‘ಚಂಪಟ್ನ, ಮಂಡ್ಯ, ನಾಮಂಗಲದ ಜನಕ್ಕೆ ಭಾಳಾ ಭಾವಣಿಕೆ ಅದೆ ಕನ್ರೋ. ಇವರು ಯಾವ ಗಲಾಟೆಗೆ ಹೋಗೋರೇ ಅಲ್ಲ. ಏನೂ ಅರೀದ ಇವರ ಎದೆ ಮ್ಯಾಲೆ ಕಾಲಿಟ್ಟು ಭಾಳಾ ಜನ ಗೆಟನ್ ಆದ್ರು’ ಯಂಟಪ್ಪಣ್ಣ ಹೇಳಿತು.
‘ಮಂತೆ ಪರಮೇಶಣ್ಣ ‘ಗಲಾಟೆ ಸುಮ್ಮನೆ ಹಂಗೇ ಆಕಸ್ಮಿಕವಾಗಿ ಆಗ್ಯದೆ’ ಅಂದದಲ್ಲಾ’ ಚಂದ್ರು ತಿವಿದ.
‘ಜೋಡೋ ಯಾತ್ರೆ ಆತು. ಬೆಂಗಳೂರಿಂದ ಮೈಸೂರಿಗೆ ಮೂಢಾಯಾತ್ರೆ ಆತು. ಕೈ ಪಕ್ಸದ್ದು ಮೈಸೂರಿಂದ ಬೆಂಗಳೂರಿಗೆ ಪಾದಯಾತ್ರೆ ಪೆಂಡಿಂಗ್ ಅದೆ. ಮನ್ನೆ ಸರಪಳಿ ಮಾಡಾತು. ಕಮಲದ ರೆಬೆಲ್ಲುಗಳು ದಿಮ್ಮಗೆ ಪಾದಯಾತ್ರೆಗೆ ರೆಡಿ ಆತಾವ್ರೆ. ಈಗ ನಿಮ್ಮ ಯಾತ್ರೆನಾ’ ಅಂತ ಕ್ಯಾತೆ ತೆಗೆದೆ.
‘ನಿಮ್ಮ ಪಾದ ನಮ್ಮ ತಲೆ ಮ್ಯಾಗೆ ಮಡಗಿಬುಡಿ, ಆದ್ರೆ ಪಾದಯಾತ್ರೆ ಮಾತ್ರಾ ಬ್ಯಾಡಿ. ರೈತರಿಗೆ ಮೂರು ಕಾಸು ಕೊಡದಿದ್ರೂ ಹಾಲಿನ ರೇಟು ಮಾತ್ರ ತಿಂಗಳು ತಿಂಗಳೂ ಏರ್ತಾ ಅದೆ. ಜನ ಸ್ವಲುಪಾನೂ ರಾಂಗಾಯ್ತಿಲ್ಲ’ ಚಂದ್ರು ಸಿಟ್ಕಂದ.
‘ಜನಗಳು ನಮಗೆ ರಾಜಕಾರಣಿಗಳೇ ಬ್ಯಾಡಿ ಅಂತ ಪಾದಯಾತ್ರೆ ಮಾಡುವಷ್ಟು ರೋಸೋಗ್ಯವರೆ ಕಯ್ಯಾ. ನಾವು ಚಿಕ್ಕುಡುಗ್ರಲ್ಲಿ ಒಂದು ಪದ ಕಟ್ಟಿ ಹಾಡ್ತಿದ್ದೋ ಅದುನ್ನ ಒಸಿ ಬದ್ಲಾಸಿ ‘ನಾನೂ ಬತ್ತೀನ್ ಜಾತ್ರೆಗೆ ಬಾಯಿಸತ್ತೋರ ತೇರಿಗೆ’ ಅಂತ ಹಾಡಮು’ ಯಂಟಪ್ಪಣ್ಣ ಕತೆ ಮುಗಿಸಿತು.