ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ದೇಹಕ್ಕೂ ಹಿತ ನೀಡುವ ಎಳ್ಳಿನ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

Published : 12 ಜನವರಿ 2026, 7:48 IST
Last Updated : 12 ಜನವರಿ 2026, 7:48 IST
ಫಾಲೋ ಮಾಡಿ
Comments
ಹೊಲದಲ್ಲಿ ಬೆಳೆದಿರುವ ಎಳ್ಳಿನ ಗಿಡಗಳು

ಹೊಲದಲ್ಲಿ ಬೆಳೆದಿರುವ ಎಳ್ಳಿನ ಗಿಡಗಳು

ಚಿತ್ರ: ಪ್ರಜಾವಾಣಿ

ಅಪ್ಪಟ ಭಾರತೀಯ ಎಣ್ಣೆಕಾಳು
ಭಾರತದಲ್ಲಿ ಎಳ್ಳನ್ನು ಸುಮಾರು 3000 ಸಾವಿರ ವರ್ಷಗಳ ಹಿಂದೆಯೇ ಬೆಳೆಯಲಾಗುತ್ತಿತ್ತು. ಎಳ್ಳಿನಲ್ಲಿ ವಿವಿಧ ಜಾತಿಗಳಿದ್ದು, ಅವುಗಳಲ್ಲಿ ಕೆಲವು ಜಾತಿಗಳು ಆಫ್ರಿಕಾದಲ್ಲಿವೆ. ‘ಇಂಡಿಕಮ್’ ಎಂಬ ಜಾತಿ ಭಾರತದ ಮೂಲವಾಗಿದೆ. ಇಂದಿಗೆ ಕೃಷಿ ವಿಶ್ವವಿದ್ಯಾಲಯಗಳು ಹಲವು ಎಳ್ಳಿನ ತಳಿಗಳನ್ನು ಅಭಿವೃದ್ಧಿ ಪಡಿಸಿವೆ. ಎಳ್ಳೆಣ್ಣೆ ಪ್ರಸ್ತಾಪ ವೇದಗಳಲ್ಲಿಯೂ ಇದೆ. ಸಿಂಧೂ ನಾಗರಿಕತೆ ಜನ ಎಳ್ಳಿನಿಂದ ಎಣ್ಣೆಯನ್ನು ತೆಗೆಯುವ ಕಲೆಯನ್ನು ಕಲಿತಿದ್ದರು. ಇಲ್ಲಿಂದ ವ್ಯಾಪಾರದ ಮೂಲಕ ವಿಶ್ವ ವ್ಯಾಪಿ ಹರಡಿತು ಎಂಬ ಉಲ್ಲೇಖಗಳಿವೆ.
ಚಳಿಗಾಲದ ಆರೋಗ್ಯ ರಕ್ಷಕ
ಎಳ್ಳು ಉತ್ತಮ ಗುಣಮಟ್ಟದ ಫ್ಯಾಟಿ ಆಸಿಡ್ಸ್ ಹಾಗೂ ಪ್ರೋಟೀನ್‌ಗಳ ಮೂಲವಾಗಿದೆ. ಚಳಿಗಾಲದಲ್ಲಿ ಎಳ್ಳು ಸೇವಿಸಿದರೆ, ಅದರಲ್ಲಿರುವ  ಅಪರೂಪದ ಫ್ಯಾಟಿ ಆಸಿಡ್ಸ್ ದೇಹಕ್ಕೆ ನಿರಂತರ ಶಕ್ತಿಯನ್ನು ನೀಡಬಲ್ಲದು. ಆಲಸ್ಯ ಮತ್ತು ಜಡತ್ವವನ್ನು ನಿವಾರಿಸುತ್ತದೆ. ಎಳ್ಳಿನಲ್ಲಿರುವ 'ಸೀಸಮಿನ್' ಮತ್ತು 'ಸೀಸಮೋಲಿನ್' ಎಂಬ ಸಂಯುಕ್ತಗಳು ಬಲಿಷ್ಠ ಉತ್ಕರ್ಷಣ ನಿರೋಧಕ (ಆ್ಯಂಟಿ ಆಕ್ಸಿಡೆಂಟ್) ಗುಣಗಳನ್ನು ಹೊಂದಿವೆ. ಬೆಲ್ಲದೊಂದಿಗೆ ಎಳ್ಳನ್ನು ಸೇವಿಸುವುದರಿಂದ, ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಿ, ರಕ್ತಕ್ಕೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ, ಮೆಗ್ನೀಷಿಯಮ್ ಹಾಗೂ ರಂಜಕವು ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವೈದ್ಯರು. 
ಮಕರ ಸಂಕ್ರಾಂತಿಯಲ್ಲಿ ಚಳಿಗಾಲದ ಶುಷ್ಕತೆ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ವೇಳೆ ರೋಗನಿರೋಧಕ ಶಕ್ತಿ ಕ್ಷೀಣಿಸುವುದರಿಂದ ದೇಹಕ್ಕೆ ಹೆಚ್ಚಿನ ಖನಿಜಗಳ ಅಗತ್ಯವಿರುತ್ತದೆ. ಎಳ್ಳಿನಲ್ಲಿರುವ ಸತು, ಸೆಲೆನಿಯಮ್ ಮತ್ತು ಮೆಗ್ನೀಷಿಯಮ್ ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ. ಎಳ್ಳಿನಲ್ಲಿರುವ ಎಣ್ಣೆಯ ಅಂಶ ದೇಹಕ್ಕೆ ಮೃದುತ್ವವನ್ನು ನೀಡುತ್ತದೆ. 
ಸುಪರ್ಣಾ ಮುಖರ್ಜಿ, ಕ್ಲಿನಿಕಲ್ ನ್ಯೂಟ್ರಿಷನ್, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು
ಹೂ ಕಾಯುತ್ತೀರುವ ಎಳ್ಳಿನ ಗಿಡಗಳು

ಹೂ ಕಾಯುತ್ತೀರುವ ಎಳ್ಳಿನ ಗಿಡಗಳು

ಚಿತ್ರ:ಪ್ರಜಾವಾಣಿ

ಎಳ್ಳಿನ ಉತ್ಪಾದನೆಯಲ್ಲಿ ಭಾರಿ ಇಳಿಕೆ: 
ಭಾರತ ಅತಿ ಹೆಚ್ಚು ಪ್ರದೇಶದಲ್ಲಿ ಎಳ್ಳನ್ನು ಬೆಳೆಯುವ ರಾಷ್ಟ್ರವಾಗಿದೆ. ಭಾರತದಲ್ಲಿ, ವಾರ್ಷಿಕ 15.31 ಲಕ್ಷ ಹೆಕ್ಟೇರ್ ಪದೇಶದಲ್ಲಿ ಸರಿಸುಮಾರು 8.47 ಲಕ್ಷ ಟನ್ ಎಳ್ಳನ್ನು ಉತ್ಪಾದಿಸಲಾಗುತ್ತಿದೆ. ಭಾರತದಲ್ಲಿ ಈ ಬೆಳೆಯ ಸರಾಸರಿ ಉತ್ಪಾದಕತೆಯು ಜಾಗತಿಕ ಉತ್ಪಾದಕತೆಗೆ ಹೋಲಿಸಿದಲ್ಲಿ ಗಮನಾರ್ಹವಾಗಿ ಕಡಿಮೆಯಾಗಿರುವುದನ್ನು ಕಾಣಬಹುದಾಗಿದೆ. ಅಂತೆಯೇ, ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಈ ಬೆಳೆಯನ್ನು ಸುಮಾರು 0.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಉತ್ಪಾದನೆಯು 0.14 ಲಕ್ಷ ಟನ್‍ಗಳಿದ್ದು, ಉತ್ಪಾದಕತೆ ಸರಾಸರಿ 7.80 ಕ್ವಿಂಟಾಲ್ ಪ್ರತಿ ಹೆಕ್ಟೇರಿಗೆ ಇರುವುದು ಕಂಡುಬಂದಿರುತ್ತದೆ. ಈ ಬೆಳೆಯನ್ನು ಪ್ರಮುಖವಾಗಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತದೆ. 
ಎಳ್ಳನ್ನು ಎಲ್ಲ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಆದರೆ ನೀರು ನಿಲ್ಲುವ ಜೌಗು ಮಣ್ಣಿನ ಪ್ರದೇಶ ಸೂಕ್ತವಲ್ಲ. ಮಳೆ ಬೀಳುವ ಪ್ರದೇಶಗಳಾದರೆ ಏಪ್ರಿಲ್ ಎರಡನೆಯ ವಾರದಿಂದ ಮೇ ಎರಡನೆಯ ವಾರದವರೆಗೆ ಮತ್ತು ಹಿಂಗಾರು ಭತ್ತದ ಗದ್ದೆಯಲ್ಲಿ ನವೆಂಬರ್ ಮೊದಲನೆಯ ವಾರದಿಂದ ಜನವರಿ ಕೊನೆಯ ವಾರದವರೆಗೆ ಬಿತ್ತನೆಯನ್ನು ಮಾಡಬಹುದು. ಎಳ್ಳು ವ್ಯರ್ಥ ಭೂಮಿಯಲ್ಲಿಯೂ ಬೆಳೆಯುತ್ತದೆ ಎಂಬುದು ವಿಶೇಷ.
ಡಾ. ಯಮನೂರ, ತಳಿ ತಜ್ಞರು, ಜಿಕೆವಿಕೆ, ಬೆಂಗಳೂರು.
ಮಕರ ಸಂಕ್ರಾಂತಿ ವರ್ಷವನ್ನು ಉತ್ತರಾಯಣ ಮತ್ತು ದಕ್ಷಿಣಾಯಣ ಎಂಬ ಎರಡು ಭಾಗ ಮಾಡುತ್ತದೆ. ದಕ್ಷಿಣಾಯಣ ಪಿತೃಗಳಿಗೆ, ಉತ್ತರಾಯಣ ದೇವತೆಗಳಿಗೆ ಸಂಬಂಧಿಸಿದೆ. ದಕ್ಷಿಣಾಯಣ ಎಳ್ಳನ್ನು, ಉತ್ತರಾಯಣ ಬೆಲ್ಲವನ್ನು ಸೂಚಿಸುತ್ತದೆ. ದಕ್ಷಿಣಾಯಣ ಮುಗಿದು, ಉತ್ತರಾಯಣ ಆರಂಭವಾಗುವುದರಿಂದ ಎಳ್ಳು ಅಂತ್ಯ, ಬೆಲ್ಲ ಆರಂಭವೆಂದು ಶಾಸ್ತ್ರಗಳ ಮೂಲಕ ಅರ್ಥೈಸಿಕೊಳ್ಳಬಹುದು.
ರಾಮಚಂದ್ರ ಭಟ್ಟ ಕೆಕ್ಕಾರು, ಜ್ಯೋತಿಷಿಗಳು 
ಎಳ್ಳಿನ ಪ್ರಮುಖ ತಳಿಗಳು
ಮುಖ್ಯವಾಗಿ ಎಳ್ಳಿನಲ್ಲಿ ಕಪ್ಪು, ಎಳ್ಳು ಬಿಳಿ ಎಳ್ಳು ಎಂಬ ಎರಡು ವಿಧಗಳಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಎಳ್ಳಿನ ಕೆಲವು ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ಅವು, E-8(KDS-1)1983, Navile-1 1990, T-7 1996, GT-1 2012 ಹಾಗೂ Gkvks-1 2022 ಪ್ರಮುಖ ಎಳ್ಳಿನ ತಳಿಗಳಾಗಿವೆ. ಅಲ್ಲದೇ ದೇಶದ ವಿವಿಧ ಸಂಶೋಧನಾ ಸಂಸ್ಥೆಗಳಲ್ಲಿ ಇತರೆ ತಳಿಗಳನ್ನು ಭೌಗೋಳಿಕತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಲಾಗಿದೆ.
ಎಳ್ಳಿನ ಬೆಳೆಯ ಕ್ಷೀಣತೆಗೆ ಕಾರಣವೇನು?
ಎಳ್ಳಿನ ಬೇಸಾಯದಿಂದ ಹೆಚ್ಚು ಆದಾಯ ಲಭ್ಯವಿಲ್ಲದಿರುವುದು, ರಾಸುಗಳಿಗೆ ಮೇವಾಗಿ ಬಳಕೆಯಾಗದಿರುವುದು,‌ ಇಳುವರಿ ಕಡಿಮೆ ಹಾಗೂ ಸೂಕ್ತ ಬೆಲೆ ಲಭ್ಯವಾಗದಿರುವುದು ಎಳ್ಳಿನ ಬೇಸಾಯದ ಕ್ಷೀಣತೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ರೈತರು ಇತರೆ ಲಾಭದಾಯಕ ಬೆಳೆಗಳ ಕಡೆಗೆ ಗಮನವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT