ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಕಲಿಕೆಯಲ್ಲಿ ಕನ್ನಡ ಮಾಧ್ಯಮದ ಮರುಹುಟ್ಟಿಗೆ ಏನು ಬೇಕು?

ಹಿಗ್ಗಿತ್ತು ಕನ್ನಡ, ಕುಗ್ಗುತ್ತಿದೆ ಕನ್ನಡ!
Published 25 ಜುಲೈ 2023, 19:55 IST
Last Updated 25 ಜುಲೈ 2023, 19:55 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಬೇಕು ಎಂದು ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ಅವರು ಸರ್ಕಾರವನ್ನು ಒತ್ತಾಯಿಸಿದ ಸುದ್ದಿ ಕಳೆದ ವಾರ ಬಂತು. ನಗರ ಪ್ರದೇಶ ಗಳಲ್ಲಿ ಬೇಕಾದಷ್ಟು ಇಂಗ್ಲಿಷ್ ಶಾಲೆಗಳಿವೆ, ಹಳ್ಳಿಗಳಲ್ಲೇ ಇಲ್ಲ. ಹೀಗಾಗಿ ಜನರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಅನ್ನುವುದು ಅವರ ವಾದವಾಗಿತ್ತು. ಈ ವಿಷಯದಲ್ಲಿ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ಜನಪ್ರತಿನಿಧಿಗಳಲ್ಲಿ ಯಾವ ಅಭಿಪ್ರಾಯಭೇದವೂ ಇದ್ದಂತಿಲ್ಲ. ಎಡ-ನಡು-ಬಲ ಪಂಥದ ಒಲವಿನ ಎಲ್ಲ ನಾಯಕರಲ್ಲೂ ಇದೊಂದು ವಿಷಯದಲ್ಲಿ ‘ಇಂಗ್ಲಿಷೇ ಪರಿಹಾರ’ ಅನ್ನುವ ಕುರುಡು ನಂಬಿಕೆ ಆಳವಾಗಿ ಬೇರೂರಿದೆ.

ಮಕ್ಕಳ ಮೊದಲ ಹಂತದ ಕಲಿಕೆಯು ತಾಯ್ನುಡಿ ಇಲ್ಲವೇ ಸ್ಥಳೀಯ ನುಡಿಯಲ್ಲಿ ಆಗಬೇಕು ಅನ್ನುವ ನಿಲುವಿಗೆ ಸುಪ್ರೀಂ ಕೋರ್ಟ್‌ನಲ್ಲಿ ಸೋಲುಂಟಾಗಿ ದಶಕ ಸಮೀಪಿಸುತ್ತಿದೆ. ಈಗ ತಾಯ್ನುಡಿಯಲ್ಲಿ ಕಲಿಕೆಯ ಪರವಾಗಿ ಮಾತನಾಡುವುದೇ ವ್ಯರ್ಥ ಅನ್ನುವಷ್ಟರ ಮಟ್ಟಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಹಳ್ಳಿ-ಪಟ್ಟಣಗಳನ್ನು ಆವರಿಸಿದೆ. 25 ವರ್ಷಗಳ ಹಿಂದೆ ನಾಡಿನ ಶೇಕಡ 85ರಷ್ಟು ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದರು. ಈಗ ಅದು ಶೇ 50ರ ಆಸುಪಾಸಿಗೆ ಇಳಿದಿದೆ. ಇಷ್ಟು ವ್ಯಾಪಕವಾಗಿ ಇಂಗ್ಲಿಷ್ ಮಾಧ್ಯಮದತ್ತ ಹೊರಳಿಕೊಂಡ ಪರಿಣಾಮವಾಗಿ ಕರ್ನಾಟಕಕ್ಕೆ ವಿಜ್ಞಾನ- ತಂತ್ರಜ್ಞಾನದಲ್ಲಿ ಅದೆಷ್ಟು ನೊಬೆಲ್ ಪ್ರಶಸ್ತಿಗಳು ಬಂದಿವೆ? ಮೈಕ್ರೊಸಾಫ್ಟ್,  ಆ್ಯಪಲ್, ಓಪನ್‌ ಎಐ ತರಹದ ಜಗತ್ತನೇ ಆಳುವಂತಹ ಯಾವ ಸಂಸ್ಥೆಯನ್ನು ಕನ್ನಡದ ಮಕ್ಕಳು ಕಟ್ಟಿ ಮೆರೆದಿದ್ದಾರೆ? ಪಶ್ಚಿಮದ ದೇಶಗಳ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಕೆಳದರ್ಜೆಯ ಕೆಲಸಗಳನ್ನು ಕಡಿಮೆ ವೆಚ್ಚಕ್ಕೆ ಭಾರತದಿಂದ ಮಾಡಿಸಿಕೊಡುವ ಐ.ಟಿ. ಹೊರಗುತ್ತಿಗೆ ಉದ್ಯಮದ ಯಶಸ್ಸು ಭಾರತವನ್ನು, ಕರ್ನಾಟಕವನ್ನು ಪ್ರಗತಿಯ ತುತ್ತತುದಿಗೆ ಕೊಂಡೊಯ್ಯುವ ಬಲ ಹೊಂದಿದೆಯೇ? ಇಂತಹ ಪ್ರಶ್ನೆಗಳನ್ನು ಚರ್ಚಿಸುವುದು ಯಾರಿಗೂ ಯಾಕೆ ಬೇಡವಾಗಿದೆ? ಚಾಟ್ ಜಿಪಿಟಿ ನಂತರ ಕೃತಕ ಬುದ್ಧಿಮತ್ತೆ (ಎ.ಐ) ಕ್ಷೇತ್ರದಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳು ಇನ್ನು ಐದೇ ಐದು ವರ್ಷಗಳಲ್ಲಿ ಐ.ಟಿ. ಹೊರಗುತ್ತಿಗೆ ಉದ್ಯಮದ ಈಗಿನ ಸ್ವರೂಪವನ್ನು ತಲೆಕೆಳಗು ಮಾಡುವ ಎಲ್ಲ ಸೂಚನೆಗಳು ಇವೆ. ಹೀಗಿರುವಾಗ ಎ.ಐ. ಪ್ರವರ್ಧಮಾನಕ್ಕೆ ಬಂದ ನಂತರದ ಕಾಲದಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯ ಬದುಕು ಕಟ್ಟಿಕೊಡಬಲ್ಲ ಕಲಿಕೆಯ ಮತ್ತು ದುಡಿಮೆಯ ಆಯ್ಕೆಗಳೇನು ಅನ್ನುವ ಬಗ್ಗೆ ಯೋಚಿಸಲು ಶುರು ಮಾಡಿದರಷ್ಟೇ ನಾವು ಕಲಿಕೆಯನ್ನು ಮತ್ತು ಕಲಿಕೆಯಲ್ಲಿ ನಮ್ಮ ಭಾಷೆಗಳ ಪಾತ್ರವೇನು ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು.

ಮಕ್ಕಳ ಕಲಿಕೆಗೆ ಯಾವ ನುಡಿಯಾಗಬೇಕು ಅನ್ನುವುದಕ್ಕೆ ಸರಳ ವಿವರಣೆಯೊಂದಿದೆ. ಮಗು ಮನೆಯಲ್ಲಿ ಮೊದಲ ಮೂರು ವರ್ಷ ಮನೆಯವರಿಂದ ಒಂದಿಷ್ಟು, ತದನಂತರ ಮನೆಯಾಚೆಯ ಅಂಗಳದಲ್ಲಿ ತನ್ನ ಓರಗೆಯ ಮಕ್ಕಳಿಂದ ಇನ್ನೊಂದಿಷ್ಟು ಪದಗಳನ್ನು ಪಡೆದುಕೊಳ್ಳುತ್ತದೆ. ಅದರ ಮುಂದಿನ ಹೆಜ್ಜೆಯೇ ಶಾಲೆ. ಮಗು ಅದಾಗಲೇ ಕಲಿತಿರುವ ನುಡಿ ಮತ್ತು ಪದಸಂಪತ್ತಿನ ಬುನಾದಿಯ ಮೇಲೆ ಹೊಸ ವಿಷಯಗಳನ್ನು, ಓದು- ಬರಹವನ್ನು ಕಲಿಸುತ್ತ ಹೋಗುವುದು ಮಗುವಿನ ಬೌದ್ಧಿಕ ವಿಕಾಸ ಸರಿಯಾಗಿ ಆಗಲು, ಮಕ್ಕಳಲ್ಲಿ ಸಮಸ್ಯೆ ಬಗೆಹರಿಸುವ ಕಲೆ, ವಸ್ತುನಿಷ್ಠವಾಗಿ ಯೋಚಿಸುವ ಶಕ್ತಿ ಪಡೆಯಲು ಇರುವ ಹೆಚ್ಚು ಪರಿಣಾಮಕಾರಿಯಾದ ದಾರಿ. ಈ ಮಾದರಿಯನ್ನೇ ಜಗತ್ತಿನ ಎಲ್ಲ ಮುಂದುವರಿದ ದೇಶಗಳಲ್ಲೂ ಪಾಲಿಸಲಾಗುತ್ತಿದೆ. ಈ ಸತ್ಯಕ್ಕೆ ಮುಖ ತಿರುಗಿಸಿ ಮಕ್ಕಳನ್ನು ಬಾಯಿಪಾಠದ ಕುಲುಮೆಯಲ್ಲಿ ಬೇಯಿಸುವ ಇಂಗ್ಲಿಷ್ ಮಾಧ್ಯಮವನ್ನೇ ಮಕ್ಕಳ ಏಳಿಗೆಯ ಸಾಧನ ಎಂಬಂತೆ ಎಲ್ಲರೂ ನೋಡುವಂತಾಗಿ ರುವುದು ಈ ಹೊತ್ತಿನ ದುರಂತ. ಸಾಮಾನ್ಯ ಜನರಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯುವುದರ ಉಪಯೋಗಕ್ಕೂ, ಇಂಗ್ಲಿಷ್‌ನಲ್ಲೇ ಮಕ್ಕಳು ಎಲ್ಲವನ್ನೂ ಕಲಿಯಲು ಹೋಗಿ ಆಗುವ ತೊಂದರೆಗಳಿಗೂ ಇರುವ ವ್ಯತ್ಯಾಸದ ಬಗ್ಗೆ ಅರಿವಿಲ್ಲ. ಆದರೆ ಜನಪ್ರತಿನಿಧಿಗಳಾದವರು ಯುನೆಸ್ಕೊ, ಪಿಸಾ (PISA), ಏಸರ್ (ASER) ತರಹದ ವರದಿಗಳು ಈ ಬಗ್ಗೆ ಏನು ಹೇಳಿವೆ, ಜಗತ್ತಿನಾದ್ಯಂತ ಕಲಿಕೆಯ ವಿಷಯದಲ್ಲಿ ಮಕ್ಕಳ ನುಡಿಯ ಪಾತ್ರದ ಬಗ್ಗೆ ಆಗಿರುವ ಅರಕೆಗಳೇನು ಎಂದು ತಿಳಿಯುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಬೇಕಲ್ಲವೇ?

ಕಲಿಕೆಯ ಮಾಧ್ಯಮದ ವಿಷಯವನ್ನು ‘ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ, ಬಡವರಿಗೆ ಮಾತ್ರ ಕನ್ನಡ ಉಳಿಸುವ ಹೊರೆ’ ಬಗೆಯ ಭಾವನಾತ್ಮಕವಾದ ವಾದಗಳು ಕನ್ನಡ ವೊಂದನ್ನೇ ಬಲ್ಲ ಈ ಮಕ್ಕಳ ಕಲಿಕೆಗೆ ಕನ್ನಡ ಯಾಕೆ ಮುಖ್ಯ ಅನ್ನುವ ಪ್ರಶ್ನೆಯನ್ನು ಮರೆಮಾಚುವಂತೆ ಮಾಡಿವೆ. ತಂದೆ- ತಾಯಿ- ಶಿಕ್ಷಕರು- ಪರಿಸರ ಮತ್ತು ಮಗುವಿನ ನಾಲಿಗೆಯ ಮೇಲಿನ ಭಾಷೆಯಾದ ಕನ್ನಡ ದಲ್ಲಿ ಕಲಿಸುವುದು ಪರಿಣಾಮಕಾರಿಯೋ ಇಲ್ಲವೇ ಇಲ್ಲೆಲ್ಲೂ ಇಲ್ಲದ ಇಂಗ್ಲಿಷಿನಲ್ಲೋ ಅನ್ನುವ ಪ್ರಶ್ನೆ ಚರ್ಚಿಸ ಬೇಕಾದ ಪ್ರಶ್ನೆಯಲ್ಲವೇ? ಸಮಾನತೆಯ ನೆಲೆಯ ಶಿಕ್ಷಣ ಎಂದು ಮಾತನಾಡಿದಾಗ ಅದನ್ನು ನಿಜಕ್ಕೂ ಸಾಧ್ಯವಾಗಿಸುವ ಶಕ್ತಿ ಇರುವ ಏಕೈಕ ಸಾಧನವಾದ ನುಡಿಯ ಕುರಿತು ಮಾತನಾಡಲು ಹಿಂಜರಿಕೆ ಯಾಕೆ? ಇನ್ನೊಂದೆಡೆ ಇದು ಭಾರತದ ಯುಗ, ಭಾರತೀಯ ನಾಗರಿಕತೆಯ ಪುನರುಜ್ಜೀವನದ ಹೊತ್ತು ಈಗ ಬಂದಿದೆ ಎಂದು ಸಂಭ್ರಮಿಸುವ ಜನರಿಗೂ ಇಂತಹ ನಾಗರಿಕತೆಯ ಬುನಾದಿಯೇ ಭಾರತದ ನುಡಿಗಳು ಅನ್ನುವುದು ಯಾಕೆ ಕಾಣಿಸಲ್ಲ? ಮಕ್ಕಳನ್ನೆಲ್ಲ ಇಂಗ್ಲಿಷಿನಲ್ಲಿ ಓದಿಸಿ, ಪಶ್ಚಿಮದ ಸೇವೆಗೆ ಕಳಿಸಿದರೆ ನಾಗರಿಕತೆಯ ಪುನರುಜ್ಜೀವನ ಇಂಗ್ಲಿಷಿನಲ್ಲಿ ಆಗಲಿದೆಯೇ? ಪಶ್ಚಿಮದ ಎಲ್ಲ ಮುಂದುವರಿದ ದೇಶಗಳಿಗೂ ಕಲಿಕೆಯಲ್ಲಿ ಯಾವ ನುಡಿಯಿರಬೇಕು ಅನ್ನುವ ಪ್ರಶ್ನೆ ಎಂದೋ ಬಗೆಹರಿದಿದ್ದರೆ ವಸಾಹತುಶಾಹಿಗೆ ಒಳಪಟ್ಟಿದ್ದ ಮೂರನೆಯ ಜಗತ್ತಿನ ದೇಶಗಳಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ನಂಬಿಕೆ ಇರುವುದು ವಸಾಹತುಶಾಹಿಗೆ ಸಿಕ್ಕ ಗೆಲುವೇ ಅನ್ನಬಹುದು.

ಕನ್ನಡ ಮಾಧ್ಯಮದ ಕುಸಿತದ ದೂರಗಾಮಿ ಪರಿಣಾಮಗಳು ಈಗಾಗಲೇ ಗೋಚರಿಸಲು ಶುರುವಾಗಿವೆ. ಪತ್ರಿಕೆಗಳ ವರದಿಗಾರಿಕೆಗೆ ಸರಿಯಾಗಿ ಕನ್ನಡ ಬರೆಯಬಲ್ಲ ಅಭ್ಯರ್ಥಿಗಳು ಸಿಗುವುದೇ ಕಷ್ಟವಾಗು ತ್ತಿದೆಯೆಂದರೆ ಬರವಣಿಗೆಯ ನುಡಿಯಾಗಿ ಕನ್ನಡ ಯಾವುದೆಲ್ಲ ಶಕ್ತಿಯನ್ನು ಇಪ್ಪತ್ತನೆಯ ಶತಮಾನದಲ್ಲಿ ಪಡೆದುಕೊಂಡಿತ್ತೋ ಅದನ್ನು ಕಳೆದುಕೊಳ್ಳುತ್ತ ಮತ್ತೆ 18ನೇ ಶತಮಾನದ ಹಿಂದೆ ಇದ್ದಂಥ ಮಾತಿನ ನುಡಿ ಮಾತ್ರ ಆಗುವತ್ತ ಚಲಿಸುತ್ತಿದೆಯೇನೋ ಅನ್ನಿಸುತ್ತದೆ. ಸಿನಿಮಾ, ಸಾಹಿತ್ಯ, ರಂಗಭೂಮಿ, ಮಾಧ್ಯಮ, ಆಡಳಿತ ಹೀಗೆ ಎಲ್ಲೆಲ್ಲಿ ಕನ್ನಡದ ಹರವು ಹಿಗ್ಗಿತ್ತೋ ಅದೆಲ್ಲವೂ ಮತ್ತೆ ಕುಗ್ಗಲು ಶುರುವಾಗಿದೆ ಅನ್ನಿಸುತ್ತದೆ.

ಸರ್ಕಾರ ಈಗ ಕನ್ನಡ ಮಾಧ್ಯಮದ ಬಗ್ಗೆ ಬದ್ಧತೆ ತೋರಿಸಬೇಕಿದೆ. ಮೊದಲಿಗೆ, ಮಕ್ಕಳ ಕಲಿಕೆಗೆ ತಾಯ್ನುಡಿ ಹೇಗೆ ಪೂರಕ ಎಂಬುದನ್ನು ಮನದಟ್ಟಾಗಿಸು ವುದರ ಜೊತೆಗೆ ತಾಯ್ನುಡಿಯಲ್ಲೇ ಕಲಿತು ದೊಡ್ಡ ಯಶಸ್ಸು ಪಡೆದ ಸಾವಿರಾರು ಸಾಧಕರನ್ನು ಪರಿಚಯಿಸುವಂತಹ ಜನಜಾಗೃತಿಯ ಅಭಿಯಾನವೊಂದನ್ನು ಹಮ್ಮಿಕೊಳ್ಳಬೇಕು. ಇದೊಂದು ಸಾರ್ವಜನಿಕ ಹಿತಾಸಕ್ತಿಯ ವಿಷಯವೆಂದು ಭಾವಿಸಬೇಕು. ಕನ್ನಡ ಮಾಧ್ಯಮದ ವಿಜ್ಞಾನ ಮತ್ತು ಗಣಿತದ ಪಠ್ಯದಲ್ಲಿ ಬಳಸಿರುವ ಪದಗಳನ್ನು ಇನ್ನಷ್ಟು ಸರಳಗೊಳಿಸುವುದು, ಇಂಗ್ಲಿಷ್ ಅನ್ನು ಒಂದು ಆಡುನುಡಿಯಾಗಿ ಕೇಳು->ಮಾತನಾಡು->ನೋಡು->ಬರೆ ಅನ್ನುವ ಕ್ರಮದಲ್ಲಿ ಹೇಳಿಕೊಡುವುದನ್ನು ಈಗಿರುವ ಏರ್ಪಾಡಿನಲ್ಲೇ ಸರಿಯಾಗಿ ಜಾರಿಗೆ ತರಬೇಕು. ಇದರ ಜೊತೆ ಜೊತೆಯಲ್ಲೇ ನಗರ ಪ್ರದೇಶಗಳಲ್ಲಿ ಒಳ್ಳೆಯ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಉತ್ಸಾಹ ಇರುವ ಜನರಿಗೆ, ಸಂಘ–ಸಂಸ್ಥೆಗಳಿಗೆ ಸರ್ಕಾರದ ಎಲ್ಲ ಪ್ರೋತ್ಸಾಹ ದೊರೆಯುವಂತಹ ನೀತಿಯೊಂದನ್ನು ಘೋಷಿಸಬಹುದು. ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗದ ಪಾಲಕರು ಇಷ್ಟಪಟ್ಟು ಮಕ್ಕಳನ್ನು ಕಳಿಸುವಂತಹ ಕನ್ನಡ ಮಾಧ್ಯಮ ಶಾಲೆಗಳು ಬಂದಲ್ಲಿ ಅದರ ಪರಿಣಾಮ ಕೆಳಹಂತಕ್ಕೂ ಹರಡಲಿದೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ನೇತೃತ್ವದ  ಸರ್ಕಾರದಲ್ಲಿ ಇಂತಹದೊಂದು ದೂರದರ್ಶಿತ್ವವನ್ನು ಕನ್ನಡ ಮಾಧ್ಯಮ ಶಾಲೆಗಳ ವಿಚಾರದಲ್ಲಿ ಎದುರು ನೋಡಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT