ಪ್ರತಿಸಲ ಒಲಿಂಪಿಕ್ ಕೂಟ ಮುಗಿದ ನಂತರ ಭಾರತ ಪಡೆದ ಪದಕಗಳ ಸಂಖ್ಯೆಯ ಬಗ್ಗೆ ಚರ್ಚೆಗಳು ನಡೆಯುವುದು ಸಾಮಾನ್ಯ. ಆದರೆ ಈ ಸಲದ ಪ್ಯಾರಿಸ್ ಒಲಿಂಪಿಕ್ಸ್ ಇದಕ್ಕೆ ಅಪವಾದ. ಈ ಬಾರಿ ಭಾರತವು ಜಯಿಸಿದ್ದಕ್ಕಿಂತ ಅಲ್ಪ ಅಂತರದಲ್ಲಿ ಕೈತಪ್ಪಿಸಿಕೊಂಡ ಪದಕಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ.
ಏಕೆಂದರೆ, ಆರು ಕ್ರೀಡೆಗಳಲ್ಲಿ ನಾಲ್ಕನೇ ಸ್ಥಾನ ಪಡೆದ ಕ್ರೀಡಾಪಟುಗಳು ಕಂಚಿನ ಪದಕವನ್ನು ಸ್ವಲ್ಪ ಅಂತರದಲ್ಲಿ ಕಳೆದುಕೊಂಡಿದ್ದಾರೆ. ದೇಹತೂಕದಲ್ಲಿ 100 ಗ್ರಾಂ ಹೆಚ್ಚಾಗಿದ್ದರಿಂದ ವಿನೇಶ್ ಫೋಗಟ್ ಅವರು ಕುಸ್ತಿ ಫೈನಲ್‌ನಿಂದ ಅನರ್ಹಗೊಂಡು ಪದಕ ಜಯಿಸುವ ಅವಕಾಶ ಕಳೆದುಕೊಳ್ಳಬೇಕಾಯಿತು. ಇದು ಸೇರಿ ಒಟ್ಟು ಏಳು ಪದಕಗಳ ಜಯದ ಹೊಸ್ತಿಲಿನಲ್ಲಿ ನಿರಾಶೆ ಎದುರಾಗಿದೆ. ಇದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಒಟ್ಟು ಪದಕಗಳ ಸಂಖ್ಯೆಗೆ ಸಮ.
ಶೂಟಿಂಗ್‌ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆದ್ದರು. ಆದರೆ, 25 ಮೀಟರ್ಸ್ ಸ್ಪೋರ್ಟ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸುವ ಅವರ ಗುರಿ ಈಡೇರಲಿಲ್ಲ. ಶೂಟಿಂಗ್ ಕ್ರೀಡೆಯಲ್ಲಿಯೇ ಮಹೇಶ್ವರಿ ಚೌಹಾಣ್– ಅನಂತ್‌ಜೀತ್ ನರೂಕಾ (ಸ್ಕೀಟ್ ಮಿಶ್ರ ತಂಡ), ಅರ್ಜುನ್ ಬಬುತಾ (ಪುರುಷರ 10 ಮೀ. ರೈಫಲ್ ಶೂಟಿಂಗ್), ಲಕ್ಷ್ಯ ಸೇನ್ (ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್), ಅಂಕಿತಾ ಭಕತ್– ಧೀರಜ್ ಬೊಮ್ಮದೇವರ (ಆರ್ಚರಿ) ಹಾಗೂ ಮೀರಾಬಾಯಿ ಚಾನು (ಮಹಿಳೆಯರ ವೇಟ್‌ಲಿಫ್ಟಿಂಗ್) ಅವರು ಅತ್ಯಲ್ಪ ಅಂತರದಲ್ಲಿ ಪದಕ ತಪ್ಪಿಸಿಕೊಂಡವರು.
ಲೋಕಾಭಿರಾಮವಾಗಿ ಮಾತನಾಡುವುದಾದರೆ, ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ದೊಡ್ಡ ಅಂತರವೇನಿಲ್ಲ. ಆದರೆ ಕ್ರೀಡಾಕ್ಷೇತ್ರದಲ್ಲಿ ಈ ಎರಡು ಅಂಕಿಗಳ ನಡುವೆ ಅಜಗಜಾಂತರವಿದೆ. ಈ ಬಾರಿ ನಾಲ್ಕನೇ ಸ್ಥಾನ ಪಡೆದವರಲ್ಲಿ ಎಷ್ಟು ಮಂದಿ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಮತ್ತೆ ಒಲಿಂಪಿಕ್ಸ್ ಆಡುವ ಅವಕಾಶ ಸಿಗಬಹುದು?
ಇದಕ್ಕೆ ಸೂಕ್ತ ಉದಾಹರಣೆಯೆಂದರೆ, ಭಾರತ ಮಹಿಳಾ ಹಾಕಿ ತಂಡ. 2020ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ವನಿತೆಯರು ನಾಲ್ಕನೇ ಸ್ಥಾನ ಪಡೆದಿದ್ದರು. ಆಗ ತಂಡಕ್ಕೆ ಮೆಚ್ಚುಗೆಯ ಮಹಾಪೂರ ಹರಿದುಬಂದಿತ್ತು. ಆದರೆ ಈ ಸಲದ ಒಲಿಂಪಿಕ್ ಕೂಟಕ್ಕೆ ಮಹಿಳಾ ತಂಡವು ಅರ್ಹತೆ ಗಿಟ್ಟಿಸಲಿಲ್ಲ.
ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, ನಾಲ್ಕನೇ ಸ್ಥಾನ ಪಡೆದಿರುವುದು ಶುಭಸಂಕೇತ ಎನ್ನಬಹುದು. ಏಕೆಂದರೆ, ದಶಕಗಳ ಹಿಂದೆ ಭಾರತದ ಆಟಗಾರರು ನಾಕೌಟ್ ಹಂತ ತಲುಪಿದ್ದೇ ಅಪರೂಪವಾಗಿತ್ತು. ಈಗ ಅಮೆರಿಕ, ಚೀನಾ ಮತ್ತು ಯುರೋಪ್ ದೇಶಗಳಿಗೆ ಕಠಿಣ ಪೈಪೋಟಿಯೊಡ್ಡುವ ಮಟ್ಟಕ್ಕೆ ಬೆಳೆದಿರುವುದು ಆಶಾದಾಯಕ. ಆದರೆ ಇಷ್ಟು ಸಾಕೆ?
ನಮ್ಮ ಕ್ರೀಡಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಇದು ಸಕಾಲ ಎನ್ನುತ್ತಾರೆ ಹಲವು ಕ್ರೀಡಾಪಟುಗಳು. ಲಕ್ಷ್ಯ ಸೇನ್ ಸೆಮಿಫೈನಲ್‌ನಲ್ಲಿ ಮಲೇಷ್ಯಾ ಎದುರಾಳಿಯ ಮುಂದೆ ಸೋತ ನಂತರ, ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಅವರು ಹೇಳಿದ ಮಾತುಗಳು ಇಲ್ಲಿ ಪ್ರಸ್ತುತ.
‘ಒಂದು ವಿಭಾಗವು ಒಬ್ಬ ಆಟಗಾರನ ಮೇಲಷ್ಟೇ ಅವಲಂಬಿತವಾಗಬಾರದು. ಹೆಚ್ಚು ಆಯ್ಕೆಗಳು ಇರಬೇಕು. ಪ್ರತಿ ವಿಭಾಗದಲ್ಲಿಯೂ ದೇಶವನ್ನು ಪ್ರತಿನಿಧಿಸುವ ಆಟಗಾರರು ಇರಬೇಕು. ಎರಡನೇ ಸಾಲಿನ ಆಟಗಾರರನ್ನು ಬೆಳೆಸಬೇಕು. ಕ್ರಿಕೆಟ್‌ನಲ್ಲಿ ಅಂತಹ ಮಾದರಿಯಿದೆ. ಸೀನಿಯರ್ ತಂಡ, ಎ ತಂಡ, 19 ವರ್ಷದೊಳಗಿನವರು, 17 ವರ್ಷದೊಳಗಿನವರ ತಂಡಗಳು ಇವೆ. ಇಂತಹ ವ್ಯವಸ್ಥೆ ಬೇರೆ ಕ್ರೀಡೆಗಳಲ್ಲಿಯೂ ಬರಬೇಕು. ನಮ್ಮಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ’ ಎಂಬುದು ಪ್ರಕಾಶ್ ಅವರ ಅಭಿಮತ.
ಅಲ್ಲದೆ ಈಗ ಮೊದಲಿಗಿಂತಲೂ ಹೆಚ್ಚು ಸೌಲಭ್ಯಗಳು ಸಿಗುತ್ತಿವೆ. ಆದ್ದರಿಂದ ಆಟಗಾರರೂ ಉತ್ತರದಾಯಿತ್ವದ ಹೊಣೆ ಹೊರಬೇಕು. ಗೆಲುವಿನಂಚಿನಲ್ಲಿ ಆಗುವ ಒತ್ತಡ ನಿರ್ವಹಣೆಯನ್ನು ಕಲಿಯಬೇಕು. ಜವಾಬ್ದಾರಿಯುತವಾಗಿ ಆಡುವುದನ್ನು ರೂಢಿಸಿಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.
ಅವರ ಮಾತುಗಳು ಬ್ಯಾಡ್ಮಿಂಟನ್ ವಿಭಾಗಕ್ಕೆ ಮಾತ್ರವಲ್ಲ, ಬೇರೆ ಕ್ರೀಡೆಗಳಿಗೂ ಅನ್ವಯವಾಗುತ್ತವೆ. ವೇಟ್‌ಲಿಫ್ಟಿಂಗ್‌ನ 49 ಕೆ.ಜಿ. ವಿಭಾಗದಲ್ಲಿ ಮೀರಾಬಾಯಿ ಅವರೊಬ್ಬರನ್ನು ಬಿಟ್ಟರೆ, ಉಳಿದ ತೂಕ ವಿಭಾಗಗಳಲ್ಲಿ ಭಾರತದ ಸ್ಪರ್ಧಿಗಳು ಇರಲಿಲ್ಲ. ಪುರುಷರ ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಬಿಟ್ಟರೆ ಬೇರಾರೂ ಕಣದಲ್ಲಿರಲಿಲ್ಲ. ಟೆನಿಸ್‌ನಲ್ಲಿ ಮೂವರು, ಈಜಿನಲ್ಲಿ ಇಬ್ಬರು (ಕರ್ನಾಟಕದ ದಿನಿಧಿ ದೇಸಿಂಗು, ಶ್ರೀಹರಿ ನಟರಾಜ್), ಈಕ್ವೆಸ್ಟ್ರಿಯನ್ ಹಾಗೂ ಜುಡೊ ಕ್ರೀಡೆಗಳಲ್ಲಿ ತಲಾ ಒಬ್ಬರು ಇದ್ದರು. ಅಷ್ಟಕ್ಕೂ ಒಲಿಂಪಿಕ್ಸ್‌ನಲ್ಲಿದ್ದ 32 ಕ್ರೀಡೆಗಳ ಪೈಕಿ ಭಾರತವು ಸ್ಪರ್ಧೆ ಮಾಡಿದ್ದು 16 ವಿಭಾಗಗಳಲ್ಲಿ ಮಾತ್ರ. ಬರೀ 117 ಸ್ಪರ್ಧಿಗಳನ್ನು ಕಳಿಸಿ 50ಕ್ಕೂ ಹೆಚ್ಚು ಪದಕಗಳನ್ನು ನಿರೀಕ್ಷೆ ಮಾಡುವುದು ಎಷ್ಟು ಸರಿ?
ಪ್ರಕಾಶ್ ಅವರು ಹೇಳಿದಂತೆ, ಈಗ ತಕ್ಕಮಟ್ಟಿಗೆ ಸೌಲಭ್ಯಗಳಿವೆ. ಈ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳಿಗೆ ತಮ್ಮ ವೈಯಕ್ತಿಕ ಕೋಚ್ ಹಾಗೂ ನೆರವು ಸಿಬ್ಬಂದಿಯನ್ನು ಕರೆದುಕೊಂಡು ಹೋಗಲು ಅವಕಾಶ ನೀಡಲಾಗಿತ್ತು. ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಿತ್ತು. ‘ಟಾಪ್’ ಯೋಜನೆಯಿಂದ ತರಬೇತಿಗೆ ಹೆಚ್ಚು ಅನುಕೂಲಗಳಾಗುತ್ತಿವೆ. ಆದರೆ ಇಷ್ಟು ಸಾಲದು. ‘140 ಕೋಟಿ ಜನಸಂಖ್ಯೆಗೆ ಐದಾರು ಪದಕ ಸಾಕೆ?’ ಎಂಬ ಪ್ರಶ್ನೆಗೆ ಉತ್ತರ ಪಡೆಯಲು ಇನ್ನೂ ಹೆಚ್ಚು ಸೌಲಭ್ಯಗಳು ಬೇಕು. ತಳಮಟ್ಟದಲ್ಲಿ ಪ್ರತಿಭಾಶೋಧ ನಡೆಸಿ, ಅಂತಹವರನ್ನು ಬೆಳೆಸುವ ವ್ಯವಸ್ಥೆ ಜಾರಿಯಾಗಬೇಕು. ಆಡಳಿತ ವ್ಯವಸ್ಥೆ ಮತ್ತು ಫೆಡರೇಷನ್‌ಗಳ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಬರಬೇಕು. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಮಾಡುವ ಸಾಧನೆಗಳಿಂದ ಪ್ರೇರಣೆಗೊಂಡು ಹಳ್ಳಿಗಾಡಿನ ಮಕ್ಕಳು ಆಟ ಕಲಿಯಲು ಬಯಸಿದರೆ ಸೌಲಭ್ಯಗಳು ಕೈಗೆಟಕುವಂತೆ ಇರಬೇಕು.
ಆಧುನಿಕ ಯುಗಕ್ಕೆ ತಕ್ಕಂತೆ ಕ್ರೀಡಾ ವಿಜ್ಞಾನದ ಬಳಕೆಗೆ ಹೆಚ್ಚು ಒತ್ತು ನೀಡಬೇಕು. ಆಟಗಾರರ ದೈಹಿಕ ತರಬೇತಿಯ ಜೊತೆಗೆ ಮಾನಸಿಕವಾಗಿ ದೃಢತೆ ಕಾಯ್ದುಕೊಳ್ಳುವ ತರಬೇತಿಯ ಅವಶ್ಯಕತೆಯೂ ಈಗ ಹೆಚ್ಚಾಗಿದೆ.
ಅಮೆರಿಕದ ಜಿಮ್ನಾಸ್ಟ್ ಸಿಮೊನ್ ಬೈಲ್ಸ್ ಇದಕ್ಕೆ ಸೂಕ್ತ ಉದಾಹರಣೆಯಾಗುತ್ತಾರೆ. 2016ರ ಒಲಿಂಪಿಕ್ಸ್‌ನಲ್ಲಿ ಅವರು ಆರು ಚಿನ್ನದ ಪದಕಗಳನ್ನು ಜಯಿಸಿ ಚಾಂಪಿಯನ್ ಆಗಿದ್ದರು. ಆದರೆ ಖಿನ್ನತೆಯ ಸಮಸ್ಯೆಯಿಂದಾಗಿ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಲಯ ಕಳೆದುಕೊಂಡಿದ್ದರು. ಆದರೆ ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರು ಮೂರು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ತಮ್ಮ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಲು ವೈದ್ಯಕೀಯ ತಂಡ ಮತ್ತು ಮಾನಸಿಕ ತಜ್ಞರು ನೀಡಿದ ನೆರವನ್ನು ಸ್ಮರಿಸಿದ್ದಾರೆ. ಅಲ್ಲಿಯ ಕ್ರೀಡಾ ಆಡಳಿತ ಮತ್ತು ಸರ್ಕಾರ ಎಲ್ಲ ಬೆಂಬಲವನ್ನೂ ನೀಡಿದ್ದವು.
‘ನಮ್ಮಲ್ಲಿ ಒಬ್ಬ ಕ್ರೀಡಾಪಟು ಗಾಯಗೊಂಡು ಮೈದಾನದಿಂದ ಹೊರಗುಳಿದರೆ ಜೀವನೋಪಾಯಕ್ಕೆ ಯಾವುದೇ ಮಾರ್ಗವಿಲ್ಲ. ಚಿಕಿತ್ಸಾ ವೆಚ್ಚವನ್ನೂ ತನ್ನದೇ ಜೇಬಿನಿಂದ ಭರಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಅದೇ ಕ್ರಿಕೆಟ್‌ನಲ್ಲಿ ನೋಡಿ; ಅಟಗಾರರಿಗೆ ವೇತನ ನೀಡುತ್ತಾರೆ. ಗಾಯಗೊಂಡು ದೀರ್ಘಕಾಲ ಆಟದಿಂದ ಹೊರಗಿದ್ದರೆ ಚಿಕಿತ್ಸೆ ಮತ್ತು ಜೀವನ ನಿರ್ವಹಣೆಯನ್ನೂ ಭರಿಸುತ್ತಾರೆ. ಬೇರೆ ಕ್ರೀಡೆಗಳಿಗೂ ಇಂತಹ ಸೌಲಭ್ಯಗಳು ಸಿಕ್ಕರೆ, ಪದಕ ಪಟ್ಟಿಯಲ್ಲಿ ನಾವು ಮೇಲಿನ ಸ್ಥಾನಗಳಲ್ಲಿ ಇರುವುದು ಖಚಿತ’ ಎಂದು ಸೈನಾ ನೆಹ್ವಾಲ್ ಹೇಳುತ್ತಾರೆ.
ಒಬ್ಬ ಅಥ್ಲೀಟ್ ದೊಡ್ಡ ಮಟ್ಟದ ಸಾಧನೆ ಮಾಡಿದಾಗ ದೊಡ್ಡ ಮೊತ್ತದ ಬಹುಮಾನಗಳನ್ನು ನೀಡಲಾಗುತ್ತದೆ. ಆದರೆ ಅದೇ ಅಥ್ಲೀಟ್ ಬೆಳೆಯುವ ಹಂತದಲ್ಲಿ ಪಟ್ಟಪಾಡು ಅವರಿಗಷ್ಟೇ ಗೊತ್ತಿರುತ್ತದೆ. ನೀರಜ್, ಸಿಂಧು, ಮೇರಿ ಕೋಮ್ ಅವರಂತಹ ಚಾಂಪಿಯನ್‌ಗಳೂ ಇಂತಹ ಪಡಿಪಾಟಲು ಅನುಭವಿಸಿಯೇ ಈ ಮಟ್ಟಕ್ಕೆ ಬೆಳೆದಿದ್ದಾರೆ. ಆದ್ದರಿಂದ ಮೊಳಕೆಯಲ್ಲಿ ನೀರೆರೆದು ಪೋಷಿಸುವ ವ್ಯವಸ್ಥೆ ಬೆಳೆದರೆ, ಪದಕ ಜಯದ ಹಾದಿಯನ್ನು ಸಂಪೂರ್ಣವಾಗಿ ಕ್ರಮಿಸುವ ಶಕ್ತಿ ಆಟಗಾರರಲ್ಲಿ ಬೆಳೆಯುವುದರಲ್ಲಿ ಸಂಶಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.