ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸತ್ಯ ಪರೀಕ್ಷೆ

Last Updated 13 ಮೇ 2022, 19:51 IST
ಅಕ್ಷರ ಗಾತ್ರ

‘ಪಿಎಸ್‍ಐ ಪರೀಕ್ಷೆ ಹಗರಣದ ಕಿಂಗ್‌ಪಿನ್, ಕ್ವೀನ್‌ಪಿನ್‍ಗಳು ಅರೆಸ್ಟ್ ಆದ್ರೇನ್ರೀ?’ ಅನು ಕೇಳಿದಳು.

‘ಇನ್ನಷ್ಟು ಪಿನ್‍ಗಳ ಬಗ್ಗೆ ತನಿಖೆ ನಡೆಯುತ್ತಿದೆಯಂತೆ. ಒಂದು ಗುಂಡುಪಿನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಅಂತ ಹೋಂ ಮಿನಿಸ್ಟರ್ ಹೇಳಿದ್ದಾರೆ’ ಅಂದ ಗಿರಿ.

‘ಪರೀಕ್ಷೆಯಲ್ಲಿ ಇಂಥಾ ಕಾಪಿ ಚೇಷ್ಟೆ ಬೇಕಿತ್ತಾ? ನಮ್ಮ ಕಾಲದಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯುವಾಗ ಸಿಕ್ಕಿಬಿದ್ದು ಡಿಬಾರ್ ಆಗ್ತಿದ್ರು, ಈಗ ಕಾಪಿ ಮಾಡಿಸಲು ಹೋಗಿ ಪರೀಕ್ಷಾ ಹೊಣೆಗಾರರೇ ಡಿಬಾರ್ ಆಗುವಂತಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?’

‘ಆ ಬೇಲಿಯ ಕಾವಲಿಗೆ ಇನ್ನೊಂದು ಬೇಲಿ ಹಾಕಿ ಭದ್ರ ಮಾಡಬೇಕಷ್ಟೇ...’

‘ಆ ಬೇಲಿಯೂ ಮೇಯ್ದರೆ, ಅದರ ಕಾವಲಿಗೆ ಮತ್ತೊಂದು ಬೇಲಿ ಹಾಕಬೇಕೇನ್ರೀ? ಪರೀಕ್ಷಾರ್ಥಿಗಳಿಗಿಂತ ಪರೀಕ್ಷೆ ನಡೆಸುವವರನ್ನು ಕಾಯುವ ದುಃಸ್ಥಿತಿ ಬರಬಾರದು’.

‘ಪರೀಕ್ಷೆ ನಡೆಸುವವರಿಗೆ ಸತ್ಯಪರೀಕ್ಷೆ ನಡೆಸಿ, ಅದರಲ್ಲಿ ಪಾಸಾದವರನ್ನು ಪರೀಕ್ಷೆ ಕಾರ್ಯಕ್ಕೆ ನೇಮಿಸುವುದು ಸೂಕ್ತವೇನೋ’.

‘ಇವರಿಗೆ ಪರೀಕ್ಷೆ ನಡೆಸುವವರು ಸತ್ಯವಂತರು ಅನ್ನೋದು ಏನು ಗ್ಯಾರಂಟಿ? ಇದು ಸತ್ಯ ಹರಿಶ್ಚಂದ್ರನ ಕಾಲ ಅಲ್ಲ’.

‘ಪರೀಕ್ಷೆಯಲ್ಲಿ ಕಾಪಿ ತಡೆಯಲೊಂದು ಕಾವಲು, ಕಾವಲುಗಾರರನ್ನು ತಡೆಯಲು ಇನ್ನೊಂದು ಕಾವಲು, ಅಕ್ರಮ ಮಾಡಿ ತಪ್ಪಿಸಿ
ಕೊಂಡವರನ್ನು ಪತ್ತೆ ಮಾಡಿ ಹಿಡಿಯಲು, ಹಿಡಿದ ಮೇಲೆ ಕೇಸು, ಕೋರ್ಟ್, ಶಿಕ್ಷೆ... ಒಂದು ಪರೀಕ್ಷೆಗೆ ಎಷ್ಟೊಂದು ಇಲಾಖೆಗಳು ಹೆಣಗಾಡಬೇಕು. ಕಾವಲುರಹಿತ ಪರೀಕ್ಷಾ ಪದ್ಧತಿ ಜಾರಿಯಾಗಬೇಕು’.

‘ಕಾವಲು ಇಲ್ಲದಿದ್ದರೆ ಕಾಪಿ ಮಾಡಲು ಕಾಪಿರೈಟ್ಸ್ ಕೊಟ್ಟಂತಾಗುವುದಿಲ್ಲವೇ?’

‘ಪರೀಕ್ಷಾರ್ಥಿಗಳಿಗೆ ಪುಸ್ತಕಗಳನ್ನು ಕೊಟ್ಟು ಕಾಪಿ ಮಾಡುವ ಕಾಪಿರೈಟ್ಸ್ ಕೊಡಬೇಕು. ಓದಿದ್ದವರು ನಿಗದಿತ ಸಮಯದಲ್ಲಿ ಉತ್ತರ ಬರೆದು ಪಾಸ್ ಆಗ್ತಾರೆ, ಓದದವರು ಪುಸ್ತಕದಲ್ಲಿ ಉತ್ತರ ಹುಡುಕಲು ಪರದಾಡಿ ಫೇಲ್‌ ಆಗ್ತಾರೆ...’ ಎಂದು ಅಸಹನೆ ವ್ಯಕ್ತಪಡಿಸಿದಳು ಅನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT