ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಗೊರೆ ಬೇಕೇ?

Last Updated 8 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಮೊಮ್ಮಗನ ಮದುವೆ ತಯಾರಿ ಪರಿಶೀಲನೆಗೆ ದೇಗೌಡಜ್ಜ ಬಲುಚಿಕ್ಕದಾದತೊಂಬತ್ತು ಎಕರೆ ಜಾಗಕ್ಕೆ ಕುಮಾರಣ್ಣನೊಂದಿಗೆ ಬಂದರು. ವಾಸ್ತು ಪ್ರಕಾರ ಮದುವೆ ಸೆಟ್ ಹಾಕುವುದೆಲ್ಲಿ ಎಂದು ಘನ ಗಂಭೀರ ಚರ್ಚೆಯಲ್ಲಿ ತೊಡಗಿದರು. ಜೊತೆಗಿದ್ದ ರೇವಣ್ಣನವರು ನಿಂಬೆ ಹಣ್ಣೊಂದನ್ನು ಚಕ್ಕನೆ ಬಿಸಾಕಿ, ಅದು ಬಿದ್ದ ಸ್ಥಳದಲ್ಲಿ ಸೆಟ್ ಹಾಕಬೇಕೆಂದು ಹೇಳಿದರು ಎನ್ನುವುದು ನಿಂಬೆ ದ್ವೇಷಿಗಳ ಕುಹಕದ ಮಾತು. ಕುಟುಂಬಸ್ಥರು ಸ್ಥಳವೀಕ್ಷಣೆ ನಡೆಸುತ್ತಿರುವಾಗ ಜೊತೆಗಿದ್ದ ಪತ್ರಕರ್ತರು ಪ್ರಶ್ನೆ ಕೇಳತೊಡಗಿದರು.

‘ಲಕ್ಷಗಟ್ಟಲೆ ಮದುವೆಪತ್ರಿಕೆ ಹಂಚುತ್ತಿದ್ದೀರಂತೆ...’ ಪ್ರಶ್ನೆ ಮುಗಿಯುವ ಮುನ್ನವೇ ಅನಿತಕ್ಕ ಸಿಡಿದರು, ‘ಯಾರ‍್ರೀ ಅದು ಲಕ್ಷಗಟ್ಟಲೆ ಅಂದಿದ್ದು, ಬರೀ ಎಂಟು ಲಕ್ಷ ಅಷ್ಟೇ. ನಮ್ಮ ರಾಜಕೀಯ ಕುಟುಂಬದವರಿಗೆಲ್ಲರಿಗೂ ಆಹ್ವಾನಪತ್ರ ಕೊಡುವುದೂ ತಪ್ಪೇ?’

‘ತೊಂಬತ್ತು ಎಕರೆ ಜಾಗದಲ್ಲಿ ಅದ್ಧೂರಿ ಸೆಟ್, ಏಳೆಂಟು ಲಕ್ಷ ಜನರಿಗೆ ಊಟೋಪಚಾರ, ಕೋಟ್ಯಂತರ ರೂಪಾಯಿ ಖರ್ಚಿನ ಐಷಾರಾಮಿ ಮದುವೆ ಮಾಡಬೇಕೇ ಅಂತ ನಿಮ್ಮ ಹಿತಶತ್ರುವೊಬ್ಬರು ಕೇಳ್ತಿದ್ದಾರಲ್ಲ...’

‘ಆ ಹಿತಶತ್ರುಗಳು ನೂರು ಕೋಟಿ ಖರ್ಚು ಮಾಡಿ ಐಷಾರಾಮಿ ಚುನಾವಣೆ ನಡೆಸಿದರೆ ಓಕೇನಾ? ಮದುವೆಯೂಟ ಹಾಕಿಸುವುದೂ ದುಂದುವೆಚ್ಚವೇ? ಬಂದವರಿಗೆ ಬರೀ ಮುದ್ದೆಯೂಟ ಬಡಿಸಬೇಕೇ? ಇರುವ ಒಬ್ಬನೇ ಮಗನ ಮದುವೆಯನ್ನೂ ಮಾಡಬಾರದೇ’ ಎಂದು ಪ್ರಶ್ನಿಸುತ್ತಲೇ ಪಾಪದ ಕುಮಾರಣ್ಣ ಕಣ್ಣೀರಾದರು.

‘ರಾಮನಗರ, ಚನ್ನಪಟ್ಟಣದಲ್ಲಿ ಎಲ್ಲರ ಮನೆಗೂ ಆಹ್ವಾನಪತ್ರಿಕೆ ಜೊತೆ ಸೀರೆ, ಪಂಚೆ ಉಡುಗೊರೆ ಕೊಡ್ತೀರಂತೆ...’

‘ಅದೆಲ್ಲ ನಮ್ಮ ಕಾರ್ಯಕರ್ತರ ನಿರ್ಧಾರ. ಅದಕ್ಕೂ ರಾಜಕೀಯಕ್ಕೂ ಏನೇನೂ ಸಂಬಂಧವಿಲ್ಲ’.

‘ಅದ್ರ ಬದ್ಲಿಗೆ ಎನ್-95 ಮಾಸ್ಕ್‌, ಕೈತೊಳ್ಕೊಳೋ ಸ್ಯಾನಿಟೈಸರ್ ಉಡುಗೊರೆ ಕೊಟ್ರೆ ಒಳ್ಳೇದಿತ್ತು’ ಎಂದು ಇನ್ನೊಬ್ಬರು ಹೇಳುತ್ತಲೇ ‘ನಾಲ್ಕು ತದುಕ್ರೀ ಅವನಿಗೆ... ಇವ್ರ ಮುಖಕ್ಕೆ ಮಾಸ್ಕು, ಸ್ಯಾನಿಟೈಸರ್ ಉಡುಗೊರೆ ಬೇರೆ ಕೇಡು’ ಎಂದು ದೇಗೌಡಜ್ಜ ಉಗ್ರಾವತಾರ ತಾಳಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT