ಕಾವೇರಿ ನೀರಿಗಾಗಿ ಕನ್ನಡಿಗರು ಹಾಗೂ ತಮಿಳರು ದಕ್ಷಿಣದಲ್ಲಿ ಹೊಡೆದಾಡುತ್ತಿರುವಾಗ ದೆಹಲಿಯಲ್ಲಿ ಉಭಯ ಭಾಷಿಕರು ಒಂದೇ ವೇದಿಕೆಯಲ್ಲಿ ವಿಚಾರ ಮಂಥನ ನಡೆಸಿದ್ದರು. ಜತೆಗೂಡಿ ನಲಿದಾಡಿದ್ದರು... ಅದೇ ವೇದಿಕೆಯಲ್ಲಿ ಈ ಹಿಂದೆ ಹಿರಿಯ ನಾಯಕರಾದ ಎಂ. ವೀರಪ್ಪ ಮೊಯಿಲಿ ಹಾಗೂ ಆಸ್ಕರ್ ಫರ್ನಾಂಡಿಸ್ ಅವರು ಅಪರೂಪಕ್ಕೆ ಯಕ್ಷ ಭೀಷ್ಮ ಹಾಗೂ ಕರ್ಣರಾಗಿ ಮನದಣಿಯೇ ಕುಣಿದಿದ್ದರು... ಪ್ರಖ್ಯಾತ ಸಾಹಿತಿಗಳು ಹಾಗೂ ವಿದ್ವಾಂಸರು ತಮ್ಮ ವಿಚಾರ ಲಹರಿಯನ್ನು ಹಂಚಿಕೊಂಡಿದ್ದರು...

ಇದಕ್ಕೆಲ್ಲ ವೇದಿಕೆ ಕಲ್ಪಿಸಿದ್ದು ದೆಹಲಿಯ ಕರ್ನಾಟಕ ಸಂಘ. 1948ರಲ್ಲಿ ಚಿಕ್ಕದಾಗಿ ಹುಟ್ಟಿಕೊಂಡ ಸಂಘಕ್ಕೀಗ 77ರ ಹರೆಯ. ದೆಹಲಿಯಲ್ಲಿ ಈ ತನಕ ಲೆಕ್ಕವಿಲ್ಲದಷ್ಟು ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ಬಹಳಷ್ಟು ಸಂಘಗಳು ಅಳಿದಿವೆ. ಕೆಲವು ಲೆಕ್ಕಕ್ಕಷ್ಟೇ ಉಳಿದಿವೆ. ಬೆರಳೆಣಿಕೆಯ ಸಂಸ್ಥೆಗಳು ವರ್ಷಕ್ಕೆ ಒಂದೋ ಎರಡೋ ಕಾರ್ಯಕ್ರಮಕ್ಕೆ ಸೀಮಿತವಾಗಿವೆ. ಆದರೆ, ಹಿಂದಿ ನೆಲದಲ್ಲಿ ಭದ್ರವಾಗಿ ತಳವೂರಿರುವ ಕರ್ನಾಟಕ ಸಂಘ ಹಾಗಲ್ಲ. ಸಂಘದಲ್ಲಿ ವರ್ಷವಿಡೀ ಕನ್ನಡದ ಕಾರ್ಯಕ್ರಮಗಳ ರಸದೌತಣ.

ಸಂಘ ಸಾವಿರಾರು ಸದಸ್ಯರೊಂದಿಗೆ ಹೆಮ್ಮರವಾಗಿ ಬೆಳೆದಿದೆ. ಕಾರ್ಯಕ್ರಮಗಳ ಸಂಖ್ಯೆ ಮೊದಲಿಗಿಂತ ಹತ್ತು ಪಟ್ಟು ಹೆಚ್ಚಾಗಿವೆ. ಸಂಘದ ಕಟ್ಟಡದಲ್ಲಿ ಸುಸಜ್ಜಿತ ಸಭಾಂಗಣವಿದೆ. ಕನ್ನಡದ ಹಳೆಯ ಹಾಗೂ ಹೊಸ ಪುಸ್ತಕಗಳ ವೈವಿಧ್ಯತೆ ಇರುವ ಗ್ರಂಥಾಲಯವೂ ಇದೆ. ಸೆಮಿನಾರ್ ಹಾಲ್, ಉಪಾಹಾರ ಗೃಹ, ಎಟಿಎಂ ಕೇಂದ್ರಗಳು, ಬ್ಯಾಂಕ್, ವಿಶ್ರಾಂತಿ ಭವನ, ಸಂಘದ ಆಡಳಿತ ಕಚೇರಿ ಸೇರಿದಂತೆ ಸಂಕೀರ್ಣದಲ್ಲಿ ಬಗೆಬಗೆಯ ಸೌಲಭ್ಯಗಳಿವೆ. ಮಾಸಿಕವಾಗಿ ಪ್ರಕಟಗೊಳ್ಳುವ ಸಂಘದ ಮುಖವಾಣಿ ‘ಅಭಿಮತ’ ವಿಷಯ ವೈವಿಧ್ಯಗಳ ಹೂರಣ. ಮೊದಲ ಬಾರಿಗೆ ದೆಹಲಿಯೆಂಬ ಮಾಯಾನಗರಿಗೆ ಹೋಗುವ ಕನ್ನಡಿಗರಿಗೆ ಕರ್ನಾಟಕ ಸಂಘ ಆಶ್ರಯತಾಣವಿದ್ದಂತೆ.

ಈ ಏಳೂವರೆ ದಶಕಗಳಲ್ಲಿ ದೇಶ ಕಂಡ ಎಲ್ಲ ಸಂತಸದ ಹಾಗೂ ನೋವಿನ ಕ್ಷಣಗಳಲ್ಲೂ ಸಂಘ ಭಾಗಿಯಾಗಿದೆ. ರಾಷ್ಟ್ರದ ರಾಜಧಾನಿಯಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ರಂಗನ್ನು ಅಚ್ಚಳಿಯದೆ ಉಳಿಸಿದ ಕೀರ್ತಿ ಅದರದ್ದು. ಉದ್ಯೋಗ ಅರಸಿ ದೆಹಲಿಯತ್ತ ದೌಡಾಯಿಸಿ ಬಂದ ಕನ್ನಡಿಗರ ಸಂಖ್ಯೆ ಲಕ್ಷಾಂತರ. ಭಾಷೆ ಸಮಸ್ಯೆ, ಹಿಂದಿ ಭಾಷಿಕರ ಪಾರಮ್ಯ, ಅಸಾಧ್ಯ ಚಳಿ ಮತ್ತು ಬಿಸಿಲು– ಇವೆಲ್ಲವನ್ನೂ ಸಹಿಸಿಕೊಂಡು ಕನ್ನಡತನ ಉಳಿಸಿಕೊಂಡು ಬಾಳಬೇಕೆಂದರೆ ಅಸಾಧ್ಯ ಪರಿಶ್ರಮ ಬೇಕು. ಇಂತಹ ಸನ್ನಿವೇಶದಲ್ಲಿ ಕನ್ನಡಿಗರ ಪಾಲಿಗೆ ದೆಹಲಿ ಕರ್ನಾಟಕ ಸಂಘ ಓಯಸಿಸ್ನಂತೆ. ಇದು ನೂರಾರು ಕನ್ನಡ ಮನಸ್ಸುಗಳು ಸೇರುವ ತಾಣ.

ತಾಯ್ನಾಡನ್ನು ಬಿಟ್ಟು ದೆಹಲಿಯಲ್ಲಿ ವಾಸಕ್ಕೆ ನಿಂತ ಕನ್ನಡಿಗರಿಗೆ ಸಾಂಸ್ಕೃತಿಕ ಆಸರೆ ಕಲ್ಪಿಸುವ ಪ್ರಜಾಸತ್ತಾತ್ಮಕ ಸಂಘಟನೆಯೊಂದರ ಅವಶ್ಯಕತೆಯನ್ನು ಗಮನಿಸಿ ಅಂದಿನ ಅನಿವಾಸಿ ಕನ್ನಡದ ಹಿರಿಯರು ಈ ಸಂಘ ಪ್ರಾರಂಭಿಸಿದರು. ಈ ಸಂಘವು ದೆಹಲಿಯಲ್ಲಿ ಕನ್ನಡ ಮತ್ತು ಕರ್ನಾಟಕದ ಸಾಂಸ್ಕೃತಿಕ ಪ್ರತಿನಿಧಿಯಂತೆ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ದೆಹಲಿ ಕನ್ನಡಿಗರಿಗೆ ಮಾತ್ರವಲ್ಲದೆ ಇತರ ಭಾಷಿಕ ಜನರಿಗೂ ಪರಿಚಯಿಸುವ ಕನ್ನಡ ರಾಯಭಾರಿಯೂ ಹೌದು.

ಕನ್ನಡ ನೆಲದ ಜನಪದ ಕಲೆ, ನೃತ್ಯ, ಯಕ್ಷಗಾನ, ನಾಟಕ ಇತ್ಯಾದಿಗಳನ್ನು ಸಂಘ ಏರ್ಪಡಿಸುತ್ತಾ ಬಂದಿದೆ. ಕರ್ನಾಟಕದಿಂದ ನೂರಾರು ತಂಡಗಳು, ಕಲಾವಿದರು ದೆಹಲಿಗೆ ಬಂದು ಸಂಘದ ವೇದಿಕೆಯಲ್ಲಿ ಪ್ರದರ್ಶನಗಳನ್ನು ನೀಡಿ ಸಂಭ್ರಮಿಸಿದ್ದಾರೆ. ದೆಹಲಿಯ ಕನ್ನಡಿಗರೂ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಸುವ ಕಾರ್ಯಕ್ರಮಗಳನ್ನು ನೀಡಿ ಖುಷಿಪಟ್ಟಿದ್ದಾರೆ. ಈ ಪ್ರದರ್ಶನಗಳನ್ನು ವೀಕ್ಷಿಸಿ ಆನಂದಿಸಲು ಎಲ್ಲ ಭಾಷಿಕ ಆಸಕ್ತರಿಗೂ ಅನುವು ಮಾಡಿಕೊಡುವ ಮೂಲಕ ಭಾಷಾ ಗಡಿಗಳನ್ನು ಮೀರಿದ ಭಾವೈಕ್ಯತೆ ಬೆಳೆಸುವ ಕೆಲಸವನ್ನು ಸಂಘ ಮಾಡಿದೆ. ದಕ್ಷಿಣದ ಭಾಷೆಗಳನ್ನು ಹಿಂದಿಯೊಂದಿಗೆ ಮುಖಾಮುಖಿಯಾಗಿಸುವ ದೊಡ್ಡ ಕೆಲಸವನ್ನು ಮಾಡಿದೆ. ಎರಡು ವರ್ಷಗಳ ಹಿಂದೆ ಸಂಘ ಅಮೃತ ಮಹೋತ್ಸವ ಆಚರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸಣ್ಣದಾಗಿ ಪ್ರಾರಂಭಗೊಂಡ ಸಂಘವು ಹೆಮ್ಮರವಾಗಿ ಬೆಳೆಯಲು ಸಂಘದ ಈ ವರೆಗಿನ ಎಲ್ಲ ಅಧ್ಯಕ್ಷರ ಪರಿಶ್ರಮವಿದೆ.

ಕನ್ನಡದ ಪ್ರತಿಭಾವಂತರನ್ನು ದೆಹಲಿಗೆ ಕರೆಸಿ ಗೌರವಿಸುವ ಕೆಲಸವನ್ನು ಸಂಘವು ವ್ರತದಂತೆ ಮಾಡಿಕೊಂಡು ಬಂದಿದೆ. ಕಲೆ, ಸಾಹಿತ್ಯ, ರಂಗಭೂಮಿಗೆ ಮೌಲಿಕ ಕೊಡುಗೆ ನೀಡಿದ ಮಹನೀಯರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದೆ. ಕೇವಲ ಮನರಂಜನಾತ್ಮಕ ಕಾರ್ಯಕ್ರಮಗಳಲ್ಲದೇ ರಾಷ್ಟ್ರಮಟ್ಟದ ಹಲವು ವಿಚಾರಸಂಕಿರಣಗಳನ್ನು ನಡೆಸಿದೆ. ದೇಶದ ಇತರ ರಾಜ್ಯಗಳ ಕರ್ನಾಟಕ ಸಂಘಗಳನ್ನು ಒಗ್ಗೂಡಿಸಲು ಹೊರನಾಡ ಕನ್ನಡ ಸಂಘಗಳ ರಾಷ್ಟ್ರೀಯ ಮಹಾಧಿವೇಶನದಂತಹ ಸಮ್ಮೇಳನಗಳನ್ನು ಆಯೋಜಿಸಿದೆ. ಕನ್ನಡ ಭಾಷೆ ಸಂಸ್ಕೃತಿಗಳ ಸೇವೆ ಮಾಡಿದ ಗಣ್ಯರನ್ನು ಗೌರವಿಸುವ ಪರಿಪಾಟ ಬೆಳೆಸಿಕೊಂಡು ಬಂದಿದೆ. ದೆಹಲಿಯಲ್ಲಿ ಕನ್ನಡ ನುಡಿ ಹಾಗೂ ರಾಜ್ಯದ ಬಹುಸಂಸ್ಕೃತಿಗಳ ಪ್ರಸರಣದ ಕೈಂಕರ್ಯ ಮಾಡುತ್ತಿದೆ. ಕರುನಾಡಿನ ವರನಟ ರಾಜ್ಕುಮಾರ್ ಅವರಂತಹ ದಿಗ್ಗಜರು ಇಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡದ ಶ್ರೇಷ್ಠ ಸಾಹಿತಿಗಳು, ಲೇಖಕರು ಹಾಗೂ ರಂಗಕರ್ಮಿಗಳು ಉಪನ್ಯಾಸಗಳನ್ನು ನೀಡಿದ್ದಾರೆ.

ಪ್ರತಿಕೂಲ ಸನ್ನಿವೇಶದಲ್ಲೂ ರಾಜಧಾನಿಯಲ್ಲಿ ಕರ್ನಾಟಕ, ಮಹಿಳೆ ಮತ್ತು ಕನ್ನಡ ಸಾಹಿತ್ಯ, ದಕ್ಷಿಣ ಭಾರತದ ಮೌಖಿಕ ಸಾಹಿತ್ಯದ ಪರಂಪರೆಯ ಮಹತ್ವ, ಭಾರತದ ಸಾಮಾಜಿಕ ನ್ಯಾಯ ಪರಂಪರೆಗೆ ಕರ್ನಾಟಕದ ಕೊಡುಗೆ ಮತ್ತಿತರ ವಿಷಯಗಳ ಕುರಿತು ಸಂಘವು ವಿಚಾರ ಸಂಕಿರಣಗಳನ್ನು ನಡೆಸಿದೆ. ಕನ್ನಡಕ್ಕೆ ಶಾಸ್ತ್ರೀಯ ಮನ್ನಣೆ ದೊರಕಿಸಿಕೊಡಲು ಕನ್ನಡ, ದ್ರಾವಿಡ, ತೆಲುಗು ಮತ್ತು ತಮಿಳು ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶ ಸಂಘಟಿಸಿದೆ. ಮೈಸೂರಿನಲ್ಲಿ ರಂಗಾಯಣ ಆರಂಭಗೊಳ್ಳುವುದರಲ್ಲಿ ದೆಹಲಿ ಕರ್ನಾಟಕ ಸಂಘದ ಪಾತ್ರವೂ ಇದೆ.

ಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಸುಸಜ್ಜಿತವಾಗಿ ಕನ್ನಡ ಶಾಲೆ ತೆರೆದು ಕನ್ನಡಿಗರ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ದೊರಕುವಂತೆ ಮಾಡಿರುವ ಸಾಧನೆ ಸಣ್ಣದೇನಲ್ಲ. ಜೆಎನ್ಯುವಿನಲ್ಲಿ ಕನ್ನಡದ ಪೀಠದ ಆರಂಭದಲ್ಲಿ ಕರ್ನಾಟಕ ಸಂಘದ ಪಾತ್ರ ದೊಡ್ಡದು. ಹಾಗೆಂದು ಸಂಘವು ವಿವಾದದಿಂದ ಹೊರತಾಗಿಲ್ಲ. ಹೊಡೆದಾಟ, ಧರಣಿ, ಪ್ರತಿಭಟನೆ, ಸಂಘರ್ಷಕ್ಕೂ ‘ವೇದಿಕೆ’ ಆಗಿದೆ. ಸ್ಥಾಪಿತ ಹಿತಾಸಕ್ತಿಗಳ ಕೈವಾಡ, ಬಣ ರಾಜಕಾರಣದಿಂದಲೂ ಸಂಘ ನಲುಗಿರುವುದನ್ನು ಅಲ್ಲಗಳೆಯಲಾಗದು.

ಮೊದಲ ಬೀಜ...

ದೆಹಲಿಯಲ್ಲಿ ಕನ್ನಡಿಗರು ತಮ್ಮದೇ ಆದ ಪ್ರಾದೇಶಿಕ ಅಸ್ಮಿತೆಯನ್ನು ರೂಪಿಸಿಕೊಳ್ಳುವ ಮೊದಲ ಪ್ರಯತ್ನ ಆರಂಭವಾಗಿದ್ದು 1948ರಲ್ಲಿ. ನರಹರಿರಾಯರು ಮೊದಲ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಂಘವು ಮೊದಲ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಸಿತು. 25 ಮಂದಿ ಗಾಂಧೀಜಿಯ ಭಾವಚಿತ್ರದೊಡನೆ ಪಾರ್ಲಿಮೆಂಟ್ ರಸ್ತೆಯಲ್ಲಿ ಮೆರವಣಿಗೆ ಹೋಗಿದ್ದೇ ಕನ್ನಡಿಗರ ಮೊದಲ ಸಾಂಘಿಕ ಚಟುವಟಿಕೆ. ಆರಂಭದಲ್ಲಿ ಮನೆ ಮನೆಗಳಲ್ಲಿ ಸಂಘದ ಚಟುವಟಿಕೆ ನಡೆಯುತ್ತಿತ್ತು. ಸಂಘವು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಯಾಗಿ ನೋಂದಣಿಯಾಗಿದ್ದು 1953ರಲ್ಲಿ. ಕೆ.ಸಿ. ರೆಡ್ಡಿ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಲೋಧಿ ಎಸ್ಟೇಟ್ನಲ್ಲಿ ನಿವೇಶನ ಮಂಜೂರಾಯಿತು. ಈ ಜಾಗದಲ್ಲಿ ಕನ್ನಡ ಶಾಲೆ ತಲೆ ಎತ್ತಿ ನಿಂತಿತು. ಸಂಘಕ್ಕೆ ಇನ್ನೊಂದು ನಿವೇಶನ ಪಡೆಯುವ ಪ್ರಯತ್ನ ನಡೆಸಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ಕರ್ನಾಟಕದಿಂದ ಲೋಕಸಭೆಗೆ ಅತಿರಥ ಮಹಾರಥ ರಾಜಕಾರಣಿಗಳು ಆಯ್ಕೆಯಾಗಿ ಬಂದರೂ ಸಂಘಕ್ಕೆ ಹೆಚ್ಚಿನ ನೆರವು ಸಿಗಲಿಲ್ಲ. ಇಂದಿರಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸರೋಜಿನಿ ಮಹಿಷಿ ಅವರು ಕಷ್ಟಪಟ್ಟು ಸಂಘಕ್ಕೆ ಆರ್.ಕೆ.ಪುರಂನಲ್ಲಿ ಇನ್ನೊಂದು ನಿವೇಶನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

1980ರ ಸುಮಾರಿಗೆ ದೆಹಲಿಯಲ್ಲಿ ಕರ್ನಾಟಕ ಸಂಘ, ಕನ್ನಡ ಶಿಕ್ಷಣ ಸಂಸ್ಥೆ, ಕನ್ನಡ ಫಿಲಂ ಸೊಸೈಟಿ ಇದ್ದರೂ ಕನ್ನಡಿಗರು ಸಂಘಟಿತರಾಗಿರಲಿಲ್ಲ. ಕರ್ನಾಟಕ ಸಂಘ ಸ್ವಂತ ಕಟ್ಟಡ ಹೊಂದಿದ್ದರೂ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಕನ್ನಡ ಸಾಹಿತ್ಯ ಪರಿಷತ್ ಜಿ.ಪಿ.ರಾಜರತ್ನಂ ಅಧ್ಯಕ್ಷತೆಯಲ್ಲಿ 1978ರಲ್ಲಿ 50ನೇ ಅಖಿಲ ಭಾರತ ಸುವರ್ಣ ಸಾಹಿತ್ಯ ಸಮ್ಮೇಳನ ದೆಹಲಿಯಲ್ಲಿ ನಡೆಸಿದ ಬಳಿಕ ಇಲ್ಲಿ ಕನ್ನಡ ಚಟುವಟಿಕೆಗಳಿಗೆ ಹೊಸ ಚೈತನ್ಯ ಬಂತು. ಈ ನಡುವೆ, ಸರೋಜಿನಿ ಮಹಿಷಿ ಅವರು ಸಂಘವನ್ನು ಟ್ರಸ್ಟ್ ಮಾಡಲು ಹೊರಟಾಗ ಸದಸ್ಯರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಈ ಸಂಘರ್ಷವು ನ್ಯಾಯಾಲಯದ ಮೆಟ್ಟಿಲು ಏರಿತು. ಸಂಘದ ಸಂವಿಧಾನ ರಚನೆಯಾಗಿ ಚಾರಿಟೆಬಲ್ ಟ್ರಸ್ಟ್ ಮಾನ್ಯತೆ ಸಿಕ್ಕಿತು. ಆ ಬಳಿಕ ಕರ್ನಾಟಕ ಸರ್ಕಾರದಿಂದ ಅನುದಾನ ಸಿಗಲು ಆರಂಭವಾಯಿತು. ಆದರೂ, ಸಂಘದ ಸದಸ್ಯರ ಸಂಖ್ಯೆ 300–400ರ ಆಜುಬಾಜಿನಲ್ಲೇ ಇತ್ತು. ಸಂಘಕ್ಕೆ ಸದಸ್ಯರನ್ನು ಸೇರಿಸಿಕೊಳ್ಳಲು ದೆಹಲಿ ಕರ್ನಾಟಕ ಸಂಘ ಸಂಘರ್ಷ ಸಮಿತಿ ಹೆಸರಿನಲ್ಲಿ ಹೋರಾಟಗಳು ನಡೆದವು. ಹೆಚ್ಚು ಹೆಚ್ಚು ಕನ್ನಡಿಗರಿಗೆ ಸಂಘದ ಸದಸ್ಯತ್ವ ದೊರಕಿತು.

ಸಾಂಸ್ಕೃತಿಕ ಸಮುಚ್ಚಯ

ಈ ನಡುವೆ ಸಂಘಕ್ಕೊಂದು ಸಾಂಸ್ಕೃತಿಕ ಸಮುಚ್ಚಯ ನಿರ್ಮಿಸುವ ಕನಸು ದೆಹಲಿ ಕನ್ನಡಿಗರಲ್ಲಿ ಕುಡಿಯೊಡೆದಿತ್ತು. ಸುಮಾರು ₹7 ಕೋಟಿ ವೆಚ್ಚದ ಕಟ್ಟಡಕ್ಕೆ ನೀಲಿ ನಕ್ಷೆ ತಯಾರಿಸಿ ಅದಕ್ಕಿದ್ದ ಆರಂಭಿಕ ತೊಡಕುಗಳನ್ನು ಆಗಿನ ಅಧ್ಯಕ್ಷರು ನಿವಾರಿಸಿ ಕಟ್ಟಡ ಕೆಲಸ ಆರಂಭಿಸಿದ್ದರು. 2004ರಲ್ಲಿ ಈ ಕೆಲಸ ಚುರುಕು ಪಡೆದುಕೊಂಡಿತು. ಆಗ ಅಧ್ಯಕ್ಷರಾಗಿದ್ದ ಪುರುಷೋತ್ತಮ ಬಿಳಿಮಲೆ ಅವರು ಬ್ಯಾಂಕಿನಿಂದ ಸಾಲ, ಸರ್ಕಾರದಿಂದ ಅನುದಾನ ಹಾಗೂ ಸಾರ್ವಜನಿಕರಿಂದ ದೇಣಿಗೆ... ಹೀಗೆ ಮೂರು ರೀತಿಯ ಕಾರ್ಯಯೋಜನೆ ರೂಪಿಸಿದರು. ‘ಪ್ರತಿಯೊಬ್ಬ ಕನ್ನಡಿಗನೂ ಒಂದು ರೂಪಾಯಿಯನ್ನಾದರೂ ದೇಣಿಗೆ ನೀಡಬೇಕು. ಕಟ್ಟಡದ ಒಂದೊಂದು ಇಟ್ಟಿಗೆಯಲ್ಲಿಯೂ ನೀವಿರಬೇಕು’ ಎಂದು ಕನ್ನಡಿಗರಲ್ಲಿ ಮನವಿ ಮಾಡಿದರು. ಹೀಗೆ ಹೇಳುತ್ತಾ ಜೋಳಿಗೆ ಹಿಡಿದು ಹೊರಟಾಗ ಸಂಗ್ರಹವಾಗಿದ್ದು ₹2 ಕೋಟಿಯಷ್ಟು ದೊಡ್ಡ ಮೊತ್ತ. ಸರ್ಕಾರವು ₹1.75 ಕೋಟಿ ನೀಡಿತು. ದಾನಿಗಳು ನೆರವು ನೀಡಿದರು. ಇಷ್ಟೆಲ್ಲ ನೆರವಿನ ನಡುವೆಯೂ, ರಾಜ್ಯದ ಸಂಸದರು ತೋರಿದ್ದು ನಿರ್ಲಕ್ಷ್ಯವೇ. ರಾಜ್ಯಸಭಾ ಸದಸ್ಯರಾಗಿದ್ದ ಕಸ್ತೂರಿ ರಂಗನ್ ಹೊರತುಪಡಿಸಿ ಉಳಿದ ಸಂಸದರ ಕಡೆಯಿಂದ ನಯಾಪೈಸೆ ನೆರವು ಸಿಗಲಿಲ್ಲ. 2005ರಲ್ಲಿ ಹೊಸ ಸಾಂಸ್ಕೃತಿಕ ಸಮುಚ್ಚಯ ಲೋಕಾರ್ಪಣೆಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯ ಸಂವಾದ, ವಿಚಾರಸಂಕಿರಣಗಳು ಮರು ಆರಂಭಗೊಂಡು ಕನ್ನಡ ಸಾಹಿತ್ಯ ಯಾತ್ರೆಗೆ ಹೊಸ ಆಯಾಮ ದೊರಕಿತು. ಬೇರೆ ಭಾಷಿಕರು ಅಸೂಯೆ ಪಡುವ ರೀತಿಯಲ್ಲಿ ಸಂಘದ ಚಟುವಟಿಕೆಗಳು ನಡೆಯುತ್ತಿವೆ.

ಕನ್ನಡಿಗರು, ಕನ್ನಡದ ಕೆಲಸಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಂಘವು ಪ್ರತಿವರ್ಷ ವಿಶಿಷ್ಟ ಕನ್ನಡಿಗ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ, ಡಾ. ಸರೋಜಿನಿ ಮಹಿಷಿ ಪ್ರಶಸ್ತಿ, ಕನ್ನಡ ಭಾರತಿ ರಂಗ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದೆ.

ಕನ್ನಡ ನೆಲದಿಂದ ದೂರವಿರುವ ದೆಹಲಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸೊಗಡು ಪಸರಿಸುವಂತೆ ಮಾಡುತ್ತಿರುವ ಕೆಲಸ ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.