ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬಾಗಿಲಿಗೆ ಭಾಗ್ಯ

Last Updated 9 ನವೆಂಬರ್ 2021, 21:30 IST
ಅಕ್ಷರ ಗಾತ್ರ

‘ರಸ್ತೆ ಗುಂಡಿಗಳ ರಿಪೇರಿ ಮಾಡಿ, ಗುಂಡಿಗೆ ಬಿದ್ದು ಗಾಯಗೊಂಡವರ ರಿಪೇರಿ ಖರ್ಚು ಕೊಡಿ...’ ಎಂದು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಶಾಸಕರು ಸ್ಥಳಕ್ಕೆ ಧಾವಿಸಿ ಬಂದರು.

‘ಈ ಮಳೆಗಾಲದಲ್ಲಿ ಮೂರು ಬಾರಿ ಗುಂಡಿ ಮುಚ್ಚಿದ್ದೇವೆ, ಮುಚ್ಚಿದ ಮೂರೇ ದಿನಕ್ಕೆ ಹೊಸ ಗುಂಡಿಗಳು ತೆರೆದುಕೊಳ್ಳುತ್ತವೆ. ಗುಂಡಿಗೆ ಸುರಿದ ದುಡ್ಡು ಕೊಚ್ಚಿಕೊಂಡು ಹೋಗಿದೆ...’ ಶಾಸಕರು ಅಸಹಾಯಕತೆ ತೋಡಿಕೊಂಡರು.

‘ರಸ್ತೆ ಗುಂಡಿಗಳು ಪ್ರಕೃತಿವಿಕೋಪ ವ್ಯಾಪ್ತಿಗೆ ಬರುತ್ತವಾ ಸಾರ್?’ ಒಬ್ಬ ಕೇಳಿದ.

‘ಹೌದು ಕಣ್ರೀ, ಮಳೆಗೆ ಗುಡ್ಡಗಳೇ ಕುಸಿಯುತ್ತವೆ. ರಸ್ತೆ ಇರುತ್ತೇನ್ರೀ? ಗುಂಡಿ ರಸ್ತೆಗಳಲ್ಲಿ ಸಂಚಾರ ಮಾಡದೆ ಮಳೆಗಾಲ ಮುಗಿಯುವವರೆಗೂ ನೀವು ಮನೆಯಲ್ಲಿ ಇದ್ದುಬಿಡಿ’ ಎಂದರು.

‘ಮಳೆ ಲಾಕ್‍ಡೌನ್ ಘೋಷಿಸಿದರೆ ಬದುಕು ಕಷ್ಟ ಆಗುತ್ತೆ ಸಾರ್?’ ಜನ ಆತಂಕಗೊಂಡರು.

‘ಸರ್ಕಾರ ನಿಮ್ಮ ಕೈ ಬಿಡುವುದಿಲ್ಲ. ಅಗತ್ಯ ಸೌಲಭ್ಯಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ. ಈಗ ನೀರು, ವಿದ್ಯುತ್, ಗ್ಯಾಸ್ ಮನೆ ತಲುಪುತ್ತಿವೆ. ಇಷ್ಟರಲ್ಲೇ ಪಡಿತರ ಧಾನ್ಯವನ್ನೂ ಮನೆ ಬಾಗಿಲಿಗೆ ತಲುಪಿಸುತ್ತೇವೆ ಉಂಡುಕೊಂಡು ಇರಿ’ ಎಂದರು. ಜನ ಚಪ್ಪಾಳೆ ಹೊಡೆದರು.

‘ಸರ್ಕಾರದ ಸೌಲಭ್ಯ ಮಾತ್ರವಲ್ಲ, ಸರ್ಕಾರವನ್ನೂ ನಿಮ್ಮ ಮನೆ ಬಾಗಿಲಿಗೆ ತರುವ ಚಿಂತನೆಯಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ವಿಸ್ತರಿಸಿ, ಜನಪ್ರತಿನಿಧಿಗಳು, ಅಧಿಕಾರಿಗಳು ನಿಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿ, ನಿಮ್ಮ ಕುಟುಂಬದ ಕಷ್ಟಸುಖ ಕೇಳಿ, ಬೇಕಾದ ನೆರವು ನೀಡುವ ಕಾರ್ಯಕ್ರಮ ರೂಪಿಸಲು ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡ್ತೀನಿ...’ ಎಂದರು.

ಜನ ಖುಷಿಯಾಗಿ ಶಾಸಕರಿಗೆ ಜೈಕಾರ ಕೂಗಿದರು.

‘ನಿಮ್ಮ ಮನೆ ಬಾಗಿಲಿಗೆ ಸರ್ಕಾರಿ ಭಾಗ್ಯ ತಲುಪಿಸುತ್ತೇವೆ. ಚುನಾವಣೆಯಲ್ಲಿ ನೀವು ಮನೆಯಿಂದ ಮತಗಟ್ಟೆಗೆ ಬಂದು ತಪ್ಪದೇ ಮತದಾನ ಮಾಡಬೇಕು...’ ಎಂದು ಶಾಸಕರು ಕೈ ಮುಗಿದು ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT