ಉಸಿರುಗಟ್ಟಿಸಿ ಕೊಲ್ಲುವ ಕೊರೊನಾ ವೈರಸ್‌ಗಿಂತಲೂ ಶತಮಾನಗಳ ಗುಲಾಮಗಿರಿಯು ಕಪ್ಪು ಅಮೆರಿಕನ್ನರ ಎದೆ ಹಿಂಡಿ ಉಸಿರುಗಟ್ಟಿಸಿ ಕೊಲ್ಲುತ್ತಿದೆ. ಕೋವಿಡ್ ಆತಂಕದ ನಡುವೆಯೂ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟದ ಕೆಚ್ಚನ್ನೂ ಹೆಚ್ಚಿಸುತ್ತಿದೆ ಎಂಬುದು ಕಪ್ಪು ಅಮೆರಿಕನ್ ಕಾದಂಬರಿಕಾರ್ತಿ ಜೆಸ್ಮಿನ್ ವಾರ್ಡ್ ಪ್ರತಿಪಾದನೆ.
ನನ್ನ ಪ್ರೀತಿಯ ಗಂಡ ಜನವರಿಯಲ್ಲಿ ಕೊನೆಯುಸಿರೆಳೆದ. ನನಗಿಂತ ಎತ್ತರವಿದ್ದ. ಕಡುಗಪ್ಪಾದ ಬಟ್ಟಲು ಕಣ್ಣುಗಳು. ಚುರುಕಾದ ಮತ್ತು ಇತರರ ನೋವಿಗೆ ಮಿಡಿಯುವ ಕೈಗುಣ. ಪ್ರತಿದಿನವೂ ಬೆಳಿಗ್ಗೆ ತಿಂಡಿ ಮತ್ತು ಟೀ ತಪ್ಪದೇ ಮಾಡಿಕೊಡುತ್ತಿದ್ದ.
ನಮ್ಮ ಇಬ್ಬರು ಮಕ್ಕಳು ಹುಟ್ಟಿದಾಗಲೂ ಆತ ಭಾವುಕನಾಗಿ ಸದ್ದಿಲ್ಲದೇ ಕಣ್ತುಂಬಿಕೊಂಡಿದ್ದ. ಎಳೆಬಿಸಿಲಿನಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ದಾರಿಯುದ್ದಕ್ಕೂ ವಿಚಿತ್ರ ಭಾವಭಂಗಿಗಳನ್ನು ಪ್ರದರ್ಶಿಸಿ ನಗಿಸುತ್ತಲೇ ಇರುತ್ತಿದ್ದ. ಹೊಟ್ಟೆಹುಣ್ಣಾಗುವಷ್ಟು ನಗುತ್ತಿದ್ದೆ. ಮತ್ತೆ ಬಾಲ್ಯಕ್ಕೆ ಮರಳಿ ಶಾಲೆಗೆ ಹೋದರಷ್ಟೇ ತನ್ನ ಬದುಕು ಸಾರ್ಥಕವಾಗುತ್ತದೆ ಎಂಬ ನಿರ್ಧಾರವನ್ನೂ ಮಾಡಿದ್ದ.
ಮನೆಯ ಸದಸ್ಯರೆಲ್ಲರನ್ನೂ ಸಂತೋಷವಾಗಿಡುವುದೇ ಅವನ ಪ್ರಮುಖ ಧ್ಯೇಯವಾಗಿತ್ತು. ಅವನು ನಿಜಕ್ಕೂ ಸದ್ಗೃಹಸ್ಥನಾಗಿದ್ದ.
ಬ್ಯುಸಿನೆಸ್ ಟ್ರಿಪ್‌ಗಳಲ್ಲಿ ನನ್ನೊಂದಿಗೆ ಬರುತ್ತಿದ್ದ. ವೇದಿಕೆಯಲ್ಲಿ ನಿಂತು ನಾನು ಮಾತನಾಡುವಾಗ, ಅಭಿಮಾನಿಗಳ ಕೈಕುಲುಕುವಾಗ, ಪುಸ್ತಕಗಳಿಗೆ ಹಸ್ತಾಕ್ಷರ ಹಾಕುವಾಗ ಅಭಿಮಾನದಿಂದ ನೋಡುತ್ತಿದ್ದ.
ಸ್ಟೇಡಿಯಂನಲ್ಲಿ ಕುಳಿತು ಫುಟ್‌ಬಾಲ್ ಮ್ಯಾಚ್ ನೋಡುವುದೆಂದರೆ ಆತನಿಗೆ ಪ್ರಾಣ. ಆದರೆ ಕ್ರಿಸ್‌ಮಸ್ ಸಿನಿಮಾಗಳನ್ನು ಕಂಡರೆ ನನಗೆಷ್ಟು ಇಷ್ಟ ಎಂಬುದೇ ಮುಖ್ಯವೆಂದು ಭಾವಿಸಿ ನನ್ನೊಂದಿಗೆ ಸಮಯ ಕಳೆಯುತ್ತಿದ್ದ.
ಹೀಗಾಗಿಯೇ ಅವನ ಬೆಚ್ಚನೆಯ ತೋಳು, ಅವನ ಪಕ್ಕದ ಜಾಗ,ಆಳವಾದ, ಕತ್ತಲ ನದಿ ತೀರ ನನಗೆ ಅಚ್ಚುಮೆಚ್ಚು.
ಜನವರಿ ಆರಂಭದಲ್ಲಿ
ಜನವರಿ ಆರಂಭದಲ್ಲೇ ನಮಗೆಲ್ಲ ಜ್ವರ ಕಾಣಿಸಿಕೊಂಡಿತ್ತು. ಐದು ದಿನದ ಬಳಿಕ ಮನೆ ಹತ್ತಿರದ ಆಸ್ಪತ್ರೆಗೆ ಹೋಗಿದ್ದೆವು. ವೈದ್ಯರು ಆರೋಗ್ಯ ತಪಾಸಣೆ ಮಾಡಿದರು. ನಮಗೆ ಸಾಮಾನ್ಯ ಜ್ವರವಿತ್ತು. ಆದರೆ ಅವನಿಗೆ ಸುಡುಜ್ವರವಿದ್ದರೂ ನಿಜಕ್ಕೂ ಏನಾಗಿದೆ ಎಂಬುದು ಸ್ಪಷ್ಟವಾಗಿರಲಿಲ್ಲ.
‘ಔಷಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ದೂರಲೆಂದೇ ಆತ ಎಚ್ಚರವಾಗುತ್ತಿದ್ದ, ಮತ್ತೆ ಮಲಗುತ್ತಿದ್ದ. ನೋವು ಕಡಿಮೆಯಾಗದೇ ಇನ್ನಷ್ಟು ಔಷಧಿ ನುಂಗಿ ಮತ್ತೆ ಮಲಗಿಬಿಡುತ್ತಿದ್ದ. ನಮ್ಮ ಫ್ಯಾಮಿಲಿ ಡಾಕ್ಟರ್ ಬಂದು ಹೋದ ಮೇಲೆ, ನಮ್ಮ ಮಗನ ರೂಮಿನಲ್ಲಿ ಮಲಗಿದ್ದ ಗಂಡನ ಬಳಿಗೆ ಹೋದಾಗ ಅವನು ‘ಉಸಿರಾಡಲು ಆಗುತ್ತಿಲ್ಲ’ ಎಂದು ನರಳಿದ.
ಕೂಡಲೇ ಐಸಿಯುಗೆ ಸಾಗಿಸಿದೆವು. ಒಂದು ಗಂಟೆ ಬಳಿಕ ವೆಂಟಿಲೇಟರ್ ಅಳವಡಿಸಿದರು. ಆದರೆ ಅವನ ದೇಹದ ಅಂಗಗಳು ಕ್ರಮೇಣ ಸೋತುಹೋದವು. ಮೊದಲು ಮೂತ್ರಪಿಂಡ. ನಂತರ ಯಕೃತ್ತು. ಶ್ವಾಸಕೋಶಗಳು ತೀವ್ರ ಸೋಂಕಿಗೆ ಒಳಗಾಗಿದ್ದವು. ಬಲವಾಗಿದ್ದ ಅವನ ಹೃದಯವೂ ಆ ಪರಿಸ್ಥಿತಿಯಲ್ಲಿ ಸ್ಪಂದಿಸಲು ಆಗಲಿಲ್ಲ.
ಕೊನೇ ಪ್ರಯತ್ನವಾಗಿ ವೈದ್ಯರು cpr (Cardiopulmonary resuscitation) ಕೂಡ ಮಾಡಿದರು. ಅದೂ ವಿಫಲವಾಯಿತು. ಆಸ್ಪತ್ರೆಗೆ ಕರೆತಂದ 15 ಗಂಟೆಗಳ ಬಳಿಕ ಅವನು ಕೊನೆಯುಸಿರೆಳೆದ. ಅಧಿಕೃತ ಕಾರಣ: ಉಸಿರಾಟದ ತೀವ್ರ ತೊಂದರೆ (acute respiratory distress syndrome). ಅವನಿಗೆ ಆಗ 33 ವರ್ಷ ವಯಸ್ಸು ಅಷ್ಟೇ.
ಬೆನ್ನುತಟ್ಟಿ ಉತ್ತೇಜಿಸುವ ಅವನಿಲ್ಲದ ಪರಿಸ್ಥಿತಿಯು ನನ್ನನ್ನು ಸುಡುವ ದುಃಖದಲ್ಲಿ ಮುಳುಗಿಸಿಬಿಟ್ಟಿತು.
ಅದಾಗಿ ಎರಡು ತಿಂಗಳ ಬಳಿಕ ಅಮೆರಿಕನ್ ರಾಪರ್ Cardi Bಯಳು ವೀಡಿಯೋವೊಂದರಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದುದನ್ನು ಕೇಳಿದೆ. ಅವಳು ಉಲಿದಳು: ಕೊರೊನಾ ವೈರಸ್.ಮತ್ತೆ ಉಲಿದಳು: ಕೊರೊನಾ ವೈರಸ್.
ನನ್ನ ಸುತ್ತಲಿನ ಜನ ಕೋವಿಡ್ ಬಗ್ಗೆ, ಅದರ ಕುರಿತ ಆತಂಕಗಳ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾಗ ನಾನು ಮೌನವಹಿಸುತ್ತಿದ್ದೆ. ಒಂದು ವಾರವಾಯಿತು. ನನ್ನ ಮಕ್ಕಳ ಶಾಲೆ ಮುಚ್ಚಿತು. ಡಾರ್ನಮೆಂಟರಿಗಳನ್ನು ಖಾಲಿ ಮಾಡಿ ಹೋಗುವಂತೆ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ತಾಕೀತು ಮಾಡಿದವು. ಪ್ರೊಫೆಸರುಗಳು ಆನ್‌ಲೈನ್ ಕ್ಲಾಸುಗಳಿಗಾಗಿ ತರಾತುರಿ ಸಿದ್ಧತೆ ನಡೆಸತೊಡಗಿದ್ದರು.
ಲಾಕ್‌ಡೌನ್ ಪರಿಣಾಮವಾಗಿ, ಖರೀದಿಸಲು ಎಲ್ಲಿಯೂ ಬ್ಲೀಚಿಂಗ್ ಪೌಡರ್ ಕೂಡ ಸಿಗಲಿಲ್ಲ. ಟಾಯ್ಲೆಟ್ ಪೇಪರ್. ಪೇಪರ್ ಟವಲ್ ಕೂಡ ಇಲ್ಲ. ಅಂಗಡಿಯೊಂದರ ಶೆಲ್ಫಿನಲ್ಲಿ ಅವಿತುಕೊಂಡಂತಿದ್ದ ಕ್ರಿಮಿನಾಶಕದ ಸ್ಪ್ರೇಯೊಂದನ್ನು ಹುಡುಕಿ ತೆಗೆದಾಗ ಅಂಗಡಿಯಾತ ‘ನಿಮಗಿದೆಲ್ಲಿ ಸಿಕ್ಕಿತು’ ಎಂದು ಆಶ್ಚರ್ಯದಿಂದ ಕೇಳಿದ್ದ.
ನಮಗೆ ಬೇಕಾಗಿರುವುದನ್ನು ಹುಡುಕಿ, ಖರೀದಿಸಲು ನಿರಾಕರಿಸುವ ನಿಯಮ ಎಲ್ಲಾದರೂ ಇದ್ದರೆ ಹೇಳಿ.
ದಿನಗಳು ವಾರಗಳಾದವು
ಮಿಸಿಸಿಪ್ಪಿಯಲ್ಲಿ ವಾತಾವರಣವೂ ಬದಲಾಯಿತು. ಉಷ್ಣಾಂಶ ಕುಸಿಯಿತು. ಮೋಡಗಳಿಲ್ಲದ ಶುಭ್ರ ಆಕಾಶ. ನಾನು ಮತ್ತು ನನ್ನ ಮಕ್ಕಳು ಬಿಸಿಲೇರಿದ ಬಳಿಕವೇ ಎದ್ದು ಆನ್‌ಲೈನ್ ತರಗತಿಗಳತ್ತ ಮುಖ ಮಾಡುತ್ತಿದ್ದೆವು.
ಸುದೀರ್ಘ ವಸಂತ ಮುಗಿದು ಬೇಸಿಗೆ ಬರುತ್ತಲೇ ನನ್ನ ಮಕ್ಕಳು ಚುರುಕಾದರು. ಬರಿ ಚಡ್ಡಿಯಲ್ಲೇ ನನ್ನ ಮನೆ ಸುತ್ತಲಿನ ಕಾಡಿನಲ್ಲಿ ಅಲೆದಾಡತೊಡಗಿದರು. ಬ್ಲಾಕ್‌ಬೆರ್ರಿ ಹಣ್ಣುಗಳನ್ನು ಆಯತೊಡಗಿದರು. ಬೈಕ್, ಕಾರುಗಳಲ್ಲಿ ಸುತ್ತಾಡತೊಡಗಿದರು.
ಆಗೊಮ್ಮೆ, ಈಗೊಮ್ಮೆ ನನ್ನ ಬಳಿಗೆ ಜಿಗಿದು ಬಂದು ನನ್ನ ಮಡಿಲಲ್ಲಿ ತಲೆಯುಜ್ಜುತ್ತಾ ‘ಐ ಮಿಸ್ ಡ್ಯಾಡಿ’ ಎಂದು ಹಲುಬುತ್ತಿದ್ದರು. ಅವರ ತಲೆಗೂದಲು ಹೆಚ್ಚು ದಟ್ಟವಾಗುತ್ತಿತ್ತು. ಹಸಿವಾದರಷ್ಟೇ ನಾನು ಏನಾದರೂ ತಿನ್ನುತ್ತಿದ್ದೆ. ಇನ್ನೇನು? ಗೋದಿ ಬ್ರೆಡ್, ಗಿಣ್ಣು ಮತ್ತು ಕೊಂಚ ಮದ್ಯ.
‘ನನ್ನ ಗಂಡ ಇನ್ನಿಲ್ಲ’ ಎಂಬುದು ನಮ್ಮ ಮನೆಯ ಪ್ರತಿ ರೂಮಿನಲ್ಲೂ ಎದ್ದು ಕಾಣುತ್ತಿತ್ತು. ಬೃಹತ್ತಾದ ಸೋಫಾದಲ್ಲಿ ಅವನೊಂದಿಗೆ ನಾನು ನನ್ನ ಮಕ್ಕಳು ನಲಿಯುತ್ತಿದ್ದೆವು. ಅಡುಗೆ ಮನೆಯಲ್ಲಿ ಚಿಕನ್ ಪದಾರ್ಥ ತಯಾರಿಸುತ್ತಿದ್ದ. ಮಗಳನ್ನು ಎರಡೂ ಕೈಗಳಿಂದ ಎಷ್ಟು ಸಾಧ್ಯವೋ ಅಷ್ಟೂ ಮೇಲಕ್ಕೆಸೆದು ಗಾಳಿಯಲ್ಲಿ ಉಯ್ಯಾಲೆ ಆಡಿಸಿ ಖುಷಿಪಡಿಸುತ್ತಿದ್ದ.
ಮನೆಯಲ್ಲೆ ತಯಾರಿಸಿದ ಚಾಕ್‌ಬೋರ್ಡ್ ಪೇಂಟ್ ಅನ್ನು ಮಕ್ಕಳ ಕೊಠಡಿಯ ಗೋಡೆಗಳಿಗೆ ಬಳಿಯುವ ಅವನ ಪ್ರಯತ್ನ ವಿಫಲವಾಗಿ ಎಲ್ಲೆಲ್ಲೂ ಹಸಿರು ಪುಡಿ ಚೆಲ್ಲಾಡುತ್ತಿತ್ತು.
ಮನೆಯಿಂದ ಹೊರಬರಲು ಭಯ
ಕೋವಿಡ್ ಸಂಕಷ್ಟದ ನಡುವೆ ನಾನು ಮನೆಯಿಂದ ಹೊರಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಬರಲು ಅತೀವ ಭಯವಾಗುತ್ತಿತ್ತು. ಎಂಥ ಭಯ, ಎಂಥ ಆತಂಕವಾಗಿತ್ತು ಅದು?
ನನ್ನ ತಾಯಿ, ತಂಗಿಯರ ಮತ್ತು ಮಕ್ಕಳ ಪ್ರಾಣ ಉಳಿಸಲು ಅವರ ಎದೆ ಮೇಲೆ ವೈದ್ಯರು ತಮ್ಮ ಕೈಗಳನ್ನೂರಿ ದೇಹದ ಇಡೀ ಭಾರ ಬಿಟ್ಟು ಒತ್ತುವುದನ್ನು ಐಸಿಯು ರೂಮಿನ ಹೊರಗೆ ನಿಂತು ನೋಡಬೇಕಾಗುತ್ತದೆ ಎಂಬ ಭಯ.
ವೈದ್ಯರ ಒತ್ತಡಕ್ಕೆ ಅದುರುವ ಅವರ ಕಾಲುಗಳು, ಅಂಥ ಪ್ರತಿ ಒತ್ತಡಕ್ಕೂ ಮಣಿದು ಮತ್ತೆ ಹೃದಯ ಬಡಿತ ಶುರುಮಾಡುತ್ತದೆಯೇ ಎಂಬ ಆತಂಕ. ಹೃದಯದ ಜೊತೆಗೆ ಸ್ಪಂದಿಸಿ ಅದೃಶ್ಯವಾಗಿ ಅಲುಗಾಡುವ ಅವರ ತಣ್ಣನೆಯ ಆತ್ಮಗಳನ್ನು ನೋಡಬೇಕಾಗುತ್ತದೆ ಎಂಬ ಸಂಕಟ.
‘ಅವರನ್ನು ಆ ಕೆಟ್ಟ ಪರಿಸ್ಥಿತಿಯಿಂದ ಪಾರು ಮಾಡು ದೇವರೇ’ ಎಂದು ಅಪ್ರಯತ್ನಪೂರ್ವಕವಾಗಿ ಪ್ರಾರ್ಥನೆ ಮಾಡಬೇಕಾಗುತ್ತದೆ ಎಂಬ ಭಯ.
ಅದು ಬಾಗಿಲ ಬಳಿ ನಿಂತು ಮಾಡಲೇಬೇಕಾದ ಪ್ರಾರ್ಥನೆ. ಆದರೆ ಯಾವತ್ತೂ ಮಾಡಲು ಬಯಸದ ಪ್ರಾರ್ಥನೆ. ವೆಂಟಿಲೇಟರ್‌ನ ಹಶ್–ಕ್ಲಿಕ್, ಹಶ್ ಕ್ಲಿಕ್ ಸದ್ದಿನಲ್ಲಿರುವ ಸಂದಿಗ್ಧತೆಯನ್ನು ಕರಗಿಸುವಂಥ ಪ್ರಾರ್ಥನೆ.
ನನ್ನ ಪ್ರೀತಿಪಾತ್ರರಿಗಾಗಿ ಮಿಡಿಯುವ ನನ್ನ ಹೃದಯದ ಬದ್ಧತೆಯ ಭಯವೂ ಇದೆ. ಏಕೆಂದರೆ ಅವರಿಗಾಗಿ ನಾನು ಏನೂ ಮಾಡಲಾಗದಿದ್ದರೂ ಅಲ್ಲಿ ನಿಂತಿರಲೇಬೇಕು. ಆ ದುರಿತ ಸನ್ನಿವೇಶಕ್ಕೆ ಸಾಕ್ಷಿಯಾಗಲೇಬೇಕು.
ಮತ್ತೆ ಮತ್ತೆ ಅವರಿಗೆ ‘ಐ ಲವ್ ಯೂ’, ‘ವೀ ಲವ್ ಯೂ’ ಎಂದು ಹೇಳುತ್ತಿರಲೇಬೇಕು. ‘ನಾವೆಲ್ಲೂ ಹೋಗುವುದಿಲ್ಲ. ಇಲ್ಲೇ ಒಟ್ಟಿಗೇ ಇರುತ್ತೇವೆ’ ಎಂದು ಭರವಸೆಯನ್ನು ತುಂಬುತ್ತಲೇ ಇರಬೇಕು.
ಕೋವಿಡ್ ಬಿಕ್ಕಟ್ಟು ಹಬ್ಬಿತು
ಕೋವಿಡ್ ಬಿಕ್ಕಟ್ಟು ವ್ಯಾಪಕವಾಗಿ ಹಬ್ಬುತ್ತಿದ್ದಂತೆಯೇ ನಾನು ಬೆಳಗಿನ ಜಾವವೇ ಏಳಲಾರಂಭಿಸಿದೆ. ನನ್ನ ಕಾದಂಬರಿ ರಚನೆಯನ್ನು ಮುಂದುವರಿಸಿದೆ.
ನನಗಿಂತಲೂ ಹೆಚ್ಚು ಸಂಕಟ ಅನುಭವಿಸಿದ 18ನೇ ಶತಮಾನದ ಮಹಿಳೆಯೊಬ್ಬಳ ಕುರಿತ ಕಾದಂಬರಿ ಅದು. ಗುಲಾಮಿ ಪದ್ಧತಿಯು ಅವಳ ತಾಯಿ ಮತ್ತು ಪ್ರಿಯಕರನನ್ನು ಅವಳಿಂದ ದೂರ ಮಾಡಿದ್ದ ದುರಂತ ಬದುಕು ಅವಳದು.
ಅವಳ ನಷ್ಟದ ಮುಂದೆ, ಪತಿಯನ್ನು ಕಳೆದುಕೊಂಡು ನಾನು ಪಟ್ಟಿದ್ದ ನಷ್ಟ ಅಷ್ಟು ದೊಡ್ಡದೇನಲ್ಲ. ಅವಳು ತನ್ನವರಿಗಾಗಿ ನದಿಗಳನ್ನು ಹಾದುಹೋಗುತ್ತಲೇ ಹೋರಾಟ ಮಾಡುವುದನ್ನು, ಆತ್ಮಗಳೊಂದಿಗೆ ನಿರಂತರ ವಾಗ್ವಾದಕ್ಕಿಳಿಯುವುದನ್ನು ಹೆಮ್ಮೆಯಿಂದಲೇ ಬರೆದೆ.
ಆಗೆಲ್ಲಾ ನನ್ನ ಬದ್ಧತೆಯು ನನಗೇ ಅಚ್ಚರಿ ತರುತ್ತಿತ್ತು. ಕೋವಿಡ್ ಸಂಕಷ್ಟ ಮತ್ತು ವೈಯಕ್ತಿಕ ದುಃಖದಲ್ಲೂ, ಕಾಲದ ಹರಿವಿನಲ್ಲಿ ನನಗಾಗಿ ಮಿಡಿದ ನನ್ನ ಜನಾಂಗದ ಹಿರಿಯರ ದನಿಗಳನ್ನು ತುಸು ಜೋರಾಗಿಯೇ ದಾಖಲಿಸಿದೆ. ಅಂಥ ದಿನಗಳಲ್ಲಿ ನಾನು ಕೇವಲ ಒಂದು ವಾಕ್ಯ ಬರೆಯಲಷ್ಟೇ ಸಾಧ್ಯವಾಗುತ್ತಿತ್ತು. ಇನ್ನೂ ಕೆಲವು ದಿನಗಳಲ್ಲಿ ನಾನು 1 ಸಾವಿರದಷ್ಟು ಪದಗಳನ್ನೂ ಬರೆದೆ. ಹಲವು ದಿನಗಳಲ್ಲಿ ‘ಇವೆಲ್ಲ ಬರೀ ವ್ಯರ್ಥ’ ಎನ್ನಿಸಿಬಿಟ್ಟಿತು.
ನನ್ನ 19ರ ಹರೆಯದ ಸಹೋದರನ ಸಾವಿನ ಬಳಿಕ ನನ್ನ ಸಂಕಟವು ಕೀಳರಿಮೆಯಾಗಿ ಬದಲಾಯಿತು. ಆಗ ಮೂಡಿದ ಏಕಾಕಿತನದಲ್ಲಿ ನನಗೆ ಕಾದಂಬರಿಯ ಬರೆಹದಲ್ಲಿ ಒಂದು ನಿಜವಾದ ಉದ್ದೇಶ ಹೊಳೆಯಿತು. ಸದಾ ತೆರೆದುಕೊಂಡೇ ಇರುವ ಆಕಾಶದ ಕಡೆಗೆ ನೋಡುತ್ತಾ ಎದೆ ತುಂಬಿ ಹಾಡತೊಡಗಿದೆ.
ನನ್ನಂತೆಯೇ ಇರುವ ಕೆಲವು ಹೆಂಗಸರಿಗೂ ಅದು ರಾತ್ರಿಯ ನೀರವತೆಯಲ್ಲಿ ಕೇಳಿಸಿತು. ಹಾಡಿಗೆ ಪ್ರತಿಯಾಗಿ ನನಗೆ ದಕ್ಕಿದ್ದಾದರೂ ಏನು? ನಕ್ಷತ್ರಗಳ ನಡುವಿನ ಖಾಲಿತನ. ಕತ್ತಲು ಮತ್ತು ಚಳಿ.
ಕಪ್ಪು ಜನರ ಎದೆಗೆ ಗುಂಡು
‘ನೀನು ನೋಡಿದ್ದೆಯಾ?’ ಎಂದು ನನ್ನ ಕಸಿನ್ ಕೇಳಿದಳು.
‘ಇಲ್ಲ, ಏನೂ ನೋಡಲು ಆಗಲಿಲ್ಲ’ ಎಂದೆ.
ದುಃಖದಲ್ಲಿ ಮುಳುಗಿದ್ದ ನನಗೆ ಅವಳ ಮಾತುಗಳು ಅಸ್ಪಷ್ಟವಾಗಿದ್ದವು.
‘ಅವನ ಮೊಣಕಾಲು, ಕತ್ತಿನ ಹಿಂಭಾಗ?’ ಅವಳು ಹೇಳಿದಳು.
‘ಅವನಿಗೆ ಉಸಿರಾಡಲು ಆಗುತ್ತಿರಲಿಲ್ಲ’ ಎಂದಳು.
’ಅವನ ಮಾಮಾನಿಗಾಗಿ ಅವನು ಅಳುತ್ತಿದ್ದ’ ಎಂದಳು.
‘ಅಹ್ಮೌದ್ ಮತ್ತು ಬ್ರಿಯೋನ್ನಾ ಬಗ್ಗೆ ನಾನು ಓದಿದ್ದೇನೆ’ ಎಂದೆ.
(ಇವರಿಬ್ಬರೂ ಕಪ್ಪು ಅಮೆರಿಕನ್ನರು. ಮಾರ್ಚ್ 13, 2020 ರಂದು ಕೆಂಟುಕಿಯ ಲೂಯಿಸ್ವಿಲ್ಲೆಯ ಅಪಾರ್ಟ್‌ಮೆಂಟ್‌ನಲ್ಲಿ 26 ವರ್ಷದ ಬ್ರಿಯೋನ್ನಾ ಟೇಲರ್‌ಳನ್ನು ಹಾಗೂ ಫೆಬ್ರುವರಿ 23ರಂದು ಜಾರ್ಜಿಯಾದ ಗ್ಲಿನ್ ಕೌಂಟಿಯ ಬ್ರುನ್‌ಸ್ವಿಕ್‌ನಲ್ಲಿ ಜಾಗಿಂಗ್ ಮಾಡುವಾಗ ಅಹ್ಮೌದ್ ಮಾರ್ಕ್ವೆಜ್ ಆರ್ಬೆರಿಯನ್ನು ಗುಂಡು ಹಾರಿಸಿ ಕೊಲ್ಲಲಾಯಿತು)
ಅದೇ ಇರಬೇಕು. ಆದರೆ ಖಚಿತವಾಗಿ ಹೇಳಲಾರೆ: ಅವರ ಪ್ರೀತಿಪಾತ್ರರ ನರಳಾಟ ಬಲ್ಲೆ. ಅವರ ಪ್ರೀತಿಪಾತ್ರರ ನರಳಾಟ ಬಲ್ಲೆ. ಕೊರೊನಾ ಸಂಕಷ್ಟ ಆವರಿಸಿದ್ದ ಅವರ ಕೊಠಡಿಗಳನ್ನು ಬಲ್ಲೆ. ಅವರ ಅಗಲಿಕೆಯಿಂದ ಆದ ನಷ್ಟಗಳು ಅವರ ಪ್ರೀತಿಪಾತ್ರರ ನಾಲಿಗೆಗಳನ್ನು ಆಸಿಡ್‌ನಂತೆ ಸುಟ್ಟಿದ್ದನ್ನು ಬಲ್ಲೆ. ಅವರ ಮನೆಮಂದಿ ಮಾತಾಡಬಹುದು. ನ್ಯಾಯಕ್ಕಾಗಿ ಕೇಳಬಹುದು. ಆದರೆ ಅವರಿಗೆ ಯಾರೊಬ್ಬರೂ ಉತ್ತರಿಸಲಾರರು.
ಈ ಕತೆ ನನಗೆ ಗೊತ್ತು; ಟ್ರವ್ಯಾನ್, ತಮೀರ್, ಸಾಂಡ್ರ.
(ಈ ಮೂವರು ಕೂಡ ದುರ್ಮರಣ ಕಂಡ ಕಪ್ಪು ಅಮೆರಿಕನ್ನರು. 2012ರ ಫೆಬ್ರುವರಿ 26ರಂದು ಸ್ಯಾನ್‌ಫೋರ್ಟ್‌ನಲ್ಲಿ 14ರ ಬಾಲಕ ಟ್ರವ್ಯಾನ್ ಮಾರ್ಟಿನ್ ಮೇಲೆ ಹಾಗೂಅಟಿಕೆಯ ಗನ್ ಹಿಡಿದುಕೊಂಡಿದ್ದ ಕಾರಣಕ್ಕೆ 2014ರ ನವೆಂಬರ್ 22ರಂದು ಕ್ಲೆವ್ಲ್ಯಾಂಡ್ ಪ್ರದೇಶದಲ್ಲಿ 12ರ ಬಾಲಕ ತಮೀರ್ ರೈಸ್ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. 23ರ ಯುವತಿ ಸಾಂಡ್ರ ಬ್ಲಾಂಡ್ ಟೆಕ್ಸಾಸ್‌ನ ಜೈಲಿನಲ್ಲಿ 2015ರ ಜುಲೈ 13ರಂದು ನೇಣು ಬಿಗಿದ ಸ್ಥಿತಿಯಲ್ಲಿಕಂಡುಬಂದಿದ್ದರು).
ಯಾಕೆಂದರೆ ಈ ಕತೆಗಳನ್ನು ನನಗೆ ಮೊದಲೇ ಹೇಳಿದ್ದೆ. ಬಹುಶಃ ನಾನು ಅದರ ಬಗ್ಗೆ ಬರೆದಿದ್ದೇನೆ.
ನಾನು ನೋವು ನುಂಗಿದೆ.
ಬಿಗಿ ಹಿಡಿದಮುಷ್ಠಿ ಎತ್ತಿದ ಜನ
ನನ್ನ ಕಸಿನ್ ಜೊತೆಗಿನ ಮಾತುಕತೆಯ ಬಳಿಕ ಬೀದಿಯಲ್ಲಿ ಎಂದಿಗಿಂತ ಹೆಚ್ಚು ಜನ ಕಾಣಿಸತೊಡಗಿದರು. ಮಿನ್ನಿಯಾಪೊಲಿಸ್ ನಗರ ಬೇಯತೊಡಗಿತು. ಅಮೆರಿಕಾದ ಮಧ್ಯಪಶ್ಚಿಮದ ನಗರಗಳಲ್ಲಿ ಪ್ರತಿಭಟನೆಗಳು ನಡೆಯತೊಡಗಿದವು. ಕಪ್ಪು ಜನರು ಹೆದ್ದಾರಿ ತಡೆ ಮಾಡಿದರು. ನ್ಯೂಜೆಲೆಂಡ್‌ನಲ್ಲಿ ಜನ ಹಾಕ (haka) ಸಮರನೃತ್ಯ ಮಾಡತೊಡಗಿದರು.
ಬ್ರಿಟಿಷ್–ನೈಜಿರಿಯನ್ ನಟ ಜಾನ್ ಬೊಯೋಗಾನಿಂದ ತರುಣ–ತರುಣಿಯರವರೆಗೆ ಎಲ್ಲರೂ ಲಂಡನ್‌ನಲ್ಲಿ ಪ್ರತಿಭಟನೆಯ ದ್ಯೋತಕವಾಗಿ ಬಿಗಿ ಹಿಡಿದಮುಷ್ಠಿಯನ್ನು ಮೇಲಕ್ಕೆತ್ತಿ ನಿಂತರು. ಅವಕಾಶಗಳು ಕೈತಪ್ಪಬಹುದೆಂಬ ಆತಂಕದ ನಡುವೆಯೂ ಬೊಯೋಗ ಮುಷ್ಠಿಯೆತ್ತಿ ನಿಂತಿದ್ದ. ಪ್ಯಾರಿಸ್‌ನಲ್ಲಿ ಸಾವಿರಾರು ಜನ ಮೆರವಣಿಗೆ ನಡೆಸುತ್ತಿದ್ದರು.
ನನಗೆ ಮಿಸಿಸಿಪ್ಪಿ ಗೊತ್ತಿತ್ತು. ತಟದಲ್ಲಿದ್ದ ಪ್ಲಾಂಟೇಶನ್‌ಗಳು ಗೊತ್ತಿದ್ದವು. ಅದರ ತುದಿಗಳಲ್ಲಿ ಗುಲಾಮಗಿರಿ ವಿರುದ್ಧ ಕಪ್ಪು ಅಮೆರಿಕನ್ನರು ನಡೆಸಿದ ಹೋರಾಟಗಳು ಗೊತ್ತಿದ್ದವು.
ನನ್ನೆದುರಿಗೆ ಜನ ಉದ್ದಕ್ಕೂ ನಡೆದು ಬಂದರು. ಅಂಥದ್ದೊಂದು ಬೃಹತ್ ಜನಸಾಗರವೊಂದು ಇರುತ್ತದೆಂದು ನನಗೆ ಅದುವರೆಗೂ ಗೊತ್ತಿರಲಿಲ್ಲ. ಜನ ದೊಡ್ಡ ಹೆಜ್ಜೆಗಳನ್ನಿಡುತ್ತಾ, ಆಕ್ರೋಶದಿಂದ ಕೂಗುತ್ತಾ, ಒಟ್ಟಿಗೇ ನಡೆದು ಬರುತ್ತಿದ್ದಂತೆ ನನ್ನ ಕಂಬನಿಗಳು ಕಣ್ಣುಗಳನ್ನು ಸುಡುತ್ತಿದ್ದವು. ನನ್ನ ಮುಖಕ್ಕೆ ಅವರು ಮೆರುಗನ್ನು ತಂದರು.
ಬೆಡ್‌ರೂಂನಲ್ಲಿ ಕುಳಿತ ನನಗೆ, ಎಂದಿಗೂ ಅಳುವುದನ್ನು ನಿಲ್ಲಿಸಲಾರೆನೇನೋ ಎನ್ನಿಸಿತು.
ಗುಲಾಮಗಿರಿಯ ವಿರುದ್ಧದ ಈ ಹೋರಾಟದಲ್ಲಿ ಕಪ್ಪು ಅಮೆರಿಕನ್ನರು ಏಕಾಕಿಗಳಲ್ಲ. ಇಡೀ ಜಗತ್ತೇ ಅವರ ಕಡೆಗೆ ನೋಡುತ್ತಿದೆ. ಎಲ್ಲರಂತೆ ಅವರ ಬದುಕೂ ಮುಖ್ಯವೇ ಎಂಬ ಪ್ರತಿಪಾದನೆಯ Black Lives Matter (ಜನಾಂಗೀಯ ತಾರತಮ್ಯದ ವಿರುದ್ಧ ಕಪ್ಪು ಅಮೆರಿಕನ್ನರು 2013ರ ಜುಲೈ 13ರಿಂದ ನಿರ್ಮಿಸಿಕೊಂಡಿರುವ ಜಾಗತಿಕ ಹೋರಾಟದ ಜಾಲ. ನನಗೆ ಉಸಿರಾಡಲು ಆಗುತ್ತಿಲ್ಲ: I can't breath ಎಂಬುದು ಅದರ ಘೋಷಣೆಗಳಲ್ಲೊಂದು) ಹೋರಾಟವು ನನ್ನ ಜೀವನದಲ್ಲಿ ನಾನು ಅನುಸರಿಸಿಕೊಂಡು ಬಂದಿದ್ದ ಸತ್ಯವೊಂದನ್ನು, ನಂಬಿಕೆಯೊಂದನ್ನು ಸ್ಫೋಟವಾಗುವಂತೆ ಮಾಡಿತು.
ಗರ್ಭ ಧರಿಸಿದ ಕೇವಲ ಆರು ತಿಂಗಳಿಗೆ ನನ್ನಮ್ಮ ಅತೀವ ಕಷ್ಟದಿಂದ ನನ್ನನ್ನು ಹೆತ್ತ ಘಳಿಗೆಯಲ್ಲಿ ಮೊದಲ ಉಸಿರಾಟದ ಬಳಿಕ ಮೂಡಿದ ಎದೆಬಡಿತದಂತೆ ನನ್ನ ಎದೆ ಮತ್ತೊಮ್ಮೆ ಬಡಿದುಕೊಂಡಂತಾಯಿತು.
ನನ್ನ ಕಪ್ಪು ವರ್ಣದ ತಾಯಿಗೆ, ‘ನಿಮ್ಮ ಮಗು ಉಳಿಯುವುದಿಲ್ಲ’ ಎಂದು ವೈದ್ಯರು ಹೇಳಿದ ಬಳಿಕ ಏಕಾಏಕಿ ಮೂಡಿದ್ದ ಎದೆಬಡಿತ ಅದು.
ನಾನು ಓದಿದ, ಅನುದಾನದ ಕೊರತೆಯಿಂದ ಬಡಕಲಾಗಿದ್ದ ಪಬ್ಲಿಕ್ ಶಾಲೆಗಳ ಕೊಠಡಿಗಳು, ಅಲ್ಲಿ ಕೊಡುತ್ತಿದ್ದ ಅಪೌಷ್ಠಿಕವಾದ ತಿನಿಸುಗಳ ಮೂಲಕವೇ ಆ ನಂಬಿಕೆಯು ನನ್ನ ಬಿಸಿರಕ್ತದೊಳಗೆ ಸೇರಿಕೊಂಡಿದ್ದು ಅದೇ ಎದೆಬಡಿತ.
ಕೆಲವು ಬಿಳಿಯರು ಮತ್ತು ಅವರ ಏಜೆಂಟರು ಹೇಗೆ ನನ್ನ ಮುತ್ತಾತನನ್ನು ಗುಂಡು ಹೊಡೆದು ಕೊಂದರು ಎಂಬ ಕತೆ ಕೇಳಿದ ಕ್ಷಣ, ಕಾಡಿನಲ್ಲಿ ಒಂದು ಅನಾಥ ಪ್ರಾಣಿಯಂತೆ ಆತ ರಕ್ತಸೋರಿ ಸತ್ತ ಬಗೆ, ಮತ್ತು ಅದಕ್ಕೆ ಅವರಲ್ಲಿ ಯಾರೂ ಹೊಣೆಗಾರರಾಗಲಿಲ್ಲ ಎಂಬ ಕಟುಸತ್ಯದ ಅರಿವಾದಾಗ ಮೂಡಿದ ಎದೆಬಡಿತ.
ಕುಡಿದ ಅಮಲಿನಲ್ಲಿ ಬಿಳಿಯ ಚಾಲಕ ನನ್ನ ಅಣ್ಣನ ಮೇಲೆ ಟ್ರಕ್ ಹರಿಸಿ ಕೊಂದಿದ್ದ. ಆದರೆ ಆತನಿಗೆ ಯಾವ ಶಿಕ್ಷೆಯೂ ಆಗುವುದಿಲ್ಲ ಎಂಬುದು ಗೊತ್ತಾದಾಗ ಮೂಡಿದ ಎದೆಬಡಿತ. ಅಲ್ಲಿ ಉಳಿದಿದ್ದು ಅಪಘಾತವೆಂಬ ಅಪರಾಧ. ಆದರೆ ಅದು ಶಿಕ್ಷೆಯೇ ಇಲ್ಲದ ಸನ್ನಿವೇಶ.
‘ಕಪ್ಪು ವರ್ಣೀಯರಿಗೆ ಒಂದು ಕತ್ತೆ ಅಥವಾ ಕುದರೆಯಷ್ಟೇ ಬೆಲೆ’ ಎಂಬ ನಂಬಿಕೆಯನ್ನು ಎಳೆ ಮನಸ್ಸುಗಳ ಮೇಲೆ ಅಮೆರಿಕಾ ಶತಮಾನಗಳ ಕಾಲ ಹೇರುತ್ತಾ ಬಂದಿದೆ. ಇದು ನನಗೂ ಗೊತ್ತು. ನನ್ನ ಜನರಿಗೂ ಗೊತ್ತು. ಅದರ ವಿರುದ್ಧ ನಾವು ಹೋರಾಟವನ್ನೂ ಮಾಡಿದ್ದೇವೆ.
ಇದನ್ನು ಏಕಾಂಗಿಯಾಗಿಯೇ ಮಾಡಬೇಕಾಗಿದೆ ಎಂಬ ಅನಿವಾರ್ಯತೆಯೂ ನಮಗಿದೆ. ಕೊನೆಯ ಉಸಿರಿರುವವರೆಗೂ ನಮ್ಮ ಮಕ್ಕಳು, ಅವರ ಮಕ್ಕಳು, ಅವರ ಮಕ್ಕಳು ಎಲ್ಲರೂ ನೇಣು ಕುಣಿಕೆ, ಹಸಿವು, ಅತ್ಯಾಚಾರ, ಗುಲಾಮಗಿರಿ, ಕೊಲೆಯ ವಿರುದ್ಧ ಹೋರಾಟ ಮಾಡುತ್ತಲೇ ಇರಬೇಕು. ಎಲ್ಲರ ಮೂಳೆಗಳು ಸವೆಯುತ್ತಿವೆ. ಗೋರಿಗಳು ಮಿತಿಮೀರಿವೆ.
ಹೋರಾಟ ಮಾಡುತ್ತಲೇ ಅವರು ಹೇಳುತ್ತಲೇ ಇರುತ್ತಾರೆ: ಉಸಿರಾಡಲು ಆಗುತ್ತಿಲ್ಲ. ಉಸಿರಾಡಲು ಆಗುತ್ತಿಲ್ಲ....
ಜಗತ್ತಿನೆಲ್ಲೆಡೆ ಪ್ರತಿಭಟನೆಗಳು ನಡೆಯುವುದನ್ನು ನೋಡಿದಾಗಲೆಲ್ಲಾ ನಾನು ರೋದಿಸುತ್ತೇನೆ. ಏಕೆಂದರೆ ಅಲ್ಲಿ ನನ್ನ ಜನರೇ ಕಾಣಿಸುತ್ತಾರೆ. ಅವರ ಹೋರಾಟದ ಜಾಕೆಟ್‌ಗಳು, ಬಿಸಿಯುಸಿರು, ಕ್ರೋಧ ತುಂಬಿಕೊಂಡು ಮೇಲೆದ್ದ ಬಿಗಿಮುಷ್ಠಿಗಳು, ಗಟ್ಟಿ ಹೆಜ್ಜೆಗಳು, ಘೋಷಣೆಗಳು. ಅವರು ಯಾತಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂಬುದೂ ಅರ್ಥವಾಗುತ್ತದೆ.
ಸಾಕ್ಷಿ. ಹೌದು, ಅವರು ಅನ್ಯಾಯಕ್ಕೆ ಸಾಕ್ಷಿಯಾಗಿರುವ ಜೀವಿಗಳು.
ಈಗಲೂ ಅನ್ಯಾಯದ ವಿರುದ್ಧ ಪ್ರತಿ ದಿನ, ಪ್ರತಿ ಕ್ಷಣ ಅವರು ಸಾಕ್ಷಿಯೇ. 400 ವರ್ಷಗಳಿಂದಲೂ ಅಮೆರಿಕಾದಲ್ಲಿ ನಡೆದಿರುವ ಕ್ರೂರ ಶೋಷಣೆ, ಅನ್ಯಾಯಕ್ಕೆ ಸಾಕ್ಷಿ.
ಗುಲಾಮಗಿರಿಯನ್ನು ನಿಷೇಧಿಸಿ 2013ರಲ್ಲಿ ಅಮೆರಿಕಾದ ಸಂವಿಧಾನಕ್ಕೆ ತಂದ 13ನೇ ತಿದ್ದುಪಡಿಯು ಜಾರಿಗೆ ಬರಬೇಕು ಎಂದು ಕಾಯುತ್ತಲೇ ಇರುವ ನನ್ನ ರಾಜ್ಯ ಮಿಸಿಸಿಪ್ಪಿಯ ಸಾಕ್ಷಿ.
2020ರವರೆಗೂ ರಾಜ್ಯದ ಬಾವುಟದಲ್ಲಿ ಪ್ರತಿಭಟನೆಯ ಸಂಕೇತವನ್ನು ತೆಗೆಯುವುದಿಲ್ಲ ಎಂಬ ಪ್ರತಿಜ್ಞೆಯ ಸಾಕ್ಷಿ.
ಕಪ್ಪು ಜನ, ಮೂಲ ನಿವಾಸಿಗಳು, ಕಂದು ಬಣ್ಣದ ಬಡಜನ. ಕೋವಿಡ್ ಸೋಂಕಿಗೆ ಒಳಗಾಗಿ ಕೆಟ್ಟ ಆಸ್ಪತ್ರೆಗಳಿಗೆ ದಾಖಲಾಗಿ ಉಸಿರಾಡಲೂ ಕಷ್ಟಪಡುತ್ತಿರುವ ಜನ, ಸರಿಯಾದ ಚಿಕಿತ್ಸೆ ಸಿಗದೇ ಅಸಹಾಯಕರಾಗಿ ಅಂಗಾತ ಮಲಗಿದ ಜನ. ಅವರೆಲ್ಲ ಇದಕ್ಕಿಂತಲೂ ಮುಂಚೆ ಬಡತನ, ಅಪೌಷ್ಠಿಕತೆ ಮತ್ತು ಒತ್ತಡದಲ್ಲಿ ಬಳಲಿದ್ದ ಜನ.
ಚೂರು ಸಿಹಿತಿಂಡಿಯನ್ನು ಕದಿಯುತ್ತಲೇ ಬದುಕಿ, ನಾಲಿಗೆಗೆ ಸಿಹಿಯ ರುಚಿ ತೋರಿಸುವ ಜನ. ಏಕೆಂದರೆ, ಓ ದೇವರೆ, ನಮ್ಮ ಬದುಕು ಎಷ್ಟೊಂದು ಕಹಿಯಾಗಿದೆ!
ಅದೇ ಜನ ನಮ್ಮ ಹೋರಾಟಕ್ಕೂ ಸಾಕ್ಷಿಯಾಗಿದ್ದಾರೆ. ನಮ್ಮ ಬಿರುಸಿನ ನಡಿಗೆ, ನಮ್ಮ ಕಲೆ, ಸಂಗೀತ, ಕೆಲಸ ಮತ್ತು ಸಂಭ್ರಮಗಳಲ್ಲಿ ಮತ್ತೆ ನಮ್ಮ ಎದೆಬಡಿತ ಹೆಚ್ಚಾಗುತ್ತದೆ. ನಮ್ಮ ಹೋರಾಟದ ವಿಶೇಷವೆಂದರೆ ಎಲ್ಲೋ ಇರುವವರು ಕೂಡ ಜೊತೆಯಾಗುತ್ತಾರೆ. ಕೈ ಜೋಡಿಸುತ್ತಾರೆ. ಕೋವಿಡ್ ಸಂಕಷ್ಟದ ನಡುವೆಯೂ ಪ್ರತಿಭಟನೆಗಳು ಮುಂದುವರಿಯುತ್ತವೆ.
ನಾನು ಕೂಗಿ ಹೇಳುತ್ತೇನೆ. ನೋಡುತ್ತಿರಿ, ಬೀದಿಗಳಲ್ಲಿ ಜನಸಾಗರ ನೆರೆಯುತ್ತದೆ.
ನನ್ನ ಗಂಡ ಸತ್ತಾಗ ವೈದ್ಯರು ಹೇಳಿದ್ದರು; ಸಾಯುವ ಕೊನೇ ಘಳಿಗೆಗಳಲ್ಲಿ ಕಿವಿ ಕೇಳಿಸದಂತಾಗುತ್ತದೆ. ಸಾಯುವವರು ಕಣ್ಣು, ಮೂಗು, ನಾಲಿಗೆ, ಚರ್ಮದ ಸಂವೇದನೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ತಾವು ಯಾರೆಂಬುದೂ ಮರೆತುಹೋಗುತ್ತದೆ. ಆದರೆ ಕೊನೇ ಘಳಿಗೆಗಳಲ್ಲಿ ನಿಮ್ಮ ಮಾತುಗಳಷ್ಟೇ ಅವರಿಗೆ ಕೇಳಿಸುತ್ತವೆ.
ನನಗೆ ಕೇಳಿಸುತ್ತಿದೆ ಹೇಳು
ನನಗೆ ಕೇಳಿಸುತ್ತಿದೆ ಹೇಳು
ನೀನು ಹೇಳುವೆ:
ಐ ಲವ್ ಯೂ
ವಿ ಲವ್ ಯೂ
ನಾವೆಲ್ಲೂ ಹೋಗುವುದಿಲ್ಲ.
ನೀನು ಹೇಳು, ನಾನು ಕೇಳಿಸಿಕೊಳ್ಳುತ್ತೇನೆ;
ನಾವಿಲ್ಲೇ ಇದ್ದೇವೆ.
(vanityfair.com ನಲ್ಲಿ ಲೇಖಕಿ JESMYN WARD ಅವರ ON WITNESS AND RESPAIR: A PERSONAL TRAGEDY FOLLOWED BY PANDEMIC ಲೇಖನದ ಅನುವಾದ.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.