ಸೋಮವಾರ, ಏಪ್ರಿಲ್ 6, 2020
19 °C

ಮೋಶಾಟ್ಲರ್‌ ಗೋಲಿ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

‘ನರಭಕ್ಷಕ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಿ’ ಎಂಬ ಸಚಿವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ ವನ್ಯಮೃಗಗಳು ಒಗ್ಗಟ್ಟಾಗಿ ‘ಕಾಡು ಕಡಿದು, ನಾಡು ಮಾಡಿ, ನಮಗೆ ಹೊಟ್ಟೆಗೇನೂ ಸಿಗದೆ ನರಭಕ್ಷಕರಾಗುವಂತೆ ಮಾಡಿದ ಅರಣ್ಯಭಕ್ಷಕರಿಗೆ ಮತ್ತು ಡೆಲ್ಲಿಯಲ್ಲಿ ರಾಜಾರೋಷವಾಗಿಯೇ ಓಡಾಡುತ್ತಿರುವ ನರಭಕ್ಷಕ ನರರಿಗೆ ಮೊದಲು ಕೈಕೋಳ ತೊಡಿಸಿ’ ಎಂದು ಸುಪ್ರೀಂ ಕೋರ್ಟಿನ ಮೆಟ್ಟಿಲೇರಲು ನಿರ್ಧರಿಸಿವೆ ಎಂಬ ರೋಚಕ ಸುದ್ದಿಯನ್ನು ಓದುತ್ತ ಕೂತಿದ್ದೆ. 

ಅಷ್ಟರಲ್ಲಿ ನಿದ್ದೆಯಿಂದ ಎದ್ದ ಬೆಕ್ಕಣ್ಣನದು ಒಂದೇ ಹಟ. ‘ನಂಗೂ ಗೋಲಿ ಕೊಡ್ಸು’ ಅಂತ. ಮನೆ ಪಕ್ಕದ ಮಲಯಾಳಿ ಕಾಕಾನ ಅಂಗಡಿಯಲ್ಲಿ ಕೇಳಿದರೆ ಮಕ್ಕಳ ಆಟಿಗೆಗಳಿಗೆ ತನ್ನ ಅಂಗಡಿಯಲ್ಲಿ ಜಾಗವೇ ಇಲ್ಲವೆಂದರು. ಅಟ್ಟದಲ್ಲಿದ್ದ ನನ್ನ ಹಡಪ ತೆಗೆದು, ಎರಡು ಹಳೆಯ ಗೋಲಿ ಹುಡುಕಿ ಕೊಟ್ಟೆ. ಬೆಕ್ಕಣ್ಣ ಅದನ್ನು ನೋಡಿದ್ದೇ, ‘ಶ್ಯೀ... ಇದಲ್ಲ... ಇದೆಂಥ ಗೋಲಿ’ ಎಂದು ರೊಂಯ್ಯನೆ ಬಿಸಾಡಿತು!

‘ಮತ್ತೆಂತ ಗೋಲಿ ಬೇಕಲೇ ನಿನಗ... ಸಣ್ಣೋರಿದ್ದಾಗ ನಾವು ಇದ್ರಾಗೆ ಆಡತಿದ್ವಿ’ ಎಂದು ಬೈದೆ.

‘ಇನ್ನಾ ಯಾವ ಕಾಲದಾಗೆ ಅದಿ ನೀ... ನಾ ಹೇಳಿದ್ದು ಮೋಶಾಟ್ಲರ್  ಗೋಲಿ’ ಎಂದು ಪೇಪರಿನಲ್ಲಿ ‘ಗೋಲಿ ಮಾರೋ’ ಹೆಡ್ಡಿಂಗ್ ತೋರಿಸಿತು.

‘ಅದಕ್ಕ ಬಂದೂಕು ಬೇಕು... ಬಂದೂಕಿಗೆ ಲೈಸೆನ್ಸ್ ಬೇಕು. ತೆಲಿಗಿಲಿ ಕೆಟೈತೇನು ನಿನಗ. ಹಿಂತಾ ಮತಿಯಿಲ್ಲದ ಮಾತಿಂದ ಡೆಲ್ಲಿ ಸುಟ್ಟು ಕರಕಲಾಗೈತಿ. ಮತ್ತ ಇಲ್ಲಿ ಎಲ್ಲ ನಮ್ಮೋರೆ ಅದಾರ, ಗೋಲಿ ಯಾರಿಗೆ ಹೊಡಿತೀ…’ ಜಬರಿಸಿದೆ.

‘ಹತ್ತು ಮೋಶಾಟ್ಲರ್ ಗೋಲಿ ತಗಂಡ್ರೆ ಒಂದು ಬಂದೂಕು ಫ್ರೀ ಕೊಡ್ತಾರಂತ. ಮೊನ್ನೆ ಕೊಲ್ಕತ್ತದಾಗೆ ಗೋಲಿ ಮಾರೋ ಅಂದಾರ. ನಾಳೆ ಬೆಂಗಳೂರಿನಾಗೂ ಅಂತಾರ. ಅದಕ್ಕ ಈಗೇ ತಗಂಡು ಇಟ್ಕಂತೀನಿ. ಯಾವಾಗ ‘ನಮ್ಮೋರು’ ಗೋಲಿ ಮಾರೋ ಅಂತಾರ ಅವಾಗ ‘ಅವರಿಗೆ’ ಗೋಲಿ ಹೊಡಿತೀನಿ’ ಬೆಕ್ಕಣ್ಣ ಥೇಟ್ ‘ಗೋಲಿ ಮಾರೋ’ ಎಂದ ಸಂಸದನಂತೆ ವಾದಿಸಿತು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)