ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: 30 ವರ್ಷಗಳ ಮುಂದೆ!

Last Updated 20 ಮೇ 2022, 19:45 IST
ಅಕ್ಷರ ಗಾತ್ರ

‘ರೀ, ಬರ್ತೀರಾ ಆ ಪೇಪರ್ ಬಿಟ್ಟು? ಅದೇನು ಅಂಥಾ ಸುದ್ದಿ ಓದ್ತಾ ಇರೋದು, ನೋಡೇ ಬಿಡ್ತೀನಿ... ಏನು? ಈ ‘25 ವರ್ಷಗಳ ಹಿಂದೆ’ ಕಾಲಮ್ಮೂ ಬಿಡಲ್ವೇ? ಲೋಕ, 30 ವರ್ಷ ಮುಂದೆ ಹೋಗಿದೆ, ನೀವಿನ್ನೂ...’

‘ಹ್ಞೂಂ, ಹೊಳೀತು ಕಣೆ, 30 ವರ್ಷದ ಮುಂದಿನ ಸುದ್ದಿಗಳು ಹ್ಯಾಗಿರಬಹುದು?’

* ಸಾವಿರದ ಗಡಿ ದಾಟಿದ ಪೆಟ್ರೋಲ್: ವಾಹನಗಳೆಲ್ಲ ಶೆಡ್ ಸೇರಿದ್ದು, ಜನ ನಟರಾಜ ಸರ್ವಿಸ್‌ಗೆ (ನಡಿಗೆ) ಮೊರೆ ಹೋಗಿದ್ದಾರೆ. ಸಂದಿ ನೋವು, ಕೀಲುನೋವು ಮಾಯವಾಗಿ ಈ ನೋವುಗಳ ಔಷಧಿ ಮಾರಾಟಗಾರರು, ಡಾಕ್ಟ್ರು, ಜಾಹೀರಾತುದಾರರು ಸಂಕಷ್ಟದಲ್ಲಿದ್ದಾರೆ.

* ಕೊರೊನಾ 25ನೇ ಅಲೆ ಎದುರಿಸಲು ಸರ್ಕಾರ ಸಜ್ಜು: ‘ರಾಜ್ಯದಾದ್ಯಂತ ‘ಕೊರೊನಾ ಬೆಳ್ಳಿಹಬ್ಬ’ ಆಚರಣೆ ಮಾಡಲು ಕರೆ ನೀಡ ಲಾಗಿದ್ದು, ಎಲ್ಲರಿಗೂ ಉಚಿತ ಬೆಳ್ಳಿ ಮಾಸ್ಕ್‌ ನೀಡಲು ನಿರ್ಧರಿಸಲಾಗಿದೆ.

* ರಸ್ತೆಗುಂಡಿಗಳೋ- ರಸ್ತೆ ಕೆರೆಗಳೋ: ಮುಚ್ಚದೇ ಬಿಟ್ಟಿರುವ ರಸ್ತೆಗುಂಡಿಗಳ ಪರಿಣಾಮ, ಅವು ಕೆರೆಗಳಂತಾಗಿ ಬೆಂಗಳೂರು ‘ಕೆರೆಗಳ ನಗರ’ ಎಂಬ ತನ್ನ ಹಳೆಯ ಹೆಸರನ್ನು ಮರಳಿ ಪಡೆಯಲು ಸಾಧ್ಯವಾಗಿದೆ.

* ಹಾಲಿನ ಬೆಲೆ ₹ 200: ಹಾಲಿನ ಬೆಲೆ ಲೀಟರ್‌ಗೆ ₹ 200 ಆಗಿರುವುದರಿಂದ ‘ಮಿಲ್ಕ್‌ಲೆಸ್ ಕಾಫಿ, ಟೀ’ ಗೆ ಬೇಡಿಕೆ ಹೆಚ್ಚುತ್ತಿದೆ.

* ಸ್ವಪ್ರೇರಣೆಯಿಂದ ವೃದ್ಧಾಶ್ರಮ ಸೇರಲು ನೂಕುನುಗ್ಗಲು: ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ಕಾಟ ತಾಳಲಾರದೆ ವೃದ್ಧಾಶ್ರಮ ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ, ತಾಲ್ಲೂಕಿ ಗೊಂದು ವೃದ್ಧಾಶ್ರಮ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ವೃದ್ಧರ ಸಬಲೀಕರಣ ಖಾತೆ ಸಚಿವರು ತಿಳಿಸಿದ್ದಾರೆ.

‘ಭೇಷ್! ನನ್ನದೂ ಒಂದು ಸೇರಿಸಿ’.

* ‘ಗ್ಯಾಸ್ ಸಿಲಿಂಡರ್ ₹ 10,000 ದಾಟಿ ಸುಲಭವಾಗಿ ಗಗನಕ್ಕೆ ಏರ್ತಿರೋದ್ರಿಂದ ಇನ್ನು ಮುಂದೆ ಕ್ಷಿಪಣಿಗಳ ಬದಲು ಸಿಲಿಂಡರ್‌ಗಳನ್ನೇ ಉಡಾವಣೆಗೆ ಬಳಸಲು ತಜ್ಞರು ನಿರ್ಧರಿಸಿದ್ದಾರೆ!

‘ತಲೆ ಅಂದ್ರೆ ತಲೆ ನಿನ್ನ ತಲೆನೇ ಕಣೆ!’

‘ಸುಮ್ಮನೆ ಇಟ್ಟಿದಾರಾ ನಮ್ಮಪ್ಪ– ಅಮ್ಮ ನನ್ಹೆಸ್ರು ಶಕುಂತಲೆ ಅಂತ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT