ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಪೊಲಿಟಿಕಲ್ ವೈರಾಣು

Published : 30 ಸೆಪ್ಟೆಂಬರ್ 2024, 23:30 IST
Last Updated : 30 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

‘ರಾಜಕೀಯದೋರು ಎಲ್ಲಾದ್ರಗೂ ಫಾಯ್ದೆ ಮಾಡಕ್ಕೇ ನೋಡ್ತರೆ. ಸಮೇವ್ಕೆ ಸರಿಯಾಗಿ ಒಂದು ಹುನ್ನಾರ ತಗೀತರೆ, ಹೆಂಗಣೈ?’ ಯಂಟಪ್ಪಣ್ಣನ್ನ ಕೇಳಿದೆ.

‘ರಾಜಕಾರಣಿಗಳ ಡಿಎನ್‍ಎದಲ್ಲಿ ಮಾತ್ರ ಕಾಣಿಸಿಕೊಳ್ಳೋ ವೈರಾಣುಗಳ ಎಪೆಕ್ಟು ಕನೋ ಇದು’ ಯಂಟಪ್ಪಣ್ಣ ಉತ್ತರ ಕೊಟ್ಟಿತು.

‘ಇಂಥಾ ಡಿಎನ್‍ಎಗಳನ್ನ ಇಂಡಿಯನ್ ಪೊಲಿಟಿಕಲ್ ಜೀನ್ಸ್ ಅಂತರೆ ಕಲಾ. ಈ ಕಾಯಿಲೆದೋರಿಗೆ ಅಧಿಕಾರದ ಹಸಿವು ಸ್ಯಾನೆ ಆದಾಗ ಮಂದಿಜ್ವರ ಕಾಣಿಸಿಗ್ಯಂದು ಅಪರ-ತಪರಾ ಮಾತಾಡ್ತರೆ. ಜನಗಳ ಮುಂದೆ ಹೋಗಿ ಸ್ಥಿರಂಜೀವಿಯಾಗಿ ಕಾಣಿಸಿಗ್ಯಳಬೇಕು ಅನ್ನೋ ತೆವಲು ಶುರುವಾತದೆ. ‘ಅವರ ಅಕ್ರಮಗಳನ್ನೆಲ್ಲಾ ಗುದಿಕಟ್ಟಿ ಈಚೆಗೆ ತಗೀತೀವಿ’ ಅಂತ ಒಬ್ಬರಂದ್ರೆ, ಇನ್ನೊಬ್ರು ‘ಈ ದಾಖಲೆಗಳು ಆಚೆಗೆ ಬುಟ್ಟರೆ ಸಚಿವರೆಲ್ಲಾ ರಾಜೀನಾಮೆ ಕೊಡಬೇಕಾಯ್ತದೆ’ ಅಂತ ಸಿಟ್ಟಲ್ಲಿ ಗದಗುಡ್ತರೆ. ಒಂದೇ ಪಕ್ಷದೇಲಿದ್ರೂ ಅವರವರೆ ಹೊಡೆದಾಡಿಕ್ಯಂದು ಸೋಂಕು ಹರಡ್ತರೆ’ ತುರೇಮಣೆ ರಾಜಕೀಯ ಜೀನ್ಸ್ ರೋಗಲಕ್ಷಣಗಳನ್ನ ಕೊಟ್ಟರು.

‘ತಮ್ಮ ತಪ್ಪು ಮುಚ್ಚಿಕ್ಯಳಕ್ಕೆ ರಾಜಕೀಯ ವೈರಸಿಗಳು ಹುನ್ನಾರ, ಗಂಡಾಂತರ, ಪಟ್ಟಭದ್ರ ಹಿತಾಸಕ್ತಿ, ಅಸಮಾನತೆ ನಿವಾರಣೆ ಅಂತ ಠಕ್ಕುಕತೆ ಹೇಳಿ ಯಾಮಾರಿಸ್ತರೆ ಅಂತ್ಲೋ ನಿಮ್ಮ ಅಭಿಪ್ರಾಯ?’ ಅಂತಂದೆ.

‘ಒಂದ್ಕಡೆ ವಿರೋಧಿಗಳು ‘ತಾಕತ್ತಿದ್ರೆ, ದಮ್ಮಿದ್ರೆ ಬನ್ರೀ’ ಅಂತ ಇ.ಡಿ, ಸಿಬಿಐ ತೋರಿಸ್ತರೆ. ಆಡಳಿತ ಪಕ್ಸದೋರು ಎಸ್‍ಐಟಿ, ನ್ಯಾಯಾಂಗ ತನಿಖೆ ಅಂತರೆ. ಕೊನೆಗೆ ಎರಡೂ ಕಡೆಯೋರು ಮಾತಲ್ಲೇ ನಿಗರಾಡಿಕ್ಯತ್ತರೆ’ ಅಂತು ಯಂಟಪ್ಪಣ್ಣ.

‘ರಾಜಕೀಯದ ವೈರಾಣುವಿನ ಜೀನ್ಸ್ ರೂಪಾಂತರವಾಗಿ ರಾಜಕಾರಣಿಗಳ ಮಕ್ಕಳಿಗೆ, ಅಧಿಕಾರಿಗಳಿಗೆ, ಆರೋಪಿಗಳಿಗೆ, ಸಾಹಿತಿಗಳಿಗೂ ಅಮರಿಕ್ಯತ್ತ ಅದಲ್ಲಾ ಸಾ’ ನನ್ನ ಕಳವಳ ಹೇಳಿದೆ.

‘ನನಗೂ ಜೀನ್ಸ್ ಇಕ್ಕ್ಯಬಕು ಅಂತ ಆಸ್ಯಾಗ್ಯದೆ. ಮೂರರಗೆ ಯಾವ ಬ್ರಾಂಡು ಚೆನ್ನಾಗದೆ ಏಳ್ರಿ ಸಾ?’ ಸ್ಲಿಪ್‍ಕಾರ್ಟ್ ಆಪ್ ನೋಡ್ತಿದ್ದ ಚಂದ್ರು ಕೇಳಿದ ಪ್ರಶ್ನೆಗೆ ತುರೇಮಣೆ ‘ಈಗ ಮದಲಿಂಗನ ದಿಬ್ಬಣ ಹೊಂಡತು ನೋಡ್ರಪ್ಪಾ’ ಅಂದಾಗ ನಾವೆಲ್ಲ ನಕ್ಕು ಹಗುರಾದೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT