ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಗ್ರಾಹಕ ಸಂರಕ್ಷಣೆ ಮತ್ತು ವಕೀಲ ವೃತ್ತಿ

ಗ್ರಾಹಕ ಸಂರಕ್ಷಣಾ ಕಾಯ್ದೆಯಿಂದ ವಕೀಲ ವೃತ್ತಿಗೆ ವಿನಾಯಿತಿ ನೀಡಿದ ಸುಪ್ರೀಂ ಕೋರ್ಟ್‌
Published 28 ಮೇ 2024, 1:00 IST
Last Updated 28 ಮೇ 2024, 1:00 IST
ಅಕ್ಷರ ಗಾತ್ರ

ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಾಗಿನಿಂದ, ಈ ಕಾಯ್ದೆಯನ್ನು ಬಲಹೀನ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ವಿಶೇಷವಾಗಿ ವೈದ್ಯರು, ವಕೀಲರಂತಹ ವೃತ್ತಿನಿರತರು ಗ್ರಾಹಕ ಸಂರಕ್ಷಣಾ ಕಾಯ್ದೆ ತಮಗೆ ಅನ್ವಯವಾಗುವುದಿಲ್ಲ ಎಂದು ವಾದಿಸುತ್ತಲೇ ಬಂದಿದ್ದಾರೆ.

ಭಾರತೀಯ ವೈದ್ಯಕೀಯ ಮಂಡಳಿ ಮತ್ತು ವಿ.ಪಿ.ಶಾಂತಾ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 1995ರಲ್ಲಿ ಮಹತ್ವದ ತೀರ್ಪು ನೀಡಿತು. ಈ ಮೂಲಕ, ವೈದ್ಯಕೀಯ ಸೇವೆಯನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಿತು. ವೈದ್ಯರು ಅದನ್ನು ಒಪ್ಪಿಕೊಳ್ಳ ಬೇಕಾಯಿತು. ವಕೀಲರು ಸಹ ತಮ್ಮ ಸೇವೆಯನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸುವುದನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಡಿ.ಕೆ.ಗಾಂಧಿ ಮತ್ತು ಭಾರತೀಯ ವಕೀಲರ ಪರಿಷತ್ತು ಹಾಗೂ ಇತರರ ನಡುವಿನ ಪ್ರಕರಣದಲ್ಲಿ, ವಕೀಲರ ಸೇವೆಯು ಗ್ರಾಹಕ ಸಂರಕ್ಷಣಾ ಕಾಯ್ದೆಯಲ್ಲಿ ಬಳಸಿರುವಂತೆ ‘ಸೇವೆ’ ಆಗುವುದಿಲ್ಲ ಎಂಬ ತೀರ್ಪು ನೀಡಿದೆ. ಈ ಮೂಲಕ ವಕೀಲ ವೃತ್ತಿಯನ್ನು ಕಾಯ್ದೆಯಿಂದ ಹೊರಗಿಡಲಾಗಿದೆ. ಇದರಿಂದಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆಗೆ ಪೆಟ್ಟು ಬಿದ್ದಂತಾಗಿದೆಯಲ್ಲವೇ ಎಂಬುದರ ಬಗ್ಗೆ ಚರ್ಚೆ ನಡೆದಿದೆ.

ಈ ಪ್ರಕರಣದಲ್ಲಿ, ಡಿ.ಕೆ.ಗಾಂಧಿ ಎಂಬುವರು ಒಂದು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರನ್ನು ನೇಮಕ ಮಾಡಿಕೊಂಡಿದ್ದರು. ವಕೀಲರ ಸೇವೆಯಲ್ಲಿ ದೋಷವಿದೆ ಎಂಬ ಕಾರಣಕ್ಕೆ ಅವರು ವಕೀಲರ ವಿರುದ್ಧ ಜಿಲ್ಲಾ ಗ್ರಾಹಕ ವೇದಿಕೆಗೆ (ಈಗ ಆಯೋಗ) ದೂರು ಸಲ್ಲಿಸಿದ್ದರು. ವಕೀಲ ವೃತ್ತಿಯು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲವಾದ್ದರಿಂದ ದೂರನ್ನು ತಿರಸ್ಕರಿಸಬೇಕೆಂದು ವಕೀಲರು ವಾದ ಮಾಡಿದರು. ಜಿಲ್ಲಾ ವೇದಿಕೆಯು ಅವರ ವಾದವನ್ನು ತಿರಸ್ಕರಿಸಿ, ಗ್ರಾಹಕರ ಪರ ತೀರ್ಪು ನೀಡಿತಾದರೂ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆ ತೀರ್ಪನ್ನು ತಿರಸ್ಕರಿಸಿತು. ಆದರೆ ರಾಷ್ಟ್ರೀಯ ಆಯೋಗವು ಜಿಲ್ಲಾ ವೇದಿಕೆಯ ತೀರ್ಪನ್ನು ಪುರಸ್ಕರಿಸಿದ ಕಾರಣ, ವಕೀಲರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು.

ವಕೀಲ ವೃತ್ತಿಯು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬುದನ್ನು ಸಮರ್ಥಿಸಿ ಕೊಳ್ಳಲು ವಕೀಲರು ಹದಿನೇಳು ಕಾರಣಗಳನ್ನು ನ್ಯಾಯಾಲಯದ ಮುಂದಿಟ್ಟರು. ವಕೀಲ ವೃತ್ತಿ ಒಂದು ‍ಶ್ರೇಷ್ಠ ವೃತ್ತಿ, ಅದು ಸರಕು ವ್ಯಾಪಾರದಂತೆ ಅಲ್ಲ, ವಕೀಲ ವೃತ್ತಿಯನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ಇದ್ದು, ವಕೀಲರ ದುರ್ವರ್ತನೆಯ ವಿರುದ್ಧ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಕೀಲರ ಪರಿಷತ್ತುಗಳು ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿವೆ ಎಂಬಂತಹ ವಾದಗಳನ್ನು ಮಂಡಿಸಿದರು. ಅಲ್ಲದೆ, ವಕೀಲರ ಕಾಯ್ದೆ ಎಂಬ ವಿಶೇಷ ಕಾಯ್ದೆಗೆ ವಕೀಲರು ಒಳಪಟ್ಟಿದ್ದಾರೆ, ವಕೀಲರ ಸೇವೆಯನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಗೆ ಒಳಪಡಿಸಿದರೆ ದೇಶದಾದ್ಯಂತ ವಕೀಲರ ವಿರುದ್ಧ ಅನಗತ್ಯವಾಗಿ ದೂರುಗಳು ದಾಖಲಾಗುವ ಸಂಭವವಿದೆ. ಹೀಗಾಗಿ, ವಕೀಲ ವೃತ್ತಿಯನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯಿಂದ ವಿಮುಕ್ತಗೊಳಿಸಬೇಕೆಂದು ವಕೀಲರು ಕೋರಿದರು.

ತನ್ನ ಐವತ್ತೈದು ಪುಟಗಳ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ವಕೀಲರ ಈ ವಾದಸರಣಿಯನ್ನು ಒಪ್ಪಿಕೊಂಡಿದೆ. ಈ ತೀರ್ಪಿನ ಪರಿಣಾಮವಾಗಿ, ವಕೀಲರ ಅಲಕ್ಷ್ಯ, ದುರ್ನಡತೆ, ಅನಗತ್ಯ ವಿಳಂಬದಂತಹ ದೋಷಗಳ ವಿರುದ್ಧ ಬಳಕೆದಾರರು ಗ್ರಾಹಕ ಆಯೋಗದಲ್ಲಿ ಪ್ರಶ್ನಿಸಲು ಆಗುವುದಿಲ್ಲ. ವಿವಿಧ ಸೇವೆ ಮತ್ತು ವೃತ್ತಿಗಳಿಗೆ ಪ್ರತ್ಯೇಕ ಕಾನೂನು ಇರುವುದು ನಿಜವಾದರೂ ಇತರ ಕಾಯ್ದೆಗಳ ಜೊತೆಗೆ ಅಥವಾ ಅದರ ಬದಲಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಗ್ರಾಹಕರು ಬಳಸಿಕೊಳ್ಳಬಹುದು ಎಂದು ಈ ಕಾಯ್ದೆ ಹೇಳುತ್ತದೆ. ಈ ಅಂಶವನ್ನು ಸುಪ್ರೀಂ ಕೋರ್ಟ್‌ ಅನೇಕ ಪ್ರಕರಣಗಳಲ್ಲಿ ಉಲ್ಲೇಖಿಸಿ ಗ್ರಾಹಕರ ಪರವಾಗಿ ತೀರ್ಪು ನೀಡಿದ್ದೂ ಇದೆ. ವಕೀಲರ ವರ್ತನೆಯನ್ನು ನಿಯಂತ್ರಿಸುವಲ್ಲಿ ವಕೀಲರ ಕಾಯ್ದೆಯಾಗಲೀ ವಕೀಲರ ಪರಿಷತ್ತಾಗಲೀ ಎಷ್ಟು ಪರಿಣಾಮಕಾರಿಯಾಗಿವೆ ಎಂಬ ಪ್ರಶ್ನೆ ಇದೆ.

ಸರಕು ಮತ್ತು ಸೇವೆಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಗ್ರಾಹಕರಿಗೆ ಎದುರಾಗುವ ವಂಚನೆ, ಮೋಸ, ಅನುಚಿತ ವ್ಯಾಪಾರ ಪದ್ಧತಿಯಂತಹವನ್ನು ತಡೆಗಟ್ಟಿ, ನೊಂದ ಗ್ರಾಹಕರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಉದ್ದೇಶವಾಗಿದೆ. ಆ ಕಾಯ್ದೆಯಲ್ಲಿ ವೃತ್ತಿಪರರು ನೀಡುವ ಸೇವೆಯಲ್ಲಿ ಉಂಟಾಗುವ ದೋಷಕ್ಕೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ಪ್ರಸ್ತಾಪವಿಲ್ಲದ ಕಾರಣ, ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ರಚಿಸಿದವರ ಮನಸ್ಸಿನಲ್ಲಿ ವೃತ್ತಿಪರರು ನೀಡುವ ಸೇವೆಯನ್ನು ಈ ಕಾಯ್ದೆಯಲ್ಲಿ ಸೇರಿಸುವ ಉದ್ದೇಶ ಇರಲಿಲ್ಲವೆಂದು ಕಂಡುಬರುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಈ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ನ್ಯಾಯಾಲಯವು ಗ್ರಾಹಕ ಸಂರಕ್ಷಣಾ ಕಾಯ್ದೆಯ ಚರಿತ್ರೆ ಮತ್ತು ಈ ಹಿಂದೆ ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಇತರ ತೀರ್ಪುಗಳನ್ನು ಉಲ್ಲೇಖಿಸಿದೆ. ಆದರೆ ವೈದ್ಯರು ಮತ್ತು ವಕೀಲರ ದುರ್ನಡತೆ, ಅಲಕ್ಷ್ಯದಂತಹ ಕಾರಣಗಳಿಗೆ ವೈದ್ಯಕೀಯ ಮಂಡಳಿ ಮತ್ತು ವಕೀಲರ ಪರಿಷತ್ತಿನಲ್ಲಿ ದೂರು ಸಲ್ಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

ವಿ.ಪಿ.ಶಾಂತಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ವೈದ್ಯಕೀಯ ಸೇವೆಯನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಿದ್ದನ್ನು ನ್ಯಾಯಾಲಯ ಒಪ್ಪಿಕೊಂಡಿದ್ದರೂ ವೈದ್ಯಕೀಯ ವೃತ್ತಿ ಮತ್ತು ವಕೀಲ ವೃತ್ತಿ ವಿಭಿನ್ನ ಎಂದು ಅಭಿಪ್ರಾಯಪಟ್ಟಿದೆ. ವಕೀಲ ವೃತ್ತಿ ವಾಣಿಜ್ಯ ಅಥವಾ ವ್ಯಾಪಾರವಲ್ಲವೆಂದೂ ಅದೊಂದು ‘ನೋಬಲ್‌’ (ಉದಾತ್ತ) ಸೇವೆ ಎಂದೂ ನ್ಯಾಯಾಲಯ ಹೇಳಿದೆ. ಜನರಿಗೆ ನ್ಯಾಯದಾನ ಮಾಡುವಲ್ಲಿ ವಕೀಲರ ಪಾತ್ರ, ಅವರ ಕರ್ತವ್ಯದಂತಹ ಕಾರಣಗಳಿಂದ ವಕೀಲ ವೃತ್ತಿಯನ್ನು ಇತರ ವೃತ್ತಿಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂಬುದು ನ್ಯಾಯಾಲಯದ ಅಭಿಪ್ರಾಯ.

ಗ್ರಾಹಕ ಸಂರಕ್ಷಣಾ ಕಾಯ್ದೆಯಲ್ಲಿ ‘ಸೇವೆ’ ಎಂಬ ಪದವನ್ನು ವಿವರಿಸುವಾಗ ವೈಯಕ್ತಿಕ ಸೇವೆಗೆ (ಕಾಂಟ್ರ್ಯಾಕ್ಟ್‌ ಆಫ್‌ ಪರ್ಸನಲ್‌ ಸರ್ವಿಸ್‌) ವಿನಾಯಿತಿ ನೀಡಲಾಗಿದೆ. ವಕೀಲರು ಬಳಕೆದಾರರಿಗೆ (ಕಕ್ಷಿದಾರರಿಗೆ) ನೀಡುವ ಸೇವೆಯ ಸ್ವರೂಪವನ್ನು ನ್ಯಾಯಾಲಯ ಪಟ್ಟಿ ಮಾಡಿದೆ. ಉದಾಹರಣೆಗೆ, ಬಳಕೆದಾರರ ವಿಷಯದಲ್ಲಿ ವಕೀಲರು ತಮಗಿಷ್ಟ ಬಂದಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ವಕೀಲರು ತಮ್ಮ ಬಳಕೆದಾರರ ಅಭಿಪ್ರಾಯಗ
ಳಿಗೆ ಮನ್ನಣೆ ನೀಡಬೇಕಾಗುತ್ತದೆ, ಬಳಕೆದಾರರ ಅನುಮತಿ ಇಲ್ಲದೆ ವಕೀಲರು ನ್ಯಾಯಾಲಯಕ್ಕೆ ಯಾವುದೇ ವಾಗ್ದಾನ ನೀಡಲು ಸಾಧ್ಯವಿಲ್ಲ...

ಈ ಕಾರಣಗಳಿಂದ, ವಕೀಲರನ್ನು ನೇಮಕ ಮಾಡಿಕೊಳ್ಳುವ ಬಳಕೆದಾರನು ವಕೀಲರ ಮೇಲೆ ಬಹಳಷ್ಟು ನಿಯಂತ್ರಣ ಹೊಂದಿರುವುದರಿಂದ, ವಕೀಲರ ಸೇವೆಯು ವೈಯಕ್ತಿಕ ಸೇವೆ ಆಗುತ್ತದೆ. ಆದ್ದರಿಂದ ವಕೀಲರ ಸೇವೆಯು ಗ್ರಾಹಕ ಸಂರಕ್ಷಣಾ ಕಾಯ್ದೆಗೆ ಒಳಪಡುವುದಿಲ್ಲ ಎಂದು ತೀರ್ಮಾನಿಸಿದೆ. ಆದಕಾರಣ ವಕೀಲರು ನೀಡುವ ಸೇವೆಯಲ್ಲಿ ದೋಷವಿದೆ ಎಂಬ ಕಾರಣಕ್ಕೆ, ವಕೀಲರನ್ನು ನೇಮಕ ಮಾಡಿಕೊಂಡವರು ಗ್ರಾಹಕ ಆಯೋಗದಲ್ಲಿ ದೂರು ಸಲ್ಲಿಸಲು ಅವಕಾಶ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ತೀರ್ಪಿನ ಆಘಾತಕಾರಿ ಅಂಶವೆಂದರೆ, ವಿ.ಪಿ.ಶಾಂತಾ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿರುವುದು. ಇದಕ್ಕಾಗಿ ಮುಖ್ಯ ನ್ಯಾಯಮೂರ್ತಿಯ ವರು ಪ್ರತ್ಯೇಕ ಪೀಠವನ್ನು ರಚಿಸಬೇಕೆಂದು ಅದು ಹೇಳಿದೆ. ಹೀಗೆ ಎಲ್ಲ ವೃತ್ತಿಯವರಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆಯಿಂದ ವಿನಾಯಿತಿ ನೀಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರು, ಉತ್ಪಾದಕರು ಮತ್ತು ವಿತರಕರೆಲ್ಲರೂ ತಮಗೂ ಇಂತಹ ವಿನಾಯಿತಿ ನೀಡುವಂತೆ ಒತ್ತಡ ತರಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT