ಅಂಗಳದಾಚೆಗಿನ ಎಂಥ ಪ್ರತಿಕೂಲ ಸನ್ನಿವೇಶವನ್ನೂ ನಿಭಾಯಿಸುವ ಸಾಮರ್ಥ್ಯ ಭಾರತೀಯ ಕ್ರಿಕೆಟ್ಗಿದೆ. ಫುಟ್ಬಾಲ್ ಕಥೆ ಬೇರೆಯದೇ. ಭಾರತದ ಫುಟ್ಬಾಲ್ ಕ್ಷೇತ್ರ, ಆಟಗಾರರ ಕಾಲುಗಳಿಗೆ ಕಸುವು ತುಂಬುವ ಪೋಷಕರ ನಿರೀಕ್ಷೆಯಲ್ಲಿದೆ.

ಆರು ತಿಂಗಳ ಹಿಂದೆ, ಆನ್ಲೈನ್ ಗೇಮಿಂಗ್ ಮತ್ತು ಜೂಜಾಟಗಳ ಪ್ರಚಾರಕ್ಕೆ ನ್ಯಾಯಾಲಯ ತಡೆ ನೀಡಿತು. ಅದರಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಗೇಮಿಂಗ್ ಕಂಪನಿಯೊಂದರ ಜೊತೆ ಮಾಡಿಕೊಂಡಿದ್ದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದ ಒಪ್ಪಂದದಿಂದ ಹೊರಬರಬೇಕಾಯಿತು. ಆದರೆ, ಒಪ್ಪಂದ ರದ್ದಾದುದರಿಂದ ಬಿಸಿಸಿಐಗೆ ನಷ್ಟವಾಗಲಿಲ್ಲ. ಬದಲಿಗೆ, ಅಪೋಲೊ ಟೈರ್ಸ್ ಜೊತೆಗಿನ ಹೊಸ ಒಪ್ಪಂದದಿಂದ ಹೆಚ್ಚಿನ ಲಾಭವೇ ಆಯಿತು.

ಕ್ರಿಕೆಟ್ ಕ್ಷೇತ್ರವು ಪ್ರತಿ ಹಂತದಲ್ಲಿಯೂ ಜನಬಲ, ಧನಬಲ ಮತ್ತು ಅಧಿಕಾರಬಲವನ್ನು ಬೆಳೆಸಿಕೊಂಡಿರುವುದೇ ಇದಕ್ಕೆ ಕಾರಣ. ಕೇಂದ್ರ ಸರ್ಕಾರದ ಕ್ರೀಡಾನೀತಿಗಳನ್ನು ತಳ್ಳಿಹಾಕುವ ಧಾರ್ಷ್ಟ್ಯವೂ ಬಿಸಿಸಿಐಗೆ ಇದೆ. ಇಂತಹ ಸನ್ನಿವೇಶವನ್ನು ದೇಶದ ಬೇರೆ ಕ್ರೀಡೆಗಳಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇದಕ್ಕೆ ಜ್ವಲಂತ ನಿದರ್ಶನದಂತಿದೆ, ಫುಟ್ಬಾಲ್ ಕ್ರೀಡೆಯ ‘ಇಂಡಿಯನ್ ಸೂಪರ್ ಲೀಗ್’ (ಐಎಸ್ಎಲ್) ಟೂರ್ನಿಯ ವಿವಾದ.

ಬೈಚುಂಗ್ ಭುಟಿಯಾ, ಸುನಿಲ್ ಚೆಟ್ರಿ, ಗುರುಪ್ರೀತ್ ಸಿಂಗ್ ಸಂಧು, ಸಂದೇಶ್ ಜಿಂಗಾನ ಮತ್ತು ವಿನೀತ್ ಅವರಂತಹ ಬೆರಳೆಣಿಕೆಯಷ್ಟು ತಾರಾ ವರ್ಚಸ್ಸಿನ ಆಟಗಾರರಿಂದಾಗಿ ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಒಂದಿಷ್ಟು ಪ್ರಗತಿ ಕಂಡಿದ್ದ ಫುಟ್ಬಾಲ್ ಈಗ ವಿವಾದದಿಂದಾಗಿ ಗಾಳಿ ತೆಗೆದ ಚೆಂಡಿನಂತೆ ಮುದುಡಿದೆ!

ಐಎಸ್ಎಲ್ ನಡೆಸುತ್ತಿದ್ದ ಎಫ್ಎಸ್ಡಿಎಲ್ (ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್) ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ನಡುವಣ 15 ವರ್ಷಗಳ ‘ಮಾಸ್ಟರ್ ರೈಟ್ಸ್ ಅಗ್ರಿಮೆಂಟ್’ ಅವಧಿ ಕಳೆದ ಜುಲೈನಲ್ಲಿ ಮುಗಿಯಿತು. ಹೊಸ ಆರ್ಥಿಕ ಪಾಲುದಾರರು ಮತ್ತು ಪ್ರಾಯೋಜಕರು ಸಿಗದ ಕಾರಣ ಪ್ರಸಕ್ತ ಋತುವಿನ ಟೂರ್ನಿಯನ್ನು ನಡೆಸುವು ದಿಲ್ಲವೆಂದು ಎಐಎಫ್ಎಫ್ ಹೇಳಿತು. ಇದರ ಪರಿಣಾಮಗಳು ತೀವ್ರವಾಗಿದ್ದವು. ಬೆಂಗಳೂರು ಎಫ್ಸಿ, ಚೆನ್ನೈಯಿನ್ ಎಫ್ಸಿ ಮತ್ತು ಒಡಿಶಾ ಎಫ್ಸಿ ಸೇರಿದಂತೆ ಎಲ್ಲ 14 ಕ್ಲಬ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವುಂಟಾಯಿತು. ಕಳೆದ ಒಂದೂವರೆ ದಶಕದಿಂದ ಕ್ಲಬ್ಗಳು ಮೂಲಸೌಕರ್ಯ ಅಭಿವೃದ್ಧಿ, ಪ್ರತಿಭಾಶೋಧ ಹಾಗೂ ಯುವ ಆಟಗಾರರ ಪೋಷಣೆಗಾಗಿ ಮಾಡಿದ ಹೂಡಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಹನ್ನೊಂದು ಕ್ಲಬ್ಗಳು ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರಿಗೆ ಪತ್ರ ಬರೆದವು.

ಇನ್ನೊಂದೆಡೆ ಆಟಗಾರರು, ತರಬೇತುದಾರರು, ವಿಶ್ಲೇಷಕರು, ವೈದ್ಯಕೀಯ ಸಿಬ್ಬಂದಿ, ಮೈದಾನ
ಸಿಬ್ಬಂದಿ, ಆಡಳಿತಾಧಿಕಾರಿಗಳು ಸೇರಿದಂತೆ ಸುಮಾರು ಎರಡು ಸಾವಿರ ಜನರ ಜೀವನೋಪಾಯಕ್ಕೂ ಕುತ್ತು ಬಂದಿತ್ತು. ಫ್ರಾಂಚೈಸಿಗಳ ಒಪ್ಪಂದಗಳು ಸ್ಥಗಿತಗೊಂಡಿವೆ. ವಿಶ್ವ ಆಟಗಾರರ ಒಕ್ಕೂಟವು (ಫಿಫ್ಪ್ರೊ) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು. ‘ಹಕ್ಕುಗಳ ಉಲ್ಲಂಘನೆ’ ಎಂದು ಹೇಳಿದೆ. ಅಲ್ಲದೇ ವಿಶ್ವ ಫುಟ್ಬಾಲ್ ಫೆಡರೇಷನ್ (ಫಿಫಾ) ಮತ್ತು ಏಷ್ಯಾ ಫುಟ್ಬಾಲ್ ಕಾನ್ಫೆಡರೇಷನ್ಗೂ (ಎಎಫ್ಸಿ) ವರದಿ ಸಲ್ಲಿಸಿದೆ.

ದೇಶವನ್ನು ಪ್ರತಿನಿಧಿಸುವ ಫುಟ್ಬಾಲ್ ಆಟಗಾರರು ಸರ್ಕಾರ ಮತ್ತು ಫೆಡರೇಷನ್ ಮುಂದೆ ‘ನಮಗೆ ಆಡಲು ಅವಕಾಶ ಕೊಡಿ. ಫುಟ್ಬಾಲ್ ಉಳಿಸಿಕೊಡಿ’ ಎಂದು ಗೋಗರೆಯುವ ಸ್ಥಿತಿಯನ್ನು ಈ ಪ್ರಕರಣ ಸೃಷ್ಟಿಸಿದೆ. ಬಿಕ್ಕಟ್ಟನ್ನು ಬಗೆಹರಿಸಲು ಫಿಫಾ (ಜಾಗತಿಕ ಫುಟ್ಬಾಲ್ ಫೆಡರೇಷನ್) ಮಧ್ಯಸ್ಥಿಕೆ ವಹಿಸಬೇಕು ಎಂದು ಸುನಿಲ್ ಚೆಟ್ರಿ, ಗುರುಪ್ರೀತ್ ಸಿಂಗ್ ಸಂಧು, ಸಂದೇಶ್ ಜಿಂಗಾನ್, ಲಾಲಿಯನ್ ಝುವಾಲಾ ಚಾಂಗ್ಟೆ ಅವರೆಲ್ಲರೂ ಸೇರಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ‘ಇಲ್ಲಿ ಫುಟ್ಬಾಲ್ ಆಡಳಿತ ಮತ್ತು ಸರ್ಕಾರಕ್ಕೆ ಈ ಬಿಕ್ಕಟ್ಟು ಪರಿಹರಿಸಲು ಸಾಧ್ಯವಾಗುತ್ತಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಭಾರತದ ಫುಟ್ಬಾಲ್ ದಯನೀಯ ಸ್ಥಿತಿ ತಲಪಿದೆ. ಇದು ನಾಚಿಕೆಗೇಡು’ ಎಂದು ಬಾಲಿವುಡ್ ತಾರೆ, ಐಎಸ್ಎಲ್ನಲ್ಲಿ ನಾರ್ತ್ ಈಸ್ಟ್ ತಂಡದ ಸಹಮಾಲೀಕರೂ ಆಗಿರುವ ಜಾನ್ ಅಬ್ರಹಾಂ ಕಿಡಿಕಾರಿದ್ದಾರೆ. ಇಷ್ಟೆಲ್ಲ ಪ್ರಹಸನದ ನಂತರ ಟೂರ್ನಿ ನಡೆಸಲು ಈಗ ಹಸಿರು ನಿಶಾನೆ ದೊರೆತಿದೆ.

ದಿಗ್ಗಜ ಆಟಗಾರರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧದ ಕಾವು ಏರುತ್ತಿದ್ದಂತೆಯೇ ಕೇಂದ್ರ ಕ್ರೀಡಾ ಸಚಿವಾಲಯವು ವಿವಾದಕ್ಕೆ ಅಲ್ಪವಿರಾಮ ನೀಡುವ ಹೆಜ್ಜೆ ಇಟ್ಟಿದೆ. ಫೆಬ್ರುವರಿ 14ರಿಂದ ಐಎಸ್ಎಲ್ ಆರಂಭಿಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಐಲೀಗ್ ಕೂಡ ಆರಂಭವಾಗಲಿದೆ. ಇಷ್ಟಾದರೂ ಆರ್ಥಿಕ ಪಾಲುದಾರರು ಈ ಟೂರ್ನಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿಲ್ಲ. ಸರ್ಕಾರವೇ ಹಣ ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಪ್ರಕರಣವು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಮತ್ತು ಕ್ರೀಡಾ ಸಚಿವಾಲಯಗಳ ಅಸಮರ್ಪಕ ಕಾರ್ಯವೈಖರಿಯನ್ನು ಬಹಿರಂಗಗೊಳಿಸಿದೆ.

ಟೂರ್ನಿ ನಡೆಸುವುದಾಗಿ ಸರ್ಕಾರ ಹೇಳಿದ್ದರೂ, ಫುಟ್ಬಾಲ್ ಕ್ರೀಡೆಗಂಟಿದ ಸಮಸ್ಯೆಗಳ ನಿವಾರಣೆಗೆ ಇಷ್ಟು ಸಾಕಾಗದು. ಅಧಿಕೃತ ಪ್ರಸಾರ ಸಂಸ್ಥೆಗಳು ವೇಳಾಪಟ್ಟಿ ನಿರ್ವಹಣೆಯ ಗೊಂದಲದಲ್ಲಿವೆ. ಅದರಲ್ಲೂ ಈ ವರ್ಷ ಪ್ರಮುಖ ಕ್ರೀಡಾಕೂಟಗಳು (ಟಿ20 ಕ್ರಿಕೆಟ್ ವಿಶ್ವಕಪ್, ಫಿಫಾ ವಿಶ್ವಕಪ್, ಏಷ್ಯನ್ ಗೇಮ್ಸ್, ಐಪಿಎಲ್) ನಡೆಯಲಿವೆ. ಆದ್ದರಿಂದ ಟಿ.ವಿ. ಪ್ರಸಾರದ ವೇಳಾಪಟ್ಟಿಯು ದಟ್ಟಣೆಯಿಂದ ಕೂಡಿದೆ. ಈ ಸಂದರ್ಭದಲ್ಲಿ ಐಎಸ್ಎಲ್ ವೀಕ್ಷಕರ ಸಂಖ್ಯೆ ಕುಸಿದರೆ ನಷ್ಟವನ್ನು ಭರಿಸಲು ಫ್ರಾಂಚೈಸಿಗಳು ಸಿದ್ಧವಾಗಿಲ್ಲ.

ಇದೆಲ್ಲದರ ನಡುವೆಯೇ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಯೊನೆಲ್ ಮೆಸ್ಸಿ ಭಾರತ ಪ್ರವಾಸವನ್ನು ಮುಗಿಸಿ ಹೋಗಿದ್ದಾರೆ. ಇಲ್ಲಿಯ ಜನರ ಪ್ರೀತಿ, ಉತ್ಸಾಹಗಳನ್ನು ಕಂಡು ಪುಳಕಿತರಾದ ಅವರು, ‘ಭಾರತದಲ್ಲಿ ಫುಟ್ಬಾಲ್ಗೆ ಉಜ್ವಲ ಭವಿಷ್ಯ ಇದೆ’ ಎಂದು ಹೇಳಿದ್ದಾರೆ.

ಮೆಸ್ಸಿ ಪ್ರವಾಸಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಭಾರತದ ಫುಟ್ಬಾಲ್ ರಂಗವನ್ನು ಉಳಿಸಿ, ಬೆಳೆಸಲು ಹೂಡಿಕೆ ಮಾಡುವವರು ಯಾರೂ ಇಲ್ಲ ಎಂದು ಆಟಗಾರ ಸಂದೇಶ್ ಜಿಂಗಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳನ್ನು ತಳ್ಳಿ ಹಾಕುವಂತಿಲ್ಲ. ಐಎಸ್ಎಲ್ ಆಯೋಜನೆಯ ಬಿಡ್ಗಾಗಿ ಟೆಂಡರ್ ಕರೆದಾಗ ಎಐಎಫ್ಎಫ್ಗೆ ಸಿಕ್ಕ ನೀರಸ ಸ್ಪಂದನವೇ ಇದಕ್ಕೆ ಉದಾಹರಣೆ.

ಸದ್ಯದ ಪರಿಸ್ಥಿತಿಯಲ್ಲಿ ಐಎಸ್ಎಲ್ ಮಾತ್ರವಲ್ಲ, ಭಾರತದ ಫುಟ್ಬಾಲ್ ಕ್ರೀಡಾರಂಗಕ್ಕೆ ಪೂರ್ಣಪ್ರಮಾಣದ ಸುಧಾರಣೆಯ ಅಗತ್ಯವಿದೆ. ಫಿಫಾ ರ್ಯಾಂಕಿಂಗ್ನಲ್ಲಿ 142ನೇ ಸ್ಥಾನಕ್ಕೆ ಕುಸಿದಿರುವ ತಂಡವನ್ನು ಮೇಲಕ್ಕೆತ್ತುವುದು ಸುಲಭದ ಮಾತಲ್ಲ. ವಿಶ್ವದಲ್ಲಿ ಅತ್ಯಧಿಕ ಗೋಲುಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸುನಿಲ್ ಚೆಟ್ರಿ ಕೂಡ ಈಗ ನಿವೃತ್ತರಾಗಿದ್ದಾರೆ. ಹೊಸ ಪ್ರತಿಭೆಗಳನ್ನು ಸಿದ್ಧಗೊಳಿಸುವ ವ್ಯವಸ್ಥೆಯು ವೃತ್ತಿಪರವಾಗಿಲ್ಲ. ಆ ಕಾರ್ಯವು ಐಎಸ್ಎಲ್ನಲ್ಲಿ ನಡೆಯುತ್ತಿತ್ತು. ಫ್ರಾಂಚೈಸಿಗಳು ನಡೆಸುವ ತರಬೇತಿ ಶಿಬಿರಗಳು, ಪ್ರತಿಭಾನ್ವೆಷಣೆಗಳಿಂದಾಗಿ ಭಾರತದ ಎಲ್ಲ ರಾಜ್ಯಗಳ ಗ್ರಾಮಾಂತರ ಪ್ರದೇಶಗಳ ಆಟಗಾರರು ಹೊರಹೊಮ್ಮಿದ್ದಾರೆ. ಬೆಂಗಳೂರು, ಮುಂಬೈ, ಕೋಲ್ಕತ್ತ, ಗೋವಾ, ಕೊಚ್ಚಿಯಂತಹ ನಗರಗಳಲ್ಲಿ ವಿದೇಶಗಳ ಕೆಲವು ಕ್ಲಬ್ಗಳು ತಮ್ಮ ಶಾಖೆ ಆರಂಭಿಸಲೂ ಫ್ರಾಂಚೈಸಿ ಲೀಗ್ ಕಾರಣವಾಗಿತ್ತು.
ಎಐಎಫ್ಎಫ್ನಲ್ಲಿ ಮಾಜಿ ಅಂತರರಾಷ್ಟ್ರೀಯ ಆಟಗಾರ ಚೌಬೆಯವರೇ ಅಧ್ಯಕ್ಷರಾಗಿ ಬಂದರೂ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ.

ಮೊದಲಿನಿಂದಲೂ ಇರುವ ದೇಶಿ ಟೂರ್ನಿಗಳು ಮತ್ತು ಐಎಸ್ಎಲ್ ಒಂದಕ್ಕೊಂದು ಪೂರಕವಾಗಿ ಬೆಳೆಯಬೇಕು. ಬಹುತೇಕ ಎಲ್ಲ ರಾಜ್ಯಗಳ ತಂಡಗಳೂ ಭಾಗವಹಿಸುವ ಸಂತೋಷ್ ಟ್ರೋಫಿ ಟೂರ್ನಿಯ ವೈಭವ ಮರಳಬೇಕು. ಗಾಯಾಳುಗಳ ನಿರ್ವಹಣೆಗೆ ‘ಬಿಸಿಸಿಐ ಶ್ರೇಷ್ಠತಾ ಕೇಂದ್ರ’ದ ಮಾದರಿ ಫುಟ್ಬಾಲ್ಗೂ ಅಪೇಕ್ಷಣೀಯ. ಆಧುನಿಕ ಕಾಲಕ್ಕೆ ತಕ್ಕ ತರಬೇತಿ ವ್ಯವಸ್ಥೆಗಳು ಅಭಿವೃದ್ಧಿಯಾಗಬೇಕು. ಜಗತ್ತಿನ ಭೂಪಟದಲ್ಲಿರುವ ಪುಟ್ಟಪುಟ್ಟ ರಾಷ್ಟ್ರಗಳು ಫುಟ್ಬಾಲ್ನಲ್ಲಿ ಮುಂಚೂಣಿಯಲ್ಲಿವೆ. ಭಾರತಕ್ಕೆ ಮಾತ್ರ ಇನ್ನೂ ಫಿಫಾ ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಭಾಗವಹಿಸುವಿಕೆ ಇನ್ನೂ ಬಹುದೂರದಲ್ಲಿದೆ.

ರಾಜ್ಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಮೂಲಸೌಲಭ್ಯವನ್ನು ಅಭಿವೃದ್ಧಿಪಡಿಸುವತ್ತ ಚಿತ್ತ ಹರಿಸುವ ಅನಿವಾರ್ಯತೆ ಇದೆ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಪ್ರತಿದಿನವೂ ಒಂದಿಲ್ಲೊಂದು ಫುಟ್ಬಾಲ್ ಟೂರ್ನಿ ನಡೆಯುವ ನಗರ ಇದು. ಒಲಿಂಪಿಯನ್ ಆಟಗಾರರನ್ನು ದೇಶಕ್ಕೆ ಕೊಟ್ಟ ಹೆಗ್ಗಳಿಕೆಯೂ ಇದಕ್ಕಿದೆ. ಎಂಟು ವರ್ಷಗಳ ಹಿಂದೆ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಅವಕಾಶವೂ ಸಿಕ್ಕಿತ್ತು. ಆದರೆ, ಕಾಲಮಿತಿಯೊಳಗೆ ಇಲ್ಲಿ ಫುಟ್ಬಾಲ್ ಕ್ರೀಡಾಂಗಣವನ್ನು ಸಿದ್ಧಗೊಳಿಸದ ಕಾರಣಕ್ಕೆ ಪಂದ್ಯಗಳನ್ನು ಸ್ಥಳಾಂತರಿಸಲಾಗಿತ್ತು. ಹೋದ ವರ್ಷ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆಗಳು ಸರಿಯಿಲ್ಲ ಎಂಬ ಕಾರಣಕ್ಕೆ ಎಎಫ್ಸಿ ಕ್ವಾಲಿಫೈಯರ್ ಪಂದ್ಯಗಳನ್ನು ಸ್ಥಳಾಂತರಿಸಲಾಗಿತ್ತು. ಬೆಂಗಳೂರಿನಲ್ಲಿ ಫುಟ್ಬಾಲ್ ಕ್ರೀಡೆಗಾಗಿಯೇ ಪ್ರತ್ಯೇಕ ಕ್ರೀಡಾಂಗಣ ಇದ್ದರೂ ಅಂತರರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಪ್ರತಿಯೊಂದು ಊರಿನಲ್ಲಿಯೂ ಫುಟ್ಬಾಲ್ ಆಡುವವರು ಇದ್ದಾರೆ. ಆದರೆ, ಆಟಗಾರರ ಕಾಲುಗಳಿಗೆ ಶಕ್ತಿ ತುಂಬುವ ಪೋಷಕರ ಕೊರತೆ ಇದೆ. ಇದಲ್ಲದೇ ಹಲವು ಅಡೆತಡೆಗಳನ್ನು ನಿವಾರಿಸುವ ಸವಾಲು ಎಐಎಫ್ಎಫ್ ಮುಂದಿದೆ. ಭಾರತವು 2036ರಲ್ಲಿ ಒಲಿಂಪಿಕ್ ಕೂಟದ ಆತಿಥ್ಯದ ಕನಸು ಕಾಣುತ್ತಿದೆ. ಕನಿಷ್ಠ ‘ಆತಿಥೇಯ ಕೋಟಾ’ದಲ್ಲಿ ಆಡುವಂತಹ ತಂಡ ಬೆಳೆಸುವ ವ್ಯವಸ್ಥೆ ಆಗಬೇಕಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.