಾರ ಇಳಿಸಿಕೊಳ್ಳುವ ಇರಾದೆ ಬಿಜೆಪಿಯವರನ್ನೂ ಬಿಟ್ಟಿಲ್ಲ. ಅಯೋಧ್ಯೆ ನಗರ ಒಳಪಡುವ ಉತ್ತರಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿಗಾಗಿ ಸ್ವತಃ ಶ್ರೀರಾಮನೇ ನಿಂದನೆಗೆ ಗುರಿಯಾಗಬೇಕಾಗಿದೆ. ರಾಮದೇವರನ್ನು ಟೆಂಟ್‌ನಲ್ಲೇ ಇರಲು ಬಿಡಬೇಕಿತ್ತು, ಭವ್ಯ ಮಂದಿರ ಕಟ್ಟಿಕೊಟ್ಟಿದ್ದೇ ತಪ್ಪು ಎಂದು ಹೀಯಾಳಿಸಿದ್ದಾರೆ ರಾಮಭಕ್ತರು. ಅಯೋಧ್ಯೆಗೆ ಹೋದವರು ಅಲ್ಲಿ ತಂಗದೆ, ಖರೀದಿಸದೆ ಸ್ಥಳೀಯ ಮತದಾರರಿಗೆ ನಷ್ಟ ಉಂಟು ಮಾಡಬೇಕೆಂದು ಕರೆ ಕೊಡಲಾಗಿದೆ. ದಾವಣಗೆರೆಯಲ್ಲಿ ಸೋತ ಅಭ್ಯರ್ಥಿಯ ಗಂಡ ಜಿ.ಎಂ.ಸಿದ್ಧೇಶ್ವರ ಅವರಿಗೆ, ‘300 ರೂಪಾಯಿ ಬದಲು 500 ರೂಪಾಯಿ ಕೊಟ್ಟಿದ್ದರೆ ಗೆಲ್ಲುತ್ತಿದ್ದಿರಿ…’ ಎಂದು ಹೇಳಿದ ಕಾರ್ಯಕರ್ತನ ಆಡಿಯೊ ಬಯಲಾಗಿದೆ. ‘ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಕೊಟ್ಟಿದ್ದ ಹಣ ಸರಿಯಾಗಿ ಹಂಚಿಕೆಯಾಗಲಿಲ್ಲ. ಹಾಗಾಗಿ ನಾನು ಸೋಲಬೇಕಾಯಿತು’ ಎಂದು ಮುಚ್ಚುಮರೆ ಇಲ್ಲದೆ ಬಿಚ್ಚಿಟ್ಟಿದ್ದ ಎಂಟಿಬಿ ನಾಗರಾಜ್‌, ‘ಹಣ, ಉಡುಗೊರೆ ಪಡೆದು ಮತ ಹಾಕುವುದಾಗಿ ಅಲ್ಲಾ, ಕುರಾನ್‌ ಮೇಲೆ ಪ್ರಮಾಣ ಮಾಡಿದ ಮುಸ್ಲಿಮರು ಮತ ಹಾಕದೆ ಮೋಸ ಮಾಡಿದ್ದಾರೆ’ ಎಂದೂ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಆರೋಪಿಸಿದ್ದರು.

ಹಾಗಾಗಿ, ರಾಜಕಾರಣಿಗಳು, ಅವರ ಹಿಂಬಾಲಕರು ಮತ್ತು ರಾಜಕೀಯ ಪಕ್ಷಗಳಿಂದ ನಿಂದನೆಗೆ ಒಳಗಾಗುವುದು ಮತದಾರರಿಗೆ ಹೊಸದಲ್ಲ. ಪುರಂದರದಾಸರು ಹೇಳಿದಂತೆ, ‘ನಿಂದಕರಿರಬೇಕು/ ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಗೆ’ ಎನ್ನುವ ಮೂಲಕ ಮತದಾರರೂ ಪ್ರತಿನಿಂದಿಸಬಹುದೇನೋ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT