ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ದುಡಿವ ಮಹಿಳೆ ಮತ್ತು ಇಳಾ ಸಾರಥ್ಯ

Published 6 ಸೆಪ್ಟೆಂಬರ್ 2023, 19:07 IST
Last Updated 6 ಸೆಪ್ಟೆಂಬರ್ 2023, 19:07 IST
ಅಕ್ಷರ ಗಾತ್ರ

ಆ ಹೆಣ್ಣುಮಕ್ಕಳು ಅಹಮದಾಬಾದ್‌ ನಗರದಲ್ಲಿ ಸಗಟು ವ್ಯಾಪಾರಿಗಳಿಂದ ಚಿಲ್ಲರೆ ವ್ಯಾಪಾರಿಗಳ ಅಂಗಡಿಗೆ ಕೈಗಾಡಿಯಲ್ಲಿ ಸಾಮಾನು ಸಾಗಿಸುವವರು. ಬರಿಯ ಸಾಮಾನು ತುಂಬಿದ ಕೈಗಾಡಿಯನ್ನು ಮಾತ್ರವಲ್ಲ ಬದುಕಿನ ಬಂಡಿಯನ್ನೂ ಎಳೆದೆಳೆದು ದಣಿದವರು. ‘ಆಗೆಲ್ಲ ಇಡೀ ದಿನ ಗಾಡಿ ಎಳೆದರೂ ಹೊಟ್ಟೆತುಂಬ ಉಣ್ಣುವಷ್ಟು ಹಣವೂ ಸಿಗುತ್ತಿರಲಿಲ್ಲ. ನಾವು ಸಂಘಟಿತ ಪ್ರಯತ್ನ ಮಾಡಿದ ನಂತರ, ದಿನಗೂಲಿಯಲ್ಲಿ ಸ್ವಲ್ಪ ಹೆಚ್ಚಳವಾಯಿತು. ನಂತರ ಪ್ರತಿದಿನ ಸ್ವಲ್ಪ ದುಡ್ಡು ಉಳಿಸಿ, ನಮ್ಮ ಬ್ಯಾಂಕಿನಲ್ಲಿ ತುಂಬಿದೆವು. ಮಕ್ಕಳನ್ನು ಓದಿಸಿದೆವು. ನಮ್ಮ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು, ಮನೆ ಕಟ್ಟಿಕೊಂಡೆವು. ಈಗ ಮನೆ ನಮ್ಮ ಹೆಸರಿನಲ್ಲಿದೆ!’ ಚಿಕ್ಕ ಕೊಠಡಿಯಲ್ಲಿ ಕೂತಿದ್ದ ಆ ಹೆಣ್ಣುಮಕ್ಕಳು ನಾಲ್ಕೈದು ದಶಕದ ಹಿಂದಿನ ಬದುಕನ್ನು ನೆನಪಿಸಿಕೊಳ್ಳುತ್ತಿದ್ದಾಗ, ಹೊರಗೆ ಮಧ್ಯಾಹ್ನದ ಬಿಸಿಲಿನಲ್ಲಿ ರಸ್ತೆ ಸುಡುಕಾವಲಿಯಂತಿತ್ತು.

‘ಆಗೆಲ್ಲ ನಮ್ಮ ಬದುಕು ನೆತ್ತಿ ಸುಡುವ ಬಿಸಿಲಿನಲ್ಲಿ ಇದ್ದಂತೆ ಇತ್ತು. ಈಗ ತಲೆ ಮೇಲೆ ತಣ್ಣಗಿನ ಸ್ವಂತ ಸೂರು ಇದೆ!’ ಒಬ್ಬಾಕೆ ಉದ್ಗರಿಸಿದಳು. ರಾಧಾನ್‌ಪುರದ ಹೆಣ್ಣುಮಕ್ಕಳು ಕೈಯಲ್ಲಿ ಬಟ್ಟೆ, ದಾರ, ಸೂಜಿ ಹಿಡಿದು ಕುಳಿತರೆಂದರೆ ನೋಡನೋಡುತ್ತಿದ್ದಂತೆ ಕಸೂತಿಯ ಚಿತ್ತಾರಗಳು ಅರಳುತ್ತವೆ. ಕಸೂತಿಯ ನಡುನಡುವೆ ಇರುವ ಕನ್ನಡಿಯ ಚಿಕ್ಕ ತುಣುಕುಗಳಲ್ಲಿ ಕಾಣುವ ಬದುಕಿನ ಪ್ರತಿಬಿಂಬವೂ ಹರುಕುಮುರುಕು. ಬಾಗಿಲಿನ ತೋರಣ, ನೆಲಕ್ಕೆ ಹಾಸಿದ ಕೌದಿ, ಆಕೆ ಹಾಕಿದ್ದ ಲಂಗ, ಕುಪ್ಪಸ, ಕಿಟಕಿಗೆ ನೇತುಬಿಟ್ಟಿದ್ದ ಕೈಚೀಲ ಎಲ್ಲದರ ಮೇಲೂ ವಿವಿಧ ಬಗೆಯ ಕಸೂತಿ. ಹೊರಗೆ ಖುದ್ದು ಸೂರ್ಯನೇ ಬಾಗಿಲು ಕಾಯುತ್ತಿದ್ದಾನೋ ಎಂಬಂತೆ ರಣರಣ ಬಿಸಿಲು. ರಸ್ತೆ ನಡುವೆ ಹರಿಯುವ ಚರಂಡಿನೀರು, ಬದುಕಿನ ಕಟುವಾಸ್ತವ, ಬಿರುಕುಬಿದ್ದ ಹಳೆಮನೆಗಳು, ಇದೆಲ್ಲದಕ್ಕೆ ಸಡ್ಡು ಹೊಡೆಯುವಂತೆ ಸುಕ್ಕುಗಟ್ಟಿದ ಕೈಗಳು ಮೋಹಕವಾದ ಕಸೂತಿಯನ್ನು ಹೆಣೆಯುತ್ತವೆ.

‘ಕಸೂತಿ ನಮ್ಮ ರಕ್ತದಲ್ಲಿಯೇ ಸೇರಿಹೋಗಿದೆ. ತಲೆಮಾರುಗಳಿಂದ ಮಾಡ್ತಾನೆ ಇದ್ದೀವಿ. ಆದರೆ ಮಾರಾಟದ ಕೌಶಲ ನಮಗೆ ಗೊತ್ತಿರಲಿಲ್ಲ. ಹಳ್ಳಿಗೆ ಬಂದು ನಮ್ಮಿಂದ ವ್ಯಾಪಾರಿಗಳು ಬಹಳ ಕಡಿಮೆ ದುಡ್ಡಿಗೆ ಕೊಂಡ್ಕೊಂಡು ಹೋಗ್ತಿದ್ದರು. ಈಗ ದೇಶ, ವಿದೇಶಗಳಲ್ಲಿ ನಮ್ಮ ಕಸೂತಿ ಬಟ್ಟೆಗಳ ಪ್ರದರ್ಶನ ಮಾಡ್ತೀವಿ. ಒಬ್ಬೊಬ್ಬರೇ ಹೊರಗೆ ಓಡಾಡ್ತೀವಿ, ಬ್ಯಾಂಕ್‌ ವ್ಯವಹಾರ ಮಾಡ್ತೀವಿ. ಆಗ ನನ್ನನ್ನು ಬರೀ ಈ ಹಳ್ಳಿಯ ಸೊಸೆ ಅಂತ ಗುರುತಿಸ್ತಾ ಇದ್ದರು, ಈಗ ಪೂರಿಬೆನ್‌ ಅಂತ ಗೌರವದಿಂದ ಕರೀತಾರೆ’ ಪೂರಿಬೆನ್‌ ಹೆಮ್ಮೆಯಿಂದ ನಗುತ್ತಾಳೆ.

ಮೂರ್ನಾಲ್ಕು ದಶಕಗಳ ಹಿಂದೆ ಅಹಮದಾಬಾದ್‌ ನಗರದ ಬೀದಿಗಳಲ್ಲಿ ಚಿಂದಿ ಆಯುತ್ತಿದ್ದ ಪಾಲಿಬೆನ್‌ ಈಗ ಸ್ಟೇಷನರಿ ತಯಾರಿಸುವ ಸಹಕಾರಿ ಸಂಸ್ಥೆ ‘ಗೀತಾಂಜಲಿ’ಯಲ್ಲಿ ಮ್ಯಾನೇಜರ್‌ ಆಗಿದ್ದಾರೆ. ಮನೆಯ ಗಂಡಸರೊಂದಿಗೆ ಮಾತನಾಡುವಾಗಲೂ ತಲೆಯ ಮೇಲೆ ‘ಘುಂಘಟ್‌’ ಹೊದ್ದು, ಊರಿನಿಂದ ಹೊರಗೆ ಕಾಲಿಡಲು ಭಯಪಡುತ್ತಿದ್ದ ಗಣೇಶಪುರದ ಮಹಿಳೆಯರು ಈಗ 10 ಎಕರೆ ಬರಡು ಭೂಮಿಯನ್ನು ಹಸಿರಾಗಿಸಿ, ತಮ್ಮ ಸಹಕಾರಿ ಸಂಸ್ಥೆಯಡಿ ‘ಇಕೊ ಟೂರಿಸಂ’ ಕೇಂದ್ರ ನಡೆಸುತ್ತಿದ್ದಾರೆ.

ಸಾಮುದಾಯಿಕ ನೆಲೆಯಲ್ಲಿ ಹಾಗೂ ವೈಯಕ್ತಿಕ ನೆಲೆಯಲ್ಲಿ ಬದುಕು ಪರಿವರ್ತನೆಗೊಂಡ ನೈಜ ಕಥೆಗಳು ನೂರಾರು. ಈ ಯಾವುವೂ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನಡೆದ ಪವಾಡಗಳಲ್ಲ. ಒಂದೊಂದೇ ಚಿಕ್ಕಪುಟ್ಟ ಹೆಜ್ಜೆಗಳು ಸೇರುತ್ತ, ಕೈಹಿಡಿದು ಸಾಗುತ್ತ, ಸಂಘಟಿತ ಪ್ರಯತ್ನ ಮಾಡುತ್ತ, ಕ್ರಮೇಣ ಜರುಗಿದ ಪರಿವರ್ತನೆಗಳು. ಆದರೆ ಈ ಎಲ್ಲ ಪರಿವರ್ತನೆಗಳ ಮೂಲ ಕೇಂದ್ರ ಒಂದೇ. ಅದೆಂದರೆ ಮೌನ ಕ್ರಾಂತಿಕಾರಿಯೆಂದೇ ಹೆಸರಾದ ಇಳಾ ಭಟ್‌ ಅವರು ಹುಟ್ಟುಹಾಕಿದ ಸಂಸ್ಥೆ ‘ಸೇವಾ’.

ವಿವಿಧ ಬಗೆಯ ಸ್ವ ಉದ್ಯೋಗದಲ್ಲಿ ತೊಡಗಿದ ಈ ಹೆಣ್ಣುಮಕ್ಕಳು ಮೊದಲು ಅಸಂಘಟಿತ ವೃತ್ತಿಯಲ್ಲಿ ಎದುರಿಸಿದ ಸಂಕಷ್ಟಗಳು, ಸವಾಲುಗಳು ಮತ್ತು ಅವುಗಳನ್ನೆಲ್ಲ ಮೀರಿ ನಿಂತ ಬಗೆ, ಸ್ವಂತಿಕೆಯಿಲ್ಲದೇ ಬದುಕುತ್ತಿದ್ದ ತಮಗೆ ಈಗ ಸ್ವಂತ ಅಸ್ತಿತ್ವವಿರುವುದು, ತಮ್ಮ ಹೆಸರಿನಲ್ಲಿ ಇರುವ ಆಸ್ತಿ, ಘನತೆ, ಗೌರವ ಎಲ್ಲವನ್ನೂ ಗಳಿಸಿಕೊಳ್ಳಲು ಹೇಗೆ ಸೇವಾ ನೆರವಾಯಿತು ಎಂಬುದನ್ನು ಹೇಳುತ್ತಲೇ ಇಳಾ ಭಟ್ ಅವರ ವ್ಯಕ್ತಿತ್ವ, ದೂರದರ್ಶಿತ್ವ, ನಾಯಕತ್ವ, ಬಡ ಮಹಿಳೆಯರನ್ನು ತಮ್ಮ ಎಲ್ಲಾ ಕೆಲಸಗಳ ಕೇಂದ್ರಬಿಂದುವಾಗಿ ಇರಿಸಿಕೊಂಡು, ಅವಿರತವಾಗಿ ಶ್ರಮಿಸುತ್ತ ಸಾಗಿದ್ದನ್ನು ಚಿತ್ರಿಸುತ್ತಾರೆ.

ಗಾಂಧೀಜಿಯಿಂದ ಪ್ರಭಾವಿತಗೊಂಡಿದ್ದ ಆಕೆ ಮಾತುಗಳಿಗಿಂತ ಕೃತಿಯಲ್ಲಿ ಗಾಂಧಿ ಮೌಲ್ಯಗಳನ್ನು ಪಾಲಿಸಿದವರು. ಸರಳತೆ, ಸರ್ವಧರ್ಮ ಸಮಾನತೆ, ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಅಹಿಂಸಾತ್ಮಕ ವಿಧಾನದಲ್ಲಿ ಪರಿಹಾರ ಕಂಡುಕೊಳ್ಳುವುದು, ಪ್ರಾಮಾಣಿಕತೆಯಂತಹ ಗಾಂಧಿ ಮೌಲ್ಯಗಳು ಅವರಲ್ಲಿ ಎಷ್ಟರಮಟ್ಟಿಗೆ ರಕ್ತಗತವಾಗಿದ್ದವು ಎಂದರೆ, ದೂರದ ಕಛ್‌ ಪ್ರಾಂತ್ಯದಲ್ಲಿರುವ ‘ಸೇವಾ’ದ ಹೆಣ್ಣುಮಕ್ಕಳೂ ಈ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ, ವೃತ್ತಿಯಲ್ಲಿ ಪಾಲಿಸುತ್ತಿರುವುದನ್ನು ಹೆಮ್ಮೆಯಿಂದ ಹೇಳುತ್ತಾರೆ.

ಇಳಾಬೆನ್‌ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು ಇದ್ದಿದ್ದರೆ ಇಂದಿಗೆ ಸರಿಯಾಗಿ 90 ವರ್ಷ ತುಂಬುತ್ತಿತ್ತು (ಅವರು ಹುಟ್ಟಿದ್ದು 7 ಸೆಪ್ಟೆಂಬರ್‌, 1933). ಸ್ವ ಉದ್ಯೋಗದಲ್ಲಿ ತೊಡಗಿರುವ ಅಸಂಘಟಿತ ವಲಯದ ಮಹಿಳೆಯರಿಗೆ ಅವರ ವಹಿವಾಟನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಗುರುತು ಪತ್ರ, ಸ್ವಂತ ಅಸ್ತಿತ್ವ ಮತ್ತು ಸಂಘಟನೆಯ ಅಗತ್ಯವಿದೆ ಎನ್ನುವುದನ್ನು ಮನಗಂಡ ಅವರು 1972ರಲ್ಲಿ ಸೇವಾ (ಸ್ವ-ಉದ್ಯೋಗಿ ಮಹಿಳಾ ಸಂಘ) ಕಾರ್ಮಿಕ ಸಂಘವನ್ನು ಹುಟ್ಟುಹಾಕಿದರು. ತರಕಾರಿ ಮಾರಾಟ, ಬಟ್ಟೆ ಹೊಲೆಯುವುದು, ಚಿಂದಿ ಆಯುವುದು, ಕೃಷಿ, ಹೈನುಗಾರಿಕೆ, ಬೀದಿ ವ್ಯಾಪಾರ, ಬೀಡಿ ಕಟ್ಟುವುದು ಹೀಗೆ ಹಲವಾರು ವೃತ್ತಿಗಳಲ್ಲಿ ತೊಡಗಿದ ಮಹಿಳೆಯರ ಸಹಕಾರಿ ಸಂಸ್ಥೆಯನ್ನು ಕಟ್ಟುತ್ತ, ಅವರ ವ್ಯವಹಾರ ಸುಗಮವಾಗಿ ನಡೆಯಲು ಸಂಘಟಿತ ಪ್ರಯತ್ನದ ಮಹತ್ವವನ್ನು ಮನಗಾಣಿಸಿದರು. ಆದರೆ ವ್ಯವಹಾರ ನಡೆಸಲು ಬಂಡವಾಳ ಬೇಕಲ್ಲ? ಆಗ ಇದೇ ಮಹಿಳೆಯರಿಂದ ಸೇವಾ ಬ್ಯಾಂಕ್‌ ಶುರು ಮಾಡಿದರು.

ಈ ಬಡಕೈಗಳು ದುಡಿದಿದ್ದರಲ್ಲಿ ಹೆಚ್ಚಿನಂಶ ವೈದ್ಯಕೀಯ ಖರ್ಚಿಗೇ ಹೋಗುತ್ತದೆ ಎಂದು ಮನಗಂಡ ಇಳಾಬೆನ್‌, ವಿಮೋ ಸೇವಾ ಆರಂಭಿಸಿದರು. ಮಹಿಳೆಯರು ಸಬಲೀಕರಣಗೊಳ್ಳಲು ತರಬೇತಿ ಅಗತ್ಯವೆಂದು ಮನಗಂಡು ಸೇವಾ ಅಕಾಡೆಮಿ ಹುಟ್ಟುಹಾಕಿದರು. ಹೀಗೆ ಹಲವಾರು ಸಂಸ್ಥೆಗಳು ಮೂಲ ಸೇವಾ ಸಂಸ್ಥೆಯಿಂದ ಟಿಸಿಲೊಡೆದವು. ಪ್ರತಿಯೊಂದಕ್ಕೂ ವೃತ್ತಿಪರರನ್ನು ಪ್ರಮುಖರನ್ನಾಗಿ ಮಾಡಿ, ಕ್ರಮೇಣ ಸಂಸ್ಥೆಯ ಚುಕ್ಕಾಣಿಯನ್ನು ಬೇರೆಯವರಿಗೆ ವಹಿಸಿದರು.

ಇಳಾಬೆನ್‌, ಸಂಸ್ಥೆಯ ಎಲ್ಲ ಹಂತಗಳಲ್ಲಿ ನೂರಾರು ನಾಯಕಿಯರನ್ನು ಹುಟ್ಟುಹಾಕಿದರು. ಒಮ್ಮೆ ಚುಕ್ಕಾಣಿಯನ್ನು ಬೇರೆಯವರಿಗೆ ವಹಿಸಿದ ನಂತರ, ನಿತ್ಯದ ವ್ಯವಹಾರಗಳಲ್ಲಿ ಎಂದೂ ಮೂಗು ತೂರಿಸಲಿಲ್ಲ.

ಹತ್ತುಹಲವು ವಿಚಾರಗಳಲ್ಲಿ ಅವರು ತಮ್ಮ ಕಾಲಕ್ಕಿಂತ ಬಹಳ ಮುಂದೆ ಇದ್ದರು. ಸ್ವಸಹಾಯ ಸಂಘಗಳು, ಮೈಕ್ರೊಫೈನಾನ್ಸ್‌, ಈ ಪದಗಳು ಚಾಲ್ತಿಗೆ ಬರುವುದಕ್ಕಿಂತ ಬಹಳ ಮೊದಲೇ ಅವರು ಸೇವಾ ಬ್ಯಾಂಕ್‌ ಹುಟ್ಟುಹಾಕಿದ್ದರು. ವಿತ್ತೀಯ ಸೇರ್ಪಡೆ ಕುರಿತು ಎಲ್ಲರೂ ಮಾತನಾಡುವುದಕ್ಕಿಂತ ಎಷ್ಟೋ ವರ್ಷಗಳ ಮೊದಲೇ ಸಂಘಟನೆಯಲ್ಲಿ ಸೇರಿದ ಮಹಿಳೆಯರು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದರು. ಗಾಂಧಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ತಮ್ಮದೇ ರೀತಿಯಲ್ಲಿ ಕಾರ್ಯರೂಪಕ್ಕಿಳಿಸಿದ ಇಳಾಬೆನ್‌ ಅದರ ಕೇಂದ್ರ ಬಿಂದುವಿನಲ್ಲಿ ದುಡಿಯುವ ಮಹಿಳೆಯನ್ನು ಇರಿಸಿದ್ದರು.

ದಿನೇದಿನೇ ಹೆಚ್ಚುತ್ತಿರುವ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ಕುರಿತು ಇಳಾಬೆನ್‌ ಕೊನೆಗಾಲದಲ್ಲಿ ತುಂಬ ಚಿಂತಿತರಾಗಿದ್ದರು. ಹೋದ ವರ್ಷ ಅವರು ತೀರಿಕೊಳ್ಳುವ ಕೆಲವೇ ತಿಂಗಳು ಮೊದಲು ಏಪ್ರಿಲ್‌ ತಿಂಗಳಿನಲ್ಲಿ ‘ಸೇವಾ’ದ ಐವತ್ತನೇ ವರ್ಷದ ಕಾರ್ಯಕ್ರಮ ನಡೆದಿತ್ತು. ಆಗ ಮುಂದಿನ ಐವತ್ತು ವರ್ಷ ‘ಸೇವಾ’ದ ಧ್ಯೇಯ ‘ಸ್ವಚ್ಛ ಆಕಾಶ’ದ ಕುರಿತು ಕೆಲಸ ಮಾಡುವುದು ಆಗಿರಬೇಕು ಎಂದು ಕರೆ ನೀಡಿದ್ದರು. ಅವರ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ‘ಸೇವಾ’ ಈಗ ಸಾವಯವ ಕೃಷಿ, ಅಡುಗೆಗೆ ಜೈವಿಕ ಅನಿಲ, ಕೃಷಿಯಲ್ಲಿ ಸೌರಶಕ್ತಿ ಬಳಕೆ... ಹೀಗೆ ಹಲವಾರು ಬಗೆಯ ಹಸಿರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ.

ಇಳಾಬೆನ್‌ ಕಳೆದ ನವೆಂಬರ್‌ನಲ್ಲಿ ಭೌತಿಕವಾಗಿ ನಮ್ಮಿಂದ ಅಗಲಿದರು. ಆದರೆ ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳಲ್ಲಿರುವ ಮಹಿಳೆಯರು ತಮ್ಮೊಳಗೆ ಇಳಾಬೆನ್‌ ಅವರ ಚೈತನ್ಯವನ್ನು ಕಾಪಿಟ್ಟಿರುವುದು, ನಿತ್ಯದ ಆಗುಹೋಗುಗಳಲ್ಲಿ ಅವರ ಬದುಕಿನ ಮೌಲ್ಯಗಳನ್ನು ಉಸಿರಿನಷ್ಟೇ ಸಹಜವಾಗಿ ಅಳವಡಿಸಿಕೊಂಡಿರುವುದು ಭರವಸೆಯ ಬೆಳಕಾಗಿ ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT