ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ತಾರತಮ್ಯ ಇನ್ನೂ ಯಾಕಿದೆ?ಟಿ.ಎಸ್‌.ವೇಣುಗೋಪಾಲ್‌ ಅವರ ವಿಶ್ಲೇಷಣೆ

ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯ ಸ್ಥಿತಿ: ನೊಬೆಲ್‌ ಪ್ರಶಸ್ತಿ ವಿಜೇತೆ ಕಣ್ಣಲ್ಲಿ
Published 20 ಅಕ್ಟೋಬರ್ 2023, 23:38 IST
Last Updated 20 ಅಕ್ಟೋಬರ್ 2023, 23:38 IST
ಅಕ್ಷರ ಗಾತ್ರ

‘ಕೆಲಸಕ್ಕೆ ಹೋಗದೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡು ಇರುವ ಮಹಿಳೆ ಮಾತ್ರ ಅಲ್ಲ, ಮಗು ಇಡುವ ಮೊದಲ ಹೆಜ್ಜೆಯನ್ನು ಸಂಭ್ರಮಿಸಲಾಗದೆ ಹೊರಗೆ ಮೆರೆಯುವ ಗಂಡಸು ಕೂಡ ಏನೋ ಕಳೆದುಕೊಳ್ಳುತ್ತಿರುತ್ತಾನೆ’.

ಇದು, ಈ ವರ್ಷ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕ್ಲಾಡಿಯಾ ಗೋಲ್ಡಿನ್ ಮಾತು.

ಗೋಲ್ಡಿನ್ ಮೂಲತಃ ಕಾರ್ಮಿಕ ಅರ್ಥಶಾಸ್ತ್ರಜ್ಞೆ. ಜೊತೆಗೆ ಅರ್ಥಶಾಸ್ತ್ರದ ಇತಿಹಾಸತಜ್ಞೆ. ಈಕೆ, ಕಳೆದ 200 ವರ್ಷಗಳಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಸ್ಥಿತಿಯಲ್ಲಿ ಆಗಿರುವ ಬದಲಾವಣೆಯನ್ನು ಅಧ್ಯಯನ ಮಾಡಿದ್ದಾರೆ. ಅದೊಂದು ಸವಾಲಿನ ಕೆಲಸ. ಇನ್ನೂರು ವರ್ಷಗಳ ಹಿಂದಿನ ಅಂಕಿಅಂಶಗಳು ಸಿಗುವುದು ಸುಲಭವಲ್ಲ. ಪತ್ತೇದಾರಿಣಿಯಂತೆ ಎಲ್ಲಾ ಮೂಲಗಳನ್ನು ಜರಡಿಯಾಡಿ, ಮಾಹಿತಿ ಕಲೆ ಹಾಕಿದ್ದಾರೆ.

ಹಿಂದೆಲ್ಲಾ ಮಹಿಳೆಯ ವೃತ್ತಿಯನ್ನು ‘ಪತ್ನಿ’ ಎಂದಷ್ಟೇ ದಾಖಲಿಸಲಾಗುತ್ತಿತ್ತು. ಅವರಲ್ಲಿ ಹಲವರು ಹೊಲದಲ್ಲೋ ಗಂಡಂದಿರ ಸಣ್ಣಪುಟ್ಟ ಉದ್ದಿಮೆಗಳಲ್ಲೋ ದುಡಿಯುತ್ತಿದ್ದರು. ದಾಖಲೆಗಳು ಹೇಳುವುದಕ್ಕಿಂತ ಐದುಪಟ್ಟು ಹೆಚ್ಚು ಮಹಿಳೆಯರು ಮನೆಯಾಚೆ ಕೆಲಸ ಮಾಡುತ್ತಿದ್ದರು ಅನ್ನುತ್ತಾರೆ ಗೋಲ್ಡಿನ್. ಆದರೆ ಹಾಗೆ ದುಡಿಯುತ್ತಿದ್ದ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಕಡಿಮೆ ಇತ್ತು. ಜೊತೆಗೆ ಸಿಗುತ್ತಿದ್ದ ವೇತನವೂ ಪುರುಷರಿಗಿಂತ ಕಡಿಮೆಯೇ. ಯಾಕೆ ಹೀಗೆ? ಈ ಪ್ರಶ್ನೆಯ ಬೆನ್ನುಹತ್ತಿ ಹೊರಟಿದ್ದಕ್ಕೇ ಗೋಲ್ಡಿನ್ ಅವರಿಗೆ ನೊಬೆಲ್ ಪ್ರಶಸ್ತಿ ದಕ್ಕಿದ್ದು.

ಈ ಪ್ರಶ್ನೆ ಸಮಾನತೆಯ ಕಾರಣಕ್ಕಷ್ಟೇ ಮುಖ್ಯವಲ್ಲ. ಆರ್ಥಿಕತೆ ಬೆಳೆಯುವುದಕ್ಕೂ ತನ್ನ ಜನರಲ್ಲಿರುವ ನೈಪುಣ್ಯವನ್ನು ಬಳಸಿಕೊಳ್ಳುವುದು ಒಳ್ಳೆಯದು. ಮಹಿಳೆಯರ ಪ್ರತಿಭೆಯನ್ನು ಬಳಸಿಕೊಳ್ಳುವುದು ಜಗತ್ತಿನ ಅಭಿವೃದ್ಧಿಯ ದೃಷ್ಟಿಯಿಂದಲೂ ಮುಖ್ಯ. ಆರ್ಥಿಕತೆ ಬೆಳೆದರೆ ಮಹಿಳೆಯರ ಸ್ಥಿತಿ ಸುಧಾರಿಸುತ್ತದೆ. ಕೆಲಸಕ್ಕೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಬರುತ್ತಾರೆ. ಅವರ ವರಮಾನ ಹೆಚ್ಚುತ್ತದೆ ಎಂದೆಲ್ಲಾ ಭಾವಿಸಿಕೊಂಡಿದ್ದೇವೆ. ಗೋಲ್ಡಿನ್ ಇದೊಂದು ಮಿಥ್ಯೆ ಅನ್ನುತ್ತಾರೆ. ಪುರಾವೆಯಾಗಿ ಅಮೆರಿಕದ ಎರಡು ಶತಮಾನಗಳ ಅಂಕಿಅಂಶಗಳನ್ನು ನಮ್ಮ ಮುಂದಿಟ್ಟು ಇಡೀ ಚರಿತ್ರೆಯನ್ನೇ ಕಟ್ಟಿಕೊಡುತ್ತಾರೆ.
 
200 ವರ್ಷಗಳ ಹಿಂದೆ ಅಮೆರಿಕದ ಆರ್ಥಿಕತೆ ಬಹುತೇಕ ಕೃಷಿಯನ್ನೇ ಆಧರಿಸಿತ್ತು. ಹೆಚ್ಚಿನ ಮಹಿಳೆಯರು ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದರು. 19ನೇ ಶತಮಾನದ ಪ್ರಾರಂಭದಲ್ಲಿ ಕೈಗಾರಿಕಾ ಕ್ರಾಂತಿ ಪ್ರಾರಂಭವಾಯಿತು. ಕೃಷಿಗೆ ಹೋಲಿಸಿದರೆ ಕಾರ್ಖಾನೆಗಳಲ್ಲಿ ಹೆಚ್ಚಿನ ವೇತನ ಸಿಗುತ್ತಿತ್ತು. ಸುಮಾರಾಗಿ ಗಂಡಸರಿಗೆ ಸಿಗುವಷ್ಟೇ ಸಿಗುತ್ತಿತ್ತು. ಆದರೆ ವಿವಾಹಿತ ಮಹಿಳೆಯರಿಗೆ ಈ ಸೌಲಭ್ಯ ಬಳಸಿಕೊಳ್ಳಲು ಆಗುತ್ತಿರಲಿಲ್ಲ. ಹಾಗೆ ಕೆಲಸಕ್ಕೆ ಹೋಗುವ ಮಹಿಳೆಯರನ್ನು ಆಗ ತಿರಸ್ಕಾರ ಭಾವದಿಂದ ನೋಡಲಾಗುತ್ತಿತ್ತು. ಜೊತೆಗೆ ಹೊರಗೆ ಕೆಲಸಕ್ಕೆ ಹೋದರೆ ಮಕ್ಕಳನ್ನು ನೋಡಿಕೊಳ್ಳುವವರ‍್ಯಾರು ಅನ್ನುವ ಸಮಸ್ಯೆಯೂ ಇತ್ತು. ಹೆಚ್ಚಿನ ವಿವಾಹಿತ ಮಹಿಳೆಯರು ಮನೆಯಲ್ಲೇ ಉಳಿದುಕೊಂಡರು. ಅವಿವಾಹಿತ ಮಹಿಳೆಯರಿಗಷ್ಟೇ ಕೆಲಸಕ್ಕೆ ಹೋಗುವುದಕ್ಕೆ ಸಾಧ್ಯವಾಯಿತು.

ಆಗ ಅವಿವಾಹಿತ ಮಹಿಳೆಯರು ಅಷ್ಟಾಗಿ ಓದಿರಲಿಲ್ಲ. ಅವರೆಲ್ಲಾ ಬಟ್ಟೆ ಹೊಲೆಯುವುದು, ಹಣ್ಣು, ತರಕಾರಿಗಳನ್ನು ಪ್ಯಾಕ್ ಮಾಡುವಂತಹ ಕೆಲಸಗಳನ್ನು ಮಾಡಿಕೊಂಡಿದ್ದರು. ಇದಕ್ಕೆ ಯಾವುದೇ ಶಿಕ್ಷಣವೂ ಬೇಕಿರಲಿಲ್ಲ. ಇಂತಹ ಉದ್ಯೋಗಗಳಲ್ಲಿ ಬಡ್ತಿಗೂ ಅವಕಾಶವಿರಲಿಲ್ಲ. ಓದಿಗೆ ಯಾವುದೇ ಉತ್ತೇಜನವೂ ಇರಲಿಲ್ಲ. ಆದರೆ ಆಗ ಬದಲಾವಣೆ ಆಗುವುದಕ್ಕೆ ಪ್ರಾರಂಭವಾಯಿತು. ಸೇವಾ ಕ್ಷೇತ್ರ ತೆರೆದುಕೊಂಡಿತು. ಕಚೇರಿಗಳಲ್ಲಿ ಟೈಪ್‌ರೈಟರ್‌ನಂತಹ ತಂತ್ರಜ್ಞಾನದ ಪ್ರವೇಶದಿಂದ ಕೆಲಸದ ಸ್ವರೂಪವೇ ಬದಲಾಯಿತು. ಉದ್ದಿಮೆಯ ಗಾತ್ರವೂ ಬೆಳೆಯಿತು. ಆಡಳಿತಕ್ಕೆ ಹೆಚ್ಚೆಚ್ಚು ಸಿಬ್ಬಂದಿ ಬೇಕಾದರು. ಹೆಚ್ಚೆಚ್ಚು ಹೆಣ್ಣುಮಕ್ಕಳು ಓದುವುದಕ್ಕೆ ಪ್ರಾರಂಭಿಸಿದರು. ಕಚೇರಿಗಳಲ್ಲಿ ದುಡಿಯುವ ವಾತಾವರಣ ಉತ್ತಮವಾಗಿತ್ತು. ವೇತನವೂ ಸಾಪೇಕ್ಷವಾಗಿ ಚೆನ್ನಾಗಿತ್ತು. ಆದರೆ ಆಗಲೂ ವಿವಾಹಿತ ಮಹಿಳೆಯರಿಗೆ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ಆಗಲಿಲ್ಲ. ಆಗಿದ್ದ ಸಾಮಾಜಿಕ ರೂಢಿಗಳು ಮತ್ತು ಕಾನೂನುಗಳು ಅವರಿಗೆ ಅಡ್ಡಿಯಾಗಿದ್ದವು. ಬಹುತೇಕ ಉದ್ದಿಮೆಗಳು ವಿವಾಹಿತ ಮಹಿಳೆಯರನ್ನು ಕೆಲಸಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಉದ್ಯೋಗಾವಕಾಶಗಳು ಹೆಚ್ಚಿದ್ದರೂ ಮಹಿಳೆಯರಿಗೆ ಅದನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಸರ್ಕಾರವು ಪುರುಷರನ್ನು ಸೈನ್ಯಕ್ಕೆ ನೇಮಿಸಿಕೊಳ್ಳತೊಡಗಿತ್ತು. ಕೆಲಸಕ್ಕೆ ಜನರ ಕೊರತೆಯಿತ್ತು. ಮಹಿಳಾ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿತ್ತು. ವಯಸ್ಸಾದ, ವಿವಾಹಿತ ಮಹಿಳೆಯರು ಗಣನೀಯ ಸಂಖ್ಯೆಯಲ್ಲಿದ್ದರು. ಅವರಿಗೆ ಕಚೇರಿಯಲ್ಲಿ ಕೆಲಸ ಮಾಡಿದ ಅನುಭವವೂ ಇತ್ತು. ವಾಷಿಂಗ್ ಮಷೀನ್, ರೆಫ್ರಿಜಿರೇಟರ್‌ನಂತಹ ತಂತ್ರಜ್ಞಾನದಿಂದ ಮನೆಯ ಕೆಲಸದ ಹೊರೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿತ್ತು. ಮಕ್ಕಳು ಬೆಳೆದು ದೊಡ್ಡವರಾಗಿದ್ದರು. ಕೆಲಸಕ್ಕೆ ಹಿಂತಿರುಗಲು ಮಹಿಳೆಯರೂ ತಯಾರಿದ್ದರು. ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳಬಾರದು ಎನ್ನುವ ನಿಯಮ ರದ್ದಾಯಿತು. ಸಮಾಜವು ವಿವಾಹಿತ ಮಹಿಳೆ ದುಡಿಯುವುದನ್ನು ಒಪ್ಪಿಕೊಳ್ಳತೊಡಗಿತು. ಉದ್ದಿಮೆಗಳೂ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದವು. ಅರೆಕಾಲಿಕ ಹುದ್ದೆಗಳು ಸೃಷ್ಟಿಯಾದವು. ಮಹಿಳೆಯರಿಗೆ ಹೊರಗಿನ ಹಾಗೂ ಮನೆಯೊಳಗಿನ ಕೆಲಸವನ್ನು ಹೊಂದಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು.

1970ರ ನಂತರ ಪರಿಸ್ಥಿತಿ ಇನ್ನಷ್ಟು ಬದಲಾಯಿತು. ಮಹಿಳೆಯರು ಹೆಚ್ಚೆಚ್ಚು ಓದುವುದಕ್ಕೆ ಪ್ರಾರಂಭಿಸಿದರು. ವೃತ್ತಿಶಿಕ್ಷಣದಲ್ಲೂ ಹೆಚ್ಚೆಚ್ಚು ತೊಡಗಿಕೊಂಡರು. ಕೆಲಸಕ್ಕೆ ಬರುವ ಮಹಿಳೆಯರ ಸಂಖ್ಯೆ ಹೆಚ್ಚತೊಡಗಿತು. ಈ ಬದಲಾವಣೆಗೆ ಗೋಲ್ಡಿನ್ ಪ್ರಕಾರ ಎರಡು ಕಾರಣಗಳಿವೆ. ಒಂದು, ಹೆಣ್ಣುಮಕ್ಕಳ ನಿರೀಕ್ಷೆಯಲ್ಲಿ ಬದಲಾವಣೆಯಾಗಿದ್ದು. ಎರಡನೆಯದು, ಗರ್ಭನಿರೋಧಕ ಗುಳಿಗೆಯ ಅನ್ವೇಷಣೆ.

ಹಿಂದಿನ ತಲೆಮಾರಿನ ಹೆಣ್ಣುಮಕ್ಕಳಿಗೆ ಭವಿಷ್ಯದಲ್ಲಿ ತಾವು ಕೆಲಸಕ್ಕೆ ಹೋಗುತ್ತೇವೆ ಅನ್ನುವ ನಿರೀಕ್ಷೆ ಅಷ್ಟಾಗಿ ಇರಲಿಲ್ಲ. ಯಾಕೆಂದರೆ, ಅವರ ತಾಯಂದಿರು ಮಕ್ಕಳಾದ ಮೇಲೆ ಕೆಲಸ ಬಿಟ್ಟು ಮನೆಯಲ್ಲಿದ್ದರು. ಮಕ್ಕಳು ನಿರೀಕ್ಷೆಗಳನ್ನು ರೂಪಿಸಿಕೊಳ್ಳುವುದೇ ತಮ್ಮ ಹಿರಿಯ ತಲೆಮಾರಿನವರನ್ನು ಮತ್ತು ಆಗಿನ ಬದುಕನ್ನು ನೋಡಿ. ಆದರೆ ಈ ಮಕ್ಕಳಲ್ಲಿ ಹೆಚ್ಚಿನವರು ಕೆಲಸಕ್ಕೆ ಹೋದರು. ಕೆಲಸದಲ್ಲಿ ಮುಂದುವರಿದರು. ಅದು ಮುಂದಿನ ತಲೆಮಾರಿನವರಲ್ಲಿ ಉದ್ಯೋಗದ ನಿರೀಕ್ಷೆಯನ್ನು ಹೆಚ್ಚಿಸಿತು. ಉದ್ಯೋಗದ ನಿರೀಕ್ಷೆಗಳು ಹೆಚ್ಚಾದಂತೆ ಹೆಚ್ಚೆಚ್ಚು ಓದುವುದಕ್ಕೆ ಪ್ರಾರಂಭಿಸಿದರು. ಗಂಡುಮಕ್ಕಳನ್ನು ಮೀರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರಾದರು. ವಿಭಿನ್ನ ಬಗೆಯ ವೃತ್ತಿಶಿಕ್ಷಣಗಳನ್ನು, ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳತೊಡಗಿದರು. ಇದು ಗೋಲ್ಡಿನ್ ಹೇಳುವ ‘ಸದ್ದಿಲ್ಲದ ಕ್ರಾಂತಿ’.

ಹಾಗೆಯೇ ಮಹಿಳೆಯರ ಬದುಕನ್ನು ಬದಲಿಸಿದ ಇನ್ನೊಂದು ಬೆಳೆವಣಿಗೆ, ಗರ್ಭನಿರೋಧಕ ಮಾತ್ರೆಗಳ ಅನ್ವೇಷಣೆ. ಅದರಿಂದ ಮಹಿಳೆಯರಿಗೆ ಮದುವೆಯನ್ನು ಮುಂದೂಡುವುದಕ್ಕೆ, ಹೆಚ್ಚೆಚ್ಚು ಓದುವುದಕ್ಕೆ ಸಾಧ್ಯವಾಯಿತು. ತಮ್ಮ ದೇಹದ ಮೇಲೆ ಸ್ವಾತಂತ್ರ್ಯವನ್ನು ತಂದುಕೊಟ್ಟಿತು.

ಆದರೆ ಲಿಂಗ ಆಧಾರಿತ ಆದಾಯದ ಅಂತರ ಹೆಚ್ಚೇ ಇತ್ತು. ಗೋಲ್ಡಿನ್ ಇದನ್ನು ಬೇರೆಯವರಿಗಿಂತ ಭಿನ್ನವಾಗಿ ಗ್ರಹಿಸಿಕೊಳ್ಳುತ್ತಾರೆ. ಕೆಲಸಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ಇಬ್ಬರ ವರಮಾನದಲ್ಲಿ ಅಂತಹ ಅಂತರ ಇರುವುದಿಲ್ಲ. ಕಾಲಕ್ರಮೇಣ ಅಂತರ ಪ್ರಾರಂಭವಾಗುತ್ತದೆ. ಉನ್ನತ ಹುದ್ದೆಗಳಿಗೆ ಹೋದಂತೆ ವೇತನ ಹೆಚ್ಚುತ್ತದೆ. ಆದರೆ ಉನ್ನತ ಹುದ್ದೆಗೆ ಹೋದಂತೆ ಕೆಲಸದ ಅವಧಿ ಹೆಚ್ಚುತ್ತದೆ. ರಾತ್ರಿ ಹೊತ್ತು ಮೀಟಿಂಗ್‌ಗಳು ಇರುತ್ತವೆ. ಹೆಚ್ಚು ಪ್ರಯಾಣಿಸಬೇಕಾಗುತ್ತದೆ. ಅದನ್ನು ಗೋಲ್ಡಿನ್ ಅವರು ದುರಾಸೆಯ ಕೆಲಸಗಳು ಅನ್ನುತ್ತಾರೆ. ಇಬ್ಬರಿರುವ ಕುಟುಂಬಗಳಲ್ಲಿ ಒಬ್ಬರಿಗಷ್ಟೇ ಅಂತಹ ಕೆಲಸಗಳಿಗೆ ಹೋಗುವುದಕ್ಕೆ ಸಾಧ್ಯ. ಮತ್ತೊಬ್ಬರು ಮಕ್ಕಳನ್ನು ನೋಡಿಕೊಳ್ಳುವ ಅಮ್ಮನ ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ‘ಅಮ್ಮನ ಕೆಲಸ’ ಮಹಿಳೆಗೇ ಮೀಸಲು. ಕೆಲಸದ ಮಧ್ಯೆ ಹಲವು ಬಾರಿ ‘ಅಮ್ಮನ ಕೆಲಸ’ಕ್ಕೆ ಮರಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಕೆಲಸಕ್ಕೆ ತಪ್ಪಿಸಿಕೊಳ್ಳುವುದು ಅನಿವಾರ್ಯ. ಆದರೆ ಪುರುಷರಿಗೆ ಈ ಒತ್ತಾಯವಿರುವುದಿಲ್ಲ. ಕಚೇರಿಯ ಕರೆಗೆ ತಕ್ಷಣ ಸ್ಪಂದಿಸುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ಬಡ್ತಿ, ಹೆಚ್ಚಿನ ವೇತನ ಇವೆಲ್ಲಾ ಪುರುಷರಿಗೇ ಹೋಗುತ್ತವೆ. ಆದಾಯದಲ್ಲಿ ಅಂತರ ಹೆಚ್ಚುತ್ತದೆ. ಇದು ಸ್ಥೂಲವಾಗಿ ಗೋಲ್ಡಿನ್ ಅವರ ಚಿಂತನೆಯ ಕ್ರಮ.

ನಿಜ, ಅವರ ಅಧ್ಯಯನ ಬಹುತೇಕ ಅಮೆರಿಕಕ್ಕೆ ಸೀಮಿತವಾಗಿದೆ. ಹಿಂದುಳಿದ ದೇಶಗಳಲ್ಲಿ ವಾಸ್ತವ ಬೇರೆಯೇ ಇರಬಹುದು. ಜೊತೆಗೆ ಗೋಲ್ಡಿನ್ ಯಾವುದೇ ನೀತಿಗಳನ್ನು ಸೂಚಿಸುವುದಿಲ್ಲ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಸೌಲಭ್ಯಗಳು ಹೆಚ್ಚಬಹುದು ಅನ್ನುವ ನಿರೀಕ್ಷೆಯೂ ಹುಸಿಯಾಗಬಹುದು. ಜಾಗತಿಕ ಬೆಳವಣಿಗೆ ನೋಡಿದರೆ, ಇರುವ ಸೌಲಭ್ಯಗಳೂ ತಪ್ಪಿಹೋಗಬಹುದು. ಹೀಗೆ ಹಲವು ಅನುಮಾನಗಳು ಈ ಕುರಿತು ಸಾಧ್ಯ. ಆದರೆ ಗೋಲ್ಡಿನ್ ಅಂಥವರು ಅರ್ಥಶಾಸ್ತ್ರದ ಅಧ್ಯಯನದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಮುನ್ನೆಲೆಗೆ ತರಲು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ.

*****

ಟಿ.ಎಸ್‌.ವೇಣುಗೋಪಾಲ್‌

ಟಿ.ಎಸ್‌.ವೇಣುಗೋಪಾಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT