ಅನೇಕತೆಯಲ್ಲಿ ಏಕತೆಯನ್ನು ಸಾಧಿಸುವುದು ರಾಜಕೀಯದ ಬಹುಮುಖ್ಯ ತತ್ವವಾಗಿದೆ. ಸಹಬಾಳ್ವೆ, ಎಲ್ಲ ಜೀವಿಗಳ ಏಳಿಗೆ ಮತ್ತು ಪರಿಸರದ ಬಗ್ಗೆ ಕಾಳಜಿ... ಇವೆಲ್ಲವೂ ಸಮಪಾಕದಲ್ಲಿ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿರುತ್ತದೆ. ಆದರೆ ಕೆಲವು ದಶಕಗಳಿಂದ ಅದು ತಲೆಕೆಳಗಾದಂತಿದೆ. ಕಳಂಕಿತ ರೂಪವನ್ನು ಹೊತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳೇ ಮಸುಕಾಗುವಂತೆ ಆಗಿರುವುದು ವಿಷಾದಕರ. ರಾಜಕೀಯವೆಂದರೆ ಓಲೈಕೆ, ಸ್ವಜನಪಕ್ಷಪಾತ, ಅಧಿಕಾರದಾಹ ಮತ್ತು ಲಾಭಬಡುಕತನವನ್ನೇ ಪ್ರವೃತ್ತಿಯನ್ನಾಗಿಸುವ ವೃತ್ತಿ ಎಂಬಂತಾಗಿದೆ ಇಂದಿನ ಸ್ಥಿತಿ.

ಇದರ ಫಲಸ್ವರೂಪವಾಗಿ ವಿಭಜಕ ರಾಜಕಾರಣ ದಾಂಗುಡಿ ಇಡತೊಡಗಿದೆ. ಜನಸಮುದಾಯಗಳ ನಡುವೆ ಕಂದಕ ಸೃಷ್ಟಿಯಾಗಿದೆ. ಧರ್ಮದ ಹೆಸರಿನಲ್ಲಿ ದ್ವೇಷ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದೆ ಮತ್ತು ಧರ್ಮಾಂಧತೆಗೂ ಕಾರಣವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಇದು ಬಹುದೊಡ್ಡ ಕಂಟಕವನ್ನು ತರಬಲ್ಲ ಸಂಗತಿ ಎಂಬುದು ಅನೇಕರಿಗೆ ಅರ್ಥವಾಗಿಲ್ಲ ಎಂಬುದು ವಿಷಾದಕರ.

ಇವೆಲ್ಲದರ ನಡುವೆ, ಜಾಗೃತನಾದ ಭಾರತೀಯ ಮತದಾರ ನಿಸ್ಸಂದಿಗ್ಧವಾದ ಒಂದು ಸಂದೇಶವನ್ನು ಜನಾದೇಶದ ಮೂಲಕ ವಿಶ್ವಕ್ಕೆ ಕೊಟ್ಟಿದ್ದಾನೆ. ಸರ್ವಾಧಿಕಾರಿ ಧೋರಣೆ, ಕಪಟ ಮತ್ತು ಕೊಳಕು ರಾಜಕೀಯವನ್ನು ಮೆಟ್ಟಿ ನಿಲ್ಲಬಲ್ಲ ಎತ್ತರದ ವ್ಯಕ್ತಿತ್ವ ತನಗಿದೆ ಎಂಬುದನ್ನು ಮತದಾರ ಸಾಬೀತುಪಡಿಸಿದ್ದಾನೆ. 2024ರ ಲೋಕಸಭಾ ಚುನಾವಣೆಯ ಫಲಿತಾಂಶವು ಮತದಾರನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಜಾತೀಯತೆ ಮತ್ತು ಭಯ ಹುಟ್ಟಿಸುವ ಪ್ರವೃತ್ತಿ ಪ್ರಜಾಸತ್ತೆಯಲ್ಲಿ ಇರತಕ್ಕದ್ದಲ್ಲ ಎಂಬ ದಿಟ್ಟ ಉತ್ತರವನ್ನೂ ಮತದಾರ ಕೊಟ್ಟಿದ್ದಾನೆ.

ಯಾರೊಬ್ಬರ ಹಕ್ಕುಗಳಿಗೂ ಧಕ್ಕೆಯುಂಟಾಗಬಾರದು, ವಿಭಿನ್ನ ಮತಧರ್ಮಗಳನ್ನು ಒಳಗೊಂಡಿರುವ ಭಾರತದಲ್ಲಿ ಎಲ್ಲ ನಾಗರಿಕ ಸಮಾಜಗಳ ಮೂಲಭೂತ ಹಕ್ಕುಗಳ ಸಂರಕ್ಷಣೆ ಆಗಬೇಕು ಎಂಬುದಕ್ಕೆ ಅನುಗುಣವಾಗಿ ನಿರ್ದೇಶನ, ಮಾರ್ಗದರ್ಶನ ಮತ್ತು ಕಾನೂನು ಪಾಲನೆಯ ಸಂದೇಶಗಳನ್ನು ಸುಪ್ರೀಂ ಕೋರ್ಟ್ ಸಹ ಕೊಡುತ್ತಲೇ ಬಂದಿದೆ.

ಇಂದು ಇಡೀ ವಿಶ್ವ ಪ್ರಜಾಪ್ರಭುತ್ವ ಮಾದರಿಯನ್ನು ಅನುಸರಿಸುವುದಕ್ಕೆ ಪ್ರಾಧಾನ್ಯ ಕೊಡುತ್ತಿದೆ. ಏಕೆಂದರೆ, ಭೂಮಿತಾಯಿ ನಮಗೆಲ್ಲರಿಗೂ ಬದುಕಲು ಒಂದೇ ತೆರನಾದ ಹಕ್ಕುಬಾಧ್ಯತೆಗಳನ್ನು ಕೊಟ್ಟಿದ್ದಾಳೆ. ಪರಸ್ಪರ ಅವಲಂಬಿತವಾದ ಜೀವಜಗತ್ತಿನಲ್ಲಿ ವಿಶೇಷತಃ ಸಸ್ಯ-ವೃಕ್ಷ ಸಾಮ್ರಾಜ್ಯದಲ್ಲಿ ಬಹಳಷ್ಟು ವೈಜ್ಞಾನಿಕ ಅಂಶಗಳಿವೆ. ಜೊತೆಜೊತೆಗೆ ಅವುಗಳ ಅವಲಂಬನೆಯಿಲ್ಲದೆ ಮಾನವ ಬದುಕುಳಿಯಲಾರ ಎಂಬುದು ಕೂಡ ಸಾಬೀತಾಗಿದೆ. ಆದರೆ ಇಂದು ಜೀವಜಾಲದ ವಿಕಸನ ಪ್ರಕ್ರಿಯೆಯ ಸರಪಣಿ ಕಡಿದುಹೋಗಿದೆ. ಹಲವಾರು ತಳಿಗಳು ವಿನಾಶವಾಗಿವೆ ಇಲ್ಲವೇ ವಿನಾಶದ ಅಂಚಿಗೆ ಬಂದು ತಲುಪಿವೆ. ಈ ವಿನಾಶಪ್ರಕ್ರಿಯೆಯು ಅರಣ್ಯ ಪ್ರದೇಶವನ್ನು ವ್ಯಾಪಕವಾಗಿ ಆಪೋಶನ ತೆಗೆದುಕೊಳ್ಳುತ್ತಿದೆ ಮತ್ತು ಜೀವಜಾಲದ ವಿನಾಶ ಪಡೆದುಕೊಂಡಿರುವ ವೇಗವು ದಿಗಿಲು ಹುಟ್ಟಿಸುವಂತಿದೆ.

ನಮ್ಮ ಪೂರ್ವಜರಿಗೆ ಜೈವಿಕ ವ್ಯವಸ್ಥೆಯ ಬಗ್ಗೆ ಚೆನ್ನಾಗಿ ಅರಿವಿತ್ತು. ಈ ಭೂಮಿಯ ನಿರ್ಮಿತಿಯ ಯಾವುದೂ ತನ್ನದಲ್ಲ, ತಾನು ಮಾಡಿದ್ದಲ್ಲ, ಹಾಗಾಗಿ ಅದನ್ನು ಹಾಳುಗೆಡಹುವ ಅಧಿಕಾರ ತನಗಿಲ್ಲ ಎಂಬ ಅರಿವಿದ್ದ ಕಾರಣ ಅವರು ಪ್ರಕೃತಿಯನ್ನು ದೇವರು ಎಂದು ಪರಿಭಾವಿಸಿದ್ದರು. ಆಹಾರ ಭದ್ರತೆ, ಜಲಭದ್ರತೆ, ಆರೋಗ್ಯ ಭದ್ರತೆ ಎಲ್ಲವೂ ಎಲ್ಲ ಜೀವಿಗಳಿಗೆ ಅಗತ್ಯ. ಆನುವಂಶಿಕ ವೈವಿಧ್ಯದ ಜಾಲದಲ್ಲಿ ಇದರ ಮಹತ್ವವನ್ನು ನಮ್ಮ ಪೂರ್ವಿಕರು ಬಹಳ ಚೆನ್ನಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ತಮ್ಮ ಜೀವನವಿಧಾನವನ್ನು ರೂಪಿಸಿಕೊಂಡಿದ್ದರು.

ಈ ಭೂಮಿಯಲ್ಲಿರುವ ಇರುವೆಗಳ ಸಂಖ್ಯೆಯು ಮಾನವರಿಗಿಂತ ಅದೆಷ್ಟೋ ಕೋಟಿ ಪಟ್ಟು ಹೆಚ್ಚೇ ಇದೆ. ಮನುಷ್ಯನಿಗೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತದೆ. ಆದರೆ ಇರುವೆಗಳಿಗೆ ಎಂದೂ ಅಂತಹ ಸಮಸ್ಯೆ ಬಾಧಿಸುವುದಿಲ್ಲ. ಸಹಜೀವನ, ಸಹಜಜೀವನ ಮತ್ತು ಪರಸ್ಪರ ಮಿತ್ರತ್ವದಿಂದ ಎಲ್ಲ ತೊಂದರೆಗಳನ್ನೂ ನಿರ್ವಹಿಸಿ ಮುನ್ನಡೆಯುವ, ಬದುಕುವ ಶಕ್ತಿ ಇಂತಹ ಪುಟ್ಟ ಜೀವಿಗಳಲ್ಲೂ ಇದೆಯೆಂದಾದರೆ ಅದೊಂದು ಬಗೆಯ ವಿಸ್ಮಯವೇ ಅಲ್ಲವೆ? ಮನುಷ್ಯ ತಾನೇತಾನಾಗಿ ಸಣ್ಣಪುಟ್ಟ ಸಮಸ್ಯೆಗಳನ್ನೂ ದೊಡ್ಡದು ಮಾಡಿಕೊಳ್ಳುತ್ತಾನೆ, ಮೂಲ ಸೌಕರ್ಯದ ಹೆಸರಿನಲ್ಲಿ ಪರಿಸರದ ಎದೆ ಬಗೆದು ಕೋಟ್ಯಂತರ ಜೀವಿಗಳ ವಿನಾಶಕ್ಕೆ ಕಾರಣನಾಗುತ್ತಾನೆ. ಪ್ರವಾಹ, ಬರಪರಿಸ್ಥಿತಿಯನ್ನು ತಂದುಕೊಳ್ಳುತ್ತಾನೆ. ನಗರೀಕರಣದ ಭರಾಟೆಯಲ್ಲಿ ಆಗುವ ತಾಪಮಾನ ಹೆಚ್ಚಳಕ್ಕೂ ಮನುಷ್ಯನೇ ಕಾರಣ.

ಇಂದು ವಿಲಕ್ಷಣ ಆಹಾರ ಕ್ರಮದ ಕಾರಣದಿಂದ ಮಾನವ ಸಂಕುಲ ವಿವಿಧ ರೋಗಗಳನ್ನು ಆಹ್ವಾನಿಸುತ್ತಿದೆ. ನದಿಯ ಸಹಜ ಹರಿವನ್ನು ತಿರುಗಿಸುವುದು, ಎರಡು ನದಿಗಳನ್ನು ಅಸಹಜವಾಗಿ ಒಂದಾಗಿಸುವುದು, ಬೃಹತ್ ಜಲಾಶಯ, ಕಟ್ಟಡ, ಸೇತುವೆಗಳ ನಿರ್ಮಾಣ, ಇವೆಲ್ಲದರ ನೇರ ವ್ಯತಿರಿಕ್ತ ಪರಿಣಾಮ ಆಗುವುದು ಮನುಷ್ಯನ ಮೇಲೆ ಮಾತ್ರವಲ್ಲ; ಜಲಚರ– ಪ್ರಾಣಿಗಳ ಸಂತತಿಗೂ ಇದರಿಂದ ಹಾನಿ ಉಂಟಾಗುತ್ತದೆ.

ಉಷ್ಣವಲಯದ ಪರಿಸರ ವ್ಯವಸ್ಥೆಯು ಮಾನವನಿರ್ಮಿತ ಅತಿರೇಕಗಳಿಂದ ಹಾನಿಗೆ ಒಳಗಾಗುತ್ತಲೇ ಇದೆ. ಈಗ ನಮ್ಮ ಮುಂದಿರುವ ಬಹುಮುಖ್ಯ ಸಂಗತಿಯೆಂದರೆ, ಪ್ರಕೃತಿಯೊಂದಿಗೆ ಅನುಸಂಧಾನ ಮಾಡಿಕೊಂಡು ಪರಸ್ಪರ ಅವಲಂಬನೆಯೊಂದಿಗೆ ಎಚ್ಚರಿಕೆಯಿಂದ ಹೆಜ್ಜೆ ಇಡುವುದು.

ಸಸ್ಯಶಾಸ್ತ್ರ ವಿಜ್ಞಾನಿ ಜಾನಕಿ ಅಮ್ಮಾಳ್ ಅವರು ಎತ್ನೊಬಾಟನಿ ಕ್ಷೇತ್ರದಲ್ಲಿ ಅಪರೂಪದ ಸಾಧನೆ, ಸಂಶೋಧನೆ ಮಾಡಿರುವ ಮೇರುವ್ಯಕ್ತಿ. ಪರಿಸರಕೇಂದ್ರಿತವಾದ ಅವರ ಸಂಶೋಧನೆಗಳ ಅವಲಂಬನೆ ಮತ್ತು ಅನುಸರಣೆ ಇಂದಿನ ಸನ್ನಿವೇಶದಲ್ಲಿ ತುಂಬ ಅಗತ್ಯ. ಜೀವಜಾಲವನ್ನು ಸರ್ವನಾಶದ ಅಂಚಿಗೆ ತಲುಪಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಜೀವನ ಪದ್ಧತಿಯನ್ನು ಹದ್ದುಬಸ್ತಿಗೆ ತರಬೇಕೆಂದರೆ ಜಾನಕಿ ಅಮ್ಮಾಳ್ ಹಾಕಿಕೊಟ್ಟ ಎತ್ನೊಬಾಟನಿ ಉದ್ಯಾನಗಳ ರಚನೆ ಅವಶ್ಯಕವಾಗಿ ಆಗಬೇಕು. ಉಸಿರಾಡಲು ಯೋಗ್ಯವಾದ ಗಾಳಿ, ಕುಡಿಯಲು ಶುದ್ಧವಾದ ನೀರು ಇದ್ದಾಗ ಮಾತ್ರ ನಾವು ಬದುಕುಳಿಯಲು ಸಾಧ್ಯ.

1972ರ ಸ್ಟಾಕ್ಹೋಂ ಒಪ್ಪಂದದಿಂದ 2024ರ ಜಾಗತಿಕ ಸಮಾವೇಶದ ತನಕ ಎಲ್ಲ ಸಂದರ್ಭಗಳಲ್ಲೂ ಪರಿಸರ-ಪ್ರಕೃತಿ-ಜೀವಜಾಲ ಸರಪಳಿಯ ಕುರಿತು ಅಧ್ಯಯನಗಳು ನಡೆದಿವೆ. ಬಹಳಷ್ಟು ತೀರ್ಮಾನಗಳಾಗಿವೆ. ಆದರೆ ಅವುಗಳ ಪಾಲನೆ ಸರಿಯಾಗಿ ಆಗಿಲ್ಲ. ಮುಂದಿನ ಪೀಳಿಗೆಗಳಿಗೆ ಈ ಭೂಮಿಯ ಮೇಲೆ ಬದುಕಲು ಬೇಕಾದ ಇಂತಹ ಮೂಲಭೂತ ಅಂಶಗಳನ್ನು ಮಲಿನಗೊಳಿಸದೇ ಉಳಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಸುಪ್ರೀಂ ಕೋರ್ಟ್ 1981ರಲ್ಲಿ ನೀಡಿದ ಆದೇಶವೊಂದರ ಪ್ರಕಾರ, ನಮಗೆ ದೈವದತ್ತವಾಗಿ ಬಂದಿರುವ ಕೊಡುಗೆಗಳಾದ ನದಿಗಳು, ಪರ್ವತಗಳು, ಬೆಟ್ಟಗುಡ್ಡಗಳನ್ನು ನಾವ್ಯಾರೂ ನಿರ್ಮಾಣ ಮಾಡಿಲ್ಲ, ಮಾಡುವುದು ಸಾಧ್ಯವೂ ಅಲ್ಲ. ಹಾಗಿರುವಾಗ ಅವನ್ನು ಇನ್ಯಾರಿಗೋ ಮಾರಾಟ ಮಾಡಲು, ಗಣಿಗಾರಿಕೆಗೆ ಅವಕಾಶ ಕೊಡಲು ಯಾರಿಗೂ ಹಕ್ಕಿಲ್ಲ.

ಬಳ್ಳಾರಿಯ ಸ್ವಾಮಿಮಲೈ ಮತ್ತು ದೇವರಗುಡ್ಡದಂತಹ ಸಂಪದ್ಭರಿತ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅವಕಾಶ ಕೊಡುವ ಪ್ರಯತ್ನ ನಡೆದಿರುವುದನ್ನು ನಾವೆಲ್ಲ ಗಮನಿಸುತ್ತಲೇ ಇದ್ದೇವೆ. ಒಂದುವೇಳೆ ಅದಕ್ಕೆ ಅನುಮತಿ ಸಿಕ್ಕರೆ, ಮಾರ್ಪಡಿಸಲಾಗದ, ಸರಿಪಡಿಸಲಾಗದ ನಷ್ಟವಾಗಲಿದೆ. ಇದರ ಪರಿಣಾಮ ಬರೀ ಬಳ್ಳಾರಿಗೆ ಸೀಮಿತವಾಗುವುದಿಲ್ಲ. ತುಂಗಭದ್ರೆ ನದಿಗೂ ಆಗುತ್ತದೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳವರೆಗೂ ಅದರ ವಿನಾಶಕಾರಿ ಪರಿಣಾಮ ವ್ಯಾಪಿಸುತ್ತದೆ.

2024ರ ಬೇಸಿಗೆಯ ದಿನಗಳಲ್ಲಿ ತಡೆದುಕೊಳ್ಳಲು ಸಾಧ್ಯವಾಗದ ತಾಪಮಾನವನ್ನು ನಾವೆಲ್ಲ ಅನುಭವಿಸಿದ್ದೇವೆ. ಕೆಲವೆಡೆ ವಿಪರೀತ ಮಳೆ, ಪ್ರವಾಹ ಪರಿಸ್ಥಿತಿ, ಗುಡ್ಡಕುಸಿತಗಳಾಗಿವೆ. ಇವೆಲ್ಲವೂ ಭೂಮಿತಾಯಿಗೆ ಕೇಡು ಬಗೆದರೆ ಪರಿಣಾಮ ಏನಾಗುತ್ತದೆ ಎಂಬುದರ ಮುನ್ಸೂಚನೆ ಎಂಬುದನ್ನು ನಾವು ಅರಿಯಬೇಕಿದೆ.

ಬೆಂಗಳೂರಿನ ನಾಗರಭಾವಿಯ ಪೊಲೀಸ್ ಕ್ವಾರ್ಟರ್ಸ್ ಲೇನ್ ಬಳಿ ‘ಡಾ. ಜಾನಕಿ ಅಮ್ಮಾಳ್ ಎತ್ನೊಬಟ್ಯಾನಿಕಲ್ ಪಾರ್ಕ್’ (ನಾಗರಿಕ ನೈತಿಕ ಪ್ರಜ್ಞೆ) ನಿರ್ಮಾಣ ಕಾರ್ಯ ಬೆಂಗಳೂರು ಎನ್ವಿರಾನ್ಮೆಂಟಲ್ ಟ್ರಸ್ಟ್ನ ನೇತೃತ್ವದಲ್ಲಿ ನಡೆದಿದೆ. ಈ ಪಾರ್ಕ್ ಮಾದರಿಯಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯೂ ಕನಿಷ್ಠ ಹತ್ತು ಎಕರೆಯಲ್ಲಿ ವಿವಿಧ ಬಗೆಯ ಸಸ್ಯ-ವೃಕ್ಷ ಉದ್ಯಾನವನ್ನು ನಿರ್ಮಿಸಿ ಅದನ್ನು ಉಳಿಸಿ, ಬೆಳೆಸಿದರೆ, ಶುದ್ಧಗಾಳಿಯನ್ನು ಪಡೆಯಬಹುದು, ಕೆಟ್ಟುಹೋಗಿರುವ ಪರಿಸರ ವ್ಯವಸ್ಥೆಯನ್ನು ಕೊಂಚಮಟ್ಟಿಗಾದರೂ ಸುಸ್ಥಿತಿಗೆ ತರಬಹುದು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂದೆಯೂ ಗುಂಡುತೋಪುಗಳ ಪರಿಕಲ್ಪನೆ ಇತ್ತು. ನಮ್ಮಲ್ಲಿ ಪವಿತ್ರ ವನಗಳಿದ್ದವು. ಆದರೆ ಆಧುನೀಕರಣದ ಭರಾಟೆಯಲ್ಲಿ ಅವೆಲ್ಲವೂ ಇಲ್ಲವಾಗುತ್ತಿವೆ. ಅವುಗಳ ಪುನರ್ಸೃಷ್ಟಿ ಆದಾಗ ಮಾತ್ರ ಪ್ರಕೃತಿ ಉಳಿದೀತು, ಆರೋಗ್ಯಪೂರ್ಣ ಜೀವನ ಸಾಕಾರವಾದೀತು, ಮುಂದಿನ ಪೀಳಿಗೆ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾದೀತು.

ಲೇಖಕ: ನಿವೃತ್ತ ಅರಣ್ಯಾಧಿಕಾರಿ, ಪರಿಸರತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.