ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಚೀನಾ: ಆರ್ಥಿಕ ಪವಾಡದ ಏಳು–ಬೀಳು

ವಿದೇಶಗಳಿಂದ ಪ್ರತಿರೋಧ ಇಲ್ಲದೆ ಚೀನಾ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ಕಾಲ ಮುಗಿದುಹೋಗಿದೆ
ಆ್ಯನ್ನಿ ಸ್ಟೀವನ್ಸನ್–ಯಾಂಗ್
Published 22 ಮೇ 2024, 23:30 IST
Last Updated 22 ಮೇ 2024, 23:30 IST
ಅಕ್ಷರ ಗಾತ್ರ

ಚೀನಾಕ್ಕೆ ಈಚೆಗೆ ಪ್ರತ್ಯೇಕವಾಗಿ ಭೇಟಿ ನೀಡಿದ್ದ ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಮತ್ತು ಹಣಕಾಸು ಸಚಿವ ಜಾನೆಟ್ ಯೆಲನ್ ಅವರು ಒಂದೇ ಸಂದೇಶ ರವಾನಿಸಿದರು. ತಯಾರಿಕಾ ವಲಯದಲ್ಲಿ ಚೀನಾ ಹೊಂದಿರುವ ಅತಿಯಾದ ಸಾಮರ್ಥ್ಯದ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಚೀನಾದ ಕಡಿಮೆ ವೆಚ್ಚದ ಉತ್ಪನ್ನಗಳು ವಿಪರೀತವಾಗುತ್ತಿವೆ, ಜಾಗತಿಕ ವ್ಯಾಪಾರ ವಹಿವಾಟಿಗೆ ಸಮಸ್ಯೆಯಾಗುತ್ತಿದೆ, ಅಮೆರಿಕದ ಉದ್ದಿಮೆಗಳು ಹಾಗೂ ಕಾರ್ಮಿಕರು ಸ್ಪರ್ಧೆ ಒಡ್ಡಲು ಹೆಣಗುತ್ತಿದ್ದಾರೆ ಎಂಬುದು ಆ ಸಂದೇಶ.

ಆದರೆ ಅವರು ಹೇಳಿದ ಮಾತು ಚೀನಾದ ನಾಯಕರಿಗೆ ಇಷ್ಟವಾಗಲಿಲ್ಲ. ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಬೇಜವಾಬ್ದಾರಿಯ ನೀತಿಗಳು, ಕಮ್ಯುನಿಸ್ಟ್ ಪಕ್ಷ ಹೊಂದಿರುವ ಅತಿಯಾದ ನಿಯಂತ್ರಣ ಮತ್ತು ಸುಧಾರಣೆಯ ಭರವಸೆಗಳನ್ನು ಈಡೇರಿಸದೇ ಇರುವುದು ಚೀನಾದ ಅರ್ಥವ್ಯವಸ್ಥೆಯನ್ನು ಮುಂದೆ ಸಾಗಲಾಗದ ಸ್ಥಿತಿಗೆ ತಂದಿರಿಸಿವೆ. ಅಲ್ಲಿನ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ, ಆರ್ಥಿಕ ಬೆಳವಣಿಗೆ ನಿಧಾನವಾಗುತ್ತಿದೆ. ಇದರಿಂದ ಹೊರಬರಲು ಚೀನಾದ ನಾಯಕರಿಗೆ ಇರುವ ಒಂದೇ ದಾರಿ ಕಡಿಮೆ ಬೆಲೆಗೆ ರಫ್ತು ಉತ್ತೇಜಿಸುವುದು.

ಅಂದರೆ, ಚೀನಾದಿಂದ ರಫ್ತಾಗುವ ಸರಕುಗಳ ಪ್ರವಾಹ ಮುಂದುವರಿಯುತ್ತದೆ, ಅಮೆರಿಕ ಹಾಗೂ ಇತರ ವಾಣಿಜ್ಯ ಪಾಲುದಾರರ ಜೊತೆ ಬಿಕ್ಕಟ್ಟು ಹೆಚ್ಚಲಿದೆ, ನಿರಾಶಾದಾಯಕ ಆರ್ಥಿಕ ಚಿತ್ರಣ ಕಂಡು ಚೀನಾದ ಜನ ಇನ್ನಷ್ಟು ಅಸಂತುಷ್ಟರಾಗುತ್ತಾರೆ, ಕಮ್ಯುನಿಸ್ಟ್ ಪಕ್ಷದ ನಾಯಕರು ಇನ್ನಷ್ಟು ದಮನಕಾರಿ ಕ್ರಮಗಳಿಗೆ ಮುಂದಾಗುತ್ತಾರೆ. ಸಮಸ್ಯೆಯ ಬೇರು ಇರುವುದು ಕಮ್ಯುನಿಸ್ಟ್ ಪಕ್ಷವು ಚೀನಾದ ಅರ್ಥವ್ಯವಸ್ಥೆಯ ಮೇಲೆ ಅತಿಯಾದ ಹಿಡಿತ ಹೊಂದಿರುವಲ್ಲಿ. ಆದರೆ ಅದು ಬದಲಾಗುವುದಿಲ್ಲ. ಆ ಹಿಡಿತವು ಚೀನಾದ ರಾಜಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗ; ಹಿಡಿತವು ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಅಧಿಕಾರಾವಧಿಯಲ್ಲಿ ಹೆಚ್ಚಾಗಿದೆ. ಬೆಳವಣಿಗೆ ಸಾಧಿಸುವುದಕ್ಕೆ ಬಹುತೇಕ ಅರ್ಥಶಾಸ್ತ್ರಜ್ಞರು ಸೂಚಿಸುವುದು ಖಾಸಗಿ ವಲಯವನ್ನು ಮುಕ್ತವಾಗಿಸುವ ಹಾಗೂ ಚೀನಾದ ಗ್ರಾಹಕರಿಗೆ ಹೆಚ್ಚು ಖರ್ಚು ಮಾಡಲು ಶಕ್ತಿ ತುಂಬುವ ಕ್ರಮಗಳನ್ನು. ಆದರೆ ಇದು ಅಲ್ಲಿ ಒಪ್ಪಿತವಾಗುವುದಿಲ್ಲ.

1989ರಲ್ಲಿ ಕಮ್ಯುನಿಸ್ಟ್‌ ಪಕ್ಷಕ್ಕೆ ಬದಲಾಗಲು ಸುವರ್ಣಾವಕಾಶ ಇತ್ತು. ಅದಕ್ಕಿಂತ ದಶಕದ ಹಿಂದೆ ಆರಂಭವಾದ ಸುಧಾರಣೆಗಳು ಖಾಸಗಿ ವಲಯದ ಬೆಳವಣಿಗೆಗೆ, ಹೊಸ ಸ್ವಾತಂತ್ರ್ಯದ ಬಯಕೆಗೆ ಇಂಬು ಕೊಟ್ಟಿದ್ದವು ಎಂಬುದನ್ನು ತಿಯಾನನ್‌ಮೆನ್ ಸ್ಕ್ವೇರ್‌ ಪ್ರತಿಭಟನೆಗಳು ತೋರಿಸಿದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರಿ ಸಂಸ್ಥೆಗಳನ್ನು ಉದಾರೀಕರಣಕ್ಕೆ ತೆರೆದಿದ್ದರೆ ಪಕ್ಷದ ನಿಯಂತ್ರಣ ಕುಗ್ಗುತ್ತಿತ್ತು. ಪಕ್ಷಕ್ಕೆ ಅದು ಬೇಕಾಗಿರಲಿಲ್ಲ. ಚೀನಾದ ನಾಯಕರು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಲು, ಪಕ್ಷದ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಲು, ಅರ್ಥವ್ಯವಸ್ಥೆಗೆ ಬಲ ತುಂಬಲು ಸರ್ಕಾರದ ಹೂಡಿಕೆಯನ್ನೇ ನೆಚ್ಚಿಕೊಳ್ಳಲು ತೀರ್ಮಾನಿಸಿದರು. 

ಇದರ ಬಗ್ಗೆ ಬಹುಕಾಲ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳು ತಲೆ ಎತ್ತಿದಾಗ ಜನರನ್ನು ಸಮಾಧಾನಪಡಿಸಲು ಚೀನಾದ ಅಧಿಕಾರಿಗಳು ಉದ್ಯಮ ಹಾಗೂ ರಿಯಲ್ ಎಸ್ಟೇಟ್ ವಲಯದ ಮೇಲೆ ಹಣ ಸುರಿದರು. ಹೂಡಿಕೆಯ ಕಾರಣದ ಬೆಳವಣಿಗೆಯು ಚೆನ್ನಾಗಿ ಕಂಡಿತು. ಆದರೆ ಅದು ಚೀನಾಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಕ್ಕಿಂತ ಹೆಚ್ಚಾಗಿತ್ತು. ಇದರ ಪರಿಣಾಮವಾಗಿ ಚೀನಾದ ಚಹರೆ ಗಾಸಿಗೊಳಗಾಯಿತು. ಖಾಲಿ ನಗರಗಳು, ಜನರಿಲ್ಲದ ಹೆದ್ದಾರಿಗಳು, ಕೆಲವೇ ವಿಮಾನಗಳಿರುವ ನಿಲ್ದಾಣಗಳು ಕಂಡುಬಂದವು. ಉದ್ಯಮದ ಮೇಲಿನ ಹೂಡಿಕೆಯ ಪರಿಣಾಮವಾಗಿ ರಫ್ತು ಬೃಹದಾಕಾರವಾಗಿ ಬೆಳೆಯಿತು. ವಿದೇಶಿ ತಯಾರಕರ ಪ್ರಾಬಲ್ಯವಿದ್ದ ಉದ್ದಿಮೆಗಳಲ್ಲಿ ಚೀನಾ ಬೆಳವಣಿಗೆ ಕಂಡಿತು. ಅಮೆರಿಕ, ಯುರೋಪ್ ಮತ್ತು ಜಪಾನಿನ ಕಂಪನಿಗಳು ತಮ್ಮ ತಾಂತ್ರಿಕ ಪರಿಣತಿಯನ್ನು ಪ್ರಜ್ಞಾಪೂರ್ವಕವಾಗಿ ಚೀನಾಕ್ಕೆ ನೀಡಿದವು. ಇದಕ್ಕೆ ಪ್ರತಿಯಾಗಿ ತಮಗೆ ಬೆಳೆಯುತ್ತಲೇ ಇರುವ ಚೀನಾದ ಮಾರುಕಟ್ಟೆ ಲಭ್ಯವಾಗುತ್ತದೆ ಎಂದು ಅವು ಭಾವಿಸಿದ್ದವು. ಇದರಿಂದಾಗಿ ಪಾಶ್ಚಿಮಾತ್ಯರಲ್ಲಿ ತಯಾರಿಕೆ ಕುಸಿಯಿತು, ಇತ್ತ ಚೀನಾ ತನ್ನ ಮಾರುಕಟ್ಟೆಯನ್ನು ರಕ್ಷಿಸಿಕೊಂಡಿತು. ಚೀನಾದಿಂದ ಬರುತ್ತಿದ್ದ ಅಗ್ಗದ ಉತ್ಪನ್ನಗಳು ಅಮೆರಿಕದ ಹಣದುಬ್ಬರವನ್ನು ಒಂದು ತಲೆಮಾರಿನ ಕಾಲ ಕಡಿಮೆ ಮಟ್ಟದಲ್ಲಿ ಇರಿಸಿದವು. ಚೀನಾದ ಆರ್ಥಿಕ ಬೆಳವಣಿಗೆಯು ಕಾಲಕ್ರಮೇಣ ರಾಜಕೀಯ ಉದಾರೀಕರಣಕ್ಕೆ ದಾರಿಮಾಡಿಕೊಡುತ್ತದೆ ಎಂದು ಪಶ್ಚಿಮದ ಜಗತ್ತು ಭಾವಿಸಿತು. ಆದರೆ ಅದು ಸಾಕಾರಗೊಳ್ಳಲೇ ಇಲ್ಲ.

ಸರ್ಕಾರದ ಹೂಡಿಕೆ ಯಜ್ಞಕ್ಕೆ ಹಣ ಹೊಂದಿಸಲು ಚೀನಾ, ಸ್ಥಳೀಯ ‍ಮಟ್ಟದಲ್ಲಿ ಜಮೀನು ಅಡ ಇರಿಸುವುದಕ್ಕೆ ಅವಕಾಶ ನೀಡಿತು. ಸ್ಥಳೀಯ ಸರ್ಕಾರಗಳು ಹುಚ್ಚುಹತ್ತಿಸಿಕೊಂಡಂತೆ ಸಾಲ ಪಡೆದವು, ಸಾಲ ಮರುಪಾವತಿಗೆ ನಿರ್ದಿಷ್ಟ ಯೋಜನೆಗಳೇ ಇರಲಿಲ್ಲ. ಈಗ ಅವುಗಳಲ್ಲಿ ಹಲವು ಸರ್ಕಾರಗಳು ಸಾಲದಲ್ಲಿ ಮುಳುಗಿವೆ. ಅವು ಹಿರಿಯ ನಾಗರಿಕರ ಆರೋಗ್ಯಸೇವಾ ವೆಚ್ಚ ತಗ್ಗಿಸುತ್ತಿವೆ, ಬಸ್ ಸಂಚಾರ ತಗ್ಗಿಸುತ್ತಿವೆ, ಶಿಕ್ಷಕರಿಗೆ ಸರಿಯಾಗಿ ಸಂಬಳ ಆಗುತ್ತಿಲ್ಲ, ನಾಗರಿಕ ಸೇವೆಗಳಲ್ಲಿ ಇರುವವರ ಸಂಬಳವನ್ನು ಕಡಿಮೆ ಮಾಡಲಾಗಿದೆ. 

ಉದ್ಯೋಗಾವಕಾಶ ಹೆಚ್ಚಿಸಲು ಪಕ್ಷವು ಸ್ಥಳೀಯ ಸರ್ಕಾರಗಳಿಗೆ ಖಾಸಗಿ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹಿಸುವಂತೆ ಕಳೆದ ಎರಡು ವರ್ಷಗಳಿಂದ ಹೇಳುತ್ತಿದೆ. ಇದರ ಪರಿಣಾಮಗಳು ನಿರೀಕ್ಷಿತವಾಗಿಯೇ ಇವೆ. ಉತ್ತರ ಚೀನಾದ ಪ್ರಾಂತ್ಯವೊಂದರಲ್ಲಿ ಗ್ರಾಮ ಕಾರ್ಯದರ್ಶಿಯೊಬ್ಬರು ರಾಜಧಾನಿಯಿಂದ ಬಂದ ಆದೇಶವನ್ನು ಪಾಲಿಸುವ ಹುಮ್ಮಸ್ಸಿನಲ್ಲಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ನಕಲಿ ಕಂಪನಿಗಳನ್ನು ಆರಂಭಿಸಲು ಹೇಳಿದ್ದರು ಎನ್ನಲಾಗಿದೆ. ಹಳ್ಳಿಯ ಒಬ್ಬರು ಮೂರು ಅಂಗಡಿಗಳನ್ನು ಒಂದೇ ವಾರದಲ್ಲಿ ಆರಂಭಿಸಿದರು, ಇನ್ನೊಬ್ಬ ವ್ಯಕ್ತಿ 20 ವಾಣಿಜ್ಯ ಘಟಕಗಳಿಗೆ ಪ‍ರವಾನಗಿ ಕೋರಿ ಅರ್ಜಿ ಸಲ್ಲಿಸಿದರು.

ಚೀನಾದ ನಗರ ಪ್ರದೇಶಗಳ ಶೇಕಡ 21ರಷ್ಟು ಯುವಕರಿಗೆ ಉದ್ಯೋಗವಿಲ್ಲ ಎಂಬುದನ್ನು ಸರ್ಕಾರದ ತಿಂಗಳ ಅಂಕಿ–ಅಂಶಗಳು ಬಹಿರಂಗಪಡಿಸಿದ ನಂತರ, ಆ ಅಂಕಿ–ಅಂಶ ಪ್ರಕಟಿಸುವುದನ್ನೇ ಅಧಿಕಾರಿಗಳು ನಿಲ್ಲಿಸಿಬಿಟ್ಟರು. ಈ ವರ್ಷದ ಆರಂಭದಲ್ಲಿ ಈ ಪದ್ಧತಿಯನ್ನು ಹೊಸ ಕ್ರಮದಲ್ಲಿ ಮತ್ತೆ ಆರಂಭಿಸಲಾಯಿತು. ಜಾದೂ ನಡೆಯಿತು! ನಿರುದ್ಯೋಗ ಪ್ರಮಾಣ ಶೇ 15ಕ್ಕೆ ತಗ್ಗಿತ್ತು.

ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿಯುತ್ತಿರುವ ಕಾರಣ ಸರ್ಕಾರವು ಈ ವಲಯಕ್ಕೆ ಉತ್ತೇಜನ ನೀಡುತ್ತಲೇ ಇರಲು ಸಾಧ್ಯವಿಲ್ಲ. ಸರ್ಕಾರವು ಗ್ರಾಹಕರ ಬೇಡಿಕೆ ಹೆಚ್ಚಿಸುವ ಕ್ರಮದ ಬಗ್ಗೆ ಆಲೋಚಿಸುತ್ತಿದೆಯಾದರೂ, ಜನರು ವೆಚ್ಚಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ಸರ್ಕಾರವು ಮತ್ತೆ ತಯಾರಿಕಾ ವಲಯವನ್ನು ನೆಚ್ಚಿಕೊಳ್ಳುತ್ತಿದೆ. ಕೈಗಾರಿಕಾ ಸಾಮರ್ಥ್ಯವೃದ್ಧಿಗೆ ಹಣ ಸುರಿಯುತ್ತಿದೆ. ಆಂತರಿಕ ಬೇಡಿಕೆ ತಗ್ಗಿರುವ ಕಾರಣ ಈ ಉತ್ಪನ್ನಗಳಲ್ಲಿ ಹೆಚ್ಚಿನವನ್ನು ರಫ್ತು ಮಾಡಬೇಕಿದೆ. ಆದರೆ, ಚೀನಾ ತನ್ನ ಉತ್ಪನ್ನಗಳನ್ನು  ವಿದೇಶಗಳಿಂದ ಪ್ರತಿರೋಧ ಎದುರಿಸದೆ ಮಾರಾಟ ಮಾಡುವ ಕಾಲ ಮುಗಿದುಹೋಗಿದೆ. ಮೇಡ್ ಇನ್ ಚೀನಾ ಉತ್ಪನ್ನಗಳಿಂದ ತಮ್ಮ ಮಾರುಕಟ್ಟೆಗಳನ್ನು ರಕ್ಷಿಸಿಕೊಳ್ಳಲು ಹಲವು ದೇಶಗಳು ಕ್ರಮ ಕೈಗೊಳ್ಳುತ್ತಿವೆ. 

ಚೀನಾದ ಆರ್ಥಿಕ ಮಾದರಿಯು ಈಗಲೂ ಬಹುವಾಗಿ ನೆಚ್ಚಿಕೊಂಡಿರುವುದು ಚಾಲ್ತಿಯಲ್ಲಿ ಇರುವ ತಂತ್ರಜ್ಞಾನ ನಕಲು ಮಾಡುವುದನ್ನು. ದೀರ್ಘಾವಧಿ ಸಂಶೋಧನೆ, ಅದರಿಂದಾಗಿ ಸಿಗುವ ವಾಣಿಜ್ಯ ಪ್ರಯೋಜನಗಳನ್ನು ಅದು ನೆಚ್ಚಿಕೊಂಡಿಲ್ಲ. ಹೀಗಾಗಿ ಚೀನಾದ ಪಾಲಿಗೆ ಉಳಿದುಕೊಳ್ಳುವ ಮಾರ್ಗ ಬೃಹತ್ ಪ್ರಮಾಣದಲ್ಲಿ ತಯಾರಿಕೆಗೆ ಮುಂದಾಗುವುದು ಮಾತ್ರ.

ಚೀನಾದ ನಾಯಕರು ದೇಶದ ಕರೆನ್ಸಿಯ ಮೌಲ್ಯವನ್ನು ತಗ್ಗಿಸುವ ಆರ್ಥಿಕ ಒತ್ತಡವನ್ನು ಎದುರಿಸಲಿದ್ದಾರೆ. ಇದರ ಪರಿಣಾಮವಾಗಿ ಚೀನಾದಲ್ಲಿ ತಯಾರಾಗುವ ಉತ್ಪನ್ನಗಳು ಅಮೆರಿಕದ ಡಾಲರ್ ಲೆಕ್ಕದಲ್ಲಿ ಇನ್ನಷ್ಟು ಅಗ್ಗವಾಗಲಿವೆ. ಆಗ ಚೀನಾದ ರಫ್ತು ಪ್ರಮಾಣವು ಜಾಸ್ತಿ ಆಗುತ್ತದೆ, ಚೀನಾದ ವಾಣಿಜ್ಯ ಪಾಲುದಾರ ದೇಶಗಳ ಅಸಮಾಧಾನ ಹೆಚ್ಚಾಗುತ್ತದೆ. ಇದರ ಜೊತೆಯಲ್ಲೇ, ಕರೆನ್ಸಿಯ ಮೌಲ್ಯವನ್ನು ತಗ್ಗಿಸುವುದರ ಪರಿಣಾಮವಾಗಿ ವಿದೇಶಿ ಉತ್ಪನ್ನಗಳು ಹಾಗೂ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ವೆಚ್ಚ ಜಾಸ್ತಿ ಆಗುತ್ತದೆ. ಆಗ ಚೀನಾದ ಗ್ರಾಹಕರ ಹಾಗೂ ಅಲ್ಲಿನ ಉದ್ದಿಮೆಗಳ ಶಕ್ತಿ ಉಡುಗುತ್ತದೆ. ಅಲ್ಲಿನ ಶ್ರೀಮಂತರಿಗೆ ತಮ್ಮ ಹಣವನ್ನು ಚೀನಾದಿಂದ ಹೊರಗೆ ಸಾಗಿಸುವುದಕ್ಕೆ ಉತ್ತೇಜನ ಸಿಕ್ಕಂತೆ ಆಗುತ್ತದೆ.

ದಿ ನ್ಯೂಯಾರ್ಕ್ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT