ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಜಾಹೀರಾಠೂ

Published 21 ನವೆಂಬರ್ 2023, 0:30 IST
Last Updated 21 ನವೆಂಬರ್ 2023, 0:30 IST
ಅಕ್ಷರ ಗಾತ್ರ

‘ಟೀವಿ ಆನ್ ಮಾಡಿದ್ರೆ ಜಾಹೀರಾತುಗಳದ್ದೇ ರೋಸು. ಇವುಗಳ ಹೊಡೆತ ತಾಳಿಕ್ಯಂಡು ನ್ಯೂಸು ನೋಡಂಗಾಗದೆ’ ಅಂತ ನನ್ನ ನೋವು ತೋಡಿಕೊಂಡೆ.

‘ಜಾಹೀರಾತುಗಳ ಗೂಢಾರ್ಥ ಬ್ಯಾರೆ ಇರತವೆ ಕನೋ. ಪಾತ್ರೆ ತೊಳೆಯೋ ಸೋಪಿಗೆ ನೂರು ನಿಂಬೆಗಳ ಶಕ್ತಿ ಅದೆ ಅಂದ್ರೆ ಅದರಲ್ಲಿ ಜ್ಯೂಸ್ ಮಾಡಿಕ್ಯಂದು ಕುಡಿಯಕ್ಕಾದದೇ’ ಅಂತ ತುರೇಮಣೆ ವೇದಾಂತ ತೆಗೆದರು.

‘ಈ ಬೊಡ್ಡಿಹೈದನ ತಳ್ಳಿ ಮಾತು ಕೇಳಬೇಡ ಕಲಾ’ ಯಂಟಪ್ಪಣ್ಣ ಬುದ್ಧಿಮಾತು ಹೇಳಿತು. ಹೇಳಿದಂಗೆ ಕೇಳಕ್ಕೆ, ಮಾಡಕ್ಕೆ ನಾನೇನು ರಾಜಕೀಯದೋನಾ?

‘ಅದೇನೇಳಿ ಸಾ’ ಅಂತಂದೆ.

‘ಬೆಂಗಳೂರಗೆಲ್ಲಾ ಅಧಿಕಾರಿಗಳು, ರಾಜಕಾರಣಿಗಳು ನೂರಾರು ಅಕ್ರಮ ಜಾಹೀರಾತು ಬೋರ್ಡು ಹಾಕ್ಕ್ಯಂದಿರತರೆ. ಅದರಗೆ ಅವುರ ಪವರ್ ಕರಂಟಿನಂಗೆ ಪಾಸಾಯ್ತಾ ಇರತದೆ. ಅದನ್ನ ಮುಟ್ಟಿದೋನು ಭಸ್ಮ ಆಯ್ತನೆ’ ತುರೇಮಣೆ ಮಾತು ನನಗೆ ಅರ್ಥಾಗಲಿಲ್ಲ.

‘ಜಾಹೀರಾತು ಅರ್ಥ ಮಾಡಿಕ್ಯಳದು ಯಂಗೆ ಸಾ’ ಅಂದೆ.

‘ಒಬ್ಬ ಕೌಂಟರಲ್ಲಿ ನಿಂತಿರತನೆ. ‘ಎರಡೂ ಬಿಲ್ಲು ಪಾಸ್ ಮಾಡಿ ಅಣ್ಣ’ ಅಂದಾಗ, ಕೌಂಟರ
ಲ್ಲಿದ್ದೋನು ‘ನೋ ಸಾರ್’ ಅಂತನೆ. ‘ಒಂದು ಬಿಲ್ಲಾದ್ರೂ ಪಾಸ್ ಮಾಡಿ. ಆಗ ಪರ್ಸೆಂಟೇಜ್ ಜಾಸ್ತಿ ಇತ್ತು ಕೊಡಕ್ಕಾಗಲಿಲ್ಲ. ಈಗ ಕೊಡಕ್ಕೆ ಹಣ ಇಲ್ಲ’ ಅಂದ ಅಂತ ತಿಳಕೋ’ ಈ ವಿವರಣೆಯಿಂದ ನನ್ನ ತಲೆ ಗಿರ್ ಅಂತು.

‘ನಮಗೆ ರಾಜಕಾರಣಿಗಳದ್ದೇ ನೋವು ಜಾಸ್ತಿಯಾಗ್ಯದೆ. ನಡಂತರದೇಲಿ ನಿಂದು ಬ್ಯಾರೆ’ ಯಂಟಪ್ಪಣ್ಣ ರೇಗಿತು.

‘ಅಣೈ, ‘ನೋವುರಹಿತ ಜೀವನಕ್ಕಾಗಿ ಪೇನ್ ರಿಲೀಫ್‌ ತೈಲ ತಕ್ಕಳಿ’ ಅಂತ ಜಾಹೀರಾತಲ್ಲಿದ್ರೆ ನಿಮ್ಮ ರಾಜಕೀಯದ ನೋವಿಗೆ ಇದುನ್ನ ತಿಕ್ಕಿ
ಕಳಂಗಿಲ್ಲ’ ತುರೇಮಣೆ ಉವಾಚ.

‘ಜಾಹೀರಾತು ಅಂದರೇನರ್ಥ ಸಾ?’ ಅಂತ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿದೆ.

‘ನಮ್ಮ ದುಡ್ಡಲ್ಲೇ ನಮಗೆ ಜಾದೂ ತೋರಿಸೋ ಮಾಯಕವೇ ಜಾಹೀರಾತು ಕಯ್ಯಾ. ಅದುಕ್ಕೆ ಠೂ ಬುಡಬಕು!’ ಅಂತ ಷರಾ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT