ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕರ್ನಾಟಕ ಕ್ರಿಕೆಟ್‌ಗೆ ‘ನಾಕೌಟ್’ ಗುಮ್ಮ

ದೇಶಿ ಕ್ರಿಕೆಟ್‌: ಅಂತಿಮ ಹಂತದಲ್ಲಿ ಎಡವುತ್ತಿರುವ ರಾಜ್ಯ ತಂಡದ ಸಮಸ್ಯೆಗಿಲ್ಲವೇ ಪರಿಹಾರ?
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‌‌ಇನ್ನು ಹದಿನೈದು ದಿನಗಳ ನಂತರ ರಣಜಿ ಟ್ರೋಫಿ ಕ್ರಿಕೆಟ್ ಋತು ಆರಂಭವಾಗಲಿದೆ. ಹೊಸ ವರ್ಷದಲ್ಲಿ ಕರ್ನಾಟಕ ತಂಡ ತನ್ನ ಅಭಿಮಾನಿಗಳಿಗೆ ಪ್ರಶಸ್ತಿ ಗೆಲುವಿನ ಸಿಹಿ ಹಂಚುವುದೇ ಎಂಬ ಕುತೂಹಲ ಗರಿಗೆದರಿದೆ. ಒಂದೊಮ್ಮೆ ರಾಜ್ಯ ತಂಡವು ಈ ಸಾಧನೆ ಮಾಡಿದರೆ ಅತ್ಯಂತ ಅರ್ಥಪೂರ್ಣವಾಗುವುದರಲ್ಲಿ ಸಂದೇಹವಿಲ್ಲ.

ಏಕೆಂದರೆ, ಕರ್ನಾಟಕ ತಂಡವು ಮೊದಲ ರಣಜಿ ಟ್ರೋಫಿ ಜಯಿಸಿದ ಸಾಧನೆಗೆ ಮುಂದಿನ ವರ್ಷದ ಮಾರ್ಚ್‌ನಲ್ಲಿ 50 ವರ್ಷ ತುಂಬಲಿದೆ. ಅದೇ ತಿಂಗಳು ಈ ಬಾರಿಯ ರಣಜಿ ಫೈನಲ್ ಕೂಡ ನಡೆಯಲಿದೆ. ಆದ್ದರಿಂದ ಈಗಿರುವ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಇದಕ್ಕಿಂತ ದೊಡ್ಡ ಪ್ರೇರಣೆ ಮತ್ತೊಂದಿಲ್ಲ. ಆದರೆ ಎಂಟು ವರ್ಷಗಳಿಂದ ಆಡಿರುವ ಏಳು ರಣಜಿ ಟ್ರೋಫಿ ಟೂರ್ನಿಗಳಲ್ಲಿ ಪ್ರಶಸ್ತಿ ಸನಿಹ ಬಂದು ಎಡವಿರುವ ತಂಡದ ಆಟವನ್ನು ನೋಡಿದವರಿಗೆ ಸಣ್ಣ ಆತಂಕವೂ ಇದೆ. ‘ಈ ಸಲವೂ ಕ್ವಾರ್ಟರೋ... ಸೆಮಿನಲ್ಲೋ ಮುಗ್ಗರಿಸ್ತಾರೆ ಬಿಡಿ...’ ಎಂಬ ಮಾತುಗಳೂ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. 

ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ (ಏಕದಿನ) ಟೂರ್ನಿಯಲ್ಲಿಯೂ ಸೆಮಿಫೈನಲ್‌ನಲ್ಲಿಯೇ ಮಯಂಕ್ ಅಗರವಾಲ್ ನಾಯಕತ್ವದ ಬಳಗವು ಸೋತಿತು. ಈ ಪಂದ್ಯದಲ್ಲಿ ಬೌಲರ್‌ಗಳು ರಾಜಸ್ಥಾನದ ದೀಪಕ್ ಹೂಡಾ ಅವರ ಆರ್ಭಟಕ್ಕೆ ತಡೆಯೊಡ್ಡುವಲ್ಲಿ ವಿಫಲರಾದರು. ಹಾಗೆ ನೋಡಿದರೆ, ಟೂರ್ನಿಯುದ್ದಕ್ಕೂ ಪಂದ್ಯಗಳ ಗೆಲುವಿಗೆ ಹೆಚ್ಚಿನ ಕಾಣಿಕೆ ಕೊಟ್ಟವರು ಬೌಲರ್‌ಗಳೇ. ನಾಲ್ಕರ ಘಟ್ಟದಲ್ಲಿಯೂ ಅವರ ಮೇಲೆಯೇ ಹೆಚ್ಚು ನಿರೀಕ್ಷೆ ಇತ್ತು. ಈ ಬಾರಿಯ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ತಂಡ ಮುಗ್ಗರಿಸಿತ್ತು.

ಈ ದೇಶಿ ಋತುವಿನಲ್ಲಿ ಕರ್ನಾಟಕಕ್ಕೆ ಸಂಭ್ರಮಿಸಲು ಅವಕಾಶ ಉಳಿದಿರುವುದು ಮುಂಬರುವ ರಣಜಿ ಟೂರ್ನಿಯಲ್ಲಿ ಮಾತ್ರ. ಆದ್ದರಿಂದ ಹಿಂದಿನ ಎಲ್ಲ ಲೋಪಗಳನ್ನೂ ಸರಿಪಡಿಸಿಕೊಂಡು ಕಿರೀಟ ಧರಿಸುವತ್ತ ಚಿತ್ತ ಹರಿಸಬೇಕಿದೆ. ತಂಡವು 2015ರಿಂದ ಈಚೆಗೆ ನಾಲ್ಕು ಬಾರಿ ಸೆಮಿಫೈನಲ್‌ನಲ್ಲಿ ಮತ್ತು ಎರಡು ಸಲ ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದೆ. ಒಂದು ಬಾರಿ ಗುಂಪು ಹಂತದಲ್ಲಿಯೇ ನಿರ್ಗಮಿಸಿತ್ತು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಾಕೌಟ್ ಹಂತದಲ್ಲಿ ಸೋಲುವ ಮುನ್ನ ಆಡಿದ ಎಲ್ಲ ಪಂದ್ಯಗಳಲ್ಲೂ ರಾಜ್ಯದ ಆಟಗಾರರ ಸಾಧನೆ ಉತ್ತಮ ಆಗಿತ್ತು. 2015ರಿಂದ 2023ರವರೆಗೂ ಆಡಿದ 58 ಪಂದ್ಯಗಳಲ್ಲಿ 28ರಲ್ಲಿ ಜಯಿಸಿದೆ. ಸೋತಿದ್ದು ಹತ್ತರಲ್ಲಿ ಮಾತ್ರ. ಉಳಿದ ಪಂದ್ಯಗಳು ಡ್ರಾ ಆಗಿವೆ.

ನಾಕೌಟ್ ಹಂತಕ್ಕೆ ತಲುಪುವ ಸಾಮರ್ಥ್ಯವಿರುವ ತಂಡಕ್ಕೆ ಆ ಸವಾಲನ್ನು ಮೀರಿ ನಿಲ್ಲಲು ಏಕೆ ಸಾಧ್ಯ ಆಗುತ್ತಿಲ್ಲ? ಈ ಹಂತದಲ್ಲಿ ಅನುಸರಿಸಬೇಕಾದ ವಿಭಿನ್ನ ತಂತ್ರಗಾರಿಕೆಯನ್ನು ಹೆಣೆಯುವಲ್ಲಿ ತರಬೇತಿ ಸಿಬ್ಬಂದಿ ಎಡವುತ್ತಿದೆಯೇ? ಸಿದ್ಧಗೊಂಡ ಯೋಜನೆಯನ್ನು ಜಾರಿಗೆ ತರುವಲ್ಲಿ ನಾಯಕ ಮತ್ತು ಆಟಗಾರರು ಯಶಸ್ವಿಯಾಗುತ್ತಿಲ್ಲವೇ? ತಂಡದಲ್ಲಿ ಸಮನ್ವಯತೆಯ ಕೊರತೆ ಇದೆಯೇ? ಆಯ್ಕೆ ಪ್ರಕ್ರಿಯೆ ಮತ್ತು ಪ್ರತಿಭಾಶೋಧದಲ್ಲಿ ಲೋಪಗಳಿವೆಯೇ? ಒಂದೇ ತರಹದ ಲೋಪ ಮರುಕಳಿಸುತ್ತಿರುವುದರ ಹಿಂದೆ ಮಾನಸಿಕ ದೃಢತೆಯ ಕೊರತೆ ಇದೆಯೇ? ಈ ಸಮಸ್ಯೆಗಳನ್ನು ಮೀರಿ ನಿಲ್ಲುವಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚಿಂತಕರ ಚಾವಡಿ ಏನು ಕ್ರಮಗಳನ್ನು ಕೈಗೊಂಡಿದೆ ಎಂಬ ಪ್ರಶ್ನೆಗಳು ಮೂಡುತ್ತವೆ.

‘ಕ್ರಿಕೆಟ್ ಆಟವೇ ಹಾಗೆ. ಚೆನ್ನಾಗಿ ಆಡುವುದರ ಜೊತೆಗೆ ಅದೃಷ್ಟವೂ ಇರಬೇಕು. ಎಲ್ಲ ರೀತಿಯಿಂದಲೂ ತಂಡ ಚೆನ್ನಾಗಿದೆ. ಯಾವುದೇ ಕೊರತೆ ಇಲ್ಲ. ಸೋಲುಗಳ ಹಿಂದಿನ ಕಾರಣಗಳನ್ನು ಸರಿಪಡಿಸಲು ಆಯ್ಕೆ ಸಮಿತಿ ಕ್ರಮ ಕೈಗೊಳ್ಳಲಿದೆ. ಅದಕ್ಕೆ ಬೇಕಾದ ಪರಿಣತರು ಇದ್ದಾರೆ. ಅಂತಿಮವಾಗಿ ಇದು ಕ್ರಿಕೆಟ್‌. ಪಂದ್ಯದ ಕೊನೆಯವರೆಗೂ ಏನೂ ಹೇಳಲಾಗದು. ನಮಗಿಂತಲೂ ಚೆನ್ನಾಗಿ ಆಡಿದವರು ಗೆಲ್ಲುತ್ತಾರೆ. ಬೇರೆ ಯಾವುದೇ ತೊಂದರೆ ಇಲ್ಲ’ ಎಂದು ಎಲ್ಲ ಪ್ರಶ್ನೆಗಳಿಗೂ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ತೆರೆ ಎಳೆಯುತ್ತಾರೆ.

ತಂಡದಲ್ಲಿ ಪ್ರತಿಭಾವಂತರು ಇದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಲಕಾಲಕ್ಕೆ ಕೆಲವು ಪ್ರಯೋಗಗಳು ನಡೆದಿರುವುದೂ ಹೌದು. ಆದರೆ ನಿರೀಕ್ಷಿತ ಫಲಿತಾಂಶ ಮಾತ್ರ ದೊರೆತಿಲ್ಲವೆಂಬುದೂ ಸತ್ಯ.

2015ರಿಂದ ಈಚೆಗೆ ತಂಡವು ನಾಯಕತ್ವದಲ್ಲಿ ಬದಲಾವಣೆ ಕಂಡಿದೆ. ವಿನಯ್ ನಂತರ ಕೆಲಕಾಲ ಕರುಣ್ ನಾಯರ್, ಆರ್. ಸಮರ್ಥ್ ನಾಯಕರಾಗಿದ್ದರು. ನಂತರ ಮನೀಷ್ ಪಾಂಡೆ ಒಂದೆರಡು ಋತು ಮತ್ತು ಎರಡು ವರ್ಷಗಳಿಂದ ಮಯಂಕ್ ಅಗರವಾಲ್ ನಾಯಕರಾಗಿದ್ದಾರೆ. ತರಬೇತುದಾರರು ಮತ್ತು ನೆರವು ಸಿಬ್ಬಂದಿಯು ಎರಡು ಸಲ ಬದಲಾಗಿದ್ದಾರೆ.
ಕೆ.ಎಲ್. ರಾಹುಲ್ ಹಾಗೂ ಪ್ರಸಿದ್ಧಕೃಷ್ಣ ಅವರು ಭಾರತ ತಂಡದಲ್ಲಿ ಆಡುತ್ತಿರುವುದರಿಂದ ಇಲ್ಲಿ ಕೆಲವು ಯುವ ಆಟಗಾರರಿಗೆ ಅವಕಾಶಗಳೂ ಸಿಗುತ್ತಿವೆ.

ಕರ್ನಾಟಕದಲ್ಲಿ ಮೊದಲಿನಿಂದಲೂ ಇರುವ ವೇಗಿಗಳ ಪರಂಪರೆಯನ್ನು ವಿದ್ವತ್, ವೈಶಾಖ ವಿಜಯಕುಮಾರ್ ಮತ್ತು ವಿ. ಕೌಶಿಕ್ ಅವರು ಮುಂದುವರಿಸಿದ್ದಾರೆನ್ನುವುದು ಸಮಾಧಾನಕರ. ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡಗಣೇಶ್, ಡೇವಿಡ್ ಜಾನ್ಸನ್, ವಿನಯಕುಮಾರ್, ಅಭಿಮನ್ಯು ಮಿಥುನ್, ಶ್ರೀನಾಥ್ ಅರವಿಂದ್  ತೋರಿಸಿಕೊಟ್ಟ ಹಾದಿಯಲ್ಲಿ ಈಗಿನ ಮೂವರೂ ಇದ್ದಾರೆ. 

ಆದರೆ, ರಾಜ್ಯದ ಪ್ರಮುಖ ‘ಬ್ರ್ಯಾಂಡ್‌’ ಆಗಿರುವ ಸ್ಪಿನ್ ವಿಭಾಗದಲ್ಲಿ ಮಾತ್ರ ಗಟ್ಟಿತನ ಕಂಡುಬರುತ್ತಿಲ್ಲ. ಬಿ.ಎಸ್. ಚಂದ್ರಶೇಖರ್, ಪ್ರಸನ್ನ, ರಘುರಾಮ್ ಭಟ್, ಸುನಿಲ್ ಜೋಶಿ, ಬಿ. ವಿಜಯಕೃಷ್ಣ, ಆನಂದ್ ಕಟ್ಟಿ ಮತ್ತು ಆರ್. ಅನಂತ್ ಅವರಂತಹ ಪಂದ್ಯ ಗೆಲ್ಲಿಸಿಕೊಡಬಲ್ಲ ಸ್ಪಿನ್ನರ್‌ಗಳ ಕೊರತೆ ಎದ್ದುಕಾಣುತ್ತಿದೆ.

ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಈಗ ಕರ್ನಾಟಕ ತೊರೆದಿದ್ದಾರೆ. ಕೆ. ಗೌತಮ್ ಆಲ್‌ರೌಂಡ್ ಆಟಗಾರನಾಗುವ ಒತ್ತಡದಲ್ಲಿ ತಮ್ಮ ಆಫ್‌ಸ್ಪಿನ್ ಅಸ್ತ್ರಗಳಿಗೆ ಸಾಣೆ ಹಿಡಿಯುತ್ತಿಲ್ಲವೆಂಬ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಹೊಸ ಸ್ಪಿನ್ ಬೌಲರ್‌ಗಳಿಗೆ ಅನುಭವದ ಕೊರತೆ ಇದೆ. ಬ್ಯಾಟಿಂಗ್‌ ವಿಭಾಗದಲ್ಲಿಯೂ ಸ್ಥಿರತೆಯ ಕೊರತೆ ಇದೆ. ಆರಂಭಿಕ ಪಂದ್ಯಗಳಲ್ಲಿ ಮಿಂಚುವ ಅನುಭವಿಗಳು ನಾಕೌಟ್ ಹಂತದಲ್ಲಿ ಎಡವುತ್ತಿದ್ದಾರೆ. ನಿಕಿನ್ ಜೋಸ್, ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಬೇಕಿದೆ. ವಿಕೆಟ್‌ಕೀಪಿಂಗ್‌ನಲ್ಲಿಯೂ ಕೊರಗು ನೀಗಿಲ್ಲ. 

ವಿನಯ್ ನಾಯಕತ್ವದಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ತಂಡದಲ್ಲಿದ್ದ ಕೆಲವು ಆಟಗಾರರು ಈಗಲೂ ಇದ್ದಾರೆ. ಅವರ ಅನುಭವ ಇಲ್ಲಿ ಅಮೂಲ್ಯ. ತಮ್ಮ ಮುಂದಿನ ಪೀಳಿಗೆಗೆ ಮಾದರಿಯನ್ನು ಹಾಕಿಕೊಟ್ಟು ಹೋಗುವ ಹೊಣೆ ಅವರ ಮೇಲಿದೆ. ನಾಕೌಟ್ ಹಂತದಲ್ಲಿ ಗೆದ್ದ ಅನುಭವವನ್ನು ಇಲ್ಲಿ ಧಾರೆಯೆರೆಯುವ ಕಾರ್ಯ ಅವರಿಂದ ಆಗಬೇಕಿದೆ. 

ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫ್ರ್ಯಾಂಚೈಸಿಗಳ ಗಮನ ಸೆಳೆದು ಕೋಟಿ ಕೋಟಿ ಹಣ ಗಳಿಸುವುದು ಇಂದಿನ ಯುವ ಕ್ರಿಕೆಟಿಗರ ಮುಂದಿರುವ ಪ್ರಮುಖ ಗುರಿಗಳು. ಅದರಲ್ಲಿ ಐಪಿಎಲ್ ಆಕರ್ಷಣೆ ಒಂದು ಹೆಜ್ಜೆ ಮುಂದಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಗುರಿ ಸಾಧನೆಗಾಗಿ ಹಲವಾರು ಯುವ
ಪ್ರತಿಭೆಗಳು ಶಕ್ತಿಮೀರಿ ಶ್ರಮಿಸುತ್ತಿವೆ. ಆದ್ದರಿಂದ ಸ್ಪರ್ಧೆ ಮುಗಿಲುಮುಟ್ಟಿದೆ. ಇಂತಹ ಕಠಿಣ ಪೈಪೋಟಿಯನ್ನು ಮೀರಿ ನಿಲ್ಲಲು ಕರ್ನಾಟಕದ ಕ್ರಿಕೆಟ್‌ಗೆ ಭವ್ಯ ಇತಿಹಾಸದ ಬಲವೂ ಇದೆ. ಭವಿಷ್ಯದಲ್ಲಿ ದೊಡ್ಡ ಕ್ರಿಕೆಟ್ ಶಕ್ತಿಯಾಗಿ ಬೆಳೆಯುವ ಅವಕಾಶವೂ ಇದೆ.

ಅದಕ್ಕಾಗಿ ದೇಶಿ ಕ್ರಿಕೆಟ್‌ ಟೂರ್ನಿಗಳನ್ನು ಏಣಿಯಾಗಿ ಬಳಸಿಕೊಳ್ಳುವ ಜಾಣ್ಮೆ ತೋರಬೇಕು. ತಮ್ಮ ರಾಜ್ಯ ತಂಡಕ್ಕೆ ಪ್ರಶಸ್ತಿ ಕಾಣಿಕೆ ನೀಡಿದಾಗಲೇ ಎಲ್ಲರ ಗಮನ ಸೆಳೆಯಲು ಸಾಧ್ಯವಾಗುತ್ತದೆಂಬುದನ್ನು ಅರಿಯಬೇಕು. ಸೌರಾಷ್ಟ್ರದ ಜಯದೇವ್ ಉನದ್ಕತ್ ಅವರು 12 ವರ್ಷಗಳ ನಂತರ ಭಾರತ ತಂಡಕ್ಕೆ ಮರಳಲು ಸಾಧ್ಯವಾಗಿದ್ದು ದೇಶಿ ಕ್ರಿಕೆಟ್ ಸಾಧನೆಯಿಂದಲೇ ಅಲ್ಲವೆ?

ಅಷ್ಟೇ ಅಲ್ಲ, ಕನ್ನಡ ನಾಡಿನಿಂದ ವಿಶ್ವದರ್ಜೆಯ ಕ್ರಿಕೆಟಿಗರಾಗಿ ಬೆಳೆದ ಬಹುತೇಕ ಎಲ್ಲರಿಗೂ ಮೂಲನೆಲೆಯಾಗಿದ್ದು ದೇಶಿ ಕ್ರಿಕೆಟ್‌ನ ಯಶಸ್ಸು ಎನ್ನುವ ಅರಿವು ಈಗಿನ ಪೀಳಿಗೆಗೆ ಮುಟ್ಟಿಸುವ ಕಾರ್ಯವಾದರೆ ಚಿತ್ರಣ ಬದಲಾಗುವುದರಲ್ಲಿ ಸಂದೇಹವಿಲ್ಲ.

Vinay Kumar R former Karnataka Cricket captain speaking at a press conference to announce he play Pondicherry state cricket team at KSCA in Bengaluru on Monday. Photo by S K Dinesh
Vinay Kumar R former Karnataka Cricket captain speaking at a press conference to announce he play Pondicherry state cricket team at KSCA in Bengaluru on Monday. Photo by S K Dinesh
Former Indian cricketer EAS Prasanna bowls as young cricketers watches during the inuagration of the EASP Spin Camp at Cathedral school in Bangalore on WEdnesday. Photo Srikanta Sharma R.
Legndary EAS Prasanna during the launch of his spin academy at a school in Bengaluru in 2009. DH Photo/ Srikanta Sharma R
Former Indian cricketer EAS Prasanna bowls as young cricketers watches during the inuagration of the EASP Spin Camp at Cathedral school in Bangalore on WEdnesday. Photo Srikanta Sharma R. Legndary EAS Prasanna during the launch of his spin academy at a school in Bengaluru in 2009. DH Photo/ Srikanta Sharma R
Indian cricket team head coach Rahul Dravid during a press conference ahead of the Asia Cup 2023 in Bengaluru on Tuesday. DH Photo/ B H Shivakumar
Indian cricket team head coach Rahul Dravid during a press conference ahead of the Asia Cup 2023 in Bengaluru on Tuesday. DH Photo/ B H Shivakumar
Anil Kumble Indian Cricketer participated in film 800 official trailer press meet at Shangri la Hotel in Bengaluru on Sunday 01st October 2023. DH Photo/ S K Dinesh
Anil Kumble Indian Cricketer participated in film 800 official trailer press meet at Shangri la Hotel in Bengaluru on Sunday 01st October 2023. DH Photo/ S K Dinesh
ಕ್ರಿಕೆಟಿಗ ಸುನಿಲ್‌ ಜೋಶಿ
ಕ್ರಿಕೆಟಿಗ ಸುನಿಲ್‌ ಜೋಶಿ
Dodda Ganesh
Dodda Ganesh

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT