ಗುರುವಾರ , ಮೇ 26, 2022
30 °C

ಚುರುಮುರಿ| ನವೋದ್ಯಮ ಸಲಹೆ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಬೆಕ್ಕಣ್ಣ ವಾರದಿಂದ ಲ್ಯಾಪ್ಟಾಪಿನಲ್ಲಿ ಮುಖ ಹುದುಗಿಸಿ ಘನಗಂಭೀರ ಲೆಕ್ಕಾಚಾರದಲ್ಲಿ ತೊಡಗಿತ್ತು. ಮನೆಯಲ್ಲಿ ಅದರ ಉತಾವಳಿ ಕಡಿಮೆಯಾಗಿದ್ದರಿಂದ ನಾನು ಆರಾಮಾಗಿ ಕೂತು ಬೆಳಗ್ಗೆ ಟೀ ಕುಡಿಯುತ್ತಿದ್ದೆ. ಹತ್ತಿರ ಬಂದು ಮೂಸಿತು.

‘ಕುಂದ್ರಲೇ... ಚಾಯ್ ಪೆ ಚರ್ಚಾ ಮಾಡೂಣು’ ಎಂದೆ.

‘ಭಾರತೀಯ ಚಹಾ ಕುಡಿಯಾಕ ಹತ್ತೀಯಿಲ್ಲೋ ಅಂತ ಮೂಸಿ ನೋಡಿದೆ. ಹೊರಗಿನ ಮಂದಿ ಕಾಲದಾಗೆ ಸಾಕಾಗೈತಿ. ಪಾಪ... ಮೋದಿಮಾಮ ಒಬ್ಬಾಂವ ಎಷ್ಟಂತ ಬಡಿದಾಡತಾನ... ಈಗ ಹೊರಗಿನ ಶಕ್ತಿಗೋಳು ನಮ್ಮ ಭಾರತೀಯ ಚಹಾಬಟ್ಟಲಿನಾಗೂ ಕೈ ಹಾಕ್ಯಾರ’ ಎಂದು ನಿಟ್ಟುಸಿರುಗೈದಿತು.

ಲೊಚ್ ಲೊಚ್ ಗುಟ್ಟಿದ ನಾನು ‘ಏನ್ ಸ್ಟಡಿ ಮಾಡಾಕಹತ್ತೀಯಲೇ’ ಮೆಲ್ಲಗೆ ಕೇಳಿದೆ.

‘ಮುಂದಿನ ವರ್ಸದ ಪದ್ಮ, ಭಾರತರತ್ನ ಪ್ರಶಸ್ತಿಗಳಿಗೆ ಲಿಸ್ಟ್ ಮಾಡಿ ಮೋದಿಮಾಮಂಗೆ ಇ ಮೇಲ್ ಕಳಿಸೂಣೂ ಅಂತ ಕುಂತಿದ್ದೆ. ನಮ್ಮ ದೇಶದ ಆಂತರಿಕ ಸುದ್ದಿಗೆ ಕೈಹಾಕಿದ್ರ ಹುಷಾರ್ ಅಂತ ಗುಟುರು ಹಾಕಿದ್ರಲ್ಲ ಕ್ರಿಕೆಟ್ ಕಲಿಗಳು, ತಾರಾಮಣಿಗಳು, ಇನ್ನಿತರ ಮುಕುಟಮಣಿಗಳು, ಅವ್ರಿಗೆಲ್ಲ ಯಾವ ಪದ್ಮ ಕೊಡಬಕು ಅನ್ನೂದನ್ನು ಅವರ ಟ್ವಿಟರ್ ಪೋಸ್ಟಿನ ಆಧಾರದ ಲಾಜಿಕಲ್ ಆಗಿ ಲೆಕ್ಕ ಹಾಕೀನಿ’ ಉದ್ದಕ್ಕೆ ವಿವರಿಸಿತು.

‘ಅಜ್ಜಿಗೆ ಅರಿವೆ ಚಿಂತೆಯಾದ್ರೆ ಮೊಮ್ಮಗಳಿಗೆ ಕಜ್ಜಾಯದ ಚಿಂತೆಯಂತ. ಕೆಲಸ ಕಳಕೊಂಡೀನಿ, ಹೊಸ ಕೆಲಸ ಹುಡುಕಬೇಕಂತ ನಾ ಚಿಂತಿವಳಗ ಇದ್ದರ, ಸಹಾಯ ಮಾಡೂದು ಬಿಟ್ಟು ಪದ್ಮ
ಪಟ್ಟೀವಳಗ ಮುಳುಗೀಯಲ್ಲ’ ಎಂದು ಬೈಯ್ದೆ.

‘ನನ್ ಮಾತು ಕೇಳು. ನೀ ಒಂದ್ ನವೋದ್ಯಮ ಶುರುಮಾಡು. ಈಗ ಮೊಳೆಗಳಿಗೆ ಭಯಂಕರ ಬೇಡಿಕೆ ಐತಂತ. ನಮ್ಮ ದೇಶದ ರಸ್ತೆಗಳಿಗೆ, ಬಾಯಿಗಳಿಗೆ ಮೊಳೆ ಜಡೀಬೇಕಂದ್ರ ಅದೂ ಸ್ವದೇಶಿ ಆಗಿರಬೇಕಿಲ್ಲೋ... ಅದಕ್ಕ ಮೊಳೆ ಫ್ಯಾಕ್ಟರಿ ಹಾಕು. ಸಣ್ಣ ಉದ್ಯಮಕ್ಕ ಲಗೂನೆ ಸಾಲಗೀಲ ಕೊಡ್ತೀವಿ ಅಂತ ನಿರ್ಮಲಕ್ಕ ಹೇಳ್ಯಾಳ. ಯಾವುದಕ್ಕೆ ಬೇಡಿಕೆ ಇರತೈತಿ ಅದರ ಉತ್ಪಾದನೆ ಮಾಡಬಕು... ಜರಾ ಇನ್ನರ ಶಾಣೇ ಆಗು’ ಬೆಕ್ಕಣ್ಣ ಮೊಳೆ ಉದ್ಯಮದ ಹೊಸ
ಲೆಕ್ಕಾಚಾರದಲ್ಲಿ ತೊಡಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.