‘ಕೋ ಎಜುಕೇಶನ್ ಅನ್ನು ನಿಲ್ಲಿಸಬೇಕು. ಎಲ್ಲ ಅನಿಷ್ಟಗಳ ಮೂಲ ಈ ಕೋ ಎಜುಕೇಶನ್’ ಎಂದು ತಾಲಿಬಾನಿಯೊಬ್ಬ ಅಪ್ಪಣೆ ಕೊಡಿಸಿದ್ದಾನೆ. ಗಂಡಿಗೆ ಸರಿಸಮಾನವಾಗಿ ಹೆಣ್ಣು ಇರುವುದನ್ನು ಸಹಿಸದ ಮನಃಸ್ಥಿತಿಯನ್ನು ಈ ಮಾತುಗಳು ಸ್ಪಷ್ಟವಾಗಿ ವಿವರಿಸುತ್ತವೆ. ಯಾವುದು ಅನಿಷ್ಟ? ಗಂಡು ಕಲಿಯುವ ವಿದ್ಯೆಯನ್ನೇ ಹೆಣ್ಣು ಕಲಿಯುವುದು, ಅವಳು ಅವನಿಗಿಂತ ಜಾಣಳಾಗಿ ಹುದ್ದೆಗಳನ್ನು ಗಳಿಸುವುದು, ಅವಳ ಮಾತುಗಳಿಗೂ ಧ್ವನಿ ಬರುವುದು, ಅವಳು ಉಡುಗೆಯಲ್ಲಿ ಆಯ್ಕೆ ಬಯಸುವುದು, ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು, ಕೀಲಿ ಕೊಟ್ಟ ಗೊಂಬೆಯಂತಾಡದೆ ಸ್ವಂತಿಕೆಯನ್ನು ಹೊಂದುವುದು ಮತ್ತು ಅಭಿವ್ಯಕ್ತಿಸುವುದು, ಎಲ್ಲಕ್ಕಿಂತ ಹೆಚ್ಚಾಗಿ ಯಾವುದು ಶೋಷಣೆ ಎನ್ನುವುದನ್ನು ಸ್ವತಃ ಅರಿತು ಅದರಂತೆ ಸ್ವಯಂ ನಿರ್ಧಾರಗಳನ್ನು ಹೊಂದಬಲ್ಲವಳಾಗುವುದು, ಇವುಗಳೇ?

ಈ ಸ್ವಾವಲಂಬನೆಯ ದಾರಿಗಳನ್ನು, ಹೆಣ್ಣನ್ನು ಸಮಾನಳು ಎಂದು ಒಪ್ಪದಿರುವವರು ಅನಿಷ್ಟಗಳೆಂಬಂತೆಯೇ ಬಿಂಬಿಸುತ್ತಾರೆ. ಅದು ಯಾಜಮಾನ್ಯದ ರಾಜಕಾರಣ. ತಮ್ಮ ಇಷ್ಟಗಳನ್ನು ಮಾತ್ರ ಮೌಲ್ಯೀಕರಿಸಿ ಇತರರ ಸರಿನಡೆಗಳನ್ನೂ ಅಪಮೌಲ್ಯ ಮಾಡುವುದು ಇಂತಹ ಕು–ರಾಜಕಾರಣದ ಮೊದಲ ಹಂತ.

ಸಂಸತ್ತಿಗೆ ಭಾರತ ಸರ್ಕಾರವೇ ಇತ್ತೀಚೆಗೆ ನೀಡಿದ ಮಾಹಿತಿಯಂತೆ, ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 1.76 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ‘ಧದೀಚಾ’ ಎಂಬ ಸಂಪ್ರದಾಯದಲ್ಲಿ ಏಳು ವರ್ಷದಿಂದ ಆರಂಭಿಸಿ ಹೆಣ್ಣು ಮಕ್ಕಳನ್ನು ಕೆಲವು ಸಾವಿರ, ಲಕ್ಷಗಳಿಗೆ ಪೋಷಕರೇ ಬಾಡಿಗೆ ನೀಡುವ ಅಮಾನುಷ ಪದ್ಧತಿ ಈ ಕ್ಷಣದಲ್ಲೂ ಜಾರಿಯಲ್ಲಿದೆ. ಇವೆಲ್ಲವೂ ಹೆಣ್ಣಿನ ಮೇಲೆ ಅನಿರ್ಬಂಧಿತ ಕ್ರೌರ್ಯಕ್ಕೆ ಪರವಾನಗಿ ನೀಡುವ ರಚನೆಗಳು ಎಂಬುದೇ ಇನ್ನೂ ನಮ್ಮೊಳಗನ್ನು ಹೊಕ್ಕಿಲ್ಲ. ಕೇವಲ ಕೆಲವರ ‘ಒಳ್ಳೆಯತನ’ದಿಂದಷ್ಟೇ ಈ ಸ್ಥಿತಿಗಳನ್ನು ಸುಧಾರಿಸಲು ಸಾಧ್ಯವಿಲ್ಲ. ಬದಲಿಗೆ ಚೌಕಟ್ಟುಗಳೇ ಬದಲಾಗಬೇಕಿದೆ.

ಧರ್ಮದ ಹೆಸರಿನಲ್ಲಿ ಹೆಂಗಸರ ಎಲ್ಲ ಸಹಜ ಬಾಳ್ವೆಗಳನ್ನು ನಿರಾಕರಿಸಿ, ಅವಳ ಮೇಲೆಸಗುವ ಎಲ್ಲ ಕ್ರೌರ್ಯಗಳನ್ನು ಪುರಸ್ಕರಿಸಿ, ಅವಳೊಂದು ಮೂಕ ಪಶುವಿನಂತೆ ಇರಬೇಕು ಎನ್ನುವುದನ್ನು ಬಲವಂತವಾಗಿ ಒಪ್ಪಿಸಿ, ಅವಳನ್ನು ಅಸಹಾಯಕಳನ್ನಾಗಿಸುವ ಮೂಲಕ ಅಧಿಕಾರದ ಎಲ್ಲ ಶಸ್ತ್ರಗಳನ್ನು ತಮ್ಮದಾಗಿಸಿಕೊಳ್ಳಲಾಗುತ್ತದೆ. ಯಾವುದೇ ಜಾತಿ, ಧರ್ಮ ‘ಪಾವಿತ್ರ್ಯ’ದ ಬಗೆಗೆ ಮಾತಾಡಿದಾಗಲೂ ಅದನ್ನು ಸಾಧಿಸಿಕೊಳ್ಳುವ ಬಗೆಯೆಂದರೆ, ತಮ್ಮ ತಮ್ಮ ಜಾತಿಯ, ಧರ್ಮದ ಹೆಣ್ಣು ಮಕ್ಕಳಿಗೆ ಲೈಂಗಿಕ ನಿಯಂತ್ರಣಗಳನ್ನು ಏಕಪಕ್ಷೀಯವಾಗಿ ಹೇರುವುದು. ಮತ್ತದನ್ನು ಪ್ರಶ್ನೆಯೇ ಇಲ್ಲದೆ ಒಪ್ಪಿಕೊಳ್ಳುವಂತೆ ಭೀತಿಗೆ ಒಳಪಡಿಸುವುದು.

ಮೂಲಭೂತವಾದಿಗಳು ಇನ್ನೂ ಮುಂದಕ್ಕೆ ಹೋಗಿ, ಈ ಚೌಕಟ್ಟಿನಲ್ಲಿ ಒಳ-ಹೊರಗು ಎಂಬ ಯಾವ ಬಾಗಿಲಿಗೂ ಅವಕಾಶ ನೀಡುವುದಿಲ್ಲ. ಹೆಣ್ಣು ವಿದ್ಯೆ ಪಡೆಯುವುದು ಮತ್ತು ಉದ್ಯೋಗಕ್ಕೆ ಹೋಗುವುದು ಕೂಡಾ ಅವರ ಪ್ರಕಾರ ಬಾಗಿಲುಗಳೇ.

ಅಫ್ಗಾನಿಸ್ತಾನವು ನಿರಂತರ ಯುದ್ಧದ ಮೇಲಾಟಗಳಿಗೆ ಬಲಿಯಾಗಿದೆ. ಯುದ್ಧದ ಮೇಲಾಟವೆಂದರೆ ಅತ್ಯಂತ ಖಚಿತವಾಗಿ ಪುರುಷಾಹಂಕಾರದ ಮೇಲಾಟವೇ ಆಗಿದೆ. ಎಲ್ಲೆಲ್ಲಾ ಈ ಪುರುಷಾಹಂಕಾರವನ್ನು ಮೀರಿ ಮಾನವೀಯ ನೆಲೆಯಲ್ಲಿ ವರ್ತಿಸುವ ಪುರುಷರು ಅಧಿಕಾರ ಪಡೆದಿದ್ದಾರೋ ಅಲ್ಲೆಲ್ಲಾ ಒಂದು ಹಂತದ ಮಟ್ಟಿಗೆ ‘ರಿಲ್ಯಾಕ್ಸೇಶನ್’ ಸಿಕ್ಕುತ್ತದೆ. ಮತ್ತು ಹೆಂಗಸರು ಇದಕ್ಕಾಗಿ ಸದಾ ಪುನೀತರೂ, ಕೃತಜ್ಞರೂ ಆಗಿರಬೇಕು ಎಂದು ಹೆಂಗಸರೂ, ಗಂಡಸರೂ ನಂಬುವ ಸ್ಥಿತಿಯ ತನಕವಷ್ಟೇ ನಾವಿಂದು ತಲುಪಿರುವುದು. ಹೀಗಿರುವಾಗ ತಾಲಿಬಾನ್‍ನ ಆಕ್ರಮಣ ಈ ಚೂರು ಪಾರು ಆಶಾಕಿರಣವನ್ನೂ ಹೊಸಕಿ ಹಾಕುತ್ತದೆ. ಆದರೆ ದುರಂತವೆಂದರೆ, ಇಂತಹ ಸನ್ನಿವೇಶವನ್ನು ಕೂಡಾ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳಲು ನಿಜ ಚರಿತ್ರೆಯನ್ನು ಮರೆಮಾಚಲಾಗುತ್ತಿದೆಯಲ್ಲಾ, ಅದು ಕೂಡಾ ಸ್ತ್ರೀವಿರೋಧಿ ಸಂಗತಿಯೇ ಆಗಿದೆ.

ಯಾವ ಅಮೆರಿಕವನ್ನು ಬದಲಾವಣೆಯ ಹರಿಕಾರ ಎಂದು ಬಿಂಬಿಸಲಾಗುತ್ತಿದೆಯೋ ಅದೇ ಅಮೆರಿಕವು ಕಮ್ಯುನಿಸ್ಟರನ್ನು ಮಟ್ಟ ಹಾಕುವ ಏಕೈಕ ಉದ್ದೇಶದಿಂದ ತಾಲಿಬಾನ್ ಅನ್ನು ಬೆಂಬಲಿಸಿ ಅಫ್ಗಾನಿಸ್ತಾನವನ್ನು ನರಕವಾಗಿಸಿತು ಎನ್ನುವುದನ್ನು ಪಾಠವಾಗಿ ನಾವು ನೋಡುತ್ತಿದ್ದೇವೆಯೇ? ಮೂಲಭೂತವಾದದ ವ್ಯಕ್ತ ಕ್ರೌರ್ಯವನ್ನು ಇಸ್ಲಾಮಿಕ್ ಉಗ್ರರು ಮಾಡುತ್ತಿರುವುದನ್ನು ಖಂಡಿಸುವುದರ ಜೊತೆಗೇ ನಾವಿಂದು ಎಲ್ಲಾ ಮೂಲಭೂತವಾದದ ಅಂತಿಮ ಫಲಿತ ಇದೇ ಆಗಿರುತ್ತದೆ ಎನ್ನುವುದಕ್ಕೂ ಒತ್ತು ಕೊಡಬೇಕಾಗಿದೆ.

1920ರಿಂದ ಈಚೆಗಿನ ಅಫ್ಗಾನಿಸ್ತಾನದ ರಾಜಕೀಯದಲ್ಲಾದ ಏರುಪೇರು ಮತ್ತು ಅಲ್ಲಿನ ಮಹಿಳೆಯರ ಬದುಕಿನಲ್ಲಾದ ಏರುಪೇರುಗಳನ್ನು ಗಮನಿಸಿದರೆ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು. 1919ರಲ್ಲಿ ಅಧಿಕಾರಕ್ಕೆ ಬಂದ ರಾಜ ಅಮಾನುಲ್ಲಾ ಕಾಲದಲ್ಲಿ ಪ್ರಯತ್ನಪೂರ್ವಕವಾಗಿ ಹಲವು ಬದಲಾವಣೆಗಳಿಗೆ ಒತ್ತು ನೀಡಿ ಸ್ತ್ರೀಯರ ವಿದ್ಯಾಭ್ಯಾಸ, ಉದ್ಯೋಗ, ಆಧುನಿಕ ಉಡುಪುಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಬಲವಂತದ ಮದುವೆ, ಬಾಲ್ಯವಿವಾಹ, ವಧುದಕ್ಷಿಣೆ ಹಾಗೂ ಬಹುಪತ್ನಿತ್ವಗಳನ್ನು ನಿಷೇಧಿಸಿ ಕಾನೂನುಗಳನ್ನು ತರಲಾಯಿತು. ರಾಣಿ ಸೊರಾಯಾ ಅಫ್ಗನ್‍ನ ಮೊತ್ತಮೊದಲ ಮಹಿಳಾ ಮ್ಯಾಗಜಿನ್ ಹೊರತಂದಳಲ್ಲದೆ, ಮಹಿಳಾ ಸಂಘಟನೆಯನ್ನು ಹುಟ್ಟುಹಾಕಿ ಸಾಮಾಜಿಕ ಬದಲಾವಣೆಗಳಿಗೆ ಮುನ್ನುಡಿ ಬರೆದಳು. ಸಾರ್ವಜನಿಕವಾಗಿ ತಲೆಯ ಮೇಲಿನ ಮುಸುಕನ್ನು ತೆಗೆದು ಆಕೆ ಕಾಣಿಸಿಕೊಂಡಿದ್ದು ಇತರರಿಗೂ ಸ್ಫೂರ್ತಿ ನೀಡಿತು.

ಮುಂದೆ ಬಂದ ಸರ್ಕಾರಗಳು ಮಹಿಳೆಯರಿಗೆ ಮತದಾನದ ಹಕ್ಕಿನಿಂದ ಶುರುವಾಗಿ ಹೆಣ್ಣು ಎರಡನೇ ದರ್ಜೆ ಪ್ರಜೆಯಲ್ಲ ಎಂದು ಸಾರುವ ಎಲ್ಲ ಹೆಜ್ಜೆಗಳನ್ನಿಟ್ಟವು. ರಾಣಿಯರು ಮತ್ತು ಪ್ರಧಾನಿಯ ಪತ್ನಿ ತಲೆಮುಸುಕು ಧರಿಸದೇ ಇರುವುದನ್ನು ಇಸ್ಲಾಮಿಕ್ ಗುಂಪೊಂದು ಪ್ರತಿಭಟಿಸಿ, ಶರಿಯತ್ ಪಾಲನೆ ಆಗಬೇಕು ಎಂದಾಗ, 1953ರಿಂದ ಪ್ರಧಾನಿಯಾಗಿದ್ದ ಮೊಹಮದ್ ದಾವುದ್ ಖಾನ್ ಮುಕ್ತ ಚರ್ಚೆಗೆ ಆಹ್ವಾನಿಸಿ, ಶರಿಯತ್‍ನಲ್ಲಿ ಎಲ್ಲಿ ಈ ನಿಯಮ ಇದೆ ತೋರಿಸಿ ಎಂದಾಗ, ತೋರಿಸಲು ಈ ಗುಂಪು ವಿಫಲವಾಯಿತು. ಆಗ ಪರ್ದಾ ನಿಷೇಧದ ಬಗೆಗೂ ಸರ್ಕಾರ ಯೋಚಿಸಿತು.

1978ರಲ್ಲಿ ಬಂದ ಕಮ್ಯುನಿಸ್ಟ್ ಸರ್ಕಾರವು ಮಹಿಳಾ ಸಮಾನತೆಯ ಕೆಲಸಗಳನ್ನು ವ್ಯಾಪಕವಾಗಿ ಆರಂಭಿಸಿತು. ಇದು, ಮಹಿಳೆಯರು ತಮ್ಮ ಬಾಳಸಂಗಾತಿಯನ್ನು ಮತ್ತು ತಮ್ಮ ಉದ್ಯೋಗಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನೂ ನೀಡಿತು. ಬದಲಾವಣೆ ಗ್ರಾಮೀಣ ಭಾಗಗಳಿಗೂ ಪಸರಿಸಿತು. ಇದು, ಮೂಲಭೂತವಾದಿ ಮುಜಾಹಿದೀನ್ ಪಡೆಯ ಅಸಹನೆಯನ್ನು ಹೆಚ್ಚಿಸಿತು. ಮುಂದೆ ಸೋವಿಯತ್ ಬೆಂಬಲಿತ ಕಮ್ಯುನಿಸ್ಟರ ವಿರುದ್ಧ ಅಮೆರಿಕ ಇದೇ ಮುಜಾಹಿದೀನ್‍ಗಳಿಗೆ ಬೆಂಬಲ ನೀಡಿದ್ದೇ ಮೂಲಭೂತವಾದಿಗಳು ಇಂದಿನ ತಾಲಿಬಾನ್ ತನಕ ಭೂತಾಕಾರವಾಗಿ ಬೆಳೆಯಲು ಕಾರಣವಾಯಿತು. ಕಳೆದ ಇಪ್ಪತ್ತು ವರ್ಷಗಳಲ್ಲಿ ಮಹಿಳೆಯರು ಮತ್ತೆ ಬೀದಿಗಳಲ್ಲಿ, ಪಾರ್ಲರ್‌ಗಳಲ್ಲಿ, ವಿರಳವಾಗಿ ಶಾಲೆ ಕಾಲೇಜುಗಳಲ್ಲಿ, ಉದ್ಯೋಗಗಳಲ್ಲಿ ಕಾಣಿಸಿದರಾದರೂ ನಿರಂತರವಾಗಿ ಅಲ್ಲಿ ಮಹಿಳೆಯರ ಅಪಹರಣ, ಅತ್ಯಾಚಾರ, ಕೊಲೆಗಳು ನಡೆದಿವೆ. 2017ರಿಂದ 2019ರ ತನಕ ಹೆಣ್ಣುಮಕ್ಕಳ ಶಾಲೆಗಳ ಮೇಲೆ ಮುನ್ನೂರಕ್ಕೂ ಹೆಚ್ಚು ಬಾಂಬ್ ದಾಳಿ ನಡೆದಿದೆ. 2019ರೊಂದರಲ್ಲೇ ಮಹಿಳೆಯರ ಮೇಲಿನ ಹಿಂಸೆಯ 4,639 ಕೇಸುಗಳು ದಾಖಲಾಗಿವೆ.

‘ಕಾಬೂಲಿವಾಲಾನ ಬೆಂಗಾಲಿ ಹೆಂಡತಿ’ ಎಂಬ ಆತ್ಮಚರಿತ್ರೆ ಬರೆದಿದ್ದ, ತಾಲಿಬಾನ್ ಆಡಳಿತದಲ್ಲಿದ್ದಾಗ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ, ಕೋಲ್ಕತ್ತದ ಸುಶ್ಮಿತಾ ಬ್ಯಾನರ್ಜಿ 2013ರಲ್ಲಿ ಮತ್ತೆ ಅಲ್ಲಿಗೆ ತೆರಳಿದ ಸಂದರ್ಭದಲ್ಲಿ ಉಗ್ರರಿಂದ ಆಕೆಯ ಹತ್ಯೆಯಾಯಿತು. ಹೆಣ್ಣಿನ ಕುರಿತಾದ ಮೂಲಭೂತ ತಿಳಿವಳಿಕೆ ಅಲ್ಲಿನ್ನೂ ಬದಲಾಗಿರಲಿಲ್ಲ. ಮೇಲ್ನೋಟದ ಬದಲಾವಣೆ ಮಾತ್ರ ಪುನಃ ಅಲ್ಲಿ ಕಾಣಿಸಿತ್ತು. ತಾಲಿಬಾನೀಯರ ಕುಕೃತಿ ಮತ್ತು ವಿಕೃತಿಗಳಿಗೆ ಸಮರ್ಥನೆ ಹಾಗೂ ಮಾನ್ಯತೆಯನ್ನು ಅದಾಗಲೇ ಉತ್ಪಾದಿಸಲಾಗಿತ್ತು. ಹೀಗಾಗಿ ಹೆಣ್ಣಿನ ಸಹಜ ಪ್ರಕೃತಿಯ ಮೇಲೆ ಆಕ್ರಮಣಕ್ಕೂ ಸಮ್ಮತಿಯನ್ನು ಉತ್ಪಾದಿಸಲಾಗಿತ್ತು. ಇಂತಹ ಸಮ್ಮತಿ ವಿಶ್ವದ ಹಲವೆಡೆ ಇದೆ. ಕೆಲವು ಭೀಕರವಾಗಿರುತ್ತವೆ. ಇನ್ನು ಕೆಲವು ಪ್ರಜಾಪ್ರಭುತ್ವದೊಳಗಡೆ ಅಗೋಚರವಾಗಿರುತ್ತವೆ.

ಸಮತೆಯೇ ಸಹಜವೆನ್ನಿಸುವ ಬೇರುಮಟ್ಟದ ಬದಲಾವಣೆ ಮನುಷ್ಯ ಚರಿತ್ರೆಯಲ್ಲಿ ಅಡಕಗೊಳ್ಳುವ ತನಕ ಈ ಹಿಂಸೆಗಳ ರೌದ್ರ ನರ್ತನ ಜೋಕಾಲಿಯಾಡುತ್ತಲೇ ಇರುತ್ತದೆ.

ಲೇಖಕಿ: ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.