ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಘಟ್ಟ ಉಳಿದರೆ ಘಟ ಉಳಿದೀತು!

ಆಳುವವರು ಪಶ್ಚಿಮಘಟ್ಟಗಳನ್ನು ಗಾಸಿಗೊಳಿಸಿ ಜನರನ್ನು ಅಳಿಸಬಾರದು
Last Updated 23 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಹಿಮಾಲಯದ ಗಿರಿಶ್ರೇಣಿಗಳಿಗಿಂತ ಪುರಾತನ ಇತಿಹಾಸ ಹೊಂದಿದ ಪಶ್ಚಿಮಘಟ್ಟಗಳು ದೇಶದ ಕೋಟ್ಯಂತರ ಜನರಿಗೆ ಬದುಕಿನ ಮೂಲವಾಗಿವೆ. ಸುಮಾರು 50 ಕೋಟಿ ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಶ್ಚಿಮಘಟ್ಟಗಳನ್ನು ಅವಲಂಬಿಸಿದ್ದಾರೆ. ಜಾಗತೀಕರಣೋತ್ತರ ಅಭಿವೃದ್ಧಿ ಪರಿಭಾಷೆಗಳು ವೇಗವಾಗಿ ಬದಲಾಗುತ್ತಿವೆ. ಔದ್ಯಮೀಕರಣವೇ ಮಾನವ ಸಮಸ್ಯೆಗಳಿಗೆ ಏಕೈಕ ಉತ್ತರವೆಂಬಂತೆ ಬಿಂಬಿಸಲು ಆರ್ಥಿಕ ತಜ್ಞರು, ಆಡಳಿತ ವರ್ಗದವರು ಸಫಲರಾಗಿದ್ದಾರೆ. ಇದಕ್ಕೆ ಸರ್ಕಾರ ಉಹ್ಞೂಂ ಎನ್ನದೆ ಕೈಜೋಡಿಸುತ್ತಲೇ ಇದೆ.

ಜಾಗತೀಕರಣವಾಗಲೀ ಔದ್ಯಮೀಕರಣವಾಗಲೀ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿ ವೆಯೇ, ನಿರೀಕ್ಷಿತ ಆರ್ಥಿಕ ಬೆಳವಣಿಗೆ ಆಗಿದೆಯೇ ಮುಂತಾದ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರವಿಲ್ಲ. ಆರ್ಥಿಕ ವಾದದ ಪರಿಭಾಷೆ ಬದಲಾಗಬೇಕೇ? ಬೆಳೆಯುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು ಬೇರೆಯದೇ ರೀತಿಯ ಮಾದರಿಯನ್ನು ರೂಪುಗೊಳಿಸಬೇಕೇ? ಈ ಕುರಿತು ಗಂಭೀರವಾಗಿ ಯೋಚಿಸಬೇಕಿದೆ.

ರಾಜ್ಯ ಅರಣ್ಯ ಸಚಿವರು ಒಂದು ಆಘಾತಕಾರಿಯಾದ ವಿಷಯವನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತಿದ್ದರು. 6.5 ಲಕ್ಷ ಹೆಕ್ಟೇರ್ ಪರಿಭಾವಿತ (ಡೀಮ್ಡ್‌) ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಯು ಕಂದಾಯ ಇಲಾಖೆಗೆ ವರ್ಗಾಯಿಸಲಿದೆಯಂತೆ. ಇಷ್ಟು ಪ್ರಮಾಣದ ಹಸಿರು ಕವಚ ಕಡಿಮೆಯಾದರೆ, ರಾಜ್ಯದ ಪರಿಸ್ಥಿತಿ ಏನಾಗಬಹುದು? ಪಶ್ಚಿಮ ಬಂಗಾಳದಲ್ಲಿ ರೈಲು ಯೋಜನೆಗಾಗಿ 386 ಮರಗಳನ್ನು ಕಡಿಯುವ ಪ್ರಸ್ತಾವದ ವಿರುದ್ಧ ಅಲ್ಲಿನ ಸಂಸ್ಥೆಯೊಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಆಗ, ವಸ್ತುಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸಮಿತಿಯನ್ನು ಕೋರ್ಟ್‌ ರಚಿಸಿತು. ಕಳೆದ 50 ವರ್ಷಗಳಲ್ಲಿ ಶೇ 40ರಷ್ಟು ಅರಣ್ಯ ಪ್ರದೇಶವನ್ನು ಕಳೆದುಕೊಂಡಿದ್ದೇವೆ, ವಾತಾವರಣದಲ್ಲಿಯ ಇಂಗಾಲಾಮ್ಲವನ್ನು ಹೀರಿಕೊಂಡು, ಆಮ್ಲಜನಕ ವನ್ನು ನೀಡುವ ಕೆಲಸ ಮಾಡುವ ಮರಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಸಮಿತಿ ವರದಿ ನೀಡಿದೆ.

ಪಶ್ಚಿಮಘಟ್ಟಗಳು ಎದುರಿಸುತ್ತಿರುವ ಬಹು ಮುಖ್ಯವಾದ ಸಮಸ್ಯೆಗಳೆಂದರೆ, ಕೃಷಿ ವಿಸ್ತರಣೆ, ಭಾರಿ ಗಾತ್ರದ ಯೋಜನೆಗಳು, ಬದಲಾಗುತ್ತಿರುವ ಭೂಮಿಯ ಬಳಕೆ ಹಾಗೂ ವಲಸೆ ಸಮಸ್ಯೆ. ಮೇಲೆ ಹೇಳಿದ ಡೀಮ್ಡ್‌ ಅರಣ್ಯ ಪ್ರದೇಶವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಉದ್ದೇಶವು ಭೂರಹಿತರಿಗೆ ಮತ್ತೆ ಭೂಮಿ ಹಕ್ಕನ್ನು ನೀಡುವುದಾಗಿದೆ. ಈ ಹಿಂದೆಯೂ ಬಗರ್‌ಹುಕುಂ ಹೆಸರಿನಲ್ಲಿ ಭೂರಹಿತರಿಗೆ ಭೂಮಿಯನ್ನು ನೀಡುವ ಸರ್ಕಾರದ ಕ್ರಮದ ಫಲಾನುಭವಿಗಳಲ್ಲಿ ಹೆಚ್ಚಿನವರು ಭೂಮಿ ಹೊಂದಿರುವವರೇ ಆಗಿದ್ದುದು ವಿಪರ್ಯಾಸ. ಅರ್ಹ ಫಲಾನುಭವಿಗಳು ಇನ್ನೂ ಅದರ ಫಲಿತಾಂಶವನ್ನು ಉಂಡಿಲ್ಲವೆಂಬುದು ಅಷ್ಟೇ ಸತ್ಯ. ಈಗ ಇಷ್ಟು ಪ್ರಮಾಣದ ಭೂಮಿಯ ಹಂಚಿಕೆಯಲ್ಲೂ ಅದೇ ತಾರತಮ್ಯ ಪುನರಾವರ್ತನೆಯಾಗಬಹುದಾದ ಸಾಧ್ಯತೆ ಯನ್ನು ಅಲ್ಲಗಳೆಯಲಾಗದು.

ಹಾಗೆಯೇ, ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಪರಿಸರವನ್ನು ನಾಶ ಮಾಡುವ ಅನೇಕ ಯೋಜನೆಗಳು ದಾಂಗುಡಿಯಿಡುತ್ತಾ ಬರುತ್ತಿವೆ. ಹಾಲಿ ಇರುವ ಹಲವು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಉದಾಹರಣೆಗೆ, ಶಿರಸಿಯಿಂದ ಕುಮಟಾ ರಸ್ತೆಯಲ್ಲಿ ದುರ್ಗಮವಾದ ದೇವಿಮನೆ ಘಾಟಿಯನ್ನು ಅಗಲಗೊಳಿಸುವ ಕೆಲಸ ನಡೆಯುತ್ತಿದೆ. ಹಾಲಿ ಈ ರಸ್ತೆಯು 5 ಮೀಟರ್ ಅಗಲವಿದೆ. ಈಗ ಇದನ್ನು 18 ಮೀಟರಿನಷ್ಟು ಅಗಲಗೊಳಿಸಲು ತಯಾರಿ ನಡೆದಿದೆ. ಕಡಿದಾದ ಘಾಟಿಯ ಭಾಗದಲ್ಲಾದರೂ ರಸ್ತೆ ಅಗಲೀಕರಣ ಬೇಡ ಎಂಬುದು ಒಂದು ವಾದ. ಹಿಂದಿನ ಎರಡು ಮಳೆಗಾಲಗಳಲ್ಲಿ ಪಶ್ಚಿಮಘಟ್ಟಗಳ ಅನೇಕ ಕಡೆಗಳಲ್ಲಿ ಗುಡ್ಡ ಕುಸಿದಿರುವುದಕ್ಕೆ ರಸ್ತೆ ಅಗಲೀಕರಣದಂತಹ ಅಭಿವೃದ್ಧಿಯೂ ಒಂದು ಕಾರಣ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಹೇಳಿದೆ.

ಆಡಳಿತದ ದೂರದೃಷ್ಟಿಯ ಕೊರತೆಯಿಂದಾಗಿ ಎತ್ತಿನಹೊಳೆ ಯೋಜನೆ ಇಂದಿಗೂ ಪೂರ್ಣಗೊಂಡಿಲ್ಲ. ಏಕೆಂದರೆ, ಯೋಜನೆ ಪ್ರಾರಂಭಿಸುವಾಗ ಸರ್ಕಾರ ಹೇಳಿದ 24 ಟಿಎಂಸಿ ಅಡಿ ನೀರು ಹಾಲಿ ಅಲ್ಲಿ ಲಭ್ಯವಿಲ್ಲ. ಇತ್ತ ಪರಿಸರ ಮತ್ತು ಸ್ಥಳೀಯರ ಬದುಕನ್ನು ಹಾಳು ಮಾಡಿ, ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿ ವ್ಯಯಿಸಿದ್ದರೂ ಫಲಿತಾಂಶ ಶೂನ್ಯ. ಇಂತಹ ನದಿ ತಿರುವು ಯೋಜನೆಗಳು ಪ್ರಪಂಚದಲ್ಲಿ ಯಶಸ್ವಿಯಾದ ಉದಾಹರಣೆಗಳಿಲ್ಲ. ನದಿ ತಿರುವಿನ ದುಷ್ಪರಿಣಾಮದಿಂದ ರಷ್ಯಾದ ಅರಾಲ್ ಸಮುದ್ರವೇ ಸತ್ತು ಹೋಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ರಸ್ತೆ ಅಗಲವಾದರೆ, ಹೆದ್ದಾರಿಗಳು ಸೃಷ್ಟಿಯಾದರೆ, ರೈಲು ಮಾರ್ಗಗಳು ಬಂದರೆ, ಆ ಪ್ರದೇಶದ ಜನ ಜೀವನದ ಮಟ್ಟ ಉನ್ನತಿಗೇರುತ್ತದೆ ಎಂಬ ಬಡಿವಾರದ ಮಾತನ್ನು ಜನಮಾನಸದಲ್ಲಿ ತುಂಬುವಲ್ಲಿ ಆಡಳಿತ ಯಶಸ್ವಿಯಾಗಿದೆ. ಸರಕು ಸಾಗಣೆಗೂ ಅವಕಾಶ
ಇಲ್ಲದ ಪ್ರದೇಶಗಳಲ್ಲೂ ರೈಲು ಓಡಿಸುವ ಪ್ರಸ್ತಾಪ ಮತ್ತು ಅನುಮೋದನೆ ಸಿಗುತ್ತಿದೆ. ಬೆಳಗಾವಿಯಿಂದ ಪಣಜಿಗೆ ಚತುಷ್ಪಥ ರಸ್ತೆಗಾಗಿ ಈಗಾಗಲೇ ಒಂದು ಲಕ್ಷ ಮರಗಳನ್ನು ಕಡಿಯಲಾಗಿದೆ. ಪಣಜಿಯಿಂದ ತಿನೈ ಘಾಟಿನ ದ್ವಿಪಥ ರೈಲು ಮಾರ್ಗಕ್ಕಾಗಿ ಸುಮಾರು 2 ಲಕ್ಷ ಮರಗಳನ್ನು ಕತ್ತರಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಛತ್ತೀಸ್‌ಗಡ ದಿಂದ ಕರ್ನಾಟಕದ ಮೂಲಕ ಗೋವಾಗೆ ಸಾಗುವ ವಿದ್ಯುತ್ ಮಾರ್ಗದ ಯೋಜನೆಗೆ 2 ಲಕ್ಷ ಮರಗಳನ್ನು ಕಡಿಯಲಾಗುತ್ತದೆ. ಹೀಗೆ ಕರ್ನಾಟಕವೊಂದರಲ್ಲೇ ವಿವಿಧ ಭಾರಿ ಯೋಜನೆಗಳಿಗಾಗಿ ಬಲಿಯಾಗಲಿರುವ ಮರಗಳ ಸಂಖ್ಯೆ ಸುಮಾರು 25 ಲಕ್ಷ ದಾಟುತ್ತದೆ.

ವಿನಾಶಕಾರಿ ಯೋಜನೆಗಳು ಪಶ್ಚಿಮಘಟ್ಟದಲ್ಲೇ ಏಕೆ? ಪಶ್ಚಿಮಘಟ್ಟಗಳಲ್ಲಿನ ವೈವಿಧ್ಯಮಯವಾದ ಮರಗಳಿಂದ ಅಪಾರವಾದ ಲಾಭವಿದೆ. ಹಾಗಾಗಿ ಟಿಂಬರ್ ಮಾಫಿಯಾ ಇದರ ಹಿಂದೆ ಕೆಲಸ ಮಾಡುತ್ತದೆ. ಜೊತೆಗೆ ಇಲ್ಲಿನ ಗುಡ್ಡಗಳಲ್ಲಿ ಲಕ್ಷಾಂತರ ವರ್ಷಗಳಿಂದ ಹುದುಗಿರುವ ಹಲವು ನಿಕ್ಷೇಪಗಳಿವೆ, ಹಾಗಾಗಿ ಗಣಿ ಮಾಫಿಯಾ ಇದರ ಹಿಂದೆ ನಿಲ್ಲುತ್ತದೆ. ಇವೆಲ್ಲಕ್ಕೂ ಮುಂಚೂಣಿಯಲ್ಲಿ ನಿಲ್ಲುವುದೇ ಅಭಿವೃದ್ಧಿ ಮಾಫಿಯಾ. ಮರಳು, ಜಲ್ಲಿ, ಸಿಮೆಂಟ್, ಕಬ್ಬಿಣ ಮುಂತಾದ ಕಚ್ಚಾ ವಸ್ತುಗಳನ್ನು ಇದು ಬೇಡುತ್ತದೆ. ಮಾಫಿಯಾದ ಸರಪಣಿಯಲ್ಲಿರುವ ಪ್ರತಿಯೊಬ್ಬರೂ ಅವರವರ ಸಾಮರ್ಥ್ಯವನ್ನು ಅವಲಂಬಿಸಿ, ವಜ್ರಕ್ಕಿಂತ ಹೆಚ್ಚು ಬೆಲೆಬಾಳುತ್ತಾರೆ.

ಬಯಲುನಾಡಿನ ಜನರಿಗೆ ಮಲೆನಾಡಿನ ನೀರು ಬೇಕು. ದುರದೃಷ್ಟವಶಾತ್, ಆ ಭಾಗದ ಜನರಿಗೆ ‘ಪಶ್ಚಿಮ ಘಟ್ಟಗಳ ಮಹತ್ವದ ಅರಿವಿನ ಕೊರತೆಯಿದೆ’. ಇನ್ನು ಮಲೆನಾಡಿನಲ್ಲಿ ವಾಸಿಸುತ್ತಿರುವವರಿಗೆ ಇನ್ನೂ ನೆರೆ ಮತ್ತು ಬರದ ಅಟ್ಟಹಾಸ ಅಷ್ಟಾಗಿ ತಟ್ಟಿಲ್ಲ. ಅಂದರೆ ಎಲ್ಲಿ ಗುಡ್ಡಗಳು ಕುಸಿದಿಲ್ಲವೋ ಆ ಭಾಗದ ಜನರಿಗೆ ಇನ್ನೂ ಗುಡ್ಡಗಳ ಮಹತ್ವ ಸಾಮೂಹಿಕವಾಗಿ ಅರಿವಾಗಿಲ್ಲ.

ಇದಕ್ಕೆ ಪರಿಹಾರವೇನು? ಪಶ್ಚಿಮಘಟ್ಟಗಳ ಜೀವಿವೈವಿಧ್ಯ ಅದೆಷ್ಟು ಅಗಾಧವಾಗಿದೆ ಎಂದರೆ, ಅರ್ಧ ಕಿಲೊಮೀಟರಿನಷ್ಟು ಅಂತರದಲ್ಲಿ ಬದಲಾಗುತ್ತಿರುತ್ತದೆ. ಉದಾಹರಣೆಗೆ, ಸಿದ್ದಾಪುರ ತಾಲ್ಲೂಕಿನಲ್ಲಿ ಕಂಡು ಬರುವ ಉಪ್ಪಾಗೆ, ಏಕನಾಯಕನಂತಹ ಅಪರೂಪದ ಔಷಧೀಯ ವೈವಿಧ್ಯ ಪಕ್ಕದ ಸಾಗರದಲ್ಲಿ ಕಂಡುಬರು ವುದಿಲ್ಲ. ಸೊರಬ ತಾಲ್ಲೂಕಿನಲ್ಲಿ ಕಂಡುಬರುವ ಮುಗಿಲು ಮುಟ್ಟುವ ಬಿಳಿ ದೇವದಾರು ಮರಗಳೂ ಪಕ್ಕದ ಸಾಗರ ತಾಲ್ಲೂಕಿನಲ್ಲಿ ಇಲ್ಲ. ಬೀಜ ಪ್ರಸರಣದ ಭೀಷ್ಮ ಎಂದು ಕರೆಯಬಹುದಾದ ದೊಡ್ಡ ಮಂಗಟ್ಟೆ ಹಕ್ಕಿಗಳು ಹಾಗೂ ಅರಣ್ಯ ಬೆಳೆಸುವ ಆಂಜನೇಯನೆಂದು ಕರೆಯಬಹುದಾದ ಸಿಂಹಬಾಲದ ಸಿಂಗಳೀಕಗಳು ಪಶ್ಚಿಮಘಟ್ಟದಲ್ಲಿ ಕಾಣಬರುವ ಅಪರೂಪದ ಜೀವಿಗಳು.

ಸುಪ್ರೀಂ ಕೋರ್ಟ್‌ ರಚಿಸಿದ ಸಮಿತಿಯ ಅಭಿಪ್ರಾಯ ದಂತೆ, ನೂರು ವರ್ಷದ ಒಂದು ಜೀವಂತ ಮರದ ಬೆಲೆ ಸುಮಾರು ₹ 72 ಲಕ್ಷ. ಇದನ್ನು ಹೇಗೆ ಲೆಕ್ಕ ಹಾಕ ಬಹುದು ಎಂದರೆ, ಆ ಬೃಹತ್ ಮರಗಳು ಹೀರಿಕೊಳ್ಳುವ ಇಂಗಾಲಾಮ್ಲದ ಪ್ರಮಾಣ ಮತ್ತು ವಾಪಸ್‌ ನೀಡುವ ಆಮ್ಲಜನಕದ ಪ್ರಮಾಣ, ನೆಲದಾಳಕ್ಕೆ ಅದರ ನೀರಿಂಗಿ ಸುವ ಪ್ರಮಾಣ, ಪಶು-ಪಕ್ಷಿಗಳಿಗೆ ಆಹಾರ ನೀಡುವ ಪ್ರಮಾಣ, ಮಣ್ಣು ಸವಕಳಿ ತಡೆಯುವ ಪ್ರಮಾಣ ಇತ್ಯಾದಿ. ಈ ಹಂತದಲ್ಲಿ ಪಶ್ಚಿಮಘಟ್ಟಗಳ ಮಹತ್ವವನ್ನು ಸರ್ಕಾರಗಳು ಅರಿತು, ನಿಸರ್ಗ ನೀಡುವ ಸೇವೆಗಳಿಗೆ ಪಾವತಿ ಮಾಡುವ ವಿಧಾನವನ್ನು ಜಾರಿಗೊಳಿಸಬಹುದು. ಇದರಿಂದ ಬರುವ ಆದಾಯವನ್ನು ಆದ್ಯತೆ ಮೇರೆಗೆ ಇಲ್ಲಿ ವಾಸಿಸುವ, ಕಾಡಿನ ಮೇಲೆಯೇ ಅವಲಂಬಿತರಾಗಿರುವ ಪ್ರಜೆಗಳಿಗೆ ಹಂಚಬಹುದು ಅಥವಾ ರೈತರಿಗೆ ಸ್ವಾಭಾವಿಕ ಅರಣ್ಯವನ್ನು ಬೆಳೆಸಲು ಭರಪೂರ ಧನಸಹಾಯ ಮಾಡುವುದು. ಈ ಕ್ರಮಗಳೇ ಪಶ್ಚಿಮಘಟ್ಟಗಳನ್ನು ಉಳಿಸಲು ಇರುವ ಏಕೈಕ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT