ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಆಗಬೇಕಾಗಿದೆ ಶಿಕ್ಷಣದ ‘ಪರೀಕ್ಷೆ’

ಪರೀಕ್ಷಾ ಕ್ರಮದ ಸುಧಾರಣೆಯಿಂದ ನೈಜ ಕಲಿಕೆ ಸಾಧ್ಯ
Published 21 ಜನವರಿ 2024, 21:17 IST
Last Updated 21 ಜನವರಿ 2024, 21:17 IST
ಅಕ್ಷರ ಗಾತ್ರ

ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಬಾಧಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಪಬ್ಲಿಕ್‌ ಪರೀಕ್ಷೆ (ಬೋರ್ಡ್‌ ಎಕ್ಸಾಂ) ಸಹ ಒಂದು. ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು– 2023 (ಎನ್‌ಸಿಎಫ್)‌, ಅವುಗಳನ್ನು ಸ್ಪಷ್ಟವಾಗಿ ಗುರುತಿಸಿದೆ. ಸಮಸ್ಯೆಗಳಿಂದ ಪಲಾಯನ ಮಾಡುವುದರ ಬದಲಿಗೆ, ನೇರವಾಗಿ ಎದುರಿಸಲು ಬೇಕಾದ ಮಾರ್ಗೋಪಾಯಗಳನ್ನು ಒಳಗೊಂಡಿದೆ.

ಪಬ್ಲಿಕ್‌ ಪರೀಕ್ಷೆಯು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದ ಸದಸ್ಯರಲ್ಲಿ ಉಂಟುಮಾಡುವ ಒತ್ತಡವೇ ಮೊದಲ ದೊಡ್ಡ ಸಮಸ್ಯೆ ಎನಿಸಿದೆ. ಇದರ ಹಿಂದೆ ಅನೇಕ ಕಾರಣಗಳಿವೆ. ಅವುಗಳೆಂದರೆ, ಪರೀಕ್ಷೆಯ ಅಂಕಗಳನ್ನು ಸಾಮಾಜಿಕವಾಗಿ ‘ನಿಜವಾದ ಅರ್ಹತೆ’ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಬದುಕನ್ನೇ ಬದಲಾಯಿಸು ವಂತಹ ಪರಿಣಾಮಗಳನ್ನು ಹೊಂದಿದೆ ಎಂದು ನಂಬಿಸಲಾಗಿದೆ. ‍ಪಬ್ಲಿಕ್‌ ಪರೀಕ್ಷೆಯ ಫಲಿತಾಂಶವನ್ನು ಕಾಲೇಜು ಶಿಕ್ಷಣದ ಪ್ರವೇಶಕ್ಕೆ ಅಥವಾ ಕೆಲವೊಮ್ಮೆ ಉದ್ಯೋಗ ಪಡೆಯಲು ಪರಿಗಣಿಸಲಾಗುತ್ತದೆ. ಅಲ್ಲದೆ, ಪರೀಕ್ಷೆಯ ಆ ಒಂದು ದಿನ ತೋರಬಹುದಾದ ಕಳಪೆ ಸಾಧನೆಯು ಗಂಭೀರ ಪರಿಣಾಮಗಳನ್ನು  ಉಂಟುಮಾಡುತ್ತದೆ. ಜೊತೆಗೆ, ಕೋಚಿಂಗ್‌ ಕೇಂದ್ರಗಳು ಮತ್ತು ಮನೆಪಾಠದ ಮೂಲಕ ಹಣ ಗಳಿಸುವುದಕ್ಕಾಗಿ ಕೃತಕ ಸ್ಪರ್ಧಾತ್ಮಕ ಒತ್ತಡವನ್ನು ಸೃಷ್ಟಿಸುವ ವಾಣಿಜ್ಯ ಹಿತಾಸಕ್ತಿಗಳು ಸಹ ಈ ಪಟ್ಟಿಯಲ್ಲಿ ಸೇರಿವೆ.

ಎರಡನೆಯದಾಗಿ, ಬಹುತೇಕ ಪಬ್ಲಿಕ್‌ ಪರೀಕ್ಷೆಗಳು ತಮ್ಮ ಪ್ರಾಥಮಿಕ ಉದ್ದೇಶವನ್ನು ಈಡೇರಿಸುವುದರಲ್ಲಿ ವಿಫಲವಾಗಿವೆ. ಶಾಲೆಯಲ್ಲಿ ಶೈಕ್ಷಣಿಕ ಸಾಧನೆ ತೋರುವ ಪ್ರಯತ್ನಕ್ಕೆ ಇವು ತಪ್ಪು ಮಾರ್ಗದರ್ಶನ ನೀಡುತ್ತವೆ. ಈ ಪರೀಕ್ಷೆಗಳು ಹತ್ತು ಮತ್ತು ಹನ್ನೆರಡನೇ ತರಗತಿಗಳ ಕೊನೆಯಲ್ಲಿ ವಿದ್ಯಾರ್ಥಿಗಳು ಗಳಿಸುವ ಸಾಮರ್ಥ್ಯವನ್ನು ದೃಢೀಕರಿಸಬೇಕಾಗಿತ್ತು. ಆದರೆ ಅದಕ್ಕೆ ಬದಲಾಗಿ ಇವು ವಿಷಯಗಳ ದೊಡ್ಡ ಹೊರೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವನ್ನಷ್ಟೇ ಪರೀಕ್ಷೆಗೆ ಒಳಪಡಿ ಸುತ್ತವೆ. ಈ ಮೂಲಭೂತ ಅಸಮತೋಲನವು ವಿದ್ಯಾರ್ಥಿಯ ಕಲಿಕೆಯ ಬಗ್ಗೆ ಅಪೂರ್ಣವಾದ ಅಥವಾ ತಪ್ಪಾದ (ಅತ್ಯುತ್ತಮವಾಗಿದೆ ಅಥವಾ ಕೆಟ್ಟದಾಗಿದೆ ಎಂಬಂತಹ) ಚಿತ್ರಣವನ್ನು ನೀಡುತ್ತದೆ.

ಮೂರನೆಯದಾಗಿ, ಹೆಚ್ಚಿನ ಪರೀಕ್ಷಾ ಪರಿಕರಗಳು ಕಳಪೆ ವಿನ್ಯಾಸದಿಂದ ಕೂಡಿರುತ್ತವೆ. ಇದು, ಮೌಲ್ಯಮಾಪಕರು ಮತ್ತು ಒಟ್ಟಾರೆ ಅಸಮಂಜಸ ಸ್ಥಿತಿಯ ನಡುವೆ ಸ್ವೀಕಾರಾರ್ಹವಲ್ಲದ ಬದಲಾವಣೆಗಳಿಗೆ ಕಾರಣವಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಅನೇಕ ಪಬ್ಲಿಕ್‌ ಪರೀಕ್ಷೆಗಳು ಸಿಂಧುತ್ವ ಮತ್ತು ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸುತ್ತಿವೆ. ತಪ್ಪಾಗಿ ನಿರ್ದೇಶಿಸಲಾದ ಪರೀಕ್ಷಾ ಪ್ರಕ್ರಿಯೆಯು ಬೋಧನೆ, ತರಗತಿ ಕೋಣೆ ಅಥವಾ ಶಾಲಾ ಅಭ್ಯಾಸಗಳಿಂದ ಹಿಡಿದು ಪಠ್ಯಪುಸ್ತಕಗಳ ತನಕ ಶಿಕ್ಷಣದ ಎಲ್ಲ ಅಂಶಗಳನ್ನೂ ಗೌಣವಾಗಿಸುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸುವುದ ಕ್ಕಾಗಿ ಎನ್‌ಸಿಎಫ್‌, ಪಬ್ಲಿಕ್‌ ಪರೀಕ್ಷೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಪ್ರತಿಪಾದಿಸುತ್ತದೆ. ಕಲಿಕಾ ಮಾನ ದಂಡ, ವಿಷಯವಸ್ತು, ಪಠ್ಯಪುಸ್ತಕಗಳು, ಬೋಧನಾ ವಿಧಾನದಂತಹ ಅನೇಕ ಅಂಶಗಳು ಇದರಲ್ಲಿ ಸೇರಿವೆ.

ವಿದ್ಯಾರ್ಥಿಗಳ ಮೇಲೆ ಪಬ್ಲಿಕ್‌ ಪರೀಕ್ಷೆಗಳು ಉಂಟು ಮಾಡುವ ಹೊರೆಯನ್ನು ವಿವಿಧ ಕ್ರಮಗಳ ಮೂಲಕ ತಗ್ಗಿಸ ಲಾಗುತ್ತದೆ. ಉದಾಹರಣೆಗೆ, ಪರೀಕ್ಷೆಗಳನ್ನು ‘ಸುಲಭ ಮತ್ತು ಹಗುರ’ವಾಗಿಸುವುದು, ಅಂದರೆ ಪರೀಕ್ಷೆಗಳು ಕಠಿಣವಾಗಿ ಇರುವುದಿಲ್ಲ ಎಂದರ್ಥವಲ್ಲ. ಇದಕ್ಕೆ ಬದಲಾಗಿ, ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೇ ಒತ್ತು ನೀಡುವುದರ ಬದಲಿಗೆ ವಿದ್ಯಾರ್ಥಿಗಳ ನೈಜ ಸಾಮರ್ಥ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾಗು ತ್ತದೆ. ಈ ದಿಸೆಯಲ್ಲಿ, ಪಠ್ಯವಸ್ತುಗಳಲ್ಲಿ ವಿಷಯದ ಹೊರೆಯನ್ನು ಗಣನೀಯವಾಗಿ ತಗ್ಗಿಸಲಾಗುತ್ತದೆ. ಪಬ್ಲಿಕ್‌ ಪರೀಕ್ಷೆಗಳನ್ನು ವರ್ಷಕ್ಕೆ ಕನಿಷ್ಠ ಎರಡು ಬಾರಿ ನಡೆಸುವ ಮೂಲಕ ಅವರು ಎರಡನೇ ಬಾರಿಗೆ ಪರೀಕ್ಷೆ ಬರೆಯಲು, ಸುಧಾರಣೆ ತಂದುಕೊಳ್ಳಲು ಅವಕಾಶ ಮಾಡಿಕೊಡಲಾಗು ತ್ತದೆ. ಹೀಗೆ ಗಳಿಸಿದ್ದರಲ್ಲಿ ಅತ್ಯುತ್ತಮ ಎನಿಸಿದ ಅಂಕಗಳನ್ನಷ್ಟೇ ಅಂಕಪಟ್ಟಿಯಲ್ಲಿ ದಾಖಲಿಸಲಾಗುತ್ತದೆ.

ಕಾಲ ಕಳೆದಂತೆ ನಾವು ‘ಬೇಡಿಕೆಯ ಮೇರೆಗೆ’ ಪರೀಕ್ಷೆ ಗಳನ್ನು ನಡೆಸುವ ವ್ಯವಸ್ಥೆಯತ್ತ ಸಾಗಲಿದ್ದೇವೆ. ಅಂದರೆ, ವಿದ್ಯಾರ್ಥಿಗಳು ಸಿದ್ಧರಾಗಿರುವಾಗ ಪರೀಕ್ಷೆಯನ್ನು ನಡೆಸುವುದು. ಈ ಕ್ರಮವು ಗಣನೀಯ ಪ್ರಮಾಣದಲ್ಲಿ ಒತ್ತಡವನ್ನು ತಗ್ಗಿಸಲಿದೆ. ಏಕೆಂದರೆ, ಒಂದು ನಿರ್ದಿಷ್ಟ ದಿನದಲ್ಲಿ ತೋರುವ ಸಾಧನೆಯನ್ನಷ್ಟೇ ಪರಿಗಣಿಸಿ ವಿದ್ಯಾರ್ಥಿಯನ್ನು ದಂಡನೆಗೆ ಒಳಪಡಿಸುವುದಿಲ್ಲ ಮಾತ್ರವಲ್ಲದೆ ನೈಜ ಕಲಿಕೆಯ ಸಂಭವನೀಯ ತಪ್ಪು ಮೌಲ್ಯಮಾಪನದಿಂದ ಅವರ ಕಲಿಕೆಯ ಮಟ್ಟವನ್ನು ನಿರ್ಣಯಿಸುವುದಿಲ್ಲ.

ಪಠ್ಯಕ್ರಮದಲ್ಲಿ ಹೇಳಿದಂತೆ, ಪಬ್ಲಿಕ್‌ ಪರೀಕ್ಷೆಗಳು ಪ್ರೌಢ ಹಂತದಲ್ಲಿ ಇರಬೇಕಾದ ಸಾಮರ್ಥ್ಯಗಳ ಸಾಧನೆಯ ಮೌಲ್ಯಮಾಪನ ನಡೆಸುತ್ತವೆ. ಈ ಮೂಲಕ, ಅಂತಹ ಸಾಧನೆಗಳ ಸಮಂಜಸ ಮತ್ತು ವಿಶ್ವಾಸಾರ್ಹ ಚಿತ್ರಣವನ್ನು ನೀಡುತ್ತವೆ. ಇದು ಸಾಧ್ಯವಾಗಬೇಕೆಂದಾದರೆ, ಪರೀಕ್ಷೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟು ಕೆಲಸ ಮಾಡಬೇಕಾಗುತ್ತದೆ. ಈ ದಿಸೆಯಲ್ಲಿ, ಪರೀಕ್ಷೆಯನ್ನು ಆಯೋಜಿಸುವವರು ಮತ್ತು ಮೌಲ್ಯಮಾಪಕರ ಸಮಂಜಸ ಆಯ್ಕೆ ಹಾಗೂ ಅವರಿಗೆ ಸೂಕ್ತ ತರಬೇತಿ, ಪರೀಕ್ಷಾ ಸಿದ್ಧತೆಯ ಪ್ರಕ್ರಿಯೆಯಲ್ಲಿ ಸುಧಾರಣೆ, ಮರುರೂಪಿಸಿದ ಪರೀಕ್ಷೆಗಳ ಪರಿಣಾಮಕಾರಿತ್ವ, ಸಿಂಧುತ್ವ ಮತ್ತು ವಿಶ್ವಾಸಾರ್ಹತೆಯ ನಿಯಮಿತ ಪರಿಶೀಲನೆ ಮುಖ್ಯ ಪಾತ್ರ ವಹಿಸುತ್ತವೆ.

ಉನ್ನತ ಶಿಕ್ಷಣದ ಪ್ರವೇಶಾತಿ ವಿಧಾನಗಳು ಎನ್‌ಸಿಎಫ್‌ನ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಇದು ಸ್ಪಷ್ಟವಾಗಿ ನಿರೂಪಿಸು ತ್ತದೆ. ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಭಾರತದಲ್ಲಿ ಅಧಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳ (ಎಚ್‌ಇಐ) ಕೊರತೆ ಇದ್ದು, ಇವುಗಳ ಪ್ರವೇಶಾತಿಯನ್ನು ‘ಹೊರಹಾಕುವ’ ಆಯ್ಕೆ ಪ್ರಕ್ರಿಯೆಯ ಮೂಲಕ ನಡೆಸ ಲಾಗುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳು ಈ ಸಂಸ್ಥೆಗಳ ಲ್ಲಿನ ಕೆಲವೇ ಸಂಖ್ಯೆಯ ಸೀಟುಗಳ ಹಿಂದೆ ಬಿದ್ದಾಗ, ಸಹಜವಾಗಿಯೇ ಸ್ಪರ್ಧೆಯು ಪ್ರಬಲವಾಗಿರುತ್ತದೆ. ಪಬ್ಲಿಕ್‌ ಪರೀಕ್ಷೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಂ ತೆಯೇ ಸಾಧನೆ ಮಾಡಬಹುದು. ಏಕೆಂದರೆ, ಇವು ಕಲಿಕೆಯ ಮೌಲ್ಯಮಾಪನಗಳಾಗಿರುತ್ತವೆ. ಆದರೆ ಉನ್ನತ ಶಿಕ್ಷಣದ ಪ್ರವೇಶಕ್ಕೆ ಸಂಬಂಧಿಸಿದಂತೆ, ಸಾಮರ್ಥ್ಯದಲ್ಲಿ ಮಿತಿ ಇರುವುದರಿಂದ ಅನೇಕ ವಿದ್ಯಾರ್ಥಿಗಳು ಸೋಲೊಪ್ಪಿಕೊಳ್ಳುತ್ತಾರೆ.

ಈ ಬಿಕ್ಕಟ್ಟಿಗೆ ಪರಿಹಾರವು ಶಾಲಾ ವ್ಯವಸ್ಥೆಯ ಒಳಗಿಲ್ಲ. ಪಬ್ಲಿಕ್‌ ಪರೀಕ್ಷೆಗಳಿಗಿಂತಲೂ ಹೆಚ್ಚಾಗಿ ಪ್ರಸಕ್ತ ಪರಿಸ್ಥಿತಿಯು ಶಾಲಾ ವಿದ್ಯಾರ್ಥಿಗಳ ನಡುವೆ ಅನೇಕ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಇದರಲ್ಲಿ ಅಧಿಕ ಒತ್ತಡ ಮತ್ತು ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳು (ವಿದ್ಯಾರ್ಥಿಗಳು ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರನ್ನೂ ಬಾಧಿಸುತ್ತವೆ), ವಾಣಿಜ್ಯ ರೂಪದ ಕೋಚಿಂಗ್‌ ಮತ್ತು ಟ್ಯೂಷನ್‌, ನೈಜ ಕಲಿಕೆಗೆ ಒತ್ತು ನೀಡದೆ ಕಾಲೇಜಿನಲ್ಲಿ ಸೀಟು ಪಡೆಯುವುದಕ್ಕಾಗಿ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತಹ ಕಾರಣಗಳು ಶಾಲಾ ಶಿಕ್ಷಣದ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತಿವೆ.

ಇಂತಹ ಸವಾಲುಗಳನ್ನು ಎದುರಿಸುವುದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ– 2020 (ಎನ್‌ಇಪಿ), ಅನೇಕ ಕ್ರಮಗಳಿಗೆ ಮುಂದಾಗಿದೆ. ಇದರಲ್ಲಿ, ಈಗಾಗಲೇ ಜಾರಿಗೊಳಿಸಲಾದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯಂತಹ ಕ್ರಮಗಳು ಒಳಗೊಂಡಿವೆ. ಆದರೆ ಈ ಬಿಕ್ಕಟ್ಟಿನ ಮೂಲ ಪರಿಹಾರವು ನಾವು ಹೊಂದಿರುವ ಅಧಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವುದರಲ್ಲಿ ಇದೆ. ಈ ದಿಸೆಯಲ್ಲಿ ಎನ್‌ಇಪಿಯು ಸ್ಪಷ್ಟವಾದ ದಾರಿಯನ್ನು ರೂಪಿಸಿದೆ. ಆದರೆ ಈ ಕನಸನ್ನು ನನಸಾಗಿಸಲು ಅಗತ್ಯವಿರುವ ಸುಸ್ಥಿರ ಕ್ರಮಗಳ ಪಟ್ಟಿಯನ್ನು ಗಮನಿಸಿದರೆ, ಇದೊಂದು ದೀರ್ಘ ಹೋರಾಟವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಲೇಖನವು ಪಬ್ಲಿಕ್‌ ಪರೀಕ್ಷೆಗಳ ಮೇಲಷ್ಟೇ ಗಮನಹರಿಸಿದೆ. ವಿವಿಧ ತರಗತಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಸಮಗ್ರ ಚೌಕಟ್ಟು ಹಾಗೂ ವಿಸ್ತೃತ ಮಾರ್ಗಸೂಚಿಗಳನ್ನು ಎನ್‌ಸಿಎಫ್‌ ಹೊಂದಿದೆ. ನೈಜ ಕಲಿಕೆಯನ್ನು ಸಾಧ್ಯವಾಗಿಸುವುದಕ್ಕಾಗಿ ಮತ್ತು ಅದರ ಪ್ರಾಮಾಣಿಕ ಮೌಲ್ಯಮಾಪನಕ್ಕಾಗಿ ಇವುಗಳನ್ನು ನಾವು ಬದಲಾಯಿಸಬೇಕು ಹಾಗೂ ಸುಧಾರಣೆ ತರಬೇಕು.

ಭಾರತೀಯ ಶಿಕ್ಷಣದ ಕುರಿತು ಇರುವ ಹಳೆಯ ಚತುರೋಕ್ತಿಯ ಬಗ್ಗೆ ಎನ್‌ಸಿಎಫ್‌ಗೆ ಚೆನ್ನಾಗಿ ಅರಿವಿದೆ. ಅದೆಂದರೆ: ನಮ್ಮಲ್ಲಿ ಪರೀಕ್ಷಾ ವ್ಯವಸ್ಥೆ ಇದೆಯೇ ವಿನಾ ಶಿಕ್ಷಣ ವ್ಯವಸ್ಥೆಯಲ್ಲ.

ಲೇಖಕ: ಸಿಇಒ, ಅಜೀಂ ಪ್ರೇಮ್‌ಜಿ ಫೌಂಡೇಷನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT