ಗುರುವಾರ , ಅಕ್ಟೋಬರ್ 6, 2022
23 °C

ಚುರುಮುರಿ| 1000 ದಾಟಿದ ಸಾಧನೆ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಟೀವಿ ನೋಡುತ್ತಿದ್ದ ಬೆಕ್ಕಣ್ಣ ‘ಅಚ್ಛೇ ದಿನ್ ಬಂತು, ಅಚ್ಛೇ ದಿನ್ ಬಂದೇ ಬಿಡ್ತು ಮಂಗಳೂರಿಗೆ’ ಎಂದು ವದರಿತು.

‘ಮಂಗಳೂರಿಗಷ್ಟೇ ಅಚ್ಛೇ ದಿನ್ ಹೆಂಗ್ ಬಂತಲೇ’ ಅಚ್ಚರಿಯಿಂದ ಕೇಳಿದೆ.

‘ಮೋದಿಮಾಮಾ ಮಂಗಳೂರಿಗೆ ಕಾಲಿಟ್ಟಿದ್ದೇ ಅಚ್ಛೇ ದಿನ್ ಬಂದವು…’

‘ಅಂದ್ರ ಈಗೆಂಟು ವರ್ಷದಿಂದ ಅಚ್ಛೇ ದಿನ್ ಇರಲಿಲ್ಲಂತ ನೀ ಒಪ್ಪಿಗೊಂಡಿ ಹೌದಿಲ್ಲೋ…’

‘ನೀ ಬರೇ ಅಡ್ಡಮಾತು ಹೇಳಬ್ಯಾಡ. ನೋಡು…ಮೋದಿಮಾಮಾ ಮಂಗಳೂರಿಗೆ 3,800 ಕೋಟಿ ರೂಪಾಯಿ ಕೊಡುಗೆ ಕೊಟ್ಟಾನ’ ಎಂದು ಹೆಮ್ಮೆಯಿಂದ ಉಲಿಯಿತು.

‘ಅವರೇನು ಜೇಬಿಂದ ರೊಕ್ಕ ತೆಗದುಕೊಟ್ಟಾರೇನಲೇ? ಅವೆಲ್ಲ ಹೊಸ ಯೋಜನೆಗಳ ಅಂದಾಜುವೆಚ್ಚ, ಇನ್ನಾ ಶಂಕುಸ್ಥಾಪನೆ, ಭೂಮಿಪೂಜೆ ಹಂತದಾಗೆ ಅದಾವು. ಕೊಡುಗೆ ಈಗೆದಕ್ಕೆ ಅಂದರ ಚುನಾವಣೆ ಮೇಲೆ ಕಣ್ಣಿಟ್ಟಾರೆ ಅಷ್ಟೇ. ಇದರಾಗೆ ಯಾರಿಗೆ ಎಷ್ಟು ಕಮಿಷನ್ ಹೋಗತೈತೋ ಯಾಂವ ಬಲ್ಲ’ ಎಂದೆ.

‘ಕೇಂದ್ರದಿಂದ ಕೊಡ್ತಾರಂದ್ರ ಪ್ರಧಾನಿನೇ ಕೊಟ್ಟಂಗೆ. ನೋಡಿಲ್ಲಿ, ನಿರ್ಮಲಕ್ಕ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯ ಜಿಲ್ಲಾಧಿಕಾರಿಗೆ ಹೆಂಗೆ ಕ್ಲಾಸ್ ತಗೊಂಡಾಳ. ಪಡಿತರ ವಿತರಣೆಯಲ್ಲಿ ಕೇಂದ್ರದ ಪಾಲು ರಾಜ್ಯಕ್ಕಿಂತ ಜಾಸ್ತಿ ಐತಿ, ಹಂಗಿದ್ದಾಗ ಪಡಿತರ ಅಂಗಡಿ ಬಾಗಿಲಿನ ಮ್ಯಾಗೆ ನಗ್ತಾ ಇರೋ ಮೋದಿಮಾಮಾನ ಫೋಟೊ ಎದಕ್ಕ ಹಾಕಿಲ್ಲಂತ ಛಲೋತ್ನಾಗಿ ಬೈದಾಳ’ ಬೆಕ್ಕಣ್ಣ ವಿವರಿಸಿತು.

‘ಕೇಂದ್ರಕ್ಕೆ ಪಡಿತರದ ಅಕ್ಕಿ ಎಲ್ಲಿಂದ ಬರತೈತಿ?’

‘ರಾಜ್ಯದಿಂದ’.

‘ರಾಜ್ಯಕ್ಕೆ ಯಾರು ಕೊಡ್ತಾರೆ’?

‘ರೈತರು ಭತ್ತ ಬೆಳೆದುಕೊಡ್ತಾರ’.

‘ಅಂದ್ರ ಪಡಿತರ ಅಂಗಡಿಯ ಬಾಗಿಲಿನ ಮ್ಯಾಗೆ ರೈತರ ಫೋಟೊ ಇರಬೇಕಿಲ್ಲೋ? ಅದ್ಕೇ ಟಿಆರ್‌ಎಸ್‌ ಪಕ್ಷದ ಕಾರ್ಯಕರ್ತರು ಗ್ಯಾಸ್ ಸಿಲಿಂಡರ್ ಸಾವಿರ ದಾಟೈತಂತ ಅದ್ರ ಮ್ಯಾಗೆ ನಗ್ತಾ ಇರೋ ಮೋದಿಮಾಮನ ಫೋಟೊ ಹಾಕ್ಯಾರ’ ಪೇಪರು ತೆಗೆದು ಸುದ್ದಿ ತೋರಿಸಿದೆ.

ಬೆಕ್ಕಣ್ಣ ಪೆಂಗನಂತೆ ‘ಅಲ್ವಾ ಮತ್ತೇ … ಸಾವಿರ ದಾಟಿದ ಸಾಧನೆ’ ಎಂದಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು