ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ವಿಶ್ಲೇಷಣೆ: ಅಫ್ಗನ್ ಅಂಗಳದಲ್ಲಿ ಕ್ರಿಕೆಟ್ ನಗು
ವಿಶ್ಲೇಷಣೆ: ಅಫ್ಗನ್ ಅಂಗಳದಲ್ಲಿ ಕ್ರಿಕೆಟ್ ನಗು
Published 26 ಅಕ್ಟೋಬರ್ 2023, 0:29 IST
Last Updated 26 ಅಕ್ಟೋಬರ್ 2023, 0:29 IST
ಅಕ್ಷರ ಗಾತ್ರ

ಅಫ್ಗಾನಿಸ್ತಾನದ ನೆಲದಲ್ಲಿ ಇನ್ನೂ ರಕ್ತದ ಕಲೆಗಳು ಮಾಯವಾಗಿಲ್ಲ. ಭಯೋತ್ಪಾದನೆಯ ಕರಿನೆರಳು, ಸಂತ್ರಸ್ತರ ಆಕ್ರಂದನ, ಗುಂಡಿನ ಮೊರೆತ, ಬಾಂಬ್‌ಗಳ ಸಿಡಿತದ ನಡುವೆಯೇ ಈ ದೇಶದಲ್ಲಿ ಕ್ರಿಕೆಟ್‌ ಅರಳುತ್ತಿದೆ. ಅಲ್ಲಿಯ ನೊಂದ ಜೀವಗಳಿಗೆ ತಂಪೆರೆಯುತ್ತಿದೆ. ಅಲ್ಲಿಯ ಜನಸಾಮಾನ್ಯರು ಸಂಭ್ರಮದಿಂದ ಕುಣಿದು ಕುಪ್ಪಳಿಸಲು ಅಫ್ಗಾನಿಸ್ತಾನ ಕ್ರಿಕೆಟ್ ತಂಡ ಕಾರಣವಾಗುತ್ತಿದೆ.

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಎಂಟು ದಿನಗಳ ಅಂತರದಲ್ಲಿ ಎರಡು ಬಲಿಷ್ಠ ತಂಡಗಳನ್ನು ಮಣ್ಣು ಮುಕ್ಕಿಸಿದ ಅಫ್ಗನ್ ತಂಡದ ಸಾಧನೆ ಸಣ್ಣದೇನಲ್ಲ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು 1992ರ ಚಾಂಪಿಯನ್ ಪಾಕಿಸ್ತಾನ ತಂಡಗಳನ್ನು ಮಣಿಸಿದ ಅಫ್ಗನ್ ಬಳಗವು ಭವ್ಯ ಭವಿಷ್ಯದತ್ತ ಮುಖ ಮಾಡಿದೆ.

ಈ ಎರಡೂ ಪಂದ್ಯಗಳಲ್ಲಿ ಗೆದ್ದಾಗಲೂ ಕ್ರಿಕೆಟ್ ಪ್ರೇಮಿಗಳ ವಲಯದಲ್ಲಿ ಅಚ್ಚರಿ ಮೂಡಿದೆ. ಆದರೆ ಈ ಗೆಲುವಿನ ಸಂಭ್ರಮಗಳನ್ನು ಅಫ್ಗನ್  ಆಟಗಾರರು ಆಚರಿಸಿದ ರೀತಿಯೂ ಇಲ್ಲಿ ಗಮನಾರ್ಹ. ಅತಿರೇಕದ ಕೂಗಾಟ, ನೃತ್ಯಗಳು ಇರಲಿಲ್ಲ. ಅಪ್ಪಟ ಸಂತಸದ ಸೆಳಕು ಅವರ ನೃತ್ಯದಲ್ಲಿತ್ತು. ಸ್ಪಿನ್ನರ್ ರಶೀದ್ ಖಾನ್ ಜೊತೆಗೆ ಭಾರತದ ವೀಕ್ಷಕ ವಿವರಣೆಕಾರ ಇರ್ಫಾನ್ ಪಠಾಣ್ ಕೂಡ ಹೆಜ್ಜೆಹಾಕಿದ್ದು ನೋಡುಗರ ಮನಕ್ಕೆ ಮುದ ನೀಡಿತು. ಮುಖ್ಯ ಕೋಚ್ ಜೊನಾಥನ್ ಟ್ರಾಟ್ (ಇಂಗ್ಲೆಂಡ್ ಮಾಜಿ ಆಟಗಾರ) ಅವರ ಸಮಾಧಾನಚಿತ್ತದ ತರಬೇತಿಯ ಪ್ರಭಾವ ಅದು.

ಭಾರತದ ಮಾಜಿ ಆಟಗಾರ ಅಜಯ್ ಜಡೇಜ ಮೆಂಟರ್ ಆಗಿರುವ ಅಫ್ಗನ್ ತಂಡದ ಬ್ಯಾಟರ್‌ಗಳು, ಪಾಕ್‌ ತಂಡದ ಬಲಾಢ್ಯ ಬೌಲರ್‌ಗಳನ್ನು ಎದುರಿಸಿದ ರೀತಿಯೂ ವಿಶೇಷ. ಇದರೊಂದಿಗೆ ತಾವು ದುರ್ಬಲರಲ್ಲ, ಕಿರೀಟ ಧರಿಸುವ ಕನಸು ನನಸುಗೊಳಿಸುವ ಸಾಮರ್ಥ್ಯವೂ ತಮಗಿದೆ ಎಂಬ ಸಂದೇಶವನ್ನು ಆಟಗಾರರು ನೀಡಿದ್ದಾರೆ. 

ಇಂಗ್ಲೆಂಡ್ ಮತ್ತು ಪಾಕ್ ತಂಡಗಳ ಕ್ರಿಕೆಟ್ ಆಟದ ಅನುಭವ ಮತ್ತು ಸಾಮರ್ಥ್ಯಗಳಿಗೆ ಹೋಲಿಕೆ ಮಾಡಿದರೆ ಅಫ್ಗಾನಿಸ್ತಾನ ಇನ್ನೂ ಕಿಶೋರಾವಸ್ಥೆಯಲ್ಲಿದೆ. ಅಫ್ಗಾನಿಸ್ತಾನ ಆಡುತ್ತಿರುವ ಮೂರನೇ ವಿಶ್ವಕಪ್ ಟೂರ್ನಿ ಇದು. 2009ರಿಂದ ಇಲ್ಲಿಯವರೆಗೂ ಆಡಿರುವ 157 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 75ರಲ್ಲಿ ಗೆದ್ದಿದೆ. ಅದೇ ಪಾಕ್ ತಂಡವು 966 ಏಕದಿನ ಪಂದ್ಯಗಳಲ್ಲಿ ಆಡಿದೆ. 12 ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ ಅನುಭವಿ. ಇನ್ನು ಇಂಗ್ಲೆಂಡ್ 789 ಪಂದ್ಯಗಳನ್ನು ಆಡಿದೆ.  ಆದರೆ ಈ ಬಾರಿಯ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಇದುವರೆಗೆ ಅಫ್ಗಾನಿಸ್ತಾನ ತಂಡವು ಇವೆರಡೂ ತಂಡಗಳಿಗಿಂತ ಮೇಲಿನ ಸ್ಥಾನ ಗಳಿಸಿದೆ.

ಸದಾ ಯುದ್ಧ, ಹಿಂಸೆಯ ಬೀಡಾಗಿರುವ ಅಫ್ಗಾನಿ ಸ್ತಾನದಲ್ಲಿ ಈ ಎರಡೂವರೆ ದಶಕದಲ್ಲಿ ಹತ್ತಾರು ಅಡೆತಡೆಗಳ ನಡುವೆಯೇ  ಕ್ರಿಕೆಟ್ ಬೆಳೆದ ರೀತಿಯನ್ನು ಕಂಡು ಇಡೀ ಜಗತ್ತು ಬೆರಗಾಗಿದೆ. ಕೆಲವು ವರ್ಷಗಳ ಹಿಂದೆ ಭಾರತವು  ಅಫ್ಗನ್ ಕ್ರಿಕೆಟ್‌ ತಂಡಕ್ಕೆ ನೆರವಿನ ಹಸ್ತ ಚಾಚಿತ್ತು. ಭಾರತದಲ್ಲಿಯೇ ತರಬೇತಿಗಾಗಿ ಸಕಲ ವ್ಯವಸ್ಥೆ ಕಲ್ಪಿಸಿಕೊಟ್ಟಿತ್ತು. ಇದು ಆ ದೇಶವು ಟೆಸ್ಟ್ ಮಾನ್ಯತೆ ಗಳಿಸಲು ಕೂಡ ನೆರವಾಯಿತು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಸ್ಪಿನ್ನರ್ ರಶೀದ್ ಖಾನ್, ಮೊಹಮ್ಮದ್ ನಬಿ, ನೂರ್‌ ಅಹಮದ್ ಮತ್ತು ನವೀನ್ ಉಲ್ ಹಕ್ ಅವರಂತಹ ಆಟಗಾರರೂ ಅಫ್ಗನ್‌ ಯುವಜನತೆಗೆ ಪ್ರೇರಣೆಯಾಗುತ್ತಿದ್ದಾರೆ.

ಇನ್ನು ನೆದರ್ಲೆಂಡ್ಸ್ ತಂಡದ ಕಥೆ ಕೂಡ ಆಸಕ್ತಿದಾಯಕ. ಈ ಟೂರ್ನಿಯಲ್ಲಿ ತಾನು ಆಡಿದ ಪಂದ್ಯಗಳಲ್ಲಿ ರನ್‌ಗಳ ಹೊಳೆ ಹರಿಸುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲಿನ ರುಚಿ ತೋರಿದ್ದು ಸ್ಕಾಟ್ ಎಡ್ವರ್ಡ್ ನಾಯಕತ್ವದ ಡಚ್‌ ಬಳಗ. ಟೂರ್ನಿಯಲ್ಲಿ ಆಫ್ರಿಕಾ ಬಳಗವು ಇದುವರೆಗೆ ಆಡಿದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ನೂರು ರನ್‌ಗಳಿಗಿಂತ ಹೆಚ್ಚಿನ ಅಂತರದಿಂದ ಗೆದ್ದಿದೆ.

ನೆದರ್ಲೆಂಡ್ಸ್ ತಂಡದಲ್ಲಿರುವ ಬಹುತೇಕ ಆಟಗಾರರು ವೃತ್ತಿಪರ ಕ್ರಿಕೆಟಿಗರಲ್ಲ. ಡೆಲಿವರಿ ಬಾಯ್, ಮೆಕ್ಯಾನಿಕ್, ಉಪನ್ಯಾಸಕ, ಕಂಪ್ಯೂಟರ್ ಆಪರೇಟರ್‌ ಇತ್ಯಾದಿ ಕೆಲಸಗಳಿಂದ ಉಪಜೀವನ ನಡೆಸು
ತ್ತಿರುವವರಿದ್ದಾರೆ. ಕ್ರಿಕೆಟ್ ಅವರಿಗೆ ಹವ್ಯಾಸವಷ್ಟೇ. ಆದ್ದರಿಂದ ಅದನ್ನು ಮನಃಪೂರ್ತಿ ಆಸ್ವಾದಿಸುತ್ತಿ
ದ್ದಾರೆ. ಪ್ರತಿಯೊಂದು ಕ್ಷಣವನ್ನೂ ಕಲಿಕೆಯಾಗಿ ಸ್ವೀಕರಿಸುತ್ತಿದ್ದಾರೆ. ಬೆಂಗಳೂರು ಹೊರವಲಯದ ಆಲೂರು ಕ್ರೀಡಾಂಗಣದಲ್ಲಿ ವಿಶ್ವಕಪ್ ಟೂರ್ನಿಗೂ ಮುನ್ನ ಒಂದು ತಿಂಗಳು ಅಭ್ಯಾಸ ನಡೆಸಿದ್ದರು. ಕರ್ನಾಟಕ ಕ್ರಿಕೆಟ್ ತಂಡದ ಎದುರೇ ಎರಡು ಪಂದ್ಯಗಳಲ್ಲಿ ಸೋತಿದ್ದರು. ಅವೆಲ್ಲವನ್ನೂ ಪಾಠವಾಗಿ ಸ್ವೀಕರಿಸಿದ್ದರು. ಉದಾಸೀನ ಮಾಡದೆ, ಬದ್ಧತೆಯಿಂದ ಆಡುತ್ತಿರುವ ತಂಡ ಇದು. ಡಚ್ಚರ ಪಡೆಯು ಹೋದ ವರ್ಷ ಅಡಿಲೇಡ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿಯೂ ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸಿತ್ತು. 

ಇಂತಹ ಒಂದೊಂದೇ ಅಚ್ಚರಿಯ ಗೆಲುವುಗಳನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ತಂಡ ಇದು. ವಿಶ್ವದ ಪ್ರಮುಖ ಐದು ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಆಡುವಷ್ಟು ಪಂದ್ಯಗಳನ್ನು ನೆದರ್ಲೆಂಡ್ಸ್‌ ಆಡುವುದಿಲ್ಲ. ಆದರೂ ಆಟಗಾರರ ಫಿಟ್‌ನೆಸ್‌ ಮಟ್ಟ ಮತ್ತು ಆಟದ ಬಗೆಗಿನ ಪ್ರೀತಿಯು ಯಶಸ್ಸಿಗೆ ಕಾರಣವಾಗಿರುವುದರಲ್ಲಿ ಅನುಮಾನವಿಲ್ಲ. ಇದೇ ರೀತಿ ಮುಂದುವರಿದರೆ ಭವಿಷ್ಯ ದಲ್ಲಿ ಕಿರೀಟ ಧರಿಸಿದರೂ ಅಚ್ಚರಿಯೇನಿಲ್ಲ. ಏಕೆಂದರೆ ಇಂತಹ ಅಚ್ಚರಿಗಳು ಈ ಹಿಂದೆಯೂ ನಡೆದಿವೆ.

ಭಾರತ ತಂಡವೂ ದಶಕಗಳ ಹಿಂದೆ ‘ಕಪ್ಪು ಕುದುರೆ’ ಆಗಿತ್ತು. ಮೊದಲೆರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಭಾರತದ ಕಪಿಲ್ ದೇವ್ ಬಳಗವು 1983ರಲ್ಲಿ ಹಣಿದಾಗ ಕ್ರಿಕೆಟ್ ಅಭಿಮಾನಿಗಳು ರೋಮಾಂಚನಗೊಂಡಿದ್ದರು. ಆ ಟೂರ್ನಿಯ ಫೈನಲ್‌ ನಲ್ಲಿ ವಿಂಡೀಸ್ ದೈತ್ಯರನ್ನು ಮಣಿಸಿದ್ದ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಅದೂ ಕ್ರಿಕೆಟ್ ಕಾಶಿ ಲಾರ್ಡ್ಸ್‌ ಅಂಗಳದಲ್ಲಿ. ಈ ಬಾರಿ ವೆಸ್ಟ್ ಇಂಡೀಸ್ ತಂಡವು ವಿಶ್ವ ಕಪ್ ಕ್ವಾಲಿಫೈಯರ್‌ನಲ್ಲಿಯೇ ಸೋತು ನಿರ್ಗಮಿಸಿದ್ದು ಕೂಡ ಸಣ್ಣಪುಟ್ಟ ತಂಡಗಳ ಎದುರು ಎಂಬುದು ಸೋಜಿಗ.

ಈ ಹಿಂದಿನ ವಿಶ್ವಕಪ್‌ಗಳಲ್ಲಿಯೂ ಇಂತಹ ಅಚ್ಚರಿಗಳು ನಡೆದಿವೆ. 1983ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಗೆದ್ದಿದ್ದು ಕೂಡ ಇತಿಹಾಸ. 1992ರಲ್ಲಿ ಜಿಂಬಾಬ್ವೆ ಎದುರು ಇಂಗ್ಲೆಂಡ್ ಮಣಿದಿತ್ತು. ವೆಸ್ಟ್ ಇಂಡೀಸ್ ತಂಡವನ್ನು ಕೆನ್ಯಾ (1996) ಸೋಲಿಸಿತ್ತು. 1999ರಲ್ಲಿ ಪಾಕ್ ತಂಡಕ್ಕೆ ಬಾಂಗ್ಲಾ ಸೋಲುಣಿಸಿತ್ತು. 1996ರ ವಿಶ್ವ ಚಾಂಪಿಯನ್‌ ಶ್ರೀಲಂಕಾಗೆ 2003ರಲ್ಲಿ ಕೆನ್ಯಾ ಮಣ್ಣುಮುಕ್ಕಿಸಿತ್ತು. 2007ರಲ್ಲಿ ಪಾಕ್ ತಂಡವು ಐರ್ಲೆಂಡ್ ಎದುರು ಹಾಗೂ ಭಾರತವು ಬಾಂಗ್ಲಾ ಎದುರು ಸೋತಿದ್ದವು. 2011ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಆಘಾತ ನೀಡಿದ್ದ ಐರ್ಲೆಂಡ್, 2015ರಲ್ಲಿ ವಿಂಡೀಸ್ ತಂಡಕ್ಕೂ ಪಾಠ ಕಲಿಸಿತ್ತು. ಹೋದ ಬಾರಿ ವಿಶ್ವಕಪ್‌ನಲ್ಲಿಯೂ ದಕ್ಷಿಣ ಆಫ್ರಿಕಾಕ್ಕೆ ಬಾಂಗ್ಲಾದೇಶ ತಂಡ ಸೋಲುಣಿಸಿತ್ತು.  

ವಿಶ್ವದ ಎಲ್ಲೆಡೆ ಅಬ್ಬರಿಸುತ್ತಿರುವ ಟಿ20 ಕ್ರಿಕೆಟ್‌ ಮತ್ತು ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಹಣ ಗಳಿಕೆಯನ್ನೂ ಮಾಡುತ್ತ ಸಾಂಪ್ರದಾಯಿಕವಾದ ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಸವಾಲು ಎಲ್ಲ ದೇಶಗಳಿಗೂ ಇದೆ. ಅದಕ್ಕೆ ಬೇಕಾದ ಸಂಪನ್ಮೂಲವೂ ಅತ್ಯಧಿಕ. ಇದು ಎಲ್ಲ ದೇಶಗಳಿಂದ ಸಾಧ್ಯವಾಗುತ್ತಿಲ್ಲ. ಆದರೆ ಭಾರತ ಹಣಕಾಸಿನ ವಿಚಾರದಲ್ಲಿ ಬಲಾಢ್ಯವಾಗಿರುವುದರಿಂದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ. ಇದರ ಶ್ರೇಯ ಇಲ್ಲಿಯ ಕ್ರಿಕೆಟ್‌ ತಾರೆಗಳು ಮತ್ತು ಅಭಿಮಾನಿಗಳಿಗೇ ಸಲ್ಲಬೇಕು.

ಸದ್ಯ ಏಕದಿನ ಮಾದರಿಯ ಅಳಿವು ಉಳಿವು ಕೂಡ ಈ ವಿಶ್ವಕಪ್ ಟೂರ್ನಿಯ ಯಶಸ್ಸಿನ ಮೇಲೆ ಅವಲಂಬಿತ ವಾಗಿದೆ. ಅಫ್ಗಾನಿಸ್ತಾನ ಮತ್ತು ನೆದರ್ಲೆಂಡ್ಸ್‌ನಂತಹ ತಂಡಗಳು ಆಡುತ್ತಿರುವ ರೀತಿಯು ಏಕದಿನ ಕ್ರಿಕೆಟ್‌ನತ್ತ ಅಭಿಮಾನಿಗಳು ಚಿತ್ತ ಹರಿಸುವಂತೆ ಮಾಡುತ್ತಿರುವುದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT