ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದ ಹಾಗೂ ಧರ್ಮಸಮನ್ವಯ ಪಾಠ

ರಾಜಕೀಯ– ಆಧ್ಯಾತ್ಮಿಕ ಆರೋಗ್ಯಪೂರ್ಣ ಬಾಳ್ವೆಗೆ ಸ್ವಾಮಿ ವಿವೇಕಾನಂದ ಇಂದಿಗೂ ಪ್ರಸ್ತುತ
Last Updated 11 ಜನವರಿ 2021, 20:30 IST
ಅಕ್ಷರ ಗಾತ್ರ

ಇಂದು ಧರ್ಮ, ಅಧ್ಯಾತ್ಮ ಹಿಂದೆಂದೂ ಕಾಣದ ಸಂಕಷ್ಟಕ್ಕೆ ಸಿಲುಕಿವೆ. ಧರ್ಮವನ್ನು ರಾಜಕಾರಣಿಗಳು ಗೆಲುವಿನ ಏಣಿಯ ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳುತ್ತಿದ್ದರೆ, ಅಧ್ಯಾತ್ಮವನ್ನು ಕೆಲವರು ಲಾಭಕ್ಕೊಂದು ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ರಾಜಕಾರಣಿಗಳಿಂದ ಪೋಷಿತವಾದ ಧರ್ಮವು ಸಮಾಜದಲ್ಲಿ ದ್ವೇಷ, ಭಯ, ವೈಮನಸ್ಯಗಳನ್ನು ಹರಡುತ್ತಿದ್ದರೆ, ಕೆಲವು ಲಾಭಕೋರರಿಂದ ಪೋಷಿತವಾಗಿರುವ ಅಧ್ಯಾತ್ಮವು ಸಂಪತ್ತು ಸಂಗ್ರಹಿಸುವ ಮತ್ತು ಶೋಷಿಸುವ ಸಾಮರ್ಥ್ಯ, ಕೌಶಲಗಳನ್ನು ಪೂರೈಸುವುದರಲ್ಲಿ ಪ್ರಯತ್ನಶೀಲವಾಗಿದೆ.

ಈ ಎರಡೂ ವಿಕೃತಿಗಳಿಗೆ ಮುಕ್ತಾಯ ಹಾಡಿ ರಾಜಕೀಯವಾಗಿಯೂ ಆಧ್ಯಾತ್ಮಿಕವಾಗಿಯೂ ಒಂದು ಆರೋಗ್ಯಪೂರ್ಣ ಬಾಳ್ವೆ ಮಾಡಲು ಸದ್ಯಕ್ಕೆ ನಮಗೆ ಸ್ವಾಮಿ ವಿವೇಕಾನಂದರ ಬೋಧನೆಗಳಲ್ಲದೆ ಮತ್ತೊಂದು ದಾರಿ ಕಾಣಿಸುತ್ತಿಲ್ಲ. ನಾನಾ ಕಾರಣಗಳಿಗಾಗಿ ವಿವೇಕಾನಂದರೇ ಈ ವಿಷಯಗಳಲ್ಲಿ ನಮಗೆ ಈಗಲೂ ಪ್ರಸ್ತುತರಾಗಿದ್ದಾರೆ.

ಮೊದಲಿಗೆ, ಮಹಾನ್ ಮೇಧಾವಿಯಾದ ವಿವೇಕಾನಂದ ಅಪರೂಪದ ತತ್ವಜ್ಞಾನಿಯೂ ಆಗಿದ್ದರು. ಆದರೆ ಅವರ ತಾತ್ವಿಕ ಚಿಂತನೆ ಯಾರಿಗೂ ಅರ್ಥವಾಗದ ಜಟಿಲ ಪಾರಿಭಾಷಿಕ ಪದಗಳಿಂದ ಕೂಡಿದ ಕಗ್ಗವಾಗಿರಲಿಲ್ಲ. ಸಿದ್ಧಾಂತ ಮಂಡನೆ ಅದರ ಉದ್ದೇಶವಾಗಿರಲಿಲ್ಲ. ಅವರ ತತ್ವಚಿಂತನೆ ಸಾಮಾನ್ಯರಿಗೂ ಅರ್ಥವಾಗುವಂತಹ ಸರಳವಾದ ಮಿತ್ರಸಂಹಿತೆಯ ಸ್ವರೂಪದ್ದಾಗಿತ್ತು. ಅವರು ಭಾರತೀಯ ತತ್ವಶಾಸ್ತ್ರವನ್ನು ಶಾಸ್ತ್ರೋಕ್ತವಾದ ರೀತಿಯಲ್ಲಿ ಕಲಿತಿದ್ದರು. ದಾರ್ಶನಿಕ ಗ್ರಂಥಗಳನ್ನು ಮೂಲದಲ್ಲೇ ಅಭ್ಯಾಸ ಮಾಡಿದ್ದರು. ತೆಲುಗಿನ ಅಜ್ಜಡ ಆದಿಭಟ್ಲ ನಾರಾಯಣ ದಾಸು, ಪೋರಬಂದರಿನ ಪಂಡಿತ ಶಂಕರ ಪಾಂಡುರಂಗ ಮುಂತಾದ ಮಹಾಮಹೋಪಾಧ್ಯಾಯರು
ತಮ್ಮ ಶಾಸ್ತ್ರಜ್ಞಾನವನ್ನೆಲ್ಲ ವಿವೇಕಾನಂದರಿಗೆ ಧಾರೆ ಎರೆದಿದ್ದರು. ಹಾಗೆಯೇ ಪಾಲ್ ಡಾಯ್ಸನ್, ಮ್ಯಾಕ್ಸ್ ಮುಲ್ಲರ್ ಮುಂತಾದ ಪಶ್ಚಿಮದ ವಿದ್ವಾಂಸರ ಚಿಂತನೆಯಿಂದಲೂ ವಿವೇಕಾನಂದರು ಪ್ರಭಾವಿತರಾಗಿದ್ದರು. ಇವೆಲ್ಲಕ್ಕಿಂತ ಮಿಗಿಲಾಗಿ ನೂರಾರು ಶಾಸ್ತ್ರಗ್ರಂಥಗಳನ್ನು ಓದಿದರೂ ಸಿಗದ ಭಾವಸಮಾಧಿಯ ದಿವ್ಯಾನುಭವವನ್ನು ಗುರು ಶ್ರೀರಾಮಕೃಷ್ಣರ ಅನುಗ್ರಹದಿಂದ ಪಡೆದಿದ್ದರು. ಈ ನಾನಾ ಹಿನ್ನೆಲೆ, ಪ್ರಭಾವ, ಅನುಗ್ರಹಗಳು ಇರದೇ ಹೋಗಿದ್ದರೆ ಪತಂಜಲಿಯ ಯೋಗಸೂತ್ರಗಳಿಗೆ ಸರಳವಾದ, ವಿದ್ವತ್ಪೂರ್ಣವಾದ, ಸ್ವಾನುಭವ ಪ್ರಮಾಣಿತವಾದ ವ್ಯಾಖ್ಯಾನ ಬರೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಎರಡನೆಯದಾಗಿ, ವಿವೇಕಾನಂದರು ಭಾರತೀಯ ಧರ್ಮ, ಅಧ್ಯಾತ್ಮವನ್ನು ಇಂದಿನವರಂತೆ ಅತಿರಂಜಿತ ವಾಕ್ಯಗಳಿಂದ ರಮ್ಯವೆನಿಸುವಂತೆ ವರ್ಣಿಸಿದವರಲ್ಲ. ಅದರ ಓರೆಕೋರೆಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸಿದವರು. ಧಾರ್ಮಿಕತೆಯ ಕೇಂದ್ರವನ್ನು ಹೊಕ್ಕು ಸ್ವಾನುಭವದಿಂದಲೇ ಅದರ ಸ್ವರೂಪವನ್ನು ಅರಿತಿದ್ದರು. ಅವರಿಗೆ, ಭಾರತೀಯತೆಯನ್ನು ಆರೋಗ್ಯಪೂರ್ಣ ಆಗಿಸುವ ಕಾಳಜಿ ಇತ್ತೇ ವಿನಾ ವಿದ್ವೇಷದಿಂದ, ವಿಧ್ವಂಸದ ಉದ್ದೇಶದಿಂದ ಅವರು ಟೀಕೆ ಮಾಡುತ್ತಿರಲಿಲ್ಲ.

ಅಳಸಿಂಗ ಪೆರುಮಾಳ್ ಎಂಬ ಸಂಪ್ರದಾಯಸ್ಥ ಬ್ರಾಹ್ಮಣ ಗೆಳೆಯನಿಗೆ ಬರೆದಿರುವ ಪತ್ರದಲ್ಲಿ ಅವರು ಹೀಗೆಂದಿದ್ದಾರೆ: ‘ನಿನ್ನ ಪೂರ್ವಿಕರು ಆತ್ಮಕ್ಕೇನೋ ಸರ್ವಸ್ವಾತಂತ್ರ್ಯ ನೀಡಿದರು ಸರಿ. ಆದರೆ ಶರೀರವನ್ನು (ಸಮಾಜವನ್ನು) ನೂರೆಂಟು ಸರಪಳಿಗಳಿಂದ ಬಂಧಿಸಿಟ್ಟರಲ್ಲ! ಅದರ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ’.

ಒಂದು ಧರ್ಮದ ಮೇಲೆ ನಮಗೆ ಪ್ರೀತಿ ಇದೆ ಎಂದರೆ ಅದರರ್ಥ ಆ ಧರ್ಮದ ಕುಂದುಕೊರತೆಗಳನ್ನು ಮುಚ್ಚಿಹಾಕಬೇಕೆಂದಲ್ಲ. ಆ ಕುಂದುಕೊರತೆಗಳನ್ನು ಬಯಲು ಮಾಡುವುದರಲ್ಲೂ ಆ ಪ್ರೀತಿ ವ್ಯಕ್ತವಾಗಬಹುದು. ಗಾಯವು ಬಯಲಿಗೆ ತೆರೆದುಕೊಂಡಾಗಲಷ್ಟೇ ಅದು ಒಣಗುತ್ತದೆ, ವಾಸಿಯಾಗುತ್ತದೆ. ಆದರೆ ರಾಜಕೀಯ ಉದ್ದೇಶಕ್ಕಾಗಿ ಧರ್ಮವನ್ನು ಬಳಸುವವರಿಗೆ ಆರೋಗ್ಯಪೂರ್ಣ ಧರ್ಮದಲ್ಲಿ ಆಸಕ್ತಿ ಇರುವುದಿಲ್ಲ. ಧರ್ಮ ರೋಗಗ್ರಸ್ತವಾದಾಗ ಮಾತ್ರ ಅವರ ರಾಜಕೀಯದ ಬೇಳೆ ಬೇಯುವುದು. ಅಂತಹವರಿಗೆ ವಿವೇಕಾನಂದರ ಟೀಕೆಗಳು ಸಹಜವಾಗಿಯೇ ಅಪಥ್ಯ ಎನಿಸುತ್ತವೆ.

ಮೂರನೆಯದಾಗಿ, ಸನಾತನ ಭಾರತೀಯ ವೇದಾಂತವನ್ನು ಪ್ರಚಾರ ಮಾಡಿದ್ದ ಅವರು ಆಂತರ್ಯದಲ್ಲಿ ಮಹಾ ಪ್ರಗತಿಪರರಾಗಿದ್ದರು. ಇಂದು ‘ಪ್ರಗತಿಪರ’ ಎನಿಸಿಕೊಂಡ ನಾಡಿನ ಹಲವಾರು ಧಾರ್ಮಿಕ ಮಠಗಳು ವಿವೇಕಾನಂದರ ಈ ಧ್ಯೇಯವನ್ನೇ ಶ್ರದ್ಧೆಯಿಂದ ಅನುಸರಿಸುತ್ತಿವೆಯಾದರೂ ಆ ಮಟ್ಟದ ಪ್ರಗತಿಪರತೆಯನ್ನು ರೂಢಿಸಿಕೊಳ್ಳಲು ಇಂದಿಗೂ ಅವಕ್ಕೆ ಸಾಧ್ಯವಾಗಿಲ್ಲ. ಅವರು ಗೃಹಸ್ಥ ಭಕ್ತರಿಗೆ ಮಾಂಸಾಹಾರವನ್ನು ವರ್ಜ್ಯವೆಂದೇನೂ ಬೋಧಿಸುತ್ತಿರಲಿಲ್ಲ. ‘ನಾವು ಮಾಡಿಕೊಂಡಿರುವ ವ್ಯವಸ್ಥೆಗೆ ರಾಜಸಿಕ ಗುಣದ ಅವಶ್ಯಕತೆ ಇದೆ. ಇಂತಹ ವ್ಯವಸ್ಥೆಯನ್ನು ಸರಿಪಡಿಸದೆ ಬರಿದೇ ಆಹಾರ ಪದ್ಧತಿಯ ಮೇಲೆ ನಿಷೇಧ ಹೇರುವುದರಲ್ಲಿ ಅರ್ಥವಿಲ್ಲ’ ಎಂದಿದ್ದರು.

ಮಠದ ಸನ್ಯಾಸಿಗಳಿಗೆ ಚಹಾ ಸೇವನೆಗೂ ಅನುಮತಿ ನೀಡಿದ್ದರಂತೆ (ಅವರ ಈ ನಿರ್ಧಾರಕ್ಕೆ ಪ್ರಾಯಶಃ ಜೆನ್ ಬೌದ್ಧಮಠಗಳ ಪ್ರಭಾವ ಇದ್ದಿರಬಹುದು). ಮಹಾ ಸಂಪ್ರದಾಯವಾದಿಯಾದ ಬಾಲಗಂಗಾಧರನಾಥ ತಿಲಕರ ಕೈಯಿಂದಲೇ ‘ಮೊಘಲಾಯಿ’ ಚಹಾ ಮಾಡಿಸಿ ಮಠದ ವಿರಕ್ತರಿಗೆಲ್ಲರಿಗೂ ಕೊಡಿಸಿದ್ದರಂತೆ! ಅವರ ಈ ಪ್ರಗತಿಪರತೆಗೆ ಶ್ರೀರಾಮಕೃಷ್ಣರೇ ಪ್ರೇರೇಪಣೆಯಾಗಿದ್ದರು ಎನಿಸುತ್ತದೆ. ರಾಮಕೃಷ್ಣರು ಭವತಾರಿಣಿಯ ದರ್ಶನಕ್ಕಾಗಿ ತಮ್ಮ ಜಾತಿ ಸಂಕೇತವಾದ ಜನಿವಾರವನ್ನು ಕಿತ್ತೆಸೆದಿದ್ದರು. ಸಂಕೇತ ಕಂದಾಚಾರಗಳನ್ನು ಅಲ್ಲಗಳೆದಿದ್ದ ಇದೇ ಶ್ರೀರಾಮಕೃಷ್ಣರು ತಮ್ಮ ಮಡದಿ ಶಾರದಾಮಾತೆಗೆ ತಾವು ತೀರಿಕೊಂಡ ಮೇಲೆ ಕುಂಕುಮ, ಮಾಂಗಲ್ಯ ಮುತ್ತೈದೆತನದ ಸಂಕೇತಗಳನ್ನು ತೆಗೆಯಬಾರದು ಎಂದೂ ತಾಕೀತು ಮಾಡಿದ್ದರಂತೆ.

ಇನ್ನು ಮತಾಂತರ ಕುರಿತಾದ ವಿವೇಕಾನಂದರ ವಿಚಾರಗಳು ಜಗತ್ತಿನ ಯಾವುದೇ ಧರ್ಮದ ಕಟ್ಟಾ ಬೆಂಬಲಿಗನಿಗೂ ಪಥ್ಯವೆನಿಸುವುದಿಲ್ಲ. ಅವರು ಒಂದೆಡೆ, ‘ಕ್ರೈಸ್ತರು ಬೌದ್ಧರಾಗಬೇಕಾದ ಅವಶ್ಯಕತೆ ಇಲ್ಲ ಅಥವಾ ಮುಸ್ಲಿಮರು ಹಿಂದೂಗಳಾಗಿ ಅಥವಾ ಕ್ರೈಸ್ತರಾಗಿ ಪರಿವರ್ತಿತರಾಗಬೇಕಾಗಿಲ್ಲ. ಪ್ರತಿಯೊಬ್ಬ ಧರ್ಮೀಯನೂ ಅನ್ಯಧರ್ಮದ ಸಾರವನ್ನು ಹೀರುತ್ತ ತನ್ನ ವ್ಯಕ್ತಿವೈಶಿಷ್ಟ್ಯವನ್ನು ರೂಪಿಸಿಕೊಳ್ಳಬೇಕಾಗಿದೆ. ನಮಗೆ ಬೇಕಾದುದು ಅನ್ಯಧರ್ಮ ಸಹಿಷ್ಣುತೆಯ ಗುಣವಲ್ಲ, ಸಕಲ ಧರ್ಮಗಳೂ ಒಂದೇ ಎಂಬ ಅರಿವು’ (ಉದ್ಬೋಧನ, 1ನೇ ಆವೃತ್ತಿ, 3ನೇ ಸಂಚಿಕೆ) ಎನ್ನುತ್ತಾರೆ.

ನಾಲ್ಕನೆಯದಾಗಿ, ಧರ್ಮಕ್ಕೂ ಕೋಮಿಗೂ ನಡುವೆ ಇರುವ ವ್ಯತ್ಯಾಸವನ್ನು ವಿವೇಕಾನಂದರು ವಿವರಿಸಿದಷ್ಟು ವಿಶದವಾಗಿ ಈವರೆಗೆ ಮತ್ತೊಬ್ಬ ವ್ಯಕ್ತಿ ವಿವರಿಸಿದಂತಿಲ್ಲ. ವಿರಕ್ತಿ ನಿರ್ಮಮತ್ವಗಳೇ ಧರ್ಮದ ಜೀವಾಳವಾಗಿವೆ. ಆದರೆ ಇಂತಹ ಧರ್ಮವನ್ನೇ ನಮ್ಮ ಮೋಹದ, ಮಮತ್ವದ, ಪ್ರತಿಷ್ಠೆಯ ಸಂಕೇತವನ್ನಾಗಿ ಮಾಡಿಕೊಂಡರೆ ಅದು ಕೋಮುವಾದ ಎನಿಸಿಕೊಳ್ಳುತ್ತದೆ. ಕೋಮುವಾದ ತನ್ನ ಸ್ವಭಾವದಲ್ಲೇ ಅಧಾರ್ಮಿಕವಾದುದು. ‘ಒಂದು ಮಗುವಿಗೆ ಏಕಾಗ್ರತೆ ಮತ್ತು ಅಕ್ಷರಜ್ಞಾನ ಕಲಿಸಿಕೊಟ್ಟರೆ ಸಾಕು. ಯಾವುದೇ ಧಾರ್ಮಿಕ ಸಂಸ್ಕಾರ ನೀಡುವ ಅಗತ್ಯವಿಲ್ಲ. ಮುಂದೆ ಅದು ಬೆಳೆದು ದೊಡ್ಡದಾದ ಮೇಲೆ ತನಗೆ ಸರಿದೋರುವ ಧರ್ಮವನ್ನು ಅದು ಆಯ್ಕೆ ಮಾಡಿಕೊಳ್ಳಬಲ್ಲದು. ಒಂದು ಕುಟುಂಬದಲ್ಲಿ ಮಗ ಬೌದ್ಧಧರ್ಮವನ್ನೂ ಹೆಂಡತಿ ಕ್ರಿಶ್ಚಿಯಾನಿಟಿಯನ್ನೂ ಗಂಡ ಇಸ್ಲಾಮನ್ನೂ ಪಾಲಿಸುತ್ತ ಸಂಘರ್ಷವೇ ಇಲ್ಲದಂತೆ ಸಹಬಾಳ್ವೆ ಮಾಡಲು ಸಾಧ್ಯವಿದೆ’ ಎಂದು ನುಡಿದಿದ್ದಾರೆ.

ಯೋಗಸಾಧನೆಯಲ್ಲಿ ಮುಂದುವರಿದಂತೆ ಶರೀರದಲ್ಲಿ ಗಂಭೀರವಾದ ರಾಸಾಯನಿಕ ಪರಿಣಾಮಗಳು ಉಂಟಾಗುತ್ತವೆ. ಒಂದು ಹಂತದಲ್ಲಿ ಶರೀರ ಜರ್ಝರಿತವಾಗುತ್ತದೆ ಎಂದು ಯೋಗಿಗಳು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ‘ನಿರ್ವಿಕಲ್ಪ ಸಮಾಧಿಗೆ ಸಂದ ವ್ಯಕ್ತಿ ಹೆಚ್ಚೆಂದರೆ ಏಳು ದಿನಗಳವರೆಗೆ ಶರೀರ ಧಾರಣೆ ಮಾಡುವನು. ತರುವಾಯ ಅವನ ಶರೀರ ತರಗೆಲೆಯಂತೆ ಬಿದ್ದುಹೋಗುತ್ತದೆ. ಏಳು ದಿವಸಗಳ ಬಳಿಕವೂ ಅವನು ಬದುಕುಳಿವನೆಂದರೆ ಅದೊಂದು ಪವಾಡವೇ ಸರಿ’ ಎಂದು ಶ್ರೀರಾಮಕೃಷ್ಣರು ನುಡಿದಿದ್ದರು. ವಿವೇಕಾನಂದರ ವಿಧಿಯೂ ಅಂತೆಯೇ ಆಯಿತು.

ತಾವು ಸಾಯುವ ದಿನಾಂಕವನ್ನು ಮುಂಚಿತವಾಗಿಯೇ ನಿಖರವಾಗಿ ತಿಳಿಸಿದ್ದ ವಿವೇಕಾನಂದರು, ತಮ್ಮ ಮೂವತ್ತೊಂಬತ್ತನೆಯ ವಯಸ್ಸಿಗೆ ಶರೀರತ್ಯಾಗ ಮಾಡಿದರು. ಇಚ್ಛಾಮರಣಿಯಾದ ಅವರ ಶರೀರವನ್ನು ಲೋಕದ ಜನ ‘ಅಲ್ಪಾಯುಷಿ’ ಎಂದು ಕರೆಯಬಹುದು. ಆದರೆ ಅವರ ಸಂದೇಶ ಚಿರಂತನವಾದುದು. ಧರ್ಮವು ಬದುಕಿನ ದುಃಖ-ವ್ಯಾಕುಲಗಳ ಮೂಲವನ್ನು ಬೆದಕುವ ಉದ್ದೇಶಕ್ಕಾಗಿ ಬಳಕೆಯಾಗುವ ಕಾಲಘಟ್ಟ ಪ್ರಾಪ್ತಿಯಾಗುವವರೆಗೂ ಆ ಸಂದೇಶಗಳು ಜೀವಂತವಾಗಿರುತ್ತವೆ.

(ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್ ಕಾಲೇಜ್‌, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT