ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ರಹಿತ ಮತ್ತು ಬುದ್ಧಿವಂತ ಎಐ–ಸ್ವಾಯತ್ತ ವ್ಯವಸ್ಥೆಯಲ್ಲಿ ರಕ್ಷಣಾ ವಲಯದ ಭವಿಷ್ಯ

Last Updated 20 ಜನವರಿ 2023, 7:37 IST
ಅಕ್ಷರ ಗಾತ್ರ

ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟಲಿಜೆನ್ಸ್ - ಎಐ) ರಕ್ಷಣಾ ಉದ್ಯಮದಲ್ಲಿ ಕಾರ್ಯ ದಕ್ಷತೆಯನ್ನು ಹೆಚ್ಚಿಸಲು, ನಿರ್ಧಾರ ಕೈಗೊಳ್ಳಲು, ಮತ್ತು ಒಟ್ಟಾರೆ ಸಾಮರ್ಥ್ಯ ಅಭಿವೃದ್ಧಿ ಪಡಿಸಲು ಬಳಸಲಾಗುತ್ತಿದೆ. ರಕ್ಷಣಾ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು. ಅವೆಂದರೆ ಸ್ವಾಯತ್ತ ಸಿಸ್ಟಮ್‌ಗಳು, ಇಂಟಲಿಜೆಂಟ್ ಡಿಸಿಷನ್ ಸಪೋರ್ಟ್ ಹಾಗೂ ಸೈಬರ್ ರಕ್ಷಣೆ.

ರಕ್ಷಣಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಪಾರವಾಗಿ ಬಳಸುವ ಕ್ಷೇತ್ರವೆಂದರೆ ಸ್ವಾಯತ್ತ ವ್ಯವಸ್ಥೆಗಳು. ಸ್ವಾಯತ್ತ ಸಿಸ್ಟಮ್‌ಗಳೆಂದರೆ ಸಾಮಾನ್ಯವಾಗಿ ಮಾನವ ಹಸ್ತಕ್ಷೇಪವಿಲ್ಲದೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಯಂತ್ರಗಳಾಗಿವೆ. ಈ ಯಂತ್ರಗಳನ್ನು ವಿಚಕ್ಷಣೆ, ಮೇಲ್ವಿಚಾರಣೆ, ಗುರಿಯನ್ನು ಗುರುತಿಸುವಿಕೆ, ಸೇರಿದಂತೆ ಹಲವು ಕಾರ್ಯಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ರಕ್ಷಣಾ ಉದ್ಯಮದಲ್ಲಿ ಸ್ವಾಯತ್ತ ಸಿಸ್ಟಮ್‌ಗಳನ್ನು ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ (ಯುಎವಿ) ರೂಪದಲ್ಲಿ, ಅನ್‌ಮ್ಯಾನ್ಡ್ ಗ್ರೌಂಡ್ ವೆಹಿಕಲ್ (ಯುಜಿವಿ) ರೂಪದಲ್ಲಿ, ಹಾಗೂ ಅನ್‌ಮ್ಯಾನ್ಡ್ ಅಂಡರ್ ವಾಟರ್ ವೆಹಿಕಲ್ (ಯುಯುವಿ) ರೂಪದಲ್ಲಿ ಬಳಸಲಾಗುತ್ತದೆ. ಅವುಗಳು ತಾವು ಪಡೆದುಕೊಳ್ಳುವ ಮಾಹಿತಿಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲು ಮತ್ತು ಕ್ರಮ ತೆಗೆದುಕೊಳ್ಳಲು ಸಮರ್ಥವಾಗಿವೆ.

ಎಐ ಬಳಕೆಯಾಗುವ ಇನ್ನೊಂದು ಕ್ಷೇತ್ರವೆಂದರೆ ಇಂಟಲಿಜೆಂಟ್ ಡಿಸಿಷನ್ ಸಪೋರ್ಟ್. ಅಂದರೆ, ಇಲ್ಲಿ ಕೃತಕ ಬುದ್ಧಿಮತ್ತೆಯ ಅಲ್ಗಾರಿದಂಗಳು ಮಾನವ ನಿರ್ವಾಹಕರಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತವೆ. ಉದಾಹರಣೆಗೆ, ಎಐ ಹಲವು ಮೂಲಗಳಿಂದ ಪಡೆದುಕೊಳ್ಳುವ ಅಪಾರ ಪ್ರಮಾಣದ ಮಾಹಿತಿಗಳನ್ನು ವಿಶ್ಲೇಷಿಸುತ್ತದೆ. ಅದರಲ್ಲಿ ಉಪಗ್ರಹ ಚಿತ್ರಗಳು, ಸಾಮಾಜಿಕ ಜಾಲತಾಣಗಳು, ಇತ್ಯಾದಿಗಳೂ ಸೇರಿದ್ದು, ಆ ಮೂಲಕ ಅಪಾಯಕಾರಿಯಾಗಿ ಕಂಡುಬರುವ ಮಾದರಿಗಳು ಮತ್ತು ಪ್ರವೃತ್ತಿಗಳನ್ನು ಗುರುತಿಸಲು ನೆರವಾಗುತ್ತದೆ. ಈ ಮಾಹಿತಿಗಳ ಆಧಾರದಲ್ಲಿ, ಸಂಭಾವ್ಯ ಅಪಾಯಗಳನ್ನು ಹೇಗೆ ಎದುರಿಸಬಹುದು ಎಂಬ ಕ್ರಮದ ಕುರಿತೂ ಆಲೋಚಿಸಬಹುದು. ಎಐಯನ್ನು ಬಳಸಿಕೊಂಡು, ವಿವಿಧ ಸಂದರ್ಭಗಳನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗುತ್ತದೆ. ‌ಆ ಮೂಲಕ ನಿರ್ಧಾರ ತೆಗೆದುಕೊಳ್ಳುವವರಿಗೆ ಸಂಭಾವ್ಯ ಅಪಾಯಗಳು ಮತ್ತು ಅವಕಾಶಗಳ ಕುರಿತು ಮಾಹಿತಿ ಕಲೆಹಾಕಲು ಸಾಧ್ಯವಾಗುತ್ತದೆ.

ಸೈಬರ್ ರಕ್ಷಣೆ ಎನ್ನುವುದು ರಕ್ಷಣಾ ವಲಯದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ಇನ್ನೊಂದು ಕ್ಷೇತ್ರವಾಗಿದೆ. ಸೈಬರ್ ದಾಳಿಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪರಿಣಾಮಕಾರಿಯಾಗುತ್ತಿವೆ. ಆದ್ದರಿಂದ ಸಾಂಪ್ರದಾಯಿಕ ರಕ್ಷಣಾ ಕ್ರಮಗಳು ಅವುಗಳನ್ನು ಎದುರಿಸಲು ಸಾಕಾಗುವುದಿಲ್ಲ. ಎಐಯನ್ನು ಬಳಸಿಕೊಂಡು, ನೆಟ್‌ವರ್ಕ್ ಟ್ರಾಫಿಕ್ ಮೇಲ್ವಿಚಾರಣೆ ನಡೆಸಿ, ಸಂಭಾವ್ಯ ಅಪಾಯಗಳನ್ನು ಕ್ಷಣ ಕ್ಷಣಕ್ಕೂ ಗುರುತಿಸಲು ಸಾಧ್ಯವಾಗುತ್ತದೆ. ಅದರೊಡನೆ ವಿವಿಧ ಮಾದರಿಗಳು ಮತ್ತು ಪ್ರವೃತ್ತಿಗಳನ್ನು ಅಧ್ಯಯನ ನಡೆಸಿ, ಅವುಗಳಲ್ಲಿ ಸೈಬರ್ ದಾಳಿಯನ್ನು ತೋರುವಂತಹದ್ದನ್ನು ಗುರುತಿಸಲು ನೆರವಾಗುತ್ತದೆ. ಅದರೊಡನೆ, ಎಐಯನ್ನು ಸೈಬರ್ ದಾಳಿಯ ವಿರುದ್ಧ ರಕ್ಷಣೆ ನೀಡಬಲ್ಲ ಪ್ರತಿಕ್ರಮಗಳನ್ನು ಅಭಿವೃದ್ಧಿ ಪಡಿಸಿ, ಜಾರಿಗೆ ತರಲು ಬಳಸಲಾಗುತ್ತದೆ.

ಕೃತಕ ಬುದ್ಧಿಮತ್ತೆಯನ್ನು ಸಾಗಾಣಿಕೆ, ನಿರ್ವಹಣೆ, ಹಾಗೂ ಪೂರೈಕೆ ಸರಪಳಿಯ ನಿರ್ವಹಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ಮತ್ತು ಖರ್ಚು ಕಡಿಮೆಗೊಳಿಸಲು ಬಳಸಬಹುದು. ಎಐ ಆಧಾರಿತ ಮುನ್ಸೂಚಕ ನಿರ್ವಹಣೆಯನ್ನು ಬಳಸುವುದರಿಂದ, ಅದು ಉಪಕರಣಗಳು ಮತ್ತು ಯಂತ್ರಗಳ ಮೇಲ್ವಿಚಾರಣೆ ನಡೆಸಿ, ಅವುಗಳು ಹಾಳಾಗದಂತೆ ಮಾಹಿತಿ ನೀಡುತ್ತವೆ. ಅದರಿಂದ ಬಳಕೆದಾರರ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ಎಐ ಆಧಾರಿತ ಸಾಗಾಣಿಕಾ ಸಿಸ್ಟಮ್‌ಗಳು ರಸ್ತೆಗಳು ಮತ್ತು ವೇಳಾಪಟ್ಟಿಗಳನ್ನು ಅತ್ಯುತ್ತಮವಾಗಿಸಿ, ಇಂಧನ ಬಳಕೆ ಮತ್ತು ಸಾಗಾಣಿಕಾ ವೆಚ್ಚವನ್ನು ಕಡಿಮೆಗೊಳಿಸುತ್ತವೆ. ಎಐ ಆಧಾರಿತ ಪೂರೈಕೆ ಸರಪಳಿ ನಿರ್ವಹಣೆ ದಾಸ್ತಾನು ಮಟ್ಟವನ್ನು ಸಮರ್ಪಕವಾಗಿ ನೋಡಿಕೊಂಡು, ಖಾಲಿಯಾಗದಂತೆ ಮತ್ತು ಹಾಳಾಗದಂತೆ ನೋಡಿಕೊಳ್ಳುತ್ತದೆ.

ಕೃತಕ ಬುದ್ಧಿಮತ್ತೆಯನ್ನು ಮಿಲಿಟರಿ ತರಬೇತಿ ಉದ್ದೇಶಗಳಿಗಾಗಿ ಇಂಟಲಿಜೆಂಟ್ ಟ್ಯೂಟರಿಂಗ್ ಸಿಸ್ಟಮ್ಸ್ (ಐಟಿಎಸ್) ನಲ್ಲೂ ಬಳಸಬಹುದು. ಐಟಿಎಸ್ ಬಳಕೆದಾರರ ಕೌಶಲ ಮಟ್ಟ, ಬೆಳವಣಿಗೆ, ಮತ್ತು ಪ್ರದರ್ಶನದ ಆಧಾರದಲ್ಲಿ ವೈಯಕ್ತಿಕ ತರಬೇತಿ ನೀಡುತ್ತದೆ. ಇದು ತರಬೇತಿಯನ್ನು ಪರಿಣಾಮಕಾರಿಯಾಗಿಸಿ, ತರಬೇತಿಯ ಸಮಯ ಮತ್ತು ಸಂಪನ್ಮೂಲಗಳನ್ನು ಕಡಿಮೆಗೊಳಿಸುತ್ತದೆ.

ರಕ್ಷಣಾ ವಲಯದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುವ ಪ್ರಮುಖ ಪ್ರಯೋಜನವೆಂದರೆ, ಅದು ಅಪಾರ ಪ್ರಮಾಣದ ಮಾಹಿತಿಗಳನ್ನು ಅತ್ಯಂತ ಕ್ಷಿಪ್ರವಾಗಿ ಮತ್ತು ಸಮರ್ಪಕವಾಗಿ ವಿಶ್ಲೇಷಿಸಬಲ್ಲದು. ಇದು ಸಂಭಾವ್ಯ ಅಪಾಯಗಳು ಮತ್ತು ಅವಕಾಶಗಳನ್ನು ಗುರುತಿಸಲು ನೆರವಾಗುತ್ತದೆ. ಆ ಮೂಲಕ ಅಂತಹ ಪರಿಸ್ಥಿತಿಗಳಲ್ಲಿ ನಿರ್ಧಾರ ಕೈಗೊಳ್ಳಲು, ಪ್ರತಿಕ್ರಿಯಿಸಲು ಸಹಾಯಕವಾಗಿದೆ. ಅದರೊಡನೆ, ಸ್ವಾಯತ್ತ ಸಿಸ್ಟಮ್‌ಗಳ ಬಳಕೆಯ ಮೂಲಕ ಮಾನವ ನಿರ್ವಾಹಕರಿಗೆ ಯಂತ್ರಗಳ ಮೂಲಕ ಎದುರಾಗಬಹುದಾದ ಅಪಾಯವನ್ನು ದೂರ ಮಾಡುತ್ತದೆ ಮತ್ತು ಕೆಲಸಗಳು ಸಮರ್ಪಕವಾಗಿ ನಡೆಯುವಂತೆ ಮಾಡುತ್ತವೆ.

ಆದರೂ, ರಕ್ಷಣಾ ವಲಯದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುವ ಕುರಿತು ಹಲವು ಕಳವಳಗಳೂ ಎದುರಾಗಿವೆ. ಅವುಗಳಲ್ಲಿ ಪ್ರಮುಖ ಕಾಳಜಿಯ ಅಂಶವೆಂದರೆ, ಕೃತಕ ಬುದ್ಧಿಮತ್ತೆಯನ್ನು ಅಪಾಯಕರವಾದ ರೀತಿಯಲ್ಲಿ ಮತ್ತು ನೈತಿಕವಲ್ಲದ ರೀತಿಯಲ್ಲಿ ಬಳಸಿಕೊಳ್ಳುವುದು. ಉದಾಹರಣೆಗೆ, ಮಾನವ ಮೇಲ್ವಿಚಾರಣೆ ಇಲ್ಲದೆ ದಾಳಿ ನಡೆಸಬಲ್ಲ ಸ್ವಾಯತ್ತ ಆಯುಧಗಳ ಬಳಕೆಯ ಕುರಿತು ಹಲವು ಪ್ರಶ್ನೆಗಳು ಎದುರಾಗಿವೆ. ಅದರೊಡನೆ, ಕೃತಕ ಬುದ್ಧಿಮತ್ತೆಯನ್ನು ವಿಚಕ್ಷಣೆ ಮತ್ತು ಮೇಲ್ವಿಚಾರಣೆಗೆ ಬಳಸುವ ಕುರಿತೂ ಹಲವು ಅನುಮಾನಗಳು ಎದುರಾಗಿವೆ. ಯಾಕೆಂದರೆ ಈ ರೀತಿಯಲ್ಲಿ ಎಐ ಬಳಕೆ ಖಾಸಗಿತನ ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು ಎಂಬ ಅನುಮಾನಗಳಿವೆ.

ಎಐ ಬಳಕೆಯ ಕುರಿತು ಇರುವ ಇನ್ನೊಂದು ಮಹತ್ವದ ಕಾಳಜಿಯೆಂದರೆ, ಎಐ ಬಳಸಿಕೊಂಡು ಇನ್ನಷ್ಟು‌ ಹೊಸದಾದ ಮತ್ತು ಪರಿಣಾಮಕಾರಿಯಾದ ಸೈಬರ್ ದಾಳಿಗಳ ಸಾಧ್ಯತೆ. ಕೃತಕ ಬುದ್ಧಿಮತ್ತೆ ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದುತ್ತಿರುವಂತೆ, ಇದನ್ನು ಬಳಸಿಕೊಂಡು ಗುರುತಿಸಲು ಮತ್ತು ಎದುರಿಸಲು ಕಷ್ಟಕರವಾಗುವಂತಹ ದಾಳಿಗಳನ್ನು ನಡೆಸುವ ಸಾಧ್ಯತೆಗಳಿವೆ.

ಆದರೆ ಪ್ರಸ್ತುತ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ರಕ್ಷಣಾ ವಲಯದ ದಕ್ಷತೆ, ನಿರ್ಧಾರ ಕೈಗೊಳ್ಳುವಿಕೆ ಮತ್ತು ಒಟ್ಟಾರೆ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚು ಹೆಚ್ಚು ಬಳಸಲಾಗುತ್ತಿದೆ.

ಲೇಖಕರು– ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT