ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸ್ವದೇಶಿ ಚಿಂತನೆ ಮುಂದಿರುವ ಪ್ರಶ್ನೆಗಳು

Last Updated 3 ಜುಲೈ 2020, 20:20 IST
ಅಕ್ಷರ ಗಾತ್ರ

ಚೀನಾದ ಕಿರುಕುಳ ಜಾಸ್ತಿಯಾದ ನಂತರ ನಮ್ಮಲ್ಲಿ ಸ್ವದೇಶಿ ಚಿಂತನೆಯ ಭಾವನಾತ್ಮಕ ಪ್ರತಿಕ್ರಿಯೆಗಳು ಜೋರಾಗಿವೆ. ಭಾವನಾತ್ಮಕ ಎಂದಾಕ್ಷಣ ನಿರ್ಲಕ್ಷಿಸತಕ್ಕದ್ದಲ್ಲ. ಭಾವನೆಯು ಸಹಜವಾದುದು. ಎಲ್ಲ ಜೀವಿಗಳಲ್ಲೂ ಇರುವಂತಹುದು. ವೈಚಾರಿಕತೆಯು ಮನುಷ್ಯನಲ್ಲಿ ಮಾತ್ರ ಇರುವಂತಹುದು. ಆದರೆ, ಸಹಜವಾಗಿ ಮನುಷ್ಯನೂ ಭಾವಜೀವಿಯೇ. ಆದ್ದರಿಂದ ಭಾವನಾತ್ಮಕ ಪ್ರತಿಕ್ರಿಯೆ ಅರ್ಥಹೀನವಲ್ಲ.

ಆದರೆ, ಭಾವನಾತ್ಮಕ ಪ್ರತಿಕ್ರಿಯೆಯು ಕ್ರಮೇಣ ವೈಚಾರಿಕ ವಿವೇಕವಾಗಿ ಬೆಳೆದು ವಾಸ್ತವದಲ್ಲಿ ಕಾರ್ಯನಿರ್ವಹಿಸಲು ತೊಡಗಿದಾಗ ಮಾತ್ರ ಯಶಸ್ಸು ಸಾಧ್ಯವಾಗು ತ್ತದೆ. ಭಾವನಾತ್ಮಕತೆಯು ವೈಚಾರಿಕ ನಡೆಗೆ ಪ್ರೇರಕಶಕ್ತಿಯಾಗಬಲ್ಲದೇ ಹೊರತು ಅದೇ ಯಶಸ್ಸನ್ನು ತರಲಾರದು. ಆದ್ದರಿಂದ ಸ್ವದೇಶಿ ಚಿಂತನೆಯು ವೈಚಾರಿಕ ವಾಸ್ತವದ ಅರಿವಿನಲ್ಲಿ ಬೆಳೆಯಬೇಕಾದ ಅಗತ್ಯವಿದೆ.

ಭಾರತದ ವರ್ತಮಾನದ ಸ್ವದೇಶಿ ಚಿಂತನೆಯನ್ನು ಮೂರು ಮಜಲುಗಳಲ್ಲಿ ನೋಡಬೇಕು. ಮೊದಲನೆಯ ದಾಗಿ, ಸ್ವದೇಶಿ ಚಿಂತನೆಯ ಜೊತೆಯಲ್ಲಿಯೇ ಮಹಾತ್ಮ ಗಾಂಧಿ, ದೀನದಯಾಳ್ ಉಪಾಧ್ಯಾಯ, ರಾಜೀವ್ ದೀಕ್ಷಿತ್ ಮುಂತಾದವರ ಹೆಸರುಗಳು ಕೇಳಿಬರುತ್ತವೆ. ಇವೆಲ್ಲವುಗಳ ಮೂಲ, ಗಾಂಧಿ ಚಿಂತನೆಯೇ ಆಗಿದೆ.

ಆದರೆ, ಗಾಂಧಿಯವರ ಸ್ವದೇಶಿ ಪರಿಕಲ್ಪನೆಯು ಚೀನಾ ಅಥವಾ ಇನ್ನಾವುದೇ ದೇಶದ ತಂತ್ರಜ್ಞಾನದ ನಿರಾಕರಣೆಗೆ ಮಿತವಾಗುವುದಿಲ್ಲ. ಏಕೆಂದರೆ ಗಾಂಧಿ ಚಿಂತನೆಯು ಬರೀ ಆರ್ಥಿಕ ಪರಿಕಲ್ಪನೆಯಲ್ಲ. ಅದು ಸಾಂಸ್ಕೃತಿಕ, ವಿಕೇಂದ್ರಿತ ಆಡಳಿತಾತ್ಮಕ, ಸಾಮಾಜಿಕ, ಪರಿಸರ ಸಂರಕ್ಷಣೆ, ಉದಾತ್ತ ಚಿಂತನೆ, ಶೈಕ್ಷಣಿಕ ಪದ್ಧತಿಯ ಬಹು ಆಯಾಮಗಳನ್ನು ಹೊಂದಿದೆ. ಗಾಂಧಿ ಸ್ವದೇಶಿ ಚಿಂತನೆಯು ಇವೆಲ್ಲವನ್ನೂ ಒಳಗೊಂಡ ಜೀವನ ಪದ್ಧತಿಯಲ್ಲಿ ಯಶಸ್ವಿಯಾಗುವ ಆರ್ಥಿಕ ಚಿಂತನೆಯೇ ವಿನಾ ಬೃಹತ್ ಉದ್ದಿಮೆಗಳನ್ನು ಇದೇ ರೀತಿಯಲ್ಲಿ ಉಳಿಸಿಕೊಂಡು ಯಂತ್ರ ನಾಗರಿಕತೆಯ ಒಳಗೇ ಈ ಚಿಂತನೆಯನ್ನು ಜಾರಿಗೊಳಿಸಲು ಬರುವುದಿಲ್ಲ.

ಯಂತ್ರಗಳ ಇರುವಿಕೆಯೇ ಬೇರೆ, ಯಂತ್ರ ನಾಗರಿಕತೆಯೇ ಬೇರೆ. ಗಾಂಧಿ ಚಿಂತನೆಯ ಗ್ರಾಮಸ್ವರಾಜ್ಯದಲ್ಲೂ ಯಂತ್ರಗಳು ಇರುತ್ತವೆ. ಆದರೆ ಯಂತ್ರ ನಾಗರಿಕತೆ ಇರುವುದಿಲ್ಲ. ವರ್ತಮಾನದ ಭಾರತವು ಯಂತ್ರ ನಾಗರಿಕತೆಗೆ ಅದೆಷ್ಟು ಶರಣಾಗಿದೆ ಎಂದರೆ, ಮನುಷ್ಯರನ್ನು ಅವರ ಹೆಸರನ್ನು ಬಿಟ್ಟು ಸಂಖ್ಯೆ ನೀಡಿ, ಸಂಖ್ಯೆಯ ಮುಖಾಂತರ ಮನುಷ್ಯರನ್ನು ಗುರುತಿಸುವ ಪದ್ಧತಿಗಳೂ ಅನೇಕ ವಲಯಗಳಲ್ಲಿ ಇವೆ.

ಗಾಂಧಿ ಸ್ವದೇಶಿ ಚಿಂತನೆಯು ಯಾರನ್ನೂ ಹಣಿಯುವ ಸಾಧನವಲ್ಲ. ನಮಗೆ ನಾವೇ ಸ್ವಾವಲಂಬಿಯಾಗಿ ಸ್ವಯಂಪೂರ್ಣತೆಯನ್ನು ಪಡೆದಾಗ ತಾನೇ ತಾನಾಗಿ ಯಾರ ಹಂಗೂ ನಮಗಿರುವುದಿಲ್ಲ. ಎದುರಿಸುವುದು ಅಲ್ಲಿ ಉದ್ದೇಶವಾಗಿರುವುದಿಲ್ಲ. ಆದರೆ ಪರಿಣಾಮ ಅದೇ ಆಗಿರುತ್ತದೆ. ಆದರೆ, ವರ್ತಮಾನದ ಸ್ವದೇಶಿ ಚಿಂತನೆಯು ಚೀನಾವನ್ನು ಎದುರಿಸಬೇಕೆಂಬ ಹಂಬಲದಿಂದ ಅಭಿಪ್ರೇರಿತವಾಗಿರುವುದೇ ವಿನಾ ಸ್ವಯಂಪೂರ್ಣತೆಯ ಹಂಬಲದಿಂದ ಅಲ್ಲ. ಹಾಗಿರುವಾಗ ಚೀನಾದನಡವಳಿ ಕೆಗೆ ಪ್ರತಿಕ್ರಿಯಾತ್ಮಕವಾಗಿ ಬಂದಿರುವ ಭಾವನೆಗಳನ್ನು ಸ್ವಯಂಪೂರ್ಣತೆಯ ಆಕಾಂಕ್ಷೆಯಾಗಿ ಪರಿವರ್ತಿಸುವ ನಾಯಕತ್ವದ ಅಗತ್ಯವಿದೆ. ಜನಸಮುದಾಯಕ್ಕೆ ಆ ರೀತಿಯ ವೈಚಾರಿಕ ಮಾರ್ಗದರ್ಶನ ಬೇಕಾಗಿದೆ. ಇದರ ಮೊದಲ ಹಂತ ಆಡಳಿತ ವಿಕೇಂದ್ರೀಕರಣ. ಆಡಳಿತ ವಿಕೇಂದ್ರೀಕರಣದ ಒತ್ತಾಸೆ ಪ್ರಾರಂಭವಾಗದ ಹೊರತು ಗಾಂಧಿ ಚಿಂತನೆಯ ಸ್ವದೇಶಿ ತತ್ವಕ್ಕೆ ಯಾವುದೇ ರೀತಿಯ ವೈಚಾರಿಕ ನಡೆ ಪ್ರಾಪ್ತವಾಗುವುದಿಲ್ಲ.

ಎರಡನೆಯದು, ಪ್ರತಿಕ್ರಿಯಾತ್ಮಕ ಸ್ವದೇಶಿ ಚಿಂತನೆ ಯನ್ನು ಸಾಕಾರಗೊಳಿಸುವುದು. ಇದರಲ್ಲಿ ರಾಷ್ಟ್ರೀಯತಾವಾದಕ್ಕೆ ಮಹತ್ವವಿದೆಯೇ ವಿನಾ ಗಾಂಧಿ ಚಿಂತನೆಗಳಿಗೆ ಮಹತ್ವ ಇರುವುದಿಲ್ಲ. ಗಾಂಧೀಜಿಗಿಂತ ಹೆಚ್ಚಾಗಿ ಇದು ಪಂಡಿತ್ ನೆಹರೂ ಅವರ ಚಿಂತನೆಗಳಿಗೆ ನಿಕಟವಾದದ್ದು. ಯಂತ್ರ ನಾಗರಿಕತೆ ಹಾಗೆಯೇ ಇರುತ್ತದೆ. ಯಂತ್ರಗಳನ್ನು ಮಾತ್ರ ಚೀನಾ ಅಥವಾ ಬೇರೆ ದೇಶಗಳಿಂದ ತರಿಸಿ ಕೊಳ್ಳುವ ಬದಲು ಭಾರತದಲ್ಲೇ ಉತ್ಪಾದಿಸಬೇಕು ಎನ್ನುವುದು ಇಲ್ಲಿರುವ ತತ್ವ.

ಪಂಡಿತ್ ನೆಹರೂ ಅವರ ಅಧಿಕಾರದ ಅವಧಿಯಲ್ಲಿ ಭಿಲಾಯ್, ಬೊಕಾರೊ, ದುರ್ಗಾಪುರದಲ್ಲಿ ಕಬ್ಬಿಣ ಮತ್ತು ಉಕ್ಕಿನ ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸಿ, ದೇಶದ ಯಂತ್ರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ ಹಾಗೆ ಈಗಲೂ ಮಾಡಲು ಸಾಧ್ಯವಿದೆ. ಚೀನಾದ ಆ್ಯಪ್‌ಗಳಿಗೆ ಬದಲಿಯಾಗಿ ಭಾರತದಲ್ಲೇ ಸಿದ್ಧಪಡಿಸುವುದು, ಚೀನಾದ ಅಥವಾ ಇನ್ನಾವುದೇ ದೇಶದ ಉತ್ಪಾದನೆಗಳಿಗೆ ಬದಲಿಯಾಗಿ ಭಾರತದಲ್ಲೇ ಅವುಗಳನ್ನು ಉತ್ಪಾದಿಸುವುದು ಮತ್ತು ಭಾರತದ ಉತ್ಪಾದನೆಗಳನ್ನೇ ಖರೀದಿಸುವಂತೆ ಪ್ರೋತ್ಸಾಹಿಸುವುದು ಮುಂತಾದವು ಈ ಮಾದರಿಯ ಸ್ವದೇಶಿ ಚಿಂತನೆಯಲ್ಲಿ ಸೇರಿಕೊಳ್ಳುತ್ತವೆ. ಇದು ಒಂದು ರೀತಿಯಲ್ಲಿ ಸ್ಪರ್ಧಾತ್ಮಕ ಸ್ವದೇಶಿ ಚಿಂತನೆಯಾಗಿದೆ.

ಈ ಸ್ವದೇಶಿ ಚಿಂತನೆಯು ಉತ್ಪಾದನಾ ವಿಧಾನದಲ್ಲಾಗಲೀ ಜೀವನ ವಿಧಾನದಲ್ಲಾಗಲೀ ಯಾವ ಬದಲಾವಣೆಯನ್ನೂ ತರುವುದಿಲ್ಲ. ದುರ್ಬಲ ವರ್ಗ ಮತ್ತು ಪ್ರಬಲ ವರ್ಗಗಳ ಸ್ಥಿತಿಗತಿಗಳಲ್ಲಿ ವ್ಯತ್ಯಾಸವಾಗು ವುದಿಲ್ಲ. ಚೀನಾದವನ ಕೈಸೇರುವ ಭಾರತೀಯರ ಹಣವು ಒಬ್ಬ ಭಾರತೀಯ ಉದ್ಯಮಿಯ ಕೈಗೇ ಸೇರುತ್ತದೆ ಎನ್ನುವುದಷ್ಟೇ ಇಲ್ಲಿ ಆಗುವ ಬದಲಾವಣೆ. ಅದರಲ್ಲಿಯೂ ಉದ್ಯಮವನ್ನು ಭಾರತೀಯನೇ ನಡೆಸಿ ತನ್ನ ಪರವಾಗಿ ಉತ್ಪಾದಿಸುವ ಜವಾಬ್ದಾರಿಯನ್ನು ಚೀನಾ ಅಥವಾ ಅಮೆ ರಿಕದ ಕಂಪನಿಗಳಿಗೆ ಗುತ್ತಿಗೆ ಕೊಡಬಾರದೆಂದಿಲ್ಲ. ಆಗ ಭಾರತೀಯರ ಹಣ ಪ್ರತ್ಯಕ್ಷವಾಗಿ ಚೀನೀಯರ ಕೈಸೇರುವ ಬದಲು ಪರೋಕ್ಷವಾಗಿ ಸೇರಬಲ್ಲದು.

ಈ ಪ್ರಕ್ರಿಯೆಗೆ ಇನ್ನೊಂದು ರಾಜಕೀಯಾತ್ಮಕ ಆಯಾಮವಿದೆ. ಪ್ರಬಲ ರಾಷ್ಟ್ರಗಳು ಭಾರತದ ಮೇಲೆ ಯುದ್ಧಕ್ಕೆ ಮುಂದಾಗುವುದಿಲ್ಲ. ಏಕೆಂದರೆ 130 ಕೋಟಿ ಜನಸಂಖ್ಯೆಯ ಬೃಹತ್ ಮಾರುಕಟ್ಟೆ ಅವುಗಳಿಗೆ ಬೇಕು. ಭಾರತದಲ್ಲಿರುವ ಅವುಗಳ ವ್ಯಾಪಾರಿ ಹಿತಾಸಕ್ತಿ
ಯನ್ನು ಅವು ರಕ್ಷಿಸಿಕೊಳ್ಳಬೇಕು. ಪ್ರತಿಸ್ಪರ್ಧಾತ್ಮಕ ಸ್ವದೇಶಿ ಚಿಂತನೆಯು ಕ್ರಿಯೆಗೆ ಇಳಿದರೆ, ಪ್ರಬಲ ರಾಷ್ಟ್ರಗಳ ಈ ಹಿತಾಸಕ್ತಿಗೆ ಪೆಟ್ಟು ಬೀಳುತ್ತದೆ. ಆಗ ಅವು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ಅವಕಾಶ ಇದೆ. ಅಂತರ ರಾಷ್ಟ್ರೀಯ ವೇದಿಕೆಗಳ ನಿಭಾವಣೆ ಭಾರತಕ್ಕೆ ಬಲುಸವಾಲಿನದ್ದಾಗಲಿದೆ. ಆದ್ದರಿಂದ ಈ ಮಾದರಿಯ ಸ್ವದೇಶಿ ಚಿಂತನೆಯ ಅನುಷ್ಠಾನದಲ್ಲಿ ಜನರ ಪಾಲುದಾರಿಕೆಯು ಚಿಂತನಾತ್ಮಕವಾಗಿ ಮಹತ್ವದ್ದಾಗುವುದಿಲ್ಲ. ರಾಜಕೀಯ ನಾಯಕತ್ವಕ್ಕೇನೆ ಚಿಂತನಾತ್ಮಕ ಮಹತ್ವವಿರುವುದು. ಪ್ರತಿ ಸ್ಪರ್ಧಾತ್ಮಕ ಸ್ವದೇಶಿ ಚಿಂತನೆಯ ಅಡ್ಡ ಪರಿಣಾಮಗಳನ್ನು ನಿರ್ವಹಿಸಬೇಕಾದದ್ದು ರಾಜಕೀಯ ನಾಯಕತ್ವವೇ ಆಗಿರುವುದರಿಂದ ನಿರ್ದೇಶನವನ್ನೂ ರಾಜಕೀಯ ನಾಯಕತ್ವವೇ ನೀಡಬೇಕಾಗುತ್ತದೆ. ಕೊಳ್ಳುವಿಕೆಯಲ್ಲಿ ಮಾತ್ರ ಜನರ ಪಾತ್ರ ಮಹತ್ವದ್ದಾಗಿರುತ್ತದೆ. ರಾಜಕೀಯ ನಾಯಕತ್ವವು ಈ ದಿಸೆಯಲ್ಲಿ ಸ್ಪಷ್ಟ ನಿರ್ದೇಶನವನ್ನು ನೀಡುವ ತನಕವೂ ಕಾಯಬೇಕಾಗುತ್ತದೆ.

ಈ ಪರಿಕಲ್ಪನೆಯ ಮೂರನೆಯ ಆಯಾಮ ಜನರ ಲ್ಲಿದೆ. ಗಾಂಧಿ ಚಿಂತನೆಯ ಸ್ವದೇಶಿ ಚಿಂತನೆ ಕಷ್ಟದ್ದು; ಆದರೆ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಜನರ ಆಸಕ್ತಿ, ಅಭಿರುಚಿಗಳೇ ಬದಲಾಗುವುದರಿಂದ ಪ್ರತಿಸ್ಪರ್ಧೆಯೇ ಏರ್ಪಡುವುದಿಲ್ಲ.

ಆದರೆ ಇದಕ್ಕೆ ಜನರಲ್ಲಿ ಪ್ರಬಲ ಇಚ್ಛಾಶಕ್ತಿಯನ್ನು ರೂಪಿಸುವ ಚಳವಳಿ ಬೇಕು. ಗಾಂಧಿಯವರು ಇದನ್ನು ಮಾಡಿದ್ದು ಕೂಡ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಇನ್ನೂ ರಾಜಕೀಯ ಪಕ್ಷವಾಗದೆ ಚಳವಳಿಯ ರೂಪದಲ್ಲಿ ದ್ದಾಗ ಎಂಬುದನ್ನು ಗಮನಿಸಬೇಕು. ಜನರಲ್ಲಿ ಅಂತಹ ಪ್ರಬಲ ಇಚ್ಛಾಶಕ್ತಿಯನ್ನು ರೂಪಿಸುವ ಶಕ್ತಿ ಇರುವುದು ಚಳವಳಿಗಳಿಗೆ ಮಾತ್ರ. ಆದರೆ ಭಾರತದಲ್ಲಿ ಚಳವಳಿಗಳೇ ಮರೆಗೆ ಸರಿದಿರುವ ಕಾಲದಲ್ಲಿ ಇದನ್ನು ಆಲೋಚಿಸಲಾಗು ತ್ತಿದೆ ಎನ್ನುವುದು ಹೇಗೆ ಒಂದು ವಿಡಂಬನೆಯಾಗಿಭಾಸವಾಗುತ್ತದೆಯೋ ಹಾಗೆಯೇ ಅದು ಭವಿಷ್ಯದ ಸಾಧ್ಯತೆಯ ಬೀಜವನ್ನೂ ಹೊಂದಿರಲು ಸಾಧ್ಯವಿದೆ.

ಚಳವಳಿಗಳು ಸ್ತಬ್ಧಗೊಂಡಾಗ ಜನರು ಎಲ್ಲವನ್ನೂ ರಾಜಕೀಯದಿಂದ ನಿರೀಕ್ಷಿಸುತ್ತಾರೆ. ಜನರ ಚಿಂತನೆಗಳು ಪಕ್ಷಗಳ ಚಿಂತನೆಗಳಿಂದ ರೂಪಿಸಲ್ಪಟ್ಟು ಜನರು ಪರ- ವಿರೋಧದ ಬಣಗಳಾಗಿ ರೂಪಾಂತರಗೊಳ್ಳುತ್ತಾರೆ. ಆದರೆ ಯಾವ ದೇಶದಲ್ಲೂ ಯಾವ ಕಾಲದಲ್ಲೂ ಎಲ್ಲವನ್ನೂ ರಾಜಕೀಯ ನಾಯಕತ್ವವೇ ಮಾಡಲು ಬರುವುದಿಲ್ಲ. ಉದಾತ್ತ ಚಿಂತನೆಯ, ಉನ್ನತ ಆಕಾಂಕ್ಷೆಯ ಚಳವಳಿಗಳು ಬೇಕಾಗುತ್ತವೆ. ಬಹುಶಃ ವರ್ತಮಾನದ ಸ್ವದೇಶಿ ಪ್ರತಿಪಾದನೆಯ ಗರ್ಭದಲ್ಲಿ ಚಳವಳಿಯೊಂದರ ಭ್ರೂಣದ ಆಕಾಂಕ್ಷೆ ಹುದುಗಿದೆಯೇನೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT