ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ–ಬೆಳಗು: ಮಾಯಾವಿ ದೀಪದ ಕಂಬ

ಕಲೀಮ್‌ ಉಲ್ಲಾ
Published 28 ನವೆಂಬರ್ 2023, 23:45 IST
Last Updated 28 ನವೆಂಬರ್ 2023, 23:45 IST
ಅಕ್ಷರ ಗಾತ್ರ

ಒಂದೂರಿನಲ್ಲಿ ದರವೇಶಿ ಒಬ್ಬನಿದ್ದ. ಅವನ ಬಟ್ಟೆಗಳು ಮಾಸಲಾಗಿ ಹರಿದ್ದವು. ಅನ್ನವಿಲ್ಲದೆ ಹಸಿದು ಕಂಗಾಲಾಗಿದ್ದ. ಭಿಕ್ಷೆ ಬೇಡುತ್ತಾ ಅಲೆಯುತ್ತಿದ್ದ. ಈತನ ಕಂಡು ಕನಿಕರ ಪಟ್ಟ ಒಬ್ಬಳು ತಾಯಿ ಅವನ ಕರೆದು ಆರೈಕೆ ಮಾಡಿದಳು. ಅನ್ನ ಬಟ್ಟೆ ಕೊಟ್ಟು ಇರಲು ನೆಲೆಕೊಟ್ಟಳು. ಆ ತಾಯಿಗೊಬ್ಬ ಅಬ್ದುಲ್ಲ ಎಂಬ ಮಗನಿದ್ದ. ಅವನು ಕಾಡಿನಿಂದ ಸೌದೆ ತಂದು ವ್ಯಾಪಾರ ಮಾಡುತ್ತಿದ್ದ. ಇದರಿಂದಲೇ ಅವರ ಬದುಕು ನಡೆಯುತ್ತಿತ್ತು. ಅವರು ತುಂಬಾ ಬಡವರಾಗಿದ್ದರೂ ದರವೇಶಿಗೆ ಆಶ್ರಯ ಕೊಟ್ಟಿದ್ದರು.

ತನ್ನ ಮೇಲೆ ಇಷ್ಟೊಂದು ಪ್ರೀತಿ, ದಯೆ ತೋರಿದ ಆ ಅವ್ವ ಮಗನಿಗೆ ಪ್ರತಿಯಾಗಿ ಕೊಡಲು ದರವೇಶಿಯಲ್ಲಿ ಏನು ಇರಲಿಲ್ಲ. ಬದಲಿಗೆ ಆತ ಒಂದು ದಿನ ‘ಅಮ್ಮ ನನ್ನ ಬಳಿ ಹಣ, ಆಸ್ತಿ ಎರಡೂ ಇಲ್ಲ. ಆದರೆ ನಾ ಕಷ್ಟಪಟ್ಟು ಕಲಿತ ವಿದ್ಯೆ ಇದೆ. ಊರೂರು ತಿರುಗುತ್ತಾ ಹೊಸದನ್ನು ಕಲಿಯುವ, ಹಂಬಲದ ಮನುಷ್ಯ ನಾನು. ನಿನ್ನ ಮಗನನ್ನು ನನ್ನ ಜೊತೆ ಕಳಿಸಿಕೊಟ್ಟರೆ ನಾ ಕಲಿತ ಅಷ್ಟೂ ವಿದ್ಯೆಯನ್ನು ಅವನಿಗೆ ಕಲಿಸಿಬಲ್ಲೆ. ನಿನಗೆ ನಂಬುಗೆ ಇದ್ದರೆ ಕಳಿಸು’ ಎಂದನು.

ವಿದ್ಯೆ ಇಲ್ಲದ ಮಗ ಕಲಿತಾದರೂ ಉದ್ಧಾರವಾಗಲೆಂದು ದರವೇಶಿಯ ಜೊತೆ ಪುತ್ರನನ್ನು ತಾಯಿ ಕಳುಹಿಸಿಕೊಟ್ಟಳು. ತುಂಬಾ ಊರುಗಳನ್ನು ದರವೇಶಿಯ ಜೊತೆ ಸುತ್ತಿದ ಅಬ್ದುಲ್ಲ ಜೀವನಾನುಭವ ಬಿಟ್ಟು ಮತ್ತೇನು ಪಡೆಯಲಿಲ್ಲ. ದರವೇಶಿ ತನಗೇನೋ ತುಂಬಾ ಮಹತ್ವದ ವಿದ್ಯೆ ಕಲಿಸುತ್ತಾನೆಂದು ಅಬ್ದುಲ್ಲ ನಿರೀಕ್ಷಿಸಿದ್ದ. ಅಬ್ದುಲ್ಲನಿಗೆ ನಿರಾಶೆ ಹೆಚ್ಚಾಗಿ ಒಂದು ದಿನ ‘ನೀವು ಕಲಿತ ವಿದ್ಯೆ ಕಲಿಸದೆ ನನಗೆ ಮೋಸ ಮಾಡುತ್ತಿದ್ದೀರ’ ಎಂದು ಆರೋಪಿಸಿದ.

ಆಗ ದರವೇಶಿ ತಣ್ಣಗೆ ಮುಗುಳ್ನಕ್ಕು ‘ಇರು ನಾಳೆ ನನ್ನ ವಿದ್ಯಾಶಕ್ತಿಯಿಂದ ಈ ಭೂಮಿ ಬಾಯಿ ತೆರೆಯುವುದನ್ನು ತೋರಿಸುತ್ತೇನೆ. ಆಗ ನೀನು ಅದರೊಳಗೆ ಇಳಿದು ಹೋಗುವಿಯಂತೆ. ಅಲ್ಲಿ ಬೆಳ್ಳಿ, ಬಂಗಾರ, ವಜ್ರ, ಮುತ್ತು, ಹವಳದ ರಾಶಿಗಳೇ ಇರುತ್ತವೆ. ಆದರೆ, ಅವು ಯಾವುದನ್ನೂ ನೀನು ಮುಟ್ಟಬಾರದು. ನೋಡಿ ಆಸೆಯೂ ಪಡಬಾರದು. ಅಲ್ಲೊಂದು ದೀಪದ ಕಂಬವಿರುತ್ತದೆ. ಅದನ್ನು ಮಾತ್ರ ತೆಗೆದುಕೊಂಡು ಬಾ. ಆ ದೀಪದ ಬೆಳಕೇ ನಿನಗೆ ವಿದ್ಯೆ, ಬುದ್ಧಿ ಕಲಿಸುತ್ತದೆ’ ಎಂದು ಹೇಳಿದ.

ಮಾರನೆಯ ದಿನ ಅಬ್ದುಲ್ಲ ಸಂಪತ್ತನ್ನು ನೋಡಿ ದುರಾಸೆಗೊಂಡ. ದೀಪದ ಕಂಬದ ಜೊತೆಗೆ ಸಿಕ್ಕಷ್ಟು ಬಂಗಾರ, ವಜ್ರ, ಮುತ್ತು, ಹವಳಗಳ ದೋಚಿದ. ಗುರುವಿನ ಕಣ್ಣು ತಪ್ಪಿಸಿ ಮನೆಗೆ ಓಡಿ ಬಂದ. ತೆರೆದು ನೋಡಿದಾಗ ದೋಚಿದ್ದ ಸಂಪತ್ತು ಬೂದಿ ಉಂಡೆಯಾಗಿದ್ದವು. ಬೆಳಗುವ ದೀಪ ಮಾತ್ರ ಅಬ್ದುಲ್ಲನಲ್ಲಿ ಉಳಿದು ನಗುತ್ತಿತ್ತು.

ಮನುಷ್ಯನಿಗೆ ಹಣವೆಂದರೆ ವ್ಯಾಮೋಹ. ವಿದ್ಯೆ, ಬುದ್ಧಿ ಎಂದರೆ ತಾತ್ಸಾರ. ಸಂಪತ್ತು ಕಂಡಾಗ ದೋಚಿಕೊಳ್ಳಬೇಕೆಂಬ ಆತುರ. ಗಳಿಸಿದ ಹಣ ಬಳಸುವ ವಿವೇಕವನ್ನು ಕೂಡ ಜ್ಞಾನವೇ ನೀಡುವುದು. ಸಂಪತ್ತು ಕೊಡುವ ಸುಖ ಕ್ಷಣಿಕ. ತಿಳಿವಳಿಕೆ, ಜೀವನಾನುಭವ ಕೊಡುವ ನೆಮ್ಮದಿ ಶಾಶ್ವತ. ದರವೇಶಿಯಾಗಿದ್ದ ತನ್ನ ಗುರು ಇಷ್ಟೊಂದು ಸಂಪತ್ತು ಇದ್ದರೂ ಭಿಕ್ಷುಕನಾಗಿ ಏಕೆ ತಿರುಗುತ್ತಿದ್ದ? ಅವನು ಏನನ್ನು ಹುಡುಕುತ್ತಿದ್ದ? ಯಕಃಶ್ಚಿತ್‌ ದೀಪದ ಕಂಬ ಕೊಟ್ಟು ಅಮೂಲ್ಯ ಸಂಪತ್ತನ್ನು ಬೂದಿ ಮಾಡಿದ ದರವೇಶಿ ಮೋಸಗಾರನಲ್ಲವೇ ಎಂದು ಅಬ್ದುಲ್ಲ ಸಿಟ್ಟಾದ ತಕ್ಷಣ ಆ ದೀಪವು ಅವನ ಕೈಯಿಂದ ಕಣ್ಮರೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT