ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಕಾಯ್ದೆಯೂ ಬವಣೆಯ ಬದುಕೂ

ಕಬಳಿಕೆಗೆ ಕಡಿವಾಣ ಹಾಕುವಂತಹ ಅಂಶಗಳು ‘ಕಣ್ಣುರಿ’ಗೆ ಕಾರಣವಾದವೇ?
Last Updated 29 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಹತ್ತು ವರ್ಷಗಳ ಹಿಂದಿನ ಮಾತು. ನವೆಂಬರ್ ತಿಂಗಳಲ್ಲಿ ಅಕಾಲಿಕವಾಗಿ ಸುರಿದ ಕುಂಭದ್ರೋಣ ಮಳೆಯಿಂದ ರಾಜ್ಯದಲ್ಲಿ ಅನೇಕ ಗ್ರಾಮಗಳು ಜಲಾವೃತವಾಗಿದ್ದವು. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಸೇರಿದ್ದ ರೈತರ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ಜಲಾವೃತವಾಗಿದ್ದ ಈ ಗ್ರಾಮಕ್ಕೆ ಹಿಂದಿನ ದಿನವಷ್ಟೇ ತಹಶೀಲ್ದಾರರು ಭೇಟಿ ಕೊಟ್ಟು, ಪರಿಸ್ಥಿತಿಯ ತೀವ್ರತೆಯನ್ನು ಪರಿಶೀಲಿಸಿ, ಗ್ರಾಮವನ್ನು ಸ್ಥಳಾಂತರಿಸಲು ಶಿಫಾರಸು ಮಾಡುವುದಾಗಿಯೂ, ಅದಕ್ಕಾಗಿ 300 ಎಕರೆ ಜಮೀನನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದೂ ಹೇಳಿ ಹೋಗಿದ್ದರು. ಗ್ರಾಮಕ್ಕೆ ನೀರು ನುಗ್ಗಿದ ಚಿಂತೆಯ ಜೊತೆಗೆ ಜಮೀನು ಕಳೆದುಕೊಳ್ಳುವ ಆತಂಕವೂ ಸೇರಿ ರೈತರು ಇನ್ನಿಲ್ಲದಷ್ಟು ಖಿನ್ನರಾಗಿದ್ದರು.

ಕೆಲ ಗ್ರಾಮಸ್ಥರು, ಇಂತಹ ಮಳೆ ಹಿಂದೆಯೂ ಬಂದಿದ್ದನ್ನು ನೆನಪಿಸಿಕೊಳ್ಳುತ್ತಾ, ‘ಆಗೆಲ್ಲಾ ಹೀಗೆ ನೀರು ನುಗ್ಗುತ್ತಿರಲಿಲ್ಲ, ಈಗ ಪಕ್ಕದ ಹಗರಿಯಲ್ಲಿ (ದೊಡ್ಡ ಕಾಲುವೆ) ಬಳ್ಳಾರಿಜಾಲಿ ತುಂಬಿಕೊಂಡಿರುವುದೇ ನೀರು ನುಗ್ಗಲು ಕಾರಣ’ ಎಂದರು. ಹಗರಿಯ ಹರಿವಿನಗುಂಟ ಅಕ್ಕಪಕ್ಕದ ಗ್ರಾಮಸ್ಥರನ್ನು ಸೇರಿಸಿಕೊಂಡು ಬಳ್ಳಾರಿ ಜಾಲಿಯನ್ನು ಸ್ವಚ್ಛಪಡಿಸೋಣ ಎಂಬ ತೀರ್ಮಾನಕ್ಕೆ ರೈತರ ಗುಂಪು ಬಂದಿತು. ಈ ವಿಚಾರವನ್ನು ತಹಶೀಲ್ದಾರರಿಗೆ ಮುಟ್ಟಿಸಲಾಯಿತು. ಆಶ್ಚರ್ಯವೆಂದರೆ, ನೀರಿನ ಹರಿವು ತಗ್ಗಿದ್ದೇ ತಡ, ಈ ತಾಲ್ಲೂಕಿನ ಹಗರಿಗಳ ಜೊತೆ, ಪಕ್ಕದ ಕೂಡ್ಲಿಗಿ ತಾಲ್ಲೂಕಿನ ಹಗರಿಗಳಲ್ಲೂ ಬಳ್ಳಾರಿಜಾಲಿ ಸ್ವಚ್ಛಪಡಿಸುವ ಕೆಲಸವನ್ನು ತಾಲ್ಲೂಕು ಆಡಳಿತ ಕೈಗೊಂಡಿತು. ಆನಂತರ ಗ್ರಾಮದ ಸ್ಥಳಾಂತರ, ಜಮೀನು ಸ್ವಾಧೀನದ ವಿಚಾರ ಪ್ರಸ್ತಾಪವಾಗಲೇ ಇಲ್ಲ. ಸ್ವಾಧೀನಪಡಿಸಿಕೊಂಡಿದ್ದರೆ ಈ ವೇಳೆಗೆ, ರೈತರ ಜೀವವಾದ ನೂರಾರು ಎಕರೆ ಫಲವತ್ತಾದ ಜಮೀನು ಅವರ ಕೈಜಾರುತ್ತಿತ್ತು. ಬೇರೆ ಯಾವುದೋ ಉದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆ ಇತ್ತು.

ಸಂಸತ್ತಿನಲ್ಲಿ ಅಂಗೀಕಾರವಾದ ‘ಭೂಸ್ವಾಧೀನಕ್ಕೆ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು, ಪುನರ್ವಸತಿ ಮತ್ತು ಪುನರ್‌ನೆಲೆ ಕಾಯ್ದೆ- 2013’ಕ್ಕೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಏಕಾಏಕಿ ತಿದ್ದುಪಡಿ ತಂದಿರುವುದು ಈ ಘಟನೆಯನ್ನು ನೆನಪಿಸಿತು. ಕಾರಣ ಇಷ್ಟೆ, ಇಲ್ಲಿಯವರೆಗೂ ಸರ್ಕಾರ ವಿವಿಧ ಯೋಜನೆಗಳಿಗಾಗಿ ವಶಪಡಿಸಿಕೊಂಡಿರುವ ರೈತರ ಜಮೀನು, ಅದೇ ಉದ್ದೇಶಕ್ಕೆ ಪೂರ್ಣವಾಗಿ ಬಳಕೆಯಾಗಿರುವುದು ಕಡಿಮೆ. ಅದು, ರಿಯಲ್ ಎಸ್ಟೇಟ್ ಮಾಫಿಯಾದ ಕೈಸೇರಿದ್ದೇ ಹೆಚ್ಚು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತ ಅವಧಿಯಲ್ಲಿ ಒಂದು ಲಕ್ಷ ಎಕರೆಗೂ ಹೆಚ್ಚು ಜಮೀನನ್ನು ರೈತರಿಂದ ಸ್ವಾಧೀನಪಡಿಸಿಕೊಂಡು ‘ಲ್ಯಾಂಡ್‍ಬ್ಯಾಂಕ್’ನಲ್ಲಿ ಇಡಲಾಗಿತ್ತು. 2009ರ ನವೆಂಬರ್‌ನಲ್ಲಿ ನಡೆದ ವಿಶ್ವ ಹೂಡಿಕೆದಾರರ ಸಮಾವೇಶದಲ್ಲಿ ₹ 3.93 ಲಕ್ಷ ಕೋಟಿ ಮೊತ್ತದ ಹೂಡಿಕೆಯ ಒಟ್ಟು 389 ಒಡಂಬಡಿಕೆಗಳಿಗೆ (ಎಂಒಯು) 40 ಖಾಸಗಿ ಕಂಪನಿಗಳು ಮತ್ತು ಕೆಲ ಸಾರ್ವಜನಿಕ ವಲಯದ ಸಂಸ್ಥೆಗಳು ಸಹಿ ಹಾಕಿದ್ದಾಗಿಯೂ, ಈ ಭೂಮಿಯನ್ನು ಆ ಸಂಸ್ಥೆಗಳಿಗೆ ಹಸ್ತಾಂತರ ಮಾಡಿದ್ದಾಗಿಯೂ ಸರ್ಕಾರ ಪ್ರಕಟಿಸಿತು. ಆ ನಂತರವೂ ಸರ್ಕಾರ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವುದು ನಡೆದೇ ಇದೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಈವರೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನು ದುರ್ಬಳಕೆಯಾಗಿರುವ ಅಥವಾ ಬಳಕೆ ಯಾಗದೇ ಉಳಿದಿರುವ ಬಗ್ಗೆ ಸರ್ಕಾರವೇ ಅನೇಕ ಸಂದರ್ಭಗಳಲ್ಲಿ ಬಹಿರಂಗವಾಗಿ ಹೇಳಿಕೊಂಡಿದೆ. ಕೆಐಎಡಿಬಿ 2016ರಲ್ಲಿ ಎಂಆರ್‌ಪಿಎಲ್‌ 4ನೇ ಹಂತಕ್ಕೆ ಮಂಗಳೂರು ಸಮೀಪದ ಪೆರ್ಮುದೆ, ಕುತ್ತೆತ್ತೂರು ಮತ್ತಿತರ ಗ್ರಾಮಗಳಲ್ಲಿ ರೈತರ 1,011 ಎಕರೆ ಫಲವತ್ತಾದ ಜಮೀನಿನ ಸ್ವಾಧೀನಕ್ಕೆ ನೋಟಿಸ್‌ ನೀಡಿತ್ತು. ಸ್ಥಳೀಯರ ತೀವ್ರ ವಿರೋಧದಿಂದಾಗಿ ಸರ್ಕಾರ ಅದನ್ನು ತಡೆ ಹಿಡಿಯಬೇಕಾಯಿತು.

‘...ಪುನರ್‌ನೆಲೆ ಕಾಯ್ದೆ- 2013’ರ ನಿಯಮದ ಅನ್ವಯವೇ ರಾಜ್ಯದಲ್ಲಿ ಎಲ್ಲಾ ಭೂಸ್ವಾಧೀನಗಳು ನಡೆಯುವಂತೆ ಕೆಐಎಡಿಬಿ ಕಾಯ್ದೆ- 1966ಕ್ಕೆ ಸೂಕ್ತ ತಿದ್ದುಪಡಿ ತರಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿತ್ತು.ಹಾಗೆಯೇ 2014ರ ಅಕ್ಟೋಬರ್‌ನಲ್ಲಿರಾಜ್ಯ ಸರ್ಕಾರವು ಭೂಕಂದಾಯ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು, ಧಾರ್ಮಿಕ ಸಂಸ್ಥೆಗಳು ಮತ್ತು ಉದ್ದಿಮೆದಾರರು ತಾವು ಪಡೆದ ಸರ್ಕಾರಿ (ರೈತರಿಂದ ವಶಪಡಿಸಿಕೊಂಡ) ಜಮೀನುಗಳನ್ನು ನಿರ್ದಿಷ್ಟ ಸಮಯದಲ್ಲಿ ಬಳಸಿಕೊಳ್ಳದಿದ್ದಲ್ಲಿ ಅವನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿತ್ತು. ಯಾವುದೋ ಉದ್ದಿಮೆಯ ಹೆಸರಿನಲ್ಲಿ ಪಡೆದ ಜಮೀನನ್ನು ವರ್ಷವೆರಡು ಕಳೆಯುತ್ತಿದ್ದಂತೆ ದುಬಾರಿ ಬೆಲೆಗೆ ಮಾರುವುದು ಇಲ್ಲವೇ ಬಹುಮಹಡಿ ಕಟ್ಟಡಗಳು, ವಿಲ್ಲಾಗಳು, ವಿನೋದ ತಂಗುದಾಣಗಳನ್ನು ನಿರ್ಮಿಸುವ ಅಕೃತ್ಯಗಳು ನಡೆಯುತ್ತಿರುವುದಾಗಿ ಸರ್ಕಾರವೇ ಹೇಳಿತ್ತು.

ಹೀಗೆಲ್ಲಾ ಆಗಲು, ಸರ್ಕಾರಗಳು 1894ರ ಭೂಸ್ವಾಧೀನ ಕಾಯ್ದೆಗೆ ಬೇಕೆನಿಸಿದಾಗಲೆಲ್ಲಾ ತಿದ್ದುಪಡಿ ಮಾಡಿ, ಭೂಮಾಫಿಯಾದ ಜಮೀನು ಕಬಳಿಕೆಯನ್ನು ಸರಾಗಗೊಳಿಸಿದ್ದೇ ಕಾರಣ. 2013ರ ‘...ಪುನರ್‌ನೆಲೆ ಕಾಯ್ದೆ’ ಯಾವಾಗ ಅನುಷ್ಠಾನಕ್ಕೆ ಬಂದಿತೋ ಆಗಲೇ ಇವರ ಕೆಂಗಣ್ಣು ಅದರ ಮೇಲೆ ಬಿತ್ತು. ‘ಈ ಕಾಯ್ದೆಯಿಂದಾಗಿ ₹ 20 ಲಕ್ಷ ಕೋಟಿ ಹೂಡಿಕೆ ನಿಂತುಹೋಗಿದೆ’ ಎಂದು ಹಲುಬಿದ ಈಗಿನ ಕೇಂದ್ರ ಸರ್ಕಾರ, 2015ರಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿಗಳನ್ನು ತಂದಿತ್ತು. ನಂತರ ತೀವ್ರ ಜನವಿರೋಧದಿಂದಾಗಿ ಅದನ್ನು ಕೈಬಿಟ್ಟದ್ದು ಬೇರೆ ವಿಚಾರ. ಇದೀಗ ರಾಜ್ಯ ಸರ್ಕಾರದ ಸರದಿ.

ಜನಾಭಿಪ್ರಾಯಕ್ಕೆ ಮನ್ನಣೆ ಕೊಡುವ ‘...ಪುನರ್‌ನೆಲೆ ಕಾಯ್ದೆ’ಯಲ್ಲಿ ರೈತಪರ ಅಂಶಗಳು ಒಳಗೊಂಡಿರುವುದೇ ಆಳುವವರ್ಗಕ್ಕೆ ದೊಡ್ಡ ತೊಡಕಾಗಿದೆ. ‘ಭೂಸ್ವಾಧೀನಕ್ಕೆ ಶೇ 80ರಷ್ಟು ಜನರ ಸಮ್ಮತಿ; ಯೋಜನೆಯಿಂದ ಸಮುದಾಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮದ ಪೂರ್ವಭಾವಿ ಅಂದಾಜು; ಸ್ವಾಧೀನಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರ; ಯೋಜನೆಗೆ ಬೇಕಾದಷ್ಟೇ ಭೂಮಿ ಸ್ವಾಧೀನ ಮತ್ತು ಅದೇ ಉದ್ದೇಶಕ್ಕೆ 5 ವರ್ಷದೊಳಗೆ ಬಳಸಿಕೊಳ್ಳದಿದ್ದರೆ ಹಿಂಪಡೆಯುವುದು; ನೀರಾವರಿ ಭೂಮಿ, ಬಹುಬೆಳೆ ಭೂಮಿ ಸ್ವಾಧೀನ ಮಾಡುವಂತಿಲ್ಲ’ ಈ ಮುಂತಾದ ಅಂಶಗಳು ಅವರಿಗೆ ಕಂಟಕವಾಗಿ ಪರಿಣಮಿಸಿವೆ. ಇವುಗಳನ್ನು ನಿವಾರಿಸುವುದು ಹೇಗೆ? ಸದನದಲ್ಲೂ ಚರ್ಚಿಸದೆ ಏಕಾಏಕಿ ತಿದ್ದುಪಡಿಗೆ ಮುಂದಾಗುವ ತುರ್ತು ಉಂಟಾಗಿದ್ದು ಇಲ್ಲಿಯೇ. ಭೂಕಬಳಿಕೆಗೆ ಕಡಿವಾಣ ಹಾಕುವಂತಹ ಮಹತ್ವದ ಅಂಶಗಳನ್ನು ಕಿತ್ತುಹಾಕುವ ‘ವಿದ್ರೋಹಿ’ ವಿಚಾರವನ್ನು ಸಾರ್ವಜನಿಕರ ಮುಂದಿಡಲಾದೀತೇ? ಎಲ್ಲರೂ ಫಲಾನುಭವಿಗಳೇ ಆಗಿರುವಾಗ ಯಾವ ಶಾಸಕ ತಾನೇ ಇದನ್ನು ವಿರೋಧಿಸಬಹುದು?

ಇದನ್ನೆಲ್ಲಾ ನೋಡುವಾಗ, ನಮ್ಮ ಜನಪ್ರತಿನಿಧಿಗಳ ಬಗ್ಗೆ ಬೇರೆಯೇ ಅಭಿಪ್ರಾಯ ಮೂಡುತ್ತದೆ. ಇವರು, ಸರ್ಕಾರಗಳನ್ನೇ ಆಳುವ ಮಾಫಿಯಾಗಳ ಮಧ್ಯವರ್ತಿ ಮಾತ್ರದವರೆಂಬ ಭಾವನೆ ಜನಮಾನಸದಲ್ಲಿ ಗಟ್ಟಿಗೊಳ್ಳದೆ ಇದ್ದೀತೇ? ಸಣ್ಣ ಜಮೀನುಗಳಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ರೈತರತ್ತ ಮುಖ ಮಾಡುವುದರಿಂದ ಮಾತ್ರ ಈ ಸ್ವಾರ್ಥವನ್ನು ನೀಗಿಕೊಳ್ಳಲು ಸಾಧ್ಯ. ಸರ್ಕಾರ ಹಂಚಿದ ಭೂಮಿಯಲ್ಲಿ ಎಷ್ಟೋ ಕಾಲದಿಂದ ಹಕ್ಕುಪತ್ರ ಇಲ್ಲದೆ ಆತಂಕದಲ್ಲೇ ಬೇಸಾಯ ಮಾಡುತ್ತಿರುವ ಪರಿಶಿಷ್ಟ ಜಾತಿ–ಪಂಗಡಗಳ ಲಕ್ಷಾಂತರ ರೈತರ ಬವಣೆಗೆ ಕಣ್ಣು ತೆರೆದರೂ ಸಾಕು. ಜಮೀನುಗಳಿಗೆ ಏಕಾಏಕಿ ನುಗ್ಗಿ, ಬೆಳೆದುನಿಂತ ಬೆಳೆಯನ್ನು ನಾಶಪಡಿಸುವ ಅರಣ್ಯ ಇಲಾಖೆಯ ಕ್ರಮದಿಂದ ನಲುಗುತ್ತಾ, ‘ಹತ್ತೇ ಗುಂಟೆ ಜಮೀನು ನಮ್ಮದಾದರೂ ಸಾಕು, ಬದುಕು ಕಟ್ಟಿಕೊಂಡೇವು’ ಎಂದು ಹಲುಬುವ ಗಿರಿಜನರ ನಿಟ್ಟುಸಿರು ತಗುಲಿದರೂ ಸಾಕು. ‘ಬೀಳು ಬಿದ್ದಿರುವ ಲಕ್ಷಾಂತರ ಎಕರೆ ಸಾಗುವಳಿ ಜಮೀನಿನಲ್ಲಿ ಎರಡೇ ಎಕರೆ ಗುತ್ತಿಗೆಗೆ ಕೊಟ್ಟರೂ ಬದುಕಿಕೊಂಡೇವು’ ಎಂದು ಹಾತೊರೆಯುವ ಕೂಲಿಕಾರ ಮಹಿಳೆಯರ ಒಡಲುರಿ ತಟ್ಟಿದರೂ ಸಾಕು. ಒಂದೇ ಒಂದು ಸರ್ಕಾರಿ ಆದೇಶ ಅಥವಾ ಸಂಬಂಧಪಟ್ಟ ಕಾಯ್ದೆಗೆ ಜನಪರವಾದ ಸಣ್ಣ ತಿದ್ದುಪಡಿಯಿಂದ ಈ ನಾಡಿನ ಇಂತಹ ಕೋಟಿಗಟ್ಟಲೆ ಜನರ ಬದುಕು ಎಷ್ಟೋ ಮಟ್ಟಿಗೆ ಹಸನಾಗಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT