ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅಯ್ಯೋ ದೇವ್ರೇ...

Last Updated 8 ನವೆಂಬರ್ 2022, 19:31 IST
ಅಕ್ಷರ ಗಾತ್ರ

‘ಡಾಕ್ಟರ್‌ಗಳು ಬರೆಯುವ ಪ್ರಿಸ್ಕ್ರಿಪ್ಷನ್ ಅರ್ಥ ಮಾಡಿಕೊಳ್ಳುವುದು ಕಷ್ಟ ಕಣ್ರೀ...’ ಅಂದಳು ಸುಮಿ.

‘ಪ್ರಿಸ್ಕ್ರಿಪ್ಷನ್‍ಗಿಂತ ನಾವು ಡಾಕ್ಟರನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ, ಅವರು ನಮ್ಮನ್ನು ಅರ್ಥ ಮಾಡಿಕೊಳ್ಳೋದು ಅದಕ್ಕಿಂತ ಮುಖ್ಯ’ ಅಂದ ಶಂಕ್ರಿ.

‘ಹಾಗಲ್ಲಾರೀ, ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯ ಹ್ಯಾಂಡ್‌ರೈಟಿಂಗ್ ರೂಢಿಸಿಕೊಂಡು ಡಾಕ್ಟರ್‌ಗಳು ಪ್ರಿಸ್ಕ್ರಿಪ್ಷನ್ ಬರೆಯಬೇಕಲ್ವಾ?’

‘ಹಾಗಂತ, ಮೆಡಿಕಲ್ ಕಾಲೇಜಿನಲ್ಲಿ ಕಾಪಿರೈಟಿಂಗ್ ಮಾಡಿಸಿ ಡಾಕ್ಟರ್‌ಗಳ ಹ್ಯಾಂಡ್‌ರೈಟಿಂಗ್ ಇಂಪ್ರೂವ್ ಮಾಡಿ ಅಂತ ಕೇಳಲಾಗುತ್ತಾ? ಪ್ರಿಸ್ಕ್ರಿಪ್ಷನ್ ಅರ್ಥವಾಗಬೇಕೆಂದರೆ ಮೆಡಿಕಲ್ ಓದಬೇಕು, ಇಲ್ಲವೇ ಮೆಡಿಕಲ್ ಸ್ಟೋರ್ ಇಡಬೇಕು’.

‘ಡಾಕ್ಟರ್ ಲಿಪಿ ನಮಗೆ ಅರ್ಥವಾಗದ ಬ್ರಹ್ಮಲಿಪಿ ಆಗಿಬಿಟ್ಟಿದೆ...’ ಸುಮಿ ಲೊಚಗುಟ್ಟಿದಳು.

‘ವೈದ್ಯೋ ನಾರಾಯಣೋ ಹರಿಃ, ಡಾಕ್ಟರನ್ನು ನಾವು ದೇವರೆಂದು ಭಾವಿಸಿದ್ದೇವೆ. ಬ್ರಹ್ಮ ನಮ್ಮ ಸೃಷ್ಟಿಕರ್ತ, ಡಾಕ್ಟರ್ ನಮ್ಮ ರಿಪೇರಿಕರ್ತ. ಕಾಯಿಲೆ ಕಸಾಲೆಗಳನ್ನು ರಿಪೇರಿ ಮಾಡುವವರು ಡಾಕ್ಟರ್‌ಗಳೇ. ಡಾಕ್ಟರ್ ದೇವರ ಹ್ಯಾಂಡ್‌ರೈಟಿಂಗ್‍ಗಿಂತ ಅವರ ಅನುಗ್ರಹ ಮುಖ್ಯವಾಗಬೇಕು’.

‘ದೇವರು ಒಬ್ಬ, ನಾಮ ಹಲವು ಅಂತಾರಲ್ಲ, ಡಾಕ್ಟರ್ ದೇವರಲ್ಲೂ ಹಲವು ನಾಮಗಳಿವೆಯೇನ್ರೀ?’

‘ಇವೆ. ಹೃದಯ ತಜ್ಞ, ನೇತ್ರ ತಜ್ಞ, ಕೀಲುಮೂಳೆ ತಜ್ಞ, ನರ ತಜ್ಞ, ದಂತ ವೈದ್ಯ ಹೀಗೆ...’

‘ಡಾಕ್ಟರ್ ದೇವರಿಗೆ ಕೋಪ ಬಂದರೆ ಶಾಪ ಕೊಡುತ್ತಾ?’

‘ಇಲ್ಲ, ಲೋಪ ಮಾಡುತ್ತೆ. ಮೊನ್ನೆ ಡಾಕ್ಟರ್ ದೇವರು ಲೋಪ ಮಾಡಿದ್ದಕ್ಕೆ ತುಮಕೂರಿನಲ್ಲಿ ಬಾಣಂತಿ, ಅವಳಿ ಹಸುಗೂಸುಗಳು ಜೀವ ಕಳಕೊಂಡವು’.

‘ಅಯ್ಯೋ, ಹಾಗಾಗಬಾರದು. ದೊಡ್ಡ ದೇವರು ಡಾಕ್ಟರ್ ದೇವರಿಗೆ ಸೇವಾ ಮನೋ ಭಾವ, ಕರುಣೆ ಕರುಣಿಸಿ, ಕೋಪ, ತಾಪ ನಿವಾರಿಸಿ ಕಾಪಾಡಲಿ. ಡಾಕ್ಟರ್ ದೇವರು ರೋಗಿಗಳನ್ನು ಕಾಪಾಡಲಿ...’ ಸುಮಿ ಪ್ರಾರ್ಥಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT