ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಯೋಜನಾ ರಾಕೆಟ್

Published 3 ಮಾರ್ಚ್ 2024, 23:46 IST
Last Updated 3 ಮಾರ್ಚ್ 2024, 23:46 IST
ಅಕ್ಷರ ಗಾತ್ರ

ಬೆಕ್ಕಣ್ಣ ಗಗನಯಾನಕ್ಕೆ ಆಯ್ಕೆಯಾದವರ ಫೋಟೊ ನೋಡುತ್ತ ಲೊಚ್‌ಗುಡುತ್ತಿತ್ತು. ‘ಮೋದಿಮಾಮಾರೇ ಖುಷಿಯಿಂದ ಗಗನ ಯಾತ್ರಿಗಳ ಹೆಸರು ಪ್ರಕಟಮಾಡ್ಯಾರೆ… ನೀ ಎದಕ್ಕೆ ಬೇಜಾರಾಗೀಯಲೇ?’ ಎಂದೆ.

‘ನಮ್‌ ಮೋದಿಮಾಮ ಲಕ್ಷದ್ವೀಪದಲ್ಲಿ ಸ್ನಾರ್ಕಲಿಂಗ್‌ ಸೂಟ್‌ ಹಾಕ್ಕಂಡು ಸಾಹಸ ಮಾಡಿದ್ರು. ಸಮುದ್ರದ ಕೆಳಗೆ ಮುಳುಗಿರೋ ದ್ವಾರಕಾಗೆ ಡೈವ್‌ ಮಾಡಿಕೊಂಡು ಹೋಗಿ ಪ್ರಾರ್ಥನೆ ಸಲ್ಲಿಸಿದರು. ಹಿಂಗೇ ಗಗನಯಾನದ ಸೂಟ್‌ ಹಾಕ್ಕಂಡು, ಬಾಹ್ಯಾಕಾಶದಾಗೆ ಪ್ರಾರ್ಥಿಸತಾರೆ ಅಂತ ಕನಸು ಕಾಣುತ್ತಿದ್ದೆ’ ಅಂತ ನಿಟ್ಟುಸಿರುಬಿಟ್ಟಿತು.

‘ಗಗನಯಾನಕ್ಕೆ ಮುಂಚೆ ರಾಕೆಟ್‌ ಸಿಮುಲೇಶನ್‌ ಮಾಡ್ತಾರಲ್ಲ, ಆವಾಗ ಗಗನಯಾನದ ಸೂಟ್‌ ಹಾಕ್ಕಂಡು, ಅದ್ರಾಗೆ ಕೂತು ಫೋಟೊಗೆ ಪೋಸು ಕೊಡ್ತಾರೇಳು’ ಎಂದು ಸಮಾಧಾನಿಸಿದೆ. ಆದರೂ ಕೇಳದೆ ಪ್ರಧಾನಿ ಕಾರ್ಯಾಲಯದ ಜಾಲತಾಣದಲ್ಲಿ ಸುದ್ದಿಗಳನ್ನು ತೆರೆತೆರೆದು ಓದಿತು.

‘ಬಿಹಾರದಲ್ಲಿ ₹ 21,400 ಕೋಟಿ, ಪಶ್ಚಿಮ ಬಂಗಾಳದಲ್ಲಿ ₹ 22,200 ಕೋಟಿ ಮೊತ್ತದ ಯೋಜನೆಗಳು, ದೇಶದಾದ್ಯಂತ ₹ 41,000 ಕೋಟಿಯ ರೈಲ್ವೆ ಯೋಜನೆ, ರಾಜಕೋಟದಲ್ಲಿ ₹ 48,100 ಕೋಟಿ, ದ್ವಾರಕಾದಲ್ಲಿ ₹ 4,150 ಕೋಟಿ, ವಾರಾಣಸಿಯಲ್ಲಿ ₹ 13,000 ಕೋಟಿ, ಗುಜರಾತಿನ ಮೆಹ್ಸಾನದಲ್ಲಿ ₹ 13,500 ಕೋಟಿ, ಜಮ್ಮುಕಾಶ್ಮೀರದಲ್ಲಿ ₹ 32,000 ಕೋಟಿಯ ಯೋಜನೆಗಳು… ಇವು ಫೆ. 20ರ ನಂತರ ಮೋದಿಮಾಮ ಲೋಕಾರ್ಪಣೆ ಮಾಡಿದ್ದು. ಇದೆಲ್ಲಾ ಕೂಡಿಸು ನೋಡಾಮು’ ಎಂದಿತು.

‘₹ 1,95,350 ಕೋಟಿ’ ಎಂದೆ ಕಕ್ಕಾಬಿಕ್ಕಿಯಾಗಿ.

‘ಗಗನಯಾತ್ರಿಗಳನ್ನು ಈಗ ಕಳಿಸೂದು 400 ಕಿ.ಮೀ. ಮೇಲಿನ ಕಕ್ಷೆಗೆ, ಹೌದಿಲ್ಲೋ… ಒಂದು ಕೋಟಿ ರೂ. ಒಂದು ಕಿ.ಮೀ.ಗೆ ಸಮ ಅಂದ್ಕಂಡು ಈ ಕೋಟಿಗಳನ್ನು ಭೂಮಿಯಿಂದ ಮೇಲೆ ಆಕಾಶಕ್ಕೆ ಜೋಡಿಸು. ನಮ್‌ ಮೋದಿಮಾಮಾನೇ ಖುದ್ದು 1,95,350 ಕಿ.ಮೀ.ನಷ್ಟು ಮೇಲೆ ಯೋಜನಾ ರಾಕೆಟ್‌ ಅನ್ನು ಉಡಾಯಿಸಿದ ಹಂಗೆ ಆತಿಲ್ಲೋ’ ಎಂದು ಹೆಮ್ಮೆಯಿಂದ ಹ್ಹೆಹ್ಹೆಗುಟ್ಟಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT