ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Eid Al Adha: ಪ್ರವಾದಿ ಇಬ್ರಾಹಿಮರ ತ್ಯಾಗ, ದೇವನಿಷ್ಠೆ ಹಾಗೂ ಸಹನೆಯ ಪ್ರತೀಕ ಬಕ್ರೀದ್

Published 28 ಜೂನ್ 2023, 15:49 IST
Last Updated 28 ಜೂನ್ 2023, 15:49 IST
ಅಕ್ಷರ ಗಾತ್ರ

ಮುಸ್ಲಿಮರು ‍ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್‌ ಕೂಡ ಒಂದು. ಒಂದು ತಿಂಗಳ ಕಾಲ ಉಪವಾಸದ ಬಳಿಕ ರಂಜಾನ್‌ ಹಬ್ಬ ಆಚರಿಸಿದರೆ, ಇಸ್ಲಾಮಿನ ಪ್ರವಾದಿಗಳಲ್ಲಿ ಓರ್ವರಾದ ಹಝ್ರತ್ ಇಬ್ರಾಹಿಂರವರ ತ್ಯಾಗದ ಸ್ಮರಣೆ ಮಾಡುವ ಹಬ್ಬವಾಗಿದೆ ಬಕ್ರೀದ್.

ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್‌ಹಿಜ್ಜ 10 ರಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ವಿಶ್ವದ ಹಲವು ಭಾಗಗಳಿಂದ ಹಜ್‌ ಯಾತ್ರೆಗೆ ಸೌದಿ ಅರೇಬಿಯಾದ ಮೆಕ್ಕಾಗೆ ತೆರಳುವ ಮುಸಲ್ಮಾನರ ಹಜ್‌ ವಿಧಿ ವಿಧಾನಗಳು ಆ ದಿನ ಮುಕ್ತಾಯಗೊಳ್ಳುತ್ತವೆ.

ಪ್ರತಿಯೊಂದು ಹಬ್ಬಗಳ ಆಚರಣೆಯ ಹಿಂದೆ ಹಿನ್ನೆಲೆ ಇರುವಂತೆ ಬಕ್ರೀದ್‌ಗೂ ತನ್ನದೇ ಆದ ಚರಿತ್ರೆ ಇದೆ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪ್ರವಾದಿ ಹಝ್ರತ್ ಇಬ್ರಾಹಿಂರವರ ಜೀವನದಲ್ಲುಂಟಾದ ಪರೀಕ್ಷೆಗಳನ್ನು, ಅವರು ಸಹಿಸಿದ ತ್ಯಾಗಗಳನ್ನು, ಅವರ ಕ್ಷಮಾಶೀಲತೆ, ಅವರ ಅಚಲ ದೈವ ಭಕ್ತಿ ಹಾಗೂ ದೈವ ನಿಷ್ಠೆಯನ್ನು ಕೊಂಡಾಡುವ ದಿನವೇ ಬಕ್ರೀದ್.

ಇಬ್ರಾಹಿಮರು ಪ್ರವಾದಿಯಾದ ಬಳಿಕ, ಧರ್ಮ ಪ್ರಚಾರಕ್ಕಿಳಿಯುತ್ತಾರೆ. ಈ ವೇಳೆ ದೇವರು ಇಬ್ರಾಹಿಮರಿಗೆ ಹಲವಾರು ಪರೀಕ್ಷೆಗಳನ್ನು ಒಡ್ಡುತ್ತಾನೆ. ವಾರ್ಧಕ್ಯ ಸಮೀಪಿಸಿದರೂ ಅವರಿಗೆ ಸಂತಾನಭಾಗ್ಯ ಉಂಟಾಗಲಿಲ್ಲ. ಆದರೆ ಪವಾಡ ಎಂಬಂತೆ ತಮ್ಮ ಎರಡನೇ ಪತ್ನಿ ಹಾಜರಾರವರಿಂದ ಇಬ್ರಾಹಿಂ ಅವರಿಗೆ ಗಂಡು ಮಗು ಜನಿಸಿತು. ಅವರ ಹೆಸರು ಇಸ್ಮಾಯಿಲ್‌.

ಮಕ್ಕಳಿಲ್ಲದೆ ಕೊರಗಿದ್ದ ದಂಪತಿಗೆ ಇಸ್ಮಾಯಿಲರು ಸಂತೋಷದ ಖಣಿಯಾಗಿ ಆಗಮಿಸಿದ್ದರು. ಆದರೆ ಆ ಸಂತೋಷ ಹೆಚ್ಚು ದಿನ ಇರಲಿಲ್ಲ. ಮಗ ಇಸ್ಮಾಯಿಲ್ ಹಾಗೂ ತಾಯಿ ಹಾಜರ ಅವರನ್ನು ಜನವಾಸ ಇಲ್ಲದ ಮೆಕ್ಕಾದ ಕಾಡಿನಲ್ಲಿ ಬಿಟ್ಟು ಬರಬೇಕು ಎಂದು ಅಲ್ಲಾಹನ ಆಜ್ಞೆಯಾಯಿತು. ವಾರ್ಧ್ಯಕ್ಯದಲ್ಲಿ ಉಂಟಾದ ಮಗನನ್ನು ಕಾಡಿನಲ್ಲಿ ಬಿಟ್ಟು ಬರುವುದೆಂದರೆ ಹೇಗೆ? ದೇವಾಜ್ಞೆಗಿಂತ ಮಿಗಿಲಾಗಿದ್ದು ಯಾವುದೂ ಇಲ್ಲ ಎಂದು, ಸ್ವಲ್ಪ ಖರ್ಜೂರ ಹಾಗೂ ನೀರು ಕಟ್ಟಿಕೊಂಡು ಜನವಾಸವಿಲ್ಲದ ಕಾಡಿನಲ್ಲಿ ಮಗ ಹಾಗೂ ಪತ್ನಿಯನ್ನು ಬಿಟ್ಟು ಬರುತ್ತಾರೆ.

ಕೊಂಡು ಹೋದ ಖರ್ಜೂರ ಹಾಗೂ ನೀರು ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತದೆ. ಮಗು ಇಸ್ಮಾಯಿಲ್‌ ದಾಹದಿಂದ ಚಡಪಡಿಸುತ್ತದೆ. ತಾಯಿ ಹಾಜರಾ ಅವರು ನೀರಿಗಾಗಿ ‘ಸಫಾ‘ ಹಾಗೂ ‘ಮರ್‌ವಾ‘ ಎನ್ನುವ ಬೆಟ್ಟಗಳ ನಡುವೆ ಓಡುತ್ತಾರೆ. ನೀರುಕಾಗೆಗಳ ಸುಳಿವೂ ಸಿಗುವುದಿಲ್ಲ. ಕೊನೆಗೆ ಸುಸ್ತಾಗಿ ಬಂದಾಗ, ಮಗುವಿನ ಕಾಲಿನ ಅಡಿಯಿಂದ ನೀರು ಚಿಮ್ಮುವುದು ಕಾಣಿಸುತ್ತದೆ. ದಾಹದಿಂದ ಇಸ್ಮಾಯಿಲರು ಕಾಲು ಬಡಿದಿದ್ದ ಸ್ಥಳದಲ್ಲಿ ನೀರಿನ ಒರತೆ ಸೃಷ್ಠಿಯಾಗಿತ್ತು. ನೀರು ನಿಲ್ಲದೇ ಇರುವುದನ್ನು ಕಂಡಾಗ ಹಾಜರಾ ಅವರು ‘ಝಂ ಝಂ‘ ಎಂದರೆ ‘ನಿಲ್ಲು ನಿಲ್ಲು‘ ಎಂದು ಹೇಳಿದ್ದರು. ಈಗ ಅಲ್ಲಿ ನೀರಿನ ಬಾವಿ ಇದ್ದು, ಅದಕ್ಕೆ ‘ಝಂ ಝಂ‘ ನೀರು ಎಂದು ಕರೆಯುತ್ತಾರೆ. ಮುಸ್ಲಿಮರಿಗೆ ಈ ನೀರು ಪವಿತ್ರವಾಗಿದ್ದು, ರೋಗ ಶಮನಕಾರಿ ಎನ್ನುವ ನಂಬಿಕೆ ಇದೆ. ಈಗಲೂ ಮೆಕ್ಕಾಗೆ ಹೋದವರು ಪವಿತ್ರ ಜಲವನ್ನು ತರುತ್ತಾರೆ. ತೀರ್ಥದಂತೆ ಸ್ವೀಕಾರ ಮಾಡುತ್ತಾರೆ. ಹಾಜರಾ ಅವರು ಅಂದು ಬೆಟ್ಟಗಳ ನಡುವೆ ಓಡಿದುದನ್ನು ಇಂದಿಗೂ ಮುಸ್ಲಿಮರು ನೆನಪಿಸಿಕೊಳ್ಳುತ್ತಾರೆ. ಹಜ್‌ ಕರ್ಮಗಳಲ್ಲಿ ಈ ಎರಡು ಬೆಟ್ಟಗಳ ನಡುವೆ ಓಡುವುದು ಕಡ್ಡಾಯ.

ಈಗ ಇಬ್ರಾಹಿಮರಿಗೆ ಮತ್ತೊಂದು ಪರೀಕ್ಷೆಯ ಸಮಯ. 13 ವರ್ಷದ ಪುತ್ರ ಇಸ್ಮಾಯಿಲರನ್ನು ತನಗಾಗಿ ಬಲಿ ಕೊಡಬೇಕು ಎನ್ನುವುದು ಅಲ್ಲಾಹನ ಮತ್ತೊಂದು ಆಜ್ಞೆ. ವಾರ್ಧಕ್ಯದಲ್ಲಿ ಪಡೆದ ಮಗನನ್ನು ಬಲಿಕೊಡುವ ಸಂದಿಗ್ಧ ಪರಿಸ್ಥಿತಿ ಇಬ್ರಾಹಿಮರದ್ದು. ಪುತ್ರ ವಾತ್ಸಲ್ಯವು ದೈವಾಜ್ಞೆಯ ಮುಂದೆ ಕ್ಷುಲ್ಲಕ ಎಂದು ಬಗೆದ ಇಬ್ರಾಹಿಮರು ಮಗನನ್ನು ಬಲಿ ಕೊಡಲು ಕರೆದುಕೊಂಡು ಹೋಗುತ್ತಾರೆ. ಈ ವೇಳೆ ಶೈತಾನರು ಇಸ್ಮಾಯಿಲ್ ಅವರನ್ನು ದಾರಿ ತಪ್ಪಿಸಲು ಮುಂದಾಗುತ್ತಾರೆ. ಈ ವೇಳೆ ಅವರು ಶೈತಾನರಿಗೆ ಕಲ್ಲು ಬಿಸಾಡುತ್ತಾರೆ. ಇದರ ನೆನಪಿಗೆ ಹಜ್‌ ನಿರ್ವಹಿಸುವ ವೇಳೆ ಶೈತಾನರಿಗೆ ಕಲ್ಲು ಎಸೆಯುವ ಪ್ರಕ್ರಿಯೆ ಇದೆ.

ದೈವಾಜ್ಞೆಯನ್ನು ಶಿರಸಾ ಪಾಲಿಸಿದ ಇಬ್ರಾಹಿಮರು ಮಗನನ್ನು ಬಲಿಯರ್ಪಿಸಲು ಸಜ್ಜಾಗುತ್ತಾರೆ. ಕತ್ತು ಕುಯ್ಯಲು ಎಷ್ಟೇ ಪ್ರಯತ್ನಪಟ್ಟರೂ ಕತ್ತಿ ಹರಿಯುತ್ತಿಲ್ಲ. ಆಗ ದೇವದೂತ ಜಿಬ್ರೀಲ್ ಸ್ವರ್ಗದಿಂದ ಆಡೊಂದನು ತಂದು ‘ಇಬ್ರಾಹಿಮರೇ ನೀವು ಜಯಶಾಲಿಯಾಗಿದ್ದೀರಿ, ನಮಗೆ ಬೇಕಾದುದು ರಕ್ತ ಮಾಂಸವಲ್ಲ. ಬದಲಿಗೆ ನಿಮ್ಮ ಮನಸ್ಸಿನೊಳಗಿನ ಭಕ್ತಿ. ಅನ್ನು ನೀವು ಸಾಬೀತು ಮಾಡಿದ್ದೀರಿ. ಆದರಿಂದ ನೀವು ಇದನ್ನು ಬಲಿ ಕೊಡಿ‘ ಎಂದು ಸ್ವರ್ಗದಿಂದ ತಂದ ಆಡೊಂದನು ಕೊಡುತ್ತಾರೆ. ಅದನ್ನು ಇಬ್ರಾಹಿಮರು ಬಲಿ ಕೊಡುತ್ತಾರೆ. ಇದರ ಸಂಕೇತವಾಗಿ ಬಕ್ರೀದ್ ದಿನದಂದು ಆಡು, ಕುರಿ ಮೇಕೆ, ಎತ್ತು, ಕೋಣ, ಎಮ್ಮೆ, ದನಗಳನ್ನು ಬಲಿಕೊಡಲಾಗುತ್ತದೆ. ಇದನ್ನೇ ‘ಉಳುಹಿಯ್ಯತ್’ ಅರ್ಥಾತ್ ‘ಕುರ್ಬಾನಿ’ ಎನ್ನುತ್ತಾರೆ. ಆಡುಗಳನ್ನು ಹೆಚ್ಚಾಗಿ ಬಲಿ ಕೊಡುವುದರಿಂದ ಈ ಹಬ್ಬಕ್ಕೆ ‘ಬಕ್ರೀದ್’ ಎಂಬ ಹೆಸರು ಬಂದಿದೆ.

ಇಸ್ಲಾಮಿನ ಐದು ಕಂಬಗಳಲ್ಲಿ ಒಂದಾಗಿರುವ ಹಜ್ಜ್ ಯಾತ್ರೆಯಲ್ಲಿ ನಿರ್ವಹಿಸುವ ಎಲ್ಲಾ ಸತ್ಕರ್ಮಗಳು ಪ್ರವಾದಿ ಇಬ್ರಾಹಿಂ, ಅವರ ಪತ್ನಿ ಹಾಜರಾ ಪುತ್ರ ಇಸ್ಮಾಯಿಲ್ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸುವುದಾಗಿದೆ. ಅವರ ತ್ಯಾಗ, ದೈವ ಭಕ್ತಿ ಯನ್ನು ಜಗತ್ತಿಗೆ ತಿಳಿಸಲೋಸುಗ ಬಕ್ರೀದ್ ಎಂಬ ಹಬ್ಬವೊಂದನ್ನು ಉಡುಗೊರೆಯಾಗಿ ನೀಡಲಾಗಿದೆ. ತ್ಯಾಗ, ಸಹನೆಗಿಂತ ಮಿಗಿಲಾದ ವ್ಯಕ್ತಿತ್ವ, ದೈವಾಜ್ಞೆಗಿಂತ ಮೀರಿದ ಅನುಸರಣೆ ಮತ್ತೊಂದಿಲ್ಲ ಎಂದು ಇಬ್ರಾಹಿಮರ ಜೀವನದ ಮೂಲಕ ಸಾಬೀತು ಪಡಿಸಲಾಗಿದೆ.

ದೈವ ಸಂತೃಪ್ತಿಗೆ ತನ್ನ ಸರ್ವಸ್ವವನ್ನು ಸಮರ್ಪಿಸಿದ ಮಹಾನ್ ತ್ಯಾಗಿ ಇಬ್ರಾಹಿಂ ಅವರ ಅತುಲ್ಯ ವ್ಯಕ್ತಿತ್ವಕ್ಕೆ ಕಳಶಪ್ರಾಯವಾಗಿ, ದೈವಾಜ್ಞೆಗೆ ಶಿರಭಾಗಿ ಪುತ್ರ ಬಲಿಗೆ ಸನ್ನದ್ಧರಾದ ದಿವವೇ ಮುಸ್ಲಿಮರಿಗೆ ಸಂಭ್ರಮದ ಈದುಲ್ ಅಳ್‌ಹಾ ಅಥವಾ ಬಕ್ರೀದ್.

ದುಲ್‌ಹಿಜ್ಜ ಒಂಭತ್ತರ ರಾತ್ರಿ ಮಸೀದಿ ಮಿನಾರಗಳಲ್ಲಿ ಮೊಳಗುವ ತಕ್ಬೀರ್ ಧ್ವನಿಗಳಿಂದ ಹಬ್ಬದ ಸಂಭ್ರಮ ಪ್ರಾರಂಭವಾಗುತ್ತದೆ. ಮರುದಿನ ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಪುರುಷರು, ಮಹಿಳೆಯರು, ಮಕ್ಕಳೆಲ್ಲರೂ ಹೊಸ ಬಟ್ಟೆ ಬರೆಗಳನ್ನು ಧರಿಸಿ ಸಂತೋಷ ಪಡುತ್ತಾರೆ. ಪುರುಷರು ಈದ್ಗಾಗಳಿಗೆ ತೆರಳಿ ಭುಜಕ್ಕೆ ಭುಜ ಜೋಡಿಸಿ ‘ಅಲ್ಲಾಹು ಅಕ್ಬರ್’ ಎಂದು ಹೇಳುತ್ತಾ ಪ್ರಾರ್ಥನೆ ನಡೆಸುತ್ತಾರೆ. ಮನೆಯಲ್ಲಿ ಸ್ತ್ರೀಯರು ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿ ಹಬ್ಬವನ್ನು ಇನ್ನೂ ಕಳೆಗಟ್ಟುವಂತೆ ಮಾಡುತ್ತಾರೆ. ನೆರೆಹೊರೆಯವರನ್ನು ಕರೆದು ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಸ್ನೇಹಿತ, ಸಂಬಧಿಂಕರ ಮನೆಗಳಿಗೆ ತೆರಳಿ ಪರಸ್ಪರ ಕೈ ಮೈ ಜೋಡಿಸಿಕೊಂಡು ‘ಈದ್ ಮುಬಾರಕ್’ ಎಂದು ಶುಭಾಶಯ ಕೋರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT