ಸಾಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸು ಇದುವರೆಗೆ ರಾಜ್ಯದ ಧೀರ್ಘಾವಧಿ ಮುಖ್ಯಮಂತ್ರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಅವರು ಏಳು ವರ್ಷ 293 ದಿನ ಮುಖ್ಯಮಂತ್ರಿಯಾಗಿದ್ದರು. ಈಗ ಸಿದ್ದರಾಮಯ್ಯನವರು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿ ಯಾಗಿ ವಿಜೃಂಭಿಸುತ್ತಿದ್ದಾರೆ.

1956 ರ ಕರ್ನಾಟಕ ಏಕೀಕರಣ ನಂತರದ ಬಲಾಢ್ಯ ಸಮುದಾಯಗಳ ಯಜಮಾನಿಕೆ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದ ಅರಸು, ಒಂದು ಪರ್ಯಾಯ ರಾಜಕಾರಣದ ಭೂಮಿಕೆಯನ್ನು ಸಿದ್ದಪಡಿಸಿದ್ದರು. ಹಣ ಬಲ, ಭೂಮಿ ಬಲ ಮತ್ತು ತೋಳು ಬಲವಿಲ್ಲದ ಸಣ್ಣ ಪುಟ್ಟ ಸಮುದಾಯಗಳಿಗೆ ರಾಜಕೀಯ ಶಕ್ತಿಯನ್ನು ನೀಡುವ ಈ ಪ್ರಯೋಗ 1972ರ ಚುನಾವಣೆಯಲ್ಲಿ ಯಶಸ್ವಿಯಾಯಿತು. ಆ ಪರ್ಯಾಯ ರಾಜಕಾರಣವೇ ಈಗ ಅಗ್ರಪಂಕ್ತಿಯ (mainstream) ರಾಜಕಾರಣವಾಗಿ ಪರಿವರ್ತನೆಯಾಗಿದೆ.

ಈ ಪರಿವರ್ತನೆಯ ಹಿಂದಿನ ಧೀ ಶಕ್ತಿ ಸಿದ್ದರಾಮಯ್ಯನವರು. ಅವರ ನಾಯಕತ್ವವನ್ನು ಅಖಂಡವಾಗಿ ಬೆಂಬಲಿಸುವ ಮತ್ತು ಅವರನ್ನು ಆರಾಧಿಸುವ ಶೋಷಿತ ವರ್ಗಗಳ ಒಂದು ಬೃಹತ್ ವೋಟ್ ಬ್ಯಾಂಕ್ ನಿರ್ಮಾಣವಾಗಿದೆ. ಅಂದರೆ ರಾಜ್ಯ ರಾಜಕಾರಣದ ರಂಗ ಸ್ಥಲದ ಪ್ರಧಾನ ಭೂಮಿಕೆಯಲ್ಲಿ ಚಂಡೆ ಮದ್ದಲೆಗಳ ಸದ್ದುಗಳ ನಡುವೆ ಕಣ್ಣು ಕೋರೈಸುವ ವರ್ಣರಂಜಿತ ಬೆಳಕಿನಲ್ಲಿ ವಿಜೃಂಭಿಸುತ್ತಿರುವವರು ಸಿದ್ದರಾಮಯ್ಯನವರು. ಅವರು ರಾಜ್ಯ ರಾಜಕಾರಣದ ಅವಿಭಾಜ್ಯ ಅಂಗ; ಒಂದು ಚಾಲನಾ ಶಕ್ತಿ (driving force). ಅವರನ್ನು ಬಿಟ್ಟು ರಾಜ್ಯ ರಾಜಕಾರಣವನ್ನು ಊಹಿಸಿಕೊಳ್ಳುವುದೂ ಕಷ್ಟ.

ಎಪ್ಪತ್ತರ ದಶಕದಲ್ಲಿ ಶೋಷಿತ ವರ್ಗಗಳಿಗೆ ರಾಜಕೀಯ ಅಧಿಕಾರ ಮತ್ತು ಮೀಸಲು ಸೌಲಭ್ಯ ನೀಡುವ ಕಾರ್ಯಕ್ರಮಗಳಿಗೆ ಗುಜರಾತ್ ಮುಂತಾದ ಉತ್ತರ ಭಾರತದ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಯಿತು ಮತ್ತು ಹಿಂಸಾಚಾರವೇ ನಡೆಯಿತು. ಆದರೆ ಕರ್ನಾಟಕದಲ್ಲಿ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಮುಂತಾದ ಕ್ರಾಂತಿಕಾರೀ ಯೋಜನೆಗಳನ್ನು ಅರಸು ಅವರು ಸುಸೂತ್ರವಾಗಿ ಜಾರಿಗೆ ತಂದಿದ್ದರು. ಇದನ್ನು 'ರಕ್ತರಹಿತ ಕ್ರಾಂತಿ' ಎಂದು ಸಮಾಜ ಶಾಸ್ತ್ರಜ್ಞರು ಬಣ್ಣಿಸುತ್ತಾರೆ.
.ದೀರ್ಘಾವಧಿ ಸಿಎಂ: ದೇವರಾಜ ಅರಸು – ಸಿದ್ದರಾಮಯ್ಯ ಎತ್ತಣಿಂದೆತ್ತ ಸಂಬಂಧವಯ್ಯಾ....Karnataka CM: ದೇವರಾಜ ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ.
ದೇವರಾಜ ಅರಸು ಬಿತ್ತಿದ್ದ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಒಂದು ಸೈದ್ಧಾಂತಿಕ ತಳಹದಿಯನ್ನು ಹಾಕಿದವರು ಸಿದ್ದರಾಮಯ್ಯನವರು. ಅವರು ಮೂರು ದಶಕಗಳ ಹಿಂದೆ ಚಾಲನೆ ನೀಡಿದ್ದ ಅಹಿಂದ ಆಂದೋಲನ ಇದುವರೆಗೆ ಒಂದು ಅಂತಃಪ್ರವಾಹವಾಗಿತ್ತು ಮತ್ತು ಗುಪ್ತಗಾಮಿನಿಯಾಗಿತ್ತು. ಇದೀಗ ಅದು ಒಂದು ಪ್ರಗತಿಪರ ವೈಚಾರಿಕ ಪಂಥವಾಗಿದೆ ಮತ್ತು ಸಾರ್ವಜನಿಕ ಬದುಕನ್ನು ಕುರಿತ ನಮ್ಮ ಆಲೋಚನಾ ಕ್ರಮವನ್ನು ನಿರ್ದೇಶಿಸುತ್ತಿದೆ.

ಅರಸು ಅವರ ಕಾಲದಲ್ಲೇ ಇಂತಹ ಒಂದು ಆಂದೋಲನಕ್ಕೆ ಪ್ರಶಸ್ತವಾದ ವಾತಾವರಣ ಇತ್ತು. ಸಮಾಜವಾದಿ ಚಳುವಳಿ, ದಲಿತ ಚಳುವಳಿ, ಜಾತಿ ವಿನಾಶ ಹೋರಾಟ, ಕಾರ್ಮಿಕ ಹೋರಾಟ, ಬೂಸಾ ಚಳುವಳಿ, ಸಮುದಾಯ ಸಾಂಸ್ಕೃತಿಕ ಜಾತಾ ಸಕ್ರಿಯವಾಗಿದ್ದವು. ಆಗ ಏಕೆ ಅಹಿಂದ ಚಳುವಳಿ ನಡೆಯಲಿಲ್ಲ? ಇದಕ್ಕೆ ಉತ್ತರವನ್ನು ನಂತರ ಕಂಡುಕೊಳ್ಳೋಣ.

ಮೂರು ದಶಕಗಳ ಹಿಂದೆ ಸರ್ಕಾರದ ಭಾಗವಾಗಿದ್ದುಕೊಂಡು ಅಹಿಂದ ಸಮಾವೇಶದಲ್ಲಿ ಭಾಗವಹಿಸುವ ಸಿದ್ದರಾಮಯ್ಯನವರ ನಡೆಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ಜೆಡಿಎಸ್ ಗಂಭೀರವಾಗಿ ಪರಿಗಣಿಸಿತ್ತು. ಅವರನ್ನು ಉಚ್ಚಾಟಿಸಿತ್ತು. ಆಗ ಸಿದ್ದರಾಮಯ್ಯ 'ನನ್ನನ್ನು ಒಬ್ಬ 'ಡಿ' ಗ್ರೂಪ್ ನೌಕರನಿಗಿಂತಲೂ ಕಡೆಯದಾಗಿ ವಜಾ ಮಾಡಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟಿದ್ದರು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಾ ಕಣಕ್ಕೆ ಧುಮುಕಿದ್ದರು. ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಸಮಾನ ಅಭ್ಯರ್ಥಿಯನ್ನು ನಿಲ್ಲಿಸಿದ್ದವು. ಅಂದರೆ ರಾಜ್ಯ ರಾಜಕಾರಣದಲ್ಲಿ ಪರಂಪರಾಗತವಾಗಿ ವಿರೋಧಿ ಬಣಗಳಾಗಿದ್ದ ಎರಡು ಪ್ರಬಲ ಸುಮುದಾಯಗಳು ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ನವರ ವಿರುದ್ಧ ಒಂದಾಗಿದ್ದವು.

ಸಿದ್ದರಾಮಯ್ಯನವರು ತೀವ್ರವಾಗಿ ಸೆಣಸಾಡಿ ವೀರೋಚಿತ ಗೆಲವು ಸಾಧಿಸಿದ್ದರು. 'ನಾವು ಮಾತ್ರ ರೂಲಿಂಗ್ ಕ್ಲಾಸ್' ಎನ್ನುವ ಪಟ್ಟಭದ್ರ ಶಕ್ತಿಗಳ ಭ್ರಮೆಯನ್ನು ಕಳಚುವಲ್ಲಿಯೂ ಅವರು ಯಶಸ್ವಿಯಾಗಿದ್ದರು. ಆಗಲೇ, ರಾಜಕೀಯ ಸವಾಲನ್ನು ಆಹ್ವಾನಿಸಿಕೊಂಡು ಹೊರಾಡುವ ಒಬ್ಬ ಪ್ರಚಂಡ ಜನ ನಾಯಕನ ಗುಣ ಲಕ್ಷಣಗಳನ್ನು ಸಿದ್ದರಾಮಯ್ಯನವರಲ್ಲಿ ರಾಜ್ಯದ ಜನರು ಗುರುತಿಸಿದ್ದರು. ಅಂದಿನಿಂದ ಸಿದ್ದರಾಮಯ್ಯ ಹಿಂತಿರುಗಿ ನೋಡಿದ್ದೇ ಇಲ್ಲ. ಅವರ ಯಶೋಗಾಥೆ ಸತತವಾಗಿ ಸಾಗಿದೆ. ಅರಸು ಅವರಂತೆಯೇ ಸಿದ್ದರಾಮಯ್ಯ ಕೂಡಾ ಹಲವು ಸಾಮಾಜಿಕ ಕಳಕಳಿಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಮುಖ್ಯಮಂತ್ರಿಯಾಗಿ 48 ಗಂಟೆಗಳಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಹಾರ ಭದ್ರತೆಯನ್ನು ಕಲ್ಪಿಸುವ ಅನ್ನ ಭಾಗ್ಯ ದಂತಹ ಯೋಜನೆ, ಹಸಿವು, ಬಡತನ ಮತ್ತು ಅವಮಾನಗಳನ್ನು ಅನುಭವಿಸಿದ ಸಿದ್ದರಾಮಯ್ಯ ಅವರಂತಹ ಜನ ನಾಯಕರಿಂದ ಮಾತ್ರ ಸಾಧ್ಯ.!
.ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ಬಾಡೂಟ.ಸುದೀರ್ಘ ಅವಧಿ ಸಿಎಂ: ಸಿದ್ದರಾಮಯ್ಯ ಅಭಿಮಾನಿಗಳಿಂದ ಸಿಂದಗಿಯಲ್ಲಿ ನಾಟಿಕೋಳಿ ಭೋಜನ.
ಇದೀಗ ದೀರ್ಘಾವಧಿ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಗೆಗೆ ಪಾತ್ರರಾಗಿದ್ದಾರೆ. ಅವರನ್ನು ಎಲ್ಲರೂ ಬೇಷರತ್ತಾಗಿ ಅಭಿನಂದಿಸೋಣ. ಆಡಳಿತ ವೈಖರಿ ಮತ್ತು ರಾಜಕಾರಣಕ್ಕೆ ಸಂಬಂಧಿಸಿದಂತೆ ಅರಸು ಮತ್ತು ಸಿದ್ದರಾಮಯ್ಯ ಅವರ ನಡುವೆ ಹೋಲಿಕೆಯ ಕುರಿತು ಚರ್ಚೆಗಳು ನಡೆಯುತ್ತಿವೆ.

ದಕ್ಷಿಣ ಭಾರತದ ಪ್ರಬಲ ನಾಯಕರಾಗಿದ್ದರೂ ಅರಸು ಅವರು ರಾಜಕೀಯವಾಗಿ ಕೊನೆಗಾಲದಲ್ಲಿ ಏಕೆ ಹಿನ್ನಡೆ ಅನುಭವಿಸಿದರು? ಅವರು ಬೆಳೆಸಿದ್ದ ಹಿಂದುಳಿದ ವರ್ಗಗಳ ನಾಯಕರೇ ಏಕೆ ಅವರಿಂದ ದೂರವಾದರು? ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಚಿಕ್ಕಮಗಳೂರಿನಲ್ಲಿ ಗೆಲ್ಲಿಸುವ ಮೂಲಕ ಅವರಿಗೆ ರಾಜಕೀಯ ಪುನರ್ಜನ್ಮವನ್ನು ಅರಸು ಅವರು ಕಲ್ಪಿಸಿದ್ದರು. ಆ ಮೂಲಕ ಅರಸು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರಾಗಿ ವಿಜೃಂಭಿಸಿದರು.

ಸಹಜವಾಗಿ ಅವರ ಮನಸ್ಸಿನಲ್ಲಿ ಒಬ್ಬ ಪರ್ಯಾಯ ನಾಯಕನಾಗುವ ಕನಸು ಮೊಳಕೆಯೊಡೆಯಿತು. ಇದರ ಸುಳಿವು ಪಕ್ಷದ ವರಿಷ್ಠರಿಗೆ ಸಿಗುತ್ತಿದ್ದಂತೆ ರಾಜಕೀಯ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸಲು ಆರಂಭವಾಯಿತು. ಅರಸು ತಮ್ಮ ಪಕ್ಷದೊಳಗೆ ಪರಕೀಯರಾಗಿಬಿಟ್ಟರು. ಇದರ ಜೊತೆಗೆ ಅರಸು ಅವರಿಗೆ ಸ್ವಂತ ಜಾತಿ ಬಲವಿರಲಿಲ್ಲ. ಅವರ ಕ್ರಾಂತಿಕಾರಿ ಯೋಜನೆಗಳಿಂದ ಉದ್ದಾರವಾಗಿದ್ದ ಯಾವ ಜಾತಿಯ ಜನರಿಗೂ ಅರಸು 'ನಮ್ಮವರು' ಎಂದು ಅನ್ನಿಸಲೇ ಇಲ್ಲ. ಆದ್ದರಿಂದ ಅರಸು ಅವರಿಗೆ ತಮ್ಮದೇ ಆದ ಒಂದು ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದೇ ಉತ್ತರವನ್ನು ಅರಸು ಕಾಲದಲ್ಲಿ ಅಹಿಂದ ಚಳುವಳಿ ಏಕೆ ಆರಂಭವಾಗಲಿಲ್ಲ ಎನ್ನುವ ಪ್ರಶ್ನೆಗೂ ನೀಡಬಹುದು. ನಾವು ಎಷ್ಟೇ ತತ್ವ ಸಿದ್ದಾಂತಗಳ ಬಗ್ಗೆ ಮಾತನಾಡಿದರೂ ಜಾತಿಯೇ ಒಂದು ವಾಸ್ತವ.ಮೂರನೇ ಪ್ರಬಲ ಸಮುದಾಯದ ಸಿದ್ದರಾಮಯ್ಯನವರ ಜೊತೆಗೆ ವಿವಿಧ ಜನ ವರ್ಗಗಳು ನಿಂತಿರುವುದರಿಂದಲೇ ಅವರೊಬ್ಬ ಬಲಾಢ್ಯ ನಾಯಕರು.
.ಸಿಎಂ ಸಿದ್ದರಾಮಯ್ಯ ಸಾವಿರ ದಿನ: ರಾಜಕೀಯ ಪಯಣದ ಹಾದಿ ಚಿತ್ರಗಳಲ್ಲಿ.ದಾಖಲೆ ಮುರಿಯುತ್ತಿದ್ದೇನೆ, ಅರಸುಗೂ ನನಗೂ ಹೋಲಿಕೆ ಇಲ್ಲ: ಸಿದ್ದರಾಮಯ್ಯ.
ರಾಷ್ಟ್ರೀಯ ರಾಜಕಾರಣವನ್ನು ಬಹಳ ಹಿಂದೆಯೇ ಅವರು ನಿರಾಕರಿಸಿರುವುದರಿಂದ ಕಾಂಗ್ರೆಸ್ ವರಿಷ್ಠರ ಮಟ್ಟದಲ್ಲಿ ಯಾವುದೇ ತೊಂದರೆಯಿಲ್ಲ. ಹಾಗೆ ನೋಡಿದರೆ ರಾಷ್ಟ್ರೀಯ ರಾಜಕಾರದಲ್ಲಿ ಯಾವುದಾದರೂ ಪಾತ್ರವನ್ನು ಸಿದ್ದರಾಮಯ್ಯ ಒಪ್ಪಿಕೊಂಡರೆ ವರಿಷ್ಠರು ಅದನ್ನು ಒಪ್ಪಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ.

ಸ್ವತಃ ಪೈಲ್ವಾನರಾಗಿದ್ದ ಅರಸು ರಾಜಾರೋಷವಾಗಿ ರಾಜಕೀಯ ಪಟ್ಟುಗಳನ್ನು ಹಾಕುತ್ತಿದ್ದರು. ಆದರೆ ಸಿದ್ದರಾಮಯ್ಯನವರು ಎಷ್ಟು ಹೊತ್ತಿಗೆ ಎಂತಹ ತೊಡರುಗಾಲು ಹಾಕಿ ಎದುರಾಳಿಗಳನ್ನು ಕೆಡವಿ ಬಿಡುತ್ತಾರೋ ಎನ್ನುವ ಭಯ ರಾಜಕೀಯ ವಲಯದಲ್ಲಿ ಇದ್ದೇ ಇದೆ. ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಿರುವ ಸಿದ್ದರಾಮಯ್ಯನವರ ಶಕ್ತಿಯನ್ನು ಅಂದಾಜು ಮಾಡಲು ಯಾರಿಗೂ ಸಾಧ್ಯವಾಗುತ್ತಿಲ್ಲ.

ಇನ್ನು ಆಡಳಿತ ವೈಖರಿಯ ವಿಚಾರಕ್ಕೆ ಬರುವುದಾದರೆ ಅರಸು ಒಬ್ಬ ಸಮರ್ಥ ಆಡಳಿತಗಾರರಾಗಿದ್ದರು. ವಿವಿಧ ಇಲಾಖೆಗಳ ಕಾರ್ಯ ವೈಖರಿಯ ಮೇಲೆ ಸದಾ ನಿಗಾ ಇಡುತ್ತಿದ್ದರು. ಉದಾಹರಣೆಗೆ 'ಪ್ರಜಾವಾಣಿಯ 50 ವರ್ಷಗಳ ಹಿಂದೆ' ವಿಭಾಗದಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ.

ಪೊಲೀಸ್ ಠಾಣೆಗಳಲ್ಲಿ ನಡೆಯುವ ಕ್ರಿಮಿನಲ್ ಕೃತ್ಯಗಳ ವಿರುದ್ಧ ಗೃಹ ಇಲಾಖೆಯನ್ನು ಅವರು ಹೇಗೆ ಎಚ್ಚರಿಸಿದ್ದರು ಎನ್ನುವುದು ತಿಳಿಯುತ್ತದೆ. ಆದರೆ ಸಿದ್ದರಾಮಯ್ಯನವರ ಆಡಳಿತ ವೈಖರಿ ನಿರೀಕ್ಷಿತ ಮಟ್ಟವನ್ನು ಇನ್ನೂ ತಲುಪಿಲ್ಲ. ಉದಾಹರಣೆಗೆ ಕಳೆದ ಹತ್ತು ತಿಂಗಳುಗಳಲ್ಲಿ ಬೆಂಗಳೂರಿನ 120 ಪೊಲೀಸ್ ಸಿಬಂದಿಯಯನ್ನು ಅಮಾನತು ಮಾಡಲಾಗಿದೆ.

ಈ ಪೈಕಿ ಅನೇಕ ಅಧಿಕಾರಿಗಳು ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕಿತ್ತು. ಇದರ ಜೊತೆಗೆ ಡ್ರಗ್ ಜಾಲದೊಂದಿಗೆ ಶಾಮೀಲಾಗಿರುವ ಶಂಕೆಯ ಮೇಲೆ ಮೂವರು ಪೊಲೀಸ್ ಅಧಿಕಾರಿಗಳನ್ನೂ ಸಸ್ಪೆಂಡ್ ಮಾಡಲಾಗಿದೆ. ಇದು ನಾಗರೀಕ ಸಮಾಜದಲ್ಲಿ ಭಯವನ್ನು ಮೂಡಿಸುವಂತಹ ವಿದ್ಯಮಾನ. ಆದರೆ ಮುಖ್ಯಮಂತ್ರಿಯವರು ಈ ಬಗ್ಗೆ ವಿಶೇಷ ಗಮನವನ್ನು ನೀಡಿದಂತೆ ಕಂಡು ಬಂದಿಲ್ಲ. ಅರಸು ಅವರು ತಳಮಟ್ಟದಲ್ಲಿ ಸಾಮಾನ್ಯ ಜನರು ಅನುಭವಿಸುವ ಕಷ್ಟ-ಸುಖಗಳ ಬಗ್ಗೆ ಸದಾ ಒಂದು ಕಣ್ಣು ಇಟ್ಟುಕೊಂಡಿದ್ದರು.

ಸಿದ್ದರಾಮಯ್ಯ ಕಾಲದ ಒಂದೆರಡು ಉದಾಹರಣೆಗಳು

IPL ಕ್ರಿಕೆಟ್ ಪಂದ್ಯಾವಳಿಯ ವಿಜಯೋತ್ಸವವನ್ನು ಆಚರಿಸಲು ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿಯವರೂ ಸೇರಿದಂತೆ ವಿವಿಧ ಗಣ್ಯರು ಸಮಾವೇಶಗೊಂಡಿದ್ದರು. ಸ್ಟೇಡಿಯಂ ಬಳಿ ಕಾಲ್ತುಳಿತದಿಂದ ಮಧ್ಯಾಹ್ನ ಮೂರೂವರೆಗೆ ಸಾವು ಸಂಭವಿಸುತ್ತದೆ. ಆದರೆ ಈ ಭೀಕರ ದುರಂತದ ಮಾಹಿತಿ ಸಂಜೆ ಐದೂವರೆ ವರೆಗೂ ಮುಖ್ಯಮಂತ್ರಿಯವರಿಗೆ ತಲುಪಲೇ ಇಲ್ಲ.

ಕೋಗಿಲು ಬಳಿ ಬೆಳಗಿನ ಜಾವ ಐದು ಗಂಟೆಗೆ ಜೆಸಿಬಿ ಯಂತ್ರಗಳು ದಾಳಿ ಮಾಡುತ್ತವೆ. ಮಕ್ಕಳು, ವೃದ್ದರು ಮತ್ತು ಮಹಿಳೆಯರು ಬೀದಿ ಪಾಲಾಗುತ್ತಾರೆ. ಈ ಕರುಣಾಜನಕ ಘಟನೆಯ ಬಗ್ಗೆ ಒಂದು ವಾರದ ನಂತರ ಕೇರಳದ ಮುಖ್ಯಮಂತ್ರಿ ಆಕ್ಷೇಪ ವ್ಯಕ್ತ ಪಡಿಸಿದಾಗಲೇ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳುತ್ತಾರೆ. ಅಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ಇಂತಹ ತುರ್ತು ವಿದ್ಯಮಾನಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಕ್ಷಣ ತರಲು ಸಾಧ್ಯವಾಗುತ್ತಿಲ್ಲ. ಅಂದರೆ ಮುಖ್ಯಮಂತ್ರಿಯವರ ಆಡಳಿತ ವೈಖರಿ ಮತ್ತಷ್ಟು ಮೊನಚುಗೊಳ್ಳುವ ಅಗತ್ಯವಿದೆ. ಸರ್ಕಾರೀ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ಜನ ಸಾಮಾನ್ಯರನ್ನು ಸುಲಿಗೆ ಮಾಡುತ್ತಿದ್ದಾರೆ.

ಆಡಳಿತ ಒಂದು ಪ್ರಹಸನದ ಮಟ್ಟಕ್ಕೆ ಬಂದಿದೆ. ಸಾಮಾನ್ಯ ಜನರು ಸರ್ಕಾರೀ ಕಚೇರಿಗಳ ಮುಂದೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ.ಮುಖ್ಯ ಮಂತ್ರಿಯವರು ಎರಡೂವರೆ ವರ್ಷದ ಹಿಂದೆಯೇ ರಾಜ್ಯಪಾಲರ ಭಾಷಣದಲ್ಲಿ 'ನಮ್ಮ ವ್ಯವಸ್ಥೆಯೊಳಗೆ ಭ್ರಷ್ಟಾಚಾರವು ಸಾಂಸ್ಥಿಕರಣಗೊಳ್ಳುವ ಮಟ್ಟಕ್ಕೆ ಬೇರು ಬಿಟ್ಟಿದೆ. ಅದರ ಮೂಲೋಚ್ಚಾಟನೆಗೆ ಅಗತ್ಯವಿರುವ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನು ಈ ಸರ್ಕಾರ ತೆಗೆದುಕೊಳ್ಳುತ್ತದೆ' ಎಂಬ ಭರವಸೆಯನ್ನು ನೀಡಿದ್ದರು.

ವಿಳಂಬವಾದರೂ ಪರವಾಗಿಲ್ಲ, ಈಗಾದರೂ ಆಡಳಿತ ವ್ಯವಸ್ಥೆ ಶುದ್ದೀಕರಣಕ್ಕೆ ಅವರು ಕಾರ್ಯೋನ್ಮುಖರಾಗಬೇಕಿದೆ.

ಒಂದಂತೂ ಸತ್ಯ. ಅರಸು ಮತ್ತು ಸಿದ್ದರಾಮಯ್ಯ - ಇಬ್ಬರೂ ಕರ್ನಾಟಕದ ಮುಖ್ಯ ಮಂತ್ರಿ ಸ್ಥಾನದ ಘನತೆಯನ್ನು ಎತ್ತಿ ಹಿಡಿದ ಮಹಾನ್ ನಾಯಕರು..!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.